Friday, 13th December 2024

ಮ್ಯಾನ್ಮಾರ್‌: ಪ್ರಜಾಪ್ರಭುತ್ವದ ಮೇಲೆ ಸೇನಾ ದಂಗೆ !

ಪ್ರಚಲಿತ

ಮಾರುತೇಶ್‌ ಅಗ್ರಾರ

ಮ್ಯಾನ್ಮಾರ್‌ನಲ್ಲಿ ಸೇನಾ ದಾಳಿಗೆ ರಕ್ತದೋಕುಳಿ ಹರಿಯುತ್ತಿದೆ. ಗಾಳಿಗೆ ತರಗೆಲೆಗಳು ಉದುರಿದಂತೆ ಸೇನಾ ದಾಳಿಗೆ ಅಮಾಯಕ ಜನರು ಬೀದಿ ಹೆಣವಾಗುತ್ತಿದ್ದಾರೆ. ಕಳೆದೊಂದು ದಶಕದ ನಂತರ ಮ್ಯಾನ್ಮಾರ್‌ನಲ್ಲಿ ಸೇನಾಪಡೆಗಳ ಹಿಂಸಾಚಾರ ಮತ್ತೆ ಆರಂಭವಾಗಿದೆ. ಮ್ಯಾನ್ಮಾರ್ ಸೇನೆ ಫೆಬ್ರವರಿಯಲ್ಲಿ ಅಲ್ಲಿನ ಪ್ರಜಾಸತ್ತಾತ್ಮಕ ಸರಕಾರವನ್ನು ವಜಾಗೊಳಿಸಿ, ಸಾಲದ್ದಕ್ಕೆ ಸರಕಾರದ ಭಾಗವಾಗಿದ್ದ ಅನೇಕ ಮುಖಂಡರನ್ನೆಲ್ಲ ಜೈಲಿಗಟ್ಟಿ ದೇಶದ ಆಡಳಿತದ ಚುಕ್ಕಾಣಿಯನ್ನು ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಂಡ ಪರಿಣಾಮ ಮ್ಯಾನ್ಮಾರ್ ಈಗ ಯುದ್ಧಭೂಮಿಯಾಗಿ ಮಾರ್ಪಾಡಾಗಿದೆ.

ಹಾಗೇ ಒಮ್ಮೆ ಮ್ಯಾನ್ಮಾರ್‌ನ ಇತಿಹಾಸವನ್ನು ತಿರುವಿ ಹಾಕಿದರೆ ಅಲ್ಲಿ ಸೇನಾಡಳಿತದ ಹಾಗೂ ಅದರ ಸರ್ವಾಧಿಕಾರದ ಕರಾಳ ಪುಟಗಳೇ ಕಣ್ಣಮುಂದೆ ಬರುತ್ತವೆ. 1948ರಲ್ಲಿ ಯುನೈಟೆಡ್ ಕಿಂಗ್ಡಮ್‌ನಿಂದ ಸ್ವಾತಂತ್ರ್ಯ ಪಡೆದ ಮ್ಯಾನ್ಮಾರ್ 1962
ರಿಂದ 2011 ರವರೆಗೆ ಸೇನಾಡಳಿತವನ್ನು ಕಂಡಿದೆ. ಆದರೆ ಸುದೀರ್ಘ ಸೇನಾಡಳಿತದ ಅವಧಿಯಲ್ಲಿ ಮ್ಯಾನ್ಮಾರ್  ನೆಮ್ಮದಿ ಯಿಂದ ಇರದೇ ದೊಡ್ಡ ಪ್ರಮಾಣದ ನರಕಯಾತನೆ ಅನುಭವಿಸಿರುವುದು ದೌರ್ಭಾಗ್ಯದ ಸಂಗತಿ.

ಮಾನವ ಹಕ್ಕುಗಳ ದಮನ, ರೋಹಿಂಗ್ಯಾ ಮುಸ್ಲಿಮರ ನರಮೇಧ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ಇನ್ನು ಅನೇಕ ಪ್ರಜಾಪ್ರಭುತ್ವ ವಿರೋಧಿ ವಿಧ್ವಂಸಕ ಕೃತ್ಯ ನಡೆದದ್ದು ಸೇನಾಡಳಿತದ ಅವಧಿಯ ಎಂಬುದನ್ನು ಯಾರು ಕೂಡ ಅಲ್ಲಗಳೆಯ ಲಾರರು. ಇತಿಹಾಸ ಕೂಡ ಅದನ್ನೇ ಹೇಳುತ್ತದೆ. ದಶಕಗಳ ಸರ್ವಾಧಿಕಾರಿ ಸೇನಾಡಳಿತದ ವಿರುದ್ಧ ರೊಚ್ಚಿಗೆದ್ದ ಮ್ಯಾನ್ಮಾರ್ ಜನತೆ ಕಳೆದ ಅನೇಕ ದಶಕಗಳಿಂದ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಸೇನೆಯ ವಿರುದ್ಧವೇ ಹೋರಾಟಗಳನ್ನು ಶುರುವಿಟ್ಟು ಕೊಂಡರು. ಆ ಸಮಯದಲ್ಲಿ ಸೇನಾಡಳಿತದ ಕಡುವೈರಿಯಾಗಿ ಮತ್ತು ಪ್ರಜಾಪ್ರಭುತ್ವ ಪರ ಸ್ಥಾಪನೆಗಾಗಿ ದೊಡ್ಡ ಮಟ್ಟದಲ್ಲಿ ದನಿ ಎತ್ತಿದ್ದು ಆಂಗ್‌ಸಾನ್ ಸೂಕಿ ಎಂಬ ದಿಟ್ಟೆ.

ಈಕೆ ಬೇರೆ ಯಾರು ಅಲ್ಲ ಆಧುನಿಕ ಮ್ಯಾನ್ಮಾರ್‌ನ ಪಿತಾಮಹ, ಆಂಗ್‌ಸಾನ್‌ನ ಮಗಳು. ಸೇನಾಡಳಿತದ ವಿರುದ್ಧ ದನಿ ಎತ್ತಿದ್ದಕ್ಕಾಗಿ ಆಂಗ್ ಸಾನ್ ಸೂಕಿಯನ್ನು ಅಲ್ಲಿನ ಸೇನೆ ದಶಕಗಳ ಕಾಲ ಬಂಧನದಲ್ಲಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ
ಅವಮಾನಿಸಿತು. ಆದರೆ ಗೃಹಬಂಧನದಲ್ಲಿದ್ದುಕೊಂಡೆ ಸೂಕಿ ಸೇನಾಡಳಿತವನ್ನು ಟೀಕಿಸುತ್ತಾ, ಪ್ರಜಾಪ್ರಭುತ್ವ ಪರ ಹೋರಾಟಗಾರರಿಗೆ ಹಾಗೂ ತನ್ನ ಅನುಯಾಯಿಗಳಿಗೆ ಪ್ರೇರಣೆಯಾದಳು.

ಕೊನೆಗೂ ಪ್ರಜಾಪ್ರಭುತ್ವ ಪರ ಹೋರಾಟಗಾರರ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದ ಸೇನೆ, 2011ರಲ್ಲಿ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ನಿರ್ಧರಿಸಿ, ನಂತರ ಚುನಾವಣೆ ನಡೆಸಿ, ಅದೇ ವರ್ಷ ಮ್ಯಾನ್ಮಾರ್‌ನಲ್ಲಿ ಪ್ರಜಾಸತ್ತಾತ್ಮಕ ಸರಕಾರವೊಂದು ಅಸ್ತಿತ್ವಕ್ಕೂ ಬಂತು. ನಂತರ 2015ರಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಸ್ (ಎನ್ ಎಲ್‌ಡಿ) ಪಕ್ಷ ಬಾರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಮೊದಲಿನಿಂದಲೂ ಸೂಕಿ ಮೇಲೆ ಒಂದು ಕಣ್ಣಿಟ್ಟಿದ್ದ ಸೇನೆಗೆ ಸೂಕಿ ನೇತೃತ್ವದ ಎನ್‌ಎಲ್‌ಡಿಗೆ ಮ್ಯಾನ್ಮಾರ್‌ನ ಚುಕ್ಕಾಣಿ ಕೊಡುವುದು ಇಷ್ಟವಿರಲಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ತೀರ್ಮಾನವೇ ಅಂತಿಮವಾಗಿದ್ದರಿಂದ ಬೇರೆ
ದಾರಿಯಿಲ್ಲದೆ ಚುನಾವಣಾ ಫಲಿತಾಂಶವನ್ನು ಬಾಯಿಮುಚ್ಚಿಕೊಂಡು ಒಪ್ಪಿ ತೆಪ್ಪಗಾಯಿತು ಸೇನೆ. 2011 ರಿಂದ 2020 ರವರೆಗೂ ಮ್ಯಾನ್ಮಾರ್ (ರೋಹಿಂಗ್ಯಾಗಳ ಬಿಕ್ಕಟ್ಟು ಹೊರತು ಪಡಿಸಿ) ಒಂದು ರೀತಿಯಲ್ಲಿ ಜ್ವಲಂತವಾಗಿತ್ತು.

ಏಕೆಂದರೆ ಸೇನಾಡಳಿತ ತೊಲಗಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಮ್ಯಾನ್ಮಾರ್ ಅನ್ನು ಶಾಂತವಾಗಿರಿಸಿತ್ತು. ಐದು ವರ್ಷಗಳ ಸೂಕಿ ಆಡಳಿತ ಕೂಡ ಜನಮನ್ನಣೆ ಗಳಿಸಿತ್ತು. ಮತ್ತೆ 2020ರಲ್ಲಿ ಚುನಾವಣೆ ನಡೆದು ಆ ಚುನಾವಣೆಯಲ್ಲಿಯೂ ಮತ್ತೆ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಸ್ ಪಕ್ಷವೇ ಗೆಲುವು ಸಾಧಿಸಿತು. ಎನ್ ಎಲ್‌ಡಿ ಪಕ್ಷದ ಸತತ ಎರಡೂ ಅವಧಿಯ ಗೆಲುವನ್ನು
ಸಹಿಸದ ಜುಂಟಾ(ಮ್ಯಾನ್ಮಾರ್ ಸೇನೆ ಹೆಸರು) ಏನಾದರೊಂದು ಕಿತಾಪತಿ ಮಾಡಿ ಪ್ರಜೆಗಳಿಂದ ಆಯ್ಕೆಯಾದ ಸರಕಾರವನ್ನು ವಜಾ ಮಾಡಿ ಮತ್ತೆ ತಾನೇ ಅಧಿಕಾರದಲ್ಲಿ ಕೂರಬೇಕೆಂದು ತೀರ್ಮಾನಿಸಿ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್
ಡೆಮಾಕ್ರಸಿಸ್ ಪಕ್ಷಕ್ಕೆ ಹಳ್ಳ ತೊಡಬೇಕೆಂದು ನಿರ್ಧರಿಸಿತು!

ಇದರಿಂದ ಪರೋಕ್ಷವಾಗಿ ಮ್ಯಾನ್ಮಾರ್ ಸೇನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚೂರಿ ಹಾಕುವ ನಿರ್ಧಾರ ತಳೆದಂತಾಯಿತು. ನೋಡ
ನೋಡುತ್ತಿದ್ದಂತೆ ಅಲ್ಲಿನ ಸೇನೆ ಪ್ರಜಾಸತ್ತಾತ್ಮಕ ಸರಕಾರವೊಂದನ್ನು ಏಕಾಏಕಿ ವಜಾಗೊಳಿಸಿ, ಪ್ರಮುಖರನ್ನೆಲ್ಲ ಈಗ ಜೈಲಿ ಗಟ್ಟಿದೆ. ಅದರಲ್ಲಿ ಆಂಗ್ ಸಾನ್ ಸೂಕಿ ಕೂಡ ಇzರೆ. ಈಗ ಸೇನೆ ಮ್ಯಾನ್ಮಾರ್ ಅನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದು ಕೊಂಡಿದೆ.

ಇದರ ಪರಿಣಾಮ ಕಳೆದೊಂದು ತಿಂಗಳಿನಿಂದ ಮ್ಯಾನ್ಮಾರ್ ಅಕ್ಷರಶಃ ಯುದ್ಧಭೂಮಿಯಾಗಿದೆ! ಮ್ಯಾನ್ಮಾರ್‌ನ ಬೀದಿಗಳಲ್ಲಿ ಮಕ್ಕಳು, ಮಹಿಳೆಯರೆನ್ನದೇ ನೂರಾರು ಹೆಣಗಳು ಅಲ್ಲಿನ ಮಿಲಿಟರಿ ಗುಂಡೇಟಿಗೆ ಬಲಿಯಾಗಿ ಸ್ಮಶಾನ ಸೇರುತ್ತಿವೆ. ಆನೇಕರಿಗೆ ಆಶ್ಚರ್ಯವಾಗಬಹುದು ಇದೇನಾಪ್ಪ ಮ್ಯಾನ್ಮಾರ್ ಸೇನೆಯೇ ತನ್ನ ದೇಶದ ಪ್ರಜೆಗಳನ್ನೇ ಕೊಂದು ಬಿಟ್ತಾ ಅಂತ. ಹೌದು, ತನ್ನ ಮಾತು ಕೇಳದ ಜನಸಮುದಾಯವನ್ನು ಹೊಸಕಿ ಹಾಕುವುದಕ್ಕೆ ಮ್ಯಾನ್ಮಾರ್ ಸೇನೆ ಜಗತ್ ಕುಖ್ಯಾತಿ ಪಡೆದಿದೆ!

ಅದೇನೇ ಇರಲಿ ಸದ್ಯಕ್ಕಂತೂ ಮ್ಯಾನ್ಮಾರ್‌ನಲ್ಲಿ ಸೇನಾ ದಾಳಿಗೆ ರಕ್ತದೋಕುಳಿ ಹರಿಯುತ್ತಿದೆ. ಗಾಳಿಗೆ ತರಗೆಲೆಗಳು ಉದುರಿದಂತೆ ಸೇನಾ ದಾಳಿಗೆ ಅಮಾಯಕ ಜನರು ಬೀದಿ ಹೆಣವಾಗುತ್ತಿದ್ದಾರೆ. ಕಳೆದೊಂದು ದಶಕದ ನಂತರ ಮ್ಯಾನ್ಮಾರ್‌ನಲ್ಲಿ ಸೇನಾಪಡೆಗಳ ಹಿಂಸಾಚಾರ ಮತ್ತೆ ಆರಂಭವಾಗಿದೆ. ಮ್ಯಾನ್ಮಾರ್ ಸೇನೆ ಫೆಬ್ರವರಿಯಲ್ಲಿ ಅಲ್ಲಿನ ಪ್ರಜಾಸತ್ತಾತ್ಮಕ ಸರಕಾರವನ್ನು ವಜಾಗೊಳಿಸಿ,
ಸಾಲದ್ದಕ್ಕೆ ಸರಕಾರದ ಭಾಗವಾಗಿದ್ದ ಅನೇಕ ಮುಖಂಡರನ್ನೆಲ್ಲ ಜೈಲಿಗಟ್ಟಿ ದೇಶದ ಆಡಳಿತದ ಚುಕ್ಕಾಣಿಯನ್ನು ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಂಡ ಪರಿಣಾಮ ಮ್ಯಾನ್ಮಾರ್ ಈಗ ಯುದ್ಧಭೂಮಿಯಾಗಿ ಮಾರ್ಪಾಡಾಗಿದೆ.

ಸೂಕಿ ನೇತೃತ್ವದ ಸರಕಾರವನ್ನು ಈಗ ವಜಾಗೊಳಿಸಿರುವುದಕ್ಕೆ ಸೇನೆ ಕೊಟ್ಟಿರುವ ಕಾರಣ, 2020ರ ಚುನಾವಣೆಯಲ್ಲಿ ಸೂಕಿ ಪಕ್ಷ ವಂಚನೆ ನಡೆಸಿ ಅಕ್ರಮವಾಗಿ ಚುನಾವಣೆ ಗೆದ್ದಿದೆ ಎಂದು ಆರೋಪಿಸಿದೆ. ಇದಲ್ಲದೇ ಸರಕಾರವನ್ನು ವಜಾಗೊಳಿಸಿ ಒಂದು ವರ್ಷ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ ಅಲ್ಲಿನ ಸೇನೆ. ಸೇನೆಯ ಈ ದಿಢೀರ್ ನಿರ್ಧಾರದಿಂದ ಹೆದರಿರುವ ಮ್ಯಾನ್ಮಾರ್ ಜನತೆ ದೇಶಕ್ಕೆ ಪ್ರಜಾಪ್ರಭುತ್ವಬೇಕೆಂದು ಆಗ್ರಹಿಸಿ ಬೀದಿಗಿಳಿದಿದ್ದಾರೆ.

ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಸೇನೆ ತನ್ನ ವಿರುದ್ಧ ಮಾತನಾಡುವವರನ್ನು ಹಾಗೂ ಪ್ರತಿಭಟಿಸುವವರ ಬಾಯಿಮುಚ್ಚಿಸಲು ಮ್ಯಾನ್ಮಾರ್‌ನಲ್ಲಿ ಗುಂಡಿನ ದಾಳಿ ನಡೆಸುತ್ತಿದೆ! ಕಳೆದೊಂದು ತಿಂಗಳಿನಿಂದ ಸೇನಾ ದಂಗೆಗೆ ಬಲಿಯಾದವರ ಸಂಖ್ಯೆ ನಾಲ್ಕು ನೂರಕ್ಕೂ ಹೆಚ್ಚು ಮಂದಿ ಎಂದು ವರದಿಗಳು ಹೇಳುತ್ತಿವೆ. ವಿಪರ್ಯಾಸವೆಂದರೆ ಶವಸಂಸ್ಕಾರದ ಸ್ಥಳದಲ್ಲಿ ಸೇರಿದ ಬಂಧುಗಳ ಮೇಲೂ ಸೇನೆ ಗುಂಡಿನ ದಾಳಿ ಮಾಡುತ್ತಿದೆಯಂತೆ!

ಇಷ್ಟೇ ಅಲ್ಲ, ಟಿವಿ ಮಾಧ್ಯಮಗಳನ್ನು, ಇಂಟರ್‌ನೆಟ್ ಸೌಲಭ್ಯಗಳನ್ನು ಮ್ಯಾನ್ಮಾರ್‌ನಲ್ಲಿ ನಿರ್ಬಂಧಿಸಲಾಗಿದೆ. ಅಂಗಡಿ
ಮುಗ್ಗಟ್ಟುಗಳು, ಬ್ಯಾಂಕ್, ಎಟಿಎಂಗಳು ಎಲ್ಲವೂ ಬಂದ್! ಅನೇಕರು ಮ್ಯಾನ್ಮಾರ್‌ನ ಸೇನಾ ದಂಗೆ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವಿಧ್ವಂಸಕಾರಿ ದಾಳಿ ಎಂದು ಕರೆಯುತ್ತಿದ್ದಾರೆ. ಹಾಗಾಗಿ ಈಗ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ವರ್ಸಸ್
ಮಿಲಿಟರಿ ನಡುವೆ ಯುದ್ಧ ಪ್ರಾರಂಭವಾಗಿದೆ ಎನ್ನಬಹುದು.

ಅಂತಾರಾಷ್ಟ್ರೀಯ ವಿಶ್ಲೇಷಣೆಗಳ ಪ್ರಕಾರ ಸೇನೆಯ ಈ ದಿಢೀರ್ ನಿರ್ಧಾರದ ಹಿಂದೆ ಚೀನಾದ ಕೈವಾಡವಿದೆ ಎನ್ನುವ ಅಭಿಪ್ರಾಯ
ವ್ಯಕ್ತವಾಗುತ್ತಿದೆ. ಕಾರಣ, ಆಂಗ್ ಸಾನ್ ಸೂಕಿ ಭಾರತದ ಪರ ಒಲವುಳ್ಳ ನಾಯಕಿ. ಸೂಕಿ ಸರಕಾರ ಚೀನಾದೊಂದಿಗಿನ ಕೆಲವು ಒಪ್ಪಂದಗಳನ್ನು ಮುರಿದುಕೊಂಡು ಭಾರತದೊಂದಿಗೆ ಅದನ್ನು ಬೆಸೆದುಕೊಂಡಿತ್ತು. ಉದಾಹರಣೆಗೆ, ಭಾರತ-ಮ್ಯಾನ್ಮಾರ್
-ಥಾಯ್ಲೆಂಡ್ ತ್ರಿಪಕ್ಷೀಯ ಹೈವೇ ಪ್ರಾಜೆP. ಭಾರತದ ಗಡಿ ದೇಶವನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಲಗಾಮು ಹಾಕಲು
ಬಯಸಿರುವ ಚೀನಾಗೆ ಭಾರತ-ಮ್ಯಾನ್ಮಾರ್ ದೋಸ್ತಿ ನುಂಗಲಾಗದ ತುತ್ತು.

ಹೀಗಾಗಿಯೇ ಸೇನಾ ದಂಗೆಯ ಹಿಂದೆ ಚೀನಾದ ಪಿತೂರಿಯೂ ಇದೆ ಎಂಬ ವಾದವೂ ಕೇಳಿಬರುತ್ತಿದೆ. ಜತೆಗೆ ಜುಂಟಾದ ಮುಖ್ಯಸ್ಥರಿಗೆ ಸೇನಾಡಳಿತ ಬಿಟ್ಟು ಬೇರೆ ಯಾರು ಮ್ಯಾನ್ಮಾರ್‌ನ ಮೇಲೆ ಹಿಡಿತ ಸಾಧಿಸುವುದು ಇಷ್ಟವಿಲ್ಲ. ಸೇನೆಯ ಮಾತೆ ಶಾಸನವಾಗಬೇಕು ಎನ್ನುವ ಧೋರಣೆ ಅಲ್ಲಿನ ಸೇನಾ ಮುಖ್ಯಸ್ಥರದ್ದು. ಹಾಗಾಗಿಯೇ ಸೇನೆ ಸತ್ವವಿಲ್ಲದ ಕಾರಣ ಮುಂದಿಟ್ಟು ಸೂಕಿ ಸರಕಾರವನ್ನು ವಜಾಗೊಳಿಸುವ ಮೂಲಕ ಅರಾಜಕತೆ ಸೃಷ್ಟಿಸಿದೆ.

ಹಾಗಾಗಿ ವಿಶ್ವಸಂಸ್ಥೆ ಸೇರಿದಂತೆ ಅಮೆರಿಕ ಹಾಗೂ ಇನ್ನಿತರ ರಾಷ್ಟ್ರಗಳು ಮ್ಯಾನ್ಮಾರ್‌ನ ಸೇನಾ ದಂಗೆಯನ್ನ  ಕಟುವಾಗಿ ಖಂಡಿಸಿವೆ. ಅಮೆರಿಕವಂತೂ, ಮ್ಯಾನ್ಮಾರ್ ಸೇನೆಯು ತಕ್ಷಣವೇ ಬಂಧನಕ್ಕೊಳಗಾಗಿರುವ ನಾಯಕರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಅಮೆರಿಕವು ಮ್ಯಾನ್ಮಾರ್ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಿದೆ ಎಂದು ಹೇಳಿದೆ. ಭಾರತವೂ ಸಹ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಎಲ್ಲರೂ ತಲೆ ಬಾಗಲೇ ಬೇಕು ಎನ್ನುವ ಮೂಲಕ ಸೇನಾ ದಂಗೆಯನ್ನು ಖಂಡಿಸಿದೆ. ಆದರೆ ಸೇನಾ ದಂಗೆಯ ದೌರ್ಜನ್ಯ ಮಾತ್ರ ಮ್ಯಾನ್ಮಾರ್‌ನಲ್ಲಿ ನಿಂತಿಲ್ಲ.

ಪಾಕಿಸ್ತಾನದಲ್ಲಿ ಸೇನೆ ಮತ್ತು ಸರಕಾರದ ಮಧ್ಯೆ ಇಂತಹ ರಾಜಕೀಯ ಅರಾಜಕತೆಗೆ ದಶಕಗಳ ಕರಾಳ ಇತಿಹಾಸವಿದೆ. ಈಗ ಮ್ಯಾನ್ಮಾರ್‌ನಲ್ಲಿಯೂ ಇಂತದ್ದೇ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಸೇನೆ ಮತ್ತು ಸರಕಾರದ ಜಟಾಪಟಿ ಮ್ಯಾನ್ಮಾರ್ ಜನರನ್ನು ಒದ್ದಾಡುವಂತೆ ಮಾಡುತ್ತಿದೆ. ಒಟ್ಟಿನಲ್ಲಿ ಮ್ಯಾನ್ಮಾರ್ ತನ್ನ ದೇಶದ ಸೇನಾ ದಾಳಿಗೆ ಸಿಲುಕಿ ಉಸಿರುಗಟ್ಟುತ್ತಿರುವುದು ಮಾತ್ರ ವಿಷಾದನೀಯ!

ಒಂದು ಕಾಲದಲ್ಲಿ ಶಾಂತಿ ಮಂತ್ರ ಜಪಿಸಿದ ಬೌದ್ಧ ಧರ್ಮದ ನಾಡು ಇಂದು ಸೇನಾ ದಾಳಿಗೆ ರಕ್ತಸಿಕ್ತವಾಗುತ್ತಿದೆ. ಬುದ್ಧನ ತತ್ವಗಳೇಲ್ಲವೂ ಈಗ ಮ್ಯಾನ್ಮಾರ್‌ನಲ್ಲಿ ಮಣ್ಣುಪಾಲಾಗಿವೆ.