ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಯೋಗಿ ದುರ್ಲಭಜೀ ಯಾವುದೇ ಗೆಜೆಟ್ (ಎಲೆಕ್ಟ್ರಾನಿಕ್ ಉಪಕರಣ) ಗಳನ್ನು ಬಳಸುವುದಿಲ್ಲ. ಇಂದಿಗೂ ಅವರ ದೊಡ್ಡ ಲಕ್ಸುರಿ ಅಂದ್ರೆ ಲ್ಯಾಂಡ್‌ಲೈನ್ ಫೋನು. ಸುಮಾರು ಎಂಟು ವರ್ಷ ಅದನ್ನೂ ಬಳಸುತ್ತಿರಲಿಲ್ಲ. ಆದರೆ ಅದನ್ನು ಬಳಸುವಂತೆ ಮನವೊಲಿಸುವುದರಲ್ಲಿ ನನ್ನ ಪಾತ್ರವೂ ಇದೆ. ಈಗ ಅದನ್ನು ಬಳಸಲಾ ರಂಭಿಸಿದ್ದಾರೆ. ಆದರೆ ನಾವು ಫೋನ್ ಮಾಡಿದಾಗ ಅವರು ಕರೆ ಸ್ವೀಕರಿಸುವುದಿಲ್ಲ. ಅವರಿಗೆ ಮಾತಾಡಬೇಕೆಂದೆನಿಸಿದಾಗ ಫೋನ್ ಮಾಡುತ್ತಾರೆ.
ಕನಿಷ್ಠ ಅಷ್ಟರಮಟ್ಟಿಗಾದರೂ ಸಿಗುತ್ತಾರಲ್ಲ ಎಂಬುದಷ್ಟೇ ಸಮಾಧಾನ. ಇಂದು ಅದೇನಾಗಿತ್ತೋ ಏನೋ ? ಯೋಗಿ ತುಸು ಖಿನ್ನಮನಸ್ಕರಾಗಿಯೇ ಮಾತಿಗಾ ರಂಭಿಸಿದರು – ‘ನಮ್ಮನ್ನು, ಪ್ರತಿಯೊಬ್ಬರನ್ನು ಸದಾ ಬೇಸರ, ಹತಾಶೆಯಲ್ಲಿರಿಸುವುದೇ ಪರಮ ಉದ್ದೇಶವೆಂಬಂತೆ ಈ ಜಗತ್ತನ್ನು ರೂಪಿಸಲಾಗಿದೆ.’ ನನಗೆ ಅವರ ಮಾತಿನ ಒಳದನಿ ಅರ್ಥವಾಗಲಿಲ್ಲ ಅಥವಾ ಅವರು ಹೇಳಿದ್ದಕ್ಕೆ ನನ್ನ ಸಹಮತವಿರಲಿಲ್ಲ. ‘ನಿಮ್ಮ ಮಾತನ್ನು ಒಪ್ಪಿಕೊಳ್ಳು ವುದು ಕಷ್ಟ’ ಎಂದೆ. ಅದಕ್ಕೆ ಯೋಗಿಯವರು ಹೇಳಿದರು – ‘ಎಲ್ಲರೂ ಸುಖವಾಗಿ, ನೆಮ್ಮದಿಯಾಗಿ, ಸಂತಸದಿಂದ ಇರುವುದು ಯಾವುದೇ ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಈಗ ನಮ್ಮಲ್ಲಿ ಏನಿದೆಯೋ, ಅದಕ್ಕೆ ನಾವು ಸಮಾಧಾನ ಹೊಂದುವಂತಾದರೆ, ನಮಗೆ ಯಾವುದೂ ಬೇಕಾಗುವುದಿಲ್ಲ.
ಆಗ ದೇಶದ ಆರ್ಥಿಕತೆ ಬೆಳೆಯುವುದಾದರೂ ಹೇಗೆ ? ಆಗ ನೀವು an ageing ಕ್ರೀಮನ್ನು ಹೇಗೆ ಮಾರಾಟ ಮಾಡುತ್ತೀರಿ ? ನಿಮಗೆ ವಯಸ್ಸಾಗುತ್ತಿದೆಯೆಂದು ಹೆದರಿಸಿದರೆ ಈ ಕ್ರೀಮ್‌ನ್ನು ಮಾರಾಟ ಮಾಡಬಹುದು. ಜನರು ಯಾವಾಗ ಜೀವವಿಮೆ ಪಾಲಿಸಿಯನ್ನು ಮಾಡಿಸುತ್ತಾರೆ ? ಏಕಾಏಕಿ ನೀವು ಸತ್ತು ಹೋದರೆ ಏನೆಲ್ಲ ಅವಾಂತರಗಳಿಗೆ ಗುರಿಯಾಗುತ್ತೀರಿ ಎಂದು ಜನರನ್ನು ಹೆದರಿಸಿದಾಗ ವಿಮೆ ಮಾಡಿಸುತ್ತಾರೆ. ಜನರನ್ನು ಪ್ಲಾಸ್ಟಿಕ್ ಸರ್ಜರಿಗೆ ಹೇಗೆ ಪ್ರೇರೇಪಿಸುತ್ತೀರಿ ? ನಿಮ್ಮ ಸೌಂದರ್ಯ, ರೂಪದಲ್ಲಿ ಏನೋ ಐಬು ಇದೆ ಎಂದು ಅವರಲ್ಲಿ ಆತಂಕ ಮೂಡಿಸಿದಾಗ.
ಜನರನ್ನು ಟಿವಿ ಕಾರ್ಯಕ್ರಮ ವೀಕ್ಷಿಸುವಂತೆ ಮಾಡುವುದು ಹೇಗೆ ? ಟಿವಿ ನೋಡದಿದ್ದರೆ ನೀವು ಜೀವನದಲ್ಲಿ ಏನೋ ಮುಖ್ಯವಾಗಿ ಕಳೆದುಕೊಳ್ಳುತ್ತೀರಿ ಎಂಬ ಪಶ್ಚಾತ್ತಾಪ ಅವರಲ್ಲಿ ಉಂಟುಮಾಡಿದಾಗ. ಜನರು ಹೊಸ ಕಾರು, ಸ್ಮಾರ್ಟ್ ಫೋನ್ ನ್ನು ಖರೀದಿಸುವುದು ಯಾವಾಗ ? ಅವುಗಳಿಲ್ಲದ ಜೀವನ ನಿರರ್ಥಕ ಎಂಬ ಭಾವನೆ ಅವರಲ್ಲಿ ಬಿತ್ತಿದಾಗ. ತಲೆಗೆ ಹಚ್ಚುವ ಬಣ್ಣವನ್ನು ಹೇಗೆ ಮಾರಾಟ ಮಾಡುತ್ತೀರಿ ? ಬಿಳಿ ಕೂದಲು ಕಾಣಿಸಿಕೊಂಡರೆ ವಯಸ್ಸಾಯ್ತು ಎಂದು ಎಲ್ಲರೂ
ತಿರಸ್ಕರಿಸಬಹುದು ಎಂಬ ಭಯ ಮೂಡಿಸಿದಾಗ ಮಾತ್ರ. ಒಂದು ರಾಜಕೀಯ ಪಕ್ಷಕ್ಕೆ ನೀವೇಕೆ ವೋಟು ಹಾಕುತ್ತೀರಿ ? ಬೇರೆಯವರಿಗೆ ವೋಟು ಹಾಕಿದರೆ ನಿಮ್ಮ ಬದುಕು ಹೈರಾಣಾಗಬಹುದೆಂದು ಗೂಬೆ ಕೂರಿಸಿದಾಗ.
ಎಲ್ಲವೂ ಸರಿಯಿದೆ, ಎಲ್ಲರೂ ನೆಮ್ಮದಿಯಿಂದ ಇದ್ದಾರೆಂಬುದು ಯಾವುದೇ ಎಕಾನಮಿಗೂ ಒಳ್ಳೆಯದಲ್ಲ. ಜನರನ್ನು ಹೆದರಿಸಬೇಕು. ಅವರಲ್ಲಿ ಸದಾ ಅತೃಪ್ತಿ ಮೂಡಿಸಬೇಕು. ಇದು ಜಗದ ನಿಯಮ. ಸರಕಾರದ ನಿಯಮ. ಎಲ್ಲ ಕಂಪನಿಗಳ ಧ್ಯೇಯ. ಇದೇ ಅಭಿವೃದ್ಧಿ ಮಾನದಂಡ.’ ನಾನು ಯೋಚಿಸಲಾರಂಭಿಸಿದೆ.
ಇದರ ಮರ್ಮವೇನು?
ಒಮ್ಮೆ ಝೆನ್ ಗುರುವನ್ನು ಅವನ ಶಿಷ್ಯ ಕೇಳಿದ- ‘ನನಗೆ ಕೆಲ ಸಂಗತಿಗಳು ಅರ್ಥವೇ ಆಗುವುದಿಲ್ಲ. ಉದಾಹರಣೆಗೆ ಕೆಲವು ಗಂಡಸರು ಹುಡುಗಿಯರ ಹಿಂದೆ ಬೀಳುತ್ತಾರೆ. ಆದರೆ ಅವರಿಗೆ ಮದುವೆಯಾಗಬೇಕು, ಸಂಸಾರ ಮಾಡಬೇಕೆಂಬ ಇರಾದೆ ಇರುವುದಿಲ್ಲ ಏಕೆ ?’ ಅದಕ್ಕೆ ಝೆನ್ ಗುರು ಹೇಳಿದ ‘ಕೆಲ ಸಂಗತಿಗಳು ಅರ್ಥವಾಗುವುದಿಲ್ಲ. ಇನ್ನು ಕೆಲವು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬಾರದು.’ ಈ ಮಾತಿನಿಂದ ಶಿಷ್ಯನಿಗೆ ಸಮಾಧಾನವಾಗಲಿಲ್ಲ. ಆಗ ಝೆನ್ ಗುರು ಹೇಳಿದ- ‘ನಿನ್ನ ಪ್ರಶ್ನೆಗೆ ನೇರವಾಗಿ ಉತ್ತರ ಹೇಳ್ತೇನೆ.
ಹೌದು, ಮದುವೆಯಾಗುವ ಇರಾದೆ ಇಲ್ಲದಿದ್ದರೂ ಕೆಲವು ಗಂಡಸರು ಹುಡುಗಿಯರ ಹಿಂದೆ ಓಡುತ್ತಿರುತ್ತಾರೆ. ಯಾವ ನಾಯಿಗೂ ಕಾರನ್ನು ಡ್ರೈವ್ ಮಾಡುವ ಇರಾದೆ ಇರುವುದಿಲ್ಲ ಆದರೂ ಕಾರಿನ ಹಿಂದೆ ಓಡುತ್ತಿರುತ್ತದೆ.’
ಕ್ರಿಕೆಟ್ ಎಂಬ ಜೀವನಧರ್ಮ
ನನಗೆ ಬೋರಿಯಾ ಮಜುಂದಾರ ಕ್ರಿಕೆಟ್ ಬರಹಗಳೆಂದರೆ ಬಲು ಇಷ್ಟ. ಅವರು ಕ್ರಿಕೆಟ್‌ನ್ನು ಕೇವಲ ಕ್ರೀಡೆಯಾಗಿ ಮಾತ್ರ ನೋಡದೇ, ಅದೊಂದು ಜೀವನ ವಿಧಾನವಾಗಿ, ಭಾರತದ ಒಂದು ವಿಶಿಷ್ಟ ಆಚರಣೆಯಾಗಿ, ಅದ್ಭುತವಾಗಿ ನೋಡುತ್ತಾರೆ. ಈ ಕಾರಣದಿಂದ ಅವರ ಬರಹಗಳಲ್ಲಿ ಸೂಕ್ಷ್ಮ ಒಳನೋಟ, ವಿಸ್ತಾರ ಗಮನಿಸಬಹುದು. ಕ್ರಿಕೆಟ್ ಒಂದು ಧರ್ಮದಂತೆ ಗಾಢವಾಗಿ ಪ್ರಭಾವ ಬೀರಿರುವ ಭಾರತದಲ್ಲಿ ಈ ಆಟ ಪಡೆದುಕೊಂಡು ವಿಶಿಷ್ಟ ಆಯಾಮ ನಾಗರಿಕತೆಯ ಇತಿಹಾಸದಷ್ಟೇ ಹರವನ್ನು ಪಡೆದುಕೊಂಡಿದೆ ಎಂಬುದು ಮಜುಂದಾರರ ಬರಹಗಳನ್ನು ಓದುತ್ತಾ ಹೋದಂತೆಲ್ಲ ಮನವರಿಕೆಯಾಗುತ್ತದೆ.
ಕಳೆದ ಎರಡು ದಶಕಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ತಪ್ಪದೇ ವರದಿ ಮಾಡುತ್ತಿರುವ ಮಜುಂದಾರ, ಸಚಿನ್ ತೆಂಡುಲ್ಕರ್ ಅವರ ಆತ್ಮಕತೆ ‘”Playing It y Way’ ಸಹಲೇಖಕರೂ ಹೌದು. ರ‍್ಹೋಡ್ಸ್ ಸ್ಕಾಲರ್ ಆಗಿರುವ ಮಜುಂದಾರ ಅವರ ಕ್ರಿಕೆಟ್ ಜ್ಞಾನ, ತಿಳಿವಳಿಕೆ ಅಪಾರವಾದುದು. ಅವರು ‘Eleven Gods And a Billion Indians : The On and Off the Field Story of ricket in India and Abroad’ ಎಂಬ ಸೊಗಸಾದ ಪುಸ್ತಕ ಬರೆದಿದ್ದಾರೆ. ಕ್ರಿಕೆಟ್ ನ್ನು ಆಡುತ್ತಾ, ನೋಡುತ್ತಾ, ಕನವರಿಸುತ್ತಾ, ಯೋಚಿಸುತ್ತಾ, ಬೆಳೆದ ನಾನು, ಈ ಆಟಕ್ಕೆ ಎಷ್ಟೆಲ್ಲ ಬೇರೆ ಆಯಾಮ ಗಳಿವೆ ಎಂಬು ದನ್ನು ಈ ಕೃತಿಯಲ್ಲಿ ಕಂಡು ಬೆರಗಾದೆ.
2015ರ ಫೆಬ್ರವರಿ 15ರಂದು ಆಸ್ಟ್ರೇಲಿಯಾದಲ್ಲಿ ಭಾರತ-ಪಾಕಿಸ್ತಾನ ಮಧ್ಯೆ ವರ್ಲ್ಡ್‌ಕಪ್ ಪಂದ್ಯ ನಡೆಯುತ್ತಿತ್ತು. ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ತೆಂಡುಲ್ಕರ್ ಮನೆಮುಂದೆ ಐದು ಸಾವಿರ ಮಂದಿ ಸೇರಿ ‘ಸಚಿನ್ ! ಸಚಿನ್ !’ ಎಂದು ಜೋರಾಗಿ ಕೂಗುತ್ತಿದ್ದರು. ಹಾಗೆಂದು ಸಚಿನ್ ಆ ಪಂದ್ಯದಲ್ಲಿ ಆಡುತ್ತಿರಲಿಲ್ಲ. ಅವರು ಎರಡು ವರ್ಷಗಳ (ನವೆಂಬರ್ 2013) ಹಿಂದೆಯೇ ನಿವೃತ್ತರಾಗಿದ್ದರು. ಆದರೆ ಅದ್ಯಾವ ಮೋಹ, ಉತ್ಕಟತೆ, ಹುಚ್ಚು ಅವರೆಲ್ಲರನ್ನೂ ಸಚಿನ್ ಮನೆ ಮುಂದೆ ಜಮಾ ಆಗುವ ಹಾಗೆ ಮಾಡಿತ್ತೋ ? ಕ್ರಿಕೆಟ್ ಎಂಬ ಜೀವಮಾನದ ಸಂಗಾತಿ ಬಗ್ಗೆ ಮಜುಂದಾರರ ಗ್ರಹಿಕೆ ಬೌಂಡರಿ ಗೆರೆಯನ್ನು ದಾಟಿ, ಸಿಕ್ಸರ್ ಸಿಡಿಸಿದೆ. ಈ ಕೃತಿಯನ್ನು ಅವರು ತಮ್ಮ ಪತ್ನಿಗೆ ಅರ್ಪಿಸಿದ್ದಾರೆ. ‘ಅರ್ಪಣೆ’ಯಲ್ಲಿ ಹೀಗೆ ಬರೆದಿದ್ದಾರೆ; For Sharmistha- We have shared
Dressig Room for two deades !
ಓದಿ !
ಹೀಗೊಂದು ಪತಿ-ಪತ್ನಿ ಸಂಭಾಷಣೆ
ತಮ್ಮ ತಂದೆ-ತಾಯಿ ವಿಷಯಕ್ಕೆ ಬಂದರೆ, ಗಂಡ-ಹೆಂಡತಿ ಹೇಗೆ ವರ್ತಿಸುತ್ತಾರೆಂಬುದನ್ನು ‘ಪ್ರೇಮ ಒಂದು ಕಲೆ’ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥ್ ಹೇಳಿದ್ದು ನೆನಪಾಗುತ್ತದೆ. ಇದು ಗಂಡ-ಹೆಂಡತಿಯರ ನಡುವೆ ನಡೆಯುವ ಸಾಮಾನ್ಯ ಸಂಭಾಷಣೆ. ಇಬ್ಬರೂ ಹೇಗೆ ತಮ್ಮ ತಂದೆ-ತಾಯಿಯಂದಿರನ್ನು ಬೆಂಬಲಿಸಿ ಮಾತಾಡ್ತಾರೆ ಎಂಬುದನ್ನು ಗಮನಿಸಿ. ಹೆಂಡತಿ : ಮೆಡಿಸಿನ್, ಟೆಸ್ಟ್‌ಗಳಿಗೆ ಹದಿನೈದು ಸಾವಿರ ಕಳಿಸುಎಂದು ಅಪ್ಪ ಪತ್ರ ಬರೆದಿದ್ದಾರೆ.
ಗಂಡ : ಈಗ ಹಣ ಎಲ್ಲಿದೆ ?
ಹೆಂಡತಿ : ನನ್ನ ಅಕೌಂಟ್‌ನಲ್ಲಿದೆ, ಅದರಿಂದ ಕಳಿಸುತ್ತೇನೆ.
ಗಂಡ : ನೀನು ಸಂಪಾದಿಸುತ್ತೀಯಾ, ಅವರಿಗಿರುವ ಏಕೈಕ ಮಗು ನೀನೇ ಎಂಬುದು ಗೊತ್ತು. ಆದರೆ ನಮಗೂ ಸಾಕಷ್ಟು ಖರ್ಚುಗಳಿವೆ ಎಂಬುದು ನಿನಗೆ ಗೊತ್ತಿರಲಿ.
ಹೆಂಡತಿ : ಹಾಗಲ್ಲ
ಗಂಡ : ಏನು ಹಾಗಲ್ಲ ? ನೀನು ಕಳಿಸಿದಷ್ಟೂ ಅವರ ಖರ್ಚುಗಳು ಹೆಚ್ಚಾಗುತ್ತವೆ. ಅದೇನೇ ಇರಲಿ, ಹದಿನೈದು ಸಾವಿರ ರುಪಾಯಿ ಖರ್ಚಾಗುವಂಥ ಟೆಸ್ಟ್ ಯಾವುದು ? ಈಗ ಸಾಧ್ಯವಿಲ್ಲ ಎಂದು ನಿನ್ನ ತಂದೆಗೆ ಹೇಳು.
ಹೆಂಡತಿ : ನನ್ನ ಅಪ್ಪನ ಬಗ್ಗೆ ಹೇಳ್ತಿಲ್ಲ, ನಿಮ್ಮ ಅಪ್ಪನ ಬಗ್ಗೆ ಹೇಳುತ್ತಿರೋದು.
ಗಂಡ : ಏನು ? ನನ್ನ ಅಪ್ಪನ ಟೆಸ್ಟ್, ಮೆಡಿಸಿನ್ ಬಗ್ಗೆ ಹೇಳ್ತಾ ಇದೀಯಾ ನೀನು ?
ಹೆಂಡತಿ : ಹೌದು, ಪತ್ರ ಬರೆದಿರೋದು ನನ್ನ ಅಪ್ಪ ಅಲ್ಲ, ನಿಮ್ಮ ಅಪ್ಪ.
ಗಂಡ : ಹೌದಾ ? ಬಹಳ ಹಿಂದೆಯೇ ಹೇಳಿದ್ದರು. ಪಾಪ, ಅವರು ಅವರ ಮಗನ ಹತ್ತಿರ ಕೇಳದೇ ಇನ್ಯಾರ ಬಳಿ ಕೇಳ್ತಾರೆ ? ನಾವೇ ಏನಾದರೂ ಮಾಡಿ ಅವರಿಗೆ ಹಣ ಕಳಿಸಬೇಕು.
ಕಳಿಸೋಣ ಬಿಡು.
ಪತ್ರಗಳಲ್ಲಿ ಜೆಆರ್‌ಡಿ
ಉದ್ಯಮಿ ಜೆಆರ್‌ಡಿ ಟಾಟಾ ಅವರಿಗೆ ಪತ್ರ ಬರೆಯುವ ಖಯಾಲಿಯಿತ್ತು. ಯಾರೇ ಅವರಿಗೆ ಪತ್ರ ಬರೆದರೂ ಅವರು ಉತ್ತರಿಸುತ್ತಿದ್ದರು. ಸಾಮಾನ್ಯ ವ್ಯಕ್ತಿಗೂ ಅವರು ಬರೆಯುತ್ತಿದ್ದರು. ಪ್ರತಿದಿನ ಕನಿಷ್ಠ ೫೦ ಪತ್ರಗಳನ್ನು ಅವರು ಬರೆಯುತ್ತಿದ್ದರು. ಆ ಎಲ್ಲ ಪತ್ರಗಳನ್ನು ಸೇರಿಸಿ ‘ಜೆಆರ್‌ಡಿ ಲೆಟರ‍್ಸ್’ ಎಂಬ ಪುಸ್ತಕ
ಪ್ರಕಟವಾಗಿದೆ. ಈ ಪತ್ರಗಳನ್ನು ಓದಿದರೆ, ಜೆಆರ್‌ಡಿ ಎಂಥ ವ್ಯಕ್ತಿ ಎಂಬುದು ಗೊತ್ತಾಗುತ್ತದೆ. ಅಂಥ ಒಂದು ಪತ್ರ ವ್ಯವಹಾರ ಇಲ್ಲಿದೆ.
ಗೌರವಾನ್ವಿತ ಟಾಟಾ ಅವರೇ, ಈ ಪತ್ರದ ಮೂಲಕ ನಿಮಗೆ ಒಂದು ವಿವರಣೆಯನ್ನು ಕೊಡಲಿಕ್ಕಿದೆ ಹಾಗೂ ಕ್ಷಮೆಯನ್ನೂ ಕೇಳಬೇಕಿದೆ. ಮಾರ್ಚ್ ೧೮ರ ಸೋಮವಾರ ಸಂಜೆ 8 ಗಂಟೆಯ ಮಯದಲ್ಲಿ ನಾನು ಸ್ಟರ್ಲಿಂಗ್ ರಸ್ತೆಯಿಂದ ಹೊರಬಿದ್ದು ಪೆದ್ದಾರ್ ರೋಡ್ ಕಡೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದೆ. ಉಲ್ಟಾ ತಿರುವು ಪಡೆದುಕೊಳ್ಳುವುದಕ್ಕೆ ಯಾವಾಗಲೂ ಎಡಬದಿ ಸಾಲಿನ ತುದಿಯಲ್ಲೇ ಇರುತ್ತಿದ್ದ ನಾನು ಆ ದಿನ ಹಾಗೆ ಮಾಡಲಿಲ್ಲ. ಆ ಸಂದರ್ಭದಲ್ಲಿ ಹಸಿರು ಸಿಗ್ನಲ್ ಬಿದ್ದೊಡನೆ ನನ್ನಿಂದಾಗಿ ಮುಂದೆ ಹೋಗಲಿಕ್ಕಾಗುತ್ತಿಲ್ಲ ಎಂದು ನಿಮ್ಮ ಕಾರಿನ ಚಾಲಕ ಅಸಹನೆ ವ್ಯಕ್ತಪಡಿಸಲು ಶುರು ಮಾಡಿದ.
ಸುಮಾರು ಐದು ಸೆಕೆಂಡ್‌ಗಳ ನಿಮ್ಮ ಸಮಯ ಇದರಿಂದ ವ್ಯಯವಾಯಿತು. ಮನೆಗೆ ಹೋಗಲು ತಡವಾಗುತ್ತಿದೆ ಎಂಬ ಅಸಹನೆಯಿಂದಲೋ ಏನೋ ಆ ಅವಧಿಯಲ್ಲಿ ನೀವು ನಿಮ್ಮ ಕಾರಿನಿಂದ ಹೊರಗೆ ಮುಖ ಹಾಕಿ ಅಸಭ್ಯವಾಗಿ ಕೂಗಿದಿರಿ. ತಪ್ಪು ಸಾಲಿನಲ್ಲಿ ನಿಂತು ನಿಮ್ಮ ಅಮೂಲ್ಯ ಐ ದು ಸೆಕೆಂಡ್‌ಗಳನ್ನು ವ್ಯಯಿಸಿದ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಟಾಟಾ ಅವರೇ, ಆ ಸಮಯದಲ್ಲಿ ನಿಮ್ಮಿಂದ ವ್ಯಕ್ತವಾದ ವರ್ತನೆ ಇದೆಯಲ್ಲ, ಅದು ನನ್ನನ್ನು ಸಿಟ್ಟಿ ಗೇಳಿಸಿತು ಅನ್ನುವುದಕ್ಕಿಂತ ಅಚ್ಚರಿಯ ಮಡುವಿಗೆ ತಳ್ಳಿತು.
ಚಾಲಕನನ್ನು ಹೊಂದಿರುವ ಐಷಾರಾಮಿ ಕಾರಿನಲ್ಲಿ ಕುಳಿತ ನೀವೇ ಅಷ್ಟೊಂದು ರೊಚ್ಚಿಗೇಳುತ್ತೀರಿ ಎಂದಾದರೆ, ಮುಂಬೈ ನಂಥ ಕೆಟ್ಟ ಸಂಚಾರ ವ್ಯವಸ್ಥೆಯ ನಗರದಲ್ಲಿ ನೌಕರಿ ಮಾಡುವ ಗೃಹಿಣಿಯ ಪರಿಸ್ಥಿತಿ ಏನಿರಬಹುದು ಹಾಗೂ ಅಸಹನೆಯಲ್ಲಿ ಆಕೆಯಿಂದ ಆಗುವ ತಪ್ಪುಗಳು ಸಹಜವೇ ಆಗಿರುತ್ತವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ನಿಮ್ಮ ಕಾರಿಗೆ ಅಡ್ಡಿಯಾಗಿದ್ದಕ್ಕೆ ನಾನು ಖಂಡಿತ ಕ್ಷಮೆಯಾಚಿಸುತ್ತೇನಾದರೂ ನನ್ನ ಕಡೆಯಿಂದ ಈ ವಿವರಣೆಯನ್ನೂ ಮುಂದಿಡುತ್ತಿದ್ದೇನೆ.
ನಿಮ್ಮಿಂದ ವ್ಯಕ್ತವಾದ ಸಹ್ಯವಲ್ಲದ ನಡೆವಳಿಕೆಗೆ ವಿಷಾದವಿದೆ. ಏಕೆಂದರೆ ನಿಮ್ಮನ್ನು ಯಾವತ್ತೂ ಒಬ್ಬ ಅತ್ಯಂತ ಸಭ್ಯಸ್ಥ ಎಂದೇ ಭಾವಿಸಿಕೊಂಡು ಬಂದವಳು ನಾನು.
ಇಂತಿ, ಶ್ರೀಮತಿ ಆರ್. ಲಾಲ್ವಾನಿ
ಇದಕ್ಕೆ ಜೆಆರ್‌ಡಿ ಟಾಟಾ ಕೊಟ್ಟ ಉತ್ತರ ಹೀಗಿತ್ತು- ‘ಆತ್ಮೀಯ ಶ್ರೀಮತಿ ಲಾಲ್ವಾನಿ, ನಿಮ್ಮ ಪತ್ರ ತಲುಪುತ್ತಲೇ ನನ್ನಲ್ಲಿ ಆಶ್ಚರ‍್ಯ ಹಾಗೂ ಪಶ್ಚಾತ್ತಾಪಗಳು ಒಮ್ಮೆಗೇ ಹುಟ್ಟಿದವು. ನನಗೆ ಇದನ್ನು ಬರೆಯುವ ಶ್ರಮ ತೆಗೆದುಕೊಂಡ ನಿಮ್ಮನ್ನು ಅಭಿನಂದಿಸುತ್ತೇನೆ. ನಾನು ಈಗಷ್ಟೇ ವಿದೇಶದಿಂದ ಹಿಂತಿರುಗಿದ್ದರಿಂದ ಹಾಗೂ ಅದುವರೆಗೂ ನಿಮ್ಮ ಪತ್ರ ನನ್ನ ಮನೆಯಲ್ಲಿ ವಾರಗಟ್ಟಲೇ ಹಾಗೆ ತೆರೆಯದ ಸ್ಥಿತಿಯಲ್ಲಿ ಇದ್ದಿದ್ದರಿಂದ ಉತ್ತರಿಸಲು ತಡವಾಗುತ್ತಿರುವುದಕ್ಕೆ ವಿಷಾದಿಸುತ್ತೇನೆ. ನನಗೆ ಆಶ್ಚರ‍್ಯವಾಗಿದ್ದೇಕೆಂದರೆ ನೀವು ವಿವರಿಸಿದ ಘಟನೆ ನನಗೆ ನೆನಪಿನಲ್ಲಿಲ್ಲ.
ಪಶ್ಚಾತ್ತಾಪ ಏಕೆಂದರೆ ನೀವು ಹೇಳಿರುವ ಪ್ರಕಾರ ನಾನು ಹಾಗೆ ಅಸಭ್ಯವಾಗಿ ಕೂಗಿಕೊಂಡಿದ್ದೆ ಎನ್ನುವುದಕ್ಕೆ. ಮಹಿಳೆಯರ ಬಗ್ಗೆ ನಾನು ರಜಪೂತರು ಹೊಂದಿದ್ದಂಥ ಅಭಿಮಾನಪೂರ್ವಕ ಗೌರವವನ್ನು ಹೊಂದಿರುವವನು. ಅಂಥದ್ದರಲ್ಲಿ ಅದ್ಯಾಕೆ ಒಬ್ಬರ ವಿಷಯದಲ್ಲಿ ಹಾಗೆ ಸಭ್ಯತೆಯಿಲ್ಲದೇ ನಡೆದುಕೊಳ್ಳಬೇಕಾದ ಪರಿಸ್ಥಿತಿ ಬಂತು ಎಂದು ಅರ್ಥವಾಗುತ್ತಿಲ್ಲ. ಅದೇನೇ ಪ್ರಚೋದನೆ ಉಂಟಾಗಿದ್ದರೂ ಆ ವರ್ತನೆ ಸಮರ್ಥನೀಯವಲ್ಲ. ಈಗ ನಾನು ಮಾಡಬಹುದ್ದಾಗಿದ್ದೇನೆಂದರೆ ನಿಮಗೆ ನನ್ನ ತಪ್ಪೊಪ್ಪಿಗೆ ತಿಳಿಸುತ್ತ ಕ್ಷಮೆಯಾಚಿಸುವುದು. ಇದರೊಂದಿಗೆ ಕಳುಹಿಸಿಕೊಡುತ್ತಿರುವ ಹೂಗುಚ್ಛವನ್ನು ಸ್ವೀಕರಿಸಿ.
ನೀವು ನನ್ನನ್ನು ಮನ್ನಿಸುತ್ತೀರಿ ಹಾಗೂ ಈ ಘಟನೆಗೂ ಮೊದಲು ನನ್ನ ವಿಷಯದಲ್ಲಿ ಯಾವ ಭಾವನೆ ಹೊಂದಿದ್ದಿರೋ ಅದನ್ನೇ ಇಟ್ಟುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ.
ನಿಮ್ಮ ವಿಶ್ವಾಸಿ, ಜೆಆರ್‌ಡಿ ಟಾಟಾ.
ರೀಡಿಂಗ್ ಎಡಿಟರ್ ಕುರಿತು
ಕೆಲ ವರ್ಷದ ಹಿಂದೆ ನಾನು ಲಂಡನ್‌ಗೆ ಹೋದಾಗ ಅಲ್ಲಿನ ಪ್ರಮುಖ ಹಳೆಯ ಪತ್ರಿಕೆಗಳಲ್ಲೊಂದಾದ, ‘ದಿ ಗಾರ್ಡಿಯನ್’ ಪತ್ರಿಕೆಗೆ ಭೇಟಿ ಕೊಟ್ಟಾಗ ಅಲ್ಲಿನ ‘ರೀಡಿಂಗ್ ಎಡಿಟರ್’ ಜತೆ ನಡೆಸಿದ ಮಾತುಕತೆ ಬಗ್ಗೆ ಪ್ರಸ್ತಾಪಿಸಿದ್ದೆ . ಇದನ್ನು ಓದಿದ ಅನೇಕರ ಪೈಕಿ ನೂರಕ್ಕೂ ಹೆಚ್ಚು ಮಂದಿ, ‘ಇಂಥ ಹುದ್ದೆಯನ್ನು
‘ವಿಶ್ವವಾಣಿ’ಯಲ್ಲಿ ನೀವೂ ಏಕೆ ಸೃಷ್ಟಿಸಬಾರದು, ಕನ್ನಡದ ಓದುಗರಿಗೂ ಅದರ ಪ್ರಯೋಜನ ಸಿಗುವಂತಾಗಲಿ, ಒಂದು ವೇಳೆ ವಿಶ್ವವಾಣಿಯಲ್ಲಿ ಅಂಥ ಹುದ್ದೆ ತೆರೆದರೆ ಅದನ್ನು ನಿಭಾಯಿಸಲು ನಾನು ಸಿದ್ಧ’ ಎಂದು ಹೇಳಿದ್ದಾರೆ.
‘ಟೆಕ್ಸಸ್ ಇನ್ ಸ್ಟ್ರುಮೆಂಟ್ಸ್’ನಲ್ಲಿ ಕೆಲಸ ಮಾಡುತ್ತಿರುವ ಗಿರೀಶ್ ಎಂಬುವವರು ‘ನಾನು ನನ್ನ ಸಂಸ್ಥೆಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದೇನೆ. ಆದರೆ ನನಗೆ ಓದಲು ಸಮಯ ಸಿಗುತ್ತಿಲ್ಲ. ಹಾಗಂತ ನನಗೆ ಪುಸ್ತಕಗಳನ್ನು ಓದುವುದೆಂದರೆ ಪ್ರಾಣ. ಅದಕ್ಕಿಂತ ಉತ್ತಮ ಕೆಲಸ ಬೇರೆ ಯಾವುದೂ ಇಲ್ಲವೆಂಬುದು ನನ್ನ ಭಾವನೆ. ಒಂದು ವೇಳೆ ‘ರೀಡಿಂಗ್ ಎಡಿಟರ್’ ಹುದ್ದೆ ಸೃಷ್ಟಿಸಿದರೆ ಹೇಳಿ, ಕಡಿಮೆ ಸಂಬಳವಾದರೂ ಪರವಾಗಿಲ್ಲ, ನಾನು ಈಗಿನ ಕೆಲಸ ಬಿಟ್ಟು ಬರುತ್ತೇನೆ’ ಎಂದು ಬರೆದಿದ್ದಾರೆ.
ಇದೇ ಧಾಟಿಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಇವರೆಲ್ಲರೂ ಗಂಭೀರ ಓದುಗರು ಹಾಗೂ ಓದುವುದನ್ನೇ ಕಸುಬಾಗಿ ಮಾಡಿಕೊಳ್ಳಬಯಸುವವರು. ಇವರೆಲ್ಲರ ಪ್ರತಿಕ್ರಿಯೆ ಗಮನಿಸಿದ ಬಳಿಕ ಅಂಥದ್ದೊಂದು ಹುದ್ದೆಯನ್ನು ಕನ್ನಡ ಪತ್ರಿಕೆಯಲ್ಲೂ ತೆರೆಯಬೇಕಾದ ಅಗತ್ಯವಿದೆ ಎಂದು ನನಗೆ ಬಲವಾಗಿ ಅನಿಸಿತು.
ಸದ್ಯ ಈ ರೀಡಿಂಗ್ ಎಡಿಟರ್ ಹುದ್ದೆಯನ್ನು ಹೆಚ್ಚುವರಿಯಾಗಿ ನಾನೇ ನಿಭಾಯಿಸುತ್ತಿದ್ದೇನೆ. ನನಗಾಗಿ, ಪತ್ರಿಕೆಗಾಗಿ ಹಾಗೂ ನಮ್ಮ ಓದುಗರಿಗಾಗಿ
ಯಾರಾದರೂ ಪೂರ್ಣಾವಧಿ ಓದಿ ಅದರ ದತ್ತಫಲವನ್ನು ಕೊಡುವಂತಾದರೆ ಅದು ನಿಜಕ್ಕೂ ಖುಷಿ ವಿಚಾರವೇ.
ನೋಡೋಣ. ..