Thursday, 12th December 2024

ಆರೆಸ್ಸೆಸ್‌ನ ಆಳದಲ್ಲಿ ಅರಳಿದ ಕಮಲ ಮುರ್ಮು

ವೀಕೆಂಡ್ ವಿತ್ ಮೋಹನ್

camohanbn@gmail.com

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಪತಿಗಳಾಗಿದ್ದಾರೆ. ಮೂಲತಃ ಆದಿವಾಸಿ ಜನಾಂಗಕ್ಕೆ ಸೇರಿದ, ಒಡಿಶಾ ಮೂಲದ ದ್ರೌಪದಿ ಮುರ್ಮು ಅವರು ರಾಜಕೀಯವಾಗಿ ಬೆಳೆದುಬಂದಂತಹ ಹಾದಿ ಬುಡಕಟ್ಟು ಜನಾಂಗಕ್ಕೆ ಬಹುದೊಡ್ಡ ಪ್ರೇರಣೆ.

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಕೆಲವು ವರ್ಷಗಳ ಹಿಂದೆ ಆದಿವಾಸಿ ಜನರ ಬಾಣಕ್ಕೆ ಸಿಕ್ಕಿ ಸತ್ತು ಹೋದಂತಹ ಪತ್ರಕರ್ತನ ಘಟನೆಯನ್ನು ಇನ್ನೂ ಮರೆತಿಲ್ಲ. ಆದಿವಾಸಿ ಬುಡಕಟ್ಟು ಜನಾಂಗವು ಶತಮಾನಗಳಿಂದ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಇಂದಿಗೂ ಮನುಷ್ಯ ಹಾಗೂ ಕಾಡಿನ ಮದ್ಯೆ ಸಂಘರ್ಷಗಳುಂಟಾದಾಗ, ಆದಿವಾಸಿಗಳು ಕಾಡಿನ ಪರ ನಿಲ್ಲುತ್ತಾರೆ.

ಒಡಿಶಾದ ಪರಿಶಿಷ್ಟ ಪಂಗಡದ ಜನರ ದೊಡ್ಡ ಶಕ್ತಿಯಾಗಿದ್ದಂತಹ ದ್ರೌಪದಿ ಮುರ್ಮು, ಬೇರುಮಟ್ಟದಿಂದ ಆರಂಭಿಸಿ ರಾಜಕೀಯ ಅಧಿಕಾರದ ಹಲವು ಮಜಲುಗಳನ್ನು ಕಂಡವರು. ಕಡುಬಡತನದ ಹಿನ್ನೆಲೆಯ ಅವರು ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ತಮ್ಮ ಗಂಡ ಹಾಗೂ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡವರು. 1997ರಿಂದಲೂ ರಾಜಕೀಯ ಜೀವನದಲ್ಲಿರುವ ಮುರ್ಮು ಅವರಿಗೆ ಅಪಾರ ರಾಜಕೀಯ ಹಾಗೂ ಆಡಳಿತದ ಅನುಭವವಿದೆ. ಇಷ್ಟೊಂದು ಅನುಭವವಿರುವ ಮಹಿಳೆಯನ್ನು ಯಶವಂತ ಸಿನ್ಹಾ, ರಬ್ಬರ್ ಸ್ಟ್ಯಾಂಪ್ ಅಭ್ಯರ್ಥಿ ಎಂದಿದ್ದರು.

ಪ್ರತಿಪಕ್ಷದವರು ಮುರ್ಮು ಆಡಳಿತಾನುಭವದ ಬಗ್ಗೆ ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹೇಳಿದರು. ತನ್ನ ಅಜ್ಜಿ ಹಾಗೂ ಅಪ್ಪನ ಹೆಸರಿನಲ್ಲಿ ರಾಜಕೀಯ ಮಾಡಿ, ಒಂದು ಪಂಚಾಯತ್ ಚುನಾವಣೆ ಗೆಲ್ಲುವ ಯೋಗ್ಯತೆಯಿಲ್ಲದೆ, ಪ್ರಧಾನಮಂತ್ರಿಯ ಕನಸು ಕಾಣುತ್ತಿರುವ ರಾಹುಲ್ ಗಾಂಧಿಯ ಬಾಲಬುಡುಕರು ದ್ರೌಪದಿ ಮುರ್ಮುರ ಆಡಳಿತದ ಅನುಭವದ ಬಗ್ಗೆ ಕೆಟ್ಟದಾಗಿ
ಮಾತನಾಡಿದ್ದರು. ಆದರೆ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತಕ್ಕೆ ಪರಿಶಿಷ್ಟ ಪಂಗಡದ ಮಹಿಳೆ ಯೊಬ್ಬರು ರಾಷ್ಟ್ರ ಪತಿಯಾಗುತ್ತಿರುವುದನ್ನು ಜಗತ್ತಿನ ದೊಡ್ಡ ದೊಡ್ಡ ನಾಯಕರು ಕೊಂಡಾಡಿದ್ದಾರೆ.

ಪ್ರಜಾಪ್ರಭುತ್ವದ ನಿಜವಾದ ಆಶಯ ಈಡೇರಬೇಕಾದರೆ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶಗಳು ಸಿಗಬೇಕು. ಸಂವಿಧಾನದಡಿಯಲ್ಲಿ ತೆಗೆದು ಕೊಳ್ಳುವಂತಹ ಬಹುತೇಕ ಗಟ್ಟಿ ನಿರ್ಧಾರಗಳಿಗೆ ರಾಷ್ಟ್ರಪತಿ ಅಂಕಿತ ಬೇಕಿರುತ್ತದೆ. ಆದನ್ನು ಮಾಡಲು ಸಿದ್ಧರಾಗುತ್ತಿರುವುದು ಮುರ್ಮು, ಇಂತಹ ಕನಸನ್ನು ನನಸು ಮಾಡಿದ ಕೀರ್ತಿ ಸಂಘ ಪರಿವಾರದಿಂದ ಬಂದಂತಹ ನರೇಂದ್ರ ಮೋದಿಯವರಿಗೆ ಸಲ್ಲಬೇಕು.

ಆರೆಸ್ಸೆಸ್‌ನ ಆಳ, ಅಗಲದ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಬರೆದ ದೇವನೂರು ಮಹಾದೇವ, ತಮ್ಮ ಪುಸ್ತಕದಲ್ಲಿ ಸಂಘವು ದಲಿತ, ಪರಿಶಿಷ್ಟ ಪಂಗಡ ವಿರೋಧಿಯೆಂದು ದೊಡ್ಡ ದಾಗಿ ಪದೇ ಪದೇ ದಾಖಲಿಸಿದ್ದಾರೆ. ಆರೆಸ್ಸೆಸ್ ಎಂದರೆ ಕೇವಲ ಬ್ರಾಹ್ಮಣರ ಸಂಘಟನೆ ಅವರಿಂದ ದಲಿತರ ಏಳಿಗೆ ಸಾಧ್ಯವಿಲ್ಲವೆಂದು ಬರೆದಿದ್ದರು. ಇಂದು ಪರಿಶಿಷ್ಟ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಈಗ ಅವರಿಗೆ ಆರೆಸ್ಸೆಸ್‌ನ ನಿಜವಾದ ಆಳ ಮತ್ತು ಅಗಲ ಅರ್ಥವಾಗಿರಬಹುದು.

ದಲಿತೋದ್ದಾರದ ಬಗ್ಗೆ ಉದ್ದುದ್ದ ಭಾಷಣ ಮಾಡುವುದಲ್ಲ. ಅವರ ಬಗ್ಗೆ ಉದ್ದುದ್ದವಾಗಿ ಬರೆಯುವುದಲ್ಲ. ಸಮಾಜದಲ್ಲಿ ನಿಂತು ದಲಿತರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು. ಈ ಕೆಲಸವನ್ನು ಆರೆಸ್ಸೆಸ್ 1925 ರಿಂದಲೂ ಮಾಡುತ್ತಲೇ ಬಂದಿದೆ. ಸಂಘವನ್ನು ಸ್ಥಾಪಿಸಿದ ಡಾಕ್ಟರ್‌ಜಿ ಎಂದೂ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಬೆಂಬಲಿಸಲಿಲ್ಲ. ಅವರ ಧ್ಯೇಯವೊಂದೇ-
ಹಿಂದೂಗಳನ್ನು ಒಗ್ಗೂಡಿಸುವುದು. ಭಾರತದಲ್ಲಿರುವ ಹಲವು ಜಾತಿಗಳನ್ನು ಬದಿಗೊತ್ತಿ ರಾಷ್ಟ್ರ ನಿರ್ಮಾಣದಲ್ಲಿ ಎಲ್ಲ
ಹಿಂದು ಗಳನ್ನು ಒಗ್ಗೂಡಿಸುವ ಸಲುವಾಗಿ ಸಂಘವನ್ನು ಕಟ್ಟಿದರು.

ಸಮಾಜದಲ್ಲಿ ಸಮರಸತೆಯಿಲ್ಲದೆ ಸಮಾನತೆಯನ್ನು ರೂಪಿಸುವುದು ಸಾಧ್ಯವಿಲ್ಲವೆಂಬುದು ಡಾಕ್ಟರ್‌ಜಿ ಹಾಗೂ ಅಂಬೇಡ್ಕರ್ ಅವರಿಬ್ಬರ ನಿಲುವಾಗಿತ್ತು. ಮಹಾತ್ಮ ಗಾಂಧಿಯವರು ಬಳಸುತ್ತಿದಂತಹ ‘ಹರಿಜನ’ವೆಂಬ ಪದದ ಬಗ್ಗೆ ಬಾಬಾ ಸಾಹೇಬರಿಗೆ ತಮ್ಮದೇ ಆದಂತಹ ಶಂಕೆಯಿತ್ತು. ಈ ವಿಷಯದಲ್ಲಿ ಗುರೂಜಿಯವರ ನಿಲುವು ಸಹ ಇದೇ ಆಗಿತ್ತು. ತಮ್ಮನ್ನು ಇತರರಿಂದ ಬೇರ್ಪಡಿಸುತ್ತಾರೆಂಬ ಒಂದೇ ಒಂದು ಅಂಶದಿಂದ ದಲಿತರನ್ನು ‘ಹರಿಜನ’ರೆಂದು ಕರೆಯುವುದು ಉಪಯುಕ್ತವಲ್ಲವೆಂದು ಗುರೂಜಿ ಹೇಳಿದ್ದರು.

ಮಹಾತ್ಮ ಗಾಂಧೀಜಿಯವರನ್ನು ಗುರೂಜಿ ಭೇಟಿಯಾದಾಗ ಈ ವಿಷಯ ಹೇಳಿದ್ದರು. ಈ ಪದಬಳಕೆಯಿಂದ ಅವರಲ್ಲಿ ಪ್ರತ್ಯೇಕತೆಯ ಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆಯೆಂದು ಗುರೂಜಿ, ಗಾಂಧಿಯವರಿಗೆ ಹೇಳಿದ್ದರು. ವನವಾಸಿಗಳು ಹಾಗೂ ಗಿರಿಜನರ ಬಗ್ಗೆ ಬಾಬಾಸಾಹೇಬರಂತೆ ಗುರೂಜಿಯವರೂ ಸಹ ಆತ್ಮೀಯತೆಯಿಂದ ಯೋಚಿಸುತ್ತಿದ್ದರು. ಸಂಘದ ಪ್ರಮುಖ ಕಾರ್ಯಕರ್ತರಾಗಿದ್ದಂತಹ ಬಾಳಾಸಾಹೇಬ ದೇಶಪಾಂಡೆಯವರನ್ನು ವನವಾಸಿಗಳ ನಡುವೆ ಕೆಲಸಕ್ಕಾಗಿ ನಿಯುಕ್ತಿಸಿದರು. ಬಾಳಾ ಸಾಹೇಬರು ದೊಡ್ಡದೊಂದು ಯುವಪಡೆಯನ್ನು ಕಟ್ಟಿಕೊಂಡು ಛತ್ತೀಸ್‌ಗಡದಲ್ಲಿ ತಮ್ಮ ಕೆಲಸ ಶುರುಮಾಡಿದರು.

ಬಾಳಾಸಾಹೇಬರ ತಂಡವು ವನವಾಸಿಗಳ ಶಿಕ್ಷಣದ ರಚನಾತ್ಮಕ ಕೆಲಸವನ್ನು ಕೈಗೆತ್ತಿಕೊಂಡರು. ಮತ್ತೊಂದೆಡೆ ವನವಾಸಿ ಗಳ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ನಡೆಯಿತು. ವನವಾಸಿಗಳ ಪರಂಪರಾಗತವಾದ ಕಾಡುಗಳ ಮೇಲಿನ ಹಕ್ಕನ್ನು ಸರಕಾರವು ಕಿತ್ತುಕೊಂಡಿತ್ತು. ಅದನ್ನು ವಾಪಸ್ ಪಡೆಯಲು ಜನಜಾಗರಣ ಅಭಿಯಾನ ನಡೆಸಿದರು. ವನವಾಸಿ ಗಳಿಂದ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿಸಿ ಪೇಟೆಯಲ್ಲಿ ದುಬಾರಿ ಬೆಲೆಗೆ ಮಾರಿ ಹಣ ಮಾಡುತ್ತಿದಂತಹ ವರ್ತಕರ ಬಗ್ಗೆ ಅರಿವು ಮೂಡಿಸಿ ಚಳವಳಿ ಮಾಡಿಸಲಾಯಿತು.

1977ರಲ್ಲಿ ಈ ಎಲ್ಲ ಕೆಲಸಗಳನ್ನು ‘ವನವಾಸಿ ಕಲ್ಯಾಣ ಆಶ್ರಮ’ವೆಂಬ ಅಖಿಲ ಭಾರತೀಯ ವ್ಯವಸ್ಥೆಗೆ ಒಳ ಪಡಿಸಲಾಯಿತು. ಅಸ್ಪೃಶ್ಯತೆಯ ಸಾಗರವಾಗಿದ್ದಂತಹ ಕೇರಳ ರಾಜ್ಯವನ್ನು ಕಂಡು ವಿವೇಕಾನಂದರು ‘ಹುಚ್ಚಾಸ್ಪತ್ರೆ’ ಯೆಂದು ಕರೆದಿದ್ದರು. ಇಂತಹ ರಾಜ್ಯದಲ್ಲಿ ಕಂಚಿ ಕಾಮಕೋಟಿ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿಯವರ ಸಮ್ಮುಖದಲ್ಲಿ 29 ಮಂದಿ ಅನ್ಯ ಜಾತಿಯವರಿಗೆ ಪೌರೋಹಿತ್ಯದ ತರಬೇತಿ ನೀಡಿ, ಕೊನೆಯಲ್ಲಿ ಸುಮಾರು 40 ಸಾವಿರ ಜನರ ಸಮ್ಮುಖದಲ್ಲಿ ರುದ್ರಾಕ್ಷಿಯ ಮಾಲೆ ಸಮೇತ ಕಂಚಿಕಾಮಕೋಟಿ ಪೀಠದ ಅಧಿಕೃತ ಮೊಹರು ಒತ್ತಿ ಪ್ರಮಾಣ ಪತ್ರವನ್ನೂ ಪ್ರದಾನ ಮಾಡಲಾಯಿತು.

ಕೇರಳದಲ್ಲಿ ನಡೆದ ಇಷ್ಟೊಂದು ದೊಡ್ಡ ಪ್ರಯತ್ನದ ಹಿಂದೆ ಇದ್ದದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ರಾದ ಪಿ.ಮಾಧವನ್ ಅವರ ಅವಿರ್ಶರಾಂತ ಪ್ರಯತ್ನ. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನಾಡುವ ಕಮ್ಯುನಿಸ್ಟರು, ಕಾಂಗ್ರೆಸಿಗರು ಹಾಗೂ ಪ್ರಾದೇಶಿಕ ಪಕ್ಷಗಳು ದ್ರೌಪದಿ ಮುರ್ಮು ವಿರುದ್ಧ ಉತ್ತರ ಭಾರತದ ‘ಕಯಸ್ತಾ’ ಸಮುದಾಯಕ್ಕೆ ಸೇರಿದ ಯಶವಂತ್ ಸಿನ್ಹಾರನ್ನು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿದರು.

ಈ ಸಮುದಾಯವು ಬ್ರಾಹ್ಮಣ ಜಾತಿಗೆ ಸೇರಿದ್ದೊಂದು ಹೇಳಲಾಗುತ್ತದೆ. ಪಶ್ಚಿಮ ಬಂಗಾಳ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕಂಡುಬರುವ ಜಾತಿಯಿದು. ಮನಸಿನಲ್ಲಿ ಆದಿವಾಸಿ ಮಹಿಳೆಯೊಬ್ಬರು ದೇಶದ ಪರಮೋಚ್ಚ ನಾಯಕಿ ಯಾಗುವುದು ಇಷ್ಟವಿಲ್ಲವಿದಿದ್ದರೂ, ಸಮಾಜದ ಮುಂದೆ ಬಗ್ಗೆ ಗಂಟೆಗಟ್ಟಲೆ ಮಾತನಾಡುವುದು ವಿರೋಧಪಕ್ಷಗಳ ದ್ವಂದ ಮನಃಸ್ಥಿತಿಗೆ ಸಾಕ್ಷಿ. ಸಂಸದರ ಒಟ್ಟು 748 ಮತಗಳಲ್ಲಿ ಬ್ರಾಹ್ಮಣ ಅಭ್ಯರ್ಥಿ ಯಾಗಿದ್ದ ಯಶವಂತ ಸಿನ್ಹಾರಿಗೆ 208 ಮತಗಳು ಬಂದಿವೆ.

ಅಪ್ಪಟ ಬ್ರಾಹ್ಮಣ ವಿರೋಧಿಯಾಗಿದ್ದ ಪೆರಿಯಾರ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ತಮಿಳುನಾಡಿನ ಸ್ಟಾಲಿನ್
ಪಕ್ಷ ಶೇ.67.80 ಮತಗಳನ್ನು ಯಶವಂತ್ ಸಿನ್ಹಾರಿಗೆ ಹಾಕಿದೆ. ಜಾತಿ ವ್ಯವಸ್ಥೆಯ ವಿರುದ್ಧವಿರುವ ಕೇರಳದ ಕಮ್ಯುನಿಸ್ಟರು
ಮತ್ತು ಕಾಂಗ್ರೆಸಿಗರು ಬ್ರಾಹ್ಮಣ ಅಭ್ಯರ್ಥಿ ಯಶವಂತ್ ಸಿನ್ಹಾರಿಗೆ ಅತೀ ಹೆಚ್ಚು ಶೇ.99.30 ಮತ ಹಾಕಿದ್ದಾರೆ. ತನ್ನದು
ಅಲ್ಪಸಂಖ್ಯಾತ ಹಾಗೂ ದಲಿತಪರ ಸರಕಾರವೆಂದು ಬೊಗಳೆ ಬಿಡುವ ತೆಲಂಗಾಣದ ಚಂದ್ರಶೇಖರ್ ರಾವ್ ಪಕ್ಷದ ಸಂಸ
ದರು ಸಿನ್ಹಾರಿಗೆ ಶೇ.92.40 ಮತ ನೀಡಿದ್ದಾರೆ.

ಕಾಂಗ್ರೆಸಿನ ರಾಜಸ್ಥಾನ ಸರಕಾರದ ಸಂಸದರು ಬ್ರಾಹ್ಮಣ ಅಭ್ಯರ್ಥಿ ಯಶವಂತ್ ಸಿನ್ಹಾರಿಗೆ ಶೇ.62.10 ಮತಗಳನ್ನು ನೀಡಿದ್ದಾರೆ. ದೆಹಲಿ ಹಾಗೂ ಪಂಜಾಬಿನಲ್ಲಿ ಸಾಂದರ್ಭಿಕ ಶಿಶುವಿನ ರೀತಿಯಲ್ಲಿ ಅಧಿಕಾರ ಅನುಭವಿಸುತ್ತಿರುವ ಆಮ್ ಆದ್ಮಿ ಪಕ್ಷದವರು ಪಂಜಾಬಿನಲ್ಲಿ ಶೇ.92.70 ಹಾಗೂ ದೆಹಲಿಯಲ್ಲಿ ಶೇ.87.50 ಮತವನ್ನು ಬ್ರಾಹ್ಮಣ ಅಭ್ಯರ್ಥಿಗೆ ನೀಡಿzರೆ.
ಅತ್ತ ಬಂಗಾಳದಲ್ಲಿ ದೀದಿಯದ್ದು ಮತ್ತದೇ ದ್ವಂದ್ವ ಕಥೆ.

ಸಮಾಜದ ಮುಂದೆ ತನ್ನನ್ನು ತಾನು ದಲಿತ, ಅಲ್ಪಸಂಖ್ಯಾತ, ಬುಡಕಟ್ಟು ಜನಾಂಗದ ಪರ ನಾಯಕಿಯೆಂದು ಹೇಳಿಕೊಂಡು, ರಾಷ್ಟ್ರಪತಿ ಚುನಾವಣೆಯಲ್ಲಿ ಶೇ. 75.30 ಮತವನ್ನು ಬ್ರಾಹ್ಮಣ ಅಭ್ಯರ್ಥಿ ಯಶವಂತ್ ಸಿನ್ಹಾರಿಗೆ ನೀಡಿದ್ದಾರೆ. ಪ್ರತಿ ಪಕ್ಷದವರಿಗೆ ಆದಿವಾಸಿ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಪದವಿ ಅಲಂಕರಿಸುವುದು ಇಷ್ಟವಿರಲಿಲ್ಲ. ಅವರಿಗೇನಿದ್ದರೂ ಅವರ ಹೆಸರಿನಲ್ಲಿ ರಾಜಕೀಯ ಮಾಡಿ ತಾವು ಮಾತ್ರ ಅತ್ಯುನ್ನತ ಪದವಿಯನ್ನಲಂಕರಿಸಬೇಕು. ರಾಷ್ಟ್ರ ಪತಿ ಚುನಾವಣೆಯಲ್ಲಿ ನಡೆದ ಮತದಾನದಲ್ಲಿ ಪ್ರತಿಪಕ್ಷಗಳ ಊಸರವಳ್ಳಿ ಮನಸ್ಥಿತಿ ಬಟಾ ಬಯಲಾಗಿದೆ.

ಮೇಧಾವಿಗಳು, ವಿದ್ಯಾವಂತರು ಮಾತ್ರ ಅತ್ಯುನ್ನತ ಪದವಿಗೇರಬೇಕೆಂಬುದು ಸುಳ್ಳು. 50 ಪುಟಗಳ ಬಯೋಡೇಟಾವಿರುವ ಮನಮೋಹನ್ ಸಿಂಗ್ 2004ರಿಂದ 2014ರ ನಡುವೆ ಅಂಟೋನಿಯೋ ಮೈನೋರ ರಬ್ಬರ್ ಸ್ಟ್ಯಾಂಪ್ ಆಗಿ ದೇಶದ ಪ್ರಧಾನ ಮಂತ್ರಿಯಾಗಿದ್ದನ್ನು ನೋಡಿದ್ದೇವೆ. ಇವರ ಆಡಳಿತಾವಧಿಯಲ್ಲಿ ಕೇಳಿಬಂದಿದ್ದು ಭಯೋತ್ಪಾದಕ ದಾಳಿಗಳು, ಹಗರಣಗಳು, ಹಣದುಬ್ಬರದ ಮಾತುಗಳು. ದೇವನೂರು ಮಹಾದೇವ ಅಂಥವರಿಗೆ ತಮ್ಮ ಪುಸ್ತಕದಲ್ಲಿ, ತಮ್ಮ ಮಾತುಗಳಲ್ಲಿ ಎಷ್ಟೇ ಸುಳ್ಳು ಗಳನ್ನು ಹೇಳಿದರೂ ಸಮಾಜ ದಲ್ಲಿನ ದಲಿತರ ಸಮಸ್ಯೆಗಳನ್ನು ಸರಿಪಡಿಸುವವರಲ್ಲ.

ಲೊಡ್ಡೆಗಳು ತಮ್ಮ ಪ್ರಚಾರದ ಬೇಳೆ ಬೇಯಿಸಿಕೊಳ್ಳಲು ಪರಿಶಿಷ್ಟ ಪಂಗಡದವರನ್ನು ಬಳಸಿಕೊಳ್ಳುತ್ತಾರಷ್ಟೆ. ಲೊಡ್ಡೆಗಳಿಗೆ ಅವರ ವಿಷಯ ಮಾತನಾಡಲಿಲ್ಲವೆಂದರೆ ನಿತ್ಯದ ಗಂಜಿ ಸಿಗುವುದಿಲ್ಲ. ಸದ್ದಿಲ್ಲದೆ ದಲಿತರ ಪರವಾಗಿ ಸಾವಿರಾರು ಸಮಾಜ ಮುಖಿ ಕೆಲಸ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿದ್ದಾರೆ.

ತಾವು ಮಾಡುವ ಕಾರ್ಯಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳದ ಕಾರಣ ಅವರು ಮಾಡುವ ಸಮಾಜಮುಖಿ ಕಾರ್ಯಗಳು ಮಾಧ್ಯಮಗಳಲ್ಲಿ ವರದಿಯಾಗುವುದಿಲ್ಲ. ಸುದ್ದಿಯಾಗದಿಲ್ಲದ ಕಾರಣಕ್ಕೆ ಲೊಡ್ಡೆಗಳು ತಮ್ಮ ಸಾಹಿತ್ಯದ ಮೂಲಕ ಜನರಿಗೆ ತಪ್ಪು ಸಂದೇಶಗಳನ್ನು ರವಾನಿಸುತ್ತಿರುತ್ತಾರೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಲೊಡ್ಡೆಗಳ ಬಣ್ಣ ಬಯಲಾದಾಗ, ಸಂಘದ ಹೆಸರನ್ನು ಅಡ್ಡ ತಂದು ದೇವನೂರು ಮಹಾದೇವ ಸುಳ್ಳಿನಿಂದಲೇ ಕೂಡಿದ ಕೃತಿಯನ್ನು ಬರೆದಿದ್ದರು. ಪರಿಶಿಷ್ಟ ಜನಾಂಗದ ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾದ ನಂತರ ಸಂಘದ ಸ್ಪಷ್ಟ ಉದ್ದೇಶ ಇಡೀ ದೇಶಕ್ಕೆ ತಿಳಿದಂತಾಗಿದೆ.

ಸಂಘದ ನಿಜವಾದ ಆಳ ಹಾಗೂ ಅಗಲವನ್ನು ಅರಿಯಬೇಕಾದರೆ ಬೀದಿಗಿಳಿದು ಸಮಾಜಮುಖಿ ಕೆಲಸಗಳನ್ನು ಮಾಡಿ, ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಬೇಕು, ಅದನ್ನು ಬಿಟ್ಟು ಪುಟಗಟ್ಟಲೆ ಬೊಗಳೆಗಳನ್ನು ಗೀಚುವುದಲ್ಲ.