ಡಾ.ಡಿ.ಆರ್.ನಿಡೋಣಿ
ಪ್ರತಿಯೊಬ್ಬ ವ್ಯಕ್ತಿ ತನ್ನ ಕಾರ್ಯಗಳನ್ನು ಒಂದು ಪೂಜೆ ಮತ್ತು ಯೋಗವೆಂಬ ಭಾವದೊಂದಿಗೆ ಮಾಡಿದರೆ, ಇಹಲೋಕವನ್ನು ತ್ಯಜಿಸಿದ ನಂತರವೂ ಅವರ ಹೆಸರು ಅಜರಾಮರವಾಗಿ ಉಳಿಯುತ್ತದೆ. ಅವರೇ ಮಹಾನ್ ಸಾಧಕರು ಎಂದೆನಿಸಿಕೊಳ್ಳುತ್ತಾರೆ.
ಈ ನಾಡಿನ ಅನೇಕ ಮಹಾನ್ ಸಾಧಕರಲ್ಲಿ ಡಾ. ಎಂ.ಎಸ್. ಬಿರಾದಾರ ಕೂಡ ಒಬ್ಬರು.
ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ 1955ರ ಮೇ 1ರಂದು ಜನಿಸಿದರು. ಇವರದು ಕೃಷಿಪ್ರಧಾನ, ಅವಿಭಕ್ತ ಮತ್ತು ಮಧ್ಯಮ ವರ್ಗದ ಕುಟುಂಬ. ಹೀಗಾಗಿ ಸಮಾಜದ ಎಲ್ಲ ನೋವು, ನಲಿವುಗಳನ್ನು ಚಿಕ್ಕಂದಿ ನಿಂದಲೇ ಅರಿತಿದ್ದರು. ಮನೆ ಮತ್ತು ಶಾಲೆಯಲ್ಲಿ ಎಲ್ಲರೂ ಪ್ರೀತಿಯಿಂದ ಮಲ್ಲು ಎಂದೇ ಕರೆಯುತ್ತಿದ್ದರು. ಪ್ರಾಥಮಿಕ ಶಿಕ್ಷಣವನ್ನು ಉಕ್ಕಲಿಯ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು.
ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಒಂದು ಹೆಜ್ಜೆ ಮುಂದಿದ್ದರು. ಇವರ ಸ್ಮರಣ ಶಕ್ತಿ ಅಗಾಧವಾಗಿತ್ತು. ಒಮ್ಮೆ ಓದಿದ ಪುಸ್ತಕವನ್ನು ಕಂಠಪಾಠ ಮಾಡಿ ದಂತೆ ಶಿಕ್ಷಕರ ಮುಂದೆ ಇಡಿಯಾಗಿ ಅಭಿವ್ಯಕ್ತಪಡಿಸುವ ಕೌಶಲವನ್ನು ಕರಗತ ಮಾಡಿ ಕೊಂಡಿದ್ದರು. ಉಕ್ಕಲಿಯಲ್ಲಿಯೇ ಬಿ.ಎಲ.ಡಿ.ಇ. ಸಂಸ್ಥೆ ಶಾಲೆ ಪ್ರಾರಂಭವಾಗಿದ್ದರಿಂದ ಪ್ರೌಢ ಶಿಕ್ಷಣ ಮುಗಿಸಿದರು. ಕೃಷಿ ಕೆಲಸಗಳೊಂದಿಗೆ ಮನೆ ಕೆಲಸ ಕಾರ್ಯಗಳನ್ನೂ ಮಾಡುತ್ತಾ 10ನೇ ತರಗತಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದರು.
1972ರಲ್ಲಿ ವಿಜಯಪುರ ಎಸ್.ಬಿ. ಆರ್ಟ್ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯುಸಿ ಪಾಸಾಗಿ ಎಂಬಿಬಿಎಸ್
ಪ್ರವೇಶಕ್ಕೆ ಅಗತ್ಯವಿರುವ ಅಂಕಗಳನ್ನು ಪಡೆದರು. ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ 1979 ರಲ್ಲಿ ಎಂಬಿಬಿಎಸ್ ಪದವಿಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕದೊಂದಿಗೆ ಪೂರೈಸಿದರು. ನಂತರ 1980ರಲ್ಲಿ ಬಳ್ಳಾರಿಯ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಜನರಲ್ ಮೆಡಿಸಿನ್ ವಿಭಾಗಕ್ಕೆ ಪ್ರವೇಶ ಪಡೆದು, ಅಲ್ಲಿಯೂ ಪ್ರಥಮ ರ‍್ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಮುಗಿಸಿದರು.
1983ರಲ್ಲಿ ಬಳ್ಳಾರಿ ಜಿಲ್ಲೆಯ ಶಿಡ್ಲಘಟ್ಟ ಹಳ್ಳಿಯಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಪ್ರಾರಂಭಿಸಿದರು. ಅಲ್ಲಿಯ ಜನರ
ಪ್ರೀತಿ ವಿಶ್ವಾಸಗಳನ್ನು ಗಳಿಸಿ, ಜನಪ್ರಿಯ ವೈದ್ಯರಾದರು. ಅಲ್ಲಿಂದ ವರ್ಗವಾಗಿ ವಿಜಯಪುರದ ಸರಕಾರಿ ಜನರಲ್ ಆಸ್ಪತ್ರೆಗೆ
ಬಂದು ಹಾಜರಾದರು. ಸರಕಾರಿ ಆಸ್ಪತ್ರೆ ಎಂದರೆ ಬಡವರ ಆಸ್ಪತ್ರೆ ಎಂಬ ಭಾವ ಅವರಲ್ಲಿ ಬೇರೂರಿತ್ತು. ಕೆಲವೇ ದಿನಗಳಲ್ಲಿ
ಅಖಂಡ ವಿಜಯಪುರ ಜಿಲ್ಲೆಯ ‘ಬಡವರ ಡಾಕ್ಟರ್’ ಎಂಬ ಹೆಗ್ಗಳಿಕೆಯೊಂದಿಗೆ ಮನೆಮಾತಾಗಿದ್ದರು.
ಬಿಎಲ್‌ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಡಾ. ಎಂ.ಬಿ. ಪಾಟೀಲರು ಡಾ. ಎಂ.ಎಸ್. ಬಿರಾದಾರ ಅವರ ಕಾರ್ಯ ವೈಖರಿ, ದಕ್ಷತೆ ಹಾಗೂ ವೈದ್ಯಕೀಯ ನಿಪುಣತೆಯ ಬಗ್ಗೆ ಕೇಳಿ ತಿಳಿದುಕೊಂಡು, ತಮ್ಮ ವೈದ್ಯಕೀಯ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಆಹ್ವಾನ ನೀಡಿದರು. ಬಿಎಲ್ ಡಿಇ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಎಂ.ಬಿ. ಪಾಟೀಲರ ಮೇಲಿನ ಪ್ರೀತಿ ವಿಶ್ವಾಸಕ್ಕೆ ಬೆಲೆ ನೀಡಿ ಆಹ್ವಾನಕ್ಕೆ ಒಪ್ಪಿದರು.
ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಡೀನ್ ಆಗಿ , ಉಪ ಪ್ರಾಚಾರ್ಯ ರಾಗಿ, ಪ್ರಾಚಾರ್ಯರಾಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದರು. 1991 ರಿಂದ 2021ರವರೆಗೆ ತಮ್ಮ ವೈಯಕ್ತಿಕ ಮತ್ತು ಕುಟುಂಬದ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸಿ ದರು.
ವಿದೇಶದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಿಎಲ್‌ಡಿಇ ಕಾಲೇಜಿನ ಕೀರ್ತಿ ಮತ್ತು ಪ್ರತಿಷ್ಠೆಯನ್ನು ಅಂತಾ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಜಾಗತಿಕ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಕರೋನಾದ ಎರಡನೆಯ ಅಲೆಯ ಬಾಧೆ ಅವರಿಗೂ ತಗುಲಿತು.
ಅದೆಷ್ಟೋ ಜೀವಗಳನ್ನು ಉಳಿಸಿ ರಕ್ಷಿಸಿದ ಅವರಿಗೆ ತಮ್ಮ ಜೀವ ಉಳಿಸಿಕೊಳ್ಳುವ ಅವಕಾಶ ಸಿಗಲಿಲ್ಲ. ಬೆಂಗಳೂರಿನ ಅಪೋಲೊ
ಆಸ್ಪತ್ರೆಯಲ್ಲಿ 2021ರ ಮೇ 12ರಂದು ಕೊನೆಯುಸಿರೆಳೆದರು. ಅವರ ಸವಿನೆನಪಿಗಾಗಿ ಪರಿಶ್ರಮ ಎಂಬ ಶಿರೋನಾಮೆಯ ಸಂಸ್ಕರಣ ಗ್ರಂಥವನ್ನು ಹೊರತರಲಾಗಿದೆ. 12-5-2022ರಂದು ಸ್ವಗ್ರಾಮ ಉಕ್ಕಲಿಯಲ್ಲಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತನ್ನಿಮಿತ್ತ ಈ ಲೇಖನ.