Thursday, 19th September 2024

ಇದು ಮುಖಸ್ತುತಿಯಲ್ಲ, ಕನ್ನಡದಲ್ಲಿ ಬಾಯಿಯ ಹೊಗಳಿಕೆ

ತಿಳಿರು ತೋರಣ

srivathsajoshi@yahoo.com

ಅ ಮರಕೋಶದಲ್ಲಿ ಹೇಳಿರುವಂತೆ ‘ವಕ್ತ್ರಾಸ್ಯೇ ವದನಂ ತುಂಡಮಾನನಂ ಲಪನಂ ಮುಖಮ್’ – ಇವೆಲ್ಲವೂ ಸಂಸ್ಕೃತ ಭಾಷೆ ಯಲ್ಲಿ ‘ಮುಖ’ಕ್ಕಿರುವ ಪರ್ಯಾಯ ಪದಗಳು. ಬಿಡಿಸಿ ಹೇಳುವುದಾದರೆ- ವಕ್ತ್ರ, ಆಸ್ಯ, ವದನ, ತುಂಡ, ಆನನ, ಲಪನ – ಇವಿಷ್ಟು ಪದಗಳು ಸಂಸ್ಕೃತದಲ್ಲಿ ಮುಖಕ್ಕೆ ಸಮಾನಾರ್ಥಕವಾಗಿ ಬಳಕೆಯಾಗುತ್ತವೆ. ಇವುಗಳಲ್ಲಿ ಒಂದೊಂದರ ಬಳಕೆಗೂ ಅನೇಕ ಉದಾಹರಣೆಗಳನ್ನು ಕೊಡಬಹುದು.

ಮೊದಲಿಗೆ ವಕ್ತ್ರವನ್ನೇ ನೋಡೋಣ. ಯಾರ ವಕ್ತ್ರವನ್ನು? ಆದಿಪೂಜಿತ ಗಣೇಶನ ದ್ವಾದಶ ನಾಮಗಳಲ್ಲಿ ‘ಪ್ರಥಮಂ ವಕ್ರ ತುಂಡಂ ಚ ಏಕದಂತಂ ದ್ವಿತೀಯಕಮ್| ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್…’ ಎಂದು ನಾಲ್ಕನೆಯ ಹೆಸರು ಗಜವಕ್ತ್ರ ಅಂತ ಬರುತ್ತದೆ. ಆನೆ ಮೊಗದವನು ಎಂಬ ಅರ್ಥ. ಭಗವದ್ಗೀತೆಯ ಹನ್ನೊಂದನೆಯ ಅಧ್ಯಾಯದಲ್ಲಿ ‘ರೂಪಂ ಮಹತ್ತೇ ಬಹುವಕ್ತ್ರನೇತ್ರಂ| ಮಹಾ ಬಾಹೋ ಬಹುಬಾಹೂರುಪಾದಮ್…’ ಎಂದು ಭಗವಂತನ ವಿಶ್ವರೂಪದ ವರ್ಣನೆ ಯಿದೆ. ಆ ಅಧ್ಯಾಯದ ಒಟ್ಟು ೫೫ ಶ್ಲೋಕಗಳ ಪೈಕಿ ಏಳು ಬೇರೆ ಬೇರೆ ಶ್ಲೋಕಗಳಲ್ಲಿ ‘ವಕ್ತ್ರ’ ಬರುತ್ತದೆಂದು ಇದೀಗ ನಾನೊಮ್ಮೆ ಲೆಕ್ಕ ಮಾಡಿ ನೋಡಿದ್ದೇನೆ.

ಡಿವಿಜಿಯವರ ಕಗ್ಗದಲ್ಲೂ ವಕ್ತ್ರದಿಂದ ಆರಂಭವಾಗುವ ಒಂದು ಮುಕ್ತಕ ಇದೆ: ವಕ್ತ್ರವುಂಟೆಲ್ಲರಿಗೆ ವರ್ಚಸೋರೊರ್ವರಿಗೆ| ಕತ್ತಿ ಪಣ್ಯದೊಳುಂಟು  ಶಕ್ತಿ ಸಹಜದಲಿ| ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು| ಹಸ್ತವದು ದೈವಕೆಲೊ ಮಂಕುತಿಮ್ಮ|| ಅಂದರೆ ಎಲ್ಲರಿಗೂ ಮುಖವಿದೆ, ಆದರೆ ಲಕ್ಷಣ ಅಥವಾ ವರ್ಚಸ್ಸು ಕೇವಲ ಕೆಲವರಿಗೆ ಇದೆ. ಹಾಗೆಯೇ ಕತ್ತಿಯನ್ನು ಹಣ ಕೊಟ್ಟು ಕೊಳ್ಳಬಹುದು.

ಆದರೆ ಅದನ್ನು ಎತ್ತಿ ಹೋರಾಡುವ ಶಕ್ತಿ ಸಹಜವಾಗಿ ವ್ಯಕ್ತಿಯಲ್ಲಿರಬೇಕು. ಅಂತಹ ವ್ಯಕ್ತಿಗಳ ಸಹಜ ಶಕ್ತಿಯ ಪ್ರಭಾವವೇ ಜಗತ್ತಿನ ಚರಿತ್ರೆಗೆ ಕಾರಕವಾಗಿರುತ್ತದೆ. ಈ ಜಗತ್ತನ್ನು ರೂಪಿಸುವಲ್ಲಿ ತಿದ್ದುವಲ್ಲಿ ಮತ್ತು ನಡೆಸಿಕೊಂಡು ಹೋಗುವಲ್ಲಿ ಆ ದೈವವು ಮನುಷ್ಯನ ಪ್ರಭಾವೀ ಶಕ್ತಿಯನ್ನು ತನ್ನ ಕರಣದಂತೆ ಉಪಯೋಗಿಸುತ್ತದೆ.

ಆಸ್ಯ ಎಂಬುದು ಸಿಂಹವನ್ನು ‘ಪಂಚಾಸ್ಯ’ ಎಂದು ಕರೆಯುವುದರಲ್ಲಿ ಬರುತ್ತದೆ. ಇಲ್ಲಿ ಪಂಚ ಅಂದರೆ ಐದು ಎಂಬ ಅರ್ಥವಲ್ಲ. ಪಂಚ ಪದಕ್ಕೆ ಅಗಲವಾದ, ವಿಶಾಲವಾದ ಎಂಬ ಅರ್ಥವೂ ಇದೆ. ಸಿಂಹಕ್ಕೆ ಆ ಗಾತ್ರದ ಬೇರೆ ಪ್ರಾಣಿಗಳಿಗಿಂತ ವಿಶಾಲವಾದ ಮುಖ ಇರುವುದರಿಂದ ಪಂಚಾಸ್ಯ ಎಂದು ಕರೆಯುತ್ತಾರೆ. ನಮಗೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾರತಿ ಪಠ್ಯಪುಸ್ತಕದಲ್ಲಿ ಸಿಂಹದ ಬಗೆಗೊಂದು ಪಾಠ ಇತ್ತು, ಅದರಲ್ಲಿ ಪಂಚಾಸ್ಯದ ಉಲ್ಲೇಖವಿತ್ತು ಮತ್ತು ಪರೀಕ್ಷೆಯಲ್ಲಿ ಅದು ಒಂದು ಅಂಕದ ಪ್ರಶ್ನೆಗೆ ಉತ್ತರವಾಗಿ ಇರುತ್ತಿತ್ತು.

ಕುಮಾರವ್ಯಾಸನು ದೂತರ ಬಾಯಿಯಿಂದ ಉತ್ತರ ಕುಮಾರನ ಪೌರುಷದ ಬಣ್ಣನೆ ಮಾಡಿಸಿರುವುದರಲ್ಲೂ ಪಂಚಾಸ್ಯ ಬರುತ್ತದೆ. ‘ರಾಯಕುವರ ಪಿತಾಮಹನು ರಿಪು| ರಾಯಕುವರ ಕುಠಾರ ಕೌರವ| ರಾಯಥಟ್ಟುವಿಭಾಡ ಕುರುಕುಲ ಗಜಕೆ ಪಂಚಾಸ್ಯ…’ ಎಂದು. ಉತ್ತರನು ರಾಜಕುಮಾರರೆಲ್ಲರಿಗೆ ಹಿರಿಯವನು; ಶತ್ರು ರಾಜಕುಮಾರರ ಪಾಲಿಗೆ ಆತ ಕೊಡಲಿ ಇದ್ದಂತೆ; ಕೌರವ ಸೈನ್ಯವನ್ನೆಲ್ಲ ನಾಶಗೊಳಿಸಬಲ್ಲವನು; ಕೌರವರೆಂಬ ಆನೆಗಳಿಗೆ ಸಿಂಹದಂತಿರುವವನು… ಎಂಬ ಬಣ್ಣನೆ ಅದು.

ಮತ್ತೆ ಡಿವಿಜಿಯವರನ್ನು ನೆನಪಿಸಿಕೊಳ್ಳುವುದಾದರೆ- ‘ಹಾಸ್ಯಗಾರನೊ ಬೊಮ್ಮ; ವಿಕಟ ಪರಿಹಾಸವದು| ಆಸ್ಯ ಗಂಭೀರ; ಬೆರಲಿಂದ ಚಕಳಗುಳಿ| ವಿಶ್ವಾಸದುಪಚಾರ ಹುಣಿಸೆಮೆಣಸಾಹಾರ| ವಿಶ್ವಪಾಲನೆಯಿಂತು ಮಂಕುತಿಮ್ಮ||’ ಅಂದರೆ ನಮ್ಮನ್ನು ಸೃಷ್ಟಿಸಿದ ಆ ಬ್ರಹ್ಮ ವಿಕಟತೆಯಿಂದ ಕೂಡಿದ ಹಾಸ್ಯಗಾರನೋ? ಅವನ ಮುಖ ಮಾತ್ರ ಗಂಭೀರವಾಗಿದ್ದರೂ, ಬೆರಳಿಂದ ಕಚಗುಳಿ ಇಡುತ್ತಾ ನಮ್ಮನ್ನು ನಗಿಸಲು ಪ್ರಯತ್ನಿಸುವ ಅಥವಾ ಬಹಳ ವಿಶ್ವಾಸದಿಂದ ನಮಗೆ ಉಪಚಾರ ಮಾಡುತ್ತಾ ಭೋಜನವ ಬಡಿಸಿ ಊಟದಲ್ಲಿ ಹುಣಸೆಯ ಹುಳಿಯನ್ನೂ, ಮೆಣಸಿನ ಖಾರವನ್ನೂ ಇಟ್ಟಂತೆ, ನಮಗೆ ಜೀವನದಲ್ಲಿ ಗುಣ-ಅವಗುಣ, ಸಂತೋಷ-ದುಃಖ, ಹೀಗೆ ಒಂದಕ್ಕೊಂದು ವಿರೋಧವಾದದ್ದನ್ನು ಇಟ್ಟು ನಮ್ಮ ಪರಿಸ್ಥಿತಿ ನೋಡಿ ತಾನು ಆನಂದ ವನ್ನು ಅನುಭವಿಸುತ್ತಿದ್ದಾನೋ ಆ ಬ್ರಹ್ಮ? ವದನ ಪದ ಸಹ ನಮಗೆ ಹೆಚ್ಚು ಪರಿಚಿತವೇ ಇದೆ.

ಹಯವದನ, ಗಜವದನ, ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ… ಇತ್ಯಾದಿ. ಮತ್ತೊಮ್ಮೆ ಕುಮಾರವ್ಯಾಸ ನನ್ನು ನೆನಪಿಸಿಕೊಳ್ಳುವುದಾದರೆ ‘ಬವರವಾದರೆ ಹರನ ವದನಕೆ| ಬೆವರ ತಹೆನವಗಡಿಸಿದರೆ ವಾ| ಸವನ ಸದೆವೆನು
ಹೊಕ್ಕಡಹುದೆನಿಸುವೆನು ಭಾರ್ಗವನ…’(ನನ್ನೊಡನೆ ಯುದ್ಧಕ್ಕೆ ಬಂದರೆ ಶಿವನ ಮುಖದಲ್ಲಿ ಬೆವರಿಳಿಸುತ್ತೇನೆ. ನನ್ನನ್ನು ತಡೆದರೆ ಇಂದ್ರನನ್ನು ಗೆಲ್ಲುತ್ತೇನೆ, ನನ್ನ ಜೊತೆಗೆ ಕದನಕ್ಕೆ ಬಂದರೆ ಪರಶುರಾಮನು ಮೆಚ್ಚಿ, ಹೌದು ಹೌದು ಎನ್ನುವಂತೆ
ಮಾಡುತ್ತೇನೆ…) ಎಂದು ಅಭಿಮನ್ಯುವಿನ ಅತಿಪ್ರಖ್ಯಾತ ವೀರೋಕ್ತಿಯೇ ಇದೆಯಲ್ಲ! ಅಂತೆಯೇ, ಡಿವಿಜಿಯವರ ಕಗ್ಗದಲ್ಲೊಂದು ಪದ್ಯ: ‘ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ| ಹಿತವಿರಲಿ ವಚನದಲಿ, ಋತವ ಬಿಡದಿರಲಿ| ಮಿತವಿರಲಿ ಮನಸಿನು ದ್ವೇಗದಲಿ, ಭೋಗದಲಿ| ಅತಿ ಬೇಡವೆಲ್ಲಿಯುಂ ಮಂಕುತಿಮ್ಮ|| ಅರ್ಥಾತ್ ನಿನ್ನ ಮೊಗದಲ್ಲಿ ನಗೆಯಿರಲಿ, ಆದರೆ ಅದು ಅನ್ಯರಿಗೆ ಕೇಳಿಸದಿರಲಿ. ನಿನ್ನ ಮಾತಿನಲ್ಲಿ ಹಿತವಿರಲಿ, ಆದರೆ ಅದು ಸತ್ಯವಾಗಿರಲಿ.

ಸುಖದುಃಖಗಳ ಅನುಭವದಲ್ಲಿ ಒಂದು ಮಿತಿಯಿರಲಿ, ಯಾವುದರಲ್ಲಿಯೂ ಅತಿಯಾಗದಿರಲಿ – ನಮ್ಮ ಬದುಕಿನಲ್ಲಿ ನಾವು ನಮ್ಮ ಹಿತಕ್ಕಾಗಿಯೇ ಪಾಲಿಸಬೇಕಾದ ಕೆಲ ಮೂಲಭೂತ ವಿಚಾರಗಳು ಇವು. ಇದೇ ರೀತಿ ತುಂಡ ಮತ್ತು ಆನನ ಪದಗಳ ರೆಫರೆನ್ಸೂ ಕಷ್ಟವೇನಲ್ಲ. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ… ಎಂದು ಗಣೇಶನನ್ನು ಕರೆಯುವುದು ಆತನ
ತುಂಡ(ಮುಖ) ವಕ್ರವಾಗಿದೆ ಎಂಬ ಕಾರಣಕ್ಕೇ. ಮತ್ತೆ ಗಜಾನನನಲ್ಲೇ ನಮಗೆ ಆನನವೂ ಸಿಗುತ್ತದೆ.

ನಾಲ್ಕು ಮುಖಗಳುಳ್ಳ ಬ್ರಹ್ಮ ಚತುರಾನನ. ಹಾಗೆ ನೋಡಿದರೆ ಲಪನ ಪದವೇ ಅಷ್ಟೇನೂ ವ್ಯಾಪಕವಾಗಿ ಬಳಕೆಯಾಗಿರು ವಂತೆ ತೋರುವುದಿಲ್ಲ. ‘ನಗರಲಲನೆಯ ಲಪನಕ್ಕೆ ಕೇಳೀ ಲೀಲಾಲಲಾಮಲಕ್ಷ್ಮಿಯಂ ತಾಳ್ದಿ…’ ಎಂದು ಆದಿಪುರಾಣದಲ್ಲಿ
ಪಂಪ ಬರೆದಿದ್ದಾನಂತೆ. ಹಳಗನ್ನಡದಲ್ಲಿ ಷಣ್ಮುಖನನ್ನು ಷಡುಲಪನ ಎನ್ನುವುದಂತೆ- ಎಂದು ಗೂಗಲ್‌ನಲ್ಲಿ ಹುಡುಕಿದಾಗ
ಸಿಕ್ಕಿದ್ದೇ ವಿನಾ ನನಗೆ ಇದೆಲ್ಲ ಗೊತ್ತು ಎಂದು ದಯವಿಟ್ಟು ತಿಳಿದುಕೊಳ್ಳಬೇಡಿ.

ಕೊನೆಯದಾಗಿ, ‘ಮುಖ’ ಪದವಂತೂ ಸಂಸ್ಕೃತದಲ್ಲೂ ಕನ್ನಡದಲ್ಲೂ ಸರ್ವವ್ಯಾಪಿಯಾಗಿ ಬಳಕೆಯಾಗುತ್ತದೆ. ಅದಕ್ಕೆ ಉದಾ ಹರಣೆಗಳನ್ನು ಪಟ್ಟಿ ಮಾಡುವ ಆವಶ್ಯಕತೆಯಿಲ್ಲ, ಪಟ್ಟಿ ಮಾಡಿದರೆ ಮುಗಿಯುವಂಥದ್ದೂ ಅಲ್ಲ. ಇರಲಿ, ನಾನಿಲ್ಲಿ ಹೇಳ ಹೊರಟಿರುವುದು ಮುಖದ ಪರ್ಯಾಯ ಪದಗಳ ಬಗ್ಗೆ ಅಲ್ಲ. ಬದಲಿಗೆ, ಮುಖ ಪದಕ್ಕೆ ಸಂಬಂಧಿಸಿದಂತೆಯೇ ಸಂಸ್ಕೃತ ಭಾಷೆಯದ್ದೊಂದು ಲಿಮಿಟೇಷನ್, ಮತ್ತು ನಮ್ಮ ಕನ್ನಡ ಭಾಷೆಯದೊಂದು ಹೆಗ್ಗಳಿಕೆಯ ವಿಚಾರ.

ಅದೇನೆಂದರೆ, ಕನ್ನಡದಲ್ಲಾದರೆ ಮುಖ ಮತ್ತು ಬಾಯಿ – ಇವುಗಳಿಗೆ ಸ್ಪಷ್ಟ ವ್ಯತ್ಯಾಸ ಇದೆಯಷ್ಟೇ? ಸಂಸ್ಕೃತದಲ್ಲಿ ‘ಬಾಯಿ’ಗೆ ಪ್ರತ್ಯೇಕ ಪದವೇ ಇಲ್ಲ! ಮುಖ ಅಥವಾ ಮೇಲೆ ಪಟ್ಟಿ ಮಾಡಿರುವವುಗಳ ಪೈಕಿ ಯಾವುದಾದರೂ ಒಂದನ್ನೇ ಬಾಯಿ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ. ಈ ವಿಚಾರದಲ್ಲಿ ನಮ್ಮ ಸಿರಿಗನ್ನಡವೇ ಹೆಚ್ಚು ವ್ಯವಸ್ಥಿತವಾದದ್ದು. ನಾವು ಬಾಯಿ ಎನ್ನಬೇಕಾ ದಲ್ಲಿ ಬಾಯಿ ಎಂದೇ ಬಳಸುತ್ತೇವೆ.

ಮುಖ ಎನ್ನಬೇಕಾದಲ್ಲಿ ಮುಖ (ಅಥವಾ ತದ್ಭವ ಮೊಗ) ಎಂದೇ ಬಳಸುತ್ತೇವೆ. ಇಂಗ್ಲಿಷ್‌ನಲ್ಲಿ ಕೂಡ ಹಾಗೆಯೇ ತಾನೆ? ಬಾಯಿ ಅಂದರೆ Iಟ್ಠಠಿe, ಮುಖ ಅಂದರೆ ಊZಛಿ. ಆದರೆ ಸಂಸ್ಕೃತದಲ್ಲಿ ಮುಖ ಅಂದರೆ ಬಾಯಿಯೂ ಆಗಬಹುದು, ಮುಖವೂ ಆಗಬಹುದು! ಇದನ್ನೀಗ ಸೋದಾಹರಣವಾಗಿ ವಿವರಿಸುತ್ತೇನೆ. ಈ ವಿಷಯ ಇಂಟೆರೆಸ್ಟಿಂಗ್ ಆಗಿದೆ ಎಂದು ನಿಮಗೂ ಅನಿಸುತ್ತದೆ. ಮುಖಸ್ತುತಿಯಿಂದಲೇ ಆರಂಭಿಸೋಣ. ಮುಖಸ್ತುತಿ ಇದು ಪೂರ್ಣವಾಗಿ ಸಂಸ್ಕೃತದ ಶಬ್ದ. ಮೊದಲನೆ ಯದಾಗಿ ಮುಖಸ್ತುತಿ ಅಂದರೆ ಮುಖವನ್ನು ಹೊಗಳುವುದು ಅಲ್ಲ.

ಮುಖದಿಂದ ಹೊಗಳುವುದು, ಅರ್ಥಾತ್ ಬಾಯಿಯಿಂದ ಹೊಗಳುವುದು. ಅಂದರೆ ಸಕ್ಕರೆಯಂಥ ಸಿಹಿಸಿಹಿ ಮಾತುಗಳಿಂದ
ಹೊಗಳುವುದು, ಬರೀ ಚಂದದ ಮಾತುಗಳಿಂದಲೇ ಎದುರಿಗಿನ ವ್ಯಕ್ತಿ ಉಬ್ಬಿಹೋಗುವಂತೆ ಮಾಡುವುದು. ಅದು ಹೃದಯ ದಾಳದಿಂದ ಬರುವ ಪ್ರಶಂಸೆ ಅಲ್ಲ. ಮಾತೇ ಬಂಡವಾಳ. ಮಾತು ಬರುವುದು ಬಾಯಿಯಿಂದ ತಾನೆ? ಆದರೆ ಬಾಯಿ ಎನ್ನುವು ದಕ್ಕೆ ಸಂಸ್ಕೃತದಲ್ಲಿ ಪದ ಇಲ್ಲ. ಮುಖವನ್ನೇ ಬಳಸಿ ಮುಖಸ್ತುತಿ ಎನ್ನಲಾಗಿದೆ.

ಮುಖಶುದ್ಧಿ ಅಂತ ಇನ್ನೊಂದು ಪದ ಇದೆ, ಊಟವಾದ ಮೇಲೆ ಬಾಯಿಗೆ ಪರಿಮಳ ಬರುವಂತೆ ಬಡೇಸೋಪನ್ನೋ, ಕರ್ಪೂರ ಬೆರೆಸಿದ ಅಡಕೆಪುಡಿಯನ್ನೋ ಬಾಯಿಯಲ್ಲಿ ಹಾಕಿಕೊಳ್ಳುವುದು. ಬಾಯಿಯಿಂದ ದುರ್ವಾಸನೆ ಬರಬಹುದಾದ್ದನ್ನು ಕಡಿಮೆ ಗೊಳಿಸಿ ಬಾಯಿಯನ್ನು ಶುದ್ಧಗೊಳಿಸುವುದು. ಇಲ್ಲೂ ಅಷ್ಟೇ, ಬಡೇಸೋಪು ಜಗಿಯುತ್ತ ಶುದ್ಧಗೊಳಿಸುತ್ತಿರುವುದು ಬಾಯಿ ಯನ್ನಷ್ಟೇ ಹೊರತು ಹಣೆ-ಕಣ್ಣು- ಗಲ್ಲ-ಮೂಗು-ಗದ್ದ ಇವೆಲ್ಲ ಸೇರಿ ಆದ ಮುಖವನ್ನು ಬಡೇಸೋಪಿಂದ ತೊಳೆಯುವುದಲ್ಲ.

‘ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಮ್| ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ
ಮುಕುಂದಂ ಮನಸಾ ಸ್ಮರಾಮಿ…’ ಎಂಬ ಶ್ಲೋಕ, ಆಲದೆಲೆಯ ಮೇಲೆ ಅಂಗಾತ ಮಲಗಿ ಕೈಗಳಿಂದ ಬಲಗಾಲನ್ನೆತ್ತಿ ಅದರ
ಹೆಬ್ಬೆರಳನ್ನು ಬಾಯಿಯಲ್ಲಿಟ್ಟು ಚೀಪುತ್ತಿರುವ ಬಾಲಕೃಷ್ಣನನ್ನು ಸ್ತುತಿಸುವುದು, ನಿಮಗೆ ಗೊತ್ತಿರಬಹುದು. ಇದರಲ್ಲಿ ಮುಖಾರ ವಿಂದ ಅಂದರೆ ಬಾಲಕೃಷ್ಣನ ಮುಖ ಅಲ್ಲ ಬಾಯಿ! ಆತ ಬಲಗಾಲಿನ ಹೆಬ್ಬೆರಳನ್ನು ಬಾಯಿಯಲ್ಲಿ ತಾನೆ ಇಟ್ಟುಕೊಂಡಿದ್ದು? ಆದರೆ ಬಾಯಿ ಎನ್ನುವುದಕ್ಕೆ ಸಂಸ್ಕೃತದಲ್ಲಿ ಪದ ಇಲ್ಲವಾದ್ದರಿಂದ ಮುಖ ಬಳಕೆಯಾಗಿದೆ. ‘ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ| ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃ ಸೃತಾ’ ಎಂಬ ಇನ್ನೊಂದು ಶ್ಲೋಕ ಗೀತಾ ಮಾಹಾತ್ಮ್ಯದಲ್ಲಿ ಬರುತ್ತದೆ.

ಗೀತೆಯು ಸಾಕ್ಷಾತ್ ಪದ್ಮನಾಭನ (ಶ್ರೀಕೃಷ್ಣನ) ಬಾಯಿಯಿಂದಲೇ ಹೊರಟಿರುವುದು ಎನ್ನುವುದಕ್ಕೆ ಪದ್ಮನಾಭಸ್ಯ ಮುಖ ಪದ್ಮಾದ್ವಿನಿಃಸೃತಾ ಎನ್ನಲಾಗಿದೆ. ಬಾಯಿ ಎಂಬ ಅರ್ಥದಲ್ಲಿ ಮುಖವನ್ನು ಬಳಸಲಾಗಿದೆ. ‘ಭಾರತಾಮೃತಸರ್ವಸ್ವಂ ವಿಷ್ಣೋರ್ವಕ್ತ್ರಾದ್ವಿನಿಃಸೃತಂ| ಗೀತಾ ಗಂಗೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ’ ಶ್ಲೋಕದಲ್ಲೂ ಹಾಗೆಯೇ.

ವಿಷ್ಣೋರ್ವಕ್ತ್ರಾದ್ವಿನಿಃಸೃತಂ ಅಂದರೆ ವಿಷ್ಣುವಿನ (ಶ್ರೀಕೃಷ್ಣನ) ಬಾಯಿಯಿಂದ ಜಾರಿರುವುದು ಎಂದರ್ಥ. ಬಾಯಿ ಎಂಬ ಅರ್ಥದಲ್ಲಿ ವಕ್ತ್ರ ಪದವನ್ನು ಬಳಸಲಾಗಿದೆ. ಭಗವದ್ಗೀತೆಯ ಹನ್ನೊಂದನೆಯ ಅಧ್ಯಾಯದಲ್ಲಿ ‘ವಕ್ತ್ರ’ ಪದ ಏಳು ಶ್ಲೋಕಗಳಲ್ಲಿದೆ ಎಂದಿದ್ದೆನಷ್ಟೇ? ನಾಲ್ಕರಲ್ಲಿ ಅದು ಬಾಯಿ ಎಂಬ ಅರ್ಥದಲ್ಲೇ ಬಳಕೆಯಾಗಿರುವುದು. ಮೂರರಲ್ಲಿ ಮಾತ್ರ ಮುಖ ಎಂದು ಅರ್ಥೈಸಬಹುದು. ರಾಮರಕ್ಷಾ ಸ್ತೋತ್ರದಲ್ಲಿ ಬರುವ ‘ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯಃ ಶ್ರುತೀ| ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ’ ಕಥೆಯೂ ಅದೇ. ತಲೆಯನ್ನು, ಹಣೆಯನ್ನು, ಕಣ್ಣುಗಳನ್ನು, ಕಿವಿಗಳನ್ನು, ಮೂಗನ್ನು, ನಾಲಿಗೆಯನ್ನು ಹೀಗೆ ಶರೀರದ ಒಂದೊಂದು ಅಂಗವನ್ನು ಒಂದೊಂದು ವಿಶೇಷಣದ ರಾಮನು ರಕ್ಷಿಸಲಿ ಎಂದು ಪ್ರಾರ್ಥಿಸು ವಾಗ ಸೌಮಿತ್ರಿವತ್ಸಲನಿಗೆ ನಿಗದಿ ಯಾದದ್ದು ಇಡೀ ಮುಖ ಅಲ್ಲ, ಬಾಯಿ ಮಾತ್ರ!

ಹಾಗಂತ, ಪುರುಷಸೂಕ್ತದಲ್ಲಿ ಬರುವ ‘ಮುಖಂ ಕಿಮಸ್ಯ ಕೌ ಬಾಹೂ| ಕಾವೂರೂ ಪಾದಾವುಚ್ಯೇತೇ| ಬ್ರಾಹ್ಮಣೋಧಿಸ್ಯ ಮುಖಮಾಸೀತ್| ಬಾಹೂ ರಾಜನ್ಯಃ ಕೃತಃ…’ ಇಲ್ಲಿ ಮುಖ ಅಂದರೆ ಮುಖವೇ. ಬಾಯಿ ಅಲ್ಲ! ಸ್ವಾರಸ್ಯವೆಂದರೆ, ಸಂಸ್ಕೃತದ ಈ ಲಿಮಿಟೇಷನ್ನು ಮರಾಠಿಯಲ್ಲೂ, ನಾವು ಮಾತನಾಡುವ ಚಿತ್ಪಾವನಿ ಭಾಷೆಯಲ್ಲೂ ಹಾಗೆಯೇ ಇದೆ. ಮರಾಠಿಯಲ್ಲಿ ತೋಂಡ
ಅಂದರೆ ಮುಖ ಎಂಬ ಅರ್ಥವೂ ಆಗುತ್ತದೆ, ಬಾಯಿ ಎಂಬ ಅರ್ಥವೂ ಆಗುತ್ತದೆ. ಪೌಡರ್ ಅಥವಾ ಮತ್ತಿತರ ಮೇಕಪ್
ಮೆತ್ತಿಕೊಳ್ಳುವುದೂ ‘ತೋಂಡ’ಕ್ಕೇ, ಊಟ ಮಾಡುವಾಗ ಅನ್ನದ ತುತ್ತು ಸೇರುವುದೂ ‘ತೋಂಡ’ಕ್ಕೇ.

ಸಂದರ್ಭಾನುಸಾರ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಅಲ್ಲದೇ ತೋಂಡ ಎಂಬ ಪದ ಬಂದಿರುವುದು ಸಂಸ್ಕೃತದ ‘ತುಂಡ’ ದಿಂದಲೇ ಅಂತೆ. ಮೌಖಿಕ ಪರೀಕ್ಷೆಗೆ ಕನ್ನಡದಲ್ಲಾದರೆ ಬಾಯ್ದೆರೆ ಪರೀಕ್ಷೆ ಎನ್ನುತ್ತೇವೆ, ಮರಾಠಿಯಲ್ಲಿ ‘ತೋಂಡೀ’ ಎನ್ನಲಾಗುತ್ತದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮರಾಠಿ ಪ್ರಭಾವವಿರುವಲ್ಲಿ ತೋಂಡೀ ಬಳಕೆ ಇದೆಯೆಂದು ಸ್ನೇಹಿತರು ಹೇಳುವುದನ್ನು ಕೇಳಿದ್ದೇನೆ. ಸಮರ್ಥ ರಾಮದಾಸರು ಬರೆದಿದ್ದೆನ್ನಲಾದ, ಭೋಜನದ ವೇಳೆ ಹೇಳುವ ಈ ಮರಾಠಿ ಶ್ಲೋಕ/ಚೂರ್ಣಿಕೆ ಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಅದು ಇರುವುದು ಹೀಗೆ: ‘ವದನೀ ಕವಳ ಘೇತಾ ನಾಮ ಘ್ಯಾ ಶ್ರೀ ಹರೀಚೇ| ಸಹಜ ಹವನ ಹೋತೇ ನಾಮ ಘೇತಾ ಫುಕಾಚೇ| ಜೀವನ ಕರೀ ಜೀವಿತ್ವಾ ಅನ್ನ ಹೇ ಪೂರ್ಣಬ್ರಹ್ಮ| ಉದರಭರಣ ನೋಹೇ ಜಾಣಿಜೇ ಯಜ್ಞಕರ್ಮ||’ ಅಂದರೆ ಬಾಯಿಯಲ್ಲಿ ಅನ್ನದ ತುತ್ತಿಡುವಾಗ ಶ್ರೀಹರಿಯ ನಾಮಸ್ಮರಣೆ ಮಾಡು. ಬರೀ ನಾಮಸ್ಮರಣೆಯಿಂದಲೇ ಯಜ್ಞ ಮಾಡಿದಷ್ಟು ಪುಣ್ಯ ಬರುತ್ತದೆ. ಶರೀರದ ಪೋಷಣೆಗಾಗಿ ಸೇವಿಸುವ ಈ ಅನ್ನವು ಸಾಕ್ಷಾತ್ ಪರಬ್ರಹ್ಮವೇ ಆಗಿದೆ.

ಊಟವನ್ನು ಬರೀ ಹೊಟ್ಟೆ ತುಂಬುವ ಪ್ರಕ್ರಿಯೆ ಅಂತ ತಿಳ್ಕೋಬೇಡ, ಇದೊಂದು ಯಜ್ಞಕರ್ಮ ಇದ್ದಂತೆ ಎಂದು ತಿಳಿ. ಇಲ್ಲಿ ಆಸಕ್ತಿಕರ ಪದ ‘ವದನೀ’ ಅಂದರೆ ಬಾಯಿಯಲ್ಲಿ ಎಂದರ್ಥ. ಸಂಸ್ಕೃತದ ವದನದಿಂದ ಬಂದದ್ದು. ಮುಖ ಎಂಬ ಅರ್ಥಕ್ಕೂ ಉಪಯೋಗವಾಗುವ ಪದ. ಬಾಯಿ ಎಂಬ ಅರ್ಥ ಕೊಡುವ ಪ್ರತ್ಯೇಕ ಪದ ಇಲ್ಲವಾದ್ದರಿಂದ ಬಳಕೆಯಾಗಿದೆ ಅಷ್ಟೇ. ಆ ಮಟ್ಟಿಗೆ ಹಿಂದೀ ಭಾಷೆಯಲ್ಲಿ ‘ಮುಹ್’ ಎಂಬ ಪದ ಬಾಯಿ ಎಂಬ ಅರ್ಥದಲ್ಲೂ, ‘ಚೆಹರಾ’ ಎಂಬ ಪದ ಮುಖ ಎಂಬ ಅರ್ಥದಲ್ಲೂ ಬಳಕೆಯಾಗುವುದನ್ನು, ಆ ಮೂಲಕ ಸ್ಪಷ್ಟ ವ್ಯತ್ಯಾಸವಿರುವುದನ್ನು ಗಮನಿಸಬಹುದು.

ಅಷ್ಟಾಗಿ, ಹಿಂದೀ ಭಾಷೆಯ ‘ಮುಹ್’ ಎನ್ನುವುದು ಸಂಸ್ಕೃತದ ‘ಮುಖ’ದಿಂದಲೇ ಬಂದದ್ದಾದರೆ ಅಷ್ಟರ ಮಟ್ಟಿಗಿನ ಗೊಂದಲ ಅಲ್ಲೂ ಇದೆಯಂತಾಯ್ತು. ಕನ್ನಡದಲ್ಲಾದರೆ ಗೊಂದಲಕ್ಕೆ ಚಾನ್ಸೇ ಇಲ್ಲ. ಬಾಯಿ ಅಂದರೆ ಬಾಯಿಯೇ. ಮುಖ ಅಂದರೆ ಮುಖವೇ. ಬಾಯಿಪಾಠ ಹೇಳುವುದು ಅಂದರೆ ಬಾಯಿಯಿಂದಲೇ ಹೊರತು ಮುಖದಿಂದಲ್ಲ. ಬಾಯಿಲೆಕ್ಕ ಅಂದರೆ ಮನಸ್ಸಿನಲ್ಲಿ ಲೆಕ್ಕ ಮಾಡಿ ಬಾಯಿಯಿಂದ ಉತ್ತರ ಹೇಳುವುದೇ ವಿನಾ ಮುಖದಿಂದ ಅಲ್ಲ.

ಮಣ್ಣು ತಿಂದ ಬಾಲಕೃಷ್ಣನು ಆಮೇಲೆ ಯಶೋದೆಗೆ ಈರೇಳು ಲೋಕಗಳನ್ನು ತೋರಿಸಿದ್ದು ತನ್ನ ಬಾಯಿಯಲ್ಲೇ ಹೊರತು
ಮುಖದಲ್ಲಿ ಅಲ್ಲ. ಇಲ್ಲಿ ನನ್ನದೊಂದು ಪದವಿನೋದವನ್ನೂ ಸಂದರ್ಭೋಚಿತವಾಗಿ ನೆನಪಿಸಿಕೊಳ್ಳುತ್ತೇನೆ. ಹತ್ತು ವರ್ಷಗಳ
ಹಿಂದೆ ನನ್ನ ಅಂಕಣಬರಹಗಳ ಎರಡು ಪುಸ್ತಕಗಳು- ‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’- ಬೆಂಗಳೂರಿನಲ್ಲಿ ಲೋಕಾ
ರ್ಪಣೆಗೊಂಡಾಗ ಆ ಸಮಾರಂಭದ ಆಹ್ವಾನಪತ್ರಿಕೆಯಲ್ಲಿ ಮಾಡಿದ್ದ ಚಿಕ್ಕದೊಂದು ಚೋದ್ಯವಿದು. ಸಮಾರಂಭದಲ್ಲಿ
ಬೆಳಗಿನ ಉಪಾಹಾರ ಸಹ ಇದೆ ಎಂದು ತಿಳಿಸುವುದಕ್ಕೆ ಆಹ್ವಾನಪತ್ರಿಕೆಯಲ್ಲಿ ‘ಅಂದು ನಿಮ್ಮ ಬೆಳಗಿನ ಉಪಾಹಾರ ನಮ್ಮೊಡನೆ’ ಎಂದು ಬರೆಯುವುದು ಮಾಮೂಲಿಯಾಗಿದೆ.

ನಾನು ಹಾಗೆ ಬರೆಯದೆ, ಬಿಡುಗಡೆಯಾಗುತ್ತಿರುವ ಪುಸ್ತಕಗಳ ಹೆಸರಿಗೆ ಮ್ಯಾಚ್ ಆಗುವಂತೆ ಉಪಾಹಾರ ಕಾರ್ಯಕ್ರಮಕ್ಕೂ
‘ಕೈ-ಬಾಯಿ ಟಚ್’ ಎಂದು ಬರೆದಿದ್ದೆ. ಅಲ್ವೇ ಮತ್ತೆ? ಉಪಾಹಾರ ಸ್ವೀಕರಿಸುವಾಗ, ಅಥವಾ ಊಟ ಮಾಡುವಾಗ ಕೈಯು
ಬಾಯಿಯನ್ನು ಟಚ್ಚುತ್ತದೆ-ಮತ್ತು-ಟಚ್ಚಬೇಕೇ ಹೊರತು ಇಡೀ ಮುಖವನ್ನು ಅಲ್ಲವಲ್ಲ? ಬಾಯಿ ಮುಕ್ಕಳಿಸುವುದು, ಬಾಯ್ಮುಚ್ಚಿ ಕುಳಿತುಕೊಳ್ಳುವುದು, ಬಾಯಿ ಬಾಯಿ ಬಡಿದುಕೊಳ್ಳುವುದು, ಕೈಗೆ ಕೆಸರಾದರೇನೇ ಬಾಯಿಗೆ ಮೊಸರಾಗುವುದು, ಕೈಗೆ ಬಂದದ್ದು ಬಾಯಿಗೆ ಬಾರದಿರುವುದು, ಹಣ ಕಂಡರೆ ಹೆಣವೂ ಬಾಯಿ ಬಿಡುವುದು, ಮಂಗ ಮೊಸರು ತಿಂದು ಮೇಕೆಯ ಬಾಯಿಗೆ ಸವರುವುದು… ಇತ್ಯಾದಿ ಎಲ್ಲದರಲ್ಲೂ ಬಾಯಿ ಅಂದರೆ ಬಾಯಿಯೇ.

ಮುಖ ಇರಬಹುದೇನೋ ಎಂದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಹಾಗೆಯೇ, ಮುಖ ನೋಡಿ ಮಣೆ ಹಾಕುವುದು, ಮುಖಬೆಲೆ
ತಿಳಿದುಕೊಳ್ಳುವುದು, ಮುಖಕ್ಕೆ ಉಗುಳುವುದು, ಮುಖ ತೋರಿಸಬೇಡ ಹೊರಟುಹೋಗು ಮೂರ್ಖ! ಎಂದು ಕೃಷ್ಣ ದೇವರಾ ಯನೇ ಬೈದಾಗ ತೆನಾಲಿ ರಾಮಕೃಷ್ಣನು ಮಡಕೆಯಿಂದ ಮುಖ ಮುಚ್ಚಿಕೊಂಡು ಆಸ್ಥಾನಕ್ಕೆ ಬರುವುದು… ಇಲ್ಲೆಲ್ಲ ಮುಖ
ಅಂದರೆ ಮುಖವೇ. ಬಾಯಿ ಇರಬಹುದೇನೋ ಎಂದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಸಂಸ್ಕೃತದಲ್ಲಿಲ್ಲದ ಈ ಒಂದು ಸ್ಪಷ್ಟತೆ ನಮ್ಮ ಕಸ್ತೂರಿ ಕನ್ನಡದಲ್ಲಿ ಇದೆಯೆಂದು ಬಾಯಿತುಂಬ ಹೇಳಿಕೊಂಡು ಮುಖವನ್ನು ಅರಳಿಸಬಹುದು!

Read E-Paper click here