Friday, 13th December 2024

ದೇಗುಲ ಸಿಬ್ಬಂದಿಯ ದುರ್ವರ್ತನೆ

ಪ್ರತಿಸ್ಪಂದನೆ

ಎಂ.ಕೆಂಪಣ್ಣ

ರವಿ ಸಜಂಗದ್ದೆ ಅವರ ‘ಮುಜರಾಯಿ ದೇಗುಲಗಳು ಭಕ್ತಸ್ನೇಹಿ ಆಗುವುದೆಂದು!?’ ಎಂಬ ಲೇಖನವು (ವಿಶ್ವವಾಣಿ ಆ.೧೯) ಬಹುಶಃ ಎಲ್ಲ ಮುಜರಾಯಿ
ದೇಗುಲಗಳ ಸಿಬ್ಬಂದಿಯ ದುರ್ವರ್ತನೆಗಳನ್ನು ಬೆತ್ತಲಾಗಿಸಿದೆ. ಇದರಲ್ಲಿ ಉದಾರಿಸಲಾದ ಮೈಸೂರು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇಗುಲದ ಬದಲು ಬೇರಾವುದೇ ಮುಜರಾಯಿ ದೇಗುಲದ ಹೆಸರನ್ನು ಬಳಸಿದರೂ, ಇಡೀ ಲೇಖನದಲ್ಲಿ ಬರೆದಿರುವ ಎಲ್ಲ ವಿಷಯಗಳೂ ಸರಿಹೊಂದು ತ್ತವೆ.

ಇದಕ್ಕೊಂದು ಉದಾಹರಣೆ, ಬೆಂಗಳೂರಿನ ಬಸವನಗುಡಿಯ ಪ್ರಖ್ಯಾತ ಶ್ರೀ ದೊಡ್ಡ ಗಣಪತಿ ದೇವಸ್ಥಾನ. ಈ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ, ವಿಶೇಷ ದಿನಗಳಂದು ಸಾವಿರಾರು ಜನರು ಬರುತ್ತಾರೆ. ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ಯಂದು ಭಕ್ತರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಸಂಕಷ್ಟ ಚತುರ್ಥಿಯು ಮಂಗಳವಾರ ಬಂದರೆ ಅದನ್ನು ‘ಅಂಗಾರಕ ಸಂಕಷ್ಟ ಚತುರ್ಥಿ’ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ.

ಜೂನ್ ತಿಂಗಳಲ್ಲಿ ಈ ವಿಶೇಷ ಸಂದರ್ಭ ಒದಗಿತ್ತು ಮತ್ತು ಅಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿನೀಡಿ ಪ್ರಾರ್ಥನೆ ಸಲ್ಲಿಸಲು ಕಾತುರರಾಗಿದ್ದರು. ಬೆಳಗ್ಗೆ ೧೧.೪೫ರ ಸಮಯದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಅವರು ಸರದಿಯಲ್ಲಿ ಕಾದು ದೇವಸ್ಥಾನದ ಒಳಗೆ ಬಂದಾಗ, ಅಲ್ಲಿನ ಸಿಬ್ಬಂದಿ ತೀರಾ ಅನಾಗರಿಕ ರೀತಿಯಲ್ಲಿ ವರ್ತಿಸತೊಡಗಿದರು. ಹೆಂಗಸರು-ಮಕ್ಕಳು ಎಂದು ಸಹ ನೋಡದೆ, ಸರಿಯಾಗಿ ದರ್ಶನಕ್ಕೂ ಅವಕಾಶ ನೀಡದೆ ಭಕ್ತರನ್ನು ತಳ್ಳುತ್ತಿದ್ದರು. ಸಿಬ್ಬಂದಿಯೇ ಅಡ್ಡ ನಿಂತಿದ್ದರಿಂದ ದೇವರನ್ನು ಸರಿಯಾಗಿ ದರ್ಶನ ಮಾಡುವುದೂ ಭಕ್ತಗಣಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ಕುರಿತು ಯಾರಾದರೂ ಪ್ರಶ್ನಿಸಿದರೆ ಅತ್ಯಂತ ಒರಟಾಗಿ ಉತ್ತರಿಸಿ ತಳ್ಳುತ್ತಿದ್ದರು. ಮತ್ತೆ ರಾತ್ರಿ ೮ ಗಂಟೆಗೆ ದರ್ಶನಕ್ಕೆ ಬಂದಾಗಲೂ ಇದೇ ದುರ್ವರ್ತನೆಯ ಪುನರಾವರ್ತನೆ ದೇಗುಲ ಸಿಬ್ಬಂದಿಯಿಂದ. ಹಿರಿಯ ನಾಗರಿಕರಿಗೆ ಪ್ರತ್ಯೇಕ ದರ್ಶನಕ್ಕೆ ವ್ಯವಸ್ಥೆ ಮಾಡಬೇಕೆಂಬ ಸರಕಾರಿ ಆದೇಶವಿದ್ದರೂ ಅಲ್ಲಿ ಏನೂ ವ್ಯವಸ್ಥೆ ಮಾಡಿರಲಿಲ್ಲ.

ಗಣೇಶ ಚತುರ್ಥಿ, ಸಂಕ್ರಾಂತಿ, ಯುಗಾದಿ, ದೀಪಾವಳಿ ಹೀಗೆ ಎಲ್ಲ ಹಬ್ಬಗಳ ಸಂದರ್ಭದಲ್ಲೂ ಈ ದೇವಸ್ಥಾನದಲ್ಲಿ ಸಿಬ್ಬಂದಿಯ ಆರ್ಭಟ, ದುರ್ವರ್ತನೆ ಮೇರೆ ಮೀರುತ್ತದೆ. ಇವರಿಗೆ ಭಕ್ತರನ್ನು ನೋಡಿದರೆ ಸಂಕಟ ಎಂದು ಕಾಣುತ್ತದೆ. ಭಕ್ತರೇ ದೇವಸ್ಥಾನದ ಆದಾಯದ ಮೂಲ, ಅಲ್ಲವೇ? ಇನ್ನು, ಇಲ್ಲಿನ ಸೇವಾಕೌಂಟರ್‌ನಲ್ಲಿ ಏನಾದರೂ ವಿಚಾರಿಸಿದರೆ ಅಸಡ್ಡೆಯಿಂದ, ಒರಟಾಗಿ ಉತ್ತರಿಸುತ್ತಾರೆ. ಅಂಗಾರಕ ಸಂಕಷ್ಟ ಚತುರ್ಥಿಯ ವೇಳೆ ಕಾಣಬರುವ ಭಕ್ತರ ದಟ್ಟಣೆಯ ಬಗ್ಗೆ ಈ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಗೆ ಮೊದಲೇ ಪತ್ರ ಬರೆದಿದ್ದರೂ, ಭಕ್ತರನ್ನು ಸರಿಯಾಗಿ ನಿರ್ವಹಿಸಿ ನಿಯಂತ್ರಿಸಲು ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ್ದಾರೆ.

ಸದರಿ ಸಿಬ್ಬಂದಿ ವರ್ಗದವರು ಈ ದೇವಸ್ಥಾನವನ್ನು ತಮ್ಮ ಖಾಸಗಿ ಸ್ವತ್ತು ಎಂದು ಭಾವಿಸಿದ್ದಾರೇನೋ ಎಂಬಂತಿರುತ್ತದೆ ಅವರ ವರ್ತನೆ. ಭಕ್ತರನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ ಈ ಸಿಬ್ಬಂದಿ, ಭಕ್ತರು ಹಬ್ಬ-ಹರಿದಿನಗಳಂದು ದೇವಸ್ಥಾನಕ್ಕೆ ಬಂದು ನೆಮ್ಮದಿಯಾಗಿ ದೇವರನ್ನು ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸುವುದಕ್ಕೂ ಬಿಡುವುದಿಲ್ಲವಲ್ಲಾ, ಇದಕ್ಕೇ ನನ್ನುವುದು? ವಿಶೇಷ ದಿನಗಳಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬುದು ಗೊತ್ತಿದ್ದರೂ, ಅವರನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ ಸಿಬ್ಬಂದಿ ವರ್ಗದವರು ಅಸಹಾಯಕತೆ-ಆಕ್ರೋಶಗಳಿಂದ ಕೂಗಾಡುವುದನ್ನು ನೋಡಿದರೆ
‘ಕೈಲಾಗದವನು ಮೈ ಪರಚಿಕೊಂಡ’ ಎಂಬ ಗಾದೆಮಾತು ನೆನಪಾಗುತ್ತದೆ.

ವಿಶೇಷ  ದಿನಗಳಂದು ಹೆಚ್ಚುವರಿಯಾಗಿ ಹೋಮ್‌ಗಾರ್ಡ್‌ಗಳನ್ನಾಗಲೀ, ಪೊಲೀಸರನ್ನಾಗಲೀ ನೇಮಿಸಿದರೆ ಭಕ್ತರು ನೆಮ್ಮದಿಯಿಂದ ದೇವರ ದರ್ಶನ ಮಾಡಬಹುದಲ್ಲವೇ? ಜನರು ದೇವಸ್ಥಾನಕ್ಕೆ ಬರುವುದೇ ಶಾಂತಿ-ನೆಮ್ಮದಿಯನ್ನು ಅರಸಲು; ಆದರೆ ಅವರು ಇಲ್ಲೂ ಅರಚಾಟ-ಕಿರುಚಾಟ ಕೇಳುವುದು, ಸಿಬ್ಬಂದಿಯ ದರ್ಪ- ದೌರ್ಜನ್ಯಗಳಿಗೆ ಬಲಿಪಶುವಾಗುವುದು ಯಾವ ಕರ್ಮ? ಆದ್ದರಿಂದ ಸಂಬಂಧಪಟ್ಟವರು ಈ ವಿಷಯದಲ್ಲಿ ಸೂಕ್ತ ಮೇಲ್ವಿಚಾರಣೆ ನಡೆಸಬೇಕು, ಸಿಬ್ಬಂದಿಯ ಇಂಥ ದುರ್ವರ್ತನೆ ಮರುಕಳಿಸದಂತೆ ಮುಜರಾಯಿ ಇಲಾಖೆಯು ಮುಂಜಾಗ್ರತೆ ವಹಿಸಬೇಕು.

ಭಕ್ತರೊಂದಿಗೆ ಸಂಯಮ-ಸಭ್ಯತೆಯಿಂದ ವರ್ತಿಸಬೇಕೆಂದು ಅವರಿಗೆ ಆದೇಶ ನೀಡಬೇಕು. ಈ ಸಿಬ್ಬಂದಿ ವರ್ಗದವರು ಕೆಲಸದಲ್ಲಿರುವುದೇ ಭಕ್ತರಿಗಾಗಿ. ಹುಂಡಿಗೆ ಭಕ್ತರು ಹಾಕುವ ಕಾಣಿಕೆ ಮತ್ತು ದೇವಸ್ಥಾನಕ್ಕೆ ಬರುವ ಇತರ ಆದಾಯದಿಂದಲೇ ಅಲ್ಲವೇ ಇವರಿಗೆ ಸಂಬಳ ಸಿಕ್ಕೋದು? ಹೀಗಿರುವಾಗ ಭಕ್ತರ ವಿಷಯದಲ್ಲಿ ಇಂಥ ದುರ್ವರ್ತನೆ, ಉದ್ಧಟತನ ಏಕೆ?

(ಲೇಖಕರು ಹವ್ಯಾಸಿ ಬರಹಗಾರರು)