Saturday, 14th December 2024

ರಾಷ್ಟ್ರಧ್ವಜದ ಗೌರವವನ್ನು ಕಾಪಾಡಿರಿ

ಅಭಿಪ್ರಾಯ

ನಾ.ರ.ಜಯಂತ್‌

ಭಾರತ 75ನೇ ಸ್ವಾತಂತ್ರ‍್ಯೋತ್ಸವದ ಹೊಸ್ತಿಲಲ್ಲಿ ಇರುವ ಈ ಶುಭ ಸಂದರ್ಭದಲ್ಲಿ ರಾಷ್ಟ್ರಧ್ವಜದ ಗೌರವ ಕಾಪಾಡಲು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿರುವುದು ನೋವಿನ
ಸಂಗತಿಯಾಗಿದೆ.

ಏಕೆಂದರೆ ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ಅಥವಾ ತಿಳಿದೋ, ತಿಳಿಯದೇ ಅವಮಾನವಾಗುವಂತೆ ನಡೆದುಕೊಳ್ಳುವುದು ಭಾರತೀಯ ದಂಡಸಂಹಿತೆ ಪ್ರಕಾರ ದಂಡ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಸಾರ್ವಜನಿಕರ ಮತ್ತು ಸರಕಾರದ ನಿರ್ಲಕ್ಷದಿಂದಾಗಿ ರಾಷ್ಟ್ರಧ್ವಜದ ಅವಮಾನ ಆಗುತ್ತಲೇ ಇರುವುದು ಖೇದಕರ ಸಂಗತಿ. ಪ್ಲಾಸ್ಟಿಕ್ ಧ್ವಜಗಳನ್ನು ಮುದ್ರಿಸಬಾರದೆಂಬ ಕಾನೂನು ಸರಿಯಾದ ರೀತಿಯಲ್ಲಿ ಜಾರಿಯಾಗಿಲ್ಲ ಹಾಗೂ ಈಗಾಗಲೇ ಮುದ್ರಣ ವಾಗಿರುವ ಪ್ಲಾಸ್ಟಿಕ್ ಧ್ವಜಗಳನ್ನು ವರ್ತಕರು ಮಾರಾಟ ಮಾಡುತ್ತಲೇ ಇದ್ದಾರೆ.

ರಾಷ್ಟçಧ್ವಜದ ಬಹಿರಂಗ ಮಾರಾಟಕ್ಕೆ ಅನುಮತಿ ಇಲ್ಲದ್ದಿದ್ದರೂ ಸಹ ರಸ್ತೆ ಬದಿಗಳಲ್ಲಿ, ಅಂಗಡಿಗಳಲ್ಲಿ ಅಲಂಕಾರಿಕ ವಸ್ತುವಿನ ಹಾಗೇ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕಾಗದದ ಮೇಲೆ ರಾಷ್ಟçಧ್ವಜ ಮುದ್ರಿಸುವುದು ಹಾಗೂ ಅಳತೆಯೇ ಇಲ್ಲದೇ ತಮಗೆ ಬೇಕಾದ ಬಟ್ಟೆಯಲ್ಲಿ ಬೇಕಾದ ಆಕಾರದಲ್ಲಿ ಮುದ್ರಿಸುತ್ತಾರೆ, ಟೀ-ಶರ್ಟ್ಗಳ ಮೇಲೆ, ತೋರಣದಂತೆ ರಾಷ್ಟ್ರಧ್ವಜವನ್ನು ಮುದ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ.

ರಾಷ್ಟçಧ್ವಜದ ಕಾಳಜಿ ಮಾಡುವುದನ್ನು ಕಲಿಸ ಬೇಕಾದ ಶಾಲೆಗಳು ಸಹ ಧ್ವಜಗಳನ್ನು ಮಕ್ಕಳ ಕೈಗೆ ಕಾಗದದ, ಪ್ಲಾಸ್ಟಿಕ್ ಧ್ವಜಗಳನ್ನು ಕೊಡು ವುದು ರೂಢಿಸಿಕೊಂಡಿದ್ದಾರೆ. ಸ್ವಾತಂತ್ರ‍್ಯ ದಿನದಂದು ರಾಷ್ಟçಧ್ವಜವನ್ನು ಉತ್ಸಾಹದಿಂದ ಹಾರಿಸಿದರೆ ಸಾಕೇ, ಉತ್ಸಾಹದಿಂದ ಹಾರಿಸಿದ ಧ್ವಜದ ಕಾಳಜಿ ಮಾಡುವುದು ಬೇಡವೇ? ಮಾರನೇ ದಿನ ರಸ್ತೆಯ ಬದಿಗಳಲ್ಲಿ , ವಾಹನಗಳ ಮೇಲೆ ತಿರುಗು ಮುರುಗಾದ ಸ್ಥಿತಿಯಲ್ಲಿ ಕಂಡು ಬರುತ್ತವೆ, ಅನೇಕ ಕಡೆ ಹಾರಿಸಿದ ರಾಷ್ಟçಧ್ವಜವನ್ನು ನಿಯಮದಂತೆ ಸೂರ್ಯಾಸ್ತಕ್ಕೆ ಮೊದಲು ಇಳಿಸಿ ಕಾಳಜಿ ಮಾಡದೇ ಹಾಗೇ ಬಿಟ್ಟಿರು ತ್ತಾರೆ.

ಇನ್ನು ಇತ್ತೀಚೆಗೆ ಫ್ಲೆಕ್ಸ್’ಗಳ ಮೇಲೆ, ರಿಯಾಯಿತಿ ಜಾಹಿರಾತುಗಳ ಮೂಲಕ ಸ್ವಾತಂತ್ರ‍್ಯೋತ್ಸವದ ಶುಭಾಶಯ ಕೋರಲು ಪತ್ರಿಕೆ, ಫ್ಲೆಕ್ಸ್, ಕರಪತ್ರಗಳ ಮೇಲೆ ಅಡ್ಡಾದಿಡ್ಡಿಯಾಗಿ ರಾಷ್ಟ್ರಧ್ವಜದ ಚಿತ್ರವನ್ನು ಮುದ್ರಿಸಲಾಗುತ್ತಿದೆ. ಈ ಕುರಿತಂತೆ ಮುದ್ರಕರಿಗೆ ಸೂಕ್ತ ನಿಯಮಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಧಾರವಾಡ ಜಿಲ್ಲೆಯ ಗರಗ ಎಂಬ ಊರಿನಲ್ಲಿ ಭಾರತ ಸರಕಾರದ ಮಾನ್ಯತೆಯೊಂದಿಗೆ ಸರಕಾರ ಜಾರಿಮಾಡಿರುವ ಮಾನದಂಡದಂತೆ ರಾಷ್ಟ್ರಧ್ವಜಗಳನ್ನು ಖಾದಿ ಗ್ರಾಮೋದ್ಯಮ ನಿಗಮದ ಘಟಕದಲ್ಲಿ ಖಾದಿ ಬಟ್ಟೆಯಿಂದ ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸಿ ಸಂಪೂರ್ಣ ಭಾರತಕ್ಕೆ ಸರಬರಾಜು ಮಾಡುತ್ತಾರೆ. ಇದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಇದರಿಂದ ಸ್ವದೇಶಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗಿ ಎಷ್ಟೋ ಜನರಿಗೆ ಉದ್ಯೋಗವು ದೊರೆಯುತ್ತಿದೆ.

ಹೀಗೆ ಹಲವಾರು ರೀತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವವಾಗುತ್ತಿದ್ದು ಆದನ್ನು ಸರಿಪಡಿಸಲು ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿಯನ್ನು ಹಾಗೂ ಪೋಲಿಸ್ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿ ಕಾರಿಗಳಿಗೆ ಕೆಲವು ರಾಷ್ಟ್ರಪ್ರೇಮಿ ಸಂಘಟನೆಗಳು ಮನವಿಗಳನ್ನು ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದರೆ ಇತ್ತೀಚೆಗೆ ಚೀನಾ ತಯಾರಿಸುವ ರಾಷ್ಟ್ರಧ್ವಜಗಳು ಮಾರುಕಟ್ಟೆ ಯಲ್ಲಿ ದೊರೆಯುತ್ತಿರುವುದರಿಂದ ಗರಗ ರಾಷ್ಟçಧ್ವಜ ತಯಾರಕರಿಗೆ ಬೇಡಿಕೆ ಕುಸಿತವಾಗುತ್ತಿದ್ದು ಭಾರತಕ್ಕೆ ನಿರಂತರ ಉಪಟಳ ಕೊಡುವ ಚೀನಾ ತಯಾರಿಸಿದ ರಾಷ್ಟ್ರಧ್ವಜ ಹಾರಿಸುವುದು ರಾಷ್ಟçಪ್ರೇಮವೇ? ಇತ್ತೀಚೆಗೆ ರಾಷ್ಟ್ರಧ್ವಜವನ್ನು ಹೋಲುವ ಮಾಸ್ಕ್ ಗಳು ಮಾರುಕಟ್ಟೆ ಲಭ್ಯವಿದೆ ದಯ ಮಾಡಿ ಯಾರೂ ಈ ಮಾಸ್ಕ್ ಗಳನ್ನು ಖರೀದಿಸಬೇಡಿ.

ರಾಷ್ಟ್ರಧ್ವಜವು ಕೇವಲ ಧ್ವಜವಲ್ಲ ಲಕ್ಷಾಂತರ ಕ್ರಾಂತಿಕಾರಿಗಳ ಮತ್ತು ರಾಷ್ಟ್ರಪುರುಷರು ಮಾಡಿದಂತಹ ಮಹಾನ್ ತ್ಯಾಗ, ಬಲಿದಾನದಿಂದ ಭಾರತೀಯ ಸಂಸ್ಕೃತಿ, ಪರಂಪರೆಗಳ ಪ್ರತೀಕ ವಾಗಿದೆ. ಇದನ್ನು ಮನಗಂಡು ಪ್ರತಿಯೊಬ್ಬ ಭಾರತೀಯರು ರಾಷ್ಟ್ರಧ್ವಜವನ್ನು ಹೆಮ್ಮಯಿಂದ ಹಾರಿಸುವ ಸ್ವಾತಂತ್ರ‍್ಯವನ್ನು ಭಾರತ ಸರಕಾರ ನೀಡಿದೆ. ಅದಕ್ಕೆ ಧಕ್ಕೆಯಾಗದಂತೆ ಜಾಗೃತಿ ಯಿಂದ ರಾಷ್ಟ್ರಧ್ವಜವನ್ನು ಹಾರಿಸುವುದರ ಜತೆಗೆ ರಾಷ್ಟ್ರಧ್ವಜದ ಕಾಳಜಿಯನ್ನು ಮಾಡುವುದರೊಂದಿಗೆ ರಾಷ್ಟ್ರಧ್ವಜ, ರಾಷ್ಟ್ರಲಾಂಛನ, ರಾಷ್ಟ್ರಗೀತೆಯ ಘನತೆಯನ್ನು ಕಾಪಾಡೋಣ.