ಸಮಕಾಲೀನ
ಪ್ರಕಾಶ್ ಶೇಷರಾಘವಾಚಾರ್
ಮೂಲಸೌಕರ್ಯ ಯೋಜನೆಗಳನ್ನು ಆರಂಭಿಸುವುದು ಎಷ್ಟು ಮುಖ್ಯವೊ ಅದನ್ನು ಪೂರ್ಣಗೊಳಿಸುವುದೂ ಅಷ್ಟೆ ಪ್ರಮುಖ ಸಂಗತಿ. ಹಾಗೆ ಪೂರ್ಣಗೊಂಡು ಜನರ ಬದುಕಿನಲ್ಲಿ ಬದಲಾವಣೆ ತಂದಾಗಲೇ ಅದು ಸಾರ್ಥಕವೆನಿಸುವುದು. ಪ್ರತಿಯೊಂದು ಸರಕಾರಗಳೂ ತಮ್ಮ ಅಧಿಕಾರಾವಧಿಯಲ್ಲಿ ನೂರಾರು ಯೋಜನೆಗಳನ್ನು ಘೋಷಿಸು ವುದು ಸಾಮಾನ್ಯ.
ಹಾಗೆಯೇ ಯುಪಿಎ ಅವಧಿಯಲ್ಲಿಯೂ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಆದರೆ, ದುರದೃಷ್ಟಕರವೆಂದರೆ ಅವುಗಳಲ್ಲಿ ಅನೇಕವು ಕಾಗದಕ್ಕೆ ಸಿಮೀತವಾಗಿದ್ದವು. ೨೦೧೧ರ ನಂತರ ಸಾಲು ಸಾಲು ಹಗರಣಗಳಿಂದ ಯುಪಿಎ ಸರಕಾರವು ಜರ್ಜರಿತವಾಗಿ ಕಳಾ ಹೀನವಾಗಿತ್ತು. ನಿಸ್ತೇಜವಾಗಿ ಐಸಿಯುನಲ್ಲಿದ್ದ ಆಡಳಿತದ ಪರಿಣಾಮ ೧೮ಲಕ್ಷ ಕೋಟಿ ರು.ಮೌಲ್ಯದ ಮೂಲಭೂತ ಸೌಕರ್ಯ ಯೋಜನೆಗಳು ಸ್ಥಗಿತಗೊಂಡಿದ್ದವು.
ಬೃಹತ್ ಯೋಜನೆಗಳನ್ನು ರೂಪಿಸಿ ತಾತ್ವಿಕ ಅಂತ್ಯಕ್ಕೆ ಕೊಂಡ್ಯೊಯಲು ದೃಢ ನಾಯಕತ್ವ ಮತ್ತು ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯ. ಅದಿಲ್ಲವಾದರೆ ಯೋಜನೆಗಳು ಸ್ಥಗಿತ ಗೊಂಡು ಅಂದಾಜಿಸಿದ ವೆಚ್ಚವು ಗಗನಕ್ಕೇರಿ ಹೋಗಿರುತ್ತದೆ. ೨೦೧೪ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಬರುತ್ತಿದ್ದಂತೆಯೇ, ಯುಪಿಎ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಹಲವು ಯೋಜನೆಗಳಿಗೆ ಮೇಜರ್ ಸರ್ಜರಿಯನ್ನು ಕೈಗೊಂಡು ಮರುಚಾಲನೆ ನೀಡಲಾಯಿತು. ಇದಕ್ಕಾಗಿಯೇ ‘ಪ್ರಗತಿ ವೇದಿಕೆ’ಯನ್ನು ಅಸ್ತಿತ್ವಕ್ಕೆ ತಂದು ಆ ಮೂಲಕ ಕುಂಟುತ್ತಿದ್ದ ಯೋಜನೆಗಳಿಗೆ ಮೋಕ್ಷ ದೊರಕಿಸಲಾಯಿತು.
ಒಂದಷ್ಟು ಉದಾಹರಣೆಗಳನ್ನು ಗಮನಿಸೋಣ: ಕಲಬುರಗಿ-ಬೀದರ್ ರೈಲು ಮಾರ್ಗ ಕಲಬುರಗಿ ಮತ್ತು ಬೀದರ್ ನಡುವಿನ ೧೧೦ಕಿ.ಮಿ. ರೈಲ್ವೆ ಲೈನ್ ಅಳವಡಿಸಲು ೨೦೦೦ನೇ ಇಸವಿಯಲ್ಲಿ ವಾಜಪೇಯಿ ಸರಕಾರದಲ್ಲಿ ಶಂಕುಸ್ಥಾಪನೆಯಾಗಿತ್ತು. ?೩೬೯ ಕೋಟಿಯ ಈ ಯೋಜನೆಯನ್ನು ನಿರೀಕ್ಷೆಯಂತೆ ಎರಡು ವರ್ಷಗಳಲ್ಲಿ ಮುಗಿಸಬೇಕಿತ್ತು. ಈ ಮಾರ್ಗ ಸಿದ್ಧವಾದರೆ ಬೆಂಗಳೂರು ಮತ್ತು ಬೀದರ್ ನಡುವಿನ ಅಂತರ ೫೫ ಕಿ.ಮೀ ಹಾಗೂ ಬೀದರ್- ಮುಂಬಯಿ ನಡುವಿನ ಅಂತರ ೧೧೫ ಕಿ.ಮೀ ಕಡಿಮೆ ಯಾಗುತ್ತಿತ್ತು.
ಅಲ್ಲದೇ ಈ ಮಾರ್ಗವು ಕಲ್ಯಾಣ ಕರ್ನಾಟಕದ ಕೈಗಾರಿಕಾ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದರೊಂದಿಗೆ ಕೃಷಿ ಉತ್ಪನ್ನಗಳ ಸಾಗಣೆಗೂ ಅನುಕೂಲಕರವಾಗಿತ್ತು. ಅನುದಾನದ ಕೊರತೆ ಮತ್ತು ಭೂಸ್ವಾಧೀನದಲ್ಲಿ ಸಮಸ್ಯೆಗಳು ಉದ್ಭವವಾಗಿ ಕಾಮಗಾರಿ ಸ್ಥಗಿತಗೊಂಡಿತು. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದ ನಂತರ ಶೇ.೫೦ರಷ್ಟು ಯೋಜನೆಯ ವೆಚ್ಚ ಭರಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದ ಮೇಲೆ ಕಾಮಗಾರಿಗೆ ವೇಗ ದೊರೆಯಿತು.
ಕಲಬುರಗಿ ಭಾಗದಲ್ಲಿ ಭೂಸ್ವಾಧೀನ ಸಂಬಂಧ ವಿವಾದ ನ್ಯಾಯಲಯ ತಲುಪಿ ಕಾಮಗಾರಿಯು ಮತ್ತೆ ಸ್ಥಗಿತಗೊಂಡಿತು. ಸ್ವತಃ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾದಾಗಲೂ ಸಮಸ್ಯೆಗಳನ್ನು ಬಗೆಹರಿಸಿ ಯೋಜನೆಯನ್ನು ದಡ ಸೇರಿಸಲು ವಿಫಲ
ರಾದರು. ೨೦೧೪ರಲ್ಲಿ ಮೋದಿ ಸರಕಾರ ಬಂದ ತರುವಾಯ ಪರಿಸ್ಥಿತಿ ಬದಲಾಯಿತು. ಕೇಂದ್ರ ಸರಕಾರ ಈ ಯೋಜನೆಯನ್ನು ಪೂರ್ಣಗೊಳಿಸಲು ಆದ್ಯತೆ ನೀಡಿತು. ಸಮಸ್ಯೆಗಳು ಬಗೆಹರಿಸಿ ಭೂಸ್ವಾಽನ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾ ಯಿತು. ಆದರೆ, ಈ ವೇಳೆಗೆ ?೩೬೯ ಕೋಟಿಯ ಯೋಜನಾ ವೆಚ್ಚ ?೧,೫೪೨ ಕೋಟಿ ತಲುಪಿತ್ತು. ಅಂತಿಮವಾಗಿ ಕಾಂಗ್ರೆಸ್ ಸರಕಾರವು ಪೂರ್ಣ ಮಾಡದ ಈ ಯೋಜನೆ ೨೦೧೬ರಲ್ಲಿ ಮುಕ್ತಾಯವಾಗಿ, ಪ್ರಧಾನಿ ಮೋದಿಯವರು ೨೦೧೬ ರಲ್ಲಿ ಅಧಿಕೃತ ವಾಗಿ ಲೋಕಾರ್ಪಣೆ ಮಾಡಿದರು.
ಪಾಕ್ಯಾಂಗ್ ವಿಮಾನ ನಿಲ್ದಾಣ: ಸಿಕ್ಕಿಂನ ಈ ವಿಮಾನ ನಿಲ್ದಾಣದ ಕಾಮಗಾರಿಗೆ ೨೦೦೯ರಲ್ಲಿ ವಿಮಾನಯಾನ ಸಚಿವ ಪ್ರಫುಲ್ಲ ಪಟೇಲ್ ಶಂಕುಸ್ಥಾಪನೆ ನೆರವೇರಿಸಿದ್ದರು. ?೨೬೦ ಕೋಟಿ ಅಂದಾಜು ವೆಚ್ಚದಲ್ಲಿ ೨೦೧೨ರಲ್ಲಿ ಮುಗಿಯಬೇಕಿದ್ದ ಯೋಜನೆಯಡಿ, ಚೀನಾ ಗಡಿಗೆ ೬೦ಕಿಮಿ ದೂರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜಿಸಿಲಾಗಿತ್ತು. ಸೈನ್ಯದ ಬಳಕೆಗೂ ಅವಶ್ಯವಿದ್ದ ಕಾರಣ ದೇಶದ ರಕ್ಷಣಾ ದೃಷ್ಟಿಯಿಂದಲೂ ಇದು ಮಹತ್ವ ಪೂರ್ಣ. ಆದರೆ, ಭೂಸ್ವಾಧೀನ ಪರಿಹಾರದ ವಿಚಾರದಲ್ಲಿ ತಕರಾರು ಎದ್ದು ಕಾಮಗಾರಿ ಸ್ಥಗಿತಗೊಂಡಿತು. ೨೦೧೫ರಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗೆ ಪುನಃಚಾಲನೆ ದೊರೆತು, ೨೦೧೮ ಅಕ್ಟೋಬರ್ ನಲ್ಲಿ ಮೊದಲನೇ ವಿಮಾನ ಸೇವೆಯೂ ಆರಂಭವಾಗಿದೆ. ಇದು ಮೋದಿ ಸರಕಾರದ ಇಚ್ಛಾಶಕ್ತಿಗೆ ಮತ್ತೊಂದು ಉದಾಹರಣೆ.
ಮನೋಹರ (ಮೋಪಾ) ವಿಮಾನ ನಿಲ್ದಾಣ: ೨೦೦೦ನೇ ಇಸವಿಯಲ್ಲಿಯೇ ವಾಜಪೇಯಿಯವರು ಗೋವಾದ ಮೋಪಾದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ತಾತ್ವಿಕ ಒಪ್ಪಿಗೆ ನೀಡಿದ್ದರು. ಸರಕಾರ ಬದಲಾದ ತರುವಾಯ ಯೋಜನೆಯ ಪ್ರಗತಿಗೆ ಹಿನ್ನಡೆ ಯಾಗಿತ್ತು. ಯಥಾ ಪ್ರಕಾರ ಭೂ ಸ್ವಾಧೀನ ಮತ್ತು ಸ್ಥಳೀಯರ ವಿರೋಧದಿಂದ ಯುಪಿಎ ಸರಕಾರವು ಯೋಜನೆಯನ್ನು ಮುಂದೆ ತೆಗೆದುಕೊಂಡು ಹೋಗಲು ವಿಫಲವಾಯಿತು.
ಮೋದಿ ಸರಕಾರವು ಎಲ್ಲ ಸಮಸ್ಯೆಯನ್ನು ಬಗೆಹರಿಸಿ ೨೦೧೬ರಲ್ಲಿ ಪ್ರಧಾನಿಯವರು ಭೂಮಿ ಪೂಜೆ ಕೈಗೊಂಡರು. ಹದಿನೈದು ವರ್ಷ ತಡವಾಗಿದ್ದ ಯೋಜನೆಯನ್ನು ಆರು ವರ್ಷದಲ್ಲಿ ಪೂರ್ಣಗೊಳಿಸಿ ೨೦೨೨ರಲ್ಲಿ ಮೋದಿಯವರು ವಿಮಾನ ನಿಲ್ದಾಣ ವನ್ನು ಉದ್ಘಾಟನೆ ಮಾಡಿದರು.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇ: ೨೦೧೧ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಚೆನ್ನೈ ಎಕ್ ಪ್ರಸ್ ಹೈವೇ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುತ್ತದೆ. ೨೦೧೨ರೊಳಗೆ ಸಿದ್ಧವಾಗುವ ಗುರಿಯಾಗಿತ್ತು. ಆದರೆ ಯೋಜನೆಯು ಆರಂಭವೇ ಆಗಲಿಲ್ಲ. ೨೦೧೪ರಲ್ಲಿ ಸರಕಾರ ಬದಲಾಗಿ ಮತ್ತೆ ಯೋಜನೆಗೆ ಚಾಲನೆ ದೊರೆಯಿತು. ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರವನ್ನು ೨೬೩ಕಿ. ಮೀಗೆ ಇಳಿಸುವ ಈ ಎಂಟು ಲೇನ್ ಹೈವೇಯು ಕೈಗಾರಿಕೆ ಬೆಳವಣಿಗೆಗೆ ಮತ್ತು ಸರಕು ಸಾಗಣೆಯ ನಿಟ್ಟಿನಲ್ಲಿ ಅತ್ಯಂತ ಪ್ರಮುಖವಾದ್ದು. ಈ ಮಹತ್ವಪೂರ್ಣ ಯೋಜನೆಗೆ ೨೦೨೧ರಲ್ಲಿ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿ ದರು.
ಮೂರು ರಾಜ್ಯಗಳನ್ನು ಹಾದು ಹೋಗುವ ಈ ರಸ್ತೆಯು ೨೦೨೪ರ ಕೊನೆಯಲ್ಲಿ ಲೋಕಾರ್ಪಣೆಗೆ ಸಿದ್ಧವಾಗಲಿದೆ. ಬೋಗಿಬಿಲ್ ಸೇತುವೆ: ಅಸ್ಸಾಂನ ಬ್ರಹ್ಮಪುತ್ರ ನದಿಯ ಮೇಲೆ ೪.೯೪ಕಿ.ಮಿ. ಉದ್ದದ ಈ ಸೇತುವೆಯ ನಿರ್ಮಾಣದ ಶಂಕುಸ್ಥಾಪನೆಯನ್ನು ೧೯೯೭ರಲ್ಲಿ ಅಂದಿನ ಪ್ರಧಾನಿ ದೇವೆಗೌಡರು ನೆರವೇರಿಸಿದ್ದರು. ೨೦೦೨ರಲ್ಲಿ ವಾಜಪೇಯಿಯವರು ಇದರ ಕಾಮಗಾರಿ ಪೂಜೆ ಯನ್ನು ಕೈಗೊಂಡರು. ಅಸ್ಸಾಂನ ಧೇಮಾಜಿ ಜಿ ಮತ್ತು ದಿಬ್ರುಗಢ ಜಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯು ೧೯೯೭ರಲ್ಲಿ ?೧,೭೬೦ ಕೋಟಿ ವೆಚ್ಚದಲ್ಲಿ ಆರಂಭವಾಗಿ ೨೦೧೮ರಲ್ಲಿ ಮುಕ್ತಾಯವಾದಾಗ ನಿರ್ಮಾಣ ವೆಚ್ಚವು ?೬ಸಾವಿರ ಕೋಟಿ ದಾಟಿತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು ಕೂಡ ಸೇತುವೆಯ
ಕಾಮಗಾರಿ ಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಮೋದಿಯವರು ತಮ್ಮ ‘ಪ್ರಗತಿ ವೇದಿಕೆ’ಯ ಮೂಲಕ ಇದರ ತ್ವರಿತ ನಿರ್ಮಾಣಕ್ಕೆ ಚಾಲನೆ ನೀಡಿ ೧೭ ವರ್ಷದಿಂದ ಮುಗಿಯದ ಕಾಮಗಾರಿಯನ್ನು ನಾಲ್ಕೇ ವರ್ಷದಲ್ಲಿ ಮುಗಿಸಿ ೨೦೧೮, ಡಿಸೆಂಬರ್ ೨೫ ರಂದು ಸೇತುವೆಯ ಉದ್ಘಾಟನೆಯನ್ನು ಮೋದಿ ಯವರೇ ನೆರವೇರಿಸಿದರು.
ಸರಯೂ ಕಾಲುವೆ ರಾಷ್ಟ್ರೀಯ ಯೋಜನೆ: ಉತ್ತರ ಪ್ರದೇಶದ ಬಹ್ರೈಚ್ ಜಿಯಲ್ಲಿ ೧೯೭೮ರಲ್ಲಿ ಇಂದಿರಾ ಗಾಂಧಿಯವರು ಈ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಿದ್ದರು. ಆರಂಭವಾದಾಗ ಇದರ ವೆಚ್ಚವು ಕೇವಲ ?೧೦೦ಕೋಟಿಯಾಗಿತ್ತು. ಬಲರಾಮಪುರ ಸೇರಿ ೯ ಜಿಗಳಲ್ಲಿ ೧೫ ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ದೊರೆತು ೩೦ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲ ವಾಗುವ ಯೋಜನೆಯು ಇದಾಗಿತ್ತು. ದುರ್ದೈವ ೩೮ ವರ್ಷ ಕಳೆದರೂ ಯೋಜನೆ ಪೂರ್ಣವಾಗಲೇ ಇಲ್ಲ. ಕೊನೆಗೆ ಇದನ್ನು ತ್ವರಿತವಾಗಿ ಮುಗಿಸಲು ಯೋಜಿಸಿದ ಪ್ರಧಾನಿ ಮೋದಿ ಸರಕಾರ, ೨೦೧೭ ರಿಂದ ೨೦೨೧ರ ಅವಧಿಯಲ್ಲಿ ?೪,೬೦೦ ಕೋಟಿ ಹಣವನ್ನು ಒದಗಿಸಿದರು. ೪೩ ವರ್ಷಗಳ ನಂತರ ಯೋಜನೆಗೆ ?೯,೮೦೦ಕೋಟಿ ವೆಚ್ಚವಾಯಿತು. ೨೦೨೧ರಲ್ಲಿ ಮೋದಿಯವರು ಈ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.
ಬೆಂಗಳೂರು – ಹಾಸನ ರೈಲು: ೧೯೯೬ರಲ್ಲಿ ದೇವೆಗೌಡರು ಪ್ರಧಾನಿಯಾಗಿದ್ದಾಗ ಬೆಂಗಳೂರು-ಹಾಸನ ನಡುವಿನ ರೈಲು
ಮಾರ್ಗಕ್ಕೆ ಚಾಲನೆ ನೀಡಿದ್ದರು. ?೨೯೫ಕೋಟಿ ಅಂದಾಜು ವೆಚ್ಚದ ಯೋಜನೆ, ಅನೇಕ ಸಮಸ್ಯೆಗಳನ್ನು ಎದುರಿಸಿತು. ಅನು
ದಾನದ ಅಭಾವ, ಭೂಸ್ವಾಽನ ಕಂಟಕ ಮತ್ತು ಕುಣಿಗಲ್ ಸ್ಟಡ್ ಫಾರಂನವರ ತೆಗೆದ ತಕರಾರು… ಹೀಗೆ ಹಲವಾರು ಕಾರಣಗಳಿಗೆ ಯೋಜನೆಯು ಕುಂಟುತ್ತ ಸಾಗಿತು. ೨೧ವರ್ಷ ದಿಂದ ನನೆಗುದಿಯಲ್ಲಿದ್ದ ಯೋಜನೆಗೆ ಕೇಂದ್ರದಲ್ಲಿ ಮೋದಿ ಸರಕಾರ ಬಂದ ತರುವಾಯ ಕಾಯಕಲ್ಪ ದೊರೆಯಿತು. ಕೊನೆಗೂ ೨೦೧೭ರಲ್ಲಿ ?೧,೩೦೦ ವೆಚ್ಚವಾಗಿ ಪೂರ್ಣಗೊಂಡಿದೆ.
ಭೂಪೇನ್ ಹಜಾರಿಕ ಬ್ರಿಡ್ಜ್: ಅಸ್ಸಾಂನ ಅರುಣಾಚಲ ಪ್ರದೇಶ ವನ್ನು ಜೋಡಿಸುವ ೯.೧೫ಕಿಮಿ ಉದ್ದದ ಈ ಸೇತುವೆ ಯೋಜನೆ ರೂಪಗೊಂಡಿದ್ದು ೨೦೦೩ರಲ್ಲಿ. ೨೦೧೧ರಲ್ಲಿ ನಿರ್ಮಾಣ ಆರಂಭವಾಗಿ ಆಮೆ ವೇಗದಲ್ಲಿ ಕಾಮಗಾರಿ ನಡೆಯುತ್ತಿತ್ತು. ಸರಕಾರ ಬದಲಾದ ಮೇಲೆ ಕಾಮಗಾರಿ ವೇಗ ಪಡೆದು ೨೦೧೭ರಲ್ಲಿ ಲೋಕಾರ್ಪಣೆಯಾಯಿತು.
ದೆಹಲಿ- ಮೀರತ್ ಎಕ್ಸ್‌ಪ್ರೆಸ್ ವೇ: ದೆಹಲಿ ಮತ್ತು ಮೀರತ್ ನಡುವಿನ ೯೬ಕಿಮಿ ರಸ್ತೆಯನ್ನು ಎಕ್ಸ್‌ಪ್ರೆಸ್ ವೇಯನ್ನಾಗಿ
ಪರಿವರ್ತಿಸಲು ೧೯೯೯ರಲ್ಲಿ ಮೊದಲ ಬಾರಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. ೨೦೦೬ ಕೇಂದ್ರ ಬಜೆಟ್‌ನಲ್ಲಿ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಯೋಜನೆಯನ್ನು ದೇಶದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ೧೦೦೦ಕಿ.ಮೀ ಎಕ್ಸ್ ಪ್ರೆಸ್ ವೇಯಲ್ಲಿ ಸೇರ್ಪಡೆ ಮಾಡಿದ್ದರು. ಆದರೆ ನಾನಾ ಕಾರಣಗಳಿಗೆ ಯೋಜನೆ ಮುಂದೆಯೇ ಸಾಗುವುದಿಲ್ಲ.
ಸಮಸ್ಯೆಗಳನ್ನು ಬಗೆಹರಿಸಿ ೨೦೧೫ ರಲ್ಲಿ ಮೋದಿಯವರು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ೬ ರಿಂದ ೧೪ ಲೇನ್
ಗೆ ವಿಸ್ತರಣೆ ಮಾಡಬಹುದಾದ ಎಕ್ಸ್‌ಪ್ರೆಸ್ ವೇ ೨೦೨೧ರಲ್ಲಿ ಪೂರ್ಣಗೊಂಡು ಪ್ರಧಾನಿ ಮೋದಿಯವರೇ ಉದ್ಘಾಟನೆ ಮಾಡಿದರು. ಹತ್ತು ವರ್ಷದಲ್ಲಿ ಮಾಡಲಾಗದ್ದನ್ನು ಮೋದಿಯವರು ಐದು ವರ್ಷದಲ್ಲಿ ಮಾಡಿ ತೋರಿಸಿದ್ದರು.
ಯೋಜನೆಗಳು ಬದ್ಧತೆಯಿಂದ ಅನುಷ್ಠಾನಕ್ಕೆ ತಂದರೆ ಸಾವಿರಾರು ಕೋಟಿ ತೆರಿಗೆ ಹಣದ ಉಳಿತಾಯವಾಗಿ ಅದರ ಲಾಭ ಜನತೆಗೆ ತಲಪುತ್ತದೆ. ಈ ನಿಟ್ಟಿನಲ್ಲಿ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆಯನ್ನೂ ಮಾಡುತ್ತಿರುವ ಕೀರ್ತಿಯು ಮೋದಿ ಸರಕಾರಕ್ಕೆ ಸಲ್ಲುತ್ತದೆ.