ನೂರೆಂಟು ವಿಶ್ವ
vbhat@me.com
‘ಸಾರ್, ನಾನು ನಿಮ್ಮ ಬರಹಗಳ ಕುರಿತು ಪಿಎಚ್.ಡಿ. ಮಹಾಪ್ರಬಂಧಕ್ಕಾಗಿ ಸಂಶೋಧನೆ ಮಾಡಬೇಕೆಂದಿರುವೆ.’ ಸುಮಾರು ಆರು ವರ್ಷಗಳ ಹಿಂದೆ, ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬಳು ನನ್ನನ್ನು ಭೇಟಿಯಾಗಿ ಹೇಳಿದಾಗ, ನನ್ನಿಂದ ಬಂದ ಉದ್ಗಾರ – ‘ಜೀವನದಲ್ಲಿ ಮಾಡಲು ಸಾಕಷ್ಟು ಉತ್ತಮ ಕೆಲಸಗಳಿವೆ. ಅವೆಲ್ಲ ಬಿಟ್ಟು ಇವೆ ಯಾಕೆ?’ ಆದರೆ ಆ ವಿದ್ಯಾರ್ಥಿನಿ ತನ್ನ ವಾದ ಮುಂದುವರಿಸಿದಳು.
‘ಸುಮ್ಮನೆ ಯಾಕೆ ಮೂರ್ನಾಲ್ಕು ವರ್ಷ ನಿರರ್ಥಕಗೊಳಿಸುತ್ತೀಯಾ?’ ಎಂದು ತಿಳಿಹೇಳಿದೆ. ಪ್ರಾಯಶಃ ಆಕೆ ನನ್ನ ಈ ತಣ್ಣನೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲವೇನೋ? ಅವಳು ಹೋದ ನಂತರ ನನಗೇ ಪಿಚ್ಚೆನಿಸಿತು. ಅಷ್ಟು ಖಡಾಖಡಿ ಯಾಗಿ ಆಕೆಯನ್ನು ನಡೆಸಿಕೊಳ್ಳಬಾರದಿತ್ತೇನೋ ಎನಿಸಿತು. ಅದೇ ಕೊನೆ, ಆಕೆ ಮತ್ತೆಂದೂ ಹೊಳ್ಳಿ ನೋಡಲಿಲ್ಲ. ಅದಾಗಿ ಒಂದು ವರ್ಷದ ಬಳಿಕ ಗುಲ್ಬರ್ಗದ ಶ್ಯಾಮಲಾ ಸ್ವಾಮಿ ಎನ್ನುವವರು ಇದೇ ಕೋರಿಕೆ ಹೊತ್ತು ಬಂದಿದ್ದರು. ಆದರೆ ನಾನು ಅಷ್ಟು ಕಠೋರವಾಗಿ ಹೇಳಲಿಲ್ಲ.
ಮೂರ್ನಾಲ್ಕು ವರ್ಷಗಳ ಕಾಲ, ಒಬ್ಬರು ಬರೆದ ವಿಷಯವಾಗಿ ಸಂಶೋಧನೆ ಮಾಡಿದರೆ, ಬದುಕಿನ ಮಿಕ್ಕ ಸುಂದರ ಸಂಗತಿ ಗಳನ್ನು ಕಳೆದುಕೊಳ್ಳುವ ನಾಜೂಕಿನ ಬಗ್ಗೆ ಹೇಳಿದೆ. ಅವರಿಗೆ ಏನನಿಸಿತೋ ಏನೋ, ಮತ್ತೊಮ್ಮೆ ನನ್ನನ್ನು ನೋಡಲಿಲ್ಲ. ಹಿಂದಿನ ವರ್ಷದ ಮೇ ತಿಂಗಳ ಆರಂಭದಲ್ಲಿ ಅಪರಿಚಿತ ಮೊಬೈಲ್‌ನಿಂದ ವಿದ್ಯಾರ್ಥಿನಿಯೊಬ್ಬರು, ‘ನಾನು ಸುಶ್ಮಿತಾ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿ, ನನ್ನ ನಂಬರ್ ನಿಮ್ಮ ಬಳಿ ಸೇವ್ ಆಗಿರಲಿಕ್ಕಿಲ್ಲ.
ಮೂರು ವರ್ಷಗಳ ಹಿಂದೆ ನಿಮ್ಮನ್ನು ಭೇಟಿ ಆಗಲು ಪ್ರಯತ್ನಿಸಿ ವಿಫಲಳಾಗಿದ್ದೆ. ನಾನು ನಿಮ್ಮ ಬಗ್ಗೆ ಅಂದರೆ ‘ವಿಶ್ವೇಶ್ವರ ಭಟ್ ಅವರ ಅಂಕಣ ಸಾಹಿತ್ಯ’ ಎಂಬ ವಿಷಯ ಕುರಿತು ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿನಿ. ಅಂದ ಹಾಗೆ ಈ ಮಹಾ ಪ್ರಬಂಧ ಈಗ ಅಂತಿಮ ಹಂತ ತಲುಪಿದೆ. ಈ ಸಂದರ್ಭದಲ್ಲಿ ನಾನು ನಿಮ್ಮನ್ನು ಭೇಟಿಯಾಗಬೇಕಿದೆ. ದಯವಿಟ್ಟು ಅವಕಾಶ ಮಾಡಿಕೊಡಿ’ ಎಂಬ ವಾಟ್ಸಾಪ್ ಸಂದೇಶ ಕಳಿಸಿದ್ದಳು. ನಾನು ‘ಆಗಬಹುದು’ ಎಂದಷ್ಟೇ ಉತ್ತರಿಸಿದೆ.
ನನ್ನನ್ನು ಭೇಟಿ ಮಾಡದೇ, ನಿನ್ನ ಪಿಎಚ್.ಡಿ. ಬಗ್ಗೆ ನನಗೆ ಒಂದು ಮಾತನ್ನೂ ತಿಳಿಸದೇ, ಈಗಲೇ ಅಂತಿಮ ಹಂತಕ್ಕೆ
ಬಂದಿzಳಲ್ಲ, ಯಾವುದಕ್ಕೂ ಭೇಟಿ ಮಾಡೋಣ ಎಂದು ಅಂದುಕೊಂಡು ಸುಮ್ಮನಾದೆ. ಸುಶ್ಮಿತಾ ತನ್ನ ಆಧಾರ್ ಕಾರ್ಡ್, ವಿಶ್ವವಿದ್ಯಾಲಯ ನೀಡಿದ ಗುರುತಿನ ಪತ್ರ, ತನ್ನ ಮಹಾಪ್ರಬಂಧದ ಪರಿವಿಡಿ ಮುಂತಾದ ವಿವರಗಳನ್ನೆ ಕಳಿಸಿಕೊಟ್ಟಿದ್ದಳು. ಮರುದಿನವೇ ಸುಶ್ಮಿತಾ ನನ್ನ ಆಫೀಸಿನಲ್ಲಿ ಹಾಜರ್! ‘ನೀನು ನನ್ನ ಅಂಕಣ ಬರಹಗಳ ಬಗ್ಗೆ ಪಿಎಚ್.ಡಿ. ಮಾಡುತ್ತಿರುವ ವಿಚಾರವೇ ನನಗೆ ಗೊತ್ತಿಲ್ಲ. ಇವೆ ಹೇಗೆ?’ ಎಂದು ಮಾತು ಆರಂಭಿಸಿದೆ.
‘ಇಲ್ಲ ಸಾರ್, ನಾಲ್ಕು ವರ್ಷಗಳ ಹಿಂದೆ, ನಾನು ನಿಮ್ಮನ್ನು ಭೇಟಿ ಮಾಡಲು ಮೈಸೂರಿನಿಂದ ‘ವಿಶ್ವವಾಣಿ’ ಕಚೇರಿಗೆ
ಬಂದೆ. ನಾನು ಬಂದಿದ್ದನ್ನು ನಿಮ್ಮ ಸಹಾಯಕರು ನಿಮಗೆ ತಿಳಿಸಿದರು. ನೀವು ಈಗ ಕರೆಯಬಹುದು, ಕೆಲ ನಿಮಿಷಗಳಲ್ಲಿ
ಕರೆಯಬಹುದು ಎಂದು ನಾಲ್ಕು ಗಂಟೆ ಕಾದೆ. ನೀವು ನನ್ನನ್ನು ಕರೆಯಲೇ ಇಲ್ಲ. ನೀವು ಅಂದು ಬಹಳ ಬಿಜಿಯಾಗಿದ್ದೀರಿ
ಎಂದು ತಿಳಿಯಿತು. ನಾನು ಬಹಳ ನಿರಾಸೆಯಿಂದ ಮೈಸೂರಿಗೆ ವಾಪಸ್ ಹೋದೆ.
ಅದಾಗಿ ನಾಲ್ಕೈದು ತಿಂಗಳ ಬಳಿಕ ಮತ್ತೊಮ್ಮೆ ಅದೇ ಕಚೇರಿಗೆ ಬಂದೆ. ನಾನು ಬಂದ ವಿಷಯವನ್ನು ನಿಮ್ಮ ಸಹಾಯಕರು ತಿಳಿಸಿದರು. ಅಂದೂ ಸಹ ನೀವು ಮೀಟಿಂಗ್ ನಲ್ಲಿದ್ದೀರಿ. ಕಾದು ಕಾದು ಸುಸ್ತಾಗಿ ನಿರಾಶೆಯಿಂದ ವಾಪಸ್ ಬಂದು ಬಿಟ್ಟೆ. ನೀವು ಅಂದೂ ನನ್ನನ್ನು ಕರೆಯಲೇ ಇಲ್ಲ. ನಿಜ ಹೇಳಬೇಕೆಂದರೆ, ಅಂದು ನನಗೆ ಅಳುವೇ ಬಂದುಬಿಟ್ಟಿತ್ತು. ನಾನು ಯಾರ ಅಂಕಣ
ಬರಹಗಳನ್ನು ವಿದ್ಯಾರ್ಥಿ ದೆಸೆಯಿಂದಲೂ ಓದಿ ಬೆಳೆದಿದ್ದೇನೋ, ಯಾರ ಅಂಕಣ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡ ಬೇಕೆಂದು ಬಯಸಿದ್ದೇನೋ, ಅವರನ್ನು ಒಮ್ಮೆ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಅಂದ್ರೆ ನನಗೆ ಪಿಎಚ್.ಡಿ. ಮುಗಿಸಲು ಸಾಧ್ಯವಾ ಎಂಬ ಅನುಮಾನ ಕಾಡಲಾರಂಭಿಸಿತು.
ನಾನು ನನ್ನ ಸಂಶೋಧನೆಗೆ wrong person ನ್ನು ಆಯ್ಕೆ ಮಾಡಿಕೊಂಡುಬಿಟ್ಟೆನಾ ಎಂಬ ಸಂದೇಹ ನನ್ನನ್ನು ಬಲವಾಗಿ
ಕಾಡಲಾರಂಭಿಸಿತು. ಆದರೆ ನಾನು ನಿಮ್ಮ ಭೇಟಿ ಮಾಡುವ ಪ್ರಯತ್ನ ನಿಲ್ಲಿಸಿದೆ. ಆದರೆ ನಿಮ್ಮ ಅಂಕಣ ಬರಹಗಳ ಬಗ್ಗೆ
ನನ್ನ ಸಂಶೋಧನೆಯನ್ನು ಮುಂದುವರಿಸಿದೆ.’ ಎಂದಳು ಸುಶ್ಮಿತಾ.
ಅಸಲಿಗೆ, ನನ್ನ ಕೆಲಸ-ಕಾರ್ಯದ ಒತ್ತಡದಲ್ಲಿ ಆಕೆ ನನ್ನನ್ನು ಭೇಟಿ ಮಾಡಲು ಬಂದಿರುವುದನ್ನೇ ಮರೆತುಬಿಟ್ಟಿದ್ದೆ.
ಸಾಮಾನ್ಯವಾಗಿ ಭೇಟಿಗೆ ಬಂದವರನ್ನು ನಾನು ಕಾಯಿಸುವುದಿಲ್ಲ. ಅದರಲ್ಲೂ ಭೇಟಿ ಮಾಡದೇ ಕಳಿಸಿದ ನಿದರ್ಶನವೇ ಇಲ್ಲ. ಆದರೆ ನಾನು ಅಂದು ಅದ್ಯಾವ ಒತ್ತಡದಲ್ಲಿದ್ದೇನೋ, ಗೊತ್ತಿಲ್ಲ. ಅಂತೂ ನಮ್ಮಿಬ್ಬರ ಭೇಟಿ ಸಾಧ್ಯವಾಗಲಿಲ್ಲ ಎಂಬುದಂತೂ ನಿಜ. ‘ಸುಶ್ಮಿತಾ, ನೀವು ಎರಡು ಸಲ ಬಂದು ನನಗಾಗಿ ಕಾದು ಬರಿಗೈಯಲ್ಲಿ ಹೋದದ್ದು, ಒಂದು ರೀತಿಯಲ್ಲಿ, ಒಳ್ಳೆಯದೇ ಆಯಿತು.
ಒಂದು ವೇಳೆ ನಿಮ್ಮನ್ನು ಭೇಟಿ ಮಾಡಿದ್ದರೆ, ನಿಮ್ಮ ಸಂಶೋಧನೆಗೆ ನಾನೇ ಕಲ್ಲು ಹಾಕುತ್ತಿದ್ದೆ. ನಿಮ್ಮ ಉತ್ಸಾಹಕ್ಕೆ ನಾನೇ ತಣ್ಣೀರು ಎರಚುತ್ತಿz’ ಎಂದು ಹೇಳಿ, ನನ್ನ ಅಂಕಣ ಬರಹ ಕುರಿತು ಸಂಶೋಧನೆ ಮಾಡಲು ಮುಂದೆ ಬಂದ ಆ ಇಬ್ಬರು ವಿದ್ಯಾರ್ಥಿನಿಯರು ಹೇಗೆ ಅದನ್ನು ಆರಂಭದಲ್ಲಿ ಕೈಚೆಲ್ಲುವಂತಾದರು ಎಂಬ ಪ್ರಸಂಗಗಳನ್ನು ವಿವರಿಸಿದೆ. ಆಗಲೇ ಸುಶ್ಮಿತಾ ನಿರಾಳ ಆಗಿದ್ದು. ‘ಆದರೆ ನಾನು ಈ ಸಂದರ್ಭದಲ್ಲಿ ನಿನ್ನ ಪ್ರಯತ್ನಕ್ಕೆ ಕಲ್ಲು ಹಾಕಲಾರೆ. ಕಾರಣ ನೀನು ಈಗಾಗಲೇ ಸಂಶೋ ಧನೆಯ ಕೊನೆಯ ಹಂತದಲ್ಲಿದ್ದೀಯ. ಪ್ಲೀಸ್ ಹೇಳಮ್ಮ, ಈ ಹಂತದಲ್ಲಿ ನಾನೇನು ಮಾಡಬೇಕು?’ ಎಂದು ಕೇಳಿದೆ. ಅದೇ ನನ್ನ ಮತ್ತು ಅವಳ ಮೊದಲ ಭೇಟಿ.
ಅಂದು ಸುಶ್ಮಿತಾ, ಸುಮಾರು ೩೦-೪೦ ಪ್ರಶ್ನೆಗಳುಳ್ಳ ಉದ್ದದ ಪ್ರಶ್ನಾವಳಿಯನ್ನು ನನ್ನ ಮುಂದೆ ಹರಡಿಟ್ಟಾಗ, ನಾನು
ಅವೆಲ್ಲವುಗಳಿಗೆ ಮೂರ್ನಾಲ್ಕು ಗಂಟೆ ಸುದೀರ್ಘವಾಗಿ ಉತ್ತರಿಸಿದ್ದೆ. ಇದಾಗಿ ಒಂದೂವರೆ ವರ್ಷವಾಗಿರಬಹುದು, ನಾನು ನನ್ನ ಕೆಲಸ, ಪ್ರವಾಸ, ಬರಹಗಳ ಒತ್ತಡದಲ್ಲಿ ಸುಶ್ಮಿತಾ ಮಾಡುತ್ತಿರುವ ಸಂಶೋಧನೆಯನ್ನು ಮರೆತೇ ಬಿಟ್ಟಿದ್ದೆ. ‘ಆಕೆಯ ಸಂಶೋ ಧನೆಗೆ ನನ್ನಿಂದ ಏನಾದರೂ ಸಹಾಯ ಬೇಕಿತ್ತಾ ಎಂದು ಸಹ ಕೇಳಲೇ ಇಲ್ಲವಲ್ಲ’ ಎಂದು ಒಂದೆರಡು ಸಲ ಅನಿಸಿತ್ತು. ಆದರೆ ಸತತ ಪ್ರವಾಸಗಳ ಮಧ್ಯೆ ಆಕೆಯನ್ನು ಸಂಪರ್ಕಿಸಲು ಆಗಲೇ ಇಲ್ಲ.
ಹದಿನೈದು ದಿನಗಳ ಹಿಂದೆ, ಸುಶ್ಮಿತಾ ಫೋನ್ ಮಾಡಿ, ‘ವಿಶ್ವವಿದ್ಯಾಲಯದ ದೃಢೀಕರಣ ಪತ್ರ ಬರುವುದೊಂದು ಬಾಕಿಯಿದೆ, ಉಳಿದಂತೆ ಎಲ್ಲವೂ ಮುಗಿದಿದೆ. ಆ ಪತ್ರ ಸಿಕ್ಕಿದ ಬಳಿಕ ಖುದ್ದಾಗಿ ನಾನೇ ನನ್ನ ಮಹಾಪ್ರಬಂಧದೊಂದಿಗೆ ಬರ್ತೇನೆ’ ಎಂದು ತಿಳಿಸಿದಳು. ಮೊನ್ನೆ ಅವಳಿಗೆ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಫಲಿತಾಂಶ ದೃಢೀಕರಣ ಪತ್ರ ಬಂದಿತು. ಸುಶ್ಮಿತಾ ಆನಂದಕ್ಕೆ ಪಾರವೇ ಇರಲಿಲ್ಲ. ಇತ್ತ ನನಗೆ ಮಾತಾಡಲು ಆಗದೇ ಒತ್ತರಿಸಿ ಬಂದ ಆನಂದಭಾಷ್ಪವನ್ನು ನಿಯಂತ್ರಿಸಿಕೊಳ್ಳಲು
ಪ್ರಯತ್ನಿಸುತ್ತಿದ್ದೆ.
ನನಗೇ ಪಿಎಚ್.ಡಿ. ಪದವಿ ಸಿಕ್ಕಿದ್ದರೂ ಇಷ್ಟು ಸಂತಸ ಆಗುತ್ತಿರಲಿಲ್ಲವೇನೋ ಮತ್ತು ನಾನು ಆ ಸಾಧನೆ ಯನ್ನು ಅಷ್ಟೊಂದು ಸಂಭ್ರಮಿಸುತ್ತಿರಲಿಲ್ಲವೇನೋ. (ನಾನೂ ಸಹ ಬೆಂಗಳೂರಿನ ಕ್ರೈ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಕಳೆದ ಮೂರು ವರ್ಷಗಳಿಂದ ಪಿಎಚ್.ಡಿ. ಮಾಡುತ್ತಿದ್ದೇನೆ) ಮೊನ್ನೆ ಸುಶ್ಮಿತಾ ತಾನು ಸಿದ್ಧಪಡಿಸಿದ ಮಹಾಪ್ರಬಂಧದ ಪ್ರತಿ, ಸ್ವೀಟ್ ಜತೆ ನನ್ನ ಮನೆಗೆ ಬಂದಿದ್ದಳು. ಅದು ನನ್ನ ಮತ್ತು ಅವಳ ಎರಡನೇ ಭೇಟಿ. ಸುಮಾರು ನಾನೂರು ಪುಟಗಳ ಆ ಭಾರವಾದ ಮಹಾಪ್ರಬಂಧವನ್ನು ನನ್ನ ಕೈಗಿತ್ತಾಗ, ನನ್ನ ಕಣ್ಣಾಲಿಗಳಿಂದ ಅಯಾಚಿತವಾಗಿ ನೀರು ಹನಿಯೊಡೆಯಿತು.
ಕಳೆದ ಹದಿನೇಳು ವರ್ಷಗಳ ಕಾಲ (2000-2017) ನಾನು ಬರೆದ ಅಂಕಣಗಳನ್ನೆ ಓದಿ, ಅವುಗಳನ್ನು ಬೇರೆ ಬೇರೆ ವಿಷಯ ಗಳಾಗಿ ವರ್ಗೀಕರಿಸಿಕೊಂಡು, ಅವುಗಳಲ್ಲಿರುವ ಸಂಗತಿಗಳನ್ನು ಅರ್ಥ ಮಾಡಿಕೊಂಡು, ಹೊಸ ಹೊಳಹುಗಳನ್ನು ಗುರುತಿಸಿ, ಸುಮಾರು ನಾಲ್ಕು ವರ್ಷಗಳ ಕಾಲ ತದೇಕಚಿತ್ತದಿಂದ ಅಧ್ಯಯನ, ಸಂಶೋಧನೆ ಮಾಡಿದ ಆಕೆಯ ಧ್ಯಾನಸ್ಥ ಮನಸ್ಥಿತಿ, ತಪಸ್ಸು, ಏಕಾಗ್ರತೆ, ಶ್ರದ್ಧೆ, ನಂಬಿಕೆ, ಪರಿಶ್ರಮ, ಹಠ, ಛಲದ ಬಗ್ಗೆ ಅಭಿಮಾನ ಮೂಡಿತು. ಆಕೆ ತನ್ನ ಜೀವನದ ಅಮೂಲ್ಯ ನಾಲ್ಕು ವರ್ಷಗಳನ್ನು ನನ್ನ ಬರಹ-ಚಿಂತನೆಯ ಸಂಶೋಧನೆಗೆ ನೀಡಿದ್ದಳು!
ನನಗೆ ಇದಕ್ಕಿಂತ ದೊಡ್ಡ ಬಹುಮಾನ, ಗೌರವ, ಸಾರ್ಥಕ್ಯ ಇರಲು ಸಾಧ್ಯವೇ? ಕಾರಣ ಇವನ್ನೆಲ್ಲ ಹಣದಿಂದಲೂ ಕೊಂಡು ಕೊಳ್ಳಲು ಆಗುವುದಿಲ್ಲ. ‘ಸಾರ್, ಎರಡು ಸಲ ನಿಮ್ಮ ಆಫೀಸಿಗೇ ಬಂದು ಭೇಟಿ ಮಾಡಲು ಸಾಧ್ಯವಾಗದೇ, ಬರಿಗೈಲಿ ಮರಳಿದಾಗ, ನನ್ನ ಸ್ನೇಹಿತೆಯರು, ಹಿರಿಯರು, ಆಪ್ತರು ನನ್ನಲ್ಲಿ ನಿರುತ್ಸಾಹದ ಬೀಜ ಬಿತ್ತಿದ್ದರು. ಬೆಂಗಳೂರಿನಲ್ಲಿರುವ ಸಂಪಾದಕರೆಲ್ಲ ನಿನ್ನ ಕೈಗೆ ಸಿಕ್ತಾರಾ? ಅವರನ್ನು ಭೇಟಿ ಮಾಡುವುದೇ ಕಷ್ಟ, ಅವರೆಲ್ಲ ನಿನ್ನಂಥವರಿಗೆ ಸಿಗ್ತಾರಾ? ಅವರಿಂದ ಯಾವ ಸಹಕಾರವೂ ಸಿಗುವುದಿಲ್ಲ, ನೀನ್ಯಾಕೆ ನಿನ್ನ ಸಂಶೋಧನೆಯ ವಿಷಯ ಬದಲಿಸಬಾರದು? ಎಂದು ಕೇಳಿದವರೇ ಹೆಚ್ಚು.
ಇನ್ನು ಕೆಲವರು, ವಿಶ್ವೇಶ್ವರ ಭಟ್ಟರ ಬಗ್ಗೆ ಗೊತ್ತಾ ನಿನಗೆ, ಅವರು ಬಹಳ ವಿವಾದಾತ್ಮಕ ವ್ಯಕ್ತಿ, ಕೋಮುವಾದಿ, ಜಾತಿವಾದಿ.
ಅಂಥವರ ಬರಹಗಳ ಬಗ್ಗೆ ಸಂಶೋಧನೆ ಮಾಡುವ ಹುಚ್ಚು ನಿನಗೇಕೆ? ಪತ್ರಕರ್ತರ ಸಹವಾಸ ಬಿಟ್ಟು, ಬೇರೆ ಯಾರಾದರೂ
ಸಾಹಿತಿಗಳ ಬರಹಗಳನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಬಾರದೇ? ಅಷ್ಟಕ್ಕೂ ಭಟ್ಟರ ಸಾಹಿತ್ಯದ ಬಗ್ಗೆಯೇ
ಸಂಶೋಧನೆ ಮಾಡಬೇಕು ಎಂಬ ಹಠ ಏಕೆ? ಎಂದು ಹಲವರು ಕೇಳಿದರು’ ಎಂದು ಸುಶ್ಮಿತಾ ತಮ್ಮ ಆರಂಭಿಕ ದಿನಗಳ ಅನುಭವವನ್ನು ಹೇಳಿಕೊಂಡಳು.
ಆಗ ನಾನು, ‘ಅಲ್ಲಮ್ಮಾ, ನನ್ನ ಮನಸ್ಸಿನಲ್ಲೂ ಮೂಡಿದ ಪ್ರಶ್ನೆ ಅದೇ. ನನ್ನ ಅಂಕಣ ಬರಹದ ಬಗ್ಗೆಯೇ ಸಂಶೋಧನೆ
ಮಾಡಬೇಕು ಎಂಬ ಹಠ ನಿನಗೇಕೆ ಬಂತು?’ ಎಂದು ಕೇಳಿದೆ. ಅದಕ್ಕೆ ಸುಶ್ಮಿತಾ, ‘ಸಾರ್, ನಾನು ಶಾಲಾ ದಿನಗಳಿಂದ
ಪತ್ರಿಕೆಯಲ್ಲಿ ನಿಮ್ಮ ಬರಹಗಳನ್ನು ಓದಿಕೊಂಡು ಬೆಳೆದವಳು. ನಿಮ್ಮ ಅಕ್ಷರಗಳಿಂದ ನೀವು ಎಂಥ ವ್ಯಕ್ತಿಯಿರಬಹುದು ಎಂದು
ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವಳು. ಅದರಿಂದ ಪ್ರಭಾವಿತಳಾದವಳು. ಹೀಗಾಗಿ ನನ್ನ ಮನಸ್ಸಿನಲ್ಲಿ ನಿಮ್ಮ ಬರಹ ಗಳ ಹೊರತಾಗಿ ಬೇರೆ ಯಾರ ಸಾಹಿತ್ಯವೂ ಬರಲಿಲ್ಲ.
ಆದರೆ ನಿಮ್ಮನ್ನು ಭೇಟಿಯಾಗಲು ಪ್ರಯತ್ನಿಸಿ ಸಫಲಳಾಗದೇ ಹೋದಾಗ, ನಿರಾಶಳಾದೆ. ಆದರೆ ಅಷ್ಟಕ್ಕೇ ಕೈಚೆಲ್ಲಲಿಲ್ಲ. ನನ್ನ
ಸಂಶೋಧನೆ ಮುಂದುವರಿಸಿದೆ. ನೀವು ಖಂಡಿತವಾಗಿಯೂ ನನ್ನ ಪ್ರಯತ್ನವನ್ನು ಅನುಮೋದಿಸುತ್ತೀರಿ ಎಂಬ ವಿಶ್ವಾಸ
ನನ್ನಲ್ಲಿತ್ತು. ಹೀಗಾಗಿ ಮುಂದುವರಿದೆ.’ ಎಂದಾಗ ಸುಶ್ಮಿತಾ ದನಿಯಲ್ಲಿ ಆತ್ಮವಿಶ್ವಾಸವಿತ್ತು.
‘ಆಗ ತಾನೇ ನಾನು ಸಂಶೋಧನೆ ಆರಂಭಿಸಿದ ದಿನಗಳು. ಒಂದು ದಿನ ಹಿರಿಯರೊಬ್ಬರು ನನಗೆ, ‘ಪತ್ರಕರ್ತರದು ಅವಸರದ ಸಾಹಿತ್ಯ. ಅದರಲ್ಲೂ ವಿಶ್ವೇಶ್ವರ ಭಟ್ಟರದು ಸಂಶೋಧನೆ ಮಾಡುವಂಥ ಬರಹಗಳೇನಲ್ಲ. ನಿನಗೆ ಬೇರೆ ಯಾರೂ ಸಿಗಲಿ ಲ್ಲವಾ? ಆವಯ್ಯ ಭೇಟಿಗೂ ಸಿಗಲಿಲ್ಲ ಅಂತೀಯಾ. ಈಗಲೂ ನೀವು ವಿಷಯ ಬದಲಿಸಿಕೊಳ್ಳಲು ಅವಕಾಶವಿದೆ. ಯಾವುದಕ್ಕೂ ಯೋಚಿಸಿ ನಾಳೆ ತಿಳಿಸು’ ಎಂದರಂತೆ. ಆ ರಾತ್ರಿಯೆಲ್ಲ ಸುಶ್ಮಿತಾ ಮನಸ್ಸಿನಲ್ಲಿ ನೂರೆಂಟು ಯೋಚನೆಗಳು. ‘ಹೀಗೆ ಹೇಳಿ ಬಿಟ್ಟರಲ್ಲ? ಏನು ಮಾಡೋದು? ಈಗಾಗಲೇ ನಾನು ಆ ವಿಷಯದ ಬಗ್ಗೆಯೇ ಸಂಶೋಧನೆ ಮಾಡಬೇಕೆಂದು ನಿರ್ಧರಿಸಿದ್ದೇನೆ. ಇವರು ಹೇಳುವ ಮಾತಿನಲ್ಲಿ ಸತ್ಯಾಂಶ ಇದೆಯಾ? ಅವರೇಕೆ ಹಾಗೆ ಹೇಳಿದರು? ಮುಂದೇನು ಮಾಡಲಿ?’ ಎಂಬ ತಾಕ ಲಾಟ.
ಮರುದಿನ ಅದೇ ಹಿರಿಯರನ್ನು ಭೇಟಿ ಮಾಡಿದ ಸುಶ್ಮಿತಾ, ‘ಸಾರ್, ನೀವು ಹೇಳಿದ ನಂತರ ರಾತ್ರಿಯೆಲ್ಲ ಬಹಳ ಯೋಚಿಸಿದೆ. ಈಗ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಮಾಡುವುದಿದ್ದರೆ ನಾನು ಭಟ್ಟರ ಸಾಹಿತ್ಯದ ಬಗ್ಗೆಯೇ ಪಿಎಚ್.ಡಿ. ಮಾಡುತ್ತೇನೆ’ ಎಂದು ಹೇಳಿದಳಂತೆ. ಆಗ ಅವರು ಪ್ರತಿಕ್ರಿಯಿಸಿದ್ದು – ‘ಭೇಷ್! ನೀನು ನಿನ್ನ ವಿಷಯಕ್ಕೆ ಎಷ್ಟು ಬದ್ಧವಾಗಿದ್ದೀಯ ಎಂಬುದನ್ನು ಪರೀಕ್ಷಿಸಬೇಕಿತ್ತು. ಅದಕ್ಕಾಗಿ ನಾನು ಹಾಗೆ ಹೇಳಿದೆ.
ನೀನು ಆಯ್ಕೆ ಮಾಡಿಕೊಂಡ ವಿಷಯ ಚೆನ್ನಾಗಿದೆ. ನಾನೂ ಭಟ್ಟರ ಬರಹಗಳ ಓದುಗ, ಅಭಿಮಾನಿ. ನಿಶ್ಚಿತವಾಗಿಯೂ ನೀನು
ಮುಂದುವರಿಯಬಹುದು.’ ಆಗಲೇ ಸುಶ್ಮಿತಾಳಿಗೆ ಆನೆಬಲ ಬಂದಿದ್ದು. ತನ್ನ ಸಂಶೋಧನೆಗೆ ಗೈಡ್ ಆದ ಡಾ.ಪ್ರೀತಿ
ಶ್ರೀಮಂಧರಕುಮಾರ್ ಅವರ ಸೂಕ್ತ ಮಾರ್ಗದರ್ಶನ, ಪ್ರೀತಿ, ಕಾಳಜಿ, ಪ್ರೋತ್ಸಾಹ ದೊರಕಿತು. ಬಸವಣ್ಣ, ಅಕ್ಕಮಹಾದೇವಿ, ಕುಮಾರವ್ಯಾಸ, ಪಂಪ, ರವೀಂದ್ರನಾಥ ಟ್ಯಾಗೋರ್, ಶಿವರಾಮ ಕಾರಂತ, ಬೇಂದ್ರೆ, ಗಳಗನಾಥ, ಮಹಾದೇವಿ ವರ್ಮ, ಜೈಶಂಕರ ಪ್ರಸಾದ, ತಿರುವಳ್ಳುವರ್, ಕಲ್ಕಿ ಕೃಷ್ಣಮೂರ್ತಿ, ಶೇಕ್ಸ್ ಪಿಯರ್, ಕೀಟ್ಸ್, ಆಸ್ಕರ್ ವೈಲ್ಡ್, ಮಾರ್ಕ್ ಟ್ವೈನ್, ಚಾಲ್ಸ್ ಡಿಕೆ, ಜಾರ್ಜ್ ಒರ್ವೆಲ್ … ಇವರಾರೂ ಯಾವುದೇ ವಿಶ್ವವಿದ್ಯಾಲಯದಿಂದಲೂ ಪಿಎಚ್.ಡಿ. ಪದವಿ ಪಡೆದವರಲ್ಲ.
ಆದರೆ ಅವರ ಸಾಹಿತ್ಯ ನೂರಾರು ಸಂಶೋಧನೆಗಳಿಗೆ ವಸ್ತುವಾಗಿವೆ. ಈಗಲೂ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಇವರ ಸಾಹಿತ್ಯ, ಸಂಶೋಧನೆಗೆ ಹೊಸ ಹೊಳಹು ನೀಡುತ್ತವೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಅಕೆಡೆಮಿಕ್ ಜೀವನದಲ್ಲಿ ಒಂದು ಮಹತ್ಸಾಧನೆಯ ಮೈಲಿಗಲ್ಲನ್ನು ತಲುಪಲು ಕಾರಣವಾಗುತ್ತವೆ. ಇದಕ್ಕಿಂತ ದೊಡ್ಡ ಕೃತಾರ್ಥ ಭಾವ ಇನ್ನೇನಿದೆ? ‘ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ..ಹಸಿವೆಯನ್ನು ತಾಳಲಾರೆ ಕಾಪಾಡೆಯಾ- ಹರನೇ..’ ಹಾಡನ್ನು ಬರೆದವರು ಲಾವಣಿ ನಂಜಪ್ಪ ಅಥವಾ ಎಸ್.ನಂಜಪ್ಪ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಇನ್ನು ಅವರನ್ನು ನೆನಪಿಸಿಕೊಳ್ಳುವುದಂತೂ ದೂರವೇ ಉಳಿಯಿತು.
ಆದರೆ ಆ ಹಾಡು ಅಸಂಖ್ಯ ಭಿಕ್ಷುಕರಿಗೆ ಅನ್ನ ನೀಡಿದೆ, ಹಸಿವನ್ನು ದೂರ ಮಾಡಿದೆ. ಅದೊಂದು ಹಾಡಿಗೆ ಜೀವನ ಪೊರೆಯುವ
ತಾಕತ್ತಿದೆ. ಇದಕ್ಕಿಂತ ಮಿಗಿಲಾದುದುಂಟೇ? ಸುಶ್ಮಿತಾ ನನ್ನ ಬರಹಗಳ ಬಗ್ಗೆ ಮಾತಾಡುತ್ತಾ ಹೋದಳು. ನನಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಹೇಳಿದಳು. ಹೇಳಿ ಕೇಳಿ, ನನ್ನ ಬರಹಗಳ ಬಗ್ಗೆಯೇ ಸಂಶೋಧನೆ ಮಾಡಿದವಳು. ‘ಸುಶ್ಮಿತಾ, ನನ್ನ ಬಗ್ಗೆ ನನಗೆ ಗೊತ್ತಾಗದಿದ್ದರೆ ಇನ್ನು ಮುಂದೆ ನಾನು ನಿನ್ನನ್ನೇ ಕೇಳುತ್ತೇನೆ, ಆಗಬಹುದೇ?’ ಎಂದೆ. ಇಬ್ಬರೂ ಬಾಯ್ತುಂಬಾ ನಕ್ಕೆವು. ಆದರೆ ಅವಳು ಅಷ್ಟು ಚೆಂದವಾಗಿ ನನ್ನನ್ನು ಅರ್ಥ ಮಾಡಿಕೊಂಡಿದ್ದಳು.