Thursday, 12th December 2024

ಮುಸಲ್ಮಾನರ ಚಿಂತನೆ ಅರಿತಿದ್ದ ಅಂಬೇಡ್ಕರ್‌

ವೀಕೆಂಡ್ ವಿತ್ ಮೋಹನ್

camohanbn@gmail.com

ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ ಮುಸಲ್ಮಾನರಿಗೆ ಸಂವಿಧಾನದ ಬಗೆಗಿನ ದೃಷ್ಟಿಕೋನ ಬಾಬಾ ಸಾಹೇಬರಿಗೆ ಅಚ್ಚರಿಯನ್ನುಂಟು ಮಾಡಿರಲಿಲ್ಲ. ರಾಷ್ಟ್ರೀಯತೆಯ ವಿಷಯದಲ್ಲಿ ಮುಸಲ್ಮಾನರ ಮಾನಸಿಕತೆಯನ್ನು ಬಾಬಾ ಸಾಹೇಬರಿ ಗಿಂತಲೂ ಹೆಚ್ಚಾಗಿ ಬಲ್ಲವರಿಲ್ಲ. ೧೯೨೩ ರಲ್ಲಿ ಮಹಾತ್ಮಾ ಗಾಂಧಿಯವರು ೨೧ ದಿವಸಗಳ ಕಾಲ ಉಪವಾಸ ವನ್ನು ಘೋಷಿಸಿಯಾದಾಗ ಕಾಂಗ್ರೆಸ್ ದೇಶದಾದ್ಯಂತ ಏಕತಾ ಸಮಾವೇಶಗಳನ್ನು ಏರ್ಪಡಿಸಿತ್ತು. ಈ ಸಮಾವೇಶವು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿರುವಂತೆ, ಇದರಿಂದ ಯಾವ ಉಪಯೋಗವಿಲ್ಲವೆಂಬುದನ್ನು ಬಾಬಾ ಸಾಹೇಬರು ಅರಿತಿದ್ದರು.

ಗಾಂಧಿಯವರೇ ಹೇಳಿದಂತೆ ಭೌತಿಕವಾಗಿ ಮುಸಲ್ಮಾನನಷ್ಟು ಬಲಿಷ್ಠರಿನ್ನೊಬ್ಬರಿರಲಿಲ್ಲ. ಇದು ತಿಳಿದಿದ್ದರೂ ಸಹ ಅವರು ಹಿಂದುಗಳಿಗೆ ನೀಡುತ್ತಿದ್ದ ಸಂದೇಶವೆಂದರೆ ಸತ್ತರೂ ಪರವಾಗಿಲ್ಲ. ಆದರೆ ಕೊಲ್ಲಬೇಡಿ. ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಗಬೇಕೆಂದು ಹೇಳುತ್ತಿದ್ದಂತಹ ಗಾಂಧಿಯವರಿಗೆ ಜಗಳ ಇಷ್ಟವಿರಲಿಲ್ಲ. ಮುಸಲ್ಮಾನರು ಎಷ್ಟೇ ತೊಂದರೆ ನೀಡಿದರೂ ಸಹ ಹಿಂದೂಗಳು ಹಿಂಸೆಯ ಮಾರ್ಗ ಹಿಡಿಯಬಾರದೆಂಬುದು ಗಾಂಽಯವರ ವಾದವಾಗಿತ್ತು. ಖಿಲಾಫತ್ ಆಂದೋಲ ಕ್ಕೆ ಬೆಂಬಲ ಸೂಚಿಸಿದವರೆಲ್ಲರಿಗೂ ಈ ವಿಷಯ ತಿಳಿದಿದ್ದರೂ ಸಹ ಮುಸಲ್ಮಾನರ ಮಾನಸಿಕತೆಯ ಅರಿವು ಯಾರಿಗೂ ಆಗದಿಲ್ಲ ದಿರುವುದು ಬಾಬಾಸಾಹೇಬರಿಗೆ ಆಶ್ಚರ್ಯವಾಗಿದ್ದದ್ದು ನಿಜ ಸಂಗತಿ.

ಮುಸಲ್ಮಾನರಿಂದ ಬಹುದೂರವಿದ್ದ ಬರ್ನಾಡ್ ಶಾ ಮುಸಲ್ಮಾನರ ಅಸಹನೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು. ಸಂವಿ
ಧಾನ ಮತ್ತು ಧರ್ಮದ ನಡುವೆ ಆಯ್ಕೆಯನ್ನಿಟ್ಟರೆ ಬಹುತೇಕ ಮುಸಲ್ಮಾನರು ಆಯ್ಕೆ ಮಾಡಿಕೊಳ್ಳುವುದು ತಮ್ಮ ಧರ್ಮವನ್ನೇ ಹೊರತು ಸಂವಿಧಾನವನ್ನಲ್ಲ. ಹಲವಾರು ಚರ್ಚೆಯ ಸಂದರ್ಭದಲ್ಲಿ ಮುಸಲ್ಮಾನ್ ನಾಯಕರು ಬಹಿರಂಗವಾಗಿ ಮಾಧ್ಯಮ ಗಳಲ್ಲಿ ತಮಗೆ ಸಂವಿಧಾನಕ್ಕಿಂತಲೂ ಇಸ್ಲಾಂ ಧರ್ಮವೇ ಮುಖ್ಯವೆಂಬುದನ್ನು ಹೇಳಿದ್ದಾರೆ.

ಇಂದು ನಾವು ಕಾಣುತ್ತಿರುವ ಮುಸ್ಲಿಮರ ಸಂವಿಧಾನದ ಮೇಲಿನ ನಡವಳಿಕೆಯ ಅಂದಾಜು ಬಾಬಾ ಸಾಹೇಬರಿಗೆ ಸಂವಿಧಾನ ರಚನೆಯ ಸಂದರ್ಭದಲ್ಲೇ ತಿಳಿದಿತ್ತು. ತಮ್ಮ ಧರ್ಮದವರ ರಕ್ಷಣೆಯ ಕಾಳಜಿ ಮುಸಲ್ಮಾನರಲ್ಲಿ ಅದೆಷ್ಟಿತ್ತೆಂದರೆ ಇತರ ವಿಷಯಗಳ ಬಗ್ಗೆ ಅವರ ದೃಷ್ಟಿ ಪೂರಾ ಕಲುಷಿತಗೊಂಡಿತ್ತು. ಸಮಾಜದಲ್ಲಿನ ಇತರ ಧರ್ಮದ ಜನರ ಆಚಾರ ಮತ್ತು ವಿಚಾರಗಳ ಬಗ್ಗೆ ಅವರಿಗೆ ಲಕ್ಷ್ಯವೇ ಇರಲಿಲ್ಲ.

ಮುಸಲ್ಮಾನರು ತಾವುಗಳು ಅಲ್ಪ ಸಂಖ್ಯಾತರಾಗಿಯೇ ಉಳಿದು ಅಲ್ಪಸಂಖ್ಯಾತರ ನೆರಳಿನಲ್ಲಿ ತಮಗೆ ಬೇಕಿರುವ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕೆಂಬುದಷ್ಟೇ ಅವರ ಮೂಲ ಧ್ಯೇಯವಾಗಿತ್ತು. ಹಿಂದೂಗಳು ಬಹುಸಂಖ್ಯಾತರಾಗಿದ್ದರಿಂದ ಸಂವಿಧಾನ ರಚನೆಯ ಸಂದರ್ಭದಲ್ಲಿ ರಾಜಕೀಯವಾಗಿ ಮುಸಲ್ಮಾನರಿಗೆ ಪ್ರತ್ಯೇಕ ಮತದಾರ ಕ್ಷೇತ್ರಕ್ಕಾಗಿ ಬೇಡಿಕೆಯೊಡ್ಡಿ ಸಂವಿಧಾನದಲ್ಲಿ ಸೇರಿಸುವುದು ಅವರ ಉದ್ದೇಶವಾಗಿತ್ತು. ಈ ಮೂಲಕ ಕೇಂದ್ರ ಮತ್ತು ರಾಜ್ಯದಲ್ಲಿ ರಾಜಕೀಯವಾಗಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವುದು ಬಹುತೇಕ ಮುಸಲ್ಮಾನ್ ನಾಯಕರ ಉದ್ದೇಶವಾಗಿತ್ತು.

೧೯೩೦ ರ ಸಂದರ್ಭದಲ್ಲಿ ಇವರಿಗೆ ಮತ್ತೊಂದು ಮಾರ್ಗ ಸಿಕ್ಕಿತ್ತು. ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಹೊಸ ಪ್ರಾಂತ್ಯಗಳನ್ನು ರಚಿಸುವ ಯೋಜನೆಯಿತ್ತು. ಈ ಮೂಲಕ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಜಾಗಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳನ್ನು ಒತ್ತೆಯಾಗಿರಿಸಿ ಬಹುಸಂಖ್ಯಾತ ಮುಸಲ್ಮಾನರರೊಂದಿಗೆ ವ್ಯವಹರಿಸಲು ಒತ್ತಡಕ್ಕೊಳ ಪಡಿಸುವುದು. ಇದೇ ಉದ್ದೇಶದಿಂದ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಪ್ರಾಂತ್ಯಗಳನ್ನು ಮಾಡಿಸಿಕೊಂಡು ಅವುಗಳನ್ನು ಶಕ್ತಿ ಶಾಲಿಯಾಗಿ ಮಾಡುವುದೇ ಅವರ ಮೂಲ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ವರು ಪ್ರತ್ಯೇಕ ಸಿಂಧ್ ಮತ್ತು ವಾಯುವ್ಯ ಪ್ರಾಂತ್ಯದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸುವುದಕ್ಕೆ ಬೇಡಿಕೆ ಇಟ್ಟಿದ್ದರು.

ಇದರಿಂದಾಗಿ ಮುಸಲ್ಮಾನರಿಗೆ ನಾಲ್ಕು ಪ್ರಾಂತ್ಯಗಳ ಆಳ್ವಿಕೆ ಸಿಗುವಂತಾಗುತ್ತಿತ್ತು, ಈ ಪ್ರಾಂತ್ಯಗಳನ್ನು ಸದೃಢಗೊಳಿಸಲು
ಕೇಂದ್ರವನ್ನು ದುರ್ಬಲಗೊಳಿಸುವ ಪ್ರಯತ್ನವೂ ನಡೆಯಿತು. ಇದರ ಮುಂದುವರಿದ ಭಾಗವಾಗಿ ಈ ಪ್ರಾಂತ್ಯಗಳಿಗೆ ವಿಶೇಷ ವಾದ ಅಧಿಕಾರ ನೀಡಬೇಕೆಂಬ ಬೇಡಿಯನ್ನು ಮುಂದಿಟ್ಟಿದ್ದರು.

ಬ್ರಿಟಿಷ್ ಇಂಡಿಯಾ ಇದ್ದಾಗ ನಿರ್ಧರಿಸಿದ್ದ ಸ್ಥಾನಗಳ ಪೈಕಿ ಮೂರನೇ ಒಂದು ಭಾಗವನ್ನು ಮುಸಲ್ಮಾನರಿಗೆ ನೀಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು. ಈಗಲೂ ಅಷ್ಟೇ ಬೆಂಗಳೂರಿನ ಹಲವು ಕಡೆಗಳಲ್ಲಿ ಮುಸಲ್ಮಾನರ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳು ಒತ್ತಡದಿಂದ ಬದುಕುವ ಪರಿಸ್ಥಿತಿ ಎದುರಾಗಿರುವುದು ನಮ್ಮ ಕಣ್ಣ ಮುಂದಿದೆ. ಜಾತ್ಯತೀತತೆಯ ಹೆಸರಿನಲ್ಲಿ ಕೆಲ ರಾಜಕೀಯ ಪಕ್ಷದ ನಾಯಕರು ಮುಸಲ್ಮಾನರ ಹಕ್ಕುಗಳ ಬಗ್ಗೆ ಅರ್ಥರಹಿತವಾಗಿ ಪ್ರೀತಿಯನ್ನು ಪ್ರಕಟಿಸುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಶಾಲೆಯಲ್ಲಿ ಹಿಜಾಬ್ ನಿರ್ಬಂಧ ವಿವಾದದ ಸಂದರ್ಭದಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ಮುಸಲ್ಮಾನರ ಮೇಲೆ ಹೆಚ್ಚಿನ ಪ್ರೀತಿಯನ್ನು ಪ್ರಕಟಿಸಲು ಕೆಲ ರಾಜಕೀಯ ಪಕ್ಷಗಳು ಜಾತ್ಯತೀತತೆಯೆಂಬ ಪದವನ್ನು ಮುನ್ನೆಲೆಗೆ ತಂದಿದ್ದು ಕಣ್ಣ ಮುಂದಿದೆ. ಇಂದಿನ ಕಾಲಘಟ್ಟದಲ್ಲಿ ಜಾತ್ಯತೀತತೆಗೆ ಸಂಬಂಧಿಸಿದಂತೆ ಯೋಚಿಸುವಾಗ ಅಂದಿನ ದಿನಗಳಲ್ಲಿಯೇ ಬಾಬಾ ಸಾಹೇಬರಿಗೆ ಈ ವಿಚಾರದ ಬಗ್ಗೆ ಇದ್ದ ಸ್ಪಷ್ಟತೆ ನಮಗೆ ಆಶ್ಚರ್ಯವ ನ್ನುಂಟು ಮಾಡುತ್ತದೆ.

ಸಂವಿಧಾನ ಸಮಿತಿಯಲ್ಲಿ ಜಾತ್ಯತೀತತೆಯ ಕುರಿತು ಚರ್ಚೆ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಬಾಬಾ ಸಾಹೇಬರು ಹೀಗೆ ಹೇಳುತ್ತಾರೆ-ಜಾತ್ಯತೀತ ರಾಜ್ಯವೆಂದರೆ ಜನರ ಧಾರ್ಮಿಕ ಭಾವನೆಗಳನ್ನು ಲೆಕ್ಕಿಸಬೇಕೆಂದಿಲ್ಲ ಎಂಬ ಅರ್ಥವಲ್ಲ ಅದರ ಅರ್ಥವಿಷ್ಟೇ ಯಾವುದೋ ಒಂದು ಮತವನ್ನು ಇತರ ಜನರ ಮೇಲೆ ಹೇರಲು ಲೋಕಸಭೆಗೆ ಅವಕಾಶವಿಲ್ಲ. ಜಾತ್ಯತೀತತೆಯ ಅರ್ಥ ಯಾವುದೋ ಒಂದು ಮತವನ್ನು ಅಲ್ಲಗಳೆಯುವುದೆಂದಲ್ಲ. ಆದರೆ ಎಡಚರರ ಜಾತ್ಯತೀತತೆಯ ವ್ಯಾಖ್ಯಾನವೆಂದರೆ, ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿವುದು, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು, ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಯೇಸು ಕ್ರಿಸ್ತನ ಜೊತೆಗೆ ಗಣೇಶನ ಫೋಟೋವಿಟ್ಟು ಪೂಜೆ ಮಾಡುವುದು, ಕುಂಕುಮ ಹಚ್ಚಿಕೊಳ್ಳದಿರುವುದು. ಹಿಂದೂಗಳ ಆಚರಣೆಗಳು ಮೂಢನಂಬಿಕೆಯಂತೆ ಬಿಂಬಿಸಿ, ಮುಸಲ್ಮಾನ್ ಮತ್ತು ಕ್ರಿಶ್ಚಿಯನ್ನರ ಆಚರಣೆಗಳನ್ನು ಜಾತ್ಯತೀತತೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದು.

ಸಾಮಾನ್ಯ ನಾಗರಿಕರು ಒಂದು ಪಕ್ಷವು ಜಾತೀಯವೇ ಅಥಾವ ಜಾತ್ಯತೀತವೇ ಎಂಬ ವಿಷಯದ ಕುರಿತು ಹೆಚ್ಚಿನ ಮಹತ್ವ
ನೀಡಬೇಕಿಲ್ಲವೆಂಬುದನ್ನು ಬಾಬಾ ಸಾಹೇಬರು ಹೇಳಿದ್ದರು. ಆದರೆ ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕನ್ನು ಗಟ್ಟಿಗೊಳಿಸುವ ಸಲುವಾಗಿ ಜಾತ್ಯತೀತತೆಯೆಂಬ ವಿಷಯವನ್ನು ಮುನ್ನೆಲೆಗೆ ತಂದು ತಮ್ಮ ಬಗ್ಗೆ ಹೇಳಿಕೊಳ್ಳುತ್ತವೆ. ೧೯೪೭ ರ ಆಗಸ್ಟ್ ೨೭ ರಂದು ಸಂವಿಧಾನ ರಚನೆಯ ಸಂದರ್ಭದಲ್ಲಿ ಸಂವಿಧಾನ ಮಾರ್ಗದರ್ಶಕ ಸಮಿತಿಯ ವರದಿ ಕುರಿತು ಚರ್ಚಿಸಿದ ನಂತರ ಮಹಾನುಭಾವರೊಬ್ಬರು ಸಲಹೆಯೊಂದನ್ನು ಮುಂದಿಟ್ಟಿದ್ದರು.

ಸಂವಿಧಾನ ರಚನೆ ಸಮಿತಿ ಸಭೆಯು ಇನ್ನು ಮುಂದೆ ಕೇಂದ್ರೀಯ ಮತ್ತು  ತೀಯ ವಿಧಾನಮಂಡಲಗಳ ಎಲ್ಲಾ ಚುನಾವಣೆಗಳು
ಮುಸಲ್ಮಾನರ ದೃಷ್ಟಿಯಿಂದ ಪ್ರತ್ಯೇಕ ಮತದಾರ ಕ್ಷೇತ್ರಗನುಗುಣವಾಗಿ ನಡೆಯಬೇಕು ಎಂದು ಸೂಚಿಸುತ್ತದೆ ಎಂದಿದ್ದರು. ನಮ್ಮ ಪುಣ್ಯ ಈ ಸಲಹೆ ಸ್ವೀಕೃತವಾಗಲಿಲ್ಲ. ಅವರು ಸಲಹೆ ನೀಡಿದ ಮರುದಿನ ಮಾರ್ಗದರ್ಶಕ ಸಮಿತಿಯ ಅಧ್ಯಕ್ಷರಾಗಿದ್ದ ಸರ್ದಾರ್ ವಲ್ಲಭ್ ಭಾಯ್ ಪಟೇಲರು ಈ ಸಲಹೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು.

ಯಾವ ಕಾರಣಕ್ಕಾಗಿ ಭಾರತ ವಿಭಜನೆಯಾಗಿತ್ತೋ ಅದೇ ಪ್ರಕ್ರಿಯೆ ಯನ್ನು ಸಂವಿಧಾನ ರಚನೆಯ ಸಂದರ್ಭದಲ್ಲಿ ಇನ್ನೊಮ್ಮೆ
ನಡೆಸಬೇಕೆಂದರೆ ನಾನು ಹೇಳುವುದಿಷ್ಟೇ, ಯಾರದನ್ನು ಬಯಸುತ್ತಾರೋ ಅವರಿಗೆ ಈ ದೇಶದಲ್ಲಿ ಸ್ವಲ್ಪವೂ ಸ್ಥಾನವಿಲ್ಲ ಎಂದು ಪಟೇಲರು ಕಡ್ಡಿ ಎರಡು ತುಂಡಾಗುವ ರೀತಿ ಯಲ್ಲಿ ಹೇಳಿದ್ದರು. ಧರ್ಮದ ಆಧಾರದ ಮೇಲೆ ಭಾರತ ವಿಭಜನೆ ಯಾಗುವ ಸಂದರ್ಭದಲ್ಲಿ ನಡೆದ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸುವುದನ್ನು ಐತಿಹಾಸಿಕ ನಾಯಕರು ಅಂದೇ ಊಹಿಸಿದ್ದರು.

ಬೇರೆಯದ್ದೇ ದೇಶ ಬೇಕೆಂದು ಹೋದವರು ಭಾರತದೊಳಗೆ ಮತ್ತೊಮ್ಮೆ ಜಾತ್ಯತೀತತೆಯ ಹೆಸರಿನಲ್ಲಿ ದೇಶದೊಳಗೆ ಉಳಿದುಕೊಂಡ ಮುಸಲ್ಮಾನರಿಗೆ ವಿಶೇಷ ಸವಲತ್ತುಗಳನ್ನು ಸಂವಿಧಾನದ ಮೂಲಕ ಕಲ್ಪಿಸಿಕೊಳ್ಳುವ ಯತ್ನಗಳು ನಡೆಯುತ್ತಲೇ ಇದ್ದವು ಬಾಬಾ ಸಾಹೇಬರು ಊಹಿಸಿದ್ದ ರೀತಿಯಲ್ಲಿ, ಜಾತ್ಯತೀತತೆಯ ನೆಪದಲ್ಲಿ ಇಂದಿರಾ ಗಾಂಧಿ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಸಂವಿಧಾನದಲ್ಲಿ ಜಾತ್ಯಾತೀತ ಪದವನ್ನು ಸೇರಿಸಿಯೇ ಬಿಟ್ಟರು. ಸಂವಿಧಾನವನ್ನು ರಚಿಸುವಾಗ ಬಾಬಾ ಸಾಹೇಬರು ಮತನಿರಪೇಕ್ಷತೆ ಎಂಬ ಪದದ ಅರ್ಥವನ್ನು ಸ್ಪಷ್ಟಪಡಿಸಬೇಕಾಯಿತು.

ಬಾಬಾ ಸಾಹೇಬರು ಮತನಿರಪೇಕ್ಷತೆ ಎಂದರೆ ಧರ್ಮದ ಧಿಕ್ಕಾರವಲ್ಲ, ಸರ್ಕಾರವು ಮತದ ವಿಷಯದಲ್ಲಿ ಯಾರನ್ನೂ
ತಲೆಯ ಮೇಲೆ ಕೂರಿಸಿಕೊಳ್ಳಬಾರದು ಅಥವಾ ತುಳಿಯಲು ಬಾರದು ಎಂಬುದನ್ನು ಹೇಳಿದ್ದರು. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಮತಬ್ಯಾಂಕಿನ್ನು ಗಟ್ಟಿಗೊಳಿಸುವ ಸಲುವಾಗಿ ಹಲವು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಮುಸಲ್ಮಾನರಿಗೆ
ಯೋಜನೆಗಳನ್ನು ನೀಡುತ್ತಾ ಬಂದಿದೆ. ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾ ಬಾನು ಪ್ರಕರಣದ ತೀರ್ಪು ಪ್ರಕಟವಾದಾಗ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನವಾದ ನಂತರ ಸುದೀರ್ಘ ಕಾಲ ಜೀವನಾಂಶ ನೀಡುವಂತೆ ನ್ಯಾಯಾಲಯ ಹೇಳಿತ್ತು.

ಕಾಂಗ್ರೆಸ್ ಪಕ್ಷದ ಅತಿಯಾದ ಮುಸ್ಲಿಂ ಪ್ರೇಮ ಈ ತೀರ್ಪಿನ ವಿರುದ್ಧ ಹೋಗುವಂತೆ ಮಾಡಿ ಮುಸ್ಲಿಂ ಕಾಯ್ದೆಗೆ ತಿದ್ದುಪಡಿ
ತರುವಂತೆ ಮಾಡಿತ್ತು. ಮುಸಲ್ಮಾನ್ ಗಂಡಸರನ್ನು ಓಲೈಸುವ ಸಲುವಾಗಿ ತನ್ನ ತಲೆಯ ಮೇಲೆ ಕೂರಿಸುಕೊಳ್ಳುವ
ಕೆಲಸವನ್ನು ಅಂದಿನ ಕಾಂಗ್ರೆಸ್ ಮಾಡಿತ್ತು. ಕರ್ನಾಟಕದಲ್ಲಿ ಅಸಂವಿಧಾನಿಕವಾಗಿದ್ದ ಮುಸ್ಲಿಂ ಧರ್ಮಾಧಾರಿತ ಮೀಸಲಾತಿ ಯನ್ನು ರದ್ದುಪಡಿಸಿದ ನಂತರ ಕಾಂಗ್ರೆಸ್ಸಿನ ಮುಖಂಡರು ಮುಸಲ್ಮಾನರನ್ನು ಓಲೈಸಲು, ತಾವು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ರದ್ದಾದಂತಹ ಮೀಸಲಾತಿಯನ್ನು ಜಾರಿಗೆ ತರುತ್ತೇವೆಂದು ಹೇಳುವ ಮೂಲಕ ಬಾಬಾ ಸಾಹೇಬರ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದೆ.

ಸಂವಿಧಾನ ರಚನೆಯ ಸಂದರ್ಭದಲ್ಲಿ ಪಾಲ್ಗೊಂಡ್ದಿದ್ದವರಲ್ಲಿ ಹಲವರಿಗೆ ಹೆಚ್ಚಿನ ಚಿಂತೆ ಸ್ವಂತ ಭವಿಷ್ಯದ್ದು ಮತ್ತು ಸ್ವಲ್ಪಮಾತ್ರ ದೇಶದ್ದು ಎಂಬುದರ ಸಂಪೂರ್ಣ ಅರಿವು ಬಾಬಾ ಸಾಹೇಬರಿಗಿತ್ತು. ಹಾಗಾಗಿ ಬಾಬಾ ಸಾಹೇಬರು ಸಂವಿಧಾನ ರಚನೆಯ ಸಂದರ್ಭದಲ್ಲಿ ಬಳಸುವ ಪದಗಳ ಬಗ್ಗೆ ಬಹಳ ಎಚ್ಚರ ವಹಿಸಿದ್ದರು. ಉದಾಹರಣೆಗೆ ಅಲ್ಪಸಂಖ್ಯಾತ ಎಂಬ ಪದವನ್ನು ತೆಗೆದುಕೊಂಡರೆ, ಈ ಶಬ್ದವನ್ನು ಬಳಸಿದ್ದೇ ಆದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆಂಬುದು ಅವರಿಗೆ ತಿಳಿದಿತ್ತು. ಅದಕ್ಕಾಗಿ ಬಾಬಾ ಸಾಹೇಬರು ಅಲ್ಪ ಸಂಖ್ಯಾತ ಎಂಬ ಪದದ ಜಾಗದಲ್ಲಿ
ಸಮಾಜದ ಯಾವುದೇ ಭಾಗ ಎಂಬ ಪದವನ್ನು ಬಳಸಿದರು.

ಬಾಬಾಸಾಹೇಬರ ಅಂದಿನ ದೂರದೃಷ್ಟಿಯನ್ನೊಮ್ಮೆ ಗಮನಿಸಿದರೆ, ಅವರು ಅಂದು ಹೇಳಿದ ಮಾತು ಇಂದು ನಿಜವಾಗಿದೆ. ಅವರು ಹೇಳಿದ ಹಾಗೆ ಸಂವಿಧಾನ ರಚನೆಯಾಗಿ ಏಳು ದಶಕ ಕಳೆದ ನಂತರವೂ ಸಹ ಅಲ್ಪಸಂಖ್ಯಾತರೆಂಬ ಪದಬಳಕೆ ಯಿಂದ ಕೆಲ ರಾಜಕೀಯ ಪಕ್ಷಗಳು ಮುಸಲ್ಮಾನರ ಓಲೈಕೆಗಾಗಿ ತಮ್ಮ ಸ್ವಾರ್ಥ ರಾಜಕೀಯ ಮಾಡುತ್ತಿವೆ. ಬಾಬಾ ಸಾಹೇಬರು ಸಂವಿಧಾನ ರಚನೆಯ ಸಂದರ್ಭದಲ್ಲಿ ಮುಸಲ್ಮಾನರ ವಿಷಯದಲ್ಲಿ ಮಂಡಿಸಿದ್ದ ಹಲವು ವಿಷಯಗಳು ಇಂದಿಗೂ ಚರ್ಚೆಗೆ ಬರುತ್ತಲೇ ಇರುತ್ತವೆ. ಅವರ ದೂರ ದೃಷ್ಟಿಯನ್ನು ಸರಿಯಾಗಿ ಅಂದೇ ಅರ್ಥ ಮಾಡಿಕೊಂಡಿದ್ದರೆ ಭಾರತದ ಹಲವು ಸಮಸ್ಯೆಗಳಿಗೆ ಎಂದೋ ಪರಿಹಾರ ಸಿಗುತ್ತಿತ್ತು.