ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಆಪರೇಷನ್ ಕಮಲದ ಬಳಿಕ ರಾಜ್ಯ ರಾಜಕೀಯದಲ್ಲಿ ಹೇಳಿಕೊಳ್ಳುವ ಏರಿಳಿತ ಕಾಣಿಸಿರಲಿಲ್ಲ. ಎಲ್ಲವೂ ಶಾಂತವಾಗಿದ್ದಾಗ ಇದ್ದಕ್ಕಿದಂತೆ ಕಳೆದ ಎರಡು ವಾರದ ಹಿಂದೆ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ ಅವರ ಸೀಡಿ ವಿಡಿಯೊ ಗದ್ದಲ, ಪುನಃ
ರಾಜಕೀಯದಲ್ಲಿ ಭಾರಿ ಸದ್ದು ಮಾಡಿದೆ. ಈ ಪ್ರಕರಣ ರಮೇಶ್ ಜಾರಕಿಹೊಳಿ ಅವರ ತಲೆದಂಡದವರೆಗೆ ಬಂದು ನಿಂತಿತ್ತು.
ಸಚಿವ ಸ್ಥಾನಕ್ಕೆ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ ಬಳಿಕ ಶುರುವಾದ ತನಿಖೆಯ ಆಗ್ರಹ ಕೊನೆಗೆ ಎಸ್‌ಐಟಿಗೆ ಬಂದಿದೆ. ಆದರೆ ಎಸ್‌ಐಟಿಯಿಂದ ನಿಜವಾಗಿಯೂ ನ್ಯಾಯ ಸಿಗುವುದೇ ಎನ್ನುವುದಕ್ಕೆ ಉತ್ತರ ಯಕ್ಷಪ್ರಶ್ನೆಯಾಗಿದೆ. ರಮೇಶ್ ಜಾರಕಿಹೊಳಿ ಅವರು ಯುವತಿಯೊಂದಿಗೆ ಇದ್ದ ವಿಡಿಯೊವೊಂದು ಬಹಿರಂಗವಾಗುತ್ತಿದ್ದಂತೆ, ಪ್ರತಿಪಕ್ಷ ಗಳಿಗೆ ಸರಕಾರದ ವಿರುದ್ಧ ಮುಗಿ ಬೀಳಲು ಹಾಟ್‌ಕೇಕ್ ಸಿಕ್ಕಿದಂತಾತಿತು. ಈ ಘಟನೆ ನಡೆದ 24 ಗಂಟೆಯೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಆ ವಿಡಿಯೊ ಸತ್ಯಾಸತ್ಯತೆಯ ಬಗ್ಗೆ ತನಿಖೆ ಮಾಡುವ ಮೊದಲು ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯುವ
ಮೂಲಕ, ಬಿಜೆಪಿ ಶಿಸ್ತಿನ ಪಕ್ಷ.
ಇಂತಹ ಆರೋಪ ಬಂದರೆ ಅದನ್ನು ಸಹಿಸುವುದಿಲ್ಲ’ ಎನ್ನುವ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು. ಆದರೆ ಈ ಎಲ್ಲ ಘಟನೆ ನಡೆದು ಸುಮಾರು ಮೂರು ದಿನ ಕಳೆಯುವ ತನಕ ರಮೇಶ್ ಜಾರಕಿಹೊಳಿಯಾಗಲಿ, ಆ ಯುವತಿಯಾಗಲಿ ಎಲ್ಲಿಯೂ
ಕಾಣಿಸಿಕೊಳ್ಳಲಿಲ್ಲ. ಈ ನಡುವೆ ಸೀಡಿಯನ್ನು ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು, ದೂರು ನೀಡಿ ಬಳಿಕ ಹಿಂಪಡೆದರೆ, ರಮೇಶ್ ಜಾರಕಿಹೊಳಿ ಅವರ ಆಪ್ತರೊಬ್ಬರು ಜಾರಕಿಹೊಳಿ ಪರವಾಗಿ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಆದರೆ ಎಲ್ಲಿಯೂ ಜಾರಕಿಹೊಳಿ ಅವರು ನೇರವಾಗಿ ಈ ಪ್ರಕರಣದಲ್ಲಿ ತನ್ನ ತೇಜೋವಧೆಗಾಗಿ ಈ ರೀತಿ ಷಡ್ಯಂತ್ರ ನಡೆಸಲಾಗಿದೆ ಎಂದು ಅಧಿಕೃತವಾಗಿ ದೂರು ನೀಡಿಲ್ಲ. ಆದರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿಗಳಿಗೆ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದರು. ಆರಂಭದಲ್ಲಿ ಸಿಬಿಐ ಅಥವಾ ಸಿಸಿಬಿಯಿಂದ ತನಿಖೆ ನಡೆಸ ಬೇಕು ಎನ್ನುವ ಮಾತುಗಳು ಕೇಳಿಬಂದರೂ, ಅಂತಿಮವಾಗಿ ಇದನ್ನು ಎಸ್‌ಐಟಿಗೆ ವಹಿಸಲಾಯಿತು.
ವಿಶೇಷ ತನಿಖಾ ದಳದ ಸಾರಥ್ಯವನ್ನು ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ನೀಡಿದ್ದಾರೆ. ಆದರೆ ಎಸ್‌ಐಟಿಗೆ ಇರುವ ವ್ಯಾಪ್ತಿ ಹಾಗೂ ಈ ಹಿಂದಿನ ಪ್ರಕರಣಗಳನ್ನು ನೋಡಿದಾಗ, ಇದೊಂದು ಗಾಳಿಯಲ್ಲಿ ಗುಂಡು ಹಾರಿಸಿದಂತೆ ಎನ್ನುವ ಅನುಮಾನ ಮೂಡುತ್ತವೆ. ಹೌದು, ಎಸ್‌ಐಟಿ ತಂಡದಲ್ಲಿ ಹಿರಿಯ ಅಧಿಕಾರಿಗಳಿದ್ದು, ಈ ತಂಡಕ್ಕೆ ಸ್ವತಂತ್ರವಾಗಿ ತನಿಖೆ ನಡೆಸುವ ಅಧಿಕಾರವಿದ್ದರೂ ಕೆಲವೊಂದು ಇತಿಮಿತಿಗಳಿವೆ. ಎಸ್‌ಐಟಿ ತಂಡಕ್ಕೆ ಎಫ್ಐಆರ್ ಹಾಕುವ ಅಧಿಕಾರವಿಲ್ಲ.
ಏನಿದ್ದರೂ, ಈಗಾಗಲೇ ದಾಖಲಾಗಿರುವ ಎಫ್ಐಆರ್ ಅನ್ನು ಆಧಾರವಾಗಿಟ್ಟುಕೊಂಡು, ವಿಚಾರಣೆ ನಡೆಸಿ ವರದಿ ಸಲ್ಲಿಸ ಬಹುದಾಗಿದೆ. ಆದರೆ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಿಂದ ಈ ಪ್ರಕರಣ ಎಸ್‌ಐಟಿಗೆ ವರ್ಗಾವಣೆಯಾಗಿರುವು ದರಿಂದ, ಯಾರಿಗೆ ಈ ವರದಿಯನ್ನು ಸಲ್ಲಿಸುತ್ತಾರೆ ಎನ್ನುವ ಪ್ರಶ್ನೆ ಇದೀಗ ಮೂಡುತ್ತಿದೆ. ಇನ್ನು ವಿಚಾರಣೆ ನಡೆಸುವುದಕ್ಕೆ ಎಸ್‌ಐಟಿಗೆ ಅವಕಾಶವಿದೆ ಯಾದರೂ, ವಶಕ್ಕೆ ಪಡೆದುಕೊಳ್ಳಲು ಪುನಃ ಎಫ್ಐಆರ್ ದಾಖಲಾದ ಪೊಲೀಸ್ ಠಾಣೆಯಿಂದ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಿ ಬಳಿಕ ವಿಚಾರಣೆಗೆ ಹೆಚ್ಚುವರಿ ಸಮಯ ತಗೆದುಕೊಳ್ಳಬಹುದು.
ಆದ್ದರಿಂದ ಎಸ್‌ಐಟಿಯಿಂದ ಈ ಪ್ರಕರಣದ ತನಿಖೆ ಎಷ್ಟು ಪ್ರಭಾವದಿಂದ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಇಡೀ ಪ್ರಕರಣದ ತನಿಖೆಯನ್ನು ತಂಡ ಯಾರಿಗೆ ಸಲ್ಲಿಸಬೇಕು? ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಎಸ್‌ಐಟಿ ತಂಡ ನಡೆಸುವ ವಿಚಾರಣೆಯ ವರದಿಯನ್ನು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸುವುದರೊಂದಿಗೆ, ನ್ಯಾಯಾಲಯಕ್ಕೆ ಸಲ್ಲಿಸುವ ಅವಕಾಶವಿದೆ. ಒಂದು ವೇಳೆ ಈ ರೀತಿ ಮಾಡಿದರೆ, ನೇರವಾಗಿ ನ್ಯಾಯಾಲಯದಿಂದ ಈ ಪ್ರಕರಣ ನಡೆಯುತ್ತದೆ.
ಆರೋಪಿಗಳನ್ನು ಬಂಧಿಸಬೇಕಾದರೆ, ಅದರಲ್ಲಿ ಸುಲಭಕ್ಕೆ ಜಾಮೀನು ಸಿಗುವುದು ಕಷ್ಟದ ವಿಷಯ ಎನ್ನುವುದನ್ನು ಮರೆಯು ವಂತಿಲ್ಲ. ಆದರೆ ಇಲ್ಲಿಯವರೆಗೆ ನಡೆದಿರುವ ಬಹುತೇಕ ಎಸ್‌ಐಟಿ ತನಿಖೆಗಳು, ಅರ್ಧಕ್ಕೆ ನಿಂತಿವೆ ಹೊರತು, ತಾರ್ತಿಕ ಅಂತ್ಯ ಕಾಣಿಸುವ ತನಕ ಹೋಗಿಲ್ಲ ಎನ್ನುವುದನ್ನು ಮರೆಯುವಂತಿಲ್ಲ. ಬಹುತೇಕ ಪ್ರಕರಣಗಳು, ಆಗಿನ ರಾಜಕೀಯ ಬಿಸಿಯನ್ನು ತಣಿಸುವುದಕ್ಕೆ ಅಥವಾ ರಾಜಕೀಯ ಕಾರಣಕ್ಕೆ ತಂಡ ರಚಿಸಿ ಬಳಿಕ ಸುಮ್ಮನಾಗುವುದನ್ನು ನೋಡಿದ್ದೇವೆ.
ಆದರೆ ಈ ಇಡೀ ಪ್ರಕರಣದಲ್ಲಿ ಹಲವು ದಿನಗಳ ಕಾಲ ಮೌನವಾಗಿದ್ದು ಆ ಯುವತಿ. ಆದರೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ಕಾಣಿಸಿಕೊಂಡು, ರಮೇಶ್ ಜಾರಕಿಹೊಳಿ ಹಾಗೂ ಅವರ ಅನುಯಾಯಿಗಳಿಂದ ಜೀವ ಬೆದರಿಕೆಯಿದೆ. ರಕ್ಷಣೆ ನೀಡುವಂತೆ ಗೃಹ ಸಚಿವರನ್ನು ಮನವಿ ಮಾಡಿರುವ ವಿಡಿಯೊ ವೈರಲ್ ಆಗಿತ್ತು. ಆದರೆ ಈ ವಿಡಿಯೊ ವಿಚಾರದಲ್ಲಿ ಬಹುತೇಕರು ತನಿಖೆ ನಡೆಸುವ ಅಥವಾ ಚರ್ಚಿಸುವುದಕ್ಕೆ ಆಸಕ್ತಿ ತೋರುತ್ತಿಲ್ಲ.
ಯುವತಿಗೆ ಇರುವ ಜೀವ ಬೆದರಿಕೆಯ ಆರೋಪವನ್ನು ಇಟ್ಟುಕೊಂಡು ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಕೊಂಡರೆ, ಅದು ರಮೇಶ್ ಜಾರಕಿಹೊಳಿ ಅವರ ರಾಜಕೀಯ ಜೀವನಕ್ಕೆ ಸಮಸ್ಯೆ ಯಾಗುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ಕಾಯಿದೆಯ ಅನ್ವಯ ಈ ಆರೋಪದಲ್ಲಿ ಆರು ವರ್ಷಗಳ ಕಾಲ ಅಮಾನತು ಮಾಡುವ ಅಥವಾ ಶಾಸಕ ಸ್ಥಾನದಿಂದಲೇ
ವಜಾ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.
ಆದರೆ ಈ ವಿಚಾರದಲ್ಲಿ ಬಹುತೇಕರು ಹೆಚ್ಚು ಆಸಕ್ತಿ ವಹಿಸಿಲ್ಲ. ಏಕೆಂದರೆ, ಈ ಇಡೀ ಪ್ರಕರಣದಲ್ಲಿ ಎಲ್ಲರಿಗೂ ಬೇಕಿರುವುದು
ನ್ಯಾಯ – ಅನ್ಯಾಯಕ್ಕಿಂತ ಹೆಚ್ಚಾಗಿ ರಾಜಕೀಯ ಲಾಭವಷ್ಟೇ. ಆದ್ದರಿಂದಲೇ ಯಡಿಯೂರಪ್ಪ ಅವರೂ ಸಹ, ಈ ಪ್ರಕರಣ ವನ್ನು ಸಿಸಿಬಿ ಅಥವಾ ಸಿಬಿಐಗೆ ನೀಡದೇ ಎಸ್ಐಟಿಗೆ ವಹಿಸಿ ಕೈ ತೊಳೆದುಕೊಂಡರು. ಇನ್ನು ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾದ ಜಾರಕಿಹೊಳಿ ಅವರ ಸಿಡಿ ಪುರಾಣ ಬಳಿಕ ನಡೆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ತಿಳಿಯು ವುದು ಏನೆಂದರೆ, ಇಡೀ ಪ್ರಕರಣದ ಮೂಲ ಯಾರಿಗೂ ಬೇಡವಾಗಿದೆ.
ಸಿಡಿ ಬಿತ್ತರವಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕರು ರಾಜೀನಾಮೆ ಒತ್ತಾಯಿಸಿದರೆ, ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿ, ಇದೊಂದು ಖಾಸಗಿ ಪ್ರಕರಣ. ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸಿದರು. ‘ನೈತಿಕತೆ’ ನೆಪದಲ್ಲಿ ಜಾರಕಿ ಹೊಳಿ ಅವರಿಂದ ರಾಜೀನಾಮೆಯನ್ನು ಪಡೆದು, ಸುಮ್ಮನಾದರು. ಇನ್ನು ಜೆಡಿಎಸ್ ನವರು, ಈ ಪ್ರಕರಣದ ಸೇಫ್ ಗೇಮ್ ಆಡಿದರು ಎಂದರೆ ತಪ್ಪಾಗಲಿಕ್ಕಿಲ್ಲ. ಶತ್ರುವಿನ ಶತ್ರು ಮಿತ್ರ ಎನ್ನುವ ರಾಜಕೀಯ ಮಾತಿನ ಹಾಗೇ, ಎಚ್.ಡಿ ಕುಮಾರಸ್ವಾಮಿ ಅವರು, ಈ ಪ್ರಕರಣವನ್ನು ಬಳಸಿಕೊಂಡು ರಮೇಶ್ ಜಾರಕಿಹೊಳಿ ಅವರ ಪರ – ವಿರೋಧ ಮಾತನಾಡುವ ಬದಲು, ಡಿ.ಕೆ. ಶಿವಕುಮಾರ್ ಅವರನ್ನು ಅಟ್ಯಾಕ್ ಮಾಡಿದರು.
ಇನ್ನು ಈ ವಿಚಾರದಲ್ಲಿ ಆರಂಭದಲ್ಲಿ ಟ್ರ್ಯಾಪ್ ಆಗಿದ್ದಾರೆ ಎಂದು ಹೇಳಲಾಗಿದ್ದ, ರಮೇಶ್ ಜಾರಕಿಹೊಳಿ ಅವರು ಎರಡು ದಿನದ ಬಳಿಕ ಸುದ್ದಿಗೋಷ್ಠಿ ಮಾಡಲು ಮುಂದಾದಾಗ ಎಲ್ಲರೂ, ಇದೊಂದು ನಕಲಿ ಸಿ.ಡಿ ಎಂದು ಹೇಳುವುದ ರೊಂದಿಗೆ ಯವತಿಯ ವಿರುದ್ಧ ಪ್ರತ್ಯಾರೋಪ ಮಾಡುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ರಮೇಶ್ ಜಾರಕಿಹೊಳಿ ಅವರ ಇಡೀ ಸುದ್ದಿಗೋಷ್ಠಿ ಯಲ್ಲಿ ಎಲ್ಲಿಯೂ ಈ ಯಾವ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಪ್ರಸ್ತಾಪಿಸಿದರೂ, ಅದು ಕೇವಲ ಪಾಸಿಂಗ್ ಲೈನ್‌ಗೆ ಸೀಮಿತವಾಗಿತ್ತು.
ಸುಮಾರು 30 ನಿಮಿಷದ ಸುದ್ದಿಗೋಷ್ಠಿಯಲ್ಲಿ ಅವರು ಬಹುತೇಕ ರಾಜಕೀಯ ಷಡ್ಯಂತ್ರಕ್ಕೆ ಈ ಸೀಡಿ ಬಿಡುಗಡೆಯಾಗಿದೆ.
ಮಹಾನಾಯಕರೊಬ್ಬರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಅವರನ್ನು ಆರೋಪಿಸು ವುದಕ್ಕೆ ಮೀಸಲಿಟ್ಟರು. ಕೇವಲ ರಮೇಶ್ ಜಾರಕಿಹೊಳಿ ಮಾತ್ರವಲ್ಲದೇ, ಅವರ ಸಹೋದರರು ಸಹ ಇದೇ ಆರೋಪ ಮಾಡಿದರು ಹೊರತು, ಯುವತಿಯ ಬಗ್ಗೆಯಾಗಲಿ, ಸೀಡಿಯ ಸತ್ಯಾಸತ್ಯತೆ ಬಗ್ಗೆಯಾಗಲಿ ಮಾತನಾಡಲಿಲ್ಲ. ಈ ಬೆಳವಣಿಗೆಯಿಂದಲೇ ಇಡೀ ಪ್ರಕರಣ ರಾಜಕೀಯಕ್ಕೆ ತಿರುಗಿತು.
ಕಾಂಗ್ರೆಸ್‌ಗೆ ಬೆಳಗಾವಿ ಭಾಗದಲ್ಲಿರುವ ಜಾರಕಿಹೊಳಿ ಕುಟುಂಬದ ಪ್ರಭಾವವನ್ನು ಇಳಿಸಲು ಇದೊಂದು ಅವಕಾಶವೆಂದು ಟೀಕಾಪ್ರಹಾರ ನಡೆಸಿದರೆ, ಜೆಡಿಎಸ್ ಮುಂದೊಂದು ದಿನ ಜಾರಕಿಹೊಳಿ ಕುಟುಂಬದ ಸಹಾಯ ದೊಂದಿಗೆ ಬೆಳಗಾವಿ ರಾಜಕೀಯಕ್ಕೆ ಕಾಲಿಡಬಹುದು ಎನ್ನುವ ಲೆಕ್ಕಾಚಾರದಲ್ಲಿ ತಟಸ್ಥ ನಿಲುವು ತಳೆದಿತ್ತು ಎನ್ನಬಹುದು. ಆದರೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮುಂಚೂಣಿ ಪಾತ್ರವಹಿಸಿದ್ದ ಹಾಗೂ ಆಪರೇಷನ್ ಕಮಲದಿಂದ ಬಿಜೆಪಿಗೆ ಹಾರಿದ 17 ಶಾಸಕರ ತಂಡದ ನಾಯಕತ್ವ ವಹಿಸಿದ್ದ ಜಾರಕಿಹೊಳಿ ಅವರನ್ನು ಡಿಫೆಂಡ್ ಮಾಡಿಕೊಳ್ಳುವ ಬದಲು, ಮೌನವಾಗಲು ಕಾರಣವನ್ನು ನೋಡಿದಾಗ, ಅದು ಜಾರಕಿಹೊಳಿ ಅವರು ಇತ್ತೀಚಿಗೆ ಬಿಜೆಪಿಯಲ್ಲಿ ಬೆಳಸಿಕೊಳ್ಳುತ್ತಿದ್ದ ಪ್ರಭಾವ ಎನ್ನುವ
ಮಾತುಗಳು ಕೇಳಿಬಂದಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಡೆಯುತ್ತಿರುವ ಭಾರಿ ಪ್ರಯತ್ನದಲ್ಲಿ ಜಾರಕಿಹೊಳಿ ಅವರು ತನು-ಮನ-ಧನವನ್ನು ಬಳಸುವ ಮೂಲಕ ಬಿಜೆಪಿ ವರಿಷ್ಠರಿಗೆ ಹತ್ತಿರವಾಗುತ್ತಿದ್ದಾರೆ. ದೆಹಲಿ ನಾಯಕರಿಗೆ ಬಿಜೆಪಿ ಹಲವು ರಾಜ್ಯ ನಾಯಕರಿಗಿಂತ ಹೆಚ್ಚು ಹತ್ತಿರವಾಗುತ್ತಿರುವುದನ್ನು ಗಮನಿಸಿದಾಗ ರಾಜ್ಯ ಬಿಜೆಪಿ ನಾಯಕರು, ಸರಿಯಾದ ಸಮಯಕ್ಕೆ
ಕಾಯುತ್ತಿದ್ದರು. ಇದೀಗ ಈ ಪ್ರಕರಣ ಸಿಗುತ್ತಿದ್ದಂತೆ, ಅದನ್ನು ಬಳಸಿಕೊಂಡು, ಜಾರಕಿಹೊಳಿ ಅವರ ರಾಜಕೀಯ ಓಟಕ್ಕೆ ಒಂದು ಹಂತಕ್ಕೆ ತಾತ್ಕಲಿಕ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.
ಆದ್ದರಿಂದ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಮೂಲಕ, ಅತ್ತ ಹಾವು ಸಾಯದಂತೆ ಇತ್ತ ಕೋಲು ಮುರಿಯದಂತೆ ಮಾಡಿದ್ದಾರೆ. ಹಾಗೆ ನೋಡಿದರೆ ಈ ರೀತಿಯ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ವಹಿಸಿದ್ದು ಇದೇ ಮೊದಲಲ್ಲ. ಈ ಹಿಂದೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಚಿವ ಸಂಪುಟದ ಸದಸ್ಯರಾಗಿದ್ದ ಮೇಟಿ ಅವರ ಸೀಡಿ ಬಿಡುಗಡೆ ಯಾದ ಸಮಯದಲ್ಲಿಯೂ ಪ್ರಕರಣವನ್ನು ಎಸ್ ಐಟಿಗೆ ವಹಿಸಲಾಗಿತ್ತು. ಇದಾದ ಬಳಿಕ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಪದೇ ಪದೆ ಕೇಳಿಬರುತ್ತಿದ್ದ ಆಪರೇಷನ್ ಕಮಲದ ಸಮಯದಲ್ಲಿಯೂ, ಒಮ್ಮೆ ಯಡಿಯೂರಪ್ಪ ಅವರು ಜೆಡಿಎಸ್ ಶಾಸಕನ ಪುತ್ರನೊಂದಿಗೆ ಫೋನ್ ಮೂಲಕ ಸಂಭಾಷಣೆ ನಡೆಸಿ, ಆತನ ತಂದೆಯನ್ನು ಪಕ್ಷಾಂತರ ಮಾಡುವುದಕ್ಕೆ ಭಾರಿ ಆಫರ್ ನೀಡಿದ್ದ ಧ್ವನಿಯೂ ಸಹ ಭಾರಿ ಸದ್ದು ಮಾಡಿತ್ತು. ಆ ಸಮಯದಲ್ಲಿ ಈ ಪ್ರಕರಣವನ್ನು ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ
ಅವರು ವಿಶೇಷ ತನಿಖಾ ದಳಕ್ಕೆ ಒಪ್ಪಿಗೆ ಕೈತೊಳೆದುಕೊಂಡರು.
ಆದರೆ ಬಳಿಕ ಈ ಈ ವಿಚಾರಣೆಯನ್ನು ಪ್ರಶ್ನಿಸಿ, ಹೈಕೋರ್ಟ್ ಮೆಟ್ಟಿಲೇರಿ, ತಡೆಯಾಜ್ಞೆ ತಂದಿದ್ದನ್ನು ಗಮನಿಸಬಹುದು. ಇದಾದ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ, ಧ್ವನಿಮುದ್ರಿಕೆಯ ವಿಷಯವೇ ಮುಚ್ಚಿ ಹೋಯಿತು. ಇನ್ನು ಮೇಟಿ ಅವರ ಪ್ರಕರಣ ದಲ್ಲಿ ರಚಿಸಲಾಗಿದ್ದ, ಎಸ್‌ಐಟಿ ಏನಾಯಿತು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಇದೀಗ ರಮೇಶ್ ಜಾರಕಿಹೊಳಿ ಅವರ ಪ್ರಕರಣವೂ ಎಸ್‌ಐಟಿಗೆ ನೀಡಲಾಗಿದೆ. ಇದಕ್ಕೂ ಮೊದಲು ಅವರ ರಾಜೀನಾಮೆಯನ್ನು ಪಡೆಯಲಾಗಿದೆ. ಬಿಜೆಪಿ ಸೇರಿದಂತೆ ಮೂರು ಪಕ್ಷಗಳ ನಾಯಕರಿಗೂ ಬೇಕಿದ್ದು ಇದೊಂದೆ ಹೊರತು, ಪ್ರಕರಣದ ಇಹ-ಪರವಾಗಿರಲಿಲ್ಲ. ಆದ್ದರಿಂದ ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕುವ ಎಸ್‌ಐಟಿ ಬಳಿಕ ಇದರ ವರದಿಯನ್ನು ಒಪ್ಪಿಸಿ ಕೈತೊಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.
ಈ ಎಲ್ಲವನ್ನು ಗಮನಿಸಿದಾಗ ರಮೇಶ್ ಜಾರಕಿಹೊಳಿ ಅವರ ಇಡೀ ಸೀಡಿ ಪುರಾಣದಲ್ಲಿ ಎಲ್ಲಿಯೂ ನೈಜ ಪ್ರಕರಣಕ್ಕಿಂತ ಹೆಚ್ಚಾಗಿ ಪ್ರಕರಣದ ಸುತ್ತ ಸುತ್ತುತ್ತಿರುವ ರಾಜಕೀಯ ಮೇಲಾಟಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅದೇ ಉದ್ದೇಶಕ್ಕಾಗಿಯೇ ರಾಜ್ಯ ಸರಕಾರವೂ ಈ ಪ್ರಕರಣವನ್ನು ಸಿಸಿಬಿ ಅಥವಾ ಸಿಬಿಐಗೆ ವಹಿಸದೇ, ನಾಮ್‌ಕೇವಸ್ತೆ ಎಸ್‌ಐಟಿ ತನಿಖೆಗೆ ವಹಿಸಿ ಕೈತೊಳೆದು ಕೊಂಡಿದೆ. ಈ ಎಲ್ಲ ಪ್ರಹಸನದ ನಡುವೆ ನೆಲಕ್ಕೆ ಬಿದ್ದದ್ದು ಮಾತ್ರ ರಮೇಶ್ ಜಾರಕಿಹೊಳಿ. ಮೂರು ಪಕ್ಷಗಳಿಗೂ, ಈ ಪ್ರಕರಣ ತಾರ್ಕಿಕ ಅಂತ್ಯಕ್ಕಿಂತ ಹೆಚ್ಚು ಬೇಕಿದ್ದು, ಇದೇ ಅಲ್ಲವೇ..!