ವಿರಾಜಯಾನ
ವಿರಾಜ್ ಕೆ ಅಣಜಿ
ಇದೇ ಮೇ 29 ರಂದು ನಿಕಿತಾ ಕೌಲ್ ಎಂಬ ಹೆಣ್ಣು ಮಗಳೊಬ್ಬರು ಲೆಫ್ಟಿನೆಂಟ್ ಕರ್ನಲ್ ಬ್ಯಾಡ್ಜ್ ಅನ್ನು ತೋಳಿನ ಮೇಲೆ
ಹಾಕಿಸಿಕೊಂಡು, ಭಾರತೀಯ ಸೇನೆಗೆ ಸೇರಿದ ಖುಷಿ ಮತ್ತು ಹೆಮ್ಮೆಯಲ್ಲಿದ್ದರು.
ಅವರು ತೋರಿದ ಜೀವನ ಪ್ರೀತಿಗೆ ಅಂದು ಭಾರತವೇ ಸೆಲ್ಯೂಟ್ ಎಂದಿತ್ತು. ಅದಕ್ಕೆ ಕಾರಣ ಸಣ್ಣ ವಿಷಯವಲ್ಲ. ಏಕೆಂದರೆ, ಅದರ ಹಿಂದೆ ತ್ಯಾಗ ಮತ್ತು ಕಣ್ಣೀರಿನ ಕತೆಯಿತ್ತು. ಅದು 2019ರ ಫೆಬ್ರವರಿ 14. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜೆಇಎಂ ಉಗ್ರರು ಭಾರತದ ಯೋಧರಿದ್ದ ಬಸ್‌ಗೆ ಸ್ಫೋಟಕ ತುಂಬಿಸಿ ಡಿಕ್ಕಿ ಹೊಡೆಸಿ, ಭಾರತಾಂಬೆಯ ನೆಲವನ್ನು ತನ್ನ ನಲವತ್ತು ಮಕ್ಕಳ
ನೆತ್ತರಿನಿಂದ ತೋಯಿಸಿದ್ದರು. ಅಂದು ಪ್ರತಿಯೊಬ್ಬ ಭಾರತೀಯನ ಮನಸ್ಸೂ ಬಿಕ್ಕಿತ್ತು, ಮರುಗಿತ್ತು, ತಮ್ಮ ಮನೆಯವರನ್ನೇ ಕಳೆದುಕೊಂಡಷ್ಟು ಸಂಕಟ ಪಟ್ಟಿತ್ತು.
ಇಂಥ ವಿಧ್ವಂಸಕ ಕೃತ್ಯ ಮಾಡಿದ ಹೇಡಿಗಳನ್ನು ಹೆಡೆಮುರಿಕಟ್ಟಲು ಯೋಧರು ಸಿದ್ಧರಾಗಿ ನಿಂತಿದ್ದರು. ಈ ಹಂತದಲ್ಲಿ ಸಿಕ್ಕ ಸುಳಿವಿನ ಆಧಾರದಲ್ಲಿ, ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದ ಕಮ್ರಾನ್‌ನನ್ನು ಸದೆ ಬಡಿಯಲು, ಮೇಜರ್ ವಿಭೂತಿ ಶಂಕರ್
ದೌಂಢಿಯಾಲ್ ಗನ್ ಹಿಡಿದು ರಣರಂಗಕ್ಕೆ ನುಗ್ಗಿದ್ದರು. ಅದರಲ್ಲಿ ಯಶಸ್ವಿಯೂ ಆಗಿ ಆ ನರರಾಕ್ಷಸನನ್ನು ಹೊಡೆದುರು ಳಿಸಿದ್ದರು. ಅಂದು ಹಲವು ಉಗ್ರರನ್ನು ನೇರ ನರಕಕ್ಕೆ ಅಟ್ಟಿದ್ದ ಮೇಜರ್ ವಿಭೂತಿ, ತನ್ನ ತಾಯ್ನೆಲಕ್ಕಾಗಿ ತನ್ನ ಪ್ರಾಣವನ್ನೂ ಅರ್ಪಿಸಿದ್ದರು.
ಒಬ್ಬ ಹವಾಲ್ದಾರ್ ಮತ್ತಿಬ್ಬರು ಸಿಪಾಯಿಗಳೂ ವೀರ ಮರಣವನ್ನಪ್ಪಿದ್ದರು. ವೀರ ಸೇನಾನಿ ವಿಭೂತಿ ಶಂಕರ್ ಅವರಿಗೆ ಭಾರತ ಸರಕಾರ ಮರಣೋತ್ತರವಾಗಿ ಶೌರ್ಯಚಕ್ರ ನೀಡಿ ಗೌರವಿಸಿತ್ತು. ತನ್ನ ಧೀರ ಪುತ್ರನನ್ನು ಕಳೆದುಕೊಂಡು ಭಾರತಾಂಬೆಯೂ
ಬಿಕ್ಕಿದ್ದಳು. ಅವರ ಪತ್ನಿಯೇ ನಿಕಿತಾ ಕೌಲ್. ಈಗ ಲೆಫ್ಟಿನೆಂಟ್ ಕರ್ನಲ್ ಆಗಿ ತಾನೂ ತನ್ನ ಪತಿಯಂತೆ ದೇಶಕ್ಕೆ ತನ್ನ ಜೀವ ಮುಡಿಪಿಟ್ಟ ಧೀರೆ. ಎಂಬಿಎ ಓದುವಾಗ ಆದ ಪರಿಚಯ, ಸ್ನೇಹವಾಗಿ, ಪ್ರೀತಿಯಾಗಿ ತಿರುಗಿ ಇಬ್ಬರೂ ಪ್ರೇಮ ವಿವಾಹವಾಗಿದ್ದರು. ದೆಹಲಿ ಮೂಲದ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತ, ಯೋಧನ ಪತ್ನಿಯೆಂಬ ಹೆಮ್ಮೆಯಿಂದ ಇದ್ದ ನಿಕಿತಾ ಅವರ ಪಾಲಿಗೆ ವಿಧಿ ಕ್ರೂರವಾಗಿತ್ತು.
ಮದುವೆಯಾಗಿ ಬರಿ ಒಂಬತ್ತು ತಿಂಗಳಲ್ಲೇ ಪತಿ ವೀರ ಮರಣವನ್ನಪ್ಪಿದ್ದರು. ಜೀವನದ ಬಗ್ಗೆ ನಾನಾ ಕನಸುಗಳನ್ನು ಹೊಂದಿದ್ದ ಆ ಮನಸ್ಸಿಗೆ ಅಂದು ಎಷ್ಟು ನೋವಾಗಿರಬೇಡ? ಮೇಜರ್ ವಿಭೂತಿ ಅವರನ್ನು ಮಲಗಿಸಿದ್ದ ಶವಪೆಟ್ಟಿಗೆ ಮುಂದೆ ಅಳುತ್ತ ನಿಂತಿದ್ದ ನಿಕಿತಾ, ಜೈ ಹಿಂದ್ ಎಂದು ಮೂರು ಬಾರಿ ಘೋಷಣೆ ಕೂಗಿ, ಐ ಲವ್ ಯೂ ವಿಭೂ ಎಂದಿದ್ದನ್ನು ನೋಡಿದ ಯಾರಿ ಗಾದರೂ ಕಣ್ತುಂಬದೇ ಇರಲು ಸಾಧ್ಯವಿಲ್ಲ. ಆದರೆ, ನಿಕಿತಾ ಕುಗ್ಗಲಿಲ್ಲ, ಕೈಚೆಲ್ಲಲಿಲ್ಲ.
ತನ್ನ ಪತಿಯನ್ನು ಕಳೆದುಕೊಂಡೆ ಎಂದು ಭಾವಿಸಿ ನೆಲಕಚ್ಚಲಿಲ್ಲ. ತನ್ನ ಪತಿ ದೇಶಕ್ಕಾಗಿ ಮಾಡಬೇಕಿದ್ದ ಕೆಲಸವನ್ನು ನನಗೆ ವಹಿಸಿದ್ದಾರೆ ಎಂದು ಗಟ್ಟಿ ಮನಸ್ಸು ಮಾಡಿಕೊಂಡಿದ್ದರು. ತಾನೂ ಭಾರತೀಯ ಸೇನೆಗೆ ಸೇರಬೇಕು ಎಂದು ತನ್ನ ಪತಿಯ ಮುಂದೆಯೇ ನಿರ್ಧರಿಸಿದ್ದರು. ಮಾಡಿದ ನಿರ್ಧಾರದಂತಯೇ ಭಾರತೀಯ ಸೇನೆಗೆ ಸೇರಲು ಬೇಕಾದ ಎಸ್‌ಎಸ್‌ಸಿ, ಎಸ್‌ಎಸ್‌ಬಿ ಪರೀಕ್ಷೆಗೆ ಸಿದ್ಧರಾದರು. ಅದರಲ್ಲಿ ಯಶಸ್ವಿಯಾಗಿ ಉತ್ತೀರ್ಣರೂ ಆದರು.
ಅದರಂತೆಯೇ ಚೆನ್ನೈನ ಆಫೀಸರ‍್ಸ್ ಟ್ರೈನಿಂಗ್ ಅಕಾಡಿಮಿಯಲ್ಲಿ ತರಬೇತಿ ಮುಗಿಸಿ, ಮೇ 29ರಂದು ಲೆಫ್ಟಿನೆಂಟ್ ಕರ್ನಲ್ ಆಗಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಆ ದಿನ, ತಮ್ಮ ತೋಳಿನ ಮೇಲೆ ಸೇನೆಯ ಬ್ಯಾಡ್ಜ್ ಹಾಕಿಕೊಂಡು ನಿಕಿತಾ ಹೇಳಿದ್ದೇನು ಗೊತ್ತಾ? ವಿಭೂ, ನನ್ನ ಜತೆ ಇಲ್ಲ ಎಂದು ನನಗೆಂದೂ ಅನಿಸಿಯೇ ಇಲ್ಲ. ಅವರಿಲ್ಲಿಯೇ ಎಲ್ಲೋ ಇದ್ದಾರೆ ಎಂದು ನನಗೆ ಈಗಲೂ ಫೀಲ್ ಆಗುತ್ತಿದೆ. ಈ ಕ್ಷಣವನ್ನು ವಿಭೂ ನೋಡುತ್ತ, ನನ್ನನ್ನು ಬಿಗಿದಪ್ಪಿ You just did it ಎಂದು ಹೇಳುವಂತೆ ಭಾಸವಾಗುತ್ತಿದೆ. ವಿಭೂ ಐ ಲವ್ ಯು ಮೋರ್ ಎಂದಿದ್ದರು. ಅಗಲಿದ ಪತಿಗೆ ಇದಕ್ಕಿಂತ ಪ್ರೀತಿ, ದೊಡ್ಡ ಗೌರವ ಸಲ್ಲಿಸಲಾದೀತೇ? ಹಾಗೆಂದು ನಿಕಿತಾ ಸೈನ್ಯಕ್ಕೆ ಸೇರಿದ್ದು ಯಾವುದೇ ವಿಶೇಷ ರಿಯಾತಿಯಂದಲ್ಲ.
ಅಪ್ಪ ಶಾಸಕನಾದರೆ, ಮಗನನ್ನೋ, ಹೆಂಡತಿಯನ್ನೋ ಜಿಲ್ಲಾ ಪಂಚಾಯತಿಗೆ ಅಧ್ಯಕ್ಷನನ್ನು ಮಾಡುವಂಥ ರಾಜಕಾರಣದಂಥ ಯಾವ ಅವಕಾಶವೂ ಸೈನ್ಯದಲ್ಲಿಲ್ಲ. ವೀರ ಮರಣವನ್ನಪ್ಪಿದ ಯೋಧರ ಪತ್ನಿ ಸೇನೆಗೆ ಸೇರಬೇಕು ಎಂದು ಇಚ್ಛಿಸಿದರೆ ಮಾತ್ರ ವಯಸ್ಸಿನಲ್ಲಿ ನಿಯಮದಲ್ಲಿ ಮಾತ್ರ ಸಡಿಲಿಕೆ ನೀಡಲಾಗುತ್ತದೆ. ಅದೊಂದನ್ನು ಬಿಟ್ಟು, ಇನ್ನೆಲ್ಲವೂ ಕೂಡ ಇತರರಂತೆ ಕಟ್ಟು ನಿಟ್ಟಾಗಿ ಪಾಲಿಸಲೇಬೇಕು. ದೈಹಿಕ ಸಾಮರ್ಥ್ಯವೂ ಸೇರಿ ಸೇನೆಯ ನಿಯಮಗಳನ್ನು ಕಡ್ಡಾಯವಾಗಿ ಉತ್ತೀರ್ಣವಾಗಲೇ ಬೇಕು.
ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ, ಸತತವಾಗಿ ಐದನೇ ಬಾರಿ ಎಸ್‌ಎಸ್‌ಬಿ ಪರೀಕ್ಷೆ ಬರೆದು, ಹಿಡಿದ ಹಟ ಬಿಡದೇ ಸೇನೆಗೆ ಸೇರ್ಪಡೆಯಾದ ಲೆ.ಕ. ನಿಧಿ ಮಿಶ್ರಾ. ಮಧ್ಯಪ್ರದೇಶದ ಮೆಹರ್ ರಿಜಿಮೆಂಟ್‌ನಲ್ಲಿ ನಾಯಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರ ಪತಿ
ಮುಖೇಶ್ ನಾಯಕ್ ಕೂಡ ಸೇವೆಯಲ್ಲಿದ್ದಾಗಲೇ ವೀರ ಮರಣ ಕಂಡಿದ್ದರು. ಆಗ ನಿಧಿ ಆರು ತಿಂಗಳ ಗರ್ಭಿಣಿ, ಜತೆಗೆ ಮತ್ತವರ ಮಡಿಲಿನಲ್ಲಿ ಒಂದೂವರೆ ವರ್ಷದ ಮಗನೂ ಇದ್ದ. ಸುಂದರ ನಾಳೆಗಳ ನಿಧಿ ಸಿಗಬಹುದು ಎಂಬ ಕನಸಿನಲಿದ್ದ ನಿಧಿ ಮಿಶ್ರಾಗೆ ಕ್ರೂರ ವಿಧಿ ಚಾಟಿ ಬೀಸಿತ್ತು. ಪತಿಯನ್ನು ಕಳೆದುಕೊಂಡು, ತನ್ನಿಬ್ಬರು ಮಕ್ಕಳನ್ನು ಬೆಳಸಿ, ತಾನೂ ಬದುಕಿ, ತನ್ನ ಗಂಡನನ್ನೂ ಜೀವಂತ ಇರಿಸಿಕೊಳ್ಳಬೇಕು ಎಂದು ನಿಧಿ ನಿರ್ಧರಿಸಿದ್ದರು.
ಪತಿಯಂತೇ ತಾನೂ ತಾನೂ ಸೇನೆಗೆ ಸೇರಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿಯೇ ಎಸ್‌ಎಸ್‌ಸಿ (ಸ್ಟ್ಯಾಫ್ ಸೆಲೆಕ್ಷನ್ ಕಮಿಷನ್) ಪರೀಕ್ಷೆಗೆ ತೆಗೆದುಕೊಂಡರು. ಒಂದಲ್ಲ ಎರಡಲ್ಲ ಸತತ ನಾಲ್ಕು ಬಾರಿ ನಪಾಸು ಕಂಡರು. ಆದರೂ, ತಾನು
ತಲುಪಬೇಕಾದ ಗಮ್ಯದ ಬಗ್ಗೆ ನಿಧಿಗೆ ಸ್ಪಷ್ಟತೆಯಿತ್ತು. ತಮ್ಮ ಐದನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 2017ರಲ್ಲಿ ಸೇನೆಗೆ ಸೇರ್ಪಡೆ ಆದರು. ತನ್ನ ಪತಿಯ ಹೆಸರಲ್ಲಿ ಬರುವ ಪಿಂಚಣಿ ಹಣದಲ್ಲಿ ನಾನು ಬದುಕುವಂಥ ದುರ್ಬಲಳು ನಾನಲ್ಲ. ಅದನ್ನು ನನ್ನ ಪತಿ ಕಲಿಸಿಯೂ ಕೊಡಲಿಲ್ಲ. ಅವರ ಯೂನಿಫಾರ್ಮ್ ಮೇಲೊಮ್ಮೆ ಒರಗಿದರೂ ಅವರು ನನ್ನ ಜತೆಯೇ ಇದ್ದಾರೆ ಎಂದು ಭಾಸವಾಗುತ್ತದೆ.
ನಾನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಣೆ ನೀಡಿದ್ದೂ ಕೂಡ ನನ್ನ ಪತಿಯೇ ಎಂಬುದು ಸೈನ್ಯಾಧಿಕಾರಿ ನಿಧಿ ಮಿಶ್ರಾ ಅವರ ಮಾತು. ಹೆಣ್ಣು ಮನಸ್ಸು ಮಾಡಿ ನಿಂತರೆ, ಕರಗಿ ಹೋಗದ ಕಷ್ಟಗಳೇ ಇಲ್ಲವೇನೋ? ಹೀಗೇ ಅರಸುತ್ತಾ ಹೋದರೆ, ಸೇನೆಯಲ್ಲಿರುವ ಪ್ರತಿ
ಹೆಣ್ಣು ಮಗಳಲ್ಲೂ ಒಂದು ಸೂರ್ತಿ ಕತೆ ಖಂಡಿತ ಸಿಕ್ಕೇ ಸಿಗುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಗಳನ್ನು ಮನೆಯ ಜವಾಬ್ದಾರಿ ನೋಡಿಕೊಳ್ಳುವ, ಗಂಡಸರನ್ನು ಹೊರಗೆ ದುಡಿಯುವ ಜೀವನ ಕ್ರಮ ಅನಾದಿ ಕಾಲದಿಂದ ನಡೆದು ಬಂದಿದೆ.
ಆದರೆ, ಬದಲಾಗುತ್ತಿರುವ ಕಾಲಮಾನ ಮತ್ತು ಜೀವನ ಶೈಲಿಯಿಂದಾಗಿ ಮಹಿಳೆಯರೂ ಕೂಡ ಕ್ರಮೇಣ ಕೆಲಸ ಮಾಡುವ ಸ್ಥಿತಿಗೆ ಒಗ್ಗಿಕೊಳ್ಳತೊಡಗಿದರು. ಇತರ ರಂಗಗಳಾದ ಪೊಲೀಸ್, ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ಐಟಿ, ಬಿಟಿ, ಶಿಕ್ಷಣ, ವೈದ್ಯಕೀಯ, ಕಾನೂನು, ಎಂಜಿನಿಯರಿಂಗ್‌ನಂಥ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಂಡು ತಮ್ಮ ಛಾಪು ಮೂಡಿಸಿತೊಡಗಿದ್ದರು. ಆದರೆ, ದೇಶದ ರಕ್ಷಣಾ ಕ್ಷೇತ್ರ ಮಾತ್ರ ಪುರುಷರಿಗೆ ಅಲಿಖಿತವಾಗಿ ಮೀಸಲಾಗಿತ್ತು.
ಅವಕಾಶ ಕೊಟ್ಟರೆ ತಮ್ಮ ಸಾಮರ್ಥ್ಯವನ್ನು ದೇಶ ರಕ್ಷಣೆಯಲ್ಲಿಯೂ ತೋರಬಲ್ಲವರಾಗಿದ್ದರು. ಆದರೂ ಅವರಿಗೆ ಸೇನೆಯಲ್ಲಿ ಸ್ಥಾನ ಕಲ್ಪಿಸಲು 90ರ ದಶಕದವರೆಗೂ ಕಾಯಬೇಕಾಯಿತು. 1993ರಲ್ಲಿ ಭಾರತೀಯ ಸೇನೆಗೆ ಪ್ರಿಯಾ ಜಾಂಗನ್ ಅವರು
ಆಯ್ಕೆಯಾಗುವ ಮೂಲಕ, ಸೇನೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಯನ್ನು ಪಡೆದುಕೊಂಡರು. ಸದ್ಯ ಭಾರತದಲ್ಲಿ ಮೂರು ರಕ್ಷಣಾ ಪಡೆಗಳನ್ನೂ ಸೇರಿಸಿದರೆ ಒಟ್ಟು 9118 ಮಹಿಳೆಯರು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನೂ 1700 ಮಹಿಳೆಯರನ್ನು ಮಿಲಿಟರಿ ಪೊಲೀಸರ ದಳದಲ್ಲಿ ಜವಾನರ ಹುದ್ದೆಗೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸ ಲಾಗಿದೆ ಎಂಬುದು ರಕ್ಷಣಾ ಇಲಾಖೆ ಸಂಸತ್ ನಲ್ಲಿ ನೀಡಿರುವ ಅಧಿಕೃತ ಮಾಹಿತಿ. ಭಾರತೀಯ ಸೇನೆಯಲ್ಲಿ 12,18,036 ಯೋಧರು ಪುರುಷರಿದ್ದು, 6,807 ಮಹಿಳಾ ಯೋಧರಿದ್ದಾರೆ. ಅಂದರೆ ನೂರಕ್ಕೆ ಶೇಕಡ 0.56 ರಷ್ಟು ಮಾತ್ರ. ಭಾರತೀಯ ವಾಯುಪಡೆಯಲ್ಲಿ 1,46,727 ಪುರುಷ ಯೋಧರಿದ್ದು, 1607 ಮಹಿಳಾ ಯೋಧರಿದ್ದಾರೆ.
ಇದು ನೂರಕ್ಕೆ ಶೇಕಡ 1.08ರಷ್ಟು. ಇನ್ನು ಭಾರತೀಯ ನೌಕಾಪಡೆಯಲ್ಲಿ 10,108 ಪುರುಷ ಯೋಧರಿದ್ದು, 704 ಮಹಿಳಾ ಯೋಧರನ್ನು ಹೊಂದಿದ್ದು, ಇದು ಶೇಕಡ 6.5ರಷ್ಟಾಗಲಿದ್ದು, ಮೂರೂ ಪಡೆಗಳನ್ನು ಹೋಲಿಸಿದರೆ, ನೌಕಾಪಡೆಯಲ್ಲೇ ಹೆಚ್ಚಿನ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಮೂರು ರಕ್ಷಣಾ ಪಡೆಗಳಲ್ಲಿ ಭಾರತೀಯ ಸೇನೆಯೇ ಅತಿ ದೊಡ್ಡದಾಗಿದ್ದು, ಹೆಚ್ಚಿನ ಸಂಖ್ಯೆಯ ಯೋಧರನ್ನು ಹೊಂದಿದೆ.
ತಾವೂ ಕೂಡ ಪುರುಷರಷ್ಟೇ ಸಮರ್ಥರು ಎಂಬುದನ್ನು ಮಹಿಳೆಯರು ತಮ್ಮ ಸಾಧನೆಗಳಿಂದಲೇ ಸಾಬೀತು ಮಾಡಿದ್ದರು. ಆದರೂ, ಸೇನೆಯಲ್ಲೂ ಗಣನೀಯ ಸೇವೆ ಮಾಡುತ್ತಿದ್ದಂಥ ಮಹಿಳೆಯರ ನೇಮಕವನ್ನು ತಾತ್ಕಾಲಿಕ ಎಂದೇ ಪರಿಗಣಿಸಲಾಗಿತ್ತು.
ಆದರೂ, ಸೇನೆಗೆ ಸೇರುವ ಮಹಿಳೆಯರ ಸಂಖ್ಯೆ, ಹಂಬಲ, ದೇಶನಿಷ್ಠೆ ಕಡಿಮೆ ಆಗಿರಲಿಲ್ಲ. ಅಂತಿಮವಾಗಿ 2018ರ ಸ್ವಾತಂತ್ರ್ಯದ ದಿನದಂದು ಪ್ರಧಾನಿ ನರೇಂದ್ರ ಮೋದಿ, ದೆಹಲಿ ಕೆಂಪು ಕೋಟೆಯಲ್ಲಿ ನಿಂತು ಮಾತನಾಡುತ್ತ, ದೇಶಕ್ಕಾಗಿ ಜೀವ, ಜೀವನ
ಮುಡುಪಿಟ್ಟ, ರಕ್ಷಣಾ ಪಡೆಗಳಲ್ಲಿ ಸಣ್ಣ ಸೇವಾ ಆಯೋಗದ ಮೂಲಕ ಆಯ್ಕೆಯಾದ ಮಹಿಳಾ ಅಧಿಕಾರಿಗಳ ಹುದ್ದೆಗಳನ್ನು ಶಾಶ್ವತ(ಕಾಯಂ) ಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.
ನಮ್ಮ ಹೆಣ್ಣು ಮಕ್ಕಳು ಸಾಧಿಸದ ಕ್ಷೇತ್ರವಿಲ್ಲ. ಆದ್ದರಿಂದ ಅವರನ್ನೂ ಸೇನೆಯಲ್ಲಿ ಸಂಪೂರ್ಣವಾಗಿ ತೊಡಗಿಸುವ ಅವಕಾಶ
ನೀಡುತ್ತಿದ್ದೇವೆ. ಎಲ್ಲ ನೇಮಕಗಳನ್ನು ಪಾರದರ್ಶಕ ಮಾಡಲಿದ್ದು, ಮಹಿಳಾ ಅಧಿಕಾರಿಗಳಿಗೂ ಕೂಡ ಪುರುಷ ಅಧಿಕಾರಿ ಗಳಂತೆಯೇ ಸಮಾನ ಅವಕಾಶಗಳು ಸಿಗಲಿವೆ ಎಂದು ಘೋಷಿಸಿದ್ದರು. ಅಂದಿನ ತಮ್ಮ ಭಾಷಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಮೂವರು ಮಹಿಳಾ ನ್ಯಾಯಾಧೀಶರಿದ್ದ ಬಗ್ಗೆಯೂ ಉಲ್ಲೇಖ ಮಾಡಿದ್ದರು.
ಸ್ವಾತಂತ್ರ್ಯದ ನಂತರ ಅತಿ ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿದ ಕ್ಯಾಬಿನೆಟ್ ಮುಖ್ಯಸ್ಥನಾದ ಬಗ್ಗೆಯೂ ಪ್ರಧಾನಿ ಅಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಸೇನೆಯ ಹಲವು ವಿಭಾಗಗಳಲ್ಲಿ ಸಮರ್ಥವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿರುವ ಮಹಿಳೆಯರು ಮುಂದೊಂದು ದಿನ ಯುದ್ಧ ಭೂಮಿಯಲ್ಲಿ ಬಂದೂಕು ಹಿಡಿದು ಶತ್ರುಗಳನ್ನು ಚಂಡಾಡುವ ಕಾಲವೂ
ದೂರವಿಲ್ಲ. ಹೆಣ್ಣನ್ನು ಗಂಡಿಗೆ ಸರಿಸಮಾನವಾಗಿ ನೋಡಬೇಕು ಎಂಬ ಚರ್ಚೆಗಳು ಈಗಲೂ ಜಗತ್ತಿನಾದ್ಯಂತ ನಡೆಯುತ್ತವೆ.
ಆದರೆ, ಕೆಲವು ಹೆಣ್ಣುಮಕ್ಕಳು ತೋರುವ ಧೈರ್ಯ, ಏರುವ ಎತ್ತರ ಕಂಡಾಗ ಅವರ ಸಾಮರ್ಥ್ಯವನ್ನೇ ನಾವು ತಪ್ಪಾಗಿ ಅಂದಾಜು
ಮಾಡಲಾಗಿದೆ ಎನಿಸದೇ ಇರಲಾರದು. ಇದಕ್ಕೆ ಜರ್ಮನಿಯೆಂಬ ಟೆಕ್‌ಜೇಂಟ್ ಖ್ಯಾತಿಯ ದೇಶದ ಚಾನ್ಸಲರ್ ಆಗಿರುವ ಏಂಜೇಲಾ ಮಾರ್ಕಲ್, ಕಟ್ಟರ್ ಮುಸ್ಲಿಂ ದೇಶದಲ್ಲಿ ಪ್ರಧಾನಿಯಾದ ಶೇಕ್ ಹಸೀನಾ, ಕನ್ನಡದ ನೆಲದಿಂದ ಹೋಗಿ ತಮಿಳುನಾಡಿ ನಲ್ಲಿ ಅಧಿನಾಯಕಿಯಾಗಿ ಬೆಳೆದ ಜಯಲಲಿತಾರಂಥ ನೂರಾರು ಉದಾಹರಣೆ ನೀಡಬಹುದು.
ಹುಟ್ಟಿನಿಂದ ಗಂಡಾಗಲಿ, ಹೆಣ್ಣಾಗಲಿ, ಆದರೆ ಒಬ್ಬ ವ್ಯಕ್ತಿಯಾಗಿ ನಮ್ಮನ್ನು ನಾವೇ ಹೇಗೆ ಪರಿಗಣನೆ ಮಾಡಿಕೊಳ್ಳುತ್ತೇವೆ ಎಂಬುದೇ ನಮ್ಮ ಸಾಧನೆಗೆ ಅಳತೆಗೋಲಾಗುತ್ತದೆ. ಜಗತ್ತಿನಲ್ಲಿ ಪ್ರತಿನಿತ್ಯ ಸಾಧಕರು ಹುಟ್ಟುತ್ತಲೇ ಇದ್ದಾರೆ. ನಿಂತ ನೀರಾದವರು ಅಳಿದು ಹೋಗುತ್ತಿದ್ದಾರೆ. ಯಾವುದೇ ರಂಗದಲ್ಲೇ ಸಾಧನೆಗಳು ಕಂಡರೂ ಅಲ್ಲಿಂದ ಸೂರ್ತಿ ಪಡೆದು ಮುನ್ನಡೆಯಬೇಕು. ಯಶಸ್ಸಿನ ಗಮ್ಯ ನಮ್ಮದಾಗಲಿ.
ಹಾಗೆಯೇ, ತನ್ನೆಲ್ಲ ನೋವುಗಳನ್ನು ಒಳನುಂಗಿಕೊಂಡು ವೀರ ಯೋಧನ ಸ್ಫೂರ್ತಿಯನ್ನು ತಮ್ಮೊಳಗೆ ತುಂಬಿಕೊಂಡು, ದೇಶದ ರಕ್ಷಣೆಗಾಗಿ ತನ್ನ ಪತಿಯಂತೆ ಸೇನಾ ಸಮವಸ ತೊಟ್ಟ ನಿಖಿತಾ ಕೌಲ್ ಅವರಿಗೊಂದು ಸೆಲ್ಯೂಟ್.