ಪ್ರಚಲಿತ
ರಾಘವೇಂದ್ರ ಪಿ.ತಿವಾರಿ
ಉಪಕುಲಪತಿ, ಪಂಜಾಬ್ ಕೇಂದ್ರೀಯ ವಿವಿ, ಬಟಿಂಡಾ
ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಶಿಕ್ಷಣದ ಗುರಿಯು ನಡತೆಯನ್ನು ರೂಪಿಸುವುದು, ಮಾನವೀಯ ಮೌಲ್ಯಗಳನ್ನು ಬೆಳೆಸು ವುದು, ಅನಿಶ್ಚಿತ ಭವಿಷ್ಯವನ್ನು ಎದುರಿಸಲು ಆತ್ಮವಿಶ್ವಾಸವನ್ನು ವೃದ್ಧಿಸುವುದು ಮತ್ತು ಘನತೆ, ಆತ್ಮಗೌರವ ಹಾಗೂ ಸ್ವಾವಲಂಬಿ ಮನೋಭಾವವನ್ನು ಬೆಳೆಸಿ ಕೊಳ್ಳುವುದು ಆಗಿರಬೇಕು ಎಂದು ಒಮ್ಮೆ ಹೇಳಿದ್ದರು.
ಶಿಕ್ಷಣ ವ್ಯವಸ್ಥೆಯು ದೇಹ, ಮನಸ್ಸು ಮತ್ತು ಆತ್ಮಕ್ಕೆ ಗುಣಮಟ್ಟದ ಪೋಷಕಾಂಶಗಳೊಂದಿಗೆ ತರಬೇತಿ ನೀಡಬೇಕು ಮತ್ತು ವಿಶ್ವ ಭ್ರಾತೃತ್ವದ ಮನೋಭಾವವನ್ನು ಉತ್ತೇಜಿಸಲು ಮತ್ತು ನಾಗರಿಕ ಸಂವಾದವನ್ನು ಉನ್ನತ ಸ್ತರಗಳಿಗೆ ಕೊಂಡೊಯ್ಯಲು ಸಾಧ್ಯವಾಗಬೇಕು. ಈ ಹಿನ್ನೆಲೆಯಲ್ಲಿ 2o20 ರ ಜುಲೈ 29 ರಂದು ಭಾರತ ಸರಕಾರವು ಘೋಷಿಸಿದ ರಾಷ್ಟ್ರೀಯ ಶಿಕ್ಷಣ ನೀತಿ-2020ಯಲ್ಲಿ ಅಳವಡಿಸಲಾಗಿರುವ ಎಲ್ಲಾ ಪರಿವರ್ತನಾ ಸುಧಾರಣೆಗಳನ್ನು ಅನುಷ್ಠಾನಗೊಳಿಸು ವುದು ಹೆಚ್ಚು ಮಹತ್ವದ್ದಾಗಿದೆ. ಎನ್‌ಇಪಿ –2020 ಕೇವಲ ದಾಖಲೆಯಲ್ಲ, ಬದಲಿಗೆ ಸುಧಾರಿತ ಶಿಕ್ಷಣ ಪರಿಸರ ವ್ಯವಸ್ಥೆಯ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಭಾರತ ಸರಕಾರದ ಬದ್ಧತೆಯಾಗಿದೆ.
ವಿದ್ಯಾರ್ಥಿ ಕೇಂದ್ರಿತ ಎನ್‌ಇಪಿ –2020 ಸಮಾನ, ಕೈಗೆಟುಕುವ ಮತ್ತು ವ್ಯಾಪಕವಾದ ಕಲಿಕೆಯನ್ನು ಆಧರಿಸಿ ಆಜೀವ ಕಲಿಕಾ ಜ್ಞಾನ ಸಮಾಜವನ್ನು ಸೃಷ್ಟಿಸಲು ಅವಕಾಶಗಳನ್ನು ಒದಗಿಸುತ್ತದೆ. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ (ಎಬಿಸಿ) ಮಾನ್ಯತೆ ಪಡೆದ ಸಂಸ್ಥೆಗಳಿಂದ ಗಳಿಸಿದ ಶೈಕ್ಷಣಿಕ ಅರ್ಹತೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಮೂಲಕ ಮತ್ತು ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಅಗತ್ಯವಾದ ಅರ್ಹತೆ ಗಳನ್ನು ಗಳಿಸುವ ಮತ್ತು ಸಂಗ್ರಹಿಸಿದ ನಂತರ ಪದವಿ ಗಳನ್ನು ಪಡೆಯಲು ಅನುಕೂಲವಾಗುವಂತೆ ವಿದ್ಯಾರ್ಥಿ ಗಳಿಗೆ ವಿವಿಧ ಕೋರ್ಸ್‌ಗಳು ಮತ್ತು ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿ ಕೊಡುತ್ತದೆ.
ತಂತ್ರಜ್ಞಾನದ ಬಳಕೆಯಿಲ್ಲದೆ ಎನ್‌ಇಪಿ –2020ರಲ್ಲಿ ರೂಪಿಸಲಾದ ಪರಿವರ್ತನಾ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಬೋಧನೆ-ಕಲಿಕೆಯಲ್ಲಿ ತಂತ್ರಜ್ಞಾನವನ್ನು ಬಳಸಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಮಾನವಾಗಿ ಸಶಕ್ತರನ್ನಾಗಿಸಬೇಕು. ರಾಷ್ಟ್ರೀಯ ಸಂಶೋಧನಾ ಅಕಾಡೆಮಿಯಿಂದ ಶಿಕ್ಷಣ ತಜ್ಞರು ಮತ್ತು ಪ್ರಯೋಗಾಲಯಗಳ ನಡುವೆ ಹೆಚ್ಚಿನ ಸಂವಹನ ಅಗತ್ಯವಾಗಿದೆ. ಸಂಶೋಧನೆಯ ಸಾಂಸ್ಥಿಕ ಕ್ಷೇತ್ರಗಳು ಈಗ ಎಸ್‌ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿಗಳು) ಮತ್ತು ಸ್ಥಳೀಯತೆಗೆ ಆದ್ಯತೆ’ಪರಿಕಲ್ಪನೆಯನ್ನು ಉತ್ತೇಜಿಸುತ್ತವೆ.
ಎನ್‌ಇಪಿ –2020ರ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕವಾಗುತ್ತದೆ. ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು, ಅವರು ಶಿಕ್ಷಣದ ವಿಕಸಿತ ಸಂವಾದವನ್ನು ಅಳವಡಿಸಿಕೊಳ್ಳಲು ಮತ್ತು ಸ್ವೀಕರಿಸಲು ಸಾಕಷ್ಟು ಸಮರ್ಥರಾಗಿರಬೇಕು. ಅವರು ಕೋರ್ಸ್ ವಿಷಯಗಳನ್ನು ಹೊಸ ಮತ್ತು ತಾಜಾ ಆಲೋಚನೆ ಗಳೊಂದಿಗೆ ತುಂಬಿಸಲು ಸಾಧ್ಯವಾಗಬೇಕು, ಕಲಿಯುವವರಿಗೆ ತರಗತಿಯಿಂದಾಚೆಯೂ ಸಾಕಷ್ಟು ಸಮಯವನ್ನು ಒದಗಿಸಬೇಕು, ಶಿಕ್ಷಣದ ಎಲ್ಲಾ ಅಂಶಗಳಿಗೆ ಸಂಬಂಧಿಸಿದ ಅರ್ಥಪೂರ್ಣ ಸಂವಾದಗಳಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಅವರಿಗೆ ಸಹಾಯ ಮಾಡಬೇಕು.
ಮೂಲಭೂತವಾಗಿ, ಎನ್‌ಇಪಿ –2020 ಬೆಂಬಲ, ಕಾಳಜಿ, ವಿಶ್ವಾಸ, ಮನುಕುಲದ ಯೋಗಕ್ಷೇಮ ಮತ್ತು ಶೈಕ್ಷಣಿಕ ಹಾಗೂ ನೈತಿಕ ಶ್ರೇಷ್ಠತೆಯ ನಡುವಿನ
ಸಂಪರ್ಕವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ತೆವಳುತ್ತಿರುವ ಒಂದು ವರ್ಷದ ಮಗುವನ್ನು ಯೌವನದವರೆಗೆ ಸೂಕ್ತ ಸನ್ನಿವೇಶಗಳು ಮತ್ತು ಉದ್ದೇಶದಿಂದ ಎಚ್ಚರಿಕೆಯಿಂದ ಪೋಷಿಸಿದರೆ, ಪ್ರಾಚೀನ ಶಿಕ್ಷಣ ವ್ಯವಸ್ಥೆಯ ಗತ ವೈಭವವನ್ನು ಮರುಕಳಿಸಲು ಮತ್ತು ಭಾರತವನ್ನು ಮತ್ತೆ ವಿಶ್ವಗುರುವಿನ ಸ್ಥಾನದಲ್ಲಿರಿಸಲು ಸಮರ್ಥವಾದ ಭಾರತ ಕೇಂದ್ರಿತ ಯುವಜನರನ್ನು ಸಿದ್ಧಪಡಿಸುತ್ತದೆ.
ಸುಧಾರಿತ ಕಲಿಕಾ ವ್ಯವಸ್ಥೆಯ ಮೂಲಕ ’ಆತ್ಮನಿರ್ಭರ ಭಾರತ’ ನಿರ್ಮಾಣಕ್ಕಾಗಿ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಸ್ಪಷ್ಟ ಕರೆಯನ್ನು ನಾವು ಬೆಂಬಲಿಸೋಣ.