Monday, 16th September 2024

ತುತ್ತು ತಲುಪಿಸುವವರು ತೊಂದರೆಯಲ್ಲಿದ್ದಾರೆ…!

ವಿದೇಶವಾಸಿ

dhyapaa@gmail.com

ಡಬ್ಬಾವಾಲಾಗಳು ಸಮಯ ಪಾಲನೆಯಲ್ಲಿ ತೀರಾ ಕಡಕ್. ಒಂದು ಮನೆಯ ಮುಂದೆ ಒಂದು ನಿಮಿಷ ಮಾತ್ರ ಕಾಯುವ ಅವರು, ಒಂದು ನಿಮಿಷಕ್ಕಿಂತ ಒಂದು ನಿಮಿಷ ಹೆಚ್ಚು ಕಾಯ್ದರೂ ಮನೆಯವರಿಗೆ ಎಚ್ಚರಿಕೆ ಕೊಟ್ಟು ಬರುತ್ತಾರೆ. ಎರಡನೆಯ ಸಲವೂ ಹಾಗೆಯೇ ಆದರೆ, ಅಂದು ಆ ಮನೆಯನ್ನು ಬಿಟ್ಟು ಮುಂದೆ ನಡೆಯುತ್ತಾರೆ.

ಅವರು ಮಾಡುವ ೧ ಕೋಟಿ ೬೦ ಲಕ್ಷ ಕೆಲಸದಲ್ಲಿ ಒಂದು ತಪ್ಪು ಕಾಣ ಬಹುದು’. ಅವರಿಗೆ ಈ ರೀತಿಯ ಒಂದು ಪ್ರಶಂಸಾಪತ್ರ ನೀಡಿದ್ದು ಯಾವುದೋ ಪಡಪೋಶಿ ಸಂಸ್ಥೆಯಲ್ಲ, ಜಾಗತಿಕ ಮಟ್ಟದ ಮಾಧ್ಯಮ ಸಂಸ್ಥೆಯಾದ ಫೋರ್ಬ್ಸ್.

ಬಹುಶಃ ಅವರ
ಕಾರ್ಯಕ್ಷೇತ್ರ ಮುಂಬೈ ಮಹಾನಗರಿಗಷ್ಟೇ ಸೀಮಿತ ವಾಗಿದ್ದದ್ದಕ್ಕೋ ಏನೋ ಅವರ ಕುರಿತಾಗಿ ಬರೆದವರು ಕಮ್ಮಿ ಎಂದೇ ಹೇಳಬೇಕು. ಬಹಳ ವರ್ಷಗಳ ಹಿಂದೆ ಮುಂಬೈನಲ್ಲಿ ದ್ದಾಗ ಒಂದು ಇಂಗ್ಲಿಷ್ ದಿನಪತ್ರಿಕೆಯಲ್ಲಿ ಒಂದೆರಡು ಲೇಖನ ಓದಿದ್ದೆ. ಕನ್ನಡದಲ್ಲಿ ವಿಶ್ವೇಶ್ವರ ಭಟ್ಟರ ಹೊರತಾಗಿ ಬೇರೆ ಯಾರಾದರೂ ಬರೆದಿದ್ದರೆ, ನನ್ನ ಕಣ್ಣಿಗಂತೂ ಬೀಳಲಿಲ್ಲ.

ಡಬ್ಬಾವಾಲಾ…!

ಡಬ್ಬಿಗಳನ್ನು ಕೊಂಡುಹೋಗುವವ ಎಂಬ ಅರ್ಥ. ಅವರದ್ದು ೧೩೦ಕ್ಕೂ ಹೆಚ್ಚು ವರ್ಷಗಳ ಇತಿಹಾಸ. ಸಂಘಟನಾ ಶಕ್ತಿಗೆ ಸಾಕ್ಷಿ ಅವರು. ಪ್ರಾಮಾಣಿಕತೆಗೆ ಜೀವಂತ ಉದಾಹರಣೆ, ಮಾಡುವ ಕೆಲಸದಲ್ಲಿ ಕಿಂಚಿತ್ತೂ ಕಲ್ಮಶ ಹುಡುಕಲಾಗದಷ್ಟು ಪೈಟು, ವಿಶ್ವದ ಹೆಸರಾಂತ ಸರಬರಾಜು ಸಂಸ್ಥೆಗಳ ಊಹೆಗೂ ಸಿಗದ ಸಮಯ ಪಾಲನೆ. ಕೋಟಿಗಟ್ಟಲೆ ಹಣ ಸುರಿದರೂ ಸಿಗದ ಕಾರ್ಯತತ್ಪರತೆ. ಇಂದಿನ ಝೊಮೆಟೊ, ಸ್ವಿಗ್ಗಿಯಂತಹ ಕಂಪನಿಗಳಿಗೆ ಪ್ರೇರಣೆಯ ಮೂಲ ಧಾತು.

ತಮ್ಮ ೧೦೦ಕ್ಕೂ ಹೆಚ್ಚಿನ ವರ್ಷದ ಇತಿಹಾಸದಲ್ಲಿ ಅವರು ಕೆಲಸ ನಿಲ್ಲಿಸಿದ್ದು ಒಂದೇ ಬಾರಿ. ಅದೂ ಯಾವಾಗ ಗೊತ್ತಾ? ಅಣ್ಣಾ
ಹಜಾರೆ ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿದ್ದರಲ್ಲ, ಆಗ. ಅವರ ಕೆಲಸ ಹೇಗೆ ಎಂಬುದಕ್ಕೆ ಒಂದು ಉದಾಹರಣೆ ಸಾಕು ಎನಿಸುತ್ತದೆ. ೨೦೦೫ರಲ್ಲಿ ಮುಂಬೈನಲ್ಲಿ ಘೋರ ಮಳೆ. ೧೨ ತಾಸಿನಲ್ಲಿ ೨೫ ಇಂಚು ಮಳೆಯಾಗಿ ಇಡೀ ಮುಂಬೈ
ಜಲಾವೃತವಾಗಿತ್ತು. ಅಂತಹ ಮಳೆಯಲ್ಲೂ ತಮ್ಮ ಶಕ್ತಿಮೀರಿ ಕೆಲಸ ಮಾಡಿದವರು ಡಬ್ಬಾವಾಲಾಗಳು.

ಹಾಗೆಯೇ ೨೪ ಗಂಟೆಯ ಒಳಗೆ ಏನೂ ಆಗಿಯೇ ಇಲ್ಲ ಎಂಬಂತೆ ಪುನಃ ತಮ್ಮ ಕೆಲಸಕ್ಕೆ ಮರಳಿದ್ದರು. ಅಷ್ಟಕ್ಕೂ ಅವರ ಕೆಲಸಕ್ಕೆ ಕಾರು, ಬೈಕು, ರಿಕ್ಷಾಗಳಿಲ್ಲ. ಅವರು ಕೆಲಸಕ್ಕೆಂದು ಬಳಸುವುದು ಸೈಕಲ್ ಅಥವಾ ಕೈಗಾಡಿ ಮತ್ತು ಮುಂಬೈನ ಸ್ಥಳೀಯ ರೈಲು. ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಇದೇ ಅವರ ಸಾಧನ. ಇದನ್ನೇ ಬಳಸಿ ಸಮಯಕ್ಕೆ ಸರಿಯಾಗಿ
ಸರಬರಾಜು ಮಾಡುತ್ತಾರೆ ಎಂದರೆ ಯಾವ ಸ್ಥರದ ಯೋಜನೆ ಇರಬಹುದು ಯೋಚಿಸಿ.

ರೂಢಿಯಲ್ಲಿ ‘ಸಮಯ ಯಾರಿಗೂ ಕಾಯುವುದಿಲ್ಲ’ ಎಂಬ ಮಾತಿದೆ. ಆದರೆ ಮುಂಬೈ ಆಸು ಪಾಸು ’ಸಮಯ ಮತ್ತು ಡಬ್ಬಾವಾಲಾ ಯಾರಿಗೂ ಕಾಯುವುದಿಲ್ಲ’ ಎಂಬ ಮಾತೂ ರೂಢಿಯಲ್ಲಿದೆ. ಹೆಸರೇ ಹೇಳುವಂತೆ ಅವರದ್ದು ಡಬ್ಬಿ ವ್ಯವಹಾರ.
ಆದರೆ ಡಬ್ಬಿ ಮಾರುವ ಯಾ ಡಬ್ಬಿಗೆ ಕಲಾಯಿ ಹಾಕುವ ಅಥವಾ ಹಳೇ ಡಬ್ಬಿ ಸಂಗ್ರಹಿಸಿ ಗುಜರಿಗೆ ಕೊಂಡುಹೋಗುವ ಕೆಲಸವಲ್ಲ. ಮನೆಯಿಂದ ಊಟದ ಡಬ್ಬಿ ಸಂಗ್ರಹಿಸಿ, ಮನೆಯವರು ಕೆಲಸ ಮಾಡುವ ಕಚೇರಿಗೆ, ಶಾಲೆ, ಕಾಲೇಜುಗಳಿಗೆ
ತಲುಪಿಸುವ, ನಿರ್ವಹಣೆಯ ಕೆಲಸ ಅವರದ್ದು.

ಅದರಲ್ಲಿ ಫೋರ್ಬ್ಸ್  ಸಂಸ್ಥೆಯವರು ಅಧ್ಯಯನ ಮಾಡುವಂಥದ್ದಾಗಲಿ, ಸ್ಟಾನ್ ಫೋರ್ಡ್, ಹಾರ್ವರ್ಡ್ ವಿಶ್ವವಿದ್ಯಾಲಯ ವ್ಯಾಪಾರದ ಪಾಠ ಮಾಡುವಂಥದ್ದಾಗಲಿ ಅಥವಾ ಇಂದಿನ ಬ್ರಿಟಿಷ್ ರಾಜ, ಅಂದಿನ ರಾಜಕುಮಾರ ಚಾರ್ಲ್ಸ್ ಅವರೊಂದಿಗೆ ಗಂಟೆಗಟ್ಟಲೆ ಕಳೆಯುವಂಥದ್ದಾಗಲಿ ಏನಿದೆ ಅನಿಸಬಹುದು. ಅದಕ್ಕೆ ಉತ್ತರ ಬೇಕಾದರೆ ಅವರ ಇತಿಹಾಸ ಮತ್ತು ಕಾರ್ಯ ವೈಖರಿ ತಿಳಿಯಬೇಕು.

ಇವರ ಮೂಲ ಹುಡುಕುತ್ತಾ ಹೋದರೆ ೧೮೯೦ಕ್ಕೆ ಹೋಗಿ ನಿಲ್ಲುತ್ತದೆ. ಮಹಾದೇವ್ ಹಾವಾಜಿ ಬಚ್ಚೆ ಎಂಬುವವರು ಈ ಉದ್ಯಮದ ಜನಕ. ಆಗಿನ ಕಾಲದಲ್ಲಿ ಬ್ರಿಟಿಷರು ಮತ್ತು ಪಾರ್ಸಿ ಜನರಿಗೆ, ಅವರು ಕೆಲಸ ಮಾಡುವ ಕಚೇರಿಗೆ ಮನೆಯಿಂದ
ಊಟ ತಲುಪಿಸುವ ಕೆಲಸ ಆರಂಭಿಸಿದರು ಮಹಾದೇವ್. ಆಗ ಹೆಚ್ಚಿನ ಜನ ಮುಂಬೈನಗರಕ್ಕೆ ಉದ್ಯೋಗ ನಿಮಿತ್ತ ಬರುತ್ತಿದ್ದರು. ಪಟ್ಟಣದಲ್ಲಿ ವಾಸಿಸಲು ಹೆಚ್ಚು ಹಣ ನೀಡಬೇಕಾಗುತ್ತಿದ್ದುದರಿಂದ ಸ್ವಲ್ಪ ದೂರದಲ್ಲಿ ಮನೆ ಮಾಡುತ್ತಿದ್ದರು. ಆ
ಕಾರಣದಿಂದ ಕೆಲಸಕ್ಕೆಂದು ಬೇಗ ಮನೆ ಬಿಟ್ಟು ಹೊರಡಬೇಕಾಗುತ್ತಿತ್ತು.

೯, ೯:೩೦ಕ್ಕೆ ಕಚೇರಿ ತಲುಪಬೇಕೆಂದರೆ ೪:೩೦-೫:೦೦ ಗಂಟೆಗೆ ಎದ್ದು, ೭ ಗಂಟೆಗೆ ಮನೆ ಬಿಡಬೇಕಾಗುತ್ತಿತ್ತು. ಅಷ್ಟು ಬೇಗ
ಮನೆಯಲ್ಲಿ ಅಡುಗೆ ಬೇಯಿಸುವುದು ಹೆಂಗಸರಿಗೆ ಕಷ್ಟವಾಗುತ್ತಿತ್ತು. ಒಂದು ವೇಳೆ ಅಡುಗೆ ಮಾಡಿ ಕಳಿಸಿದರೂ ಬೇಸಿಗೆಯಲ್ಲಿ ಹಳಸುವ, ಚಳಿಗಾಲದಲ್ಲಿ ತಾಜಾ ಇರದೆ ತಣ್ಣಗಾಗುವ ಸಾಧ್ಯತೆಗಳಿರುತ್ತಿದ್ದವು. ಹೊರಗೆ ಹೆಚ್ಚು ತಿನ್ನಲು ಬಯಸದ ಜನರಿಗೆ,
ಮನೆಯ ತಯಾರಿಸಿದ ಊಟ ತಿಂಡಿ ತಲುಪಿಸುವ ಕೆಲಸ ಅವರು ಪ್ರಾರಂಭಿಸಿದರು.

ಅದಕ್ಕೆ ಬೇಕಾಗಿ ಒಂದು ನೂರು ಜನರನ್ನು ಜತೆಯಲ್ಲಿ ಸೇರಿಸಿಕೊಂಡಿದ್ದರು. ಆರಂಭವಾಗಿ ಸುಮಾರು ಆರೂವರೆ ದಶಕದ ನಂತರ ಇದನ್ನು ಒಂದು ಟ್ರಸ್ಟ್ ಎಂದು ನೋಂದಾಯಿಸಿ ಕೊಳ್ಳಲಾಯಿತು. ಮುಂಬೈ ನಗರದಲ್ಲಿ ಇಂದಿಗೂ ಪರಿಸ್ಥಿತಿ ಹಾಗೆಯೇ ಇದೆ. ಡಬ್ಬಾವಾಲಾಗಳ ಕೆಲಸವೂ ಹಾಗೆಯೇ ಮುಂದುವರಿದಿದೆ. ಬದಲಾದದ್ದು ಎಂದರೆ, ನೂರು ಜನರ ಬದಲು ಸುಮಾರು ೫,೦೦೦ ಡಬ್ಬಾವಾಲಗಳು ಕೆಲಸ ಮಾಡುತ್ತಿದ್ದಾರೆ.

ಜತೆಗೆ, ಊಟದ ನಂತರ ಖಾಲಿ ಡಬ್ಬಿಯನ್ನು ಮನೆಗೆ ಹಿಂತಿರುಗಿಸುತ್ತಾರೆ. ಡಬ್ಬಾವಾಲಾಗಳು ಮನೆಯಿಂದ ಬೆಳಿಗ್ಗೆ ೧೦ರ ಹೊತ್ತಿಗೆ ಊಟದ ಡಬ್ಬಿ ಸಂಗ್ರಹಿಸುತ್ತಾರೆ. ಆ ಡಬ್ಬಿಯನ್ನು ಹತ್ತಿರದ ರೇಲ್ವೆ ನಿಲ್ದಾಣಕ್ಕೆ ತರುತ್ತಾರೆ. ಬೇರೆ ಬೇರೆ ಕಡೆಯಿಂದ
ಬಂದ ಡಬ್ಬಗಳನ್ನೆಲ್ಲ ಮುಂದಿನ ಪ್ರಯಾಣಕ್ಕೆ ಅನುಕೂಲವಾ ಗುವಂತೆ ಅಲ್ಲಿ ವಿಂಗಡಿಸಿ, ಮರದ ಹಲಗೆಯಿಂದ ತಯಾರಾದ ಟ್ರೇಯಲ್ಲಿ ತುಂಬಿ ಟ್ರೇನ್ನಲ್ಲಿ ಕೊಂಡೊಯ್ಯುತ್ತಾರೆ. ಪ್ರತಿ ನಿಲ್ದಾಣದಲ್ಲಿ ಅವರಿಗೆ ಡಬ್ಬಿ ಇಳಿಸುವುದಕ್ಕೆ, ಏರಿಸುವುದಕ್ಕೆ ಸಿಗುವ
ಸಮಯ ೨೦-೪೦ ಸೆಕೆಂಡುಗಳು ಮಾತ್ರ.

ಅಷ್ಟರಲ್ಲಿಯೇ ನಾಜೂಕಾಗಿ, ಯಂತ್ರದಂತೆ ತಮ್ಮ ಕೆಲಸ ಮುಗಿಸಿಕೊಳ್ಳುತ್ತಾರೆ. ಟ್ರೇನ್ನಲ್ಲಿ ಅವೆಲ್ಲ ಪುನಃ ವಿಂಗಡಣೆ ಯಾಗುತ್ತವೆ. ಮೊದಲ ೧೦ ನಿಮಿಷ ಪುನಃ ಜೋಡಿಸುವುದಕ್ಕಾದರೆ ಮುಂದಿನ ೧:೩೦ ಗಂಟೆಯ ಕಾಲ ಅವರ ಭಜನೆಗೆ
ಮೀಸಲು. ತಲುಪಿಸಬೇಕಾದ ಸ್ಥಳದ ಸಮೀಪದ ನಿಲ್ದಾಣದಲ್ಲಿ ಡಬ್ಬಿಗಳನ್ನು ಇಳಿಸುತ್ತಾರೆ. ಅಲ್ಲಿ ಕಾದಿರುವ ಇನ್ನೊಂದು ತಂಡದವರು ಅದನ್ನು ೧೨-೧ ಗಂಟೆಯ ಒಳಗೆ ಕಚೇರಿಗೋ, ಕಾಲೇಜಿಗೋ, ಶಾಲೆಗೋ ವಿತರಿಸುತ್ತಾರೆ.

ಹಾಗೆಯೇ, ಒಂದು ಗಂಟೆಯ ನಂತರ ಖಾಲಿ ಡಬ್ಬಿಗಳನ್ನೆಲ್ಲ ಕಲೆಹಾಕಿ ಸಾಯಂಕಾಲ ೫ ಗಂಟೆಯ ಒಳಗೆ ಮನೆಗೆ ತಲುಪಿಸು ತ್ತಾರೆ. ಹೀಗೆ ಪ್ರತಿನಿತ್ಯ ಒಟ್ಟೂ ಒಂದೂ ೨ ಲಕ್ಷ ಡಬ್ಬಿಗಳು ಮುಂಬೈ ನಗರದಲ್ಲಿ ಓಡಾಡುತ್ತವೆ. ಹಾಗಂತ ಇದೇ ವ್ಯವಸ್ಥೆ ಭಾರತದ ಇನ್ಯಾವ ನಗರದಲ್ಲೂ ಇಲ್ಲ. ಅದಕ್ಕೆ ಕಾರಣ ಮುಂಬೈ ನಗರದಲ್ಲಿ ಇರುವ ಸ್ಥಳೀಯ ರೈಲು ಸೌಲಭ್ಯ. ಸುಮಾರು ೫೦೦೦ ಡಬ್ಬಾವಾಲಾಗಳು ಇದ್ದಾರೆ ಎಂದೆನಲ್ಲ, ಅದರಲ್ಲಿ ಸುಮಾರು ೨೦೦ ತಂಡಗಳಿರುತ್ತವೆ. ಒಂದು ತಂಡದಲ್ಲಿ ೨೦-೩೦ ಸದಸ್ಯರು.

ಒಬ್ಬರೋ ಇಬ್ಬರೋ ಮೇಲ್ವಿಚಾರಕರು. ಅನಾರೋಗ್ಯ, ಅಪಘಾತ ಅಥವಾ ಇನ್ಯಾವುದೋ ಅನಿವಾರ್ಯದಿಂದ ಯಾರಿಗಾ ದರೂ ಬರಲಾಗದಿದ್ದರೆ, ಅಂಥವರ ಸ್ಥಳ ತುಂಬಲು ಒಂದಿಬ್ಬರು ಮೀಸಲು. ಹೆಚ್ಚಾಗಿ ಸಂಬಂಧಿಗಳೇ ಇರುವ ತಂಡಕ್ಕೆ ಹೊಸದಾಗಿ ಯಾರಾದರೂ ಸೇರಿಕೊಂಡರೆ, ಆರು ತಿಂಗಳ ತರಬೇತಿ. ತಂಡದ ಪ್ರತಿಯೊಬ್ಬನೂ ಅವನ ಸುತ್ತಮುತ್ತಲಿನ ಜಾಗದ ಇಂಚಿಂಚೂ ತಿಳಿದವನಾಗಿರುತ್ತಾನೆ. ನೆನೆಪಿರಲಿ, ಮನೆ ಹುಡುಕುವುದಕ್ಕೆ ಇವರು ಎಂದಿಗೂ ಜಿಪಿಎಸ್, ಗೂಗಲ್ ಮ್ಯಾಪ್, ವಿಕಿಮಾಪಿಯಾ ಉಪಯೋಗಿಸಿ ದವರಲ್ಲ. ತೀರಾ ಇತ್ತೀಚಿನವರೆಗೂ ಬಹುತೇಕ ಡಬ್ಬಾವಾಲಾಗಳ ಬಳಿ ಮೊಬೈಲ್ ಫೋನ್ ಕೂಡ ಇರಲಿಲ್ಲ.

ಏಕೆಂದರೆ ಇವರಲ್ಲಿ ಬಹುತೇಕರು ಅನಕ್ಷರಸ್ಥರು. ಜತೆಗೆ, ಅವರಿಗೆ ಮೊಬೈಲ್ ಪೋನಿನ ಅವಶ್ಯಕತೆಯೂ ಬೀಳುತ್ತಿರಲಿಲ್ಲ.
ಡಬ್ಬಾವಾಲಾಗಳು ಸಮಯ ಪಾಲನೆಯಲ್ಲಿ ತೀರಾ ಕಡಕ್. ಒಂದು ಮನೆಯ ಮುಂದೆ ಒಂದು ನಿಮಿಷ ಮಾತ್ರ ಕಾಯುವ ಅವರು, ಒಂದು ನಿಮಿಷಕ್ಕಿಂತ ಒಂದು ನಿಮಿಷ ಹೆಚ್ಚು ಕಾಯ್ದರೂ ಮನೆಯವರಿಗೆ ಎಚ್ಚರಿಕೆ ಕೊಟ್ಟು ಬರುತ್ತಾರೆ. ಎರಡನೆಯ ಸಲವೂ ಹಾಗೆಯೇ ಆದರೆ, ಅಂದು ಆ ಮನೆಯನ್ನು ಬಿಟ್ಟು ಮುಂದೆ ನಡೆಯುತ್ತಾರೆ. ಅದು ಎಷ್ಟು ದೊಡ್ಡ ಸಾಹೇಬನೇ ಆಗಿರಲಿ, ಯಾವ ಸೀಮೆಯ ಕೋತ್ವಾಲನೇ ಆಗಿರಲಿ, ಡಬ್ಬಾವಾಲಾ ಮಾತ್ರ ಕಾಯುವುದಿಲ್ಲ.

ಒಬ್ಬರಿಂದಾಗಿ ಉಳಿದವರೆಲ್ಲ ತೊಂದರೆಗೀಡಾಗುವುದನ್ನು ಅವರು ಸುತಾರಾಂ ಒಪ್ಪುವುದಿಲ್ಲ. ಆದರೂ ಅಷ್ಟು ಕರಾರುವಕ್ಕಾಗಿ ಡಬ್ಬಿಯನ್ನು ತಪ್ಪಿಲ್ಲದೇ ತಲುಪಿಸುವುದಕ್ಕೆ ಕಾರಣ ಅವರು ಮಾಡಿಕೊಂಡ ಕೋಡಿಂಗ್ ಅಥವಾ ಗುರುತಿನ ಪದ್ಧತಿ. ಅನಕ್ಷರ ಸ್ಥರೂ ಸುಲಭವಾಗಿ ಅರ್ಥೈಸಿಕೊಳ್ಳಲು ಇದು ಸಹಕರಿಸುತ್ತದೆ. ವಿಶ್ವವಿದ್ಯಾಲಯಗಳನ್ನು ಆಕರ್ಷಿಸಿದ್ದೂ ಇದೇ ಕೋಡಿಂಗ್ ಸಿಸ್ಟಮ. ಅದಕ್ಕೆ ಅವರು ಹಸಿರು, ಹಳದಿ, ನೀಲಿ, ಕೆಂಪು ಬಣ್ಣದ ಪೇಂಟ್ ಬಳಸುತ್ತಾರೆ.

ಡಬ್ಬದ ಮುಚ್ಚಲಿನ ಮೇಲೆ ಈ ಗುರುತು ಹಾಕಿಕೊಳ್ಳುತ್ತಾರೆ. ಎಡಗಡೆ ಸಂಗ್ರಹಿಸಿದ, ಕೊನೆಯಲ್ಲಿ ಹಿಂತಿರುಗಿಸಬೇಕಾದ ಸ್ಥಳ, ನಡುವೆ ಪ್ರಮುಖ ನಿಲ್ದಾಣ, ಅದರ ಮೇಲೆ ಇಳಿಯಬೇಕಾದ ನಿಲ್ದಾಣ, ಬಲಕ್ಕೆ ಕಟ್ಟಡದ ಸಂಖ್ಯೆ ಅಥವಾ ಗುರುತು, ಅದರ ಪಕ್ಕದಲ್ಲಿ ಎಷ್ಟನೆ ಮಹಡಿ ಎಂದು ಗುರುತು ಹಾಕಿಕೊಳ್ಳುತ್ತಾರೆ. ಇಷ್ಟೆ ಅವರ ಬಂಡವಾಳ. ಆದರೆ ಇದನ್ನೇ ಇಟ್ಟುಕೊಂಡು ಝೊಮ್ಯಾಟೋ, ಸ್ವಿಗ್ಗಿಯವರಿಗಿಂತ ೯೦% ಕಡಿಮೆ ದರದಲ್ಲಿ ಅಮ್ಮನೊ, ಹೆಂಡತಿಯೋ ತಯಾರಿಸಿದ ತುತ್ತು ತಲುಪಿಸುವು ದಷ್ಟೇ ಅಲ್ಲದೆ, ನಂತರ ಖಾಲಿ ಡಬ್ಬಿಯನ್ನು ಪುನಃ ಮನೆಗೆ ತಲುಪಿಸುತ್ತಾರೆ.

ಒಬ್ಬೊಬ್ಬರಿಗೆ ೮-೧೨ ಸಾವಿರ ರೂಪಾಯಿ ಸಂಬಳ. ಆರೆಂಟು ತಿಂಗಳು ಕೆಲಸ ಮಾಡಿ, ಮೂಲಧನಕ್ಕೆ ಹಣ ಜೋಡಿಸಿದರೆ ಅವರೂ ಕಂಪನಿಯಲ್ಲಿ ಹೂಡಿಕೆದಾರರು. ವರ್ಷಾಂತ್ಯದಲ್ಲಿ ಬರುವ ಲಾಭಕ್ಕೆ ಅವರೂ ಪಾಲುದಾರರು. ಇದು ಡಬ್ಬಾವಾಲಾಗಳ
ಆದಾಯ. ಬಹುತೇಕ ಡಬ್ಬಾವಾಲಾಗಳು ವಿಟ್ಠಲ ದೇವರ ಭಕ್ತರು. ಬಿಳಿ ಪೈಜಾಮು, ಬಿಳಿ ಅಂಗಿ, ತಲೆಯ ಮೇಲೊಂದು ಬಿಳಿ ಟೋಪಿ. ಹಣೆಯ ಮೇಲೊಂದು ತಿಲಕ, ಕೊರಳಲ್ಲಿ ತುಳಸಿ ಮಾಲೆ. ಮದ್ಯಪಾನ ಮಾಂಸಭಕ್ಷಣದಿಂದ ದೂರ. ನಾಲ್ಕು ಜನ
ಡಬ್ಬಾವಾಲಾಗಳು ಸೇರಿದಾಗ ಬಿಡುವಿದ್ದರೆ ವಿಠ್ಠಲ ದೇವರ ಭಜನೆ ಶುರು ಎಂತಲೇ ಲೆಕ್ಕ.

ಬೆಳಿಗ್ಗೆ ಐದು ಗಂಟೆಗೆ ಮನೆ ಬಿಟ್ಟರೆ ಸಾಯಂಕಾಲ ಏಳರವರೆಗೆ ’ಪ್ರಾಮಾಣಿಕ’ ದುಡಿತ. ೧೮ರಿಂದ ೬೫ ವರ್ಷದವರೆಗಿ ನವರೆಲ್ಲ ಒಟ್ಟು ಕುಟುಂಬದವರಂತೆ, ಒಂದೇ ಮನೋಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅವರು ಡಬ್ಬಾವಾಲಾಗಳು ಎಂದು ತಿಳಿಯಬಹುದು.

ಇಂತಹ ಊಟ ಹಂಚುವ ಸಮುದಾಯ ಕಳೆದ ಮೂರು ವರ್ಷದಿಂದ ತೊಂದರೆಗೀಡಾಗಿರುವುದು ಖೇದಕರ. ಅದಕ್ಕೆ ಕಾರಣ ಚೀನಾದ ವುಹಾನ್ ವೈರಸ್. ಕೊರೋನಾ ಕಾಲದಲ್ಲಿ ಲಾಕ್‌ಡೌನ್‌ನಿಂದ ಜನ ಮನೆಯ ಉಳಿಯುವಂತಾಯಿತು. ನಂತರ
ನಿಧಾನವಾಗಿ ತೆರೆದುಕೊಂಡರೂ ಎರಡನೆಯ ಅಲೆಯಿಂದಾಗಿ ಮತ್ತೆ ಎಲ್ಲರೂ ನರಳುವಂತಾಯಿತು. ಅದರ ನಂತರ ಜಗತ್ತು ಇನ್ನೂ ಪೂರ್ತಿ ಯಾಗಿ ಮೊದಲಿನಂತೆ ತೆರೆದುಕೊಂಡಿಲ್ಲ. ಇಂದಿಗೂ ಸಾಕಷ್ಟು ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕಂಪನಿಗಳೂ ಅದನ್ನು ಉತ್ತೇಜಿಸುತ್ತಿವೆ.

ಇದರಿಂದಾಗಿ ಕನಿಷ್ಟ ೪,೦೦೦ ಜನ ಡಬ್ಬಾವಾಲಾಗಳಿಗೆ ಕೆಲಸ ಇಲ್ಲದಂತಾಗಿದೆ. ಮುಂದೊಂದು ದಿನ ಇದೆಲ್ಲ ಸರಿಯಾಗಿ ಪುನಃ ಮೊದಲಿನ ಸ್ಥಿತಿಗೆ ಹಿಂತಿರುಗಬಹುದು ಎಂಬ ನಂಬಿಕೆಯೂ ಉಳಿದಿಲ್ಲ. ಪ್ರಾಮಾಣಿಕ, ವಿಶ್ವಾಸಾರ್ಹ ಜನರು ಮನೆಯವರ ಹಸಿವು ನೀಗಿಸಲು ವಾಚ್ಮನ್, ಡ್ರೈವರ್ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ, ಬೀದಿ ಬದಿಯಲ್ಲಿ ಟೀ-ಕಾಫಿ ಮಾರಲು
ಆರಂಭಿಸಿzರೆ. ನೂರ ಮೂವತ್ತು ವರ್ಷ ಇತಿಹಾಸ ವಿರುವ ಸಮುದಾಯವೊಂದು ಈ ರೀತಿ ಅಳಿದು ಹೋಗುತ್ತದೆ ಎಂದರೆ ಅದು ದುರದೃಷ್ಟಕರ ವಲ್ಲದೆ ಇನ್ನೇನು? ಹಾಗಂತ ಅದಕ್ಕೆ ಸದ್ಯ ಯಾವ ಪರಿಹಾರವೂ ಕಾಣುತ್ತಿಲ್ಲ. ಸಂಪೂರ್ಣ ನಶಿಸಿ
ಹೋಗುವುದಕ್ಕೆ ಮುನ್ನ ಡಬ್ಬಾವಾಲಾಗಳ ಸಮುದಾಯ ಸುಧಾರಿಸಿಕೊಳ್ಳಲಿ ಎಂಬುದೊಂದೇ ಆಶಯ.