Thursday, 12th December 2024

ದಿಬ್ಬವೇರುವವರಿಗೆ ಹಬ್ಬ…ನಾಗತಿಬ್ಬ

ಅಲೆಮಾರಿಯ ಡೈರಿ

mehandale100@gmail.com

ಕೆಲವೊಮ್ಮೆ ಒಂದೇ ದಿನದ ಟ್ರೆಕ್ ಮಾಡೊಣ ಅಥವಾ ಇವತ್ತು ಹೊರಟು ನಾಳೆ ಬಂದು ಬಿಡೋಣ, ಆದರೆ ಆಫ್ ಬೀಟ್ ಇರಬೇಕು, ಅದರಲ್ಲಿ ಪರ್ವತ ಕಣಿವೆ ಇರಬೇಕು, ಫೋಟೊ ಸೆಲ್ಫಿಗೆ ಎಲ್ಲಿ ನಿಂತರೂ ಸೈ ಎನ್ನಬೇಕು ದಾರಿ ಹೋದಷ್ಟೂ ಚೆಂದ ಇರಬೇಕು, ಜಲಪಾತಗಳು ಕಂಪಲ್ಸರೀ ಒಂದಾದರೂ ಇರಲೇಬೇಕು. ದಾರಿ ಹೋಗಿ ತಲುಪಲು ಒಂದಷ್ಟು ಅನುಕೂಲಕರ ಎನ್ನುವ ವಾಹನ ಸೌಕರ್ಯಕ್ಕೆ ದಕ್ಕುವಂತಿರಬೇಕು ಇದೆಲ್ಲ ಇದ್ದೂ ಜೇಬಿಗೂ ಭಾರವಾಗದಂತಿರಬೇಕು.

ಎಂದೆಲ್ಲ ಪಕ್ಕಾ ಇಂಡಿಯನ್ ಹಸ್ಬಂಡ್‌ಗಳ ತರಹ ಲೆಕ್ಕ ಹಾಕುತ್ತೀರಾ..? ಹಾಗಿದ್ದರೆ ಸುಮ್ಮನೆ ಈ ನಾಗತಿಬ್ಬ ಟ್ರೆಕ್ ಮಾಡಿ ನಿಮ್ಮ ಚಟ ಮತ್ತು ಆಸಕ್ತಿ ಎರಡೂ ತಣಿಸಿಕೊಳ್ಳಿ. ಅಲ್ಲಿಗೆ ನಿಮ್ಮ ದುಡ್ಡು ದುಗ್ಗಾಣಿನೂ ಉಳಿಯುತ್ತೆ, ವಾರಗಟ್ಟಲೇ ಸುತ್ತುವ ದಣಿಯುವ ಅಗತ್ಯವೂ ಇರುವುದಿಲ್ಲ. ಚಿಕ್ಕ ಚೊಕ್ಕ ವಿಹಾರ ಮತ್ತು ಚಾರಣ ಎರಡಕ್ಕೂ ಹೇಳಿ ಮಾಡಿಸಿದ ನಾಗತಿಬ್ಬ ತುದಿಗೆ ಹೋಗಿ ಬರಲು ಮಿನಿಮಮ್ ಗ್ಯಾರಂಟಿಯ ದಿನಕ್ಕೆ ಹತ್ತಾರು ಕಿ.ಮೀ. ನಡೆಯುವ ಕಾನಿಡೆನ್ಸ್ ಇದ್ದರೆ ಸಾಕೇ ಸಾಕು. ದಿಬ್ಬ ವೇರುವ ಆಫ್ ಬೀಟ್ ಟ್ರಾವೆಲ್ ಮಾಡಿದೆ ಎನ್ನುವ ನಿಮ್ಮ ಎಲ್ಲ ವಾಂಛೆಗಳೂ ಇಲ್ಲಿ ಪೂರ್ತಿಯಾಗುತ್ತವೆ.

ನಾಗತಿಬ್ಬ.. ಚಾರಣಿಗರ ಮತ್ತು ದೂರದಿಂದ ಹೋಗಿ ದಿಬ್ಬವೇರುವವರ ನೆಚ್ಚಿನ ತಾಣ. ಕಾರಣ ಹೆಚ್ಚಿನ ಉತ್ತರ ಭಾರತದ ಚಾರಣಗಳು ಭಾರತದ ಉಳಿದ ಭಾಗದವರಿಗೆ ಸುಲಭವಲ್ಲ. ಬೇಸ್‌ಕ್ಯಾಂಪ್ ತಲುಪುವುದರ ಹೆಚ್ಚಿನ ಸಮಯ ತಿಂದು ಬಿಟ್ಟಿರುತ್ತವೆ. ಆ ಹೊತ್ತಿಗಾಗಲೇ ಸಮಯ ಮತ್ತು ತಿರುಗಾಟದ ಒತ್ತಡ ಪ್ರವಾಸದ ಮೊದಲ ಹಂತದಲ್ಲಿ ಇರಬೇಕಾದ ದೈಹಿಕ ಕ್ಷಮತೆ ಹಾಗೂ ಮಾನಸಿಕ ಸಿದ್ಧತೆಯನ್ನೇ ಪ್ರಶ್ನಿಸುವಂತಾಗುತ್ತದೆ.

ಆ ಲೆಕ್ಕದಲ್ಲಿ ಸುಲಭದಲ್ಲಿ ಬೇಸ್‌ಕ್ಯಾಂಪ್ ಕಡೆಗೆ ಪಯಣಿ ಸುವ ಮತ್ತು ಆರಾಮಾವಾಗೇ ಬೇಸ್ ಕ್ಯಾಂಪ್‌ಗೆ ತಲುಪಬಲ್ಲ
ಅವಕಾಶ ನಾಗತಿಬ್ಬ ಟ್ರೆಕ್‌ನಲ್ಲಿ ಖಾತ್ರಿಯಾಗಿ ದೊರಕುತ್ತದೆ. ಹಾಗಾಗಿ ಮೂಲ ದೆಹಲಿ ತಲುಪುವ ದಕ್ಷಿಣದ ಪ್ರವಾಸಿಗರಿಗೆ
ಮೊದಲ ದಿನದ ಪಯಣ ದೇಹಲಿಯಿಂದ ಪಟ್ವಾರಿ ತಲುಪಲೇ ಕಳೆಯುತ್ತದೆ. ಅದರಲ್ಲೂ ಡೆಹರಾಡೂನ್ ಭಾರತ ಕಂಡ ಅದ್ಭುತ ಗಿರಿಧಾಮಗಳಲ್ಲಿ ಒಂದು. ಹಾಗಾಗಿ ಇದು ವರ್ಷಾವಧಿಯುದ್ದಕ್ಕೂ ಚಟುವಟಿಕೆಯಿಂದ ಕೂಡಿರುವ ನಾಡಾಗಿದ್ದು, ಇಲ್ಲಿ ಆಫ್ ಸಿಜನ್ ಎಂದು ಇಲ್ಲವೇ ಇಲ್ಲ.

ಮೊದಲ ಭಾಗದಲ್ಲಿ ಸಹಜ ಬೇಸಿಗೆ ಚಳಿ ಎಂದಿದ್ದರೆ ನಿಜವಾದ ಸಿಜನ್ ಡಿಸೆಂಬರ್ ನಿಂದ ಏಪ್ರಿಲ್‌ವರೆಗೆ ಹಿಮ ಸುರಿಯುವ ಕಾಲದ್ದು. ಈ ಸಂದರ್ಭದಲ್ಲಿ ನಾಗತಿಬ್ಬ ಆಗಲಿ ಇನ್ನಾವುದೇ ಆಗಲಿ ಟ್ರೆಕ್ ಸಾಮಾನ್ಯವಾಗಿ ನಡೆಯುವುದಿಲ್ಲ. ಅದೇನಿದ್ದರೂ
ಹಿಮದ ಹುಡಿಗೆ ತೆರೆದುಕೊಳ್ಳುವ ಲೋಕವೇ ಬೇರೆ. ಹಾಗಾಗಿ ಡೆಹರಾಡೂನ್ ಮತ್ತು ಸುತ್ತಲಿನ ವಿಶಾಲ ಮೈದಾನದಲ್ಲಿ ಜಾಗತಿಕ ಸ್ಕೀಯಿಂಗ್ ಸೇರಿದಂತೆ ನಾನಾ ಹಿಮದ ಜಾರು ಸ್ಪರ್ಧೆಗಳ ಸಹಿತ ಏನಿದ್ದರೂ ಇಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ ಅಥವಾ ಹಿಮ ಕರಗುವವರೆಗೆ ವಿಭಿನ್ನ ಲೋಕ ತೆರೆದುಕೊಳ್ಳುತ್ತದೆ.

ಆ ಹೊತ್ತಿಗೆ ಹಿಮ ಭರಿತ ಪ್ರದೇಶದ ಚಾರಣಗಳು ನಡೆಯುತ್ತವಾದರೂ ನಾಗತಿಬ್ಬ ಚಾರಣ ಮತ್ತು ಪ್ರವಾಸಕ್ಕೆ ನಾನು ಜೂನ್‌ ನಿಂದ ಸೆಪ್ಟೆಂಬರ್ ಅತ್ಯುತ್ತಮ ಸಮಯ ಎಂದೇ ಸೂಚಿಸುತ್ತೇನೆ. ಈ ಹೊತ್ತಿಗೆ ಎಲ್ಲ ಹಿಮಕರಗಿ ಡೆಹರಾಡೂನ್ ಇರುವ ಉತ್ತರಾಖಂಡ ಅಥವಾ ಕೆಳಹಿಮಾಲಯದ ಶ್ರೇಣಿಯಲ್ಲಿನ ನೈಸರ್ಗಿಕ ಚಿತ್ರಣದ ಸೌಂದರ್ಯವೇ ಬೇರೆಯಾಗಿರುತ್ತದೆ.

ಹಾಗಾಗಿ ಈ ಹೊತ್ತಿಗೆ ದೆಹಲಿಯಿಂದ ಸಾಮಾನ್ಯವಾಗಿ ರಾತ್ರಿ ಪಯಣ ಮಾಡಿಕೊಂಡು ಪಟ್ವಾರಿ ತಲುಪಿ ಅಲ್ಲಿಂದ ಎರಡು
ತಾಸಿನ ಹಾದಿ ಸವೆಸಿದರೆ ಮೂಲ ಮತ್ತು ನಾಗತಿಬ್ಬ ಹತ್ತಲು ಮಾಡಿಕೊಳ್ಳುವ ಬೇಸ್‌ಕ್ಯಾಂಪ್ ತಲುಪಿದಂತಾಗುತ್ತದೆ.
ಎಲ್ಲರೂ ಇದೇ ರಸ್ತೆಯನ್ನು ಅನುಸರಿಸಬೇಕೆಂದೇನೂ ಇಲ್ಲ. ಕೆಲವರು ಬೆಳಗ್ಗೆ ಹೊರಟು ಅಂದರೆ ತೀರ ಬೆಳಗಿನ ನಾಲ್ಕೂವ ರೆಗೆಲ್ಲ ಆರಂಭಿಸಿ ಮಧ್ಯಾಹ್ನ ನಾಲ್ಕರ ಹೊತ್ತಿಗೆ ಮತ್ತೆ ಹಿಂದಿರುಗಿ ಬಿಡುವಂತಹ ಏಕ ದಿನ ಪ್ರವಾಸವನ್ನೂ  ಮಾಡಿಕೊಳ್ಳು ತ್ತಾರೆ. ಕಾರಣ ಹೆಚ್ಚೆಂದರೆ ಹದಿಮೂರರಿಂದ ಹದಿನಾಲ್ಕು ಕಿ.ಮೀ. ಉದ್ದದ ದಾರಿಯನ್ನು ಒಂದಿನದಲ್ಲಿ ಕ್ರಮಿಸುವುದು ಕಷ್ಟವೇನಲ್ಲ.

ಹಾಗಾಗಿ ನಾಗತಿಬ್ಬ ಆರಂಭದ ಪಯಣಿಗ ಚಾರಣಿಗರಿಗೆ ಸೂಕ್ತ ಅನುಭವಕ್ಕೆ ಹೇಳಿ ಮಾಡಿಸಿದ ಚಾರಣ. ಅದರಲ್ಲೂ ಹಿಮಾಲಯದ ಕೆಳ ಶ್ರೇಣಿ ಅನುಭವಕ್ಕೀಡಾಗುವಾಗ ನಾಗತಿಬ್ಬದ ತುದಿಯಿಂದ ಕಾಣಿಸುವ ಕೇದಾರ, ಗಂಗೋತ್ರಿಯ ಪರ್ವತಾಗ್ರಗಳು ಕಾಣಿಸುವ ಕಣಿವೆಯ ತುದಿಯಲ್ಲಿ ಆಗುವ ಅನುಭವಕ್ಕಾದರೂ ನಾಗತಿಬ್ಬ ಒಮ್ಮೆ ಹತ್ತ ಬೇಕು ನೋಡಿ. ಉತ್ತರಾಖಂಡ ಸೀಮೇಯ ಅತ್ಯಂತ ಎತ್ತರದ ಚಾರಣ ತುದಿ ಎಂದೂ ಗುರುತಿಸಿಕೊಂಡಿರುವ ನಾಗತಿಬ್ಬ ಕೊನೆಯಮ್ಮೆ ಸಣ್ಣ ಸವಾಲಾಗುವುದು ಹೌದಾದರೂ ಹತ್ತಾರು ಕಿ.ಮೀ. ಕ್ರಮಿಸಿದ ಅನುಭವದಲ್ಲಿ ಇದು ಸಲೀಸಾಗಿ ಸಾಗಿ ಬಿಡುತ್ತದೆ.

ಏರಿಳಿತ ತುದಿಯನ್ನು ತಲುಪುವ ಕೊನೆಯ ಹಂತದ ಚಾರಣ ಅನೂಹ್ಯ ಅನುಭೂತಿ ನೀಡದಿರದು. ಅದರಲ್ಲೂ ಎರಡು ಪಾರ್ಶ್ವ ಗಳಲ್ಲಿ ಕಾಣಿಸುವ ಕೇದಾರನಾಥ ಶಿಖರ ತುದಿಗಳು ಮತ್ತು ಬಾಂದಾರ್‌ಪೂಂಚ್ ಪರ್ವತ ಕಣಿವೆಯ ದೃಶ್ಯಗಳು ತೋರುವ ಕತೆಯೇ ಬೇರೆ. ಹಾಗಾಗಿ ತಿಬ್ಬದ ತುದಿಯಲ್ಲಿ ನಾಲು ದಿಕ್ಕಲ್ಲಿ ಕತ್ತು ಕ್ಯಾಮೆರಾ ಹೊರಳಿಸುವುದರ ಎರಡು ತಾಸು ಕಳೆದದ್ದು ಗೊತ್ತಾಗುವುದಿಲ್ಲ. ಗೈಡ್ ಅವಸರಿಸದಿದ್ದರೆ ಅ ಇನ್ನಿಷ್ಟು ಗಂಟೆ ಕಳೆಯುವುದರಲ್ಲೂ ಸಂಶಯವಿಲ್ಲ.

ಸುಮಾರು ಹನ್ನೆರಡು ಸಾವಿರ ಚಿಲ್ಲರೆ ಅಡಿ ಎತ್ತರ ಕಾಯ್ದುಕೊಂಡಿರುವ ನಾಗತಿಬ್ಬ ಒಂದು ಏರಿನ ಪರ್ವತವಲ್ಲ. ಅದರೆ
ಕ್ರಮೇಣ ನಿಮ್ಮನ್ನು ಅಡಿಗಡಿಗೂ ಮೇಲಕ್ಕೇರಿಸುತ್ತಾ ಕರೆದೊಯ್ಯುವ ಫ್ರೆಂಡ್ಲೀ ಟ್ರೆಕ್. ಇದನ್ನು ತಲುಪಲು ದೆಹಲಿ, ಡೆಹರಾ ಡೂನ್ ಅಥವಾ ಪಟ್ವಾರಿ ಹೀಗೆ ಯಾವುದೇ ಕಡೆಯಿಂದ ಆಯ್ದುಕೊಂಡರೂ ಅದಕ್ಕೆ ತಕ್ಕಂತೆ ತಯಾರಿ ಬೇಕಾಗುತ್ತದೆ. ಆದರೆ ಲಗುಬಗೆಯಿಂದ ಒಂದೇ ದಿನಕ್ಕೆ ಓಡೋಡಿ ಹೋಗಿ, ದರ್ಶಿನಿಯಲ್ಲಿ ನಿಂತು ಎರಡು ಇಡ್ಲಿ ತಿಂದು, ಅರ್ಧ ಕಾಫಿ ಸೊರಸೊರನೆ ಹೀರಿ ಬಂದಂತೆ ಮಾಡುವುದಕ್ಕಿಂತ, ಮಧ್ಯ ಪಟ್ವಾರಿಯಲ್ಲಿ ಬೇಸ್‌ಕ್ಯಾಂಪ್ ರೀತಿ ಹಾಲ್ಟ್   ತೆಗೆದುಕೊಂಡರೆ, ಅದರಲ್ಲೂ ಡೂಮ್ ಟೆಂಟ್ ಅಥವಾ ಡ್ರಾಪ್ ಟೆಂಟ್‌ಗಳ ಸೇವೆ ಲಭ್ಯ ಇರುವಲ್ಲಿ ಬಳಸಿಕೊಂಡು ರಾತ್ರಿಯ ಕ್ಯಾಂಪಿಂಗ್ ಮಾಡುವುದಿದೆ ಯಲ್ಲ; ಅದಕ್ಕಾದರೂ ಇಲ್ಲಿ ಒಂದು ಹಾಲ್ಟ್ ಮಾಡಬೇಕು.

ಇನ್ನು ಹಿಮಾಲಯದ ಮತ್ತು ಉತ್ತರಾಖಂಡ ಪ್ರದೇಶದಲ್ಲಿ ಪ್ರಮುಖ ಅಪಾಯಕಾರಿ ಎನ್ನಿಸುವ ನದಿಗಳ ಉಬ್ಬರ ಇಳಿತ ಮತ್ತು ಶಿಖರಗಳೇ ಉರುಳಿ ಬೀಳುವ ಇತಿಹಾಸವೇ ಇಲ್ಲಿ ಇಲ್ಲವೇ ಇಲ್ಲ. ಜೊತೆಗೆ ಲ್ಯಾಂಡ್‌ಸ್ಲೈಡ್‌ನ ನಿಸರ್ಗ ನಾಟಕ ಇಲ್ಲಿ ನಡೆಯುವ ಬಗ್ಗೆ ಚಿಂತಿಸಬೇಕಿಲ್ಲ. ಇದನ್ನು ಹೇಳಲು ಕಾರಣ ಉತ್ತರ ಭಾರತದ ಹೆಚ್ಚಿನ, ಅದರಲ್ಲೂ ಗಢವಾಲ, ಉತ್ತರಾಖಂಡ ಮತ್ತು ಹಿಮಾಚಲದ ಎಲ್ಲ ಇಂಥಾ ರಸ್ತೆಗಳು ಪರ್ವತ ಕುಸಿಯುವ ಹಿಸಿಯುವ ಮತ್ತು ನದಿಗಳಲ್ಲಿ ಇದ್ದಕ್ಕಿದಂತೆ ನೆರೆಯುಕ್ಕುವ ಹಾಗೂ ಹಿಮಗಲ್ಲುಗಳು ಸೋಟಗೊಳ್ಳುವುದು ನಡೆಯುತ್ತಲೇ ಇರುತ್ತದೆ ಮತ್ತು ಅದು ಯಾವ ಲೆಕ್ಕದಲ್ಲೂ ಹೀಗಾದೀತು ಎದು
ಮುನ್ನೆಚ್ಚರಿಕೆಗೆ ದಕ್ಕುವ ವಿದ್ಯಮಾನ ಅಲ್ಲವೇ ಅಲ್ಲ.

ಮಳೆಯ ಆವಾಂತರನ್ನು ಹೇಗೆ ನಮ್ಮ ಭಾರತೀಯ ಇಲಾಖೆ ದೇವ್ರಾಣೆ ಒಂದಿನ ಕೂಡ ಖಚಿತವಾಗಿ ಗುರುತಿಸದೇ ಪ್ಯಾಲಿ ಯಾಗುತ್ತಿದೆಯೊ ಹಾಗೆ ಇಲ್ಲ ಲೆಕ್ಕ ತಪ್ಪಿ ಆಗುವ ಅನಾಹುತದಂತಹ ನೈಸರ್ಗ ವೈಪರೀತ್ಯಗಳು ಇಲ್ಲವೇ ಇಲ್ಲ. ಆ ಮಟ್ಟಿಗೆ ನಾಗತಿಬ್ಬ ನಿಜಕ್ಕೂ ಅತ್ಯಂತ ಸುರಕ್ಷಿತ ಟ್ರೆಕ್.

ಬಹುಶಃ ಇತ್ತೀಚಿನ ಐದಾರು ವರ್ಷದಲ್ಲಿ ಪ್ರಮುಖವಾಗಿ ಭಾರತದ ಖ್ಯಾತ ಪ್ರವಾಸಿ ಚಾರಣ ಮಾರ್ಗಗಳಾಗಿರುವ ಹಾಗು ವಯಸ್ಸಿನ ಭೇದವಿಲ್ಲದೇ ಧಾರ್ಮಿಕ ವಿಶ್ವಾಸ ನಂಬಿಕೆಯ ಮೂಲಕ ಅಶಕ್ತರೂ ದಾರಿ ಕ್ರಮಿಸಿಬಿಡುವ ಪಥಗಳಾದ ಕೇದಾರ ನಾಥ್, ಬದರಿ, ಗಂಗೋತ್ರಿ ಯಮುನೋತ್ರಿ ಮತ್ತು ಕೈಲಾಸ ಮಾನಸ ಸರೋವರ್, ಕಿನ್ನೂರ್ ಕೈಲಾಸ, ಆದಿ ಕೈಲಾಸ್, ಅಮರನಾಥ್, ಸೇರಿದಂತೆ ಓಂ ಪರ್ವತ್ ಟ್ರೆಕ್, ಕೇದಾರಕಾಂಟಾ, ಬರಶೈನಿ, ಬಂಡಕ್ ಥಾಚ್, ಸರಪಾಸ್, ಕಾಲಾ ಟಾಪ್, ದುಂಗರ್, ಸಟ್ಲೆಜ್ ಬೆಲ್ಟ, ಝಿಲಂ ವ್ಯಾಲಿ ಟ್ರೆಕ್, ಸೆವೆನ್ ಕ್ಯಾಂಪ್ ಅಥವಾ ಏಳು ಸರೋವರಗಳೆಂದೇ ಖ್ಯಾತಿ ಪಡೆದಿರುವ ತರ್ಸರ್ ಮರ್ಸರ್, ಹಿಮಾಲಯನ್ ಬೇಸ್ ಕ್ಯಾಂಪ್ ಹೀಗೆ ಯಾವುದೇ ಭಾಗದ ಪ್ರವಾಸಿ ಚಾರಣ ತೆಗೆದುಕೊಂಡರೆ ಇತ್ತೀಚಿನ ದಿನಗಳಲ್ಲಿ ಪ್ರತಿ ಎರಡು ಮೂರು ವರ್ಷಕ್ಕೊಮ್ಮೆ ಇವು ಪಥ ಬದಲಿಸಿವೆ, ನೀರಿನ ದಾಳಿ ಗೊಳಗಾಗಿವೆ, ಪರ್ವತ ಶಿಖರ ಕುಸಿದು ಜನ ಜಾನುವಾರ ಲೆಕ್ಕಕ್ಕೇ ಸಿಗದಂತೆ ನಾಪತ್ತೆಯಾಗಿದ್ದಾರೆ.

ಆದರೂ ಆಸ್ಥೆ ಕಳೆದುಕೊಳ್ಳದೆ ಈ ದಾರಿಗಳಲ್ಲಿ ಈಗಲೂ ಅದೇ ಜನ ಜಾನುವಾರಗಳ ಗೈಡುಗಳ, ಪೊನಿಗಳು ದೌಡಾಯಿಸು ತ್ತವೆ. ಬದುಕು ಮತ್ತು ಪ್ರವಾಸ ಮಧ್ಯೆ ಚಾರಣ ಭಕ್ತಿಯ ಧಾರ್ಮಿಕ ರೂಪದ ಆಸ್ಥೆಯಾಗಿ ಯಾತ್ರಿಗಳ ರೂಪದಲ್ಲಿ ಮೇಲಕ್ಕೆ ಸೆಳೆಯುತ್ತವೆ. ಸಾವು ನೋವು ಕಾಣಿಸುತ್ತಿದ್ದರೂ ಒಳಗಣ್ಣಿಗೆ ಮನಸ್ಸಿಗೆ ನುಗ್ಗದ ಭಾವ ಅಲ್ಲಿ ಸುರಿಸುತ್ತಲೇ ಇರುತ್ತದೆ.
ಹಾಗಾಗಿ ಇವತ್ತು ಯಾವುದೇ ಚಾರಣ ದಾರಿ ಸೇಫ್ ಎಂದು ಕೇಳುವ ಮಟ್ಟಿಗೆ ಅನಿರೀಕ್ಷಿತಗಳು ಇಲ್ಲ ದಾಂಗುಡಿ ಇಟ್ಟಿದ್ದು ಓದುತ್ತಲೇ ಇರುತ್ತೇವಲ್ಲ ಆ ಮಟ್ಟಿಗೆ ಇಲ್ಲಿ ಒಂದೇ ಒಂದಿನ ಭೂಮಿ ಬಾಯ್ಬಿರಿದ ಅಥವಾ ಪಕ್ಕದ ಗುಡ್ಡ ಕುಸಿದ ಇತಿಹಾಸದಲ್ಲಿ
ದಾಖಲಾದ ದಿನವೇ ಇಲ್ಲ. ಹಾಗಾಗಿ ನಾಗತಿಬ್ಬ ಒಂದು ರೀತಿಯಲ್ಲಿ ಅತ್ಯಂತ ಸರಳ ಆದರೆ ನಿಖರ ಚಾರಣದ ಅನುಭವ ಮಾಡಿಸುವ, ಏರುಮುಖ ಹಸಿರು ಬೇಕೆನ್ನಿಸುವುದರ ಹೊರತಾಗಿ ಜಲಪಾತ ಮತ್ತು ಕಣಿವೆ ಅಂಚಿನಲ್ಲಿ ಸಾಗುತ್ತಾ ಪರ್ವತದ ತುದಿಯಲ್ಲಿ ಇತರ ಪರ್ವತ ಶಿಖರಗಳ ಶಿರಕ್ಕೆ ಸಮನಾಗಿ ನಿಲ್ಲುವ ಮೋದಗೊಳ್ಳುವ ಮಟ್ಟಿಗೆ ನಮನ್ನೆಲ್ಲ ಮತ್ತೊಮ್ಮೆ ಅಲೆಮಾರಿಯಾಗಲು ಪ್ರೇರೇಪಿಸುವ ತುದಿ ಅದು.

ಒಮ್ಮೆ ಹಿಂಗೇ ಹೊರಟು ಕಾಲಾಡಿಸಿ ಬಿಡಿ. ಆಮೇಲೆ ಅಲೆಮಾರಿಯಾಗುವ ಮನಸ್ಸಿಗೆ ಅದು ಫಿಟ್ಟಿಂಗ್ ಇಡದಿದ್ದರೇ ಕೇಳಿ