Saturday, 27th July 2024

ಸಂಘ ಸಂಸ್ಥೆಗಳಿಗೆ ಬೇಕು ಹತೋಟಿ!

ಪ್ರಸ್ತುತ

ಹೊಸೂರು ರತ್ನಾಕರ ಶೆಟ್ಟಿ

ಗ್ರಾಮೀಣ ಪ್ರದೇಶದ ಜನರು, ವಿಶೇಷವಾಗಿ ಮಹಿಳೆಯರು ಪರಂಪರಾಗತ ರೂಢಿಸಿಕೊಂಡು ಬಂದ ಕಲೆ ಹೈನುಗಾರಿಕೆ. ಹಸು, ಎತ್ತು, ಎಮ್ಮೆ, ಕೋಣ ಕರು ಮಂದೆಗಳ ಸಂಖೆಗಳ ಆಧಾರದ ಮೇಲೆ ಅಳೆಯಲಾಗುತ್ತಿತ್ತು ಅಂದು ರೈತನ ಸ್ಥಿತಿ-ಗತಿ. ಮನೆಮಂದಿಯೆಲ್ಲ ತಿಂದು ಉಳಿದ ಹಾಲಿಗೆ ಮಾರುಕಟ್ಟೆ ಇಲ್ಲದಿರುವುದರಿಂದ ಅನಿವಾರ್ಯವಾಗಿ ತುಪ್ಪವನ್ನಾಗಿಸಿ ಮಾರಿ ಮನೆಯೊಡತಿ ಚಿಕ್ಕ ಪುಟ್ಟ ಖರ್ಚುಗಳನ್ನು ನಿಭಾಯಿಸುತ್ತಿರುವ ಕಾಲವದು. ಈಗ ಈ ಹೈನುಗಾರಿಕೆ ಗ್ರಾಮೀಣ ಪ್ರದೇಶದ ಉದ್ದಿಮೆಯಾಗಿ ರೂಪುಗೊಂಡು, ಸುಮಾರು ೨೫ ಲಕ್ಷಕ್ಕೂ ಅಧಿಕ ರೈತ ಕುಟುಂಬ ಕರ್ನಾಟಕದಲ್ಲಿ ನೆಮ್ಮದಿಯ ಬದುಕು ಸಾಗಿಸುವಂತಾಗಿದೆ.

ದೇಶದ ಹಸಿರು ಕ್ರಾಂತಿಯ ಮಾದರಿಯ ರೂಪುಗೊಂಡ ಹಾಲು ಕ್ರಾಂತಿಯ ಹರಿಕಾರ ಡಾಕ್ಟರ್ ವರ್ಗೀಸ್ ಕುರಿಯನ್ ಅವರ ಅವಿರತ ಶ್ರಮದಿಂದ ದೇಶದ ಗ್ರಾಮೀಣ ಪ್ರದೇಶದ ಜನರ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿಸಿರುವುದಂತು ನಿಜ. ಸಹಕಾರ ತತ್ವದಲ್ಲಿ ರೂಪುಗೊಂಡ ‘ಅಮೂಲ್’ ಎನ್ನುವ ಹಾಲು ಉತ್ಪನ್ನಗಳ ಮಹಾ ಮಂಡಳಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದು ಗ್ರಾಮೀಣ ಪ್ರದೇಶದ ಗುಜರಾತ್ ಜನತೆಯ ನೆಮ್ಮದಿಯ ಬದುಕಿಗೆ ಆಸರೆ ಯಾಗಿದೆ.

ಇದೇ ಮಾದರಿಯಲ್ಲಿ ರೂಪುಗೊಂಡ ಕರ್ನಾಟಕದ ‘ನಂದಿನಿ’ ಹಾಲು ಉತ್ಪನ್ನಗಳ ಒಕ್ಕೂಟವು ಗ್ರಾಮೀಣ ಜನತೆಯ ಆಶಾಕಿರಣವಾಗಿದೆ. ಕಲಬೆರಕೆ ಯಲ್ಲಿ ಮುಳುಗಿದ ಹೈನುಗಾರಿಕೆಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಘನತೆಯನ್ನು ಕಾಯ್ದುಕೊಂಡಿದೆ.
ಬಹುತೇಕ ಅನಕ್ಷರಸ್ಥ ಹಾಗೂ ಅಷ್ಟೇ ಮುಗ್ಧರಾಗಿರುವ ನಮ್ಮಹಳ್ಳಿಗರ ಅಭ್ಯುದಯಕ್ಕೆ ಸಹಕಾರ ತತ್ವ ಮೂಲ ಮಂತ್ರವಾಗಬಲ್ಲದು. ಗ್ರಾಮೀಣ ರೈತರು
ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆ ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆ; ಉತ್ತಮ ಬೆಳೆ ಬಂದಾಗ ಬೆಲೆ ಇರುವುದಿಲ್ಲ. ಹಾಗೆ ಉತ್ತಮ ಬೆಲೆ ಇzಗ ಬೆಳೆ
ಇರುವುದಿಲ್ಲ.

ಈ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಸಾಂಕ ಪ್ರಯತ್ನ ಮಾಡಿ ಯಶಸ್ಸು ಸಾಧಿಸಬಹುದು. ಸಹಕಾರಿ ತತ್ವಗಳ ಅನ್ವಯ ಆರಂಭಗೊಂಡ
ಸಂಘ ಗಳು ಸೋಲುವುದು ಬಹಳ ವಿರಳ. ಅತೀಯಾದ ರಾಜಕೀಯ ಒತ್ತಡ, ದುರ್ಬಲ ಆಡಳಿತ ಮಂಡಳಿ ಹಾಗೂ ಅಸಮರ್ಪಕ ಮೇಲ್ವಿಚಾರಕ ವ್ಯವಸ್ಥೆ
ಇವುಗಳನ್ನು ಸರಿಪಡಿಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು. ಬ್ಯಾಂಕುಗಳನ್ನು ನಿಯಂತ್ರಿಸುವ ಮಾದರಿಯ ಈ ಸಂಘ ಸಂಸ್ಥೆಗಳನ್ನು ರಿಸರ್ವ್ ಬ್ಯಾಂಕ್ ಹತೋಟಿಯಲ್ಲಿಡಬೇಕು. ವಾಸ್ತವದಲ್ಲಿ ಈ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರ ತೀರಾ ತಡವಾಗಿ ಬೆಳಕಿಗೆ ಬರುವುದರಿಂದ ಪರಿಹಾರ ನೀಡುವುದು ಕಷ್ಟವಾಗಲಿದೆ.

ಸುಂದರ, ಸಮೃದ್ಧ ಹಾಗೂ ಮಿನುಗುತ್ತಿರುವ ಭಾರತದ ಪ್ರತಿಯೊಬ್ಬ ಪ್ರಜೆಯು ಆರ್ಥಿಕ ಪ್ರಗತಿಯ ತನ್ನ ಪಾಲನ್ನು ಸರಿಸಮಾನವಾಗಿ ಪಡೆಯಬೇಕೆಂಬ ಆಶಯವೇನೋ ಸರಿ.ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಎಂದೂ ಸಾಧ್ಯವಾಗದ ನಿಯಮ.ಹಾಗಾಗಿ ಸಹಕಾರಿ ತತ್ವದಲ್ಲಿ ಜನರನ್ನು ಒಗ್ಗೂಡಿಸಿ, ಯಾವುದಾದರೂ ಸೂಕ್ತ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಬರುವ ಆದಾಯ ಬಹುಜನರಿಗೆ ಹಂಚಲ್ಪಡುವುದರಿಂದ ಸಾಮಾಜಿಕ ನ್ಯಾಯದ ತುಣುಕುಗಳು ಅಲ್ಲಲ್ಲಿ ಮಿಣುಕಲು ಸಾಧ್ಯ.

ಹೀಗೆ ಕಡಿಮೆ ಬಂಡವಾಳ ಬೇಡಿ ಅಪಾರ ಪ್ರಮಾಣದ ಮಾನವ ಸಂಪನ್ಮೂಲಗಳನ್ನು ಸಂಯೋಜಿಸಿ ಬ್ರಹತ್ ಉದ್ದಿಮೆಯಾಗಿ ರೂಪುಗೊಳ್ಳುತ್ತಿರುವ ‘ನಂದಿನಿ’ ಯಂತಹ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ತಲೆಯೆತ್ತಬೇಕಾಗಿದೆ. ಗ್ರಾಮೀಣ ಪ್ರದೇಶದ ಬಡಜನರು ಕಷ್ಟ ಪಟ್ಟು ಕಟ್ಟಿದ ಇಂತಹ ಸಂಸ್ಥೆಯೊಳಗೆ ಇಲಿ- ಹೆಗ್ಗಣಗಳು ನುಸುಳದಂತೆ ಕಾಯಬೇಕಾದ ಕೆಲಸ ನಮ್ಮ ಸರಕಾರದ್ದು. ಒಂದು ಬಹುರಾಷ್ಟ್ರೀಯ ಕಂಪನಿಯ ಸೋಲು ಕೆಲವೇ ವ್ಯಕ್ತಿಗಳ ಸೋಲಾಗಬಹುದು. (ಸಮಗ್ರ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಇದ್ದೇ ಇದೆ). ಆದರೆ ನಂದಿನಿಯಂತಹ ಸಂಸ್ಥೆಯ ಸೋಲು ಲಕ್ಷಗಟ್ಟಲೆ ಗ್ರಾಮೀಣ ಬಡ ಕುಟುಂಬಗಳ ಸೋಲಾಗಬಹುದು.

ಹಾಗಾಗಿ ಸಹಕಾರಿ ಸಂಸ್ಥೆಗಳನ್ನು ಜೋಪಾನವಾಗಿ ಕೊಂಡೊಯ್ಯುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ತುಸು ಮೈ ಮರೆತರೂ
ಅನಾಹುತವೆ ಆಗಬಹುದು. ಒಮ್ಮೆ ಕೆಳಕ್ಕೆ ಬಿದ್ದ ಸಂಸ್ಥೆ ಯನ್ನು ಮೇಲಕ್ಕೆತ್ತುವುದು ಕಷ್ಟದ ಕೆಲಸ. ಬಹು ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿರುವ ನಂದಿನಿಗೆ ಸರಕಾರ ನೀಡುವ ಸಕಲ ಸೌಲಭ್ಯಗಳನ್ನು ಸಕಾಲಕ್ಕೆ ನೀಡಿ ರೈತರು ತಮ್ಮ ಕಾರ್ಯದಲ್ಲಿ ಮುಂದುವರಿಯುವಂತೆ ಪ್ರೊತ್ಸಾಹಿಸಬೇಕು. ರೈತರಿಗೆ ಪ್ರತಿ ಲೀಟರ್ ಹಾಲಿಗೆ ನೀಡಬೇಕಾದ ಪ್ರೋತ್ಸಾಹ ಧನ ಐದು ರುಪಾಯಿಗಳನ್ನು ಕಳೆದ ಸುಮಾರು ಆರು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ವಿಪರೀತ ಏರುತ್ತಿರುವ ಹಿಂಡಿ ದರ, ಬರಗಾಲದಿಂದಾಗಿ ನೀರು ಹುಲ್ಲು ಮೇವುಗಳಿಗಾಗಿ ಪರದಾಡುತ್ತಿರುವ ರೈತನ ಆರ್ಥನಾದ ಇತ್ಯಾದಿಗಳನ್ನು ಆಲಿಸಿ, ಸ್ಪಂದಿಸಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಹಾಲಿಗೆ ಸಿಗುವ ಮೊತ್ತದ ಮುಕ್ಕಾಲು ಭಾಗವಾದರೂ ರೈತರಿಗೆ ಸಿಗುವಂತಾಗಬೇಕು.

Leave a Reply

Your email address will not be published. Required fields are marked *

error: Content is protected !!