Sunday, 15th December 2024

ನಿಂದನೆಗೆ ಅಂಜದ, ಅಳುಕದ ನಿಜ ಶರಣರು

ಪ್ರಸ್ತುತ

ವಿರಾಜ್.ಕೆ.ಅಣಜಿ 

ಶ್ರೀಜಗದ್ಗುರು ಮುರುಘಾಮಠ ಸದಾ ಸುದ್ದಿ ಯಲ್ಲಿರುವುದು ಹೊಸದೇನಲ್ಲ. ಜನಸಾಮಾನ್ಯರಿಗೆ ಶ್ರೀಮಠ ಎಂದಿಗೂ ತೆರೆದ ಮನೆ, ಜ್ಞಾನಶಾಲೆ.

ಸಮಾಜಮುಖಿ ಕೆಲಸಗಳ ಕಾರಗಳಿಂದಾಗಿ ಶ್ರೀಮಠದ ದಿಟ್ಟ ಹೆಜ್ಜೆಗಳು ಸದ್ದು ಮಾಡುತ್ತಲೇ ಇರುತ್ತವೆ. ಇದಕ್ಕೆಲ್ಲ ಪ್ರೇರಕ ಶಕ್ತಿಯೇ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು. ಶೂನ್ಯಪೀಠ ಮತ್ತು ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠಕ್ಕೆ ಶತಮಾನಗಳ ಇತಿಹಾಸವಿದೆ.

ಪೀಠಕ್ಕೆ ತನ್ನದೇ ಆದ ಆದರ್ಶಗಳು, ತತ್ತ್ವ ಗಳು, ವಿಚಾರಗಳಿವೆ. ಮಹಾ ಮಾನವತಾವಾದಿ ಬಸವೇಶ್ವರರ ಸಮ ಸಮಾಜ ನಿರ್ಮಾಣದ ಕನಸನ್ನು ಇಂದಿಗೂ ಮುರುಘಾ ಮಠ ತನ್ನ ಧ್ಯೇಯ ವನ್ನಾಗಿಸಿಕೊಂಡು ಮುಂದುವರಿಸಿಕೊಂಡು ಬರುತ್ತಿದೆ. ಮುರುಘಾ ಶರಣರು ಪೀಠಕ್ಕೆ ಬಂದ ನಂತರ ಶ್ರೀಮಠದ ಕೆಲಸ ಗಳಿಗೆ ಇನ್ನಿಲ್ಲದ ವೇಗ ಸಿಕ್ಕಿದೆ. ಮಠದ ಆಶ್ರಯದಲ್ಲಿ ಸರಿಸುಮಾರು ೧೦೦ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಕನಿಷ್ಠ ನಾಲ್ಕು ಸಾವಿರ ಜನರಿಗೆ ಉದ್ಯೋಗ ದೊರೆತಿದೆ.

ಅಂದರೆ, ನಾಲ್ಕು ಸಾವಿರ ಕುಟುಂಬಗಳು ನೆಮ್ಮದಿಯಿಂದ ಇರುವಂತೆ ಶ್ರೀಮಠ ನೆರಳಾಗಿದೆ. ಆದರೆ, ಇತ್ತೀಚಿಗೆ ಶ್ರೀಮಠ ಸುದ್ದಿಯಾಗಿದ್ದು ಅ ಕಾರಣದಿಂದ. ಯಾರದ್ದೋ ತಪ್ಪಿಗೆ ಇನ್ಯಾರಿಗೋ ಛಡಿ ಏಟು ನೀಡುವಂಥ ಸಂಚಿನಿಂದ. ಹಳ್ಳಕ್ಕೆ
ಬಿದ್ದವರಿಗೆ ಆಳಿಗೊಂದು ಕಲ್ಲು ಎಂಬಂತೆ, ವಿಷಯ ತಿಳಿದಿದ್ದೇ ತಡ, ಸಿಕ್ಕಸಿಕ್ಕವರೆಲ್ಲ ಮುರುಘಾ ಶ್ರೀಗಳ ವಿರುದ್ಧ ಮಾತಿನ ಕುಸ್ತಿಗೆ ಬಿದ್ದರು. ಮಾತುಗಳು ತಮ್ಮ ಇತಿಮಿತಿ ಮೀರಿ ಹೋಗಿದ್ದವು. ಆದರೆ, ಅವರಿಗೆಲ್ಲ ಭ್ರಮನಿರಸನ ಕಾದಿತ್ತು.

ಏನೆಲ್ಲ ಟೀಕೆ – ಟಿಪ್ಪಣಿಗಳ ಪ್ರವಾಹ ಬಂದರೂ ಮುರುಘಾ ಶ್ರೀಗಳು ಒಂದೂ ಮಾತನಾಡದೇ, ಶಾಂತ ಮೂರ್ತಿಯಾಗಿ ನಿಂತಿದ್ದರು. ವಿನಾ ಕಾರಣಕ್ಕೆ ಜಗಳಕ್ಕೆ ನಿಂತವರನ್ನು ಶ್ರೀಗಳು ಮೌನದಿಂದ ಸೋಲಿಸಿದ್ದರು, ಅದಕ್ಕಿಂತ ಹೆಚ್ಚಾಗಿ ಸವಾಲನ್ನು ಸಮರ್ಥವಾಗಿ ಎದುರಿಸಿ ಗೆದ್ದರು. ಇಲ್ಲಿ ಮಹಾತ್ಮ ಗಾಂಧೀಜಿಯ ಜೀವನದ ಒಂದು ಮುಖ್ಯಭಾಗ ಹೆಚ್ಚು ಪ್ರಸ್ತುತ ಎನಿಸುತ್ತದೆ. ನನ್ನ ಜೀವನದಲ್ಲಿ ನನಗೆ ಇಬ್ಬರನ್ನು ಸಂಭಾಳಿಸಲು, ಒಪ್ಪಿಸಲು ಆಗಲಿಲ್ಲ. ಒಬ್ಬರು ಮೊಹಮ್ಮದ್ ಅಲಿ ಜಿನ್ನಾ ಮತ್ತೊಬ್ಬ ಹರಿಲಾಲ್ ಗಾಂಧೀ ಎಂದು ಬಹಳಷ್ಟು ಬೇಸರದಿಂದ ಹೇಳಿಕೊಂಡಿದ್ದರು ಮಹಾತ್ಮ ಗಾಂಧೀಜಿ.

ಇದರಲ್ಲಿ ಹರಿಲಾಲ್ ಎಂಬಾತ ಗಾಂಧೀಜಿಯ ಹಿರಿಯ ಮಗ!. ಇಡೀ ಭಾರತವೇ ಗಾಂಧೀಜಿಯನ್ನು ಗೌರವಿಸಿ, ಆದರಿಸುತ್ತಿತ್ತು. ಬ್ರಿಟಿಷರ ಬಂದೂಕುಗಳೇ ಗಾಂಧಿ ಎದುರು ನಿಶಬ್ದವಾಗುತ್ತಿದ್ದವು. ಅಂಥ ಧೀವಂತ ವ್ಯಕ್ತಿ ಗಾಂಧೀಜಿಗೆ ಮಗ ಹರಿಲಾಲನನ್ನು ಸಂಭಾಳಿಸುವುದು ಕೊನೆಯವರೆಗೂ ಆಗಲೇ ಇಲ್ಲ. ಹಾಗೆಯೇ, ಮಗನಾದ ಮಾತ್ರಕ್ಕೆ ಹರಿಲಾಲರೂ ತನ್ನ ತಂದೆಯಂತೆಯೇ ಇರಬೇಕೆಂದಿಲ್ಲ.ಹರಿಲಾಲರಿಗೂ ತನ್ನದೇ ಯೋಚನಾ ಶಕ್ತಿ, ಬುದ್ಧಿ, ಸ್ನೇಹಿತರ ವರ್ಗ ಎಂಬುದೆಲ್ಲ ಇರುತ್ತದೆ. ಅದರಿಂದಲೇ
ಅವರ ವ್ಯಕ್ತಿತ್ವ ರೂಪುಗೊಂಡಿರುತ್ತದೆ ಅಲ್ಲವೇ? ಮಗನನ್ನು ತಿದ್ದಲಾಗದ ಗಾಂಧೀಜಿ ಒಬ್ಬ ವಿಫಲ ತಂದೆ ಎಂಬ ವಾದವನ್ನು ಮಾತಿಗೆ ಒಪ್ಪಿಕೊಳ್ಳುವುದಾದರೂ, ಇಲ್ಲಿ ವಿಫಲವಾಗಿದ್ದು ಹರಿಲಾಲರೇ ವಿನಾ ಮೋಹನದಾಸರಲ್ಲ ಎಂಬುದು ಅಷ್ಟೇ ಸತ್ಯ. ಆದರೆ, ಹರಿಲಾಲ ಸರಿಯಿಲ್ಲ ಎಂದು ಗಾಂಧೀಜಿಯನ್ನು ತಿವಿದರೆ ಏನು ಪ್ರಯೋಜನ? ಮಠಗಳು ಕುಟುಂಬದ ಕೈಹಿಡಿತಕ್ಕೆ ಸಿಕ್ಕಿ ನಲುಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿರುವುದು ನಿನ್ನೆ ಮೊನ್ನೆಯದಲ್ಲ.

ಇದಕ್ಕೆ ಯಾವ ಮಠಗಳೂ ಹೊರತಾಗಿಲ್ಲ. ಆದರೆ, ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಈ ವಿಚಾರದಲ್ಲಿ ಮುರುಘಾಮಠ ಟೀಕಿಗೆ ಒಳಪಟ್ಟಷ್ಟು ಇನ್ನ್ಯಾವುದೇ ಮಠಕ್ಕೆ ಮಾತಿನ ಕಲ್ಲುಗಳು ಬಿದ್ದಿಲ್ಲ. ಇದಕ್ಕೆ ಕಾರಣ, ಶ್ರೀಗಳ ದೃಢ ನಿಲುವು ಎಂದರೆ ತಪ್ಪಾಗದು. ಅವರು ಎಂದೂ ತಮ್ಮ ನಂಬಿಕೆ, ಸಿದ್ಧಾಂತ, ಬಸವಣ್ಣನವರ ಆದರ್ಶಗಳ ಪಾಲನೆಯಲ್ಲಿ ರಾಜಿಯಾದವರಲ್ಲ. ಅದಕ್ಕಾಗಿ ಎಂತಹದ್ದೇ ಅಪಾಯ ಎದುರಿಸಲೂ ಸಿದ್ಧ ಎಂದು ಗಟ್ಟಿಯಾಗಿ ನಿಂತವರು.

ಇದೇ ಕಾರಣಕ್ಕೆ ಅವರಿಗೆ ವಿರೋಧಿಗಳ ಗುಂಪೂ ಹೆಚ್ಚು. ವಿಚಾರಗಳಲ್ಲಿ ಎದುರಿಸಲಾಗದೇ, ಅನ್ಯ ಮಾರ್ಗಗಳಲ್ಲಿ ಕೊಂಕು ತಗೆದು, ಶ್ರೀಗಳ ಹೆಜ್ಜೆಗೆ ತೊಡರುಗಾಲು ಹಾಕಲು ಹೊಂಚು ಹಾಕುತ್ತಾರೆ. ಅದಕ್ಕೆಲ್ಲ ಎಂದೂ ಶ್ರೀಗಳು ಜಗ್ಗಿಲ್ಲ, ಕುಗ್ಗಿಲ್ಲ. ತಮ್ಮ
ಕಾರ್ಯಗಳಿಂದ ಹಿಂದೆ ಸರಿದಿಲ್ಲ. ಮುರುಘಾ ಶರಣರು ಏನೇ ಮಾಡಿದರೂ ವಿವಾದ ಸೃಷ್ಟಿಸುವ ದೊಡ್ಡ ವರ್ಗವೇ ಇದೆ ಎಂಬುದು ಅಚ್ಚರಿ ಎನಿಸಿದರೂ ಸತ್ಯ. ಶ್ರೀಗಳ ಸಮಾಜಮುಖಿ, ವೈಚಾರಿಕ ಹೆಜ್ಜೆಗಳನ್ನು ಮೆಚ್ಚುವ, ಅವುಗಳನ್ನು ಪಾಲಿಸುವರರ
ಸಂಖ್ಯೆ ಎಷ್ಟಿದೆಯೋ, ಅಷ್ಟೇ ಪ್ರಮಾಣದಲ್ಲಿ ಶ್ರೀಗಳ ಎಲ್ಲ ಕೆಲಸಗಳ ವಿರುದ್ಧ ಸಿಡಿದೇಳುವವರ ಸಂಖ್ಯೆಯೂ ದೊಡ್ಡದು.

ಬಸವಣ್ಣನ ಪ್ರತಿಮೆ ಮಾಡುತ್ತೇವೆ ಎಂದರೂ ತಪ್ಪು, ಅಂತರ್ಜಾತಿ ಮದುವೆ ಮಾಡಿದರೂ ತಪ್ಪು, ಎಲ್ಲರೂ ಸಹಬಾಳ್ವೆಯಿಂದ, ಸಮಜೀವನ ನಡೆಸಿ ಎಂದರೂ ತಪ್ಪು. ಒಟ್ಟಿನಲ್ಲಿ ಅವರು ಏನೇ ಮಾಡಿದರೂ ತಪ್ಪು. ಇದೆಲ್ಲವೂ ಶ್ರೀಗಳಿಗೆ ಗೊತ್ತಿಲ್ಲ ಎಂದೇನಿಲ್ಲ.
ಅವರು ಎಂದೂ ತಾನು ಮಾಡಿದ್ದೇ ಸರಿ ಎಂದು ಕಟ್ಟಪ್ಪಣೆಯನ್ನೂ ಹೊರಡಿಸಿಲ್ಲ. ‘ವಿಚಾರಭೇದ ಇದ್ದವರನ್ನು ಚರ್ಚೆಗೆ ಬನ್ನಿ’ ಎಂದು ಮುಕ್ತ ಮನಸ್ಸಿನಿಂದ ಆಹ್ವಾನಿಸಿದ್ದಾರೆ.

ಒಂದೊಳ್ಳೆ ಚರ್ಚೆಯಿಂದಾಗಿ ಸಮಾಜಕ್ಕೆ ಒಳ್ಳೆಯದಾಗಲಿದೆ ಎಂಬುದಿದ್ದರೆ ಮುರುಘಾಮಠ ಎಂದಿಗೂ ನಿಮ್ಮನ್ನು ಸಹೃದಯ ದಿಂದ ಸ್ವಾಗತ ಮಾಡುತ್ತದೆ ಎಂದು ಬಹಳಷ್ಟು ಸಂದರ್ಭಗಳಲ್ಲಿ, ಸಮಾರಂಭಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇದುವರೆಗೂ
ಸೌಹಾರ್ದಯುತ ಚರ್ಚೆ ಮಾಡುವ ಮನಸ್ಸುಗಳು ಶ್ರೀಮಠದತ್ತ ಮುಖ ಮಾಡಿಲ್ಲ. ಆದರೆ, ದೂರದಲ್ಲೆಲ್ಲೋ ಕುಳಿತು ತೌಡು ಕುಟ್ಟುವುದನ್ನೂ ಬಿಟ್ಟಿಲ್ಲ. ಅದೇ ಅವರ ಉದ್ಯೋಗ ಆಗಿದ್ದರೆ, ಅಂತಹವರ ಬಗ್ಗೆ ಶ್ರೀಗಳು ಏನು ತಾನೆ ಮಾಡಿಯಾರು?
ಸತಿಪತಿ, ಮಕ್ಕಳು, ತಂದೆ – ತಾಯಿ ಸಮೇತ ಇರುವುದನ್ನು ಕುಟುಂಬ ಎನ್ನುತ್ತೇವೆ.

ಒಂದೇ ಮನೆಯಲ್ಲಿ ಇದ್ದರೂ ಯಾರು ಏನು ಮಾಡುತ್ತಿದ್ದಾರೆ, ಅವರ ಯೋಚನೆ ಏನು, ಮನಸ್ಥಿತಿ ಏನು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವುದು ಅಷ್ಟು ಸುಲಭವಲ್ಲ. ಅಂತಹದರಲ್ಲಿ ಸಂಸ್ಥೆಯ ಪ್ರತಿ ಉದ್ಯೋಗಿಯ ನಡವಳಿಕೆಯನ್ನು ಹಿಡಿದಿಡುವುದಾದರೂ ಹೇಗೆ ಎಂದೂ ಯೋಚಿಸಬೇಕಲ್ಲವೇ? ಇದು ಪಲಾಯನ ವಾದವಲ್ಲ. ಮಗನೇ ಅಪ್ಪನ ಕಣ್ತಪ್ಪಿಸಿ ತಪ್ಪು
ಮಾಡುವಂಥ ಸ್ಥಿತಿ ಇರುವಾಗ, ಯಾರೋ ಒಬ್ಬರು ತಮ್ಮ ವೈಯಕ್ತಿಕ ಜೀವನದಲ್ಲಿ ಮಾಡಿದ ತಪ್ಪಿಗೆ ಸಂಸ್ಥೆಯ ಮುಖ್ಯಸ್ಥನನ್ನು ಹೊಣೆ ಮಾಡುವುದು ಎಷ್ಟು ಸಮಂಜಸ? ಜತೆಗೆ ಇಲ್ಲಿ ಪ್ರಮಖ ಅಂಶಗಳೆಂದರೆ, ಕುಟುಂಬದ ಒಬ್ಬರು ಸನ್ಯಾಸತ್ವ ಸ್ವೀಕರಿಸಿ ಒಂದು ಮಠದ ಪೀಠಾಧಿಪತಿಯಾದರೆ ನಮ್ಮ ವಿದ್ಯಾರ್ಹತೆಗೆ ತಕ್ಕಂತೆ ಅಲ್ಲಿ ಕೆಲಸಕ್ಕೆ ಸೇರುವುದು ತಪ್ಪೇ? ಸ್ವಾಮೀಜಿಗಳ ಪೂರ್ವಾಶ್ರಮದವರು ಎಂಬ ಒಂದೇ ಕಾರಣಕ್ಕೆ, ಅರ್ಹತೆ ಇದ್ದರೂ ಮನ್ನಣೆ ಕೊಡದಿದ್ದರೆ ಅವರಿಗೆ ಅನ್ಯಾಯ ಮಾಡಿದಂತೆ
ಅಲ್ಲವೇ? ಎಲ್ಲವನ್ನೂ ಯೋಚನೆ ಮಾಡಲೇ ಬೇಕಲ್ಲವೇ?

ಮುರುಘಾಮಠದಲ್ಲಿ ಹಿಂದೆ ಕಾರ್ಯ ನಿರ್ವಹಣಾಧಿಕಾರಿ ಆಗಿದ್ದವರ ವಿರುದ್ಧ ಮಹಿಳೆಯೊಬ್ಬರು ಇದೇ ಜನವರಿಯಲ್ಲಿ ದೂರು
ದಾಖಲಿಸಿದ್ದರು. ಆದರೆ, ಆ ವ್ಯಕ್ತಿಯನ್ನು ಶ್ರೀಮಠದಿಂದ ಕಳೆದ ನಾಲ್ಕು ತಿಂಗಳ ಹಿಂದೆಯೇ ಮಠದ ಎಲ್ಲ ಕೆಲಸಗಳಿಂದ ಬಿಡುಗಡೆ ಮಾಡಿ, ರಾಜೀನಾಮೆ ಪಡೆಯಲಾಗಿತ್ತು. ಇಲ್ಲಿ ಕುತೂಹಲಕಾರಿ ಅಂಶ ವೆಂದರೆ, ಮಠಕ್ಕೂ ಆ ವ್ಯಕ್ತಿಗೂ ಸಂಬಂಧ ಕಳಚಿ ನಾಲ್ಕು ತಿಂಗಳಾಗಿತ್ತು. ಅಂದರೆ, ದೂರು ದಾಖಲಾಗಿದ್ದು ನಾಲ್ಕೈದು ತಿಂಗಳ ನಂತರವೇ. ಇಲ್ಲಿ ಬೇಕಂತಲೇ ಮುರುಘಾ ಶ್ರೀಗಳ ಹೆಸರನ್ನು ಈ ಕೇಸಿನ ಜತೆ ತಳುಕು ಹಾಕಲಾಯಿತು.

ಅದಕ್ಕೆ ಇನ್ನಷ್ಟು ಪುಷ್ಟಿ ನೀಡಲು, ಆ ವ್ಯಕ್ತಿ ಶ್ರೀಗಳ ಪೂರ್ವಾಶ್ರಮದ ಸಹೋದರ ಎಂಬ ಅಂಶವನ್ನು ಎತ್ತಿ ಆಡಲಾಯಿತು.
ಎಂಥವರಿಗಾದರೂ ಇದು ಯಾರದ್ದೋ ಕುಮ್ಮಕ್ಕಿನಿಂದ ದಾಖಲಾದ ದೂರು ಅನಿಸುತ್ತದೆ. ಒಟ್ಟಿನಲ್ಲಿ ಏನಾದರೂ ಮಾಡಿ, ಶ್ರೀಗಳಿಗೆ ತೊಡರು ಹಾಕಬೇಕು ಎಂಬುದಷ್ಟೇ ಉದ್ದೇಶ. ಅದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯವಂಥ ಅಜ್ಞಾನ, ಅಂಧಕಾರ
ಪ್ರದರ್ಶನವಷ್ಟೇ. ಕಠಿಣ ನಿರ್ಧಾರಗಳನ್ನು ತಗೆದುಕೊಳ್ಳಲು ಹಿಂದೇಟು ಹಾಕದ ಶ್ರೀಗಳು, ಮಠದ ಹೆಸರಿಗೆ ಸಣ್ಣ ಕಳಂಕ ಬಂದರೂ ಸಹಿಸದೇ ಕಠಿಣ ಕ್ರಮ ಜರುಗಿಸುತ್ತಾರೆ ಎಂಬ ಧಾಟಿಯಲ್ಲಿ ವಿರೋಧಿಗಳು ಮ್ಮೆಯೂ ಯೋಚನೆ ಮಾಡಲ್ಲಿಲ್ಲ ಎನಿಸುತ್ತದೆ.

ಎಷ್ಟೆಲ್ಲ ಕೆಸರೆರಚಾಟ ನಡೆದಿದ್ದರೂ ಶ್ರಿಗಳು ಮೌನವಾಗಿದ್ದದ್ದು ಪೀಠದ ಗೌರವ ಕಾಪಾಡಿಕೊಳ್ಳಲು ಬುದು ಶ್ರೀಮಠದ ನಿಜ ಭಕ್ತರಿಗೆ ಗೊತ್ತಿತ್ತು. ಆದ್ದರಿಂದಲೇ ಮುರುಘಾಮಠದ ಹೆಸರನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಂಡು, ಬೇರೆ
ವಿಚಾರಗಳ ಜತೆ ತಳುಕು ಹಾಕಬಾರದು ಎಂದು ಕೋರ್ಟ್ ಆದೇಶದವರೆಗೆ ಸುಮ್ಮನಿದ್ದರು. ಅದರ ನಂತರವೇ ಶ್ರೀಗಳು ಸಮಾಜಕ್ಕೆ ಸಂದೇಶ ಕೊಟ್ಟು, ಮಾಧ್ಯಮಗಳ ಜತೆ ಮಾತನಾಡಿದರು. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ. ಈ ವಿಚಾರದಲ್ಲಿ
ನಮ್ಮ ನಿಲುವು ಸ್ಪಷ್ಟ ಎಂದರು. ಎಲ್ಲರ ಭಾವ – ಸ್ವಭಾವಗಳು ಒಂದೇ ಆಗಿರುವುದಿಲ್ಲ.

ಆದರೆ, ಮಠದ ಹೆಸರಿಗೆ ಕಳಂಕ ಆಗುವಂಥ ಸಣ್ಣ ಸೂಚನೆ ಸಿಕ್ಕ ತಕ್ಷಣವೇ ಶಿಕ್ಷೆಯ ರೂಪದಲ್ಲಿ ಮಠದ ಕೆಲಸದಿಂದ ವಜಾ ಮಾಡಿದ ವಿಷಯವನ್ನೂ ಹೇಳಿದರು. ಹಿಂದಿನ ಆಡಳಿತಾಧಿಕಾರಿಗಳ ಕಾಲದಲ್ಲಿ ನೇಮಕವಾಗಿದ್ದ ತಮ್ಮ ಪೂರ್ವಾಶ್ರಮದ
ಎಲ್ಲರನ್ನೂ ಕೆಲಸದಿಂದ ಮುಕ್ತಿ ಮಾಡಿದರು. ಅವರೂ ಕೂಡ, ಶ್ರೀಮಠ ಮತ್ತು ಶ್ರೀಗಳ ಗೌರವಕ್ಕೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ ವಿಚಾರಗಳನ್ನು ಮುಕ್ತವಾಗಿ ಹೇಳಿಕೊಂಡರು.

ಮಠಗಳು ಸಂಬಂಧಗಳ ಸಂಕೋಲೆಗೆ ಸಿಲುಕಿವೆ ಎಂಬ ಆರೋಪದಿಂದ ಮುಕ್ತವಾಗಲು ಇತರ ಎಲ್ಲ ಮಠಗಳಿಗೆ ಮುರುಘಾ ಶ್ರೀಗಳು ಕೈಗೊಂಡಿದ್ದ ಈ ನಿರ್ಧಾರ ಒಂದು ಮಾದರಿ ಎನಿಸಿತ್ತು. ಎದುರಾಳಿಗಳು ಎಸೆದ ಕಲ್ಲನ್ನು ಬಳಸಿ ಮೆಟ್ಟಿಲು ಮಾಡಿ ಕೊಂಡಿದ್ದ ಶ್ರೀಗಳ ಈ ನಿಲುವಿಗೆ ವಿರೋಧಿಗಳೂ ಒಮ್ಮೆ ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ. ಆದರೂ, ಮತ್ತೇನಾದರೂ ಯತ್ನ ಮಾಡಬಹುದೇ ಎಂಬುದರ ಫಲವೇ ಈಗಿನ ದೋಷಾರೂಪಣೆ.

ಮುರುಘಾ ಶ್ರೀಗಳು ರಚಿಸಿರುವ ‘ಅಭಿವೃದ್ಧಿಯ ಹಾದಿಗೆ, ಕಲ್ಲು ಮುಳ್ಳುಗಳ ಹಾಸಿಗೆ’ ಎಂಬ ಕಿರುಹೊತ್ತಗೆಯನ್ನು ಒಮ್ಮೆ ಓದಲೇಬೇಕು. ಅದರಲ್ಲಿ ನಿರ್ಭೀತವಾಗಿ ಮಠದಲ್ಲಾದ ಎಲ್ಲ ಹಣಕಾಸಿನ ವಿಚಾರ, ಆಡಳಿತ ಮಾಡುತ್ತಿದ್ದವರ ಕೆಲ ನಿರ್ಧಾರಗಳಿಂದ ಮಠಕ್ಕೆ ಆದ ಕಷ್ಟ, ನಷ್ಟಗಳ ಬಗ್ಗೆ ಸವಿವರ ದಾಖಲೆಗಳಿವೆ. ಶ್ರೀಮಠದ ವಿದ್ಯಾಸಂಸ್ಥೆಗಳಿಗೆ ಸಂಚಕಾರ ಬಂದಾಗ, ಶ್ರೀಗಳು ಗಟ್ಟಿ ನಿಲುವುಗಳನ್ನು ತಗೆದುಕೊಂಡಿದ್ದರಿಂದ ಇಂದಿಗೂ ವಿದ್ಯಾಪೀಠ ಮಧ್ಯಕರ್ನಾಟಕಕ್ಕೆ ಜ್ಞಾನ
ದಾಸೋಹ ನೀಡುತ್ತಿದೆ.

ಎಂತಹದ್ದೇ ಆರೋಪ, ಕಷ್ಟ,ನಷ್ಟಗಳು ಬಂದರೂ ಮಠದಲ್ಲಿ ಅನ್ನ ದಾಸೋಹ ನಿಂತಿಲ್ಲ. ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಅಲೆಮಾರಿಗಳ ಬದುಕು ಅತಂತ್ರವಾದಾಗ ಅವರ ರಕ್ಷಣೆಗೆ ಮುಂದೆ ಬಂದದ್ದೇ ಮುರುಘಾ ಶ್ರೀಗಳು. ಎಲ್ಲರೂ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ಮನೆಯಲ್ಲಿ ಅಡಗಿದ್ದಾಗ, ಅಲೆಮಾರಿಗಳ ಹಸಿವು ತಣಿಸಲು ಮುರುಘಾಮಠವಿದೆ ಎಂದು ಶ್ರೀಗಳು ಪ್ರತಿದಿನ ಊಟ, ದವಸ – ಧಾನ್ಯಗಳ ವ್ಯವಸ್ಥೆ ಮಾಡುತ್ತಿದ್ದರು.

ಇದೆಲ್ಲವನ್ನು ಮಾಡುವುದು ಶ್ರೀಮಠದ ಜವಾಬ್ದಾರಿಯಷ್ಟೇ. ಇದನ್ನು ಸೇವೆ ಎಂದು ಹೇಳುವುದು ಅತ್ಯಂತ ದೊಡ್ಡ ಪದವಾಗು ತ್ತದೆ ಎಂಬ ನಿರ್ಮಲವಾದ ಚಿಂತನೆಗಳನ್ನು ಶ್ರೀಗಳು ಹಂಚಿಕೊಂಡಿದ್ದರು. ಮುರುಘಾ ಶ್ರೀಗಳ ಬದುಕು ಎಂದಿಗೂ ತೆರೆದ
ಪುಸ್ತಕದಂತಿದೆ. ಸಮಾಜಕ್ಕೆ ತಮ್ಮ ಬದುಕನ್ನು ಅರ್ಪಿಸಿಕೊಂಡವರ ಬದುಕು ಆದಷ್ಟು ಸ್ಪಷ್ಟವಾಗಿ ಕಾಣುವಂತೆ ಇರಬೇಕು ಎಂಬ ಆಶಯದಿಂದಲೇ ಆತ್ಮಚರಿತ್ರೆ ರಚಿಸಿದ್ದಾರೆ, ಅದರ ಹೆಸರೇ ‘ಅಗ್ನಿಗಾನ’.

ಒಬ್ಬ ಸನ್ಯಾಸಿಯ ಆತ್ಮಚರಿತ್ರೆಗೆ ಅತ್ಯಂತ ಅರ್ಥಪೂರ್ಣವಾಗಿ ಹೊಂದುವ ಹೆಸರದು. ಅಗ್ನಿಗಾನದಲ್ಲಿ ಶ್ರೀಗಳು ತಮ್ಮ ಬದುಕಿನ ಇಂಚಿಂಚೂ ವಿಚಾರಗಳನ್ನು ಮುಚ್ಚುಮರೆಯಿಲ್ಲದೇ ಬಿಚ್ಚಿಡುತ್ತಾ ಹೋಗಿದ್ದಾರೆ. ತಮ್ಮ ಬದುಕಿನ ಆರಂಭ, ಅಲ್ಲಿ ಆದ
ತಿರುವುಗಳು, ಜೀವನದ ಪಥ ಬದಲಾದ ಸನ್ನಿವೇಶ, ವೈಯುಕ್ತಿಕ ಬದುಕನ್ನು ಬಿಟ್ಟು, ಸಮಾಜಕ್ಕೆ ಬದುಕನ್ನು ಅರ್ಪಿಸಿಕೊಂಡ ಬಳಿಕ ಆದ ಅನುಭವ, ಸನ್ಯಾಸ ಜೀವನದ ಕಷ್ಟಗಳು, ಶಿರಸಿ, ಹಾವೇರಿ ಮಠದಲ್ಲಿದ್ದಾಗ ಎದುರಾದ ಸವಾಲುಗಳು, ಅವುಗಳನ್ನು ಎದುರಿಸಿದ ರೀತಿ, ಬದುಕಿನ ಅಂತಿಮ ಗುರಿ, ಅದಕ್ಕಾಗಿ ಇಡುತ್ತಿರುವ ಹೆಜ್ಜೆಗಳೇನು ಎಂಬ ಎಲ್ಲ ವಿಚಾರಗಳನ್ನು ದಾಖಲಿಸಿದ್ದಾರೆ.

ಬಹುಶಃ, ಹೀಗೆ ಧೈರ್ಯವಾಗಿ, ಮುಕ್ತಮನಸ್ಸಿನಿಂದ ತಮ್ಮ ಮನದ ಭಾವನೆಗಳನ್ನು ತೋಡಿಕೊಂಡ ಮತ್ತೊಬ್ಬ ಸನ್ಯಾಸಿ, ಸಾಹಸಿ ಯನ್ನು ಈಗಿನ ಕಾಲಮಾನದಲ್ಲಿ ಹೆಸರಿಸುವುದು ಕಷ್ಟ. ಇನ್ನು ನೂರಾರು ಕಷ್ಟಗಳು ಬಂದರೂ ಮುರುಘಾ ಶ್ರೀಗಳ ಇಚ್ಛಾಶಕ್ತಿ ಯು ದುರ್ಗದ ಬಂಡೆಗಳಷ್ಟೇ ಕಠಿಣ. ದುರ್ಬಲರನ್ನು ಕಂಡಾಗ ಮಿಡಿಯುವ ಅವರ ಮನಸ್ಸು ಮುರುಘಾವನದ ಹೂಗಳಷ್ಟೇ ನಿರ್ಮಲ, ಪರಿಮಳ ಎಂದಷ್ಟೇ ಅಂತಿಮವಾಗಿ ಹೇಳಬಹುದು. ಇದೆಲ್ಲವೂ ಶ್ರೀಗಳನ್ನು ಹೊಗಳುವುದಕ್ಕಾಗಲಿ, ಅಟ್ಟಕ್ಕೇರಿಸುವ
ಉದ್ದೇಶದಿಂದ ಹೇಳುತ್ತಿರುವುದಲ್ಲ. ‘ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ’ ಎಂದು ದೂಷಿಸುವ ಮನದ ಸಂಕೋಲೆಯಿಂದ ಹೊರಬನ್ನಿ ಎಂಬುದಷ್ಟೇ.