ಹರೀಶ್ ಪುತ್ತೂರಾಯ
ದೇಶ ಪ್ರತಿನಿಧಿಸುವ ವ್ಯಕ್ತಿ ರಾಷ್ಟ್ರಪತಿ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಉಲ್ಲೇಖ ಮಾಡಿದ್ದು
ಅದರಂತೆಯೆ ರಾಷ್ಟ್ರದ ಪ್ರಥಮ ಪ್ರಜೆಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಐದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ರಾಮನಾಥ ಕೋವಿಂದ್ ಅವರಿಗೆ ವಿದಾಯ ಹೇಳಿ ನೂತನ ರಾಷ್ಟ್ರಪತಿಯವರನ್ನು ಸ್ವಾಗತಿಸುವ ಸುಯೋಗವಿದು.
ಈಗಾಗಲೇ ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರನ್ನು ಸಂವಿದಾನದಡಿಯಲ್ಲಿ ಗೆಲ್ಲಿಸಲಾಗಿದೆ. ಒಂದು ಬುಡಕಟ್ಟು ಜನಾಂಗದ ಹೆಣ್ಣು ಮಗಳು ರಾಷ್ಟ್ರದ ಯಜಮಾನಿಕೆಯ ಕಿರೀಟ ತೊಟ್ಟಿದ್ದಾರೆ. ಜಾರ್ಖಂಡ್‌ನ ಅತ್ಯಂತ ಕುಗ್ರಾಮದಿಂದ ಬಂದು ಇದೀಗ ರಾಷ್ಟ್ರದ ಚುಕ್ಕಾಣಿ ಹಿಡಿಯುತ್ತಿರು ವುದು ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಅಕ್ಷರಗಳು.
ಅವರ ಹೆಸರು ಘೋಷಿಸಿದಾಗ ಅವರು ಒಡಿಶಾದ ಶಿವನ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರಲ್ಲದೆ ದೇವಾಸ್ಥಾನದ ಆವರಣ ಸ್ವಚ್ಛಗೊಳಿಸುವ ವಿಡಿಯೋ ಕೂಡ ಸಾಮಾಜಿಕ ಜಾತಾಣಗಳಲ್ಲಿ ಸದ್ದು ಮಾಡಿತ್ತು. ಈ ಬೆಳವಣಿಗೆ ಬಳಿಕ ಅವರ
ಹುಟ್ಟೂರು ವಿದ್ಯುತ್ ಕಂಡಿದ್ದು ಅಲ್ಲಿನ ಜನರು ಸಂಭ್ರಮಿಸಿದ್ದರು. ದ್ರೌಪದಿ ಅವರ ಬದುಕು, ಹಿನ್ನೆಲೆ ಹಾಗೂ ಸಾಧನೆ ಬಗ್ಗೆ ಈಗಾಗಲೆ ಎಲ್ಲರಿಗೂ ತಿಳಿದಿರುವ ವಿಚಾರ. ತನ್ನ ಜೀವನವನ್ನು ಸಮಾಜ ಸೇವೆಗೆಂದೇ ಮುಡಿಪಾಗಿಟ್ಟಂತಹ ಬಡ
ಕುಟುಂಬದ ಮಹಿಳೆಯನ್ನು ಇದೀಗ ಭವ್ಯ ಭಾರತದ ಪ್ರಥಮ ಪ್ರಜೆಯನ್ನಾಗಿ ಆಯ್ಕೆ ಮಾಡಿರುವುದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಸಂಗಾತಿ.
ಸಮಾನತೆ ಹಾಗೂ ಸಮಾನ ಅವಕಾಶಗಳು ಮೂಲಭೂತ ಹಕ್ಕಾಗಿರುವ ರಾಷ್ಟ್ರದಲ್ಲಿ ಇಂಥದ್ದೊಂದು ಆಯ್ಕೆ ಮಹತ್ವದ ಸಂದೇಶ ನೀಡಲಿದೆ. ಕಳೆದ ಬಾರಿಯೇ 14ನೇ ರಾಷ್ಟ್ರಪತಿಯನ್ನಾಗಿ ದಲಿತರೊಬ್ಬರನ್ನು ಆಯ್ಕೆ ಮಾಡುವುದರೊಂದಿಗೆ ನಮ್ಮಲ್ಲಿ ಸಮಾನತೆ ಇದೆ ಎಂಬುದನ್ನು ರಾಜಕೀಯ ವಲಯ ತೋರಿಸಿತ್ತು. ಹೀಗಾದರೂ ದೇಶದಲ್ಲಿ ಇನ್ನೂ ಅಸ್ಪೃಶ್ಯತೆ
ಜೀವಂತವಾಗಿದೆ! ನೂತನ ರಾಷ್ಟ್ರಪತಿ ಯವರು ಈ ಪಿಡುಗಿಗೊಂದು ಪೂರ್ಣ ವಿರಾಮ ಹಾಕುವ ಕೆಲಸಕ್ಕೆ ಮುಂದಾಗಬೇಕಿದೆ. ದೇಶದ ಪ್ರತಿ ದೇವಾಲಯಗಳಲ್ಲೂ ಸಮಾನ ಅವಕಾಶ ಕಲ್ಪಿಸಿಕೊಡಬೇಕಿದೆ.
ರಾಷ್ಟ್ರವ್ಯಾಪಿ ಪ್ರವಾಸ ಮಾಡಿ ದೇಶದ ಮೂಲೆ ಮೂಲೆಗಳಲ್ಲಿರಬಹುದಾದ ಕೆಳವರ್ಗದ, ಬುಡಕಟ್ಟು ಮಂದಿಯ ಕಡೆಗಣನೆಗೆ ಕೊನೆ ಹಾಡಬೇಕಿದೆ. ಆರ್ಥಿಕ ಸಬಲತೆಯ ಜತೆಗೆ ಸಾಮಾಜಿಕ ಬದಲಾವಣೆಗೆ ಈ ಮೂಲಕ ದೇಶದ ವ್ಯವಸ್ಥೆಯಲ್ಲಿ ನಾಂದಿ
ಹಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು. ಅಸ್ಪೃಶ್ಯತೆ ಆಚರಣೆಯನ್ನು ಸಂವಿಧಾನ ನಿಷೇಧಿಸಿ 64 ವರ್ಷಗಳು ಕಳೆದಿದ್ದರೂ ಇಂದಿಗೂ ನಾಲ್ವರು ಭಾರತೀಯರಲ್ಲಿ ಒಬ್ಬರು ಅಸ್ಪೃಶ್ಯತೆ ಆಚರಣೆಯಲ್ಲಿ ತೊಡಗಿದ್ದಾರೆ.
ಇವತ್ತಿಗೂ ಈ ದೇಶದಲ್ಲಿ ಸಂವಿದಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳದೆ ಪ್ರತಿ ವಿಚಾರದಲ್ಲೂ ಕೇವಲ ರಾಜಕೀಯ ಲೆಕ್ಕಚಾರಗಳೇ ನಡೆಯುತ್ತಿದೆ. ದೇಶದ ಶೋಷಿತ ಸಮುದಾಯವನ್ನು ಈ ಚೌಕಟ್ಟಿನಿಂದ ಒಬ್ಬ ಬಡ ಕುಟುಂಬದ, ಬುಡಕಟ್ಟು ಜನಾಂಗದ ಹೆಣ್ಣಾಗಿ, ದೇಶದ ರಾಷ್ಟ್ರಪತಿಯಾಗಿ ಹೊರತರುವ ಕೆಲಸ ನಿಮ್ಮಿಂದ ಆಗಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ ಜನತೆ. ಜನರಿಗೆ ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ನಿರೀಕ್ಷೆಗಳಿವೆ. ಇದನ್ನು ತಲುಪುವ ಜತೆಗೆಗ ದೇಶದ ಸಂಪೂರ್ಣ ನ್ಯಾಯಬದ್ಧ ಜವಾಬ್ದಾರಿಯನ್ನು ಯಶಸ್ವಿಯಾಗಿ ನೀವು ಪೂರೈಸುವಂತಾಗಲಿ ಎಂಬುದು ಹಾರೈಕೆ.