ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ವಿದೇಶಗಳಿಗೆ ಹೋಗುವುದು ಏಕೆ ಎಂಬುದು ಅಷ್ಟೇ ಮುಖ್ಯ. ಬೆಂಗಳೂರೇ ಮಹಾನ್ ನಗರವಲ್ಲ. ಈ ರಾಜ್ಯವನ್ನು ಮುನ್ನಡೆಸುವವರು ಬೇರೆ ಬೇರೆ ದೇಶಗಳಿಗೆ ಹೋಗಿ, ಅಲ್ಲಿ ಏನೆಲ್ಲ ಹೊಸತುಗಳಿವೆ ಎಂಬುದನ್ನು ನೋಡದಿದ್ದರೆ, ಬೆಂಗಳೂರು ಮತ್ತು ಇನ್ನಿತರ ನಗರಗಳು ಇದ್ದಂತೆ ಇರುತ್ತದೆ. ಬೇರೆ ದೇಶಗಳಿಗೆ ಹೋಗದಿದ್ದರೆ, ಅಲ್ಲಿನ ಕೃಷಿ ಪದ್ಧತಿ, ರೈತರ ಜನಜೀವನ, ಕೃಷಿ ತಂತ್ರeನ ಹೇಗೆ ಗೊತ್ತಾಗಲು ಸಾಧ್ಯ?
ಕಳೆದ ತಿಂಗಳು ಬೆಹರೈನ್ ಕನ್ನಡ ಸಂಘದ ಸ್ನೇಹಿತರು ಬೆಂಗಳೂರಿಗೆ ಬಂದು, ತಮ್ಮ ಕನ್ನಡ ಸಂಘದ ನೂತನ ಕಟ್ಟಡ ಉದ್ಘಾಟನೆಗೆ
ಮುಖ್ಯಮಂತ್ರಿಯವರನ್ನು ಆಹ್ವಾನಿಸಿದರು. ಬೊಮ್ಮಾಯಿಯವರು ಅವರ ಆಹ್ವಾನವನ್ನು ಯಾಕೋ ಒಪ್ಪಿಕೊಳ್ಳಲಿಲ್ಲ. ನಂತರ ಬೆಹರೈನ್ ಸ್ನೇಹಿತರು, ನೀವಾದರೂ ಮುಖ್ಯಮಂತ್ರಿಯವರನ್ನು ಒಪ್ಪಿಸಿ ಎಂದು ಹೇಳಿದರು. ಅದಾಗಿ ಒಂದು ವಾರದ ಬಳಿಕ, ಮುಖ್ಯಮಂತ್ರಿಯವ ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಅವರು ಆಗಲೂ ಅದನ್ನು ನಯವಾಗಿ ತಿರಸ್ಕರಿಸಿದರು. ‘ಮುಖ್ಯ ಮಂತ್ರಿ ಆಗಿ ಇನ್ನೂ ಮೂರು ತಿಂಗಳೂ ಆಗಿಲ್ಲ, ಈಗಲೇ ವಿದೇಶ ಪ್ರವಾಸ ಬೇಡ ಬಿಡಿ’ ಎಂದರು.
ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ, ಅವರ ಮನಃ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ‘ನನ್ನ ಈ ಅಧಿಕಾರ ಅವಧಿಯಲ್ಲಿ ವಿದೇಶ ಪ್ರವಾಸ ಹೋಗಬಾರದು ಎಂದು ನಾನು ನಿರ್ಧರಿಸಿದ್ದೇನೆ’ ಎಂದು ಹೇಳಿದರು. ನನಗೆ ಅದ್ಯಾಕೋ ಅಷ್ಟು ಸಮಂಜಸ ಎನಿಸಲಿಲ್ಲ. ಅದ್ಯಾಕೋ ಗೊತ್ತಿಲ್ಲ, ಮುಖ್ಯಮಂತ್ರಿಗಳಾದವರು ವಿದೇಶ ಪ್ರವಾಸ ಅಂದ್ರೆ ಯಾಕೋ ಒ ಅನ್ನುತ್ತಾರೆ. ವಿದೇಶಗಳಿಗೆ ಹೋದರೆ, ಅದೇನೋ ಪಾಪಪ್ರಜ್ಞೆ ಕಾಡಿದವರಂತೆ ವರ್ತಿಸು ತ್ತಾರೆ. ವಿದೇಶಗಳಿಗೆ ಮೋಜು-ಮಸ್ತಿ ಮಾಡಲು ಹೋಗುತ್ತಿದ್ದಾರೆ ಎಂದು ಜನ ತಿಳಿಯ ಬಹುದೆಂದು, ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ‘ನಾನು ನನ್ನ ಅವಧಿಯಲ್ಲಿ ವಿದೇಶಗಳಿಗೆ ಹೋಗಿಲ್ಲ’ ಎಂದು ಗರ್ವದಿಂದ ಹೇಳಿ ಕೊಳ್ಳುತ್ತಾರೆ.
ಇದು ಯಾವ ಸೀಮೆ ಹೆಚ್ಚುಗಾರಿಕೆಯೋ ನನಗಂತೂ ಅರ್ಥವಾಗಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ, ‘ಸಿದ್ದರಾಮಯ್ಯ ನವರೇ, ನೀವಾದರೂ ಆಗಾಗ ವಿದೇಶ ಪ್ರವಾಸ ಹೋಗಿ ಬನ್ನಿ’ ಎಂದು ಒಂದು ಅಂಕಣವನ್ನೇ ಬರೆದಿದ್ದೆ. ಮುಖ್ಯಮಂತ್ರಿಗಳಾದವರು
ಯಾಕೆ ವಿದೇಶ ಪ್ರವಾಸ ಮಾಡಬೇಕು ಎಂದು ಸವಿಸ್ತಾರವಾಗಿ ಬರೆದಿದ್ದೆ. ಆದರೆ ಅವರೂ ವಿದೇಶಗಳಿಗೆ ಹೋಗಲೇ ಇಲ್ಲ. ಚೈನಾ, ದುಬೈ ಬಿಟ್ಟರೆ ಅವರು ಐದು ವರ್ಷಗಳ ಅವಽಯಲ್ಲಿ ಎಲ್ಲಿಗೂ ಹೋಗಲಿಲ್ಲ. ಅದರಿಂದ ಅವರಿಗೆ ವೈಯಕ್ತಿಕವಾಗಿ ಅದೇನು ಲಾಭವಾಯಿತೋ
ಗೊತ್ತಿಲ್ಲ ಅಥವಾ ಅದರಿಂದ ಅವರ ಇಮೇಜ್ ವೃದ್ಧಿಸಿತಾ? ಅದೂ ಗೊತ್ತಿಲ್ಲ.
ಆದರೆ, ಅವರು ಹೋಗದ್ದರಿಂದ, ನಿಸ್ಸಂದೇಹವಾಗಿ, ರಾಜ್ಯಕ್ಕಂತೂ ಹಾನಿಯಾಯಿತು. ಅವರ ವಿದೇಶ ಪ್ರವಾಸದಿಂದ ರಾಜ್ಯಕ್ಕೆ ಒದಗಿ ಬರಬಹುದಾದ ಹಲವಾರು ಯೋಜನೆಗಳು, ಪ್ರಯೋಜನಗಳು ತಪ್ಪಿಹೋದವು. ಇದೇ ತಪ್ಪನ್ನು ಈಗ ಬೊಮ್ಮಾಯಿಯವರೂ ಮಾಡು ತ್ತಿದ್ದಾರೆ. ಯಾರು ಸಹ ವಿದೇಶ ಪ್ರವಾಸ ಮಾಡದೇ ಆದರ್ಶ ಮೆರೆದ ಮುಖ್ಯಮಂತ್ರಿ ಎಂದು ಅವರ ಮುಡಿಗೆ ಚೆಂಡು ಹೂ ಸಿಕ್ಕಿಸುವುದಿಲ್ಲ. ಈ ದಿನಮಾನದಲ್ಲಿ ವಿದೇಶಗಳಿಗೆ ಹೋಗದಿರುವುದು ಆದರ್ಶವೂ ಅಲ್ಲ, ಹೆಚ್ಚುಗಾರಿಕೆಯೂ ಅಲ್ಲ, ಅದು ಮಿತವ್ಯಯದ ಪ್ರದರ್ಶನವೂ ಅಲ್ಲ. ನನ್ನ ದೃಷ್ಟಿಯಲ್ಲಿ ಅದೊಂದು ಶುದ್ಧ ಅವಿವೇಕಿ ಧೋರಣೆ.
ಮುಖ್ಯಮಂತ್ರಿಗಳಾದವರು ವಿದೇಶ ಪ್ರವಾಸ ಮಾಡಲೇಬೇಕು. ವಿದೇಶಗಳಿಗೆ ಹೋಗಿ, ಅಲ್ಲಿ ನೋಡಿ ಬಂದ ಹೊಸ ಹೊಸ ಸಂಗತಿ ಗಳನ್ನು ನಮ್ಮಲ್ಲೂ ಅನುಷ್ಠಾನಗೊಳಿಸಬೇಕು. ಬೇರೆ ದೇಶಗಳಲ್ಲಿ ಕಾಣುವ ಒಳ್ಳೆಯ ಅಂಶಗಳ ಕುರಿತು ನಮ್ಮ ಅಧಿಕಾರಿಗಳಿಗೆ ಹೇಳ ಬೇಕು. ಅಲ್ಲಿನ ಅತ್ಯುತ್ತಮ ಸಂಪ್ರದಾಯ, ಸಂಗತಿ, ವ್ಯವಸ್ಥೆಯನ್ನು ಇಲ್ಲಿಯೂ ಜಾರಿಗೊಳಿಸುವುದು ಹೇಗೆ ಎಂದು ಯೋಚಿಸಬೇಕು. ಬೆಂಗಳೂರೇ ಮಹಾನ್ ನಗರವಲ್ಲ. ಈ ರಾಜ್ಯವನ್ನು ಮುನ್ನಡೆಸುವವರು ಬೇರೆ ಬೇರೆ ದೇಶಗಳಿಗೆ ಹೋಗಿ, ಅಲ್ಲಿ ಏನೆಲ್ಲ ಹೊಸತುಗಳಿವೆ
ಎಂಬುದನ್ನು ನೋಡದಿದ್ದರೆ, ಬೆಂಗಳೂರು ಮತ್ತು ಇನ್ನಿತರ ನಗರಗಳು ಇದ್ದಂತೆ ಇರುತ್ತದೆ.
ಬೇರೆ ದೇಶಗಳಿಗೆ ಹೋಗದಿದ್ದರೆ, ಅಲ್ಲಿನ ಕೃಷಿ ಪದ್ಧತಿ, ರೈತರ ಜನಜೀವನ, ಕೃಷಿ ತಂತ್ರಜ್ಞಾನ ಹೇಗೆ ಗೊತ್ತಾಗಲು ಸಾಧ್ಯ? ನಾನಾಗಲಿ, ಬೇರೆಯವರಾಗಲಿ, ವಿದೇಶ ಪ್ರವಾಸ ಮಾಡುವುದಕ್ಕೂ, ಮುಖ್ಯಮಂತ್ರಿಗಳು ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಅಲ್ಲಿ ನೋಡಿ ಬಂದಿದ್ದನ್ನು ಮುಖ್ಯಮಂತ್ರಿಗಳು ತತ್ ಕ್ಷಣ ಜಾರಿಗೊಳಿಸಬಹುದು. ಅದರ ಲಾಭ ರಾಜ್ಯಕ್ಕಾಗುತ್ತದೆ. ಯಾವತ್ತೂ ನಮಗಿಂತ ಮುಂದು ವರಿದ ದೇಶಗಳಿಗೆ ಹೋದರೆ, ಅಲ್ಲಿನ best practice ಗಳನ್ನು ಯಥಾವತ್ತು ಜಾರಿಗೊಳಿಸಲು ಸಾಧ್ಯವಾಗುತ್ತದೆ. ಹಾಗೆಯೇ, ಈ
ರಾಜ್ಯವನ್ನು ಮುನ್ನಡೆಸುವವರ ಗ್ರಹಿಕೆ, ದೃಷ್ಟಿಕೋನವೂ ವಿಶಾಲವಾಗುತ್ತದೆ. ಬೆಂಗಳೂರನ್ನು ಅಭಿವೃದ್ಧಿಪಡಿಸುವ ನೂರಾರು ಐಡಿಯಾ ಗಳು ಸಿಗುತ್ತವೆ.
ಹೀಗಾಗಿ ಮುಖ್ಯಮಂತ್ರಿಗಳು ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ವಿದೇಶಗಳಿಗೆ ಹೋಗಲೇಬೇಕು. ಹೋಗುವಾಗ ತಾವೊಬ್ಬರೇ ಅಲ್ಲ, ಸಂಬಂಧಪಟ್ಟ ಮಂತ್ರಿ ಮತ್ತು ಅಧಿಕಾರಿಗಳನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು. ವಾಪಸ್ ಬಂದು ಯಾವ್ಯಾವ ಅಂಶಗಳನ್ನು ಅನುಷ್ಠಾನಗೊಳಿಸಲು ಸಾಧ್ಯ ಎಂದು ಯೋಚಿಸಿ, ಅವನ್ನು ಜಾರಿಗೊಳಿಸಬೇಕು. ಬೇರೆ ನಗರವನ್ನು ನೋಡದೇ, ಬೇರೆ
ದೇಶಗಳನ್ನು ನೋಡದೇ, ಬೆಂಗಳೂರಿನ ನಗರ ಜೀವನವನ್ನು ಉತ್ತಮಗೊಳಿಸಲು ಸಾಧ್ಯವಿಲ್ಲ. ವಿಧಾನ ಸೌಧದಲ್ಲಿ, ‘ಕೃಷ್ಣಾ’ದಲ್ಲಿ, ಮಶ್ವರದ ಪಕ್ಷದ ಕಾರ್ಯಾಲಯದಲ್ಲಿ ಸದಾ ಕುಳಿತರೆ, ಮುಖ್ಯಮಂತ್ರಿಗಳಿಗೆ ಹೊಸ ಯೋಚನೆಗಳು ಬರಲು ಸಾಧ್ಯವಿಲ್ಲ.
ಅದೇ ಅದೇ ಮುಖಗಳು, ಅದೇ ಅದೇ ಭಟ್ಟಂಗಿಗಳನ್ನು ಭೇಟಿ ಮಾಡುತ್ತಿರಬಹುದಷ್ಟೆ. ಇದರಿಂದ ಯಾರಿಗೆ, ಯಾವ ಪ್ರಯೋಜನವೋ ಆ ‘ದಿನ ದೀನದಯಾಳ’ನೇ ಬಲ್ಲ! ಮುಖ್ಯಮಂತ್ರಿಗಳಾದವರು ಬೇರೆ ಕಾರಣಕ್ಕೂ ವಿದೇಶಗಳಿಗೆ ಹೋಗಬೇಕು. ಬಂಡವಾಳ ಆಕರ್ಷಿಸಲು,
ರಾಜ್ಯವನ್ನು ಇನ್ನಿತರ ದೇಶಗಳ ಮುಂದೆ showcase ಮಾಡಲು ಆಗಾಗ ಹೋಗಬೇಕು. ಸಾಮಾನ್ಯವಾಗಿ, ಮುಖ್ಯಮಂತ್ರಿಗಳು ವಿದೇಶಕ್ಕೆ ಹೋದಾಗ, ದೊಡ್ಡ ದೊಡ್ಡ ಉದ್ಯಮಪತಿಗಳು, ಉದ್ಯಮರಂಗದ ನಾಯಕರು, thought leader ಗಳು, ವಿಷಯ ಪರಿಣತರು, ವಿಜ್ಞಾನಿಗಳು, ಜ್ಞಾನಿಗಳು.. ಹೀಗೆ ಅನೇಕ ಗಣ್ಯರು, ಅವರನ್ನು (ಸಿಎಂ) ಭೇಟಿ ಮಾಡಲು ಹಾತೊರೆಯುತ್ತಾರೆ.
ಅವರ ಜತೆ ಮುಕ್ತ ಮಾತುಕತೆ ನಡೆಸಲು, ಅವರ ಚಿಂತನೆಗಳನ್ನು ಕೇಳಲು ಅಪೂರ್ವ ಅವಕಾಶ ಸಹಜವಾಗಿ ತೆರೆದುಕೊಳ್ಳುತ್ತದೆ. ಇಂಥವರ ಮಾತುಗಳಿಗೆ ಕಿವಿಯಾಗುವುದೇ ಒಂದು ಅದ್ಭುತ ಅವಕಾಶ. ದೊಡ್ಡ ಬಂಡವಾಳಶಾಹಿಗಳಿಗೆ ನಮ್ಮ ರಾಜ್ಯದಲ್ಲಿ ಉದ್ಯಮ
ತೆರೆಯುವಂತೆ ಆಹ್ವಾನ ನೀಡಲು ಇದೊಂದು ಉತ್ತಮ ಅವಕಾಶ.
ಮುಖ್ಯಮಂತ್ರಿಗಳು ಯಾವ ದೇಶಕ್ಕೆ ಹೋದರೂ, ಬಂಡವಾಳಶಾಹಿಗಳ ಸಭೆಯನ್ನು, ಸಮಾವೇಶವನ್ನು ಏರ್ಪಡಿಸಲು ಯೋಚಿಸಿದರೆ, ಅಲ್ಲಿನ ಹಲವಾರು ಸಂಘಟನೆಗಳೇ ಇದನ್ನು ಆಯೋಜಿಸುತ್ತವೆ. ನೂರು ಜನರಲ್ಲಿ ಇಪ್ಪತ್ತು ಜನ ಮುಂದೆ ಬಂದರೂ ಸಾಕು, ಅದು ದೊಡ್ಡ ಸಾಧನೆಯೇ. ಇದರ ಜತೆಗೆ ಮುಖ್ಯಮಂತ್ರಿಗಳು ಮತ್ತೊಂದು ಜವಾಬ್ದಾರಿ ಮೆರೆದಂತಾಗುತ್ತದೆ. ಅದೇನೆಂದರೆ, ಅನಿವಾಸಿ ಕನ್ನಡಿಗರ ಜತೆ connect ಆಗುವುದು. ಕರ್ನಾಟಕದಲ್ಲಿರುವವರ ಯೋಗಕ್ಷೇಮವನ್ನಷ್ಟೇ ಅಲ್ಲ, ವಿದೇಶಗಲ್ಲಿರುವ ಕನ್ನಡಿಗರ, ಕರ್ನಾಟಕದವರ ಹಿತರಕ್ಷಣೆ ಕಾಪಾಡುವುದೂ ಮುಖ್ಯಮಂತ್ರಿಗಳ ಕರ್ತವ್ಯ.
ಒಂದು ಸಲ ಮುಖ್ಯಮಂತ್ರಿ ವಿದೇಶಕ್ಕೆ ಬಂದು, ಅಲ್ಲಿ ನೆಲೆಸಿರುವ ಕನ್ನಡಿಗರನ್ನು ಭೇಟಿಯಾದರೆ, ಕನ್ನಡಿಗರಲ್ಲಿ ಮೂಡುವ ಭಾವನೆಯೇ ಬೇರೆ. ಇದರಿಂದ ಸಹಜವಾಗಿ ವಿದೇಶಿ ನೆಲದಲ್ಲಿ ನೆಲೆಸಿರುವ ಕನ್ನಡಿಗರಿಗೆ ನೈತಿಕ ಬೆಂಬಲ ನೀಡಿದಂತಾಗುತ್ತದೆ. ಅದು ಯಾವುದೇ ಸರಕಾರದ ಪರಮ ಕರ್ತವ್ಯ. ಇದನ್ನು ಪ್ರತಿ ಮುಖ್ಯಮಂತ್ರಿಯೂ ತಮ್ಮ ಆದ್ಯ ಹೊಣೆಗಾರಿಕೆ ಎಂದು ಭಾವಿಸಿ ಮಾಡಬೇಕು.
ವಿದೇಶದಲ್ಲಿರುವ ಕನ್ನಡಿಗರು ಕರ್ನಾಟಕದ ಜತೆ ಸದಾ ಭಾವನಾತ್ಮಕ ಸಂಬಂಧ ಹೊಂದಿದವರು. ಅವರ ಭಾವನೆಗಳಿಗೆ ಸ್ಪಂದಿಸುವುದು, ಮಿಡಿಯುವುದು ಮುಖ್ಯಮಂತ್ರಿಯವರ ಕರ್ತವ್ಯ. ಈ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು.ಇದನ್ನು ಮಾಡಲೆಂದೇ ರಾಜ್ಯ ಸರಕಾರ ಅನಿವಾಸಿ ಕನ್ನಡಿಗರ ವೇದಿಕೆ (ಎನ್ನಾರೈ ಫೋರಮ್) ಯನ್ನು ಸ್ಥಾಪಿಸಿದೆ. ಅದಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರು. ದುರ್ದೈವದ ಸಂಗತಿ ಯೆಂದರೆ, ಆ ವೇದಿಕೆಗೆ ನಾಲ್ಕು ವರ್ಷಗಳಿಂದ ನಾಯಕತ್ವವೇ ಇಲ್ಲ. ಉಪಾಧ್ಯಕ್ಷರಿಲ್ಲದೇ ಬಣಗುಡುತ್ತಿದೆ.
ಪ್ರಧಾನಿಯಾಗಿ ಮೋದಿಯವರು ಆಗಾಗ ವಿದೇಶ ಪ್ರವಾಸ ಮಾಡುವುದಕ್ಕೆ ಆಗಾಗ ಚರ್ಚೆ ಆಗುತ್ತದೆ. ಅವರು ಭಾರತಕ್ಕೆ ಆಗಾಗ ಬರುತ್ತಾರೆ ಎಂದೂ ಕೆಲವರು ವ್ಯಂಗ್ಯ ನುಡಿಯುವುದುಂಟು. ಆದರೆ ಪ್ರಧಾನಿ ಆಗುವುದಕ್ಕಿಂತ ಮುನ್ನ, ಗುಜರಾತಿನ ಮುಖ್ಯಮಂತ್ರಿ ಯಾಗಿದ್ದಾಗಲೇ ಅವರು, ಅರವತ್ತಕ್ಕಿಂತ ಹೆಚ್ಚು ದೇಶಗಳಿಗೆ ಹೋಗಿದ್ದರು. ಗುಜರಾತಿನ ಅಭಿವೃದ್ಧಿಗೆ ಅವರ ವಿದೇಶ ಪ್ರವಾಸವೂ ಒಂದು ಕಾರಣ ಎಂಬುದು ಗಮನಾರ್ಹ. ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಇಸ್ರೇಲ್ ಸೇರಿದಂತೆ ಹಲವು ದೇಶಗಳ ಪ್ರಧಾನಿಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು. ಬಿಜೆಪಿ ಮುಖ್ಯಮಂತ್ರಿಗಳು best practice ಬಗ್ಗೆ ಬೇರೆಯವರತ್ತ ನೋಡಬೇಕಿಲ್ಲ.
ಮೋದಿಯವರಿಗಿಂತ ಉತ್ತಮ ನಿದರ್ಶನ ಅವರಿಗೆ ಸಿಗಲು ಸಾಧ್ಯವಿಲ್ಲ. ಹೀಗಿರುವಾಗ ಬೊಮ್ಮಾಯಿ ಅವರು ವಿದೇಶ ಪ್ರವಾಸ ಹೋಗ ದಿರುವುದೇ ಒಂದು ಶ್ರೇಷ್ಠತೆ, ಅದೇ ಒಂದು ಸಂಪನ್ನತೆ (virtue) ಎಂದು ಭಾವಿಸಬೇಕಿಲ್ಲ. ಅದು ಅವ್ಯಾವವೂ ಅಲ್ಲವೂ ಅಲ್ಲ. ಹಾಗೆ ನೋಡಿದರೆ, ಈ ದಿನಗಳಲ್ಲಿ ವಿದೇಶಗಳಿಗೆ ಹೋಗದಿರುವುದು ಅವರ ಬಲಹೀನತೆ ಎಂದೇ ಭಾವಿಸಬೇಕಾಗುತ್ತದೆ. ವಿದೇಶಗಳಿಗೆ ಹೋಗುವುದು ಏಕೆ ಎಂಬುದು ಅಷ್ಟೇ ಮುಖ್ಯ. ಮೋಜು-ಮಸ್ತಿ ಮಾಡಲು, ಮಜಾ ಉಡಾಯಿಸಲು ಯಾವ ಮುಖ್ಯಮಂತ್ರಿಯೂ ಹೋಗು ವುದಿಲ್ಲ. ಪ್ರತಿ ವರ್ಷ ನಮ್ಮ ಶಾಸಕರನ್ನು ಸರಕಾರ ಹತ್ತು-ಹನ್ನೆರಡು ದಿನಗಳ ಕಾಲ ಹಲವು ದೇಶಗಳಿಗೆ ಅಧ್ಯಯನಕ್ಕೆಂದು ವಿದೇಶಗಳಿಗೆ ಕಳಿಸಿಕೊಡುತ್ತದೆ.
ಅದರಿಂದ ಇಲ್ಲಿ ತನಕ ಯಾವ ಪ್ರಯೋಜನ ಆಗಿದೆಯೋ, ಗೊತ್ತಿಲ್ಲ. ಶಾಸಕರು ವಿದೇಶ ಪ್ರವಾಸ ಹೋದರೆ, ದಮಡಿ ಪ್ರಯೋಜನವೂ ಇಲ್ಲ. ಅನೇಕರು ಕುಡಿದು-ತಿಂದು, ಚೈನಿ ಮಾಡಿ, ಶಾಪಿಂಗ್ ಮಾಡಿ ಮರಳುತ್ತಾರೆ. ಅಂಥ ವಾಸಗಳಿಂದ ಏನೂ ಪ್ರಯೋಜನ ಇಲ್ಲ. ವಿದೇಶಗಳಿಗೆ ಹೋಗಿ ಬಂದ ಶಾಸಕರು ತಮ್ಮ ಪ್ರವಾಸ ಅಥವಾ ಅಧ್ಯಯನದ ವರದಿಗಳನ್ನು ಸರಕಾರಕ್ಕೆ ಸಲ್ಲಿಸಬೇಕು. ಆದರೆ ಯಾರೂ ಅಂಥ ವರದಿಗಳನ್ನು ಸಲ್ಲಿಸುವುದೂ ಇಲ್ಲ. ಒಂದು ವೇಳೆ ಸಲ್ಲಿಸಿದರೂ, ಸರಕಾರ ತೆರೆದು ಸಹ ನೋಡುವುದಿಲ್ಲ.
ಒಮ್ಮೆ ಕರ್ನಾಟಕದಿಂದ ಹೀಗೆ ವಿದೇಶಕ್ಕೆ ಪ್ರವಾಸ ಹೋದ ಶಾಸಕರ ನಿಯೋಗ, ಯೂರೋಪಿನ ದೇಶವೊಂದರ ಪಾರ್ಲಿಮೆಂಟಿಗೆ ಭೇಟಿ ನೀಡಿತ್ತು. ಅಲ್ಲಿನ ಸಭಾಧ್ಯಕ್ಷರು (ಸ್ಪೀಕರ್) ನಮ್ಮ ಶಾಸಕರನ್ನುದ್ದೇಶಿಸಿ, ತಮ್ಮ ದೇಶದ ಸಂಸದೀಯ ವ್ಯವಸ್ಥೆ, ನಡಾವಳಿಗಳ ಬಗ್ಗೆ
ವಿವರಿಸುವಾಗ, ನಿಯೋಗದಲ್ಲಿದ್ದ ಶಾಸಕರೊಬ್ಬರು, ‘ನಿಮ್ಮ ದೇಶದಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲು ಇವೆಯಾ? ಒಂದು ವೇಳೆ ಇದ್ದರೆ ಎಷ್ಟು ಪರ್ಸೆಂಟ್ ಮೀಸಲು ಇದೆ?’ ಎಂದು ಕೇಳಿ, ಇಡೀ ನಿಯೋಗದ ಮರ್ಯಾದೆ ಕಳೆದಿದ್ದರು. ಆ ಸ್ಪೀಕರ್ ಮಹಾಶಯನಿಗೆ, ಎಸ್ಸಿ, ಎಸ್ಟಿ, ಮೀಸಲು, ಬದನೇಕಾಯಿ ಅಂದ್ರೆ ಏನಂತ ಅರ್ಥ ಮಾಡಿಕೊಳ್ಳಬೇಕು? ನಂತರ ಪ್ರಶ್ನೆ ಕೇಳಿದ ಶಾಸಕನನ್ನು ಉಳಿದವರು ಬಾಯಿ ಮುಚ್ಚಿಸಿ ಸುಮ್ಮನೆ ಕುಳ್ಳಿರಿಸಬೇಕಾಯಿತು. ಇಂಥವರನ್ನು ವಿದೇಶಕ್ಕೆ ಕಳಿಸದಿರುವುದೇ ವಾಸಿ. ಯಾಕೆಂದರೆ, ಇಂಥವರು ಹೋದರೇ ಸಮಸ್ಯೆ.
ಇವರು ದೇಶದ ಅಥವಾ ರಾಜ್ಯದ ಮಾನ ಹರಾಜು ಹಾಕಿ ಬರುತ್ತಾರೆ. ಮುಖ್ಯಮಂತ್ರಿಯವರು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ವಿದೇಶ ಪ್ರವಾಸದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವುದು ಒಳ್ಳೆಯದು. ಇದರಿಂದ ರಾಜ್ಯಕ್ಕೆ ಲಾಭ. ತಮ್ಮ ಇಮೇಜ್ ಕಾಪಾಡಲು, ರಾಜ್ಯಕ್ಕೆ ನಷ್ಟವಾದರೂ ಪರವಾಗಿಲ್ಲ ಎಂಬುದು ಅವರ ವಾದ ಅಥವಾ ನಿಲುವಾದರೆ, ನೋ ಕಾಮೆಂಟ್ಸ್!