ಶಿಶಿರಕಾಲ
ಶಿಶಿರ್ ಹೆಗಡೆ, ನ್ಯೂಜೆರ್ಸಿ
ಇದೊಂದು ಮರ್ಡರ್ ಮಿಸ್ಟರಿ. ಇದೊಂದು ಸರಣಿ ಕೊಲೆಯನ್ನು ಬೇಧಿಸಿದ ಕಥೆ. ಬೋಟ್ಸ್ವಾನಾ, ಜಿಂಬಾಬ್ವೆ ಗಡಿಗೆ ತಾಗಿ ಕೊಂಡಿರುವ ಸೌತ್ ಆಫ್ರಿಕಾದ ಈಶಾನ್ಯ ಭಾಗದಲ್ಲಿರುವ ಲಿಂಪೋಪೋ ಎನ್ನುವ ಹುಲ್ಲುಗಾವಲಿನ ಪ್ರದೇಶ.
ಅಲ್ಲಿ ಜನವಸತಿ ಸ್ವಲ್ಪ ಕಡಿಮೆ. ಮನುಷ್ಯರಿಗಿಂತ ಪ್ರಾಣಿಗಳೇ ಜಾಸ್ತಿ ಇರುವ ಹುಲ್ಲುಗಾವಲದು. ದಕ್ಷಿಣ ಆಫ್ರಿಕಾದಲ್ಲಿ ಆಂತರಿಕ ದಂಗೆ, ವರ್ಣಬೇಧ ಗಲಾಟೆಗಳಾದಾಗ ಅಲ್ಲಿನ ಮೂಲ ನಿವಾಸಿಗಳಾದ ಕಪ್ಪು ವರ್ಣೀಯರು ಮಧ್ಯ ದಕ್ಷಿಣ ಆಫ್ರಿಕಾದಿಂದ ದಿಕ್ಕಾ ಪಾಲಾದರು.
ಅದರಲ್ಲಿ ಒಂದು ದೊಡ್ಡ ಜನಸಂಖ್ಯೆ ಉತ್ತರದ ಈ ನೀರಿಲ್ಲದ ಒಣ ಹುಲ್ಲುಗಾವಲು ಪ್ರದೇಶ ಸೇರಿಕೊಂಡಿತು. ಇಂದಿಗೂ ಈ
ಲಿಂಪೋಪೋದಲ್ಲಿ ಶೇ.೯೭ರಷ್ಟು ಕಪ್ಪು ವರ್ಣೀಯರು. ಈ ಸರಣಿ ಕೊಲೆ ನಡೆದದ್ದು ೧೯೮೫ರ ಸಮಯ. ಆಗಷ್ಟೇ ದಕ್ಷಿಣ ಆಫ್ರಿಕಾದ ವರ್ಣಬೇಧ ಸ್ಥಿತಿ ಒಂದು ಹಂತದಲ್ಲಿ ಸುಧಾರಿಸಿಕೊಂಡು ಬದಲಾವಣೆ ನಿಧಾನಕ್ಕೆ ಶುರುವಾಗಿತ್ತು. ಕರಾಳ ಚರಿತ್ರೆ ಮುಗಿಯುವ ತಯಾರಿಯಲ್ಲಿತ್ತು. ಆದರೆ ಸಾಮಾನ್ಯ ಕಪ್ಪು ವರ್ಣೀಯರ ಜೀವನ ಒಂಚೂರೂ ಬದಲಾಗಿರಲಿಲ್ಲ.
ಅಲ್ಲಿನ ಗಾಳಿಯಲ್ಲಿ ಕರಿಯರ ರಕ್ತದ ಕಂಪು ಇನ್ನೂ ಇತ್ತು. ಅಂಥ ಸ್ಥಿತಿಯಲ್ಲಿ – ಕರಿಯರೇ ತುಂಬಿದ್ದ ಲಿಂಪೋಪೋ ಪ್ರದೇಶದಲ್ಲಿ ಈ ಸರಣಿ ಕೊಲೆ. ಆದರೆ ಫಾರ್ ಎ ಚೇಂಜ್, ಕೊಲೆಯಾಗುತ್ತಿದ್ದುದು ಮನುಷ್ಯರಲ್ಲ. ಆ ಪ್ರದೇಶದಲ್ಲಿನ ಕುಡು ಎಂಬ ಚಿಗರೆ. ಈ ಹುಗಳು ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ತೀರಾ ಸಾಮಾನ್ಯ. ಆ ವರ್ಷ ಈ ಚಿಗರೆಗಳು ಒಂದೊಂದಾಗಿ ಕಾಡಿನ ಮಧ್ಯೆ ಸತ್ತು ಬೀಳಲು ಶುರುವಾದವು. ಇದು ಅಲ್ಲಿನ ಬಿಳಿಯ ಫಾರೆಸ್ಟ್ ರೇಂಜರ್‌ಗಳಿಗೆ ದೊಡ್ಡ ತಲೆನೋವಾಯಿತು.
ಮೊದ ಮೊದಲು ಒಂದೆರಡು ಕುಡು ಚಿಗರೆ ಈ ರೀತಿ ಅಸಹಜ ಸಾವಿಗೆ ತುತ್ತಾದವು. ಆಗ ಅಲ್ಲಿನ ಅರಣ್ಯ ಪಾಲಕರು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಕ್ರಮೇಣ ಈ ಚಿಗರೆಗಳ ಸಾವು ಹೆಚ್ಚಾಗುತ್ತಲೇ ಹೋಯಿತು. ಆ ಬಿಳಿಯ ಅರಣ್ಯ ಪಾಲಕರು ಮೊದಲು ಇದು ಯಾರೋ ಕರಿಯರ ಕೆಲಸ ಅಂದುಕೊಂಡರು. ಆದರೂ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಸತ್ತು ಬೀಳುತ್ತಿದ್ದ ಚಿಗರೆಯ ಎಲ್ಲ ಅಂಗಾಂಗಗಳೂ ಯಥಾವತ್ ಇರುತ್ತಿದ್ದವು. ಸತ್ತು ಬೀಳುತ್ತಿದ್ದ ಚಿಗರೆಯ ಕೊಡಿರಲಿ ಅದರ ಗೊರಸಿಗೂ ಚಿಕ್ಕ ಗಾಯವಾಗಿರುತ್ತಿರಲಿಲ್ಲ.
ಸದೃಢ ಮಧ್ಯ ವಯಸ್ಸಿನ ಚಿಗರೆ ಹುಲ್ಲುಗಾವಲಿನ ಮಧ್ಯೆ ಅಲ್ಲಲ್ಲಿ ಸತ್ತು ಹೆಣವಾಗಿ ಮಲಗುತ್ತಿದ್ದವು. ಯಾರೋ ಬೇಕಂತಲೇ ಕಿತಾಪತಿಗೆ ಕೊಲ್ಲುತ್ತಿರ ಬಹುದು ಎಂದರೆ ಈ ರೀತಿ ಚಿಗರೆಯ ಸಾವು ಬಹು ವಿಸ್ತಾರವಾದ ಪ್ರದೇಶದಲ್ಲಿ ಆಗುತ್ತಿತ್ತು. ಸಾಯುತ್ತಿದ್ದ ಚಿಗರೆಯ ಮೈ ಮೇಲೆ ಯಾವುದೇ ಗಾಯವಾಗಲೀ ಅಥವಾ ಕಲೆಗಳಾಗಲಿ ಇರುತ್ತಿರಲಿಲ್ಲ. ಇದ್ಯಾವುದೋ ಕಾಯಿಲೆಯಿಂದ ಸಾಯುತ್ತಿದೆ ಎಂದರೆ ಅದಕ್ಕೂ ಯಾವುದೇ ಪುರಾವೆ ಸಿಗಲಿಲ್ಲ. ಈ ಕುಡು ಚಿಗರೆ ಗುಂಪಿನಲ್ಲಿ ಬದುಕುವ ಪ್ರಾಣಿ. ಚಿಕ್ಕ ಗುಂಪು ಗಳಲ್ಲಿ ಸಾವಿನ ಪ್ರಮಾಣ ಇರಲೇ ಇಲ್ಲ. ಸಾವು ಕೇವಲ ದೊಡ್ಡ ಗುಂಪುಗಳಲ್ಲಿ ಮಾತ್ರ. ವಿಚಿತ್ರ ಪರಿಸ್ಥಿತಿ.
ಇದೊಂದು ಬಿಡಿಸಲಾಗದ ಬ್ರಹ್ಮ ಗಂಟಾಗಿ ಅಲ್ಲಿನ ಅರಣ್ಯಪಾಲಕರಿಗೆ ಕಾಡತೊಡಗಿತು. ಮೊದಲೇ ಆಗ ದಕ್ಷಿಣ ಆಫ್ರಿಕಾದ ಸೂಕ್ಷ್ಮ ಕಾಲ ಘಟ್ಟ. ಅಲ್ಲದೇ ಅಸಹಜವಾಗಿ ಭಾರೀ ಪ್ರಮಾಣದಲ್ಲಿ ಚಿಗರೆಗಳು ಸಾಯುತ್ತಿದ್ದ ಜಾಗ ಅತಿ ಹೆಚ್ಚು ಕಪ್ಪು ವರ್ಣೀಯ ರಿರುವ ಪ್ರದೇಶ. ಈ ಎಲ್ಲ ಕಾರಣಗಳಿಂದ ಅಲ್ಲಿನ ಸರಕಾರ ತಕ್ಷಣ ಜಾಗೃತವಾಯಿತು. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ವಿಜ್ಞಾನಿಗಳ ಒಂದು ದೊಡ್ಡ ಗುಂಪನ್ನು ದಕ್ಷಿಣ ಆಫ್ರಿಕಾದ ಸರಕಾರ ಈ ಪ್ರದೇಶಕ್ಕೆ, ಈ ಸರಣಿ ಕೊಲೆಯನ್ನು ಬೇಧಿಸಲು ಕಳಿಸಿಕೊಟ್ಟಿತು.
ಪೊಲೀಸರು ಸತ್ತ ಚಿಗರೆಯ ಸುತ್ತ ಮನುಷ್ಯನ ಹೆಜ್ಜೆ ಗುರುತನ್ನು ಹುಡುಕಿದರು, ಅರಣ್ಯ ಇಲಾಖೆ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೇಟೆಗಾರರನ್ನು ಹಿಡಿಯಲು ತಯಾರಿ ಮಾಡಿಕೊಂಡಿತು. ಅಷ್ಟೆಲ್ಲ ಕಸರತ್ತು ಮಾಡಿದರೂ, ಯಾರೊಬ್ಬರಿಗೂ ಈ ಸರಣಿ ಕೊಲೆಯನ್ನು ಬೇಧಿಸಲಾಗಲಿಲ್ಲ. ವಿಜ್ಞಾನಿಗಳು ಸತ್ತ ಚಿಗರೆಯ ಮರಣೋತ್ತರ ಪರೀಕ್ಷೆ ಮಾಡಿದರು – ಅವರಿಗೂ ಏನೂ ಸಿಗಲಿಲ್ಲ. ಸಾಮಾನ್ಯವಾಗಿ ವಿಷಪ್ರಾಶನವಾದರೆ ಪ್ರಾಣಿಯ ದೇಹದಲ್ಲಿ ವಿಷದ ಕಾರಣದಿಂದ ಹತ್ತಾರು ದೇಹದ ಭಾಗಗಳಲ್ಲಿ ಘಾಸಿ ಕಾಣಿಸುತ್ತದೆ.
ಆದರೆ ಅದ್ಯಾವುದೂ ವಿಜ್ಞಾನಿಗಳಿಗೆ ಕಾಣಿಸಲಿಲ್ಲ. ಇಡೀ ವಿಜ್ಞಾನಿ ವರ್ಗ, ಪೊಲೀಸರು ಮತ್ತು ಅರಣ್ಯ ಪಾಲಕರು ತಲೆಯಮೇಲೆ ಕೈ ಹೊತ್ತು ಕುಳಿತರು. ದೊಡ್ಡ ದೊಡ್ಡ ಗುಂಪಿನಲ್ಲಿರುವ ಸಾವಿರಗಟ್ಟಲೆ ಚಿಗರೆಗಳು ಮಾತ್ರ ಸಾಯುತ್ತಲೇ ಇದ್ದವು. ಚಿಕ್ಕ ಕುಡು ಗುಂಪಿನಲ್ಲಿ ಒಂದೇ ಒಂದು ಚಿಗರೆಯೂ ಸಾಯುತ್ತಿರಲಿಲ್ಲ. ತಿಂಗಳುಗಳೇ ಕಳೆದರೂ ಈ ಮರ್ಡರ್ ಮಿಸ್ಟರಿ ಮಾತ್ರ ಬಗೆಹರಿಯಲೇ ಇಲ್ಲ. ಆ ಕಾಲದಲ್ಲಿ ದಕ್ಷಿಣ ಆಫ್ರಿಕಾದ ಈ ಹುಲ್ಲುಗಾವಲಲ್ಲಿ ಪ್ರವಾಸೋದ್ಯಮದಿಂದ ತಕ್ಕ ಮಟ್ಟಿಗೆ ಸರಕಾರಕ್ಕೆ ಆದಾಯ ಬರುತ್ತಿತ್ತು.
ಈ ಲಕ್ಷಗಟ್ಟಲೆ ಕುಡು ಚಿಗರೆಯನ್ನು ನೋಡಲು ದೇಶವಿದೇಶದಿಂದ ಪ್ರವಾಸಿಗರು ಬರುತ್ತಿದ್ದರು. ಕ್ರಮೇಣ ಸಾವಿರಗಟ್ಟಲೆ ಚಿಗರೆಗಳು ಸಾಯುವುದರಿಂದ ಅಲ್ಲ ದುರ್ನಾತ. ಇದರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿಟ್ಟು. ಈ ಕಾರಣಕ್ಕೆ
ತಕ್ಷಣ ಚಿಗರೆಗಳ ಸಾವಿನ ರಹಸ್ಯ ಬೇಽಸಲೇ ಬೇಕಾದ ಅನಿವಾರ್ಯತೆ ಅಲ್ಲಿನ ಸರಕಾರಕ್ಕೆ.
ಇದನ್ನು ಕೊನೆಯಲ್ಲಿ ಬೇಧಿಸಿದ್ದು ಜೀವಶಾಸಜ್ಞ ವ್ಯಾನ್ ಹೋವನ್. ಆತನ ತಂಡ ಹೀಗೆ ಸತ್ತ ಸುಮಾರು ಮೂವತ್ತು ಚಿಗರೆಯ
ಮೃತದೇಹವನ್ನು ಪರೀಕ್ಷಿಸಿತು. ಇವೆಲ್ಲದರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡ ಒಂದು ವಿಚಾರ ಅವರ ಗಮನಕ್ಕೆ ಬಂತು – ಸತ್ತ ಎಲ್ಲ ಚಿಗರೆಗಳ ಹೊಟ್ಟೆಯಲ್ಲಿ ಜೀರ್ಣವಾಗದ ಅಪಾರ ಪ್ರಮಾಣದ ಒಂದೇ ಜಾತಿಯ ಎಲೆಗಳಿದ್ದವು. ಸಸ್ಯಾಹಾರಿ ಪ್ರಾಣಿ ಎಂದರೆ ಅದರ ಹೊಟ್ಟೆಯಲ್ಲಿ ಅರೆ ಜೀರ್ಣಗೊಂಡ ಎಲೆ ಇರುವುದು ಸಾಮಾನ್ಯ, ಆದರೆ ಈ ಎಲ್ಲ ಚಿಗರೆಗಳ ಹೊಟ್ಟೆಯಲ್ಲಿ ಇದ್ದ ಎಲೆ ಅವು ಸೇವಿಸಿದ ಸಮಯವನ್ನು ಲೆಕ್ಕ ಹಾಕಿ ನೋಡಿದಾಗ ಅದರ ಜೀರ್ಣ ಪ್ರಮಾಣ ತಾಳೆಯಾಗುತ್ತಿರಲಿಲ್ಲ.
ಅಲ್ಲದೇ ಈ ಎಲ್ಲ ಜಿಂಕೆಗಳ ರಕ್ತದಲ್ಲಿ ಟೆನನ್ ನ್ನುವ ಕೆಮಿಕಲ್ ಭಾರೀ ಪ್ರಮಾಣದಲ್ಲಿರುವುದು ಪತ್ತೆಯಾಯಿತು. ಟೆನನ್ ಎನ್ನುವುದು ಸಸ್ಯಜನ್ಯ ರಾಸಾಯನಿಕ. ಇದು ಗಿಡಗಳಲ್ಲಿ ಸಾಮಾನ್ಯವಾಗಿ ಎಲೆ, ಕಾಂಡ, ಹಣ್ಣು, ಬೀಜ ಹೀಗೆ ಎಲ್ಲ ಭಾಗದಲ್ಲೂ
ಅಲ್ಪ ಪ್ರಮಾಣದಲ್ಲಿರುತ್ತದೆ. ಸಸ್ಯಗಳು ಕೀಟ, ಬೆಕ್ಟೀರಿಯಾ ಅಥವಾ -ನ್ಗೆ ಗಳ ದಾಳಿ ತಗ್ಗಿಸಲು ತಮ್ಮಲ್ಲಿ ಉತ್ಪಾದಿಸಿಕೊಳ್ಳುವ ನೈಸರ್ಗಿಕ ಕೀಟ ನಿಯಂತ್ರಕ.
ಇದು ಒಂದು ಸೌಮ್ಯ ವಿಷ. ಸಸ್ಯದ ಬದುಕಿಗೆ, ಪರಾಗ ಸ್ಪರ್ಶಕ್ಕೆ, ಕೀಟ ಅವಶ್ಯಕ. ಆದರೆ ಮಿತಿಮೀರಿ ಕೀಟದ ದಾಳಿಯಾದಾಗ ಅವನ್ನು ನಿಯಂತ್ರಿಸಲು ಸಸ್ಯಗಳು ಈ ರಾಸಾಯನಿಕ ವನ್ನು ನಿಯಂತ್ರಿತವಾಗಿ ಹೆಚ್ಚಿಸಿಕೊಳ್ಳುವುದರ ಮೂಲಕ ಕೀಟದ
ಉಪದ್ರವನ್ನು ಹತೋಟಿಯಲ್ಲಿಡುತ್ತವೆ. ಈ ರಾಸಾಯನಿಕ ಸಾಮಾನ್ಯವಾಗಿ ಸಸ್ಯಾಹಾರಿ ದೊಡ್ಡ ಪ್ರಾಣಿಗಳಿಗೆ ಅಷ್ಟಾಗಿ
ಬಾಧಿಸುವುದಿಲ್ಲ. ಆದರೆ ಈ ಕುಡು ಚಿಗರೆಯಲ್ಲಿ ಅದು ಲೆಕ್ಕ ಮೀರಿ ಕಾಣಿಸಿಕೊಂಡಿತ್ತು ಮತ್ತು ಅದರ ಸಾವಿಗೆ ಕಾರಣವಾಗಿತ್ತು.
ಹಾಗಾದರೆ ಈ ಪ್ರಮಾಣದಲ್ಲಿ – ಪ್ರಾಣಿಯನ್ನು ಕೊಲ್ಲುವಷ್ಟು ಟೆನನ್ ತಯಾರಿಸುತ್ತಿದ್ದ ಸಸ್ಯವಾದರೂ ಯಾವುದು ಎಂದು
ಹುಡುಕುತ್ತ ಹೋದ ತಂಡಕ್ಕೆ ಕೊಲೆಗಾರ ಸಿಕ್ಕಿದ್ದ.
ಆ ಕುಡುಗಳನ್ನು ಕೊಲ್ಲುತ್ತಿದ್ದುದು ಅಕೇಶಿಯಾ ಗಿಡ. ತೀವ್ರ ಬರಗಾಲವಿದ್ದ ಸಮಯ ಅದು. ಹಾಗಾಗಿ ಹುಲ್ಲುಗಾವಲಲ್ಲಿ ಬದುಕುಳಿದ ಕೆಲವೇ ಸಸ್ಯಗಳಲ್ಲಿ ಅಕೇಶಿಯಾ ಕೂಡ ಒಂದು. ಆ ಕಾರಣಕ್ಕೆ ಆಹಾರಕ್ಕೆ ಈ ಚಿಗರೆಗಳು ಅಕೇಷಿಯಾವನ್ನೇ ನೆಚ್ಚಿಕೊಂಡಿದ್ದವು. ಅಕೇಶಿಯಾ ಇವುಗಳ ಜೀವರಕ್ಷಕವಾಗಿತ್ತು. ಆದರೆ ಯಾವಾಗ ಚಿಗರೆಗಳು ಲೆಕ್ಕಮೀರಿ ಅವನ್ನು ತಿನ್ನಲು ಶುರುಮಾಡಿಕೊಂಡವೋ ಆಗ ಅಕೇಶಿಯಾ ಗಿಡಗಳು ತಮ್ಮನ್ನು ತಾವು ಉಳಿಸಿಕೊಳ್ಳಲು ಟೆನನ್ ರಾಸಾಯನಿಕವನ್ನು ಹೆಚ್ಚೆಚ್ಚು
ಉತ್ಪಾದಿಸಲು ಶುರುಮಾಡಿಕೊಂಡವು.
ಒಮ್ಮಿಂದೊಮ್ಮೆಲೇ ಭಾರೀ ಪ್ರಮಾಣದಲ್ಲಿ ಚಿಗರೆಗಳು ಈ ಗಿಡವನ್ನು ತಿನ್ನಲು ಗುಂಪಿನಲ್ಲಿ ಬಂದಾಗ ಅದನ್ನು ಈ ಗಿಡಗಳು ಗ್ರಹಿಸುತ್ತಿದ್ದವು ಮತ್ತು ಅದಕ್ಕನುಗುಣವಾಗಿ ಟೆನನ್ ರಾಸಾಯನಿಕವನ್ನು ಉತ್ಪಾದಿಸುತ್ತಿದ್ದವು. ಟೆನನ್‌ನಿಂದಾಗಿ ಕುಡುವಿನ ಹೊಟ್ಟೆಯಲ್ಲಿನ ಎಲೆಗಳು ಜೀರ್ಣ ವಾಗುತ್ತಿರಲಿಲ್ಲ. ಚಿಕ್ಕ ಗುಂಪಿನಲ್ಲಿ ಚಿಗರೆಗಳಿದ್ದರೆ ಅಕೇಶಿಯಾ ಜಾಸ್ತಿ ಟೆನ್ಶನ್ ಉತ್ಪಾದಿಸು ತ್ತಿರಲಿಲ್ಲ. ಹಾಗಾಗಿ ಚಿಕ್ಕ ಗುಂಪಿನಲ್ಲಿದ್ದ ಚಿಗರೆಗಳು ಸಾಯುತ್ತಿರಲಿಲ್ಲ.
ಈ ಘಟನೆ ಗಿಡಗಳೆಡೆಗೆ ಹೊಸತೊಂದು ಆಯಾಮವನ್ನೇ ತೆರೆಯಿತು. ನಂತರ ಪರೀಕ್ಷೆಗೆ – ವಿಜ್ಞಾನಿಗಳು ಗುಂಪಿನಲ್ಲಿ ಗಲಾಟೆ
ಮಾಡುತ್ತ ಹೋಗಿ ಈ ಗಿಡವನ್ನು ಅಲುಗಾಡಿಸಿದಾಗ ಟೆನನ್ ಹೆಚ್ಚು ಉತ್ಪಾದನೆಯಾದದ್ದು ಕಾಣಿಸಿತು. ಅಷ್ಟೇ ದೊಡ್ಡ ಗುಂಪಿನಲ್ಲಿ ಹೋಗಿ, ಹೆಚ್ಚಿಗೆ ಗಲಾಟೆ ಮಾಡದೇ ಕೆಲವೇ ಮಂದಿ ಗಿಡದ ಬಳಿ ಹೋಗಿ ಎಲೆ ಕೀಳುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ಟೆನನ್ ತಯಾರಾಗುತ್ತಿತ್ತು.
ಕೇವಲ ಒಂದೆರಡೇ ಮಂದಿ ಹೋಗಿ ಎಲೆ ಕೀಳುವ ಕೆಲಸ ಮಾಡಿದಾಗ ಮಾತ್ರ ಟೆನನ್ ಆ ಪ್ರಮಾಣದಲ್ಲಿ ಗಿಡದಲ್ಲಿ ತಯಾರಾಗು ತ್ತಿರಲಿಲ್ಲ. ಕಣ್ಣಿಲ್ಲದ, ಕಿವಿಯಿಲ್ಲದ ಅಕೇಶಿಯಾ ಗಿಡ ಅಕ್ಷರಶಃ ತನ್ನ ಸುತ್ತಲಿನ ಪ್ರಾಣಿಗಳ ಲೆಕ್ಕಾಚಾರ ಮಾಡಬಲ್ಲದಾಗಿತ್ತು.
ಸಸ್ಯಗಳು ಕೀಟಗಳನ್ನು, ಪ್ರಾಣಿಗಳನ್ನು ಹೊಂಚುಹಾಕಿ ಕೊಲ್ಲುವುದು ಹೊಸತೇನಲ್ಲ. ಮಾಂಸಾಹಾರಿ ಸಸ್ಯಗಳು ಸಾಮಾನ್ಯ
ವಾಗಿ ಅವನ್ನು ತಿನ್ನಲು ಬರುವ ಚರ ಜೀವಿಗಳನ್ನೇ ಕೊಂದು ನುಂಗುತ್ತವೆ. ಕೆಲವು ಅಂಟಿನಿಂದ ತನ್ನ ಮೇಲೆ ಬಂದು ಕೂರುವ
ಕೀಟಗಳನ್ನು ಹಿಡಿದುಕೊಳ್ಳುತ್ತವೆ. ಇನ್ನು ಕೆಲವು ಸಸ್ಯಗಳು ಜಾರುವ ಮೇಲ್ಮೆ , ಅಥವಾ ಹಲ್ಲುಗಳಂಥ ಆಕೃತಿಯ ಅಂಗಗಳನ್ನು ಹೊಂದಿದ್ದು ಅವುಗಳ ಮೇಲೆ ಬಂದು ಕೂರುವ ಕೀಟವನ್ನು ಹಿಡಿದು ಗುಳುಂ ಮಾಡುತ್ತವೆ.
ಇವೆಲ್ಲ ಆ ಕಾಲದಲ್ಲಿ ಗೊತ್ತಿದ್ದ ವಿಚಾರವೇ ಆಗಿತ್ತು. ಆದರೆ ಸಸ್ಯವೊಂದು ತನ್ನ ಉಳಿವಿಗೆ ತನ್ನ ಸುತ್ತಲಿನ ಪ್ರಾಣಿಗಳನ್ನು,
ಅವುಗಳ ಸಂಖ್ಯೆಯನ್ನು ಗ್ರಹಿಸಿ ಕೊಲ್ಲುವ – ಆತ್ಮರಕ್ಷಣೆ ಮಾಡಿಕೊಳ್ಳುವ ವಿಚಾರ ಹೊಸತು. ಸಾಮಾನ್ಯವಾಗಿ ಜೀವಿಗಳಲ್ಲಿ ಪ್ರಾಣಿಗಳೇ ಮೇಲೆ ಎನ್ನುವುದು ನಮ್ಮ ಭಾವನೆ. ಪ್ರಾಣಿಗಳು ಚಲಿಸಬಲ್ಲವು – ಗಿಡಗಳು ಇದ್ದ ಇರುವಂಥ ಜೀವಿ. ಬೀಜ ಎಲ್ಲಿ ಬಿದ್ದು ಬೇರು ಬಿಟ್ಟಿದೆಯೋ ಅ ಅದರ ಪೂರ್ಣ ಬದುಕು ಸಾಗಬೇಕು. ಈ ಕಾರಣಕ್ಕೆ ಸಸ್ಯದ ಬದುಕು ಪ್ರಾಣಿಗಳಷ್ಟು ಸುಲಭವಲ್ಲ. ಪ್ರಾಣಿಯೊಂದು ಜೀವ ಭಯವಿದೆ ಎಂದರೆ ಅಲ್ಲಿಂದ ಬೇರೆ ಕಡೆ ಓಡಬಹುದು ಆದರೆ ಸಸ್ಯಕ್ಕೆ ಆ ಅವಕಾಶವಿಲ್ಲ.
ಇದು ಗೊತ್ತಿರುವ ವಿಚಾರವೇ ಆದರೂ ಈ ಹಿನ್ನೆಲೆಯಲ್ಲಿ ಗ್ರಹಿಸಿದಾಗ ಇದು ಹೊಸತೊಂದು ಗ್ರಹಿಕೆಯನ್ನು ನಮ್ಮೆದುರಿಗೆ ತಂದು ನಿಲ್ಲಿಸುತ್ತದೆ. ಪ್ರಾಣಿಯೇ ಸುಪೀರಿಯರ್ ಎನ್ನುವ ನಮ್ಮ ನಂಬಿಕೆಯನ್ನು ಇದು ಪ್ರಶ್ನಿಸಲು ಶುರುಮಾಡುತ್ತದೆ. ಪ್ರಾಣಿಗಳು ಸ್ಪರ್ಶವನ್ನು ಗ್ರಹಿಸುವುದು ಚರ್ಮದಿಂದಾದರೂ ಗ್ರಹಿಕೆಯ ಅನುಭವಕ್ಕೆ ಮೆದುಳು ಬೇಕು. ಆದರೆ ಸಸ್ಯಗಳು ಮೆದುಳೇ ಇಲ್ಲದ ಸ್ಪರ್ಶವನ್ನು ಗ್ರಹಿಸಬಲ್ಲದು ಎನ್ನುವುದು ಬೀಳು ಬಿಡುವ ಸಸ್ಯವನ್ನು ನೋಡಿ ತಿಳಿಯಬಹುದು.
ಕಣ್ಣೇ ಇಲ್ಲದ ಲತೆ ತನ್ನ ಸುತ್ತ ಇರುವ ಕೋಲನ್ನು, ಬೇಲಿಯನ್ನು ಗ್ರಹಿಸಿ, ಆ ದಿಕ್ಕಿನಲ್ಲಿ ಬೆಳೆದು ಅದಕ್ಕೆ ಸುತ್ತಿಕೊಂಡು ಮೇಲಕ್ಕೆ ಬೆಳೆಯಬಲ್ಲವು. ಮುಟ್ಟಿದರೆ ಮುನಿ – ನಾಚಿಕೆ ಮುಳ್ಳಿನ ಗಿಡ ಒಂದು ಚಿಕ್ಕ ಚಲನೆಯನ್ನು ಗ್ರಹಿಸಿ ಮುದುಡಿಕೊಳ್ಳುವುದು ಸ್ಪರ್ಶಜ್ಞಾನವೇ. ಸಸ್ಯಗಳ ಬಗ್ಗೆ ವಿಸ್ತಾರವಾಗಿ ಅಧ್ಯಯನ ಮಾಡಿದ್ದು ಜಗದೀಶ್ ಚಂದ್ರ ಬೋಸ್. ಸಸ್ಯಗಳಿಗೆ ಸಂವೇದನೆಯಷ್ಟೇ ಅಲ್ಲ ಪ್ರಜ್ಞೆಕೂಡ ಇದೆ ಎನ್ನುವುದನ್ನು ಕಂಡುಹಿಡಿದದ್ದೇ ನಮ್ಮ ಬೋಸರು.
ಅಲ್ಲಿಯವರೆಗೆ ಪ್ರಜ್ಞೆ ಕೇವಲ ಪ್ರಾಣಿಗಳಿಗಷ್ಟೇ ಸೀಮಿತ ಎಂದು ನಾವು ನಂಬಿಕೊಂಡಿದ್ದು. ಉಷ್ಣತೆಯನ್ನು ಗ್ರಹಿಸಲು ಪ್ರಾಣಿ ಗಳಿಗೆ ಮೆದುಳು ಬೇಕು – ಆದರೆ ಮೆದುಳೇ ಇಲ್ಲದ ಸಸ್ಯ ಕೂಡ ಉಷ್ಣತೆಯನ್ನು ಕರಾರುವಕ್ಕಾಗಿ ಗ್ರಹಿಸಬಲ್ಲವು. Codariocalyx motorius ಎನ್ನುವ ಗಿಡವನ್ನು ನರ್ತಿಸುವ ಗಿಡ ಎಂದು ಕರೆಯಲಾಗುತ್ತದೆ. ನೀವು ಆ ಗಿಡದ ಮುಂದೆ ನಿಂತು ಸಂಗೀತ
ನುಡಿಸಿದರೆ ಅವು ನಿಂತ ನರ್ತಿಸಲು ಶುರುಮಾಡುತ್ತವೆ, ಅವುಗಳ ಎಳೆಗಳು ಬಿಚ್ಚಿಕೊಳ್ಳುತ್ತವೆ.
ಶಬ್ದವನ್ನು ಕಿವಿಯೇ ಇಲ್ಲದೆ ಸಸ್ಯಗಳು ಗ್ರಹಿಸಬಲ್ಲವು ಎಂದು ಮೊದಲು ತಿಳಿದದ್ದು ಈ ಸಸ್ಯದಿಂದ. ಉಳಿದ ಸಸ್ಯಗಳು ಕೂಡ ಸಂಗೀತವನ್ನು, ಶಬ್ದವನ್ನು ಗ್ರಹಿಸಬಲ್ಲವು ಎನ್ನುವುದು ಈಗೀಗ ನಮಗೆ ತಿಳಿದ ವಿಚಾರ. ಇತ್ತೀಚಿನವರೆಗೆ ಶಬ್ದ ಅಥವಾ
ಸಂಗೀತಕ್ಕೆ ಸಸ್ಯಗಳು ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ಗ್ರಹಿಸುವ ಸಲಕರಣೆಗಳೇ ನಮ್ಮ ಬಳಿ ಇರಲಿಲ್ಲ. ಕೆಲ ವಿಜ್ಞಾನಿಗಳು ಹೇಳುವಂತೆ ಒಳ್ಳೆಯ ಸಂಗೀತ ಗಿಡಗಳಿಗೆ ಕೇಳಿಸಿದರೆ ಅವು ಹೆಚ್ಚಿನ ಇಳುವರಿ ಕೊಡಬಲ್ಲವಂತೆ. ಈ ನಿಟ್ಟಿನಲ್ಲಿ ಜರ್ ರೋಜರ್ ಎನ್ನುವ ಸಂಗೀತಜ್ಞ ಸಸ್ಯಕ್ಕೆಂದೇ ‘ರಾಪ್ ಸಿಟಿ ಇನ್ ಗ್ರೀನ್’ ಎನ್ನುವ ಮ್ಯೂಸಿಕ್ ಆಲ್ಬಮ್ ಅನ್ನು ತಯಾರಿಸಿದ.
ಇಂದಿಗೂ ಹಲವಾರು ಪಾಶ್ಚಾತ್ಯ ತೋಟಗಳಲ್ಲಿ ಈ ಸಂಗೀತವನ್ನು ನುಡಿಸಲಾಗುತ್ತದೆ ಮತ್ತು ಇದರಿಂದ ಹೆಚ್ಚಿನ ಇಳುವರಿ ಸಾಧ್ಯವಾಗಿದೆ. ಸಸ್ಯಕ್ಕೆ ಶಬ್ದ ಗ್ರಹಿಸಲು ಕಿವಿಯೇ ಬೇಡ ಎಂದಾಯಿತಲ್ಲ. ಸಾಮಾನ್ಯವಾಗಿ ಹೊಸ ಮಾರಣಾಂತಿಕ ಕೀಟದ ದಾಳಿಯಾದಾಗ ಸಸ್ಯಗಳು ರಾಸಾಯನಿಕಗಳನ್ನು ಸ್ರವಿಸುವ ಮೂಲಕ ಕಾಡಿನ ಉಳಿದ ಸಸ್ಯಗಳಿಗೆ ಸಂದೇಶ ರವಾನಿಸಬಲ್ಲವು. ಈ ರೀತಿ ಸ್ರವಿಸಿದ ರಾಸಾಯನಿಕ ಗಾಳಿಯಲ್ಲಿ ಹರಡಿದಾಗ ಅದನ್ನು ಉಳಿದ ಸಸ್ಯಗಳು ಗ್ರಹಿಸಿ ತಮ್ಮಷ್ಟಕ್ಕೆ ತಾವೇ ಪ್ರತಿರೋಧಗಳನ್ನು ಬೆಳೆಸಿಕೊಳ್ಳಬಲ್ಲವು.
ಸಸ್ಯಗಳಿಗೆ ಸಂದೇಶ ರವಾನೆಗೆ ಮೊಬೈಲ್‌ನ ಅವಶ್ಯಕತೆ ಇಲ್ಲ. ಓಕ್ ಮರಗಳು ಕಾಡಿನಲ್ಲಿ ಗುಂಪಿನಲ್ಲಿ ಸಮುದಾಯದಂತೆ
ಬೆಳೆಯುತ್ತವೆ, ಬದುಕುತ್ತವೆ. ಅವುಗಳ ಜಾಗದಲ್ಲಿ, ಮಧ್ಯೆ ಬೇರೆ ಜಾತಿಯ ಬೀಜವೊಂದು ಬೇರೂರಲು ಪ್ರಯತ್ನಿಸಿದಲ್ಲಿ ಓಕ್
ಮರಗಳು ಅದನ್ನು ಗ್ರಹಿಸಬಲ್ಲವು ಮತ್ತು ಎಲ್ಲ ಮರಗಳು ಒಟ್ಟಾಗಿ ಬೇರೆ ಜಾತಿಯ ಗಿಡದ ಬೇರನ್ನು ಆವರಿಸಿ ಮತ್ತು ರಾಸಾಯನಿಕ ಬಿಟ್ಟು ದಾಳಿ ಮಾಡಿ ಕೊಲ್ಲುತ್ತವೆ.
ನಾವು ಕಾಡನ್ನು ಶಾಂತ – ನಿಷ್ಕ್ರಿಯ ಜಾಗವೆಂದೇ ಅಂದುಕೊಳ್ಳುತ್ತೇವೆ. ಆದರೆ ಸಾಮಾನ್ಯ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಸಸ್ಯ ಗಳು ಸಾಮಾಜಿಕವೆನ್ನುವ ರೀತಿಯಲ್ಲಿ ಬದುಕುತ್ತಿರುತ್ತವೆ. ಅವುಗಳ ನಡುವೆ ದಾಳಿ ಪ್ರತಿದಾಳಿಗಳಾಗುತ್ತಿರುತ್ತವೆ. ನೀರಿನ ವರತೆ ಎಲ್ಲಿದೆ ಎಂದು ಕಣ್ಣೇ ಇಲ್ಲದೆ ಸಸ್ಯ ಗ್ರಹಿಸಬಲ್ಲದು ಮತ್ತು ಆ ದಿಕ್ಕಿನಲ್ಲಿ ಬೇರು ಬೆಳಸಿಕೊಳ್ಳುಬಲ್ಲದು. ಹೊಸತೊಂದು ವೈರಸ್ ಅಥವಾ ಬೆಕ್ಟೇರಿಯಾ ದಾಳಿಯಾದಾಗ ಕೂಡ ಸಸ್ಯಗಳು ತಕ್ಷಣ ಕಾರ್ಯಪ್ರವೃತ್ತ ವಾಗಿ ಅದೆಲ್ಲವನ್ನು ಮನುಷ್ಯನಿಗಿಂತ ಚೆನ್ನಾಗಿ ನಿಭಾಯಿಸಬಲ್ಲದು. ಸಸ್ಯಗಳಿಗೆ ನೆನಪಿನ ಶಕ್ತಿ ಕೂಡ ಇರುತ್ತದೆ ಎನ್ನುವುದು ಈಗೀಗ ನಮಗೆ ತಿಳಿದ ವಿಷಯ.
ಇದರಲ್ಲಿ ಕೆಲವು ನಮಗೆ ಗೊತ್ತಿರುವ ವಿಚಾರವೇ ಇರಬಹುದು. ಆದರೆ ಜೀವ ತಂತ್ರಗಾರಿಕೆಯ ಕೋನದಲ್ಲಿ ನೋಡಿದಾಗ ಇದೆಲ್ಲ ಬೆರಗೇ ಸರಿ. ಪ್ರಾಣಿಗಳಲ್ಲಿ ಅತಿ ಹೆಚ್ಚು ಕಾಲ ಬದುಕಬಲ್ಲವು ಆಮೆಗಳು. ಆದರೆ ಮೆಥುಸೇಲಾಹ್ ವೃಕ್ಷದ ಬಗ್ಗೆ ಈ ಹಿಂದೆ ಬರೆದಿz. ಅವು ನಾಲ್ಕೆದು ಸಾವಿರ ವರ್ಷದಿಂದ ಬದುಕಿವೆ. ಮೂರು ಸಾವಿರ ವರ್ಷಕ್ಕಿಂತ ಜಾಸ್ತಿ ವಯಸ್ಸಾದ ಮತ್ತು ಇನ್ನೂ ಬದುಕಿರುವ ಅದೆಷ್ಟೋ ಕೋಟಿ ವೃಕ್ಷಗಳು ಈ ಭೂಮಿಯಲ್ಲಿವೆ. ಕಿಂಗ್ಸ್ ಲೋಮಾಟಿಯ ಎನ್ನುವ ಸಸ್ಯ ತನ್ನನ್ನು ತಾನೇ ಕ್ಲೋನ್ ಮಾಡಿ ಕೊಳ್ಳುತ್ತ ಕಳೆದ ೪೩,೦೦೦ ವರ್ಷದಿಂದ ಬದುಕಿದೆ.
ಲೆಕ್ಕಾಚಾರದ ಪ್ರಕಾರ ಈ ಸಸ್ಯ ಒಂದೂವರೆ ಲಕ್ಷ ವರ್ಷ ಬದುಕಬಲ್ಲದು. ಇನ್ನೊಂದು ವಿಜ್ಞಾನಿ ವರ್ಗದ ಪ್ರಕಾರ ಈ ಸಸ್ಯಕ್ಕೆ
ಸಾವೇ ಇಲ್ಲ. ಅಮೆರಿಕನ್ನರು ಮನುಷ್ಯನ ಡಿಎನ್‌ಎಯಲ್ಲಿ ಸುಮಾರು ಇಪ್ಪತ್ತಾರು ಸಾವಿರ ಕ್ರಮಾನುಗತಿಯ ಜೀನ್ಸ್ ಅನ್ನು ಗುರುತಿಸಿದರು. ವಿಜ್ಞಾನಿಗಳ ನಂಬಿಕೆಯ ಪ್ರಕಾರ ಹೆಚ್ಚು ಜೀನ್ಸ್ ಗಳಿವೆ ಎಂದರೆ ಅವು ಹೆಚ್ಚು ವಿಕಸನ ಹೊಂದಿವೆ ಎಂದು. ಪ್ರಾಣಿವರ್ಗಗಳ ಅತಿ ಹೆಚ್ಚು ಜೀನ್ಸ್ ಅನ್ನು ಮನುಷ್ಯನಲ್ಲಿ ಗುರುತಿಸಿದ ವಿಜ್ಞಾನಿಗಳು; ಜೀನ್ಸ್ ಮತ್ತು ವಿಕಸನಕ್ಕೆ ನೇರ ಸಂಬಂಧವಿದೆ ಎನ್ನುವ ಒಮ್ಮತಕ್ಕೆ ಬಂದರು. ಆದರೆ ನಂತರದಲ್ಲಿ ಅಕ್ಕಿಯಲ್ಲಿನ ಡಿಎನ್‌ಎಯಲ್ಲಿ ಮನುಷ್ಯನ ಡಿಎನ್‌ಎಯ
ದುಪ್ಪಟ್ಟು – ಸುಮಾರು ಐವತ್ತು ಸಾವಿರ ಜೀನ್ಸ್ ಕ್ರಮಾನುಗತಿಗಳು ಲೆಕ್ಕಕ್ಕೆ ಸಿಕ್ಕವು.
ಹೀಗಾದಾಗ ಈ ರೀತಿ ಜೀನ್ಸ್ ಲೆಕ್ಕ ಹಾಕುವುದು ವಿಕಸನವನ್ನು ಅಳೆಯುವ ಮಾಪಕವಾಗಿ ಪರಿಗಣಿಸಬಾರದು ಎನ್ನುವ ವಾದ ಗಳು ಕೇಳಿಬಂದವು. ಆದರೆ ಜೀವಶಾಸಜ್ಞರು ಇದನ್ನು ಒಪ್ಪುವುದಿಲ್ಲ. ಇದೇ ವಾದದ ಪ್ರಕಾರ – ಜೀನ್ಸ್ ಪ್ರಕಾರ ಅಕ್ಕಿ ಮನುಷ್ಯನಿಗಿಂತ ಹೆಚ್ಚು ವಿಕಸನ ಮತ್ತು ಮಾರ್ಪಾಡು ಹೊಂದಿದೆ. ಮನುಷ್ಯ ಕೆಸರು ಗzಯಲ್ಲಿ ಬಿಸಿಲಿಗೆ ನಿಂತ ನಿಂತರೆ ಬದುಕುಳಿಯಲಾರ. ಏಕೆಂದರೆ ಆ ರೀತಿ ಬದುಕಲು ಬೇಕಾದ ಜೀನ್ಸ್ ಗಳು, ಸಲಕರಣೆಗಳು ಮನುಷ್ಯನಲ್ಲಿಲ್ಲ.
ಆದರೆ ಬತ್ತದ ಗಿಡ ಕೇವಲ ಕೆಸರು ನೀರು ಮತ್ತು ಸೂರ್ಯನ ಬೆಳಕಿನಿಂದ ಬೆಳೆಯಬಲ್ಲವು. ಇದು ನಮ್ಮ ಸುತ್ತಲಿನ ಜಗತ್ತನ್ನು ನೋಡುವ ಇನ್ನೊಂದು ಕೋನ. ಹಾಗಂತ ಸಸ್ಯ ಮತ್ತು ಪ್ರಾಣಿವರ್ಗವನ್ನು ಒಂದೇ ತಕ್ಕಡಿಯಲ್ಲಿ ಹಾಕಿ ನೋಡುವಂತಿಲ್ಲ. ಪ್ರಾಣಿ ಮತ್ತು ಸಸ್ಯದ ನಡುವೆ ಸ್ಪರ್ಧೆ ಏರ್ಪಡಿಸಿ ಯಾವುದು ಹೆಚ್ಚಿಗೆ ವಿಕಸನ ಹೊಂದಿದ ಜೀವಿ ಎಂದು ಸ್ಪರ್ಧೆ ಏರ್ಪಡಿಸಿ ನೋಡು ವಂತಿಲ್ಲ. ಆ ಸ್ಪರ್ಧೆಯೇ ಅಸಾಧ್ಯ – ಅವಾಸ್ತವಿಕ. ವಾಸ್ತವದಲ್ಲಿ ಸಸ್ಯ ಮತ್ತು ಪ್ರಾಣಿಯ ವಿಕಸನದ ಸ್ಪರ್ಧೆ ವಿರುದ್ಧ ದಿಕ್ಕಿನ ಓಟ. ಆದರೆ ಬದುಕುವ ತಂತ್ರಗಳನ್ನು ಸಸ್ಯಗಳು ಮತ್ತು ಪ್ರಾಣಿಗಳು ಅಳವಡಿಸಿಕೊಂಡ ರೀತಿಗಳನ್ನು ಹೋಲಿಕೆ ಮಾಡಬಹುದು.
ಆ ನಿಟ್ಟಿನಲ್ಲಿ ಯಾವುದು ಹೆಚ್ಚಿಗೆ ವಿಕಸನ ಹೊಂದಿದ್ದು ಎಂದು ಪ್ರಶ್ನಿಸಿದರೆ, ಆಗ ಸಸ್ಯಗಳದ್ದೇ ಮೇಲುಗೈ. ಬದುಕುವ ಬುದ್ಧಿವಂತಿಕೆ ಮತ್ತು ತಂತ್ರಗಾರಿಕೆಯನ್ನು ಹೋಲಿಕೆಗೆ ತೆಗೆದುಕೊಂಡಾಗ ಕೂಡ ಸಸ್ಯಗಳೇ ಮುಂದೆ. ಇಲ್ಲಿ ಬುದ್ಧಿವಂತಿಕೆ
ಎನ್ನುವುದೇ ಸಾಪೇಕ್ಷ. ಯಾವುದು ವಿಕಸನ ಎನ್ನುವ ಪ್ರಶ್ನೆಯ ಮೂಲಕ್ಕೆ ಹೋದಾಗ ಸಸ್ಯಗಳು ಈ ಜಗತ್ತಿಗೆ ತಮ್ಮನ್ನು ಹೊಂದಿಸಿಕೊಂಡ ರೀತಿ ಪ್ರಾಣಿವರ್ಗಕ್ಕಿಂತ ಮುಂದುವರಿದುದು ಎನ್ನುವ ಅರಿವು ಮೂಡುತ್ತದೆ.
ಆ ಕಾರಣಕ್ಕೇ ಪ್ರಾಣಿಗಳ ಸಂಖ್ಯೆ ಸಸ್ಯಕ್ಕಿಂತ ಕಡಿಮೆಯೇ? ಇರಬಹುದು. ಈ ಭೂಮಿ ಮೇಲೆ ಅತ್ಯಂತ ಯಶಸ್ವಿ ಎಂದೆನಿಸಿಕೊಂಡ ಜೀವಿ ಯಾವುದು? ಪಂಚೇಂದ್ರಿಯ ಮತ್ತು ಅತ್ಯಂತ ಅಭಿವೃದ್ಧಿ ಹೊಂದಿದ ಮೆದುಳು ಹೊಂದಿರುವ ಮನುಷ್ಯನೇ, ಪ್ರಾಣಿಗಳೇ? ಅಥವಾ ಸಸ್ಯಗಳೇ ? ಬದುಕಿನ ಓಟದಲ್ಲಿ ಯಶಸ್ಸು ಎಂದರೆ ಏನು? ಉಳಿದ ಜೀವಿಗಳನ್ನು ತನಗಾಗಿ ಬಳಸಿಕೊಳ್ಳುವುದೇ ಬುದ್ಧಿವಂತಿಕೆಯೇ? ಅಥವಾ ಉಳಿದ ಜೀವಿಗಳು ತನ್ನನ್ನು ಬಳಸುವಂತೆ ಮಾರ್ಪಾಡು ಮಾಡಿಕೊಂಡು ಸಂಖ್ಯೆ ವೃದ್ಧಿಸಿ ಕೊಳ್ಳುವುದು ಬುದ್ಧಿವಂತಿಕೆಯೇ? ಇದೆಲ್ಲ ಪ್ರಶ್ನೆಗಳನ್ನು ಹರಡಿಕೊಂಡು ನೋಡಿದಾಗ ಸಸ್ಯಜಗತ್ತಿನ ವಿಕಸನದ ಇನ್ನೊಂದು ಆಯಾಮದ ಅರಿವಾಗುತ್ತದೆ.
ಜೀವ ವಿಕಸನದಲ್ಲಿ ಯಾರು ಮುಂದೆ ಎನ್ನುವ ವಾಸ್ತವತೆ ಬದಲಾಗುತ್ತದೆ. ಅಂದಹಾಗೆ ಬಿ.ಜಿ.ಎಲ್ ಸ್ವಾಮಿಯವರ ‘ಹಸಿರು ಹೊನ್ನು’ ಪುಸ್ತಕವನ್ನು ನೀವು ಓದಿಲ್ಲವಾದರೆ ಖಂಡಿತ ಓದಬೇಕು. ಅದಾಗಲೆ ಓದಿದ್ದರೆ ಈ ಒಂದಿಷ್ಟು ಹೊಸ ಆಯಾಮಗಳನ್ನು
ಗಮನದಲ್ಲಿರಿಸಿಕೊಂಡು ಇನ್ನೊಮ್ಮೆ ಓದಿ ನಿಮ್ಮ ಅನುಭವ ತಿಳಿಸಿ.