Sunday, 10th November 2024

ಮನಸ್ಸಿದ್ದರೆ ಮೌಂಟ್ ಎವರೆಸ್ಟ್‌ಗೂ ಮಾರ್ಗ

ವಿದೇಶವಾಸಿ

dhyapaa@gmail.com

ಕಾಲಿದ್ದವರು ಮಾಡಬಹುದಾದ ಪರಾಕಾಷ್ಠೆಯ ಕೆಲಸ ಯಾವುದು? ನಡೆಯುವುದು? ಓಡುವುದು? ಜಿಗಿಯುವುದು? ಹತ್ತುವುದು? ಅರುಣಿಮಾ ಹತ್ತುವುದನ್ನು ಆರಿಸಿಕೊಂಡಳು. ಅದೂ ಅಂತಿಂಥದ್ದಲ್ಲ, ಹಿಮಾಲಯವನ್ನು ಹತ್ತಬೇಕು, ಕೃತಕ ಕಾಲಿನ ಮೇಲಾದರೂ ಸರಿ, ಭೂಮಿಯ ಅತಿ ಎತ್ತರದ ಸ್ಥಾನದಲ್ಲಿ ನಿಲ್ಲಬೇಕು ಎಂದು ನಿರ್ಧರಿಸಿದ್ದಳು.

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿ ಮುಟ್ಟಿದ ಮೊದಲಿಗರೆಂದರೆ ನ್ಯೂಜಿ ಲೆಂಡ್‌ನ ಎಡ್ಮಂಡ್ ಹಿಲರಿ ಮತ್ತು ತೇನ್ ಸಿಂಗ್ ನಾರ್ಗೆ. ಇದು ನಾವು ಪ್ರಾಥಮಿಕ ಶಾಲೆಯಲ್ಲಿರುವಾಗ ಓದಿದ ಪಾಠ. ಅದರ ನಂತರ, ಇಲ್ಲಿಯವರೆಗೆ ಒಟ್ಟು 6300ಕ್ಕೂ ಹೆಚ್ಚು ಮಂದಿ ಮೌಂಟ್ ಎವರೆಸ್ಟ್ ತುದಿಯನ್ನು ಮುಟ್ಟಿ, ಮೆಟ್ಟಿ ಬಂದಿದ್ದಾರೆ.

ಪ್ರಪಂಚದ ಅತಿ ಎತ್ತರದ ಶಿಖರದ ಶಿರಸ್ಸಿನಲ್ಲಿ ನಿಲ್ಲುವುದು ಎಂದರೆ ಸಾಮಾನ್ಯ ವಿಷಯವಲ್ಲ. ಅವರೆಲ್ಲ ನಿಜ ಅರ್ಥದಲ್ಲಿ ‘”Top of the world’’ ನಲ್ಲಿ ಕೆಲವು ಕ್ಷಣವಾದರೂ ಇದ್ದು ಬಂದವರು. ಎಲ್ಲರೂ ಅಭಿನಂದನೆಗೆ ಅರ್ಹರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಇವರ ಮಧ್ಯದಲ್ಲಿ ವಿಶೇಷ ವಾಗಿ ಗಮನ ಸೆಳೆಯುವ ಹೆಸರು, ೩೯೬೦ನೇ ಎವರೆಸ್ಟ್ ಶಿಖರಾರೋಹಿಯದ್ದು.

ಅರುಣಿಮಾ ಸಿನ್ಹಾ ಹೆಸರು ಕೇಳದ ಭಾರತೀಯರು ವಿರಳ. ೨ ವರ್ಷದ ಅವಧಿಯಲ್ಲಿ ೨ ಬಾರಿ ರಾಷ್ಟ್ರಮಟ್ಟದಲ್ಲಿ ಚರ್ಚೆಯಾದ ಹೆಸರು ಇದು. ಒಮ್ಮೆ ಆಕೆಯೊಂದಿಗೆ ದುಷ್ಕರ್ಮಿಗಳು ಮಾಡಿದ ಕೃತ್ಯಕ್ಕಾಗಿ, ಇನ್ನೊಮ್ಮೆ ಆಕೆ ಮಾಡಿದ ಸಾಧನೆಯಿಂದಾಗಿ. ನಮ್ಮ ದೇಶದಲ್ಲಿ ಇಂಥ ಒಂದು ಹೀನಘಟನೆ ನಡೆಯಿತು ಎಂದು ತಲೆ ತಗ್ಗಿಸೋ ಣವೇ? ಅಥವಾ ೨ ವರ್ಷದ ನಂತರ ಆ ಹೀನಕೃತ್ಯದಲ್ಲಿ ಪೀಡಿತಳಾಗಿದ್ದ ಮಹಿಳೆ ಇಡೀ ಮನುಕುಲವೇ ತಲೆ ಎತ್ತಿ, ಎದೆ ಉಬ್ಬಿಸಿ ಶಹಭಾಸ್ ಹೇಳುವಂತೆ ಮಾಡಿದ್ದಕ್ಕೆ ಸಂತಸಪಡೋಣವೇ? ನೀವೇ ಹೇಳಿ.

೨೦ ಜುಲೈ ೧೯೮೮, ಉತ್ತರ ಪ್ರದೇಶದ ಲಖನೌಗೆ ಹತ್ತಿರವಿರುವ ಅಂಬೇಡ್ಕರ್ ನಗರದ ಅಕ್ಬರ್‌ಪುರದಲ್ಲಿ ಸೋನು ಸಿನ್ಹಾ ಉರು- ಅರುಣಿಮಾ ಜನನ. ತಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಆರೋಗ್ಯ ಇಲಾಖೆಯಲ್ಲಿ ಮೇಲ್ವಿಚಾರಕಿ ಯಾಗಿದ್ದರು. ಸಣ್ಣ ವಯಸ್ಸಿನ ತಂದೆಯನ್ನು ಕಳೆದುಕೊಂಡು ತಾಯಿಯ ಆಮದನಿಯಿಂದ ಸಂಸಾರ ನಡೆಸುವ ಕೆಳ ಮಧ್ಯಮ ವರ್ಗದ ಪರಿವಾರ ಅದು. ಬಾಲ್ಯದಿಂದಲೂ ಅರುಣಿಮಾಗೆ ಕ್ರೀಡೆ ಯಲ್ಲಿ ಆಸಕ್ತಿ ಇತ್ತು. ಅದರಲ್ಲೂ ಫುಟ್ಬಾಲ್ ಮತ್ತು ವಾಲಿ ಬಾಲ್ ಎಂದರೆ ಇಷ್ಟವಾಗಿತ್ತು. ಆಕೆ ರಾಷ್ಟ್ರೀಯ ವಾಲಿಬಾಲ್ ತಂಡದಲ್ಲೂ ಸ್ಥಾನ ಪಡೆದಿ ದ್ದಳು.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್ಎಫ್) ಕೆಲಸ ಮಾಡಬೇಕು ಎನ್ನುವುದು ಅವಳ ಕನಸಾ ಗಿತ್ತು. ಅದರ ಪರೀಕ್ಷೆ ಬರೆಯಲು ಅವಳು ದೆಹಲಿಗೆ ಹೋಗಬೇಕಿತ್ತು. ಕಣ್ಣಲ್ಲಿ ನೂರಾರು ಕನಸು ಕಟ್ಟಿ ಕೊಂಡು ದೇಶಸೇವೆಯ ಪ್ರೀತಿ ಹೊತ್ತು ಆಕೆ ದೆಹಲಿಗೆ ಹೊರಟಿದ್ದಳು. 12 ಏಪ್ರಿಲ್ 2011, ಪದ್ಮಾವತಿ ಎಕ್ಸ್‌ಪ್ರೆಸ್ ರೈಲು  ಹತ್ತಿ ಕುಳಿತಿದ್ದಳು ಅರುಣಿಮಾ. ಮುಂದಿನ ಕೆಲವೇ ಗಳಿಗೆಯಲ್ಲಿ ತನ್ನ ಜೀವನದ ದಿಕ್ಕನ್ನೇ ಬದಲಾಯಿಸುವ ಘಟನೆ ನಡೆಯಲಿದೆ ಎಂದು ಆಕೆ ಊಹಿಸಲೂ ಸಾಧ್ಯವಿರಲಿಲ್ಲ. ಅದು ಕೇವಲ ಆಕೆಯ ಜೀವನದ ಕರಾಳ ದಿನವಷ್ಟೇ ಆಗಿರಲಿಲ್ಲ, ದೇಶದ ಕರಾಳ ದಿನವೂ ಆಗಿತ್ತು. ಆಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ದರೋಡೆಕೋರರು ನುಗ್ಗಿದ್ದರು.

ಅರುಣಿಮಾ ಬಳಿ ಬಂದ ಅವರು ಆಕೆಯ ಬ್ಯಾಗ್ ಕಿತ್ತುಕೊಂಡು, ಕೊರಳಲ್ಲಿದ್ದ ಬಂಗಾರದ ಸರ ಕಿತ್ತುಕೊಳ್ಳಲು ಮುಂದಾದರು. ಪ್ರತಿರೋಧ ಒಡ್ಡಿದಾಗ ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ಹೊರಗೆ ದೂಡಿದರು. ಪಕ್ಕದ ರೈಲುಹಳಿಯ ಮೇಲೆ ಬಿದ್ದು ಆಕೆಯ ಶ್ರೋಣಿ ಮತ್ತು ಬೆನ್ನಿನ ಮೂಳೆ ಘಾಸಿ ಗೊಂಡಿತ್ತು. ನೋವನ್ನು ಸಹಿಸಿಕೊಳ್ಳಲಾಗದೆ ಚೀರುತ್ತಿರುವಾಗಲೇ ಆಕೆ ಬಿದ್ದಿದ್ದ ಹಳಿಯ ಮೇಲೆ ಇನ್ನೊಂದು ರೈಲು ಬರುವುದು ಕಾಣಿಸಿತು. ಎಷ್ಟು ಪ್ರಯತ್ನಪಟ್ಟರೂ ಆಕೆಗೆ ಅಲುಗಾಡಲೂ ಆಗಲಿಲ್ಲ. ತಾನು ಬಿದ್ದ ಹಳಿಯಿಂದ ಆಚೆ ಬರಲು ಹೆಣಗುತ್ತಿದ್ದಂತೆಯೇ ಆಕೆಯ ಮೊಣಕಾಲಿನ ಕೆಳಭಾಗ ದಿಂದ ರೈಲು ಹಾದುಹೋಯಿತು.

ಮೂರ್ಛೆಹೋದ ಅರುಣಿತಾ ಕೇವಲ ಮಾಂಸದ ಮುದ್ದೆಯಂತೆ ಬಿದ್ದಿದ್ದಳು. ಇದಕ್ಕಿಂತ ದುರದೃಷ್ಟದ ಪರಮಾವಧಿ ಏನಾದರೂ ಇದ್ದೀತೇ? ಸ್ಥಳದಲ್ಲಿದ್ದ ಜನರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಪ್ರಾಣ ಉಳಿಸಲು ವೈದ್ಯರು ಆಕೆಯ ಕಾಲನ್ನು ಕತ್ತರಿಸಿದರು. ಈ ನೋವು ಸಾಲದು ಎಂಬಂತೆ, ಅಂದಿನ ಸರಕಾರ ಆಕೆಗೆ ಕೇವಲ ೨೫,೦೦೦ ರುಪಾಯಿ ಪರಿಹಾರ ಘೋಷಿಸಿತು. ಪೊಲೀಸರು ‘ಅರುಣಿಮಾ ಅತ್ಮಹತ್ಯೆಗೆ ಪ್ರಯತ್ನಿಸಿರಬೇಕು ಅಥವಾ ಹಳಿ ದಾಟುತ್ತಿರುವಾಗ ಅಪಘಾತವಾಗಿರ ಬೇಕು’ ಎಂದು ಹೇಳಿದರು. ಅದು ರಾಷ್ಟ್ರವ್ಯಾಪಿ ಜನರನ್ನು ಕೆರಳಿಸಿತ್ತು. ಸಾಕಷ್ಟು ಟೀಕೆಗಳು ಬಂದ ನಂತರ, ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಮಂತ್ರಿಯಾಗಿದ್ದ ಅಜಯ್ ಮಾಖನ್ ೨ ಲಕ್ಷ ರುಪಾಯಿಯ ಪರಿಹಾರ ಘೋಷಿಸಿದರು.

ಬಹುಶಃ ಅಂದು ಆಕೆಗೆ ದೈಹಿಕವಾಗಿ ಆದ ನೋವಿಗಿಂತ ಅವಮಾನದ ನೋವೇ ಹೆಚ್ಚಾಗಿರಬೇಕು. ನಂತರ ಆಕೆಗೆ ೫ ಲಕ್ಷ ರುಪಾಯಿ ನೀಡಬೇಕೆಂದು ಉಚ್ಚ ನ್ಯಾಯಾಲಯ ಷರಾ ಬರೆಯಿತು. ಒಂದು ವಾರದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅರುಣಿಮಾಳನ್ನು ದೆಹಲಿಯ ಏಮ್ಸಗೆ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಸೇರಿಸಲಾಯಿತು. ಅಲ್ಲಿ ೪ ತಿಂಗಳ ಚಿಕಿತ್ಸೆ ಪಡೆದ ನಂತರ ಕೃತಕ ಕಾಲನ್ನು ಜೋಡಿಸಲಾಯಿತು. ಸಿಐಎಸ್‌ಎಫ್ ಮತ್ತು ಭಾರತೀಯ ರೇಲ್ವೆ ಇಲಾಖೆಗಳು ಉದ್ಯೋಗ ನೀಡಲು ಮುಂದೆ ಬಂದವು.

ಇದೆಲ್ಲವೂ ವಿಧಿಯ ಆಟವೇ ಸರಿ; ಮುಂದಿನ ಛಲದ ಕಥೆ ಇದೆಯಲ್ಲ, ಅದು ನಿಜಕ್ಕೂ ಪ್ರೇರಣಾದಾಯಕ. ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎಂದು ಹೇಳಿದ
ಪೊಲೀಸರಿಗೆ ಕೊಟ್ಟ ಉತ್ತರವೂ ಹೌದು. ಕಾಲಿದ್ದವರು ಮಾಡಬಹುದಾದ ಪರಾಕಾಷ್ಠೆಯ ಕೆಲಸ ಯಾವುದು? ನಡೆಯುವುದು? ಓಡುವುದು? ಜಿಗಿಯು ವುದು? ಹತ್ತುವುದು? ಅರುಣಿಮಾ ಹತ್ತುವುದನ್ನು ಆರಿಸಿಕೊಂಡಳು. ಅದೂ ಅಂತಿಂಥದ್ದಲ್ಲ, ಹಿಮಾಲಯವನ್ನು ಹತ್ತಬೇಕು, ಕೃತಕ ಕಾಲಿನ ಮೇಲಾ ದರೂ ಸರಿ, ಭೂಮಿಯ ಅತಿ ಎತ್ತರದ ಸ್ಥಾನದಲ್ಲಿ ನಿಲ್ಲಬೇಕು ಎಂದು ನಿರ್ಧರಿಸಿದ್ದಳು. ಆಗ ತಾನೆ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್ ರೋಗದೊಂದಿಗೆ ಸೆಣಸಿ ಗೆದ್ದುಬಂದು ಅರುಣಿಮಾಳಿಗೆ ಪ್ರೇರಣೆಯಾಗಿದ್ದ. ಭಾರತದ ಖ್ಯಾತ ಸೌಂದರ್ಯ ತಜ್ಞೆ ಶನಾಜ್ ಹುಸೈನ್ ದೆಹಲಿಯ ಆಸ್ಪತ್ರೆಗೆ ಬಂದು ಅರುಣಿಮಾಳಲ್ಲಿ ಸ್ಫೂರ್ತಿ ತುಂಬುತ್ತಿದ್ದರು.

ಮೊದಲಿನಿಂದಲೂ ಆಕೆ ನಂಬಿದ್ದ ಸ್ವಾಮಿ ವಿವೇಕಾನಂದರ ಚೈತನ್ಯದ ನುಡಿಗಳು ಆಕೆಯೊಂದಿಗಿದ್ದವು. ಮೌಂಟ್ ಎವರೆಸ್ಟ್ ಶಿಖರ ಏರಲೇಬೇಕೆಂದು ಆಕೆ ಪಣತೊಟ್ಟಿದ್ದಳು. ಆಸ್ಪತ್ರೆಯಿಂದ ಹೊರಗೆ ಬಂದ ಅರುಣಿಮಾ, ಉತ್ತರಕಾಶಿಯಲ್ಲಿರುವ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟನೀರಿಂಗ್ ಸೇರಿ ಕೊಂಡಳು. ಪರ್ವತಾರೋಹಿಗಳಿಗೆ ತರಬೇತಿ ನೀಡುವ ಸಂಸ್ಥೆ ಅದು. ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್‌ರನ್ನು ಸಂಪರ್ಕಿಸಿ ದಳು. ಮುಂದಿನ ವರ್ಷ ಟಾಟಾ ಸ್ಟೀಲ್ ಅಡ್ವೆಂಚರ್ ಕ್ಯಾಂಪ್‌ನಲ್ಲಿ ಬಚೇಂದ್ರಿ ಪಾಲ್‌ರಿಂದಲೂ ತರಬೇತಿ ಆಯಿತು. ಅರುಣಿಮಾರ ಆತ್ಮವಿಶ್ವಾಸ ಕಂಡ ಬಚೇಂದ್ರಿ ಪಾಲ್, ‘ಮಗು, ನೀನು ಈಗಾಗಲೇ ಮೌಂಟ್ ಎವರೆಸ್ಟ್ ಏರಿ ನಿಂತಿದ್ದೀಯ, ಕೇವಲ ದಿನಾಂಕ ಯಾವುದು ಎನ್ನುವುದು ಮಾತ್ರ ಬಾಕಿ ಇದೆ’ ಎಂದು ಹೇಳಿದ್ದರು.

31 ಮಾರ್ಚ್ 2013, ಅಂದರೆ ಅಪಘಾತಕ್ಕೊಳಗಾಗಿ ೨ ವರ್ಷವೂ ಪೂರ್ಣಗೊಂಡಿರಲಿಲ್ಲ, ಅರುಣಿಮಾ ಎವರೆಸ್ಟ್ ಏರಲು ಎದ್ದು ನಿಂತಿದ್ದಳು. ಏಪ್ರಿಲ್ 11ನೇ ತಾರೀಖು, ೨ ವರ್ಷ ಆಗುವುದಕ್ಕೆ ಒಂದು ದಿನ ಮುಂಚೆಯೇ 6000 ಮೀಟರ್ ಮೇಲೆ ಹತ್ತಿದ್ದಳು. ಮೇ 12ನೇ ತಾರೀಖು, ಪ್ರಯಾಣ ಆರಂಭಿಸಿ ೫೨ನೆಯ ದಿನ ಬೆಳಗ್ಗೆ 10.55ಕ್ಕೆ ಆಕೆಯ ಕನಸು ನನಸಾಗಿತ್ತು. ಮಂಜಿನ ದಿಬ್ಬದ ಮೇಲೆ ಆಕೆ ಭಾರತದ ಧ್ವಜ ನೆಟ್ಟಳು. ತನ್ನ ಇಷ್ಟದೈವ ಶಿವನಿಗೆ ಕೃತಜ್ಞತೆ ಬರೆದು ಬಟ್ಟೆಯಲ್ಲಿ ಗಂಟುಕಟ್ಟಿ ಹಿಮದಲ್ಲಿ ಹೂತಳು. 8850 ಮೀಟರ್ ಎತ್ತರದಲ್ಲಿ  ನಿಂತ ವಿಶ್ವದ ಮೊದಲ ವಿಕಲಾಂಗ ಮಹಿಳೆ ಎಂಬ ಕೀರ್ತಿಗೆ ಪಾತ್ರಳಾದಳು.

ಮನಸ್ಸೊಂದು ಇದ್ದರೆ ಮೌಂಟ್ ಎವರೆಸ್ಟ್ ಏರುವುದಕ್ಕೂ ಮಾರ್ಗವಿದೆ ಎಂದು ಜಗತ್ತಿಗೇ ತೋರಿಸಿಕೊಟ್ಟಳು. ಆದರೂ ಅವಳ ಬಯಕೆಗೆ ಪೂರ್ಣ ವಿರಾಮ ಬಿದ್ದಿರಲಿಲ್ಲ! ಮೌಂಟ್ ಎವರೆಸ್ಟ್ ಏರಿದ ನಂತರ, ಪ್ರತಿಯೊಂದು ಖಂಡದಲ್ಲೂ ಇರುವ ಎತ್ತರದ ಶಿಖರ ಏರುವುದು ಅರುಣಿಮಾಳ ಮುಂದಿನ ಗುರಿಯಾಗಿತ್ತು. ಮುಂದಿನ ಒಂದೇ ವರ್ಷ, 2014ರಲ್ಲಿ ಆಕೆ ರಷ್ಯಾ ಮತ್ತು ಯುರೋಪ್‌ನಲ್ಲಿ ಹಬ್ಬಿರುವ ಮೌಂಟ್ ಎಲ್‌ಬ್ರಸ್, ತಾಂಜಾನಿಯಾದ (ಆಫ್ರಿಕಾ) ಕಿಲಿಮಂಜಾರೋ ಸೇರಿದಂತೆ ೬ ಖಂಡಗಳ ಎತ್ತರದ ಶಿಖರದ ತುದಿಯನ್ನೂ ತಲುಪಿ ಹಿಂದಿರುಗಿದ್ದಳು. ಕೊನೆಯದಾಗಿ, ೨೦೧೯ರ ಜನವರಿ ಯಲ್ಲಿ ಅಂಟಾರ್ಕ್ಟಿಕಾದ ಮೌಂಟ್ ವಿನ್ಸನ್ ಶಿಖರವನ್ನು ಏರಿ, ಆ ಶಿಖರವನ್ನು ಏರಿದ ವಿಶ್ವದ ಮೊದಲ ವಿಕಲಾಂಗ ಮಹಿಳೆ ಎಂಬ ಕೀರ್ತಿಯೊಂದಿಗೆ ತನ್ನ ಶಿಖರ ಪರ್ಯಟನೆ ಮುಗಿಸಿದ್ದಳು.

ಏನು ಹೇಳೋಣ? ಅರುಣಿಮಾಳ ಶಿಖರ ಸಮಾರಾಧನೆಯ ಹಸಿವು ತೀರಿದೆಯೇ? ಗೊತ್ತಿಲ್ಲ. ಮುಂದೊಂದು ದಿನ ಚಂದ್ರಲೋಕಕ್ಕೆ ಹತ್ತಿಕೊಂಡು ಹೋಗ ಬಹುದು ಎಂದಾದರೆ ಅದಕ್ಕೂ ಆಕೆ ಸಿದ್ಧಳಾಗಬಹುದು! ಕಾಲಿಲ್ಲ ಎನ್ನಬೇಡಿ, ಕಾಲವನ್ನು ಕಾಲ ಕೆಳಗೆ ಇಟ್ಟವಳು ಅರುಣಿಮಾ! ಸದ್ಯ ಅರುಣಿಮಾ ಪ್ಯಾರಾಒಲಿಂಪಿಕ್ ಕ್ರೀಡಾಪಟು ಗೌರವ್ ಸಿಂಗ್‌ನನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾಳೆ.

’ಅರುಣಿಮಾ ಫೌಂಡೇಷನ್’ ಸ್ಥಾಪಿಸಿ, ಮಹಿಳಾ ಸಬಲೀಕರಣ, ವಿಕಲಚೇತನ ಮತ್ತು ಬಡಜನರ ಆರೋಗ್ಯ ಮತ್ತು ಆರ್ಥಿಕ ಸುಧಾರಣೆಗೆ ಶ್ರಮಿಸುತ್ತಿzಳೆ.
ಅರುಣಿಮಾ ಸಿನ್ಹಾ ಬರೆದ ’’BORN AGAIN ON THE MOUNTAIN’- A Story of Losing Everything and Finding It Back’’ ಪುಸ್ತಕದಲ್ಲಿ ಈ ಎಲ್ಲ ಘಟನೆಗಳು ವಿವರವಾಗಿವೆ. ನಾಡಿದ್ದು ಮಾರ್ಚ್ ೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಭೂಮಿಯೂ ಹೆಣ್ಣು, ಅದರ ಸೃಷ್ಟಿಗೆ ಕಾರಣವಾದ ಆದಿಮಾಯೆಯೂ ಹೆಣ್ಣು. ಅವಳಂತೂ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣುವ ಮಾತೃಸದೃಶ ನಾರಿಯರನ್ನು ಗೌರವಿ ಸೋಣ. ಅರುಣಿಮಾ ಸಿನ್ಹಾ, ಮಾಳವಿಕಾ ಅಯ್ಯರ್, ಮಾನಸಿ ಜೋಶಿಯಂಥ ಸ್ಫೂರ್ತಿ ಶಕ್ತಿಯನ್ನು ಸ್ಮರಿಸೋಣ.