Sunday, 24th November 2024

ಹೆಸರು ನೆನಪಿಟ್ಟುಕೊಳ್ಳುವುದಕ್ಕಿಂತ, ಮರೆಯುವುದು ಕಷ್ಟ !

ಇದೇ ಅಂತರಂಗ ಸುದ್ದಿ

vbhat@me.com

‘ವ್ಯಕ್ತಿಗಳ ಹೆಸರುಗಳನ್ನು ಮಾತ್ರ ಮರೆಯಬಾರದು. ಒಂದು ಸಲ ಭೇಟಿಯಾದವರ ಹೆಸರನ್ನು ನೆನಪಿಟ್ಟುಕೊಂಡು, ಎಷ್ಟೋ
ವರ್ಷಗಳ ನಂತರ ಭೇಟಿಯಾದಾಗ, ಅವರ ಹೆಸರು ಹೇಳಿ ಮಾತಾಡಿಸಿದರೆ ನಿಮ್ಮ ಬಗ್ಗೆ ಅತೀವ ಅಭಿಮಾನವಾಗುತ್ತದೆ.
ಯಾವತ್ತೂ ವ್ಯಕ್ತಿಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳಲೇಬೇಕು’.

ನಾನು ಕನ್ನಡ ಶಾಲೆಯಲ್ಲಿ ಓದುವಾಗ ಗೌಡ ಮಾಸ್ತರರೆಂಬ ಹೆಡ್‌ ಮಾಸ್ತರರಿದ್ದರು. ನೈತಿಕ ಶಿಕ್ಷಣ ಕ್ಲಾಸಿನಲ್ಲಿ ಅವರು ಪಾಠ ಮಾಡು ವಾಗ ನಮಗೆ ಯಾವತ್ತೂ ಹೇಳುತ್ತಿದ್ದ ಮಾತುಗಳಿವು. ಅವರು ಹೇಳುತ್ತಿದ್ದ ಈ ಸಾಲುಗಳು ಮನಸ್ಸಿನಲ್ಲಿ ಅಚ್ಚೊತ್ತಿವೆ. ಬಹುತೇಕ ಯಾರನ್ನೇ ಭೇಟಿ ಯಾಗಲಿ ನನಗೆ ಅವರ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಲ್ಲ, ಮರೆಯುವುದೇ ಕಷ್ಟ. ಹುಲಿ, ಸಿಂಹ, ಆನೆ, ಕೋತಿಗಳನ್ನು ಮರೆಯಬಹುದು. ಕಾರಣ ಅವೆಲ್ಲಾ ನೋಡಲು ಒಂದೇ.

ಆದರೆ ಮನುಷ್ಯ ಹಾಗಲ್ಲ. ಪ್ರತಿಯೊಬ್ಬರೂ ಭಿನ್ನ. ಎಲ್ಲರೂ ಒಂದಲ್ಲ ಒಂದು ದೃಷ್ಟಿಯಿಂದ unique. ಹೀಗಾಗಿ ವ್ಯಕ್ತಿಗಳನ್ನು ಮರೆಯುವುದು ಕಷ್ಟ. ಹಾಗಂತ ಕೆಲವರು ಥಟ್ಟನೆ ಎದುರಿಗೆ ಬಂದರೆ ಅವರ ಹೆಸರು ಹೊಳೆಯ ದಿರಬಹುದು. ನನ್ನ ಮಟ್ಟಿಗೆ ನೂರರಲ್ಲಿ ಒಬ್ಬರು ಅಥವಾ ಇಬ್ಬರು ಬಂದಾಗ ಹೀಗಾಗಬಹುದು. ಇಲ್ಲದಿದ್ದರೆ ಮರೆಯುವ ಚಾನ್ಸೇ ಇಲ್ಲ.

ಈ ವಿಷಯದಲ್ಲಿ ಕೇಂದ್ರ ಸಚಿವ ಅನಂತಕುಮಾರ ಅವರು ಎಂಥವರಿಗೂ ಆದರ್ಶ. ಅವರೇನಾದರೂ ಒಂದು ಕಾರ್ಯಕ್ರಮ ದಲ್ಲಿ ಭಾಗವಹಿಸಿ, ಅಲ್ಲಿ ಪಾಲ್ಗೊಂಡ ನೂರೋ, ಇನ್ನೂರೋ ಜನರನ್ನು ಖುದ್ದಾಗಿ ಪರಿಚಯಿಸಿಕೊಂಡರೆನ್ನಿ. ಆ ನೂರೋ, ಇನ್ನೂರೋ ಜನರು ಹತ್ತಾರು ವರ್ಷಗಳ ನಂತರ ಸಿಕ್ಕರೆ ಹೆಸರು ಹೇಳಿ ಮಾತಾಡಿಸುತ್ತಾರೆ. ಅಷ್ಟೇ ಅಲ್ಲ, ಅವರ ಹೆಂಡತಿ, ಮಕ್ಕಳ ಹೆಸರನ್ನು ಕೇಳಿ ವಿಚಾರಿಸುತ್ತಾರೆ.

ಸುಮಾರು ೨೨ ವರ್ಷಗಳ ಹಿಂದೆ, ಬೆಂಗಳೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಅವರು ಸುಮಾರು
ಮುನ್ನೂರು ಜನರನ್ನು ಅವರ ಹೆಸರು ಹೇಳಿ ಮಾತಾಡಿಸಿ, ಅವರ ಪತ್ನಿ, ಮಕ್ಕಳು, ತಾಯಿಯವರ ಹೆಸರುಗಳನ್ನು ಹೇಳಿ
ಅವರೆಲ್ಲರ ಯೋಗಕ್ಷೇಮ ವಿಚಾರಿಸಿದ್ದರು. ಯಾರನ್ನೂ ತಪ್ಪಾಗಿ ಗುರುತಿಸಿರಲಿಲ್ಲ ಹಾಗೂ ಗುರುತಿಸದೆಯೂ ಇರಲಿಲ್ಲ. ‘ನಿಮ್ಮನ್ನು ಎಲ್ಲೋ ನೋಡಿದ ನೆನಪು, ನೀವು ಯಾರು ಅಂತ ನೆನಪಾಗ್ತಿಲ್ಲ’ ಎಂದು ಅವರು ಹೇಳಿದ್ದನ್ನು ಕೇಳಿಲ್ಲ. ಅವರು ಈ ಮೊದಲು ನಿಮ್ಮನ್ನು ಮಾತಾಡಿಸಿದ್ದಿದ್ದರೆ, ಆ ನಿಟ್ಟಿನಲ್ಲಿ ಅವರದು ಆನೆಯ ಮಿದುಳು.

ಗಣ್ಯ ವ್ಯಕ್ತಿಯೆನಿಸಿಕೊಂಡವರು ನಿಮ್ಮ ಹೆಸರು ಹಿಡಿದು ಮಾತಾಡಿಸಿದರೆ, ನಿಮಗೆ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ, ನಿಮ್ಮ ಬಗ್ಗೆ ಸಹ ಅಭಿಮಾನವೆನಿಸುತ್ತದೆ. ಆ ಗಣ್ಯ ವ್ಯಕ್ತಿಯ ಮಸ್ತಕದಲ್ಲಿ ತಾನು ನೆಲೆಸಿದ್ದೇನಲ್ಲ ಎಂದು ಖುಷಿಯಾಗುತ್ತದೆ. ಅದರಲ್ಲೂ ನಾಲ್ಕು ಮಂದಿ ಎದುರು ಮಾತಾಡಿಸಿದರೆ ನಿಮ್ಮ ಡೌಲು, ಪೊಗರು ಇನ್ನಷ್ಟು ಜಾಸ್ತಿಯಾಗುತ್ತದೆ.

ಮುಖ್ಯಮಂತ್ರಿಗಳೇನಾದರೂ ಪಕ್ಷದ ಕಾರ್ಯಕರ್ತ- ನೊಬ್ಬನನ್ನು ಹೆಸರಿನಿಂದ ಮಾತಾಡಿಸಿದರೆ, ಅವನ ಜನಪ್ರಿಯತೆ ಜಂಪ್ ಆಗುವುದರಲ್ಲಿ ಸಂದೇಹ ಇಲ್ಲ. ಪ್ರಧಾನಿಯವರೇನಾದರೂ ಹಾಗೆ ಮಾತಾಡಿಸಿದರೆ ಮುಗೀತು ಬಿಡಿ. ನರೇಂದ್ರ ಮೋದಿಯ ವರೂ ಈ ವಿಷಯದಲ್ಲಿ ಯಾರಿಗೇನೂ ಕಮ್ಮಿಯಿಲ್ಲ. ಒಮ್ಮೆ ಪರಿಚಯವಾದರೆ ಅವರು ಮರೆಯುವುದಿಲ್ಲ. ಮುಂದೊಮ್ಮೆ ಭೇಟಿ ಯಾದಾಗ ಕುಲ, ಗೋತ್ರ ಪಂಚಾಂಗವನ್ನೆಲ್ಲ ಕೇಳಿ ವಿಚಾರಿಸಿಕೊಳ್ಳುತ್ತಾರೆ.

ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವ್ಯಕ್ತಿಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಮಾತಾಡಿಸುವುದು ದೊಡ್ಡ ಕಲೆಗಾರಿಕೆ ಹಾಗೂ ಕಸುಬುದಾರಿಕೆ. ಹಿಂದೆ ನಾಲ್ಕೈದು ಸಲ ಭೇಟಿಯಾದರೂ, ಮುಂದೆ ಯಾವಾಗಲೋ ಸಿಕ್ಕಾಗ, ‘ನೀವ್ಯಾರು ಗೊತ್ತಾಗ ಲಿಲ್ಲ, ನಿಮ್ಮನ್ನು ಎಲ್ಲೋ ನೋಡಿದ ನೆನಪು, ನಾನು ನಿಮ್ಮನ್ನು ಇದಕ್ಕೂ ಮುನ್ನ ಭೇಟಿ ಮಾಡಿದ್ದೆನಾ?, ನೀವು ಯಾರು ಅಂತ ಹೊಳೆಯುತ್ತಿಲ್ಲ…’ ಎಂದರೆ ಅವರ ಬಗ್ಗೆ ನಿಮಗೆ ಗೌರವ ಮೂಡಲು ಸಾಧ್ಯವಿಲ್ಲ.

ಅದಕ್ಕಿಂತ ಹೆಚ್ಚಾಗಿ, ಸಣ್ಣ ತಿರಸ್ಕಾರ ಭಾವನೆ ಮೂಡೀತು. ಕೆಲ ವರ್ಷಗಳ ಹಿಂದೆ ಅಕ್ಕಿ ಆಲೂರಿನ ಅಕ್ಕಿ ವ್ಯಾಪಾರಿಯೊಬ್ಬರ ಪರಿಚಯವಾಗಿತ್ತು. ಅವರ ಹೆಸರು ಮುಚ್ಚಂಡಿ ಅಂತ. ಅವರು ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕರು. ನಾನು ಸಹಜವಾಗಿ ‘ಏನ್ ಸ್ವಾಮಿ, ಮುಚ್ಚಂಡಿಯವರೇ, ಎಸ್.ಎಸ್. ಮುಚ್ಚಂಡಿಯವರೇ’ ಎಂದು ಮಾತಾಡಿಸಿದೆ. ಅವರು ನಿಜಕ್ಕೂ ಆನಂದ ತುಂದಿಲರಾಗಿದ್ದರು. ಕೆಲ ದಿನಗಳ ಹಿಂದೆ ಮದುವೆ ಸಮಾರಂಭದಲ್ಲಿ ಆತ್ಮೀಯರೊಬ್ಬರು ಸಿಕ್ಕರು.

ಅವರನ್ನು ನಾನು ಇಪ್ಪತ್ತೈದು ವರ್ಷಗಳ ನಂತರ ಭೇಟಿ ಮಾಡಿದ್ದು. ಅವರು ಹತ್ತಿರ ಬಂದು, ‘ನಾನು ಯಾರು ಅಂತ
ಗೊತ್ತಾಯ್ತಾ?’ ಎಂದು ಕೇಳಿದರು. ಕೆಲವೊಮ್ಮೆ ಇದು ತೀರಾ ಪೇಚಿಗೆ ಸಿಲುಕಿಸುವ ಪ್ರಶ್ನೆ. ಗೊತ್ತು ಅಂದ್ರೆ ‘ಹಾಗಾದ್ರೆ ನನ್ನ
ಹೆಸರೇನು?’ ಎಂದು ಕೇಳುತ್ತಾರೆ. ಗೊತ್ತಿಲ್ಲ ಅಂದ್ರೆ ಅವರನ್ನು ಸಣ್ಣಗೆ ನೋಯಿಸಿದ ಭಾವ ಕಾಡುತ್ತದೆ.

ನಾನು ಅವರಿಗೆ ನಿಮ್ಮ ಹೆಸರು ಹೇಳಲೋ, ನಿಮ್ಮ ಅಂಗಡಿ ಹೆಸರು ಹೇಳಲೋ, ನಿಮ್ಮ ಮನೆ ಹಳೆಯ ಲ್ಯಾಂಡ್‌ಲೈನ್
ನಂಬರ್ ಹೇಳಲೋ ಎಂದು ಕೇಳಿ ಅವೆಲ್ಲವನ್ನೂ ಹೇಳಿದೆ. ಅವರು ಎರಡು ನಿಮಿಷ ಹಿಡಿದ ಕೈಯನ್ನು ಬಿಟ್ಟಿರಲಿಲ್ಲ. ಈ
ಪ್ರಹಸನವನ್ನು ಊರಿಗೆ ಹೋಗಿ ಎಲ್ಲರ ಮುಂದೆ ಹೇಳಿದ್ದರು. ಅವರೆಲ್ಲರಿಂದ -ನ್‌ನಲ್ಲಿ ನನಗೆ ಈ ಪ್ರಸಂಗದ ಬಣ್ಣನೆ. ಯಾರೇ ಆಗಿರಲಿ, ಅವರನ್ನು ಮರೆಯುವಷ್ಟು ನಿಕೃಷ್ಟವಾಗಿರುವುದಿಲ್ಲ. ಅವರ ಹೆಸರನ್ನು ನೆನಪಿಟ್ಟುಕೊಳ್ಳದೇ ಇರುವಷ್ಟು ಕಷ್ಟವೂ ಆಗಿರುವುದಿಲ್ಲ.

ಟಿವಿ ಹಾಗೂ ಸಿಸಿಟಿವಿ
ಉತ್ತರಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆಯವರು ಕರ್ತವ್ಯನಿರತ ವೈದ್ಯರ ಮೇಲೆ ಹೊಡ್ಪಡೆಗೆ ಇಳಿದು ಸುಖಾಸುಮ್ಮನೆ ರಾದ್ಧಾಂತ ಮಾಡಿಕೊಂಡಿದ್ದಾರೆ. ಅವರಿಗೆ ಇದು ಹೊಸತೇನಲ್ಲ. ಆದರೆ ಅವರ ‘ಆಟ’ವನ್ನು ಜನ ಖುದ್ದಾಗಿ ನೋಡಿರಲಿಲ್ಲ. ಸಾಮಾನ್ಯವಾಗಿ ಹೆಗಡೆಯವರು ಟಿವಿ, ಪತ್ರಿಕೆಗೆ ಬೈಟ್ಸ್ , ಸಂದರ್ಶನ ಕೊಡುವವರಲ್ಲ. ಅವರಿಗೆ ಒಂಥರಾ ತಾತ್ಸರ.

ಆದರೆ ತಾವು ಮಾಡಿದ ಭಾನಗಡಿ ಸಿಸಿಟಿವಿಯಲ್ಲಿ ಸೆರೆಯಾಗುತ್ತಿದೆ ಎಂಬ ಕಲ್ಪನೆ ಅವರಿಗಿರಲಿಲ್ಲ. ಇದ್ದಿದ್ದರೆ ಮೊದಲು ಸಿಸಿಟಿವಿ ಒಡೆದು ಆನಂತರ ವೈದ್ಯರ ತುಟಿ ಹರಿಯುತ್ತಿದ್ದರೇನೊ. ಸದಾ ಟಿವಿಯವರನ್ನೂ ದೂರವಿಡುವ ಅವರು ಟಿವಿ ಯವರಿಂದ ಉಳಿಸಿಕೊಂಡ ಮಾನವನ್ನು ಸಿಸಿಟಿವಿಯಿಂದ ಕಳೆದುಕೊಂಡರು! ನಾಳೆ ಅವರಿಗೇನಾದರೂ ವೈದ್ಯರನ್ನು
ಸಂಪರ್ಕಿಸುವ ಪ್ರಸಂಗ ಬಂದರೆ(ಬರದಿರಲಿ) ವೈದ್ಯರು ಹೇಗೆ ಪ್ರತಿಕ್ರಿಯಿಸಬಹುದೆಂಬ ಪ್ರಜ್ಞೆ ಅವರಿಗಿದ್ದರೆ ಸಾಕು.
ಅಲ್ಲದೇ, ಸಂಸದರು ಕೊಟ್ಟ ಆಶ್ವಾಸನೆಯನ್ನು ಈಡೇರಿಸಿಲ್ಲ ಅಥವಾ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು
ಜನರೂ ಅವರ ವಿರುದ್ಧ ಅವರಂತೇ ವರ್ತಿಸಿದರೆ ಅದನ್ನು ಅವರು ಹೇಗೆ ಸ್ವೀಕರಿಸಬಹುದು? ಡ್ಯೂಟಿ ಮಾಡದ ವೈದ್ಯರಿಗೆ ಸಂಸದರು ಹೊಡೆಯುವುದಾದರೆ, ಡ್ಯೂಟಿ ಮಾಡದ ಸಂಸದರಿಗೆ ವೋಟು ಕೊಟ್ಟ ಜನರು ಹೊಡೆಯಬಹುದಾ?

ಹೆಗಡೆಯವರೇ ಉತ್ತರಿಸಬೇಕು.

ಮಕ್ಕಳು ಬೇಗ ದೊಡ್ಡವರಾಗುತ್ತಾರೆ! ನಾನು ಇತ್ತೀಚೆಗೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಮಿಲಿಟರಿ ಕ್ವಾಟ್ರಸ್‌ನಲ್ಲಿರುವ ನನ್ನ ಹಿರಿಯ, ಆತ್ಮೀಯ ಸ್ನೇಹಿತರಾದ ಭರತ ಶರ್ಮ ಅವರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಭೋಜನ ಕೂಟಕ್ಕೆ ಹೋಗಿದ್ದೆ. ಶರ್ಮ ಭಾರತೀಯ ಸೇನೆಯಲ್ಲಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಅವರಿಗೆ ನೂರು ವರ್ಷವಾಗಿದೆ ಅಂದ್ರೆ ಯಾರೂ ನಂಬುವುದಿಲ್ಲ, ಹಾಗಿದ್ದಾರೆ.

ಆ ಸಮಾರಂಭದಲ್ಲಿ 82 ವರ್ಷ ವಯಸ್ಸಿನ ಅವರ ಮಗ ಶ್ರೀಕಂಠ ಶರ್ಮ ಸಹ ಭಾಗವಹಿಸಿದ್ದರು. ಭರತ ಶರ್ಮ ಅವರ ಸ್ನೇಹಿತ ದುಬೆ ಅವರು ಬಹಳ ವರ್ಷಗಳ ನಂತರ ತಮ್ಮ ಗೆಳೆಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುಣೆಯಿಂದ ಆಗಮಿಸಿದ್ದರು. ಅವರಿಗೆ ಭರತ ಶರ್ಮ ತಮ್ಮ 81 ವರ್ಷ ವಯಸ್ಸಿನ ಮಗನನ್ನು ಪರಿಚಯಿಸಿದರು. ಮಗನ ಕೈ ಕುಲುಕಿದ ದುಬೆ, ‘ನಾನು ನಿನ್ನನ್ನು ಬಹಳ ಸಣ್ಣವನಿದ್ದಾಗ ನೋಡಿದ್ದು. ಈಗಿನ ಕಾಲದ ಮಕ್ಕಳು ಬಹಳ ಬೇಗ ದೊಡ್ಡವರಾಗ್ತಾರಪ್ಪಾ’ ಎಂದರು. ಕ್ಕದಲ್ಲಿದ್ದ ನನಗೆ ನಗು ತಡೆದುಕೊಳ್ಳಲಾಗಲಿಲ್ಲ.

ಯುದ್ಧ ಮುಗಿಯುವುದೆಂದು?
ನನ್ನ ಸಹೋದ್ಯೋಗಿ ವರದಿಗಾರರು ಹೇಳಿದ್ದು. ಭಾರತೀಯ ಸೇನೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಮೇಜರ್ ಅವರು ಕರೆದ ಪತ್ರಿಕಾ ಗೋಷ್ಠಿಯಲ್ಲಿ ತರಲೆ ಪತ್ರಕರ್ತನೊಬ್ಬ ‘ನೀವು ಯುದ್ಧದಲ್ಲಿ ಪಾಲ್ಗೊಂಡವರು. ಯುದ್ಧ ಯಾವಾಗ ಮುಗಿಯುತ್ತದೆ ಎಂಬುದು ನಿಮಗೆ ಹೇಗೆ ಗೊತ್ತಾಗುತ್ತದೆ?’ ಎಂದು ಕೇಳಿದ. ಅದಕ್ಕೆ ಅವರು ಹೇಳಿದರು – ‘ನನ್ನಂಥವನ ಮೇಲೆ ಗುಂಡು ಹಾರಿಸದೇ ಸುರಕ್ಷಿತವಾಗಿ ಮರಳಲು ಬಿಡುತ್ತಾರಲ್ಲ, ಆಗ ಯುದ್ಧ ಮುಗಿಯಿತು ಅಂತ ಅರ್ಥ’.

ಅವರು ಹಾಗೆ, ಇವರು ಹೀಗೆ!

‘ನೀನು ಎಷ್ಟು ಮಂದಿ ವೈರಿಗಳನ್ನು ಸಾಯಿಸಬಲ್ಲೆ ?’ ಎಂದು ಸ್ನೇಹಿತನೊಬ್ಬ ಹಿಟ್ಲರ್‌ನನ್ನು ಕೇಳಿದನಂತೆ. ‘ನಿನ್ನನ್ನು ಸೇರಿಸಿ, ಜಗತ್ತಿನಲ್ಲಿರುವ ನನ್ನ ಎಲ್ಲ ವೈರಿಗಳನ್ನೂ ಸಾಯಿಸಬಲ್ಲೆ’ ಎಂದನಂತೆ ಹಿಟ್ಲರ್. ‘ಅಲ್ಲಯ್ಯಾ, ನಾನು ನಿನ್ನ ಪರಮ ಸ್ನೇಹಿತ. ನನ್ನನ್ನೂ ಆ ವೈರಿಗಳ ಪಟ್ಟಿಯಲ್ಲಿ ಸೇರಿಸಿಬಿಟ್ಟೆಯಾ?’ ಎಂದು ಕೇಳಿದನಂತೆ ಸ್ನೇಹಿತ.

‘ಯಾರು ಬೇಕಾದರೂ, ಯಾವ ಕ್ಷಣದಲ್ಲಾದರೂ ವೈರಿಗಳಾಗಬಹುದು. ಅಪರಿಚಿತರು ವೈರಿಗಳಾಗುವುದು ಕಷ್ಟ. ಪರಿಚಿತರಿಗೆ, ಸ್ನೇಹಿತರಿಗೆ ಅದು ಸುಲಭ. ಹೀಗಾಗಿ ನಿನ್ನನ್ನೂ ಸೇರಿಸಿದ್ದು’ ಎಂದನಂತೆ ಹಿಟ್ಲರ್. ಸ್ನೇಹಿತ ಮರು ಮಾತಾಡಲಿಲ್ಲ. ‘ಅದ್ಸರಿ, ಹೇಗೆ ಸಾಯಿಸುತ್ತೀಯಾ?’ ಎಂದು ಸ್ನೇಹಿತ ಕೇಳಿದ್ದಕ್ಕೆ ಹಿಟ್ಲರ್, ‘ಸಾಯಿಸುವುದು ಸುಲಭ. ಸಾಯಿಸದೇ ಬಿಡುವುದು ಕಷ್ಟ. ಎಲ್ಲರನ್ನೂ ಗುಂಡಿಟ್ಟು ಸಾಯಿಸಿಬಿಡ್ತೀನಿ’ ಎಂದನಂತೆ. ಇದು ಹಿಟ್ಲರ್‌ನ ಮಾತಾಯಿತು. ‘ನೀವು ನಿಮ್ಮ ಎಷ್ಟು ಮಂದಿ ವೈರಿಗಳನ್ನು ಸಾಯಿಸಬಲ್ಲಿರಿ?’ ಎಂಬ ಪ್ರಶ್ನೆಯನ್ನು ಬುದ್ಧನಿಗೆ ಯಾರೋ ಕೇಳಿದರಂತೆ.

ಅದಕ್ಕೆ ಬುದ್ಧ ‘ನಾನು ನನ್ನ ಎಲ್ಲ ವೈರಿಗಳನ್ನು ಸಾಯಿಸಬಲ್ಲೆ’ ಎಂದನಂತೆ. ಆ ಪ್ರಶ್ನೆಯನ್ನು ಕೇಳಿದವರಿಗೆ ಅಚ್ಚರಿ. ಅವರು ಬುದ್ಧನಿಂದ ಆ ಉತ್ತರ ನಿರೀಕ್ಷಿಸಿರಲಿಲ್ಲ. ‘ಅದ್ಸರಿ. ಹೇಗೆ ಸಾಯಿಸ್ತೀರಾ? ಹೇಳಿ’ ಎಂದು ಕೇಳಿದ್ದಕ್ಕೆ ಬುದ್ಧ ಹೇಳಿದನಂತೆ- ‘ದ್ವೇಷ, ವೈರತ್ವದ ಯೋಚನೆಯನ್ನು ಮನಸ್ಸಿನಲ್ಲಿ ಸಾಯಿಸಿದ ಕ್ಷಣದಲ್ಲೇ ನನ್ನೆಲ್ಲ ವೈರಿಗಳು ಸತ್ತಂತೆ ತಾನೆ? ನನ್ನ ಯೋಚನೆಯಲ್ಲಿ ಅವರಿದ್ದರೆ ಸಾಯಿಸಲೇಬೇಕು. ಇಲ್ಲದಿದ್ದರೆ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ’.

ಅವರು ಹಾಗೆ, ಇವರು ಹೀಗೆ.

ಜೀವನದ ಉಳಿದ ಭಾಗ ಮೊದಲ ಬಾರಿಗೆ ಡೈವಿಂಗ್‌ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್‌ಸ್ಟ್ರಕ್ಟರ್‌ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು ಪರಿಹರಿಸಿಕೊಂಡು ನಂತರ ಡೈವ್ ಮಾಡದಿರಲು ನಿರ್ಧರಿಸುತ್ತಾರೆ. ಬಹುತೇಕ ಜನರ ಪ್ರಶ್ನೆ ಎಷ್ಟು ನಕಾರಾತ್ಮಕ ವಾಗಿರುತ್ತದೆಂದರೆ ಅವೆಲ್ಲವೂ ಸಾವಿನ ಕುರಿತಾಗಿರುತ್ತದೆ. ‘ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನಾಗುತ್ತದೆ?’ ಎಂಬುದು ಎಲ್ಲರೂ ಕೇಳುವ ಪ್ರಶ್ನೆ.

ಒಂದು ದಿನ ಕೆಲ ಯುವಕರು ಸ್ಕೈ ಡೈವಿಂಗ್‌ಗೆ ಬಂದರು. ಅವರಲ್ಲಿ ಒಬ್ಬ ಅದೇ ಪ್ರಶ್ನೆ ಕೇಳಿದ-‘ಮೇಲಿಂದ ಜಿಗಿದಾಗ
ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನು ಕತೆ?’ ಅದಕ್ಕೆ ಇನ್ ಸ್ಟ್ರಕ್ಟರ್ ಹೇಳಿದ- ‘ಮತ್ತೊಂದು ಪ್ಯಾರಚೂಟ್‌ನ್ನು ಬಳಸಿ’.
ಅದಕ್ಕೆ ಆ ಯುವಕ ‘ಅದೂ ಓಪನ್ ಆಗದಿದ್ದರೆ ಏನು ಮಾಡುವುದು?’ ಆಗ ಇನ್‌ಸ್ಟ್ರಕ್ಟರ್ ಹೇಳಿದ- ‘ಆಗ ಏನೂ
ಮಾಡಲು ಆಗೊಲ್ಲ. ಬೇರೆ ದಾರಿಯಿಲ್ಲ’ ಎಂದು ಹೇಳಿದ. ಈ ಮಾತಿಗೆ ಮತ್ತಷ್ಟು ಉದ್ವಿಗ್ನನಾದ ಯುವಕ ‘ಪ್ಯಾರಚೂಟ್
ಓಪನ್ ಆಗದ ಸನ್ನಿವೇಶ ದಲ್ಲಿ ನಾವು ಭೂಮಿಗೆ ಬಂದು ಅಪ್ಪಳಿಸಲು ಎಷ್ಟು ಸಮಯ ಬೇಕಾಗುತ್ತದೆ?’ ಎಂದು ಕೇಳಿದ
ಈ ಪ್ರಶ್ನೆಗೆ ಇನ್‌ಸ್ಟ್ರಕ್ಟರ್ ಸಮಾಧಾನದಿಂದ ಹೇಳಿದ ‘ರೆಸ್ಟ್ ಆ- ಯುವರ್ ಲೈ-’.

ಜೀವನದಲ್ಲಿ ಬದಲಾವಣೆ 
ನನ್ನ ಸ್ನೇಹಿತರೊಬ್ಬರು ಹೇಳಿದ ಪ್ರಸಂಗವಿದು. ಒಮ್ಮೆ ಅವರು ತಮ್ಮ ಗೆಳೆಯನಿಗೆ -ನ್ ಮಾಡಿದರಂತೆ. ಆಗ ಅವರಿಗೆ ಈ ರೆಕಾರ್ಡೆಡ್ ಮೆಸೇಜ್ ಕೇಳಿಸಿತಂತೆ-‘ನಾನು ಈಗ ನಿಮ್ಮೊಂದಿಗೆ ಮಾತನಾಡಲು ಲಭ್ಯವಿಲ್ಲ. ನೀವು ನನಗೆ -ನ್ ಮಾಡಿದ್ದಕ್ಕೆ ಧನ್ಯವಾದಗಳು.

ನಾನು ನನ್ನ ಜೀವನದಲ್ಲಿ ಕೆಲವು ಬದಲಾವಣೆ ಗಳನ್ನು ಮಾಡುತ್ತಿದ್ದೇನೆ. ಬೀಪ್ ಸೌಂಡ್ ಕೇಳಿಸಿದ ನಂತರ ನಿಮ್ಮ ಮೆಸೇಜ್ ಏನೆಂಬುದನ್ನು ಹೇಳಿ, ನಾನು ವಾಪಸ್ ಕರೆ ಮಾಡು ತ್ತೇನೆ. ಒಂದು ವೇಳೆ ನಾನು ವಾಪಸ್ ಫೋನ್ ಮಾಡದಿದ್ದರೆ, ನಾನು ಜೀವನದಲ್ಲಿ ಮಾಡಿರುವ ಬದಲಾವಣೆಗಳಲ್ಲಿ ನೀವೂ ಒಬ್ಬರು ಎಂದು ಭಾವಿಸಿ’.

ಎರಡು-ಮೂರು ದಿನಗಳಾದರೂ ಅವರ ಗೆಳೆಯನ ಫೋನ್ ಕರೆ ಬರಲಿಲ್ಲ. ಆತ ಜೀವನದಲ್ಲಿ ಮಾಡಿಕೊಂಡ ಬದಲಾವಣೆ ಗಳಲ್ಲಿ ತಾನೂ ಸೇರಿದ್ದೇನೆಂಬುದು ಅವರಿಗೆ ಮನವರಿಕೆಯಾಯಿತು.

ಎಂಥ ಜನ ಮಾರ್ರೇ
ಖ್ಯಾತ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಅವರು ಅನುಭವಿಸಿದ ಈ ಸಮಸ್ಯೆ ನಿಮ್ಮದೂ ಆಗಿರಬಹುದು. ಅದನ್ನು ಅವರೇ ಹೇಳ್ತಾರೆ ಕೇಳಿ. ‘ಜ್ವರ ಬಂದು ಎರಡು ದಿನ ಮಲಗಿದ್ದೆ. ವಿಷಯ ಗೊತ್ತಾಗಿ ಫೊನ್ ಮಾಡಿದ ಆತ್ಮೀಯರೆಲ್ಲರೂ ಜ್ವರ ಹೇಗಿದೆ ಅಂತ ಕೇಳಿದರು. ಅಪ್ಪಿ ತಪ್ಪಿಯೂ ಈಗ ನೀನು ಹೇಗಿದ್ದೀಯಾ ಅಂತ ಕೇಳಲಿಲ್ಲ. ಇವರಿಗೆಲ್ಲ ನನಗಿಂತಲೂ ಜ್ವರವೇ ಮುಖ್ಯವಾಗಿ ಹೋಯ್ತ, ಎಂಥ ಜನ ಮಾರ್ರೇ..!’