Sunday, 15th December 2024

ಸಾಹಿತ್ಯ, ಸಂಗೀತದ ಆಸಕ್ತಿ ಇಲ್ಲದವ…

ದಾಸ್ ಕ್ಯಾಪಿಟಲ್‌

dascapital1205@gmail.com

ಈ ಭೌತಿಕವಾದ ಜಗತ್ತಿನಲ್ಲಿ, ವಿಭಿನ್ನವಾದ ಜಂಜಡತೆಗಳಲ್ಲಿ, ಎಲ್ಲ ಬಗೆಯ ಮಾನಸಿಕ ವಿಕಾರಗಳಿಗೆ ಬಿಡುಗಡೆಯನ್ನು ಕೊಡುವ, ದೈವಿಕವಾದ ಶಕ್ತಿಯನ್ನು ಅಮೂರ್ತಗೊಳಿಸುವ, ಹಾಗೆಯೇ ಪರಮಾನಂದದಾಯಕ ಸ್ಥಿತಿಯನ್ನು ಪೂರ್ಣ ಪ್ರಮಾಣ ದಲ್ಲಿ ಒದಗಿಸಬಲ್ಲ ಎರಡು ವಿರಾಟ್ ಶಕ್ತಿಗಳೆಂದರೆ ಸಂಗೀತ ಮತ್ತು ಸಾಹಿತ್ಯ. ಸಂಗೀತವು ಬದುಕಿನ ತನ್ಮಯತೆಯ ಸ್ಥಾಯೀ ಭಾವವನ್ನು ಉನ್ನತ ಸ್ಥಿತಿಯಲ್ಲಿ ಕೊಂಡೊಯ್ಯುತ್ತದೆ.

ಆ ಸ್ಥಿತಿಯಲ್ಲಿಯೇ ಪರಮಸುಖವನ್ನು ಕೊಡುತ್ತದೆ. ಸುಖವನ್ನು ಅದರ ಅತೀವವಾದ ಸ್ಥಿತಿಯಲ್ಲಿ ಸುಖಿಸುವಂತೆ ಮಾಡುವ ಶಕ್ತಿಯಿದ್ದರೆ ಅದು ಸಂಗೀತಕ್ಕೆ ಮಾತ್ರ ಎಂಬುದು ಎಲ್ಲರಿಗೂ ಅನುಭವಜನ್ಯವಾದ ಸತ್ಯ. ಎಂಥ ವಿಷಮ ಪರಿಸ್ಥಿತಿಯಲ್ಲೂ ಸಂಗೀತದಲ್ಲಿ ಮನುಷ್ಯ ತನ್ಮಯತೆಯನ್ನು ಕಾಣಲು ಸಾಧ್ಯವಿದೆ ಎಂದು ನಮ್ಮ ಪೂರ್ವಸೂರಿಗಳು ಕಂಡುಕೊಂಡರು. ಇದೊಂದು ದೈವೀ ಸಾಕ್ಷಾತ್ಕಾರದ ಪರಮೋಚ್ಛ ಅವಸ್ಥೆ.

ತನ್ಮಯತೆಯನ್ನು ಅನುಭವಿಸುವುದಷ್ಟೇ ಅಲ್ಲದೆ, ಭಾವದ ಜತೆ ಮನಸ್ಸು ಲೀನವಾ ಗುತ್ತದೆ; ಕಾಲ ದೇಶಗಳನ್ನೆಲ್ಲ ಮೀರಿದ ಅತೀತದಲ್ಲಿ ಮೈಮರೆಯುತ್ತಾನೆ ಮನುಷ್ಯ. ಲೈಂಗಿಕ ಕ್ರಿಯೆಯಲ್ಲಿ ಮನುಷ್ಯ ಅಹಂ ತೊರೆಯುತ್ತಾನೆ ಎನ್ನುತ್ತಾರೆ ಶಾಸಕಾರರು. ಸಂಗೀತದಲ್ಲೂ ಆಗುವುದು ಇದೇ ಕ್ರಿಯೆ. ಅಹಂಭಾವದ ಪ್ರe ಕಳಚಿಕೊಳ್ಳುವುದು ಉತ್ಕಟವಾದ ಭಾವುಕ ಸ್ಥಿತಿಯಲ್ಲಿಯೇ ಅಲ್ಲವೇ? (ಭಕ್ತಿಯ ಪಾರಮ್ಯದಲ್ಲೂ ಅಹಂಕಾರ ಕಳಚುತ್ತದೆ ಎಂಬುದನ್ನು ಸಂತ ಮೀರಾ, ಕಬೀರದಾಸ, ಅಕ್ಕಮಹಾದೇವಿ, ಚೈತನ್ಯ ಮಹಾಪ್ರಭುಗಳ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ವೇದ್ಯವಾಗುತ್ತದೆ). ನಾದದಿಂದಲೇ ಈ ತಾಕತ್ತು ಬರುವುದೆಂದು ನನಗನಿಸುವುದು.

ನಾದಬ್ರಹ್ಮದ ಕಲ್ಪನೆ ಈ ಬಗೆಯ ಅನನ್ಯವಾದ ಅಮೂರ್ತ ಅನುಭಾವದ ಸ್ಪಷ್ಟತೆಯಿಂದಾಗಿ ಮೂರ್ತರೂಪವನ್ನು ಪಡೆಯಿ ತೇನೋ! ನಿರಂತರವಾದ ಅನುಭೂತಿಯಿದು. ಬಿಂದು, ಕಲಾ, ಶಾಂತ, ಅತಿಶಾಂತ- ಎಂಬೀ ನಾಕು ರೂಪಗಳು ಅವ್ಯಕ್ತವಾಗಿ ಜೊತೆಗೂಡಿದಾಗ, ಪ್ರಣವದ ಉನ್ಮಾದದ ಸ್ಥಿತಿಯು ಹೊರಹೊಮ್ಮಿದ ಓಂಕಾರ ನಾದವು ನಾಭಿಯಿಂದ ಹೊರಟು ಸತ್ತ್ವಶಾಲೀ ಯಾದ ಕಂಪನವನ್ನು ಹೊರಹೊಮ್ಮಿಸುತ್ತದೆ. ಈ ಕಂಪನ ಅವ್ಯಕ್ತವಾದ ಶಕ್ತಿಯನ್ನು ಹೊರನೂಕುತ್ತಿರುತ್ತದೆ.

ನಾದವು ಕಲೆಯಾಗಿ, ಸ್ಪಷ್ಟರೂಪವನ್ನು ಕಂಠರೂಪದಲ್ಲಿ ಅಭಿವ್ಯಕ್ತಿಯಾಗಿ ಮುಂದೆ ಶಾಂತ, ಅತಿಶಾಂತದಲ್ಲಿ ಲಯ ಗೊಂಡಾ ಗಲೇ ಶ್ರೋತೃ ರಸಾನುಭೂತಿಯನ್ನು ಪಡೆಯುವುದು. ಇದು ಮನಸ್ಸನ್ನು ಮುದವಾಗಿಸುವ ನಿರಂತರ ಕ್ರಿಯೆ-ಪ್ರಕ್ರಿಯೆ. ಇದರಲ್ಲಿ ದರ್ದ ಇರುವುದಿಲ್ಲ. ಈ ಶಕ್ತಿ ಅಸಾಮಾನ್ಯವಾದುದು, ಅನನ್ಯವಾದುದು. ಗಾನಕೆ ನಲಿಯದ ಮನಸೇ ಇಲ್ಲ; ಗಾನಕೆ ಒಲಿಯದ ಜೀವವೇ ಇಲ್ಲ.

ಸಂಗೀತದ ಪರಮಾದ್ಭುತವಾದ ಶಕ್ತಿಯಿದು. ಹರಿದಾಸರು, ತಾನಸೇನರು, ಮೀರಾಬಾಯಿ, ಕಬೀರರು, ಪುರಂದರದಾಸರು, ಕನಕರು, ತ್ಯಾಗರಾಜರು, ಅಪ್ಪಯ್ಯ ದೀಕ್ಷಿತರು, ಮುತ್ತುಸ್ವಾಮಿ ದೀಕ್ಷಿತರು- ಇವರೆಲ್ಲ ಈ ಜಗತ್ತಿನ ಚಿರಪ್ರಾತಃಸ್ಮರಣೀಯರು. ಉಸ್ತಾದ್ ಅರಖಾ, ಉಸ್ತಾದ್ ಝಾಕೀರ್ ಹುಸೇನ್, ರವಿಶಂಕರ್, ಭೀಮಸೇನ ಜೋಶಿ, ಯೇಸುದಾಸ್, ಚೌರಾಸಿಯಾ, ಸುಬ್ಬು ಲಕ್ಷ್ಮೀ, ಗಂಗೂಬಾಯಿ, ಕುಮಾರ ಗಂಧರ್ವ, ಬಾಲಮುರಳೀಕೃಷ್ಣ, ಅಮ್ಜದ್ ಅಲಿಖಾನ್, ಮನಸೂರ ಮನೆತನ, ಬಾಲ ಸುಬ್ರಹ್ಮಣ್ಯಂ, ಕುನ್ನಕುಡಿ, ಜಸರಾಜ, ವಿದ್ಯಾಭೂಷಣ, ಗೋಡ್ಖಿಂಡಿ ಮನೆತನ, ಸವಾಯಿ ಗಂಧರ್ವ, ಪರಮೇಶ್ವರ ಹೆಗಡೆ, ಎಲ. ವೈದ್ಯನಾಥನ್, ಎಲ್.ಸುಬ್ರಹ್ಮಣ್ಯಂ, ಎಲ.ಶಂಕರ್, ಮಹಾಲಿಂಗಂ, ಪಟ್ಟಮ್ಮಾಳ್, ಮಹಾರಾಜಪುರಂ ಸಂತಾನಂ, ಕಿಶೋರ್, ರಾಜನ್- ಸಾಜನ್, ಮಿಶ್ರಾ, ಕಿಶೋರಿ ಅಮುನ್ಕರ್, ಪರ್ವೀನ್ ಸುಲ್ತಾನ್, ಪಿ.ಬಿ.ಶ್ರೀನಿವಾಸ, ಕಾಳಿಂಗರಾಯರು, ಲತಾ
ಮಂಗೇಶ್ಕರ್, ಮಹಮ್ಮದ್ ರಫಿ, ಜಾನಕಿಯಮ್ಮ, ರೋನು ಮಜುಂದಾರ್, ನಾಕೋಡ ಮನೆತನ, ಗಣಪತಿ ಭಟ್ ಹಾಸಣಗಿ, ವೆಂಕಟೇಶ, ಅನೋಷ್ಕಾ ರವಿಶಂಕರ್, ಯಕ್ಷಗಾನ ಮತ್ತು ಜನಪದೀಯ ಸಂಗೀತ ವಿದ್ವಾಂಸರು – ಮುಂತಾದ ಅನೇಕ ನಮ್ಮ ಕಾಲದ ಈ ಮಹನೀಯರ ಸಂಗೀತ ಸಿದ್ಧಿಯನ್ನು ನಾವು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅನುಭವಿಸಿ ಸುಖಿಸಿದವರು.

ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮೈಮನವನ್ನು ಮುದಗೊಳಿಸಿಕೊಂಡವರು. ಈ ಕ್ರಿಯೆಗೆ ಕೊನೆಯೆಂಬುದೇ ಇರುವುದಿಲ್ಲ. ಇವರ ಸಂಗೀತ ಯಾತ್ರೆಯ ಪಥದ ಹೆಜ್ಜೆಗಳು ವಿಸ್ಮೃತಿಗೆ ಜಾರದಂಥವು. ಈ ಮೆಲುಕಿನ ಇವರ ಸಂಗೀತದ ಬಲ್ಮೆ ನಮಗೆ ವೇದ್ಯವಾಗು ತ್ತಲೇ ಇರುತ್ತದೆ. ಇವರೆಲ್ಲ ನಮ್ಮ ಸೌಭಾಗ್ಯಗಳು. ಮನುಷ್ಯ ಬದುಕಿನ ಒಳನೋಟಗಳು, ಕಠೋರ ವಾಸ್ತವತೆಯ ದರ್ಶನ, ಭವಿಷ್ಯದ ಕುರಿತಾದ ಚಿಂತನೆಯ ಹೊಳಹು, ಬದುಕಿನ ಗತಿಗೆ ಅನ್ವೇಷಣೆ, ಸೃಜನಶೀಲತೆ, ಚಿಂತನೆಯ ಕ್ರಮ, ಭಾಷೆಯ ಮೇಲಿನ ಪ್ರಭುತ್ವ, ಕಲ್ಪನಾ ಶಕ್ತಿ, ಮಾತಿನ ಧಾಟಿ, ಆಲೋಚನೆಯ ಪರಿ, ವಿಶೇಷವಾದ ಪ್ರತಿಭೆ- ಇವೇ ಮುಂತಾದ ಆಕೃತಿಗಳು ಮೈಗೂಡು ವುದು ಸಾಹಿತ್ಯದ ಅಧ್ಯಯನದಿಂದ.

ಸಾಹಿತ್ಯ ಬದುಕಿನ ತನ್ಮಯತೆಯನ್ನು ಸ್ಥಾಯೀಯಾಗಿಸಬಲ್ಲ ಎರಡನೆಯ ವಿರಾಟ್ ಶಕ್ತಿ. ಸಾಹಿತ್ಯವು ಸತ್ಯ ಮತ್ತು ಸೌಂದರ್ಯದ ಸಮಾವೇಶ. ಇಲ್ಲಿಯೇ ಉತ್ತಮ ವ್ಯಕ್ತಿತ್ವದ ಮಾದರಿಗಳು ಸೃಷ್ಟಿಯಾಗುವುದು. ಉತ್ತಮ ಜೀವನ ಮೌಲ್ಯಗಳು ದೊರಕುವುದು. ಸಹಿತವನ್ನೇ ಅಲ್ಲವೆ ಸಾಹಿತ್ಯ ಬಯಸುವುದು? ಸಂಸ್ಕಾರ-ಸಂಸ್ಕೃತಿ ಎರಡೂ ಒಟ್ಟಿಗೇ ಲಭಿಸುವಂತಹ ಮಾಧ್ಯಮವಿದು. ಒಂದು
ಒಳ್ಳೆಯ ಓದು ಕೊಡುವ ಮಾನಸಿಕ ಮತ್ತು ಬೌದ್ಧಿಕ ಸುಖ ವರ್ಣಿಸಲಸಾಧ್ಯ. ಗಾಢವಾಗಿ ಕಾಡಿ, ಬದುಕನ್ನೇ ತಿಂದು ಹಿಂಜಿ ಹಿಪ್ಪೆ ಮಾಡಲೆತ್ನಿಸುವ lonelyness ಅನ್ನು ಕೂಡ alone ಆಗಿ ಪರಿವರ್ತಿಸುವ ಶಕ್ತಿ ಇರುವುದು ಸಂಗೀತ ಮತ್ತು ಸಾಹಿತ್ಯಕ್ಕೆ ಮಾತ್ರ.

ಈ ಹಿನ್ನೆಲೆಯಲ್ಲಿ ಕನ್ನಡದ ಪತ್ರಕರ್ತನೊಬ್ಬ ಆಡಿದ ಮಾತು ನೆನಪಾಗುತ್ತದೆ: ದುಷ್ಟ ಬದುಕನ್ನೇ ಧಿಕ್ಕರಿಸುತ್ತಲೇ, ಅದನ್ನು ದಂಡಿಸುವ, ದುಡಿಸಿಕೊಳ್ಳುವ, ಅದನ್ನು ಬೇಕಾದಂತೆ ಮಣಿಸಿಕೊಳ್ಳುವ, ರೂಪಿಸಿಕೊಳ್ಳುವ ತಾಕತ್ತನ್ನು ಕೊಡಬಲ್ಲ ಸಾಹಿತ್ಯ ಅದ್ಯಾರದೇ ಆಗಿದ್ದರೂ ಅದೆ ಲಭ್ಯವಿದ್ದರೂ ಹುಡುಕಿಕೊಂಡು ಹೋಗಿ ಓದಬೇಕು. ಸಂಗೀತ ಮತ್ತು ಸಾಹಿತ್ಯದ ಈ ವಿರಾಟ್ ಶಕ್ತಿ ನಿಸ್ತೇಜವಾದ ಜೀವನವನ್ನು ಎಂಥಾ ಸ್ಥಿತಿಯಲ್ಲೂ ಮರಳಿಸಿ ಜೀವನ್ಮುಖಿಯಾಗಿಸಿ ಜೀವನವನ್ನು ಸಹ್ಯವೆನಿಸುವಂತೆ ಮಾಡು ತ್ತದೆ.

ಇವೆರಡೂ ಹಾಗೂ ಇವೆರಡರ ಅನುಭವಗಳು ಚಿರಂತನವಾದುವು; ಚಿರಂಜೀವಿಯಾದುವು. ಬದುಕನ್ನು ಅರಳಿಸುವ ಈ
ಮಾಧ್ಯಮಗಳು ಸುಂದರ ಜೀವನವನ್ನು ಕಟ್ಟಿಕೊಡುತ್ತವೆ. ಮಾತ್ರವಲ್ಲ, ಬದುಕನ್ನು ಮುದವಾಗಿಸುತ್ತವೆ. ಇವೆರಡೂ ಬದುಕಿನಲ್ಲಿ ಮುಖ್ಯವಾದಾಗಲೇ ನಮ್ಮ ನಮ್ಮ ಅಸ್ತಿತ್ವದ ಔನ್ನತ್ಯನ್ನು ಕಾಣಬಹುದು. ಇವೆರಡರ ಯಾವ ಗಂಧವೂ ಇಲ್ಲದ ಬದುಕು ಬದುಕಾಗಿರಲು ಹೇಗೆ ಸಾಧ್ಯ? ಸಾಹಿತ್ಯ, ಸಂಗೀತ ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛ ವಿಷಾಣವಿಹೀನಃ- ಸಾಹಿತ್ಯ ಸಂಗೀತದಲ್ಲಿ ಆಸಕ್ತಿ ಇಲ್ಲದವ ಸಾಕ್ಷಾತ್ ಕೋಡು ಬಾಲಗಳಿಲ್ಲದ ಪಶುವಿನಂತೆ.

ಇಂಥ ಎರಡು ವಿರಾಟ್ ಶಕ್ತಿಗಳ ಗಂಧವನ್ನು ನಮ್ಮ ನಮ್ಮ ಮನೆಯ ಮಕ್ಕಳಿಗೆ ಎಳವೆಯ ಮನೆಮನೆಗಳಲ್ಲಿ, ಶಾಲೆಗಳಲ್ಲಿ ಪರಿಚಯಿಸಬೇಕು. ಅವರಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬೇಕು. ಇವು ಸಂಸ್ಕಾರವನ್ನು, ಸೌಜನ್ಯವನ್ನು, ಸಭ್ಯತೆಯನ್ನು, ಸಾತ್ವಿಕ ಅಭಿರುಚಿಯನ್ನು, ಬದುಕಿನ ಗಹನತೆಯ ಅರಿವನ್ನು ಮೂಡಿಸುತ್ತವೆ. ಒಂದು ಸ್ವಸ್ಥ ಸಮಾಜ ಅಥವಾ ದೇಶವನ್ನು ನಿರ್ಮಿಸಲು ಇವು ಇಂದು ಅಗತ್ಯವೂ ಅನಿವಾರ್ಯವೂ ಆಗಿದೆ. ಈ ಬದುಕೆಂಬುದು ಹಿರಿಯರು ಕೊಟ್ಟ ಆಸ್ತಿಯೆಂದು ಪರಂಪರಾ ಗತವಾಗಿ ಆಧರಿಸಿ ಬದುಕುತ್ತಾ ಬಂದಿರುವ ನಾವು ಇಂದಿನ ದಿನಮಾನಗಳಲ್ಲಿ ನಮ್ಮೊಳಗಿನ ಮಾತು ಮತ್ತು ಮೌನವು ಎಲ್ಲಾ ನೆಲೆಯಲ್ಲೂ ಅರ್ಥ ಹೀನವೂ ಬಲಹೀನವೂ ನಿಸ್ಸಾರವೂ ಆಗಿ ಪರಿವರ್ತನೆಗೊಂಡ ದುರಂತಮಯ ಕಾಲಘಟ್ಟದಲ್ಲಿ ನಾವು, ನಮ್ಮ ಮಕ್ಕಳು ಬದುಕುತ್ತಿದ್ದೇವೆನೋ ಎಂದೆನಿಸುತ್ತಿದೆ.

ಇದರಿಂದ ಪಾರಾಗಿ ನಮ್ಮ ನಮ್ಮ ಬದುಕಿಗೊಂದಿಷ್ಟು ಮನುಷ್ಯ ಸಹಜ ನೆಮ್ಮದಿಯನ್ನು ಕಾಣಬೇಕಿದೆ. ಬದುಕಿನ ಎಂಥಾ ಸ್ಥಿತಿಯಲ್ಲೂ ಮತ್ತೆ ಮತ್ತೆ ಆಸೆಯನ್ನು ಹುಟ್ಟಿಸಿ ಬದುಕನ್ನು ಕಟ್ಟಿಕೊಡಬಲ್ಲ ತಾಕತ್ತು ಸಂಗೀತ ಮತ್ತು ಸಾಹಿತ್ಯಕ್ಕೆ ಇದೆ. ಅದು ಕಾರಣವಾಗಿ, ಜಾತಿ-ಮತ-ಧರ್ಮ-ಪಂಥಗಳಿಂದ ಅತೀತವಾಗಿರುವ, ರಾಜಕೀಯದ ವಾಸನೆಯಿಲ್ಲದ ಬದುಕಿನ ತನ್ಮಯತೆಯನ್ನು ಸ್ಥಾಯಿಯಾಗಿಸಬಲ್ಲ ಇವೆರಡು ವಿರಾಟ್ ಶಕ್ತಿಗಳಿಗೆ ನಿತ್ಯಜೀವನದಲ್ಲಿ ಮೊರೆ ಹೋಗಬೇಕಾಗಿದೆ.