Thursday, 12th December 2024

ಮನುಕುಲದ ಮೊದಲ ದೈವ ನರ-ಸಿಂಹ ?

ಹಿಂತಿರುಗಿ ನೋಡಿದಾಗ

ನಮ್ಮ ಸೆಪಿಯನ್ ಪೂರ್ವಜರು ಕಥೆಗಳ ಮೂಲಕವೇ ಎಲ್ಲ ಮಾನವ ಪ್ರಭೇದಗಳನ್ನು ನಿರ್ನಾಮ ಮಾಡುತ್ತಾ ಇಡೀ ಭೂಮಂಡಲವನ್ನು ಆಕ್ರಮಿಸಿದರು.
ಕಥೆಗಳ ಮೂಲಕವೇ ದೇಶಗಳು, ಸಾಮ್ರಾಜ್ಯಗಳು, ಧರ್ಮಗಳು, ಪುರೋಹಿತ ವರ್ಗ, ಆಳುವ-ದುಡಿಯುವ ವರ್ಗಗಳನ್ನು ನಿರ್ಮಿಸಿದರು.

ನಮ್ಮ ಸೆಪಿಯನ್ ಪೂರ್ವಜರಲ್ಲೊಬ್ಬ ಒಂದು ಕಥೆ ಹೇಳಿದ. ‘ಭೂಮಿಯ ಮೇಲೆ ನಾವೆಲ್ಲ ವಾಸಿಸುವ ಊರು-ಕೇರಿ ಇದ್ದಂತೆ ಆಕಾಶದಲ್ಲೂ ಒಂದು ಊರು-ಕೇರಿಯಿದ್ದು ಅದು ನಮ್ಮದಕ್ಕಿಂತ ಸಾವಿರ ಪಟ್ಟದು ದೊಡ್ಡದೂ ಸುಂದರವೂ ಅದ್ಭುತವೂ ಆಗಿದೆ. ಅಲ್ಲಿ ಹಾಲಿನ ಹೊಳೆಯೇ ಹರಿಯುತ್ತದೆ. ಆಕಾಶದಿಂದ ಜೇನಿನ ಮಳೆಯೇ ಆಗುತ್ತದೆ. ಬೆಲ್ಲದ ಬೆಟ್ಟಗಳೇ ಇವೆ. ಅಲ್ಲಿರುವ ಮನೆಗಳೆಲ್ಲ ಚಿನ್ನ-ಬೆಳ್ಳಿಯಿಂದ ಆಗಿವೆ. ಅಲ್ಲಿರುವ ಸುರಸುಂದರಿಯರು ನಾವು ಕೇಳಿದ ಅಹಾರವನ್ನು ಬಡಿಸುತ್ತಾರೆ. ನಮ್ಮ ಕಾಲು ಒತ್ತುತ್ತಾ ಸೊಗಸಾಗಿ ಹಾಡಿ ಕುಣಿಯುತ್ತಾರೆ.

ಅಲ್ಲಿ ಎಲ್ಲೆಲ್ಲೂ ಸಂತೋಷವೇ! ಇಷ್ಟು ಸುಂದರವಾಗಿರುವ ಈ ಊರು-ಕೇರಿಯನ್ನು ‘ಸ್ವರ್ಗ’ ಎನ್ನುತ್ತಾರೆ. ಇದರ ಅಧಿಪತಿ, ಓರ್ವ ಬಲಶಾಲಿ ಸಿಂಹ. ಆಕಾಶಸಿಂಹ. ಅದು ಮನಸ್ಸು ಮಾಡಿದರೆ ನಾವು ಕೇಳಿದ್ದನ್ನೆಲ್ಲ ಕೊಡುತ್ತದೆ. ಅದಕ್ಕೆ ಕೋಪ ಬಂದರೆ ಮುಗಿಯಿತು, ನಮ್ಮನ್ನು ಸರ್ವನಾಶ ಮಾಡಿಬಿಡುತ್ತದೆ. ಹಾಗಾಗಿ ಆಕಾಶ ಸಿಂಹವು ಹೇಳಿದಂತೆ ನಾವೆಲ್ಲರೂ ಕೇಳಬೇಕು. ಅದರ ಆeಗಳನ್ನು ಪರಿಪಾಲಿಸಬೇಕು. ಆಗ ಅದು ನಮ್ಮನ್ನು ಸ್ವರ್ಗಕ್ಕೆ ಕರೆಸಿಕೊಳ್ಳುತ್ತದೆ. ನಾವು ಸ್ವರ್ಗದಲ್ಲಿ ಏನೂ ಕೆಲಸವನ್ನು ಮಾಡಬೇಕಿಲ್ಲ. ಅಲ್ಲಿ ಸುಖವಾಗಿರಬಹುದು. ಹಾಗಾಗಿ ನಾವೆಲ್ಲರೂ ಆಕಾಶಸಿಂಹಕ್ಕೆ ತಲೆಬಾಗಬೇಕು. ಇದರಿಂದ ನಮಗೆಲ್ಲ ತುಂಬಾ ಒಳ್ಳೆಯ ದಾಗುತ್ತದೆ…’ ಎಂದು ಬುದ್ಧಿವಂತನು ಹೇಳಿದ ಕಥೆಯನ್ನು ಜನರು ನಿಜವೆಂದು ನಂಬಿದರು.

ಆಕಾಶಸಿಂಹದ ಕಥೆಯನ್ನು ಇಷ್ಟು ವಿವರವಾಗಿ ಹೇಳಬೇಕಾದರೆ, ಕಥೆಗಾರನಿಗೂ ಆಕಾಶ ಸಿಂಹಕ್ಕೂ ಏನೋ ನಿಕಟವಾದ ಸಂಪರ್ಕವಿರಬೇಕು; ಬಹುಶಃ
ಕಥೆಗಾರನ ಮೂಲಕವೇ ಆಕಾಶಸಿಂಹವು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎನ್ನುವುದನ್ನು ಹೇಳುತ್ತದೆ ಎಂದು ಭಾವಿಸಿದರು. ಹಾಗಾಗಿ ಕಥೆಗಾರ ಹೇಳುವುದನ್ನೆಲ್ಲ ಪರಿಪಾಲಿಸಿದರು. ಒಮ್ಮೆ ಕಥೆಗಾರ ‘ನೀವೆಲ್ಲರೂ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ ಒಂಟಿಕಾಲಿನ ಮೇಲೆ ನಿಂತು ಆಕಾಶಸಿಂಹವನ್ನು ಪ್ರಾರ್ಥಿಸ ಬೇಕು’ ಎಂದ. ಆತ ಹೇಳಿದಂತೆ, ಅಷ್ಟೂ ಜನರು ಪ್ರತಿದಿನ ಮುಂಜಾನೆ ಒಂಟಿಕಾಲಲ್ಲಿ ನಿಂತು, ಆಕಾಶವನ್ನು ದಿಟ್ಟಿಸಿ ನೋಡುತ್ತಾ ತಮಗೆ ಸುಖ, ಸಂಪತ್ತು, ನೆಮ್ಮದಿ ಕೊಡುವಂತೆ ಬೇಡಲಾರಂಭಿಸಿದರು. ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ನಿಂತುಕೊಳ್ಳಬೇಕು, ಹೇಗೆ ಮತ್ತು ಎಷ್ಟು ಹೊತ್ತು ಪ್ರಾರ್ಥಿಸಬೇಕು ಎನ್ನುವು ದನ್ನು ಹೇಳಿಕೊಟ್ಟರು.

ಒಂಟಿಕಾಲಲ್ಲಿ ನಿಂತು ಪ್ರಾರ್ಥಿಸಿದರೆ ತಮಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಸರ್ವವ್ಯಾಪಿಯಾಯಿತು. ಕೇವಲ ಒಂದು ಕಾಲ್ಪನಿಕ ಕಥೆಯಿಂದ, ಸಮುದಾ ಯದ ಅಷ್ಟೂ ಜನರು ತನ್ನ ಆಣತಿಯನ್ನು ಪಾಲಿಸುವಂತೆ ಮಾಡಿದ ಕಥೆಗಾರ, ಸಮುದಾಯದಲ್ಲಿದ್ದ ಎಷ್ಟು ಜನರು ತನ್ನ ಸೂಚನೆಯನ್ನು ನಿಖರವಾಗಿ ಪರಿಪಾಲಿಸು ತ್ತಿದ್ದಾರೆ ಎನ್ನುವುದನ್ನು ತಿಳಿಯಬಯಸಿ ಮರುದಿನ ಎಲ್ಲರನ್ನೂ ಕರೆದ. ಎಲ್ಲರೂ ತಮ್ಮ ತಮ್ಮ ಕೊರಳಿಗೆ ಒಂದು ತೆಂಗಿನ ಕರಟ ಕಟ್ಟಿಕೊಳ್ಳಬೇಕೆಂದು ಆಕಾಶ ಸಿಂಹವು ಆಜ್ಞಾಪಿಸಿರುವುದಾಗಿ ಹೇಳಿದ.

ಕರಟವನ್ನು ಕಟ್ಟಿಕೊಳ್ಳುವುದರಿಂದ ಅವರು ಸ್ವರ್ಗಕ್ಕೆ ಸುಲಭ ವಾಗಿ ಹೋಗಬಲ್ಲರು ಎಂದು ತನ್ನ ಕೊರಳಿನಲ್ಲಿ ಕಟ್ಟಿಕೊಂಡಿದ್ದ ಕರಟವನ್ನು ತೋರಿಸಿದ. ಅವನ ಮಾತನ್ನು ನಂಬಿದವರೆಲ್ಲರೂ ಕೊರಳಿಗೆ ಕರಟವನ್ನು ಕಟ್ಟಿಕೊಂಡರು. ಈಗ ಕಥೆಗಾರ ತನ್ನೆದುರಿಗೆ ಬರುವ ಪ್ರತಿಯೊಬ್ಬರ ಕೊರಳನ್ನು ಗಮನಿಸುತ್ತ, ಯಾರ ಕೊರಳಲ್ಲಿ ಕರಟವಿದೆ, ಯಾರಲ್ಲಿ ಇಲ್ಲ ಎಂಬುದನ್ನು ಕಂಡುಕೊಂಡು ತನ್ನ ಅನುಯಾಯಿಗಳು ಯಾರೆಂಬುದನ್ನು ತಿಳಿದುಕೊಂಡ. ಬಹುಪಾಲು ಜನರು ಕರಟವನ್ನು ಕಟ್ಟಿ ಕೊಂಡಿರುವುದು ಅವನಿಗೆ ಸಂತಸವನ್ನುಂಟು ಮಾಡಿತು.

ತನಗೆ ಸಾಕಷ್ಟು ಅನುಯಾಯಿಗಳಿರುವುದನ್ನು ಗಮನಿಸಿದ ಕಥೆಗಾರ, ಆಕಾಶಸಿಂಹವು ತನ್ನ ಪ್ರಾರ್ಥನೆಯಂತೆ ಆಗಾಗ್ಗೆ ಭೂಮಿಗೆ ಬರಲು ಒಪ್ಪಿರುವುದಾಗಿ ಹೇಳಿದ. ಅದು ಬಂದಾಗ ಉಳಿದುಕೊಳ್ಳಲು ದೊಡ್ಡ ಮನೆಯನ್ನು ಕಟ್ಟಬೇಕೆಂದ. ಊರಿನ ಜನರೆಲ್ಲ ಸೇರಿ ಸಿಂಹಕ್ಕಾಗಿ ಒಂದು ದೊಡ್ಡ ಮಯನ್ನು ಕಟ್ಟಿದರು. ಆ ಮನೆಯೊಳಗೆ ಕಥೆಗಾರ ‘ಸಿಂಹಮುಖ ಹಾಗೂ ಮಾನವ ಒಡಲಿದ್ದ’ ಒಂದು ಮೂರ್ತಿಯನ್ನು ಕಟ್ಟಿಗೆಯಲ್ಲಿ ಕೆತ್ತಿಸಿ ಸ್ಥಾಪಿಸಿ ಅದನ್ನು ಆಕಾಶಸಿಂಹದ ಪ್ರತಿರೂಪ
ಎಂದ. ಈಗ ಜನರಿಗೆ, ಇದುವರೆಗೂ ಕೇವಲ ಕಲ್ಪನೆಯಲ್ಲಿದ್ದ ಆಕಾಶಸಿಂಹದ ಸ್ಪಷ್ಟ ಚಿತ್ರಣ ದೊರೆಯಿತು. ಆಕಾಶಸಿಂಹಕ್ಕೆ ಕಟ್ಟಿದ ಮನೆಯನ್ನು ‘ದೇವಾಲಯ’ ಎಂದು ಕರೆದು ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಅಲ್ಲಿಗೆ ಹೋಗಲಾರಂಭಿಸಿದ, ಅಲ್ಲಿ ಒಂಟಿಕಾಲಿನಲ್ಲಿ ನಿಂತು ಪ್ರಾರ್ಥಿಸಲಾರಂಭಿಸಿದ. ಅಲ್ಲಿಯವರೆಗೆ ತಮ್ಮ ತಮ್ಮ ಮನೆಗಳಲ್ಲಿ ಆಕಾಶ ಸಿಂಹವನ್ನು ಪ್ರಾರ್ಥಿಸುತ್ತಿದ್ದವರು ಈಗ ದೇವಾಲಯಕ್ಕೆ ಬಂದು ಪ್ರಾರ್ಥಿಸಲಾರಂಭಿಸಿದರು.

ಆಗ ಕಥೆಗಾರ ದೇವಾಲಯಕ್ಕೆ ಬಂದು ಪ್ರಾರ್ಥಿಸುವವರೆಲ್ಲರೂ, ಜತೆಯಲ್ಲಿ ಒಂದೊಂದು ಬಾಳೆಹಣ್ಣನ್ನು ತರಬೇಕೆಂದು ಹೇಳಿದ. ಪುರದ ಹಿತವನ್ನು ಬಯಸುತ್ತಿ ರುವ ಕಥೆಗಾರನನ್ನು ಜನರು ‘ಪುರೋಹಿತ’ ಎಂದು ಕರೆದರು. ತಮ್ಮ ಹಿತವನ್ನು ಬಯಸುವ ಪುರೋಹಿತನ ಮಾತಿನಂತೆ ತಪ್ಪದೇ ಬಾಳೆಹಣ್ಣನ್ನು ತರಲಾ ರಂಭಿಸಿದರು. ಪುರೋಹಿತನು ಆಕಾಶಸಿಂಹದ ಮೂರ್ತಿಯನ್ನು ಸೃಷ್ಟಿ-ಸ್ಥಿತಿ-ಲಯವನ್ನು ಉಂಟು ಮಾಡುವ ಸರ್ವಶಕ್ತ ‘ಸಿಂಹ ದೇವರು’ ಎಂದ. ಜನರು ತಂದ ಹಣ್ಣುಗಳನ್ನು ಮೂರ್ತಿಯ ಮುಂದಿಟ್ಟ. ತನಗೆ ಸಾಕಾಗು ವಷ್ಟು ಉಳಿಸಿಕೊಂಡು ಹೆಚ್ಚುವರಿ ಹಣ್ಣುಗಳನ್ನು ಪ್ರಸಾದ ರೂಪದಲ್ಲಿ ಬಂದವರಿಗೆ ವಿತರಿಸಿದ. ಜನರಿಗೆ ಪುರೋಹಿತನ ಮೇಲೆ ನಂಬಿಕೆ ಬಂದು ಅವನ ಅಸ್ತಿತ್ವವನ್ನು ಒಪ್ಪಿಕೊಂಡರು.

ಒಮ್ಮೆ ಪುರೋಹಿತ ‘ನಿಯಾಂದರ್ಥಾಲ್ ಜನರು ನಮ್ಮ ಊರನ್ನು ಕೊಳ್ಳೆ ಹೊಡೆಯಲು ಬರುತ್ತಿದ್ದಾರೆ, ಎಲ್ಲರೂ ಸೇರಿಕೊಂಡು ಅವರನ್ನು ಹೊಡೆದೋಡಿಸಬೇಕು’ ಎಂದ. ‘ಅವರು ನಮಗಿಂತಲೂ ಎತ್ತರ, ದಪ್ಪಗಿದ್ದು ಶಕ್ತಿಶಾಲಿಗಳಾಗಿದ್ದಾರೆ. ಅವರನ್ನು ಹೊಡೆದೋಡಿಸಲಾಗದು’ ಎಂದರು ಜನರು. ಆಗ ಪುರೋಹಿತ ‘ನಮ್ಮ ಆಕಾಶದೇವರ ಮುಂದೆ ಯಾವ ನಿಯಾಂದರ್ಥಾಲ್ ಸಹ ನಿಲ್ಲಲಾರ. ನಿಮ್ಮೊಡನೆ ಆಕಾಶ ದೇವರು ಇದ್ದು ನಿಮಗೆ ಬೇಕಾದ ಎಲ್ಲ ಶಕ್ತಿಯನ್ನು ಕೊಡುತ್ತಾರೆ. ನೀವು ನಾನು ಹೇಳಿದಷ್ಟು ಮಾಡಿ’ ಎಂದ. ‘ಹೊಡೆದಾಟದಲ್ಲಿ ಅಕಸ್ಮಾತ್ ಸತ್ತರೆ?’ ಎಂದು ಒಬ್ಬ ರಾಗವೆಳೆದಾಗ ಪುರೋಹಿತ ‘ಚಿಂತಿಸಬೇಡಿ. ನೀವು ನೇರವಾಗಿ
ವೀರಸ್ವರ್ಗಕ್ಕೆ ಹೋಗುತ್ತೀರಿ. ಅಲ್ಲಿ ಆಕಾಶದೇವರು ನಿಮ್ಮನ್ನು ಸ್ವಾಗತಿಸಿ ವಾಸಿಸಲು ಅನುಮತಿಸುತ್ತಾನೆ. ಸುರಸುಂದರಿಯರ ಜತೆ ನೀವು ಸುಖವಾಗಿರಬಹುದು’ ಎಂದ. ಜನರು ಒಪ್ಪಿದರು. ದೇವಾಲಯದ ಮುಂದೆ ಸೇರಿದ್ದವರಲ್ಲಿ ಕಟ್ಟುಮ ಸ್ತಾಗಿದ್ದ ಗಂಡಸೊಬ್ಬನನ್ನು ಆಯ್ಕೆ ಮಾಡಿದ ಪುರೋಹಿತ, ನಿಯಾಂದರ್ಥಾಲ್ ಜನರೊಡನೆ ಹೇಗೆ ಹೊಡೆದಾಡಬೇಕು ಎನ್ನುವ ತಂತ್ರಗಳನ್ನು ತಾನು ನಿಗದಿತ ವ್ಯಕ್ತಿಗೆ ಹೇಳುವುದಾಗಿಯೂ, ಅವನು ಹೇಳಿದಂತೆ ಎಲ್ಲರೂ ಕೇಳಬೇಕೆಂದು
ಸೂಚಿಸಿದ. ನೆರೆದಿದ್ದ ಸಮಸ್ತ ಜನರು ಕಟ್ಟುಮಸ್ತಾದ ಯುವಕನನ್ನು ತಮ್ಮ ನಾಯಕನೆಂದು ಸ್ವೀಕರಿಸಿದರು.

ಒಬ್ಬ ನಿಯಾಂದರ್ಥಾಲನನ್ನು ಹಣಿಯಲು ಹತ್ತು ಜನರು ಸಿದ್ಧರಾದರು. ಪುರೋಹಿತ ಆಕಾಶಸಿಂಹಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿ ತಮಗೆ ವಿಜಯ ನೀಡುವಂತೆ ಕೋರಿದ. ಇದನ್ನು ಕಂಡು ಜನಸಾಮಾನ್ಯರ ಸೂರ್ತಿ ನೂರು ಪಟ್ಟು ಹೆಚ್ಚಿತು. ‘ಜಯ ಜಯ ಸಿಂಹದೇವ’ ಎಂದು ಕೂಗುತ್ತಾ, ಅಲ್ಪಸಂಖ್ಯಾತ ನಿಯಾಂದರ್ಥಾ ಲರನ್ನು, ಬಹುಸಂಖ್ಯಾತ ಸೆಪಿಯನ್ನರು ಸುಲಭವಾಗಿ ಹೊಡೆದೋಡಿಸಿದರು. ಒಂದು ಚಿಂಪಾಂಜಿ ಬಂದು, ತನಗೆ ಆಕಾಶ ಚಿಂಪಾಂಜಿ ದೇವರು ಹೇಳಿರುವು ದಾಗಿಯೂ, ಪ್ರತಿ ಚಿಂಪಾಂಜಿಯು ತನಗೆ ಬಾಳೆಹಣ್ಣನ್ನು ಕೊಡಬೇಕೆಂದು ಹೇಳಿದರೆ, ಅದನ್ನು ಯಾವ ಚಿಂಪಾಂಜಿಯೂ ನಂಬುವುದಿಲ್ಲ. ನಂಬಿ ತನ್ನ ಕೈಯಲ್ಲಿರುವ ಹಣ್ಣನ್ನು ಪುಕ್ಕಟೆ ಕೊಟ್ಟುಬಿಡುವುದಿಲ್ಲ. ಆದರೆ ಮನುಷ್ಯರು ಬಾಳೆಹಣ್ಣನ್ನು ಬಿಡಿ ತಮ್ಮ ಸರ್ವಸ್ವವನ್ನೂ, ಕೊನೆಗೆ ತಮ್ಮ ಜೀವವನ್ನೂ ಕೊಡಲು ಹಿಂದೆಗೆಯುವು ದಿಲ್ಲ.

ಹೀಗೆ ನಮ್ಮ ಸೆಪಿಯನ್ ಪೂರ್ವಜರು ಕಥೆಗಳನ್ನು ಹೇಳುವುದರಲ್ಲಿ, ಹೇಳಿದ್ದನ್ನು ಕೇಳುವುದರಲ್ಲಿ, ಕೇಳಿದ್ದನ್ನು ನಂಬುವುದರಲ್ಲಿ, ನಂಬಿದ್ದನ್ನು ಪರಿಪಾಲಿಸುವುದರಲ್ಲಿ ನಿಸ್ಸೀಮರಾಗಿ ಬೆಳೆದರು. ೧೯೩೯. ಇಂದಿನ ಜರ್ಮನಿಯ ಬೇಡನ್ ವೂರ್ಟೆಂಬರ್ಗ್ ನಲ್ಲಿರುವ ಸ್ಟೇಡೆಲ್ ಗುಹೆ. ಅದನ್ನು ಅನ್ವೇಷಿಸಿದಾಗ, ಅವರಿಗೆ ಒಂದು ವಿಗ್ರಹ ದೊರೆಯಿತು. ಸುಮಾರು ಕ್ರಿ.ಪೂ. ೪೧,೦೦೦-೩೫,೦೦೦ (ಕಾರ್ಬನ್-ಡೇಟಿಂಗ್) ವರ್ಷಗಳಷ್ಟು ಹಿಂದಿನದ್ದು. ಅದನ್ನು ‘ಮ್ಯಾಮತ್’ ಎಂಬ ನಮ್ಮ ಆನೆಯ ಪೂರ್ವಜನ ದಂತದಿಂದ ಮಾಡಿದ್ದರು. ೩೧ ಸೆಂ.ಮೀ. ಎತ್ತರದ ಸುಂದರ ವಿಗ್ರಹ. ಅದರದ್ದು ಸಿಂಹಮುಖವಾಗಿತ್ತು. ಅಂದಿನ ಗುಹೆಗಳಲ್ಲಿ ವಾಸವಾಗಿದ್ದ ಗುಹಾಸಿಂಹವನ್ನು (ಕೇವ್ ಲಯನ್) ಹೋಲುತ್ತಿತ್ತು. ದೇಹವು ಮನುಷ್ಯರ ದೇಹದಂತಿತ್ತು. ಎರಡು ಕಾಲುಗಳನ್ನು ಅಗಲಿಸಿ, ನೆಟ್ಟಗೆ ನಿಂತ ‘ಸಿಂಹಮಾನವ’ ಅಥವಾ ‘ನರ-ಸಿಂಹ’ನ ಪ್ರತಿರೂಪ ವಾಗಿತ್ತು! ಬಲವಾದ ಭುಜಗಳು. ಸಿಂಹಕಟಿಯನ್ನು ಹೋಲುವ ಸೊಂಟ. ಜಘನ ಮತ್ತು ತೊಡೆಗಳು ಬಲವಾಗಿವೆ.

ಸಿಂಹದ ದೃಷ್ಟಿ ದಿಟ್ಟವಾಗಿದೆ, ನೇರವಾಗಿದೆ. ನೋಡುಗರನ್ನೇ ಗಮನವಿಟ್ಟು ಮಾತನಾಡುತ್ತಿರುವಂತೆ ಭಾಸವಾಗುತ್ತಿದೆ. ಗಂಭೀರವಾಗಿ, ಪೂರ್ಣಗಮನವಿಟ್ಟು, ನೋಡುಗರು ಹೇಳುವುದನ್ನು ಕೇಳುತ್ತಿರುವಂತಿದೆ. ಬೆಣಚುಕಲ್ಲಿನ ಸಹಾಯದಿಂದ ಕೆತ್ತಿರುವ ಈ ಮೂರ್ತಿಯು, ಲಭ್ಯ ಮಾನವ ಇತಿಹಾಸದಲ್ಲಿ ನಮಗೆ ದೊರೆತ ಮೊತ್ತಮೊದಲ ಪ್ರಾಣಿ-ಮನುಷ್ಯನ ಸಂಯುಕ್ತ ರೂಪದ ವಿಗ್ರಹವಾಗಿದೆ. ಅಂದಿನ ಜಗತ್ತಿನಲ್ಲಿ ಬಹುಶಃ ಗುಹಾಸಿಂಹವೇ ಸರ್ವಶಕ್ತ ಜೀವಿಯಾಗಿದ್ದಿರಬೇಕು.
ಅದಕ್ಕೆ ಎಲ್ಲ ಪೂರ್ವಜರು ಹೆದರಿ ನಡುಗುತ್ತಿದ್ದಿರಬೇಕು. ಅಂದಿನ ಸಿಂಹವು ಇಂದಿನ ಆಫ್ರಿಕದ ಸಿಂಹಕ್ಕಿಂತಲೂ ದೊಡ್ಡ ದಾಗಿದ್ದು ಕುತ್ತಿಗೆಯಲ್ಲಿ ಕೇಸರಿಯಿಲ್ಲದೆ ಬೋಳು ಬೋಳಾಗಿತ್ತು.

ಹಾಗಾಗಿ ಸೆಪಿಯನ್ ಪೂರ್ವಜರು ಅದ್ಭುತ ಶಕ್ತಿ ಪಡೆದಿದ್ದ ಆ ಸಿಂಹವನ್ನು, ನರನೊಡನೆ ಸೇರಿಸಿ, ನರ- ಸಿಂಹನನ್ನು ಸೃಜಿಸಿರಬೇಕು ಎನಿಸುತ್ತದೆ. ಹೀಗೆ ಮೊದಲ
ಬಾರಿಗೆ ಜನರು, ನಿಜಜೀವನದಲ್ಲಿ ಕಾಣದ, ‘ನರ-ಸಿಂಹ’ನ (ಜರ್ಮನ್ ಭಾಷೆಯಲ್ಲಿ ಲೋವೆನ್‌ಮೆನ್ಷ್) ಅಸ್ತಿತ್ವದ ‘ದಂತಕಥೆ’ಯನ್ನು ನಿಜವೆಂದೇ ಒಪ್ಪಿದರು. ಬಹುಶಃ ನಮ್ಮ ಸೆಪಿಯನ್ ಪೂರ್ವಜರು ಆರಾಽಸಿದ ಮೊದಲ ‘ದೈವೀಕ ವಿಗ್ರಹ’ವು ಈ ‘ನರ-ಸಿಂಹ’ನೇ ಆಗಿರಬೇಕು. ಸ್ಟೇಡೆಲ್ ಗುಹೆಯಲ್ಲಿದ್ದ ಸೆಪಿಯನ್ ಪೂರ್ವಜರಲ್ಲಿ ಯಾವನೋ ಒಬ್ಬ ಬುದ್ಧಿವಂತ ನರ-ಸಿಂಹನ ಕಥೆಯನ್ನು ಕಟ್ಟಿದ್ದು ಮಾತ್ರವಲ್ಲದೆ, ಅವನ ವಿಗ್ರಹವನ್ನೂ ಸೃಜಿಸಿ, ಜನರ ನಂಬಿಕೆ ಗಳಿಸಿ, ಅಲ್ಲಿದ್ದ ನಿಯಾಂದರ್ಥಾಲ್ ಮಾನವರನ್ನು ಪರಿಪೂರ್ಣವಾಗಿ ಹೊಡೆದೋಡಿಸಿದ. ಒಂದು ದಿವಸ ಅವರನ್ನು ನಾಮಾವಶೇಷ ಮಾಡಿದ. ನಂತರ ಬಂದ ಸೆಪಿಯನ್ ಜನರಿಗೆ ನರ-ಸಿಂಹನ ಕಥೆಯನ್ನು ಹೇಳುವವರು ಯಾರೂ ಇರಲಿಲ್ಲ ಎನಿಸುತ್ತದೆ.

ಹಾಗಾಗಿ ನರ-ಸಿಂಹನ ವಿಗ್ರಹವು ಮೂಲೆಗುಂಪಾಗಿರಬೇಕು. ಆದರೆ ಮುಂದೆ ಡೆನಿಸೋವನ್, -ರೆಸ್ ಮುಂತಾದ ಮಾನವರು ಎದುರಾದಾಗ, ಸೆಪಿಯನ್ ಪೂರ್ವಜ ಪುರೋಹಿತ, ಇಂಥದೇ ಸಿಂಹದೇವರನ್ನೋ ಗರುಡದೇವರನ್ನೋ ಸೃಜಿಸಿ ಕಥೆ ಹೇಳಿದ. ಅವರಲ್ಲಿ ನಂಬಿಕೆ ಹುಟ್ಟಿಸಿ, ಅವರ ಧೈರ್ಯವನ್ನು ಹೆಚ್ಚಿಸಿದ. ಹೀಗೆ ಕಥೆಗಳ ಮೂಲಕವೇ ನಮ್ಮ ಸೆಪಿಯನ್ ಪೂರ್ವಜರು ಎಲ್ಲ ಮಾನವ ಪ್ರಭೇದಗಳನ್ನು ನಿರ್ನಾಮ ಮಾಡುತ್ತಾ ಇಡೀ ಭೂಮಂಡಲವನ್ನು ಆಕ್ರಮಿಸಿದರು.
ಕಥೆಗಳ ಮೂಲಕವೇ ದೇಶಗಳು, ಸಾಮ್ರಾಜ್ಯಗಳು, ಧರ್ಮ ಗಳು, ಪುರೋಹಿತ ವರ್ಗ, ಆಳುವ-ದುಡಿಯುವ ವರ್ಗ ಗಳನ್ನು ನಿರ್ಮಿಸಿದರು. ಇವತ್ತಿಗೂ ನಾವು ಹೊಸ ಹೊಸ ಕಥೆಗಳನ್ನು ಕಟ್ಟಿ ಹೇಳುತ್ತಿದ್ದೇವೆ. ಮುಂದೆಯೂ ಹೇಳುತ್ತೇವೆ.