Saturday, 14th December 2024

ಮೋದಿ ಹೆಚ್ಚೋ? ಹೀರಾಬೇನ್ ಹೆಚ್ಚೋ ?

ಸಂಸ್ಮರಣೆ

ಡಾ.ಗೀತಾ ರಾಮಾನುಜಂ

ಅಬ್ಬಾ! ಎಂಥಾ ಸರಳತೆ, ಎಂಥಾ ನಿರಾಡಂಬರ, ಎಂಥಾ ನಿಸ್ವಾರ್ಥ, ಎಂಥಾ ನಿಷ್ಕಾಮ ವ್ಯಕ್ತಿತ್ವ. ಮಗ ಹೆಚ್ಚೋ ತಾಯಿ ಹೆಚ್ಚೋ ಎಂಬಂತೆ ಪ್ರಧಾನಮಂತ್ರಿಯವರ ತಾಯಿಯ ಅಂತ್ಯಕ್ರಿಯೆ ಇಡೀ ನಾಡಿಗಷ್ಟೆ ಅಲ್ಲ ಇಡೀ ವಿಶ್ವಕ್ಕೆ ಇದೊಂದು ಅಪೂರ್ವವಾದ ಸಂದೇಶ.

ದೇಶದ ಪ್ರಧಾನಿ ಸ್ಥಾನ ಬಯಸಿ, ಬಳಲಿ ಬೆಂದರೂ ಸಿಗುವಂಥದಲ್ಲ. ಅದಕ್ಕೆ ಯೋಗವಿರಬೇಕು. ಆದರೆ ನಮ್ಮ ಪ್ರಧಾನಿಯವರು ಬದುಕನ್ನು ಎಳೆಯ ಬಾಲಕನಾಗಿ, ಬೆಳೆದ ಯುವಕನಾಗಿ, ತಳೆದ ನಾಯಕ ಸ್ಥಾನಮಾನಗಳ ವ್ಯಕ್ತಿಯಾಗಿ ರೂಪಿಸಿಕೊಂಡ ಶ್ರಮ, ಶ್ರದ್ಧೆ, ಶಿಸ್ತಿನ ಬದುಕಿನ ‘ಯೋಗಿ’ ಎಂಬುದಕ್ಕೆ ನಾಂದಿಯಾಗಿ, ಅದೃಷ್ಟವೆಂಬುದಕ್ಕೆ ’’Harder you work, the greater you realise the luck’ ಎಂಬುದಕ್ಕೆ ಪ್ರತೀಕವಾಗಿರುವ ನಾಯಕ.

ಇಂತಹ ನಾಯಕನಿಗೆ ಜನ್ಮವಿತ್ತ ತಾಯಿ ಮಹಾತಾಯಿ ಹೀರಾಬೇನ್. ಇಂಥ ತಾಯಿಯ ಅಂತ್ಯಕ್ರಿಯೆ ನಿಜಕ್ಕೂ ಸಂದೇಶಾತ್ಮ ವಾದದ್ದು. ಬದುಕು, ಬಾಳು, ನಿಧನ ಈ ಮೂರರಲ್ಲು ಸರಳತೆಯನ್ನು ಮೈಗೂಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಾಧ್ಯ? ಇಲ್ಲಿ ನಮಗೆ ಮೂಡುವ ಪ್ರಶ್ನೆ, ಇದು ಮಗನ ಸರಳತೆಯೊ? ಅಥವಾ ತಾಯಿಯ ಸರಳತೆಯೊ? ಮಗನ ನಿಸ್ವಾರ್ಥವೋ ಅಥವ ತಾಯಿಯ ನಿಸ್ವಾಥವೋ? ನಿಸ್ವಾರ್ಥ ಮತ್ತು ಸರಳತೆಯನ್ನು ಮೀರಿಸಿದ್ದು ತಾಯಿಯ ವಿರಕ್ತಿ ಮತ್ತು ಸಂತೃಪಿಯ ಬದುಕು.

ಸಿಕ್ಕಿದಷ್ಟರಲ್ಲೇ ಬದುಕುವಂತಹ ಮನೋವೈಶಾಲ್ಯತೆ ಇರುವಂತಹ ತಾಯಿಯನ್ನು ಪಡೆದ ನಮ್ಮ ಪ್ರಧಾನಮಂತ್ರಿ ಮೋದಿಯೇ ಧನ್ಯ. ಇಂತಹ ಮಹಾನ್ ತಾಯಿಯನ್ನು ಪಡೆದದ್ದಕ್ಕೆ ಅವರಲ್ಲಿ ಯೋಗಿಯ ಗುಣಗಳು ಮೈಗೂಡಿಕೊಂಡಿರುವುದು. ಇಂತಹ ಮಹಾತಾಯಿಯನ್ನು ಪಡೆದಿರುವುದಕ್ಕೆ ಅವರು ಅದೃಷ್ಟವಂತರು ಸಹ. ತಾಯಿಯ ಕಷ್ಟ-ಕಾರ್ಪಣ್ಯದ ಬದುಕನ್ನು ಕಂಡರಿತು ಯೋಗಿ ಮತ್ತು ಅದೃಷ್ಟ ಇವೆರಡೂ ಕೂಡಿಬಂದಿದೆ.

ಯೋಗಿ ಅಂದರೆ ಕರ್ಮಯೋಗಿ ಆದ್ದರಿಂದ ನಮ್ಮ ದೇಶಕ್ಕಷ್ಟೆ ಅಲ್ಲ, ಇಡೀ ಮಾನವ ಸಮೂಹಕ್ಕೆ ಇದೊಂದು ಉತ್ತಮ ಸಂದೇಶ. ಅಪೂರ್ವವಾದ ಸಾವು ಒಂದಾದರೆ, ಅಂತ್ಯ ಕ್ರಿಯೆಯಂತೂ ನಿಜಕ್ಕೂ ನಾವು ಕಂಡರಿಯದ ಅನುಭವ, ಆದರೆ ನಾವೆಲ್ಲರು ಇಂದು ಕಂಡರಿ ಯಬೇಕಾದ ಅಂತ್ಯಕ್ರಿಯೆಯ ಸಂದೇಶ. ಇದನ್ನು ನಾವೆಲ್ಲರು ಇಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮದಲ್ಲಿ ಇಡೀ ದಿನ ಕೆಲಸವನ್ನೆಲ್ಲಾ ಬಿಟ್ಟು ಅದರ ಮುಂದೆ ಕುಳಿತು ನಾವು ಕೂಡ ಕಾಲಹರಣ ಮಾಡ್ತೀವಿ. ಈ ಹಿನ್ನೆಲೆ
ಯಲ್ಲಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದಹಾಗೆ.

ಯದ್ಯದಾಚರತಿ ಶ್ರೇಷ್ಠಃ ತತ್ ತತ್ ಏವ ಇತರಃ ಜನಃ |
ಸ ಯತ್‌ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ||

ಸಮಾಜದ ಉತ್ಕೃಷ್ಟ ವ್ಯಕ್ತಿಗಳು ನಡೆದ ದಾರಿಯೇ ಸಮಾಜದ ಇತರರ ದಾರಿಯಾಗುವುದು. ಅಂದರೆ ಶ್ರೇಷ್ಠ ವ್ಯಕ್ತಿಗಳು ಗುಡಿಗೋಪುರವಿದ್ದಂತೆ. ಅವರನ್ನು ಹಾಗೂ ಅವರ ವ್ಯಕ್ತಿತ್ವವನ್ನು ಇತರರು ಅನುಕರಣೆ ಮಾಡುವುದು ಅತ್ಯವಶ್ಯ. ಆದ್ದರಿಂದ ಶ್ರೇಷ್ಠ ವ್ಯಕ್ತಿಗಳೆನಿಸಿಕೊಂಡವರ ಜೀವನ ಧರ್ಮ ಹಾಗು ಜೀವನ ದರ್ಶನ ಅತಿ ಪ್ರಬಲ ಹಾಗೂ ಪರಿಣಾಮ ಬೀರುವಂತಹದ್ದು. ಮಹಾಬುದ್ಧಿಶಾಲಿಗಳಾದವರೂ ಯಾವುದು ಮಾಡತಕ್ಕದ್ದು, ಯಾವುದು ಬಿಡತಕ್ಕದ್ದು ಎಂಬ ವಿಷಯದಲ್ಲಿ ಮೂಢರಾಗಿ ಬಿಡುತ್ತಾರೆ ಎಂಬ ಕೃಷ್ಣನ ನುಡಿಯಲ್ಲಿ ಅಡಗಿರುವ ಹಿನ್ನೆಲೆಯನ್ನು ಅರಿಯಬೇಕಾದ್ದು ಅತ್ಯಗತ್ಯ.

ಗೀತೆಯ ಪ್ರಕಾರ ಧರ್ಮ, ಕಾಮ, ಅರ್ಥಾಸಕ್ತಿಗಳನ್ನು ಪೋಷಿಸಲೂ ಬೇಕು, ನಿಗ್ರಹಿಸಲೂ ಬೇಕು. ಆದರೆ ಪೋಷಣೆ ನಿಲ್ಲ ಬೇಕಾದ್ದು ಎಲ್ಲಿ? ನಿಗ್ರಹ ಮೊದಲಾಗಬೇಕಾದ್ದು ಎಲ್ಲಿ? ಈ ಗೊಂದಲದಿಂದ ಉಳಿವಿನ ಅರಿವು ಸರ್ವರಿಗೂ ಅವರವರ
ಕ್ಷೇತ್ರದಲ್ಲಿ, ಸ್ಥಾನದಲ್ಲಿ, ಬದುಕಿನಲ್ಲಿ ಕಂಡುಕೊಂಡು ವಿಚಲಿತರಾಗದೇ ಬದುಕುವ ಅಂತರಂಗ ತಾಟಸ್ಥ್ಯ ಮಾರ್ಗವೇ ಬದುಕಾಗಬೇಕು. ಇದೆ ಈ ಮಹಾತಾಯಿಯ ಅಂತಃರಂಗ ತಾಟಸ್ಥ್ಯ.

ಅಂತ್ಯಕ್ರಿಯೆ ಎಂಬುದು ಕುಟುಂಬವರ್ಗದವರಿಗೆ ಸೇರಿದ್ದು ಎಂದು ನಿರೂಪಿಸಿರುವ ಮೋದಿಜಿ ಅವರ ಸಂದೇಶ ಖಚಿತವಾಗಿದೆ. ಅದೂ ಅಲ್ಲದೇ ಎಷ್ಟು ಕಡಿಮೆ ಅವಧಿಯಲ್ಲಿ ಆ ಕೈಂಕರ್ಯವನ್ನು ಮುಗಿಸಬಹುದೆಂಬುದನ್ನು ಸಹ ತಿಳಿಸಿದ್ದಾರೆ. ಆ ದೇವರಲ್ಲಿ ಪರಮ ಭಕ್ತಿ ಉಳ್ಳವರಾಗಿದ್ದರೂ ಅಂತ್ಯಕ್ರಿಯೆಯಲ್ಲಿ ತಾಯಿಯ ಬಗ್ಗೆ ಇದ್ದ ಅಂತಃಕರಣ ಕಂಡಿತೇ ಹೊರತು, ಸ್ಥಾನಮಾನದ ಆಡಂಬರ ಕಾಣಲಿಲ್ಲ. ಇದಲ್ಲವೇ ನಿಜವಾದ ಸಂಸ್ಕೃತಿ? ಯಾವ ವ್ಯಕ್ತಿತ್ವವೇ ಆಗಲಿ ಅವರಲ್ಲಿರುವ ಒಳ್ಳೆಯತನವನ್ನು ಗುರುತಿಸುವುದೇ ಮಾನವಧರ್ಮ. ಅದನ್ನ ರಿತು ಪರಿಪಾಲಿಸುವುದೇ ಜೀವನ ಧರ್ಮ.

ಸಿರುನಿಂತ ತಾಯಿಯ ದೇಹಕ್ಕೆ ತಾವೇ ಹೆಗಲು ಕೊಟ್ಟು ಮಮಕಾರದ ಉಸಿರಾಡಿದ ಪ್ರಧಾನಮಂತ್ರಿಯನ್ನು ಕಂಡು ಜಗತ್ತು ಬೆರಗಾಗಿದೆ. ಗಾಂಧೀಜಿಯವರು ಕೂಡ ಗುಜರಾತಿನವರೇ. ಅವರು ಆಡಂಬರದ ಬಟ್ಟೆಗಳನ್ನು ತೊರೆದು ಸಾಮಾನ್ಯ ಉಡುಪನ್ನು ಸ್ವೀಕರಿಸಿದಾಗ ಅವರನ್ನು ಟೀಕಿಸದವರಿಲ್ಲ. ಈಗಲೂ ಸಹ ಅದೇ ರೀತಿ ಕೆಲವು ಧ್ವನಿಗಳು ಮೂಡಿದವು. ಇವೆಲ್ಲ ತೋರುವಿಕೆಗಾಗಿ, ನಾಡಿನ ಜನರನ್ನು ಮೆಚಿ ಸುವುದಕ್ಕಾಗಿ ಎಂಬ ಮಾತುಗಳು ನೋವನ್ನುಂಟುಮಾಡಿತು.

ಶತಾಯುಷಿಯಾದ ತಾಯಿ, ಮಗ ಪ್ರಧಾನ ಮಂತ್ರಿಯಾದಾಗ ತಾವು ಪಟ್ಟ ಕಷ್ಟವೆಲ್ಲ ಸಾಕು, ಸ್ವಲ ದಿನವಾದರೂ ನಿರಾಳವಾಗಿ ಬದುಕೋಣವೆಂದು ಮಗನೊಡನೆ ಬದುಕಬಹುದಿತ್ತಲ್ಲವೇ? ತಾಯಿಯನ್ನು ತನ್ನೊಡನೆ ಇಟ್ಟುಕೊಳ್ಳಬೇಕೆಂಬ ಹಂಬಲವಾಗಲಿ, ಬಯಕೆಯಾಗಲಿ ಮೋದಿಗೆ ಇದ್ದಿರಬೇಕಲ್ಲವೇ? ಆದರೆ ಆ ಮಹಾತಾಯಿಗೆ ಬರಬೇಕೆನಿಸಿಲ್ಲವೇಕೆ? ಪ್ರಧಾನ
ಮಂತ್ರಿಯ ತಾಯಿಯಂದು ಪೋಷಿಸಿಕೊಂಡು ಆಡಂಬರ ಬದುಕನ್ನೇಕೆ ಆ ತಾಯಿ ತ್ಯಜಿಸಿದಳು. ಅಷ್ಟೆ ಅಲ್ಲ ಮಗನ ಯಾವ ದಿಟ ಹೆಜ್ಜೆಗಳಿಗೂ ಮೂಗುತೂರಿಸದೇ ಮಕ್ಕಳನ್ನು ಅವರವರ ಕನಸನ್ನು ಕಾಣಲು ಬಿಟ್ಟಂಥ ಆ ತಾಯಿ ಹೆಚ್ಚಲ್ಲವೇ? ಸುಖದ ಸುಪ್ಪತ್ತಿಗೆ ಎಂದರೆ ಯಾರಿಗೆ ಬೇಡವೆನಿಸುತ್ತದೆ ಹೇಳಿ? ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಾದದರೆ ಸುಖದ ಸುಪ್ಪತ್ತಿಗೆಯ ಆಸೆ ಭೈರಾಗಿಯನ್ನೇ ಬಿಡುವದಿಲ ವೆಂದ ಮೇಲೆ ನಾವೆಲ್ಲ ಯಾವ ಲೆಕ್ಕಕ್ಕೆ? ಆದರೆ ಶಾಲಾ ಕದವನ್ನೇ ತಟ್ಟದ ತಾಯಿ, ಶಿಕ್ಷಣವೆಂಬ ಸೊಲ್ಲು ಕಿವಿಯಲಿ ಬೀಳದ ಹೆಣ್ಣು, ಸರ್ವ ಮಿತಿಯನ್ನು ಮೀರಿ ನಿಂತ ಪ್ರಗತಿಪರ, ಸುಶಿಕ್ಷಿತ ಹಾಗೂ ಸಂಸ್ಕಾರ ಉಳ್ಳ ಹೆಣ್ಣು. ಆಗಾಗಿ ಒಮ್ಮೆಯಾದರು ಮಗ ಪ್ರಧಾನಮಂತ್ರಿಯ ಗೃಹದ ಬಗ್ಗೆ ಸೆಳೆತ ಬರಲಿಲ್ಲವಲ್ಲವೇ? ಇದು ಅಪೂರ್ವ ವ್ಯಕ್ತಿತ್ವ ಅಲ್ಲವೇ?
ಎಲ್ಲ ಸ್ಥಾನಮಾನಗಳನ್ನು ನಾಯಕರು ಅಲಂಕರಿಸುವುದೇ ಕುಟುಂಬಸ್ಥರನ್ನು, ಸಹಚರರನ್ನು ಸುಖಿಸುವಂತೆ iಡಿ ಪ್ರತಿಷ್ಠೆ ಯಿಂದ ಬದುಕಲೆಂಬಂತಾಗಿದೆ.

ಇದಕ್ಕೆ ಮೋದಿಯವರ ತದ್ವಿರುದ್ಧವಾದ ನಡೆ ಅಸಹಜ. ಅವರ ಈ ನಡೆಯೇ ಅಪ್ರತಿಮ ಜೀವನಧರ್ಮ. ದೇಶಕ್ಕಾಗಿ ನಿಂತ ವ್ಯಕ್ತಿಗೆ, ದೇಶ ಮೊದಲು, ಕುಟುಂಬ ನಂತರವೆಂಬುದು ತೋರ್ಪಡಿಸಿದ್ದಾರೆ. ಆದರೆ ಇದಕ್ಕೆ ಕಾರಣ ಅವರ ತಾಯಿಯ ಬದುಕು, ಚಿಂತನೆ ಮತ್ತು ಸಂಸ್ಕೃತಿ. ಕರ್ತವ್ಯಪರ ನಡೆ ಬೇರೆ, ಧರ್ಮಪರ ಬದುಕು ಬೇರೆ. ಕರ್ತವ್ಯ ಮತ್ತು ಧರ್ಮ ಎರಡನ್ನು ಮೈಗೂಡಿಸಿಕೊಂಡು ಸಾಗುವುದು ಸರಳಸಾಧ್ಯವಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರ ತಾಯಿಯ ಅಂತ್ಯಕ್ರಿಯೆ ನಮಗೆ ಬಹಳ ದೊಡ್ಡ ಸಂದೇಶ ನೀಡುತ್ತದೆ.

ಅಲ್ಲದೆ ತಾಯಿ ಮಗ ಇಬ್ಬರನ್ನೂ ತೂಗಿ ನೋಡಿದರೆ ತಾಯಿ ಹೆಚ್ಚೋ, ಮಗ ಹೆಚ್ಚೋ ಎಂದಾಗ ಇಲ್ಲಿ ತಾಯಿಯೆ ಹೆಚ್ಚಾಗು ವುದು. ಆ ತಾಯಿಯ ಬದುಕೆ ಈ ಮಗನಿಗೆ ಇಷ್ಟರ ಮಟ್ಟಿಗೆ ಬದುಕಿನ ಸಂಸ್ಕೃತಿಯನ್ನು ಕೊಟ್ಟಿದೆ. ಶ್ರೀ ಶಾರದಾಮಾತೆ ರಾಮಕೃಷ್ಣ ಪರಮಹಂಸರವರ ಆಂತರಿಕ ಶಕ್ತಿದೇವತೆಯಾದ ಹಾಗೆ, ಮಾತೆ ಹೀರಾಬೇನ್‌ನವರು ಮೋದಿಜಿಯವರ ಜನ್ಮ ನೀಡಿದ ತಾಯಿಯಾಗಿ, ಆಂತರಿಕವಾಗಿ, ಧರ್ಮಸ್ವರೂಪಿಣಿಯಾಗಿ ಮಾರ್ಗದರ್ಶನ ನೀಡಿದ ಮಹಾನ್ ತಾಯಿ. ಅದಕ್ಕೆ ಹೇಳುವುದು. ನಾಮ ಹೇಗೆ ಬದುಕುತ್ತೇವೆ ಎಂಬುದೇ ಒಂದು ಸಂದೇಶವಾಗಬೇಕೆಂದು.

ಮೋದಿಗೆ ಜನ್ಮವಿತ್ತ ಆ ಮಹಾ ತಾಯಿಗೆ ಎಲ್ಲ ತಾಯಿಂದಿರ ಪರವಾಗಿ ನನ್ನ ಪ್ರಣಾಮಗಳು. ಸಂತೃಪ್ತಿಯ ಬದುಕೆ ಧರ್ಮ
ಪರ ಬದುಕೆಂಬ ಬೀಜವನ್ನು ಪ್ರತಿಯೊಂದು ಹೆಣ್ಣಿನಲ್ಲಿ ಬಿತ್ತಿಹರು. ನಿಜಕ್ಕೂ ಹೀರಾಬೇನ್ ಅವರದ್ದು ಸಾಮಾನ್ಯರಂಥವರಿಗೆ ಜಿರ್ಣಿಸಿಕೊಳ್ಳಲಾಗದ ಅಪೂರ್ವ ಬದುಕು. ಹೆಣ್ಣು ಹೊನ್ನು ಮಣ್ಣು ಇಂದು ನಾನಾ ಘರ್ಷಣೆಗಳಿಗೆ, ಅವನತಿಗಳಿಗೆ, ಅಪಚಾರ ಗಳಿಗೆ ಕಾರಣವಾಗಿ, ಈ ಬಿಸಲು ಕುದುರೆ ಹಿಂದೆ ಹೋಗುವುದನ್ನು ಯಾವ ಅಧ್ಯಾತ್ಮ ಪ್ರವಚನಗಳು ತಡೆಯಲಾಗದ್ದನ್ನು ಬಡತನದಲ್ಲಿ ಬೆಂದು ಬದುಕಿದ ಓರ್ವ ತಾಯಿ ಇದೆಲ್ಲದರದಿಂದ ದೂರ ಉಳಿದದ್ದು ಜೀವಂತ ನಿದರ್ಶನ. ಇದಲ್ಲ ಶಿಕ್ಷಣ, ಇದಲ್ಲವೇ ಸಂಸ್ಕಾರ? ಈ ಹೀರಾಬೇನ್ ತಾಯಿ ಪೂಜಾರ್ಹರು. ನಮ್ಮ ಭಾರತ ಮಾತೆಯ ಈ ಹೆಣ್ಣಿಗೆ ನನ್ನ ನಮಸ್ಕಾರ.