Saturday, 27th July 2024

ನಿನ್ನ ನಾಮದ ಬಲವೊಂದಿದ್ದರೆ ಸಾಕು !

ಧರ್ಮಪೀಠ

ಗವಿಸಿದ್ದೇಶ್ ಕೆ.ಕಲ್ಗುಡಿ

ವಿಷ್ಣು ಸಹಸ್ರನಾಮದ ಪಾರಾಯಣವನ್ನು ಹೆಚ್ಚೆಚ್ಚು ಮಾಡುವುದರಿಂದ, ‘ರೋಗಾರ್ತೋ ಮುಚ್ಯತೇ ರೋಗಾತ್, ಬದ್ಧೋ ಮುಚ್ಯೇತ ಬಂಧನಾತ್’ ಅಂದರೆ ಎಂಥ ರೋಗ ವಾದರೂ ನಾಶವಾಗಿ, ಸಂಸಾರ ಬಂಧನದಲ್ಲಿ ಬಂಧಿತನೂ ಮುಕ್ತನಾಗುತ್ತಾನೆ ಎನ್ನಲಾಗಿದೆ. ಇದರ ನಿತ್ಯ ಪಾರಾಯಣದಿಂದ ಗಹನವಾದ ರೋಗಗಳೂ ತಗ್ಗಿದ ನಿದರ್ಶನಗಳಿವೆ.

ಭಾರತೀಯ ತತ್ತ್ವಶಾಸ್ತ್ರದಲ್ಲಿ ಪ್ರಸಿದ್ಧ ವಾದ ಸ್ತೋತ್ರ ಎಂದರೆ ಅದು ‘ವಿಷ್ಣು ಸಹಸ್ರನಾಮ’. ಹೆಸರೇ ಹೇಳುವ ಹಾಗೆ ಸಹಸ್ರ ಎಂದರೆ ಸಾವಿರ. ಸಾವಿರದ ನಾಮ ಅಂದರೆ ಸಾವಿಲ್ಲದ ನಾಮ. ನಾವು ಕೂಡ ಸಾವಿಲ್ಲದವರಾಗಬೇಕಾದರೆ, ಈ ಸಾವಿಲ್ಲದ ಭಗವಂತನ ಸಾವಿರ ನಾಮಗಳನ್ನು ಓದಬೇಕು. ಅಂಥ ವಿಶಿಷ್ಟವಾದ ದೈವೀಕ ಶಕ್ತಿ ಈ ಸ್ತೋತ್ರಕ್ಕಿದೆ ಎನ್ನುವುದನ್ನು ನಾವು ಒಪ್ಪಲೇಬೇಕು. ಇಂಥ ಸಾಕಷ್ಟು ಸ್ತೋತ್ರಗಳನ್ನು ಅನೇಕ ಗ್ರಂಥಗಳಲ್ಲಿ ನಾವು ಕಾಣಬಹುದು- ಗಣೇಶ ಸಹಸ್ರನಾಮ, ಲಕ್ಷ್ಮೀ ಸಹಸ್ರ ನಾಮ, ಶಿವ ಸಹಸ್ರನಾಮ ಇತ್ಯಾದಿ.

ಪದ್ಮಪುರಾಣದಲ್ಲಿ ಕೂಡ ಸ್ತೋತ್ರ/ಸಹಸ್ರನಾಮಗಳನ್ನು ಕಾಣುತ್ತೇವೆ. ಆದರೆ ಈ ಎಲ್ಲಾ ಸ್ತೋತ್ರಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಮಹಾಭಾರತದಲ್ಲಿ ಬರುವ ವಿಷ್ಣು ಸಹಸ್ರನಾಮಕ್ಕೆ ನೀಡಲಾಗಿದೆ. ಇಷ್ಟಕ್ಕೂ ನಮ್ಮ ಪೂರ್ವಿಕರು ಸಹಸ್ರನಾಮಗಳನ್ನೇ ಯಾಕೆ ಆಯ್ದುಕೊಂಡರು? ಏನೀ ಸಂಖ್ಯೆಯ ಹಿಂದಿರುವ ಮಹತ್ವ? ಎಂಬ ಪ್ರಶ್ನೆಗಳನ್ನು ಸಂಖ್ಯಾಶಾಸ್ತ್ರ ಮತ್ತು ವಿಜ್ಞಾನದ ತಳಹದಿಯಲ್ಲಿ ವಿಶ್ಲೇಷಿಸಿದರೆ, ನಮ್ಮ ಪ್ರಾಚೀನರು ಗ್ರಂಥಗಳಲ್ಲಿ ಭಾಷೆಯ ಜತೆಗೆ ಸಂಖ್ಯೆಗಳನ್ನೂ ಬಳಸುತ್ತಿದ್ದುದು ಅರಿವಾಗುತ್ತದೆ.

ರಾಮಾಯಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ದಶಾವತಾರದಲ್ಲಿ ರಾಮ ೭ನೇ ಅವತಾರ ಹಾಗೂ ರಾಮಾಯಣದಲ್ಲಿ ಒಟ್ಟು ೭ ಕಾಂಡಗಳು.
ರಾಮ ಹುಟ್ಟಿದ್ದು ಕೂಡ ೭ನೇ ನಕ್ಷತ್ರವಾದ ಪುನರ್ವಸುವಿನಲ್ಲಿ. ಹೀಗೆ ೭ ಎಂದಾಕ್ಷಣ ನಮಗೆ ರಾಮಾಯಣ ನೆನಪಾಗುತ್ತದೆ. ಹಾಗೆಯೇ ಮಹಾಭಾರತ
ದಲ್ಲಿ ೧೮ ಪರ್ವಗಳು, ೧೮ ಅಕ್ಷೋಹಿಣೀ ಸೈನ್ಯ. ಮಹಾಭಾರತದ ಸಾರಭೂತವಾದ ಭಗವದ್ಗೀತೆ ಯಲ್ಲಿ ೧೮ ಅಧ್ಯಾಯಗಳು. ಮಹಾಭಾರತ ಯುದ್ಧ
ನಡೆದದ್ದು ೧೮ ದಿನಗಳವರೆಗೆ. ಹೀಗೆ, ೧೮ ಎಂದ ತಕ್ಷಣ ನಮಗೆಲ್ಲಾ ಮಹಾಭಾರತ ನೆನಪಾಗುತ್ತದೆ.

ಹಾಗೆಯೇ, ಸಹಸ್ರನಾಮ ಎಂಬ ಪದಬಳಕೆಯ ಹಿಂದೆಯೂ ಒಂದು ಕಾರಣ ಇರಲೇಬೇಕಲ್ಲವೇ? ಹಾಗಾದರೆ ಅದು ಏನು? ಇದನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಹುಟ್ಟುತ್ತದೆ. ನಮ್ಮ ಪ್ರಾಚೀನರು ಹಿಂದೆ ಯಜ್ಞ, ಯಾಗಾದಿ ಗಳನ್ನು ಮಾಡುವಾಗ ಮಧ್ಯಾಹ್ನ ಕಾಲದಲ್ಲಿ ಭಗವಂತನನ್ನು ಸ್ತುತಿಸಲು ಕೆಲವು ಮಂತ್ರಗಳನ್ನು ಬಳಸುತ್ತಿದ್ದರು. ಅದನ್ನು ‘ಬೃಹತೀ ಸಹಸ್ರ’ ಎಂದು ಕರೆಯುತ್ತಾರೆ. ಬೃಹತೀ ಎಂದರೆ ೩೬ ಅಕ್ಷರಗಳುಳ್ಳ ಒಂದು ಮಂತ್ರ. ಇಂಥ ೧೦೦೦ ಮಂತ್ರಗಳು ಬೃಹತೀ ಸಹಸ್ರದಲ್ಲಿವೆ. ಈ ೩೬ ಸಾವಿರ ಸಂಖ್ಯೆಯಲ್ಲಿ ಒಂದು ಸ್ವಾರಸ್ಯವನ್ನು ನಾವು ಗಮನಿಸಬಹುದು, ಅದು ಏನಪ್ಪಾ ಅಂದರೆ- ಒಂದು ಅಕ್ಷರ ಎಂದ ತಕ್ಷಣ ಅದರಲ್ಲಿ ಒಂದು ಸ್ವರ, ಒಂದು ವ್ಯಂಜನ ಸೇರಿರಲೇಬೇಕು.

ಅಂದರೆ, ೩೬ ಸಾವಿರ ಸ್ವರಗಳು, ೩೬ ಸಾವಿರ ವ್ಯಂಜನಗಳು ಸೇರಿ ಒಟ್ಟು ೭೨ ಸಾವಿರ ಅಕ್ಷರಗಳು ಎಂದಾಯಿತು. ಹಾಗಾಗಿ ೩೬ ಸಾವಿರ ಎನ್ನುವುದು
ಇಲ್ಲಿ ತುಂಬಾ ಮಹತ್ವಪೂರ್ಣವಾದದ್ದು. ಯಾಕೆಂದರೆ, ನಮ್ಮ ಪ್ರಾಚೀನರು ವೇದ, ಆಯುರ್ವೇದ ಮತ್ತು ತಂತ್ರ ಆಗಮ ಶಾಸ್ತ್ರಗಳಲ್ಲಿ ಹೀಗೆ ಹೇಳಿದ್ದಾರೆ: ಒಬ್ಬ ಮನುಷ್ಯನ ಆಯಸ್ಸು ಎಂದರೆ ೧೦೦ ವರ್ಷ. ಒಂದು ವರ್ಷ ಎಂದರೆ ೩೬೫ ದಿನ ಗಳು. ೧೦೦ ವರ್ಷ ಎಂದರೆ ೩೬ ಸಾವಿರ ಹಗಲು, ೩೬ ಸಾವಿರ ರಾತ್ರಿಗಳು. ಮನುಷ್ಯನ ದೇಹ ಎನ್ನುವುದು ೭೨ ಸಾವಿರ ನಾಡಿಗಳ ಒಂದು ಗೊಂಚಲು.

ಮನುಷ್ಯನ ದೇಹದ ಎಡಭಾಗದಲ್ಲಿ ೩೬ ಸಾವಿರ ನಾಡಿಗಳಿದ್ದರೆ, ಬಲಭಾಗದಲ್ಲೂ ೩೬ ಸಾವಿರ ನಾಡಿಗಳಿವೆ. ಈ ನಾಡಿಗಳು ಶುದ್ಧವಾಗಿ, ಅವುಗಳಲ್ಲಿ ಸರಿಯಾದ ರಕ್ತ ಸಂಚಾರವಾಗಿ, ಉಸಿರಾಟವು ಸರಾಗ ಮತ್ತು ಸ್ವಚ್ಛವಾಗಿ ಇದ್ದರೆ ಮನುಷ್ಯ ಆರೋಗ್ಯದಿಂದಿರುತ್ತಾನೆ. ಮೇಲೆ ಹೇಳಿದ ಹಾಗೆ, ವೇದದ ಸಾರವಾದ ಬೃಹತೀ ಸಹಸ್ರದಲ್ಲೂ ೧೦೦೦ ಮಂತ್ರಗಳು, ೭೨,೦೦೦ ಅಕ್ಷರಗಳು ಇರುವುದರಿಂದ, ವೇದ ವ್ಯಾಸರು ಈ ಒಂದು ಸಾವಿರ ಮಂತ್ರಗಳ ಸಾರ ವನ್ನು, ಒಂದು ಸಾವಿರ ನಾಮಗಳ ರೂಪದಲ್ಲಿ ನಮಗೆ ಕರುಣಿಸಿದ್ದಾರೆ. ನಾವು ವಿಷ್ಣು ಸಹಸ್ರನಾಮ ವನ್ನು ಪಠಿಸುವುದರಿಂದ, ಬೃಹತೀ ಸಹಸ್ರದ ೭೨ ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ.

ಇದರಿಂದಾಗಿ ೭೨ ಸಾವಿರ ನಾಡಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರಕ್ತಸಂಚಾರವಾಗಿ, ಆರೋಗ್ಯ ವೃದ್ಧಿಯಾಗುತ್ತದೆ. ಈ ಕಾರಣದಿಂದಾಗಿ ವಿಷ್ಣು ಸಹಸ್ರನಾಮ ಎನ್ನುವುದು ಭವರೋಗ ನಿವಾರಕ ಎಂದಿದ್ದಾರೆ. ಹಾಗಾಗಿ ಅದರ ಅರ್ಥವನ್ನು ತಿಳಿದು, ತುಂಬಾ ಶ್ರದ್ಧೆಯಿಂದ ಅದರ ಪಾರಾಯಣ ಮಾಡುವುದನ್ನು ನಾವು ಮರೆಯಬಾರದು. ಆಯುರ್ವೇದದ ಪ್ರಸಿದ್ಧ ಗ್ರಂಥವಾದ ‘ಚರಕ ಸಂಹಿತೆ’ ಕೂಡ ಸಹಸ್ರನಾಮದ ಕುರಿತು ಹೇಳಿದ ವಿಚಾರವನ್ನೂ ನಾವಿಲ್ಲಿ ಸ್ಮರಿಸಲೇಬೇಕು: ‘ವಿಷ್ಣು ಸಹಸ್ರಮೂರ್ಧನಂ ಚರಾಚರಪತಿಂ ವಿಭುಂ | ಸ್ತುವನ್ನಾಮ ಸಹಸ್ರೇಣ ಜ್ವರನ್ ಸರ್ವಾನಪೋಹತಿ ||’ ಅಂದರೆ, ಚರಾಚರಗಳಲ್ಲಿ ಸಾಕ್ಷಿಭೂತನೂ, ಸರ್ವವ್ಯಾಪಿಯೂ ಆದ ವಿಷ್ಣುವಿನ ಸ್ತೋತ್ರವನ್ನು ಸ್ತುತಿಸುವುದರಿಂದ, ಎಲ್ಲಾ ರೀತಿಯ ಜ್ವರವೂ ನಾಶವಾಗುತ್ತದೆ ಎಂದರ್ಥ.

ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆಗಳು ಮಹಾಭಾರತದ ಎರಡು ಅದ್ಭುತಗಳು ಎಂದರೆ ಅತಿಶಯೋಕ್ತಿ ಆಗಲಾರದು. ಮಹಾಭಾರತವನ್ನು ಮೂರು ರೀತಿಯಾಗಿ ವಿಭಾಗಿಸಿ ವ್ಯಾಖ್ಯಾನಿಸಬಹುದು- ಅಧ್ಯಾತ್ಮಿಕ, ಐತಿಹಾಸಿಕ ಹಾಗೂ ಮಾನಸಿಕವಾಗಿ. ಇಲ್ಲಿ ವಿಷ್ಣು ಸಹಸ್ರನಾಮ ನಮ್ಮನ್ನು ಅಧ್ಯಾತ್ಮದಲ್ಲಿ ಮಿಂದೇಳುವಂತೆ ಮಾಡುತ್ತದೆ. ಹಾಗಾಗಿ ನೋಡಿ, ವಿಷ್ಣು ಸಹಸ್ರನಾಮದಲ್ಲಿ ಪಾಂಡವ-ಕೌರವರ ಕಥೆಯೇ ಬರುವುದಿಲ್ಲ. ಇನ್ನು ಭಗವದ್ಗೀತೆಯ ವಿಷಯಕ್ಕೆ ಬರುವುದಾದರೆ, ಇದನ್ನೊಂದು ‘ಮನೋವಿಜ್ಞಾನ’ ಎಂದೇ ಹೇಳಲಾಗಿದ್ದು, ಇಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸಮಂಜಸ ವಾದ ಉತ್ತರವಿದೆ. ಹಾಗಾಗಿ, ‘ಅಕಸ್ಮಾತ್ ಮಹಾ
ಭಾರತವನ್ನು ಓದಲಾಗದಿದ್ದರೂ, ಸಹಸ್ರನಾಮ ಮತ್ತು ಗೀತೆಯನ್ನು ಮಾತ್ರ ಓದಲೇಬೇಕು’ ಎಂದು ತಿಳಿದವರು ಹೇಳುತ್ತಾರೆ. ಈ ಕಾರಣದಿಂದಾಗಿ ಮಹಾಭಾರತ ಎನ್ನುವಂಥದ್ದು ಒಂದು ‘ಭಾರತಂ ಸರ್ವಶಾಸೇಷು ಶಾಸ’ವೂ ಹೌದು, ಮಹಾಕಾವ್ಯವೂ ಹೌದು.

ಅದೊಮ್ಮೆ ನಮ್ಮ ಪ್ರಾಚೀನರು ಮಹಾಭಾರತವನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು, ಮತ್ತೊಂದರಲ್ಲಿ ವೇದ, ಪುರಾಣ, ಅನೇಕ ಗ್ರಂಥ ಗಳನ್ನಿಟ್ಟು ತೂಗಿದರಂತೆ. ಆದರೆ ಈ ಯಾವ ಗ್ರಂಥ ಗಳೂ ಮಹಾಭಾರತಕ್ಕೆ ಸಮನಾಗಲಿಲ್ಲವಂತೆ. ಇದು ಮಹಾಭಾರತದ ಹಿರಿಮೆ. ಮಹಾಭಾರತಕ್ಕೆ ಕನಿಷ್ಠ ಹತ್ತು ಅರ್ಥಗಳಿದ್ದರೆ, ವಿಷ್ಣು ಸಹಸ್ರನಾಮದ ಪ್ರತಿ ಹೆಸರಿಗೂ ನೂರು ಅರ್ಥಗಳನ್ನು ಹೇಳಲಾಗಿದೆ. ಇದೇ ಕಾರಣಕ್ಕೆ ನಮ್ಮ ಪ್ರಾಚೀನರು ವಿಷ್ಣು ಸಹಸ್ರ ನಾಮ ಮತ್ತು ಭಗವದ್ಗೀತೆಯನ್ನು ಅತ್ಯಮೂಲ್ಯ ಗ್ರಂಥಗಳೆಂದು ಪರಿಗಣಿಸಿದ್ದಾರೆ.

ಮಹಾಭಾರತದಲ್ಲಿ ಶರಪಂಜರದ ಮೇಲೆ ಮಲಗಿದ್ದ ಭೀಷ್ಮಾಚಾರ್ಯರನ್ನು ಭೇಟಿಯಾಗಲು ಬಂದ ಧರ್ಮರಾಜ ಅವರನ್ನು ಹೀಗೆ ಪ್ರಶ್ನಿಸುತ್ತಾನೆ: ಸಮಸ್ತ ಜಗತ್ತಿನ ದೈವ ಯಾವುದು? ಸಕಲ ಧರ್ಮಗಳಲ್ಲಿ ಶ್ರೇಷ್ಠವಾದ ಧರ್ಮ ಯಾವುದು? ಯಾರ ಸ್ತುತಿ, ಕೀರ್ತನೆ ಹಾಗೂ ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ? ಯಾರನ್ನು ಜಪಿಸುವುದರಿಂದ ಸಕಲ ಪಾಪಗಳು, ಜನನ-ಮರಣಗಳ ಸುಳಿಯಿಂದ ಪಾರಾಗಬಹುದು? ಎಂದು. ಧರ್ಮ ರಾಜನ ಈ ಎಲ್ಲಾ ಪ್ರಶ್ನೆಗಳಿಗೆ ಭೀಷ್ಮಾಚಾರ್ಯರು ‘ಶ್ರೀ ವಿಷ್ಣು ಸಹಸ್ರನಾಮ’ ಎಂಬ ಒಂದೇ ಉತ್ತರ ವನ್ನು ಉದ್ಗರಿಸುತ್ತಾರೆ.

ಸ್ವತಃ ಭೀಷ್ಮರೂ ವಿಷ್ಣು ಸಹಸ್ರನಾಮದ ಶಕ್ತಿ ಯನ್ನು ಬಲ್ಲವರಾಗಿದ್ದರು. ಸಹಸ್ರನಾಮಗಳ ಬಲ ದಿಂದ ಸ್ವತಃ ಮೃತ್ಯುವನ್ನೂ ದೂರವಿಟ್ಟು ಇಚ್ಛಾ ಮರಣಿ ಗಳಾಗಿದ್ದರು. ಅಷ್ಟೇ ಅಲ್ಲದೆ, ಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡಿದ್ದರು. ಸ್ವತಃ ಕೃಷ್ಣನೇ ಭೀಷ್ಮರು ಮಲಗಿದ್ದಲ್ಲಿಗೆ ಬಂದು ದರ್ಶನಭಾಗ್ಯ ನೀಡುತ್ತಿದ್ದ. ಭೀಷ್ಮರು ಹೇಳುತ್ತಾರೆ: ‘ನ ವಾಸುದೇವ ಭಕ್ತಾನಾಂ ಅಶುಭಂ ವಿದ್ಯತೇ ಕ್ವಚಿತ್’ ಎಂದು. ಅಂದರೆ, ಇದರ ನಿತ್ಯ ಪಾರಾಯಣ ಮಾಡುವವರು ನಾನಾ ವಿಧದ ಸಂಕಷ್ಟ ಗಳಿಂದ ಮುಕ್ತರಾಗುತ್ತಾರೆ ಎಂದರ್ಥ.

ಭಾರತೀಯ ಹಿಂದೂ ಸಂಪ್ರದಾಯದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ದೇವತೆಗೆ ಮೀಸಲಾಗಿದೆ. ಶನಿವಾರ ಹನುಮಂತನಿಗೆ, ರವಿವಾರ ಸೂರ್ಯದೇವನಿಗೆ. ಮಂಗಳವಾರ- ಶುಕ್ರವಾರ ದೇವಿಯ ಆರಾಧನೆ ಮಾಡಿದರೆ, ಗುರುವಾರದಂದು ವಿಷ್ಣುವಿಗೆ ಮೀಸಲಿಡಲಾಗಿದೆ. ಆಯಾ ದಿನಗಳಲ್ಲಿ ಆ ದೇವತೆಯನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ನಂಬಿಕೆ ಹಿಂದೂಗಳಲ್ಲಿದೆ. ವಿಷ್ಣು ಸಹಸ್ರನಾಮದ ಪಾರಾಯಣಕ್ಕೆ ಗುರುವಾರ ಶ್ರೇಷ್ಠವಾದ ದಿನ ಎಂದ ಮಾತ್ರಕ್ಕೆ ಬೇರೆ ದಿನಗಳಲ್ಲಿ ಇದರ ಪಾರಾಯಣ ಮಾಡಬಾರದು ಎಂದರ್ಥವಲ್ಲ. ವಿಷ್ಣು ಸಹಸ್ರ ನಾಮದ ಪಾರಾಯಣವನ್ನು ಹೆಚ್ಚೆಚ್ಚು ಮಾಡುವುದ ರಿಂದ, ‘ರೋಗಾರ್ತೋ ಮುಚ್ಯತೇ ರೋಗಾತ್, ಬದ್ಧೋ ಮುಚ್ಯೇತ ಬಂಧನಾತ್’ ಅಂದರೆ ಎಂಥ ರೋಗವಾದರೂ ನಾಶವಾಗಿ, ಸಂಸಾರ ಬಂಧನದಲ್ಲಿ ಬಂಧಿತನೂ ಮುಕ್ತನಾಗುತ್ತಾನೆ ಎನ್ನಲಾಗಿದೆ.

ವಿಷ್ಣು ಸಹಸ್ರನಾಮದ ಮೇಲೆ ಕೆಲ ಹಿರಿಯರು ಸಾಕಷ್ಟು ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ಇದರ ನಿತ್ಯ ಪಾರಾಯಣದಿಂದ ಕ್ಯಾನ್ಸರ್‌ನಂಥ ದೊಡ್ಡ ರೋಗಗಳು ಕಡಿಮೆಯಾದ ಉದಾಹರಣೆ ಗಳು ಇಂದಿಗೂ ನಮಗೆ ದೊರೆಯುತ್ತವೆ. ವರ್ತಮಾನದಲ್ಲಿ ಹಲವಾರು ಕಾಯಿಲೆಗಳು ರಕ್ತದಿಂದ ಬರುವುದನ್ನು ಕಂಡಿದ್ದೇವೆ. ಮನುಷ್ಯನ ಶರೀರದಲ್ಲಿ ರಕ್ತಸಂಚಾರ ಸರಿಯಾದ ರೀತಿಯಲ್ಲಿದ್ದು, ಉಸಿರಾಟದ ಗತಿಯು ನಿಯತವಾಗಿ, ಆರೋಗ್ಯಯುತ ವಾಗಿ ಇದ್ದಲ್ಲಿ ಅವನಿಗೆ ಯಾವುದೇ ರೋಗಗಳೂ ಸಂಭವಿಸುವುದಿಲ್ಲ. ಇದು ವಿಷ್ಣು ಸಹಸ್ರನಾಮದ ಪಠನೆಯಿಂದ ಸಾಧ್ಯ.

ಇದು ಪ್ರಯೋಗಸಿದ್ಧ ವಿಚಾರ. ಪಠಿಸುವ ಸಹಸ್ರನಾಮದ ಒಂದೊಂದು ಪದವೂ ದೇಹ ದಲ್ಲಿರುವ ೭೨ ಸಾವಿರ ನಾಡಿಗಳನ್ನು ಪ್ರಚೋದಿಸುತ್ತದೆ. ಇದು ವಿಷ್ಣು ಸಹಸ್ರನಾಮದ ಹಿಂದಿರುವ ವೈಜ್ಞಾನಿಕತೆ. ಹಾಗಾಗಿ ಇದನ್ನು ಅರಿತು ಶ್ರದ್ಧೆ-ಭಕ್ತಿಯಿಂದ ಪಾರಾಯಣದಲ್ಲಿ ತೊಡಗಿಸಿ ಕೊಂಡು ಎಲ್ಲಾ ವಿಧದ ಸಂಕಷ್ಟಗಳಿಂದ ನಮ್ಮನ್ನು ನಾವು ಪಾರುಮಾಡಿಕೊಳ್ಳಬೇಕು.

(ಲೇಖಕರು ಸಂಸ್ಕೃತ ಅಧ್ಯಾಪಕರು)

Leave a Reply

Your email address will not be published. Required fields are marked *

error: Content is protected !!