Thursday, 12th December 2024

ಮೋದಿಗೆ ಸಮಾನ ಮನಸ್ಕ ನಾಯಕನ್ಯಾರು ?

ಅಶ್ವತ್ಥಕಟ್ಟೆ

ranjith.hosketere@gmail.com

ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆ ಭಾರತ ಮಾತ್ರವಲ್ಲದೇ, ಆಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲಕ್ಕೆ ಕಾರಣ
ವಾಗಿದೆ. ಏಕೆಂದರೆ ಮೂರನೇ ಬಾರಿಗೆ ಪ್ರಧಾನಿಯಾಗುವ ಮೂಲಕ ದಾಖಲೆ ನಿರ್ಮಿಸುವ ಲೆಕ್ಕಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಿದ್ದರೆ, ಈ ಅಶ್ವಮೇಧ ಕುದುರೆಯನ್ನು ಕಟ್ಟುವ ಧಾವಂತದಲ್ಲಿ ಪ್ರತಿಪಕ್ಷಗಳಿವೆ.

ಬಿಜೆಪಿಯ ಈ ಓಟಕ್ಕೆ ಏಕಾಂಕಿಯಾಗಿ ಬ್ರೇಕ್ ಹಾಕುವುದು ಸುಲಭವಲ್ಲ ಎನ್ನುವುದನ್ನು ಅರಿತ ‘ಸಮಾನ ಮನಸ್ಕ’ರೆಲ್ಲ ಸೇರಿ ಒಂದಾಗಿದ್ದರೆ, ಚುನಾವಣೆಯವರೆಗೆ ಈ ಸಮಾನ ಮನಸ್ಕರ ಕೂಟ ಉಳಿಯುವುದೇ ಎನ್ನುವುದೇ ಹಲವರಲ್ಲಿರುವ ಸಂಶಯವಾಗಿದೆ. 2024ರ ಲೋಕಸಭಾ ಚುನಾವಣೆಗೆ ಕರ್ನಾಟಕ ವಿಧಾನ ಸಭಾ ಚುನಾವಣೆ ಮುಗಿಯುವ ತನಕ ಆಮೆವೇಗದಲ್ಲಿದ್ದ ತಯಾರಿ, ಫಲಿತಾಂಶದ ಬೆನ್ನಲ್ಲೇ ಚುರುಕು ಪಡೆದು ಕೊಂಡಿದೆ. ಬಿಜೆಪಿ ಬಳಿಯಿರುವ ಮೋದಿ ಎನ್ನುವ ಬ್ರಹ್ಮಾಸ್ತ್ರವನ್ನು ಬಗ್ಗುಬಡಿಯಲು ಏಕಾಂಕಿ ಹೋರಾಟದ ಬದಲಿಗೆ, ಒಗ್ಗಟ್ಟಿನ ಮೂಲಕ ಹೋರಾಡಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿಕೊಂಡಿವೆ.

ಸದ್ಯಕ್ಕೆ ಇದರ ನೇತೃತ್ವವನ್ನು ಬಿಹಾರದ ಮುಖ್ಯಮಂತ್ರಿ, ಮೋದಿಯ ಮಾಜಿ ಆಪ್ತ ನಿತೀಶ್ ಕುಮಾರ್ ಹೊತ್ತಿದ್ದಾರೆ. ಸಮಾನ ಮನಸ್ಕರ ವೇದಿಕೆ ಸೃಷ್ಟಿಯಾಗಿ ಕೇವಲ ಒಂದು ಸಭೆ ಮುಗಿಯುವಲ್ಲಿ, ಸಾಲು ಸಾಲು ‘ಸಮಸ್ಯೆ’ಗಳು ನಾಯಕರ ತಲೆಯಲ್ಲಿ ಓಡಾಡುತ್ತಿವೆ. ಈ 18 ಪಕ್ಷಗಳ ಮಹಾಘಟಬಂಧನದ ‘ಏಕ ಮಾತ್ರ’ ಉದ್ದೇಶ ಮೋದಿಯನ್ನು ಸೋಲಿಸುವುದೇ ಆಗಿದ್ದರೂ, ಈಗಿರುವ ಬಹುದೊಡ್ಡ ಸಮಸ್ಯೆಯೆಂದರೆ ಈ ತಂಡದ ನೇತೃತ್ವವನ್ನು ವಹಿಸುವ ನಾಯಕನ್ಯಾರು ಎನ್ನುವುದಾಗಿದೆ.

ಇದೇ ವಿಷಯದಲ್ಲಿ ಆರಂಭಿಕ ಹಂತದಲ್ಲಿಯೇ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಳ್ಳುತ್ತಿರುವುದು ಸತ್ಯ. ಹಾಗೇ ನೋಡಿದರೆ, 2019ರ ಚುನಾವಣೆಯವರೆಗೆ ಯುಪಿಎ ನೇತೃತ್ವವನ್ನು ಸ್ವಾಭಾವಿಕವಾಗಿ ಕಾಂಗ್ರೆಸ್, ಎನ್ ಡಿಎ ನೇತೃತ್ವವನ್ನು ಬಿಜೆಪಿ ನಿರ್ವಹಿಸುತ್ತಿತ್ತು. ಆದರೆ ಈ
ಬಾರಿ ಆಗುತ್ತಿರುವ ಈ ಮೈತ್ರಿಯ ಮಾತುಕತೆ ಯುಪಿಎ ಯನ್ನೂ ಮೀರಿ ತೃತೀಯ ರಂಗದ ರೀತಿಯಲ್ಲಿ ಸಿದ್ಧವಾಗುತ್ತಿದೆ. ಕಳೆದ ಬಾರಿಯೂ ಇದೇ ರೀತಿಯಲ್ಲಾಗಿದ್ದರೂ, ಕಾಂಗ್ರೆಸ್ ಈ ಮಹಾಘಟಬಂಧನದ ನೇತೃತ್ವವನ್ನು ಹೊತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ಗೆ ‘ಸ್ವಾಭಾವಿಕ’ವಾಗಿ ನಾಯಕನ ಸ್ಥಾನ ಪಡೆಯುವ ಪರಿಸ್ಥಿತಿಯಲ್ಲಿ ಇಲ್ಲವಾಗಿದೆ.

ಈ ಹಕ್ಕನ್ನು ಕೇಳಲು ಮುಂದಾದರೂ ಇತರೆ ಪಕ್ಷಗಳೂ ಒಪ್ಪುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಕಳೆದ ವಾರ ಬಿಹಾರದ ಪಟನಾದಲ್ಲಿ ಸಮಾನ ಮನಸ್ಕ ಪಕ್ಷಗಳ ಸಭೆ ನಡೆದಿದ್ದರೂ ಅದರ ನೇತೃತ್ವವನ್ನು ಯಾರು ವಹಿಸಿದ್ದರು ಎನ್ನುವ ಬಗ್ಗೆ ಸ್ಪಷ್ಟತೆ ಕೊನೆಯ ತನಕವೂ ಸಿಗಲಿಲ್ಲ. ಸಭೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ‘ಹೋಸ್ಟ್’ ಮಾಡಿದ್ದರು. ರಾಹುಲ್ ಗಾಂಧಿ, ಶರದ್ ಪವಾರ್, ಮಮತಾ ಬ್ಯಾನರ್ಜಿ, ಉದ್ದವ್ ಠಾಕ್ರೆ,
ಸ್ಟಾಲಿನ್ ಸೇರಿದಂತೆ ಎಲ್ಲರೂ ‘ನಾಯಕ’ರಾಗುವ ಉತ್ಸಾಹದಲ್ಲಿಯೇ ಇದ್ದರು. ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರೂ, ಎಲ್ಲಿಯೂ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಸಣ್ಣ ಸುಳಿವು ಅಥವಾ ಉತ್ಸಾಹವನ್ನು ಇತರೆ 16 ಪಕ್ಷಗಳ ನಾಯಕರು ತೋರಿಸಿಲ್ಲ ಎನ್ನುವುದು ಸ್ಪಷ್ಟ.

ಇನ್ನುಳಿದಂತೆ ಭಾಗವಹಿಸಿದ್ದ 17 ಪಕ್ಷಗಳಲ್ಲಿ ಬಹುತೇಕ ಪ್ರಾದೇಶಿಕ ಪಕ್ಷವಾಗಿದ್ದು, ಅವರಲ್ಲಿ ಬಹುತೇಕರು ಆಯಾ ರಾಜ್ಯಗಳಿಗೆ ಸೀಮಿತವಾಗಿರುವ ನಾಯಕರಾಗಿದ್ದಾರೆಯೇ ಹೊರತು, ಇಡೀ ರಾಷ್ಟ್ರದಲ್ಲಿ ‘ಅಲೆ’ ಸೃಷ್ಟಿಸುವ ನಾಯಕತ್ವವನ್ನು ಹೊಂದಿಲ್ಲ. ಇನ್ನು 17 ಪಕ್ಷಗಳ ಒಪ್ಪಿತ ಅಭ್ಯರ್ಥಿ ಯಾಗುವ ಸಾಧ್ಯತೆ ಕೆಲವೇ ಕೆಲವರಿದ್ದು, ಅವರಲ್ಲಿ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಶರದ್ ಪವಾರ್ ಅಥವಾ ಕಾಂಗ್ರೆಸಿನಿಂದ ರಾಹುಲ್ ಅಥವಾ ಪ್ರಿಯಾಂಕಾ ಗಾಂಽ ಹೆಸರುಗಳಿವೆ.

2014ರಿಂದ ಈಚೆಗೆ ಕಾಂಗ್ರೆಸ್‌ನ ಚುನಾವಣಾ ರಾಜಕೀಯದ ಅಂಕಿ-ಅಂಶವನ್ನು ಗಮನಿಸಿದರೆ, ಕೆಲವೇ ಕೆಲವು ರಾಜ್ಯಗಳ ಹೊರತಾಗಿ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. 2019ರ ಬಳಿಕ ಕಾಂಗ್ರೆಸ್‌ಗೆ ಬಹುದೊಡ್ಡ ಗೆಲುವು ಎಂದು ಕಾಣಿಸಿರುವುದು ಕರ್ನಾಟಕ ದಲ್ಲಿಯೇ. ಆದರೆ ಕರ್ನಾಟಕದಲ್ಲಿನ ಗೆಲುವು ರಾಜ್ಯದಲ್ಲಿರುವ ನಾಯಕತ್ವದ ಗೆಲುವೇ ಹೊರತು, ರಾಷ್ಟ್ರೀಯ ನಾಯಕರ ಗೆಲುವಲ್ಲ ಎನ್ನುವುದು ಸ್ವತಃ ಕಾಂಗ್ರೆಸ್ ವರಿಷ್ಠರಿಗೂ ಗೊತ್ತಿರುವ ವಿಷಯ. ಆದ್ದರಿಂದ ಸಮಾನ ಮನಸ್ಕ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧವಿಲ್ಲ. ಇನ್ನುಳಿದಂತೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಎಲ್ಲರೂ ಒಪ್ಪಿಕೊಳ್ಳಬಹುದು.

ಆದರೆ ಅವರಿಗೆ ವಯಸ್ಸಿನ ಕಾರಣ, ಲೋಕಸಭಾ ಚುನಾವಣೆಯನ್ನು ನಿಭಾಯಿಸುವುದು ಕಷ್ಟದ ವಿಷಯ. ಇನ್ನುಳಿದಂತೆ ನಿತೀಶ್ ಕುಮಾರ್
ಅವರದ್ದು ‘ಕ್ಲೀನ್ ಇಮೇಜ್’ ತಕ್ಕಮಟ್ಟಿಗೆ ಒಪ್ಪಬಹುದು ಎನ್ನುವುದು ಬಹುತೇಕರ ಅಭಿಪ್ರಾಯವಾದರೂ, ಅವರು ಈ ಹಿಂದೆ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿದ್ದ ಕಾರಣ ಹಾಗೂ ಜೆಡಿಯು ಇಡೀ ದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ ಎನ್ನುವ ಕಾರಣಕ್ಕೆ ಕೆಲವರು ಮೂಗು ಮುರಿಯು ತ್ತಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳ ಹೊರತು ಇತರೆ ರಾಜ್ಯಗಳಲ್ಲಿ ಹಿಡಿತವಿಲ್ಲದ ಕಾರಣ ಒಪ್ಪಿತ ಅಭ್ಯರ್ಥಿಯಾಗುವ ಸಾಧ್ಯತೆ ತೀರಾ ಕಡಿಮೆ.

ಸಮಾನ ಮನಸ್ಕ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಬಹುತೇಕ ಪಕ್ಷಗಳು ದಕ್ಷಿಣ ಭಾರತದ ಭಾಗಗಳಿಗೆ ಸೇರಿದ ಅಥವಾ ಬಿಜೆಪಿಯ ಹಿಡಿತ ಗಟ್ಟಿಯಿಲ್ಲದೇ ಇರುವ ಭಾಗಗಳಿಗೆ ಸೇರಿರುವ ಪಕ್ಷಗಳು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೊರತುಪಡಿಸಿ, ಇನ್ನುಳಿದ ರಾಜ್ಯದಲ್ಲಿ
ಬಹುದೊಡ್ಡ ಸಂಖ್ಯೆ ಬರುವುದಿಲ್ಲ ಎನ್ನುವುದು ಸ್ಪಷ್ಟವಾಗಿರುವುದರಿಂದ ಉತ್ತರ ಭಾರತದ ಸೀಟುಗಳನ್ನೇ ಬಿಜೆಪಿ ನಾಯಕರೂ ನೆಚ್ಚಿಕೊಂಡಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಬಿಹಾರದ ಮೇಲೆಯೇ ಹೆಚ್ಚು ಕಣ್ಣಿಟ್ಟಿದ್ದಾರೆ. ಈ ಐದು ರಾಜ್ಯಗಳಲ್ಲಿಯೇ ಸುಮಾರು ೨೦೦ ಲೋಕಸಭಾ ಸೀಟುಗಳಿವೆ.

ಇನ್ನುಳಿದಂತೆ ಪಶ್ಚಿಮ ಬಂಗಾಳ 42, ಒರಿಸ್ಸಾ 21 ಹಾಗೂ ದಕ್ಷಿಣ ಭಾರತದಲ್ಲಿ ನೆಚ್ಚಿಕೊಂಡಿರುವ ಕರ್ನಾಟಕದಲ್ಲಿ 28 ಕ್ಷೇತ್ರಗಳಿವೆ. ಇವುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಿಡಿತವಿದ್ದರೂ, ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಕೆಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಇದೇ ರೀತಿ ಒರಿಸ್ಸಾ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಅಥವಾ ಎನ್‌ಡಿಎ ಗೆಲುವು ನಿಶ್ಚಿತ. ಆದ್ದರಿಂದ ಈ ಪ್ರತಿಪಕ್ಷಗಳ ಸಮಾನ ಮನಸ್ಕ ಒಕ್ಕೂಟದಿಂದ ‘ಹೇಳಿಕೊಳ್ಳುವ ನಷ್ಟ’ವಿಲ್ಲ ಎನ್ನುವುದು ಬಿಜೆಪಿಯ ವಿಶ್ವಾಸವಿದೆ.

ಈ ಎಲ್ಲ ಲೆಕ್ಕಾಚಾರಗಳು ಒಂದಾದರೆ, ಮತ್ತೊಂದು ಬಹುದೊಡ್ಡ ಸಮಸ್ಯೆಯೆಂದರೆ ಸೀಟು ಹಂಚಿಕೆಯದ್ದು. ಡಿಎಂಕೆ, ತೃಣ ಮೂಲ ಕಾಂಗ್ರೆಸ್, ಜೆಡಿಯು, ಶಿವಸೇನೆ, ಎನ್‌ಸಿಪಿ ಸೇರಿದಂತೆ ಒಂದು ರಾಜ್ಯಕ್ಕೆ ಸೀಮಿತವಾಗಿದ್ದರೂ, ಕಾಂಗ್ರೆಸ್ ಎಲ್ಲ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.
ಶಿವಸೇನೆ, ಎನ್‌ಸಿಪಿ ಮಹಾರಾಷ್ಟ್ರದಲ್ಲಿ, ಉತ್ತರ ಪ್ರದೇಶದಲ್ಲಿ ಆರ್‌ಜೆಡಿ ಹಾಗೂ ಸಮಾಜವಾದಿ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಬಹುದೊಡ್ಡ ಹೋರಾಟ ನಡೆಯುವುದು ನಿಶ್ಚಿತ. ಏಕೆಂದರೆ, ಸೀಟು ಹಂಚಿಕೆಯಲ್ಲಿ ಒಂದು ಚುನಾವಣೆಯಲ್ಲಿ ಬಿಟ್ಟುಕೊಟ್ಟರೂ ಸಂಘಟನೆಯ ವಿಷಯದಲ್ಲಿ ಬಹುದೊಡ್ಡ ಹಿನ್ನಡೆಯಾಗುತ್ತದೆ.

ಇದರೊಂದಿಗೆ ಹಿಡಿತದಲ್ಲಿರುವ ಒಂದೊಂದು ರಾಜ್ಯವನ್ನು ಕೈಬಿಟ್ಟು ಸುಮ್ಮನೆ ಕೂರುವುದಕ್ಕೆ ಯಾವ ಪಕ್ಷಗಳು ಸಿದ್ಧವಿಲ್ಲ. ಇನ್ನು ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿಯೂ ಸೀಟು ಹಂಚಿಕೆಯ ಶೇರನ್ನು ಕೇಳುವುದು ನಿಶ್ಚಿತ. ಆದರೆ ಕೊಟ್ಟ ಸೀಟನ್ನು ಗೆದ್ದುಕೊಂಡು ಕಾಂಗ್ರೆಸ್ ಬರುವುದೇ ಎನ್ನುವ ಗ್ಯಾರಂಟಿ ಕೆಲ ರಾಜ್ಯಗಳ ಹೊರತಾಗಿ ಇನ್ಯಾವ ರಾಜ್ಯಗಳಲ್ಲಿಯೂ ಉಳಿದಲ್ಲ. ಆದ್ದರಿಂದ ಅವರು ಕೇಳಿದಷ್ಟು ಟಿಕೆಟ್ ಕೊಡಲು ಇತರೆ ಪಕ್ಷಗಳಿಗೆ ಇಷ್ಟವಿಲ್ಲ. ಆದರೆ ಸೀಟು ಬೇಡವೆಂದು ಬಿಟ್ಟುಕೊಟ್ಟರೆ, ಕಾಂಗ್ರೆಸ್ ಗಿರುವ ‘ರಾಷ್ಟ್ರೀಯ ಪಕ್ಷದ’ ಲೆಬಲ್ ಕಳೆದುಕೊಳ್ಳುವ ಆತಂಕ. ಆದ್ದರಿಂದ ಸೀಟು ಹಂಚಿಕೆ ವಿಷಯದಲ್ಲಿ ಸಮಾನ ಮನಸ್ಕರೆಲ್ಲ ಒಮ್ಮತದ ತೀರ್ಮಾನ ಕೈಗೊಳ್ಳುವರೇ ಎನ್ನುವುದೇ ಬಹುತೇಕರಲ್ಲಿರುವ ಅನುಮಾನವಾಗಿದೆ.
ಈ ರೀತಿ ೧೭ ಪಕ್ಷಗಳು ಒಂದಾಗುವ ಬೆಳವಣಿಗೆಯಿಂದ ಬಿಜೆಪಿಯಲ್ಲಿ ಆತಂಕದ ಛಾಯೆ ಮೂಡುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಪ್ರತಿಪಕ್ಷಗಳಿದ್ದವು. ಏಕೆಂದರೆ, ಪ್ರತಿಪಕ್ಷ ಗಳೆಲ್ಲ ಒಂದಾಗಿ ‘ಒಬ್ಬ’ ಅಭ್ಯರ್ಥಿಯನ್ನು ಪ್ರತಿಯೊಂದು ಕ್ಷೇತ್ರದಲ್ಲಿ ನಿಲ್ಲಿಸಬೇಕು ಎನ್ನುವ ನಿಲುವು ತಾಳಿರುವುದು, ಮತ ವಿಭಜನೆಯನ್ನು ತಡೆದು ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿತ್ತು.

ಬಿಜೆಪಿ ಪರ ಮತಗಳು ಬಿಜೆಪಿಗೆ, ಬಿಜೆಪಿಯೇತರ ಮತಗಳೆಲ್ಲ ಪ್ರತಿಪಕ್ಷದ ಬೆಂಬಲಿತ ಅಭ್ಯರ್ಥಿಗೆ ಬೀಳುವುದರಿಂದ ಸಹಜವಾಗಿಯೇ ಬಿಜೆಪಿಗೆ ಕಠಿಣ ಸ್ಪರ್ಧೆ ಎದುರಾಗುತ್ತದೆ ಎನ್ನುವುದು ಪ್ರತಿಪಕ್ಷ ನಾಯಕರ ಮಾತಾಗಿದೆ. ಆದರೆ ಬಿಜೆಪಿ ನಾಯಕರು ಈ ವಿಷಯವನ್ನು, ಇನ್ನೊಂದು ಬದಿಯಲ್ಲಿ ನೋಡುತ್ತಿದ್ದು ವಿರೋಧಿಗಳೆಲ್ಲ ಒಂದಾಗಿ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಿದರೆ ಮತ ವಿಭಜನೆ ಕಡಿಮೆಯಾಗುತ್ತದೆ. ಇದರಿಂದ ತಟಸ್ಥ ನಿಲುವು ಹೊಂದಿರುವ ಹಾಗೂ ಸ್ಪರ್ಧೆಸಲು ಅವಕಾಶ ಸಿಗದೇ ಇರುವವರೆಲ್ಲ ಬಿಜೆಪಿ ಕಡೆ ವಾಲಿಸಬಹುದು. ಈ ರೀತಿ ಮಾಡುವುದರೊಂದಿಗೆ ಪಕ್ಷಕ್ಕೆ ಸಹಜ
ವಾಗಿರುವ ‘ಮೋದಿ’ ಬಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಗೆಲುವು ಬಿಜೆಪಿಯದ್ದೇ ಎನ್ನುವುದು ಆ ಪಕ್ಷದ ಆತ್ಮವಿಶ್ವಾಸವಾಗಿದೆ. ಲಾಭವಾಗುವುದು ಎನ್ನುವುದಕ್ಕೆ ಉದಾಹರಣೆಯಾಗಿ ಉತ್ತರ ಪ್ರದೇಶ, ಗುಜರಾತ್ ನಡೆದ ಚುನಾವಣೆಯ ಫಲಿತಾಂಶದ ರಿಪೋರ್ಟ್ ಕಾರ್ಡ್
ಅನ್ನು ಮುಂದಿಡುತ್ತಿದ್ದಾರೆ.

ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ಸಜ್ಜಾಗಿದ್ದ ಮಹಾಘಟನಬಂಧನದ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಬಿಜೆಪಿ ನಾಯಕ ವಿಶ್ವಾಸದಿಂದ ಇರುವುದರಲ್ಲಿ ತಪ್ಪಿಲ್ಲ ಎನ್ನುವುದು ಸತ್ಯ. ಬಿಜೆಪಿಯನ್ನು ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಲು ಬಹುತೇಕ ಪ್ರತಿಪಕ್ಷಗಳು ‘ಹೊಂದಾಣಿಕೆ’ ಮಾಡಿಕೊಳ್ಳಲು ಮುಂದಾಗಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ದೇಶದ ವಾತಾವರಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಏನೇ
ಆಗಲಿ, ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ನೆಲೆ ಇಲ್ಲದ ಹಲವು ರಾಜ್ಯಗಳಲ್ಲಿಯೂ ‘ಮೋದಿ ಹವಾ’ದಲ್ಲಿ ನೆಲಕಂಡುಕೊಂಡಿರುವ ಉದಾಹರಣೆಗಳಿವೆ.

ಈ ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ನಾಯಕತ್ವದ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದರಲ್ಲಿ ಬಿಜೆಪಿ ನರೇಂದ್ರ ಮೋದಿ ಅವರನ್ನು ತೋರಿಸುವುದು ಖಚಿತವಾಗಿದ್ದರೆ, ಪ್ರತಿಪಕ್ಷಗಳ ಘಟಬಂಧನದಲ್ಲಿ ನಾಯಕನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ವಿಲ್ಲ. ಶೀಘ್ರವೇ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳದಿದ್ದರೆ, ಬಿಜೆಪಿಗೆ ಅದುವೇ ಚುನಾವಣೆಯ ಬಹುದೊಡ್ಡ ಬ್ರಹ್ಮಾಸ್ತ್ರವಾಗುವುದರಲ್ಲಿ ಅನುಮಾನವಿಲ್ಲ.