Sunday, 15th December 2024

ಬಿಜೆಪಿ ಎತ್ತಿದ, ಕೈ ಹಿಸುಕಿದ ’ರಾಷ್ಟ್ರ’ ನಾಯಕರು

ಅಶ್ವತ್ಥಕಟ್ಟೆ

ranjith.hoskere@gmail.com

ಇಡೀ ರಾಷ್ಟ್ರದ ಗಮನ ಸೆಳೆದಿರುವ, ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಹುಮಹತ್ವ ಪಡೆದಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಬುಧವಾರ ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ರುವ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮದೇ ವಿಭಿನ್ನ ತಂತ್ರಗಳೊಂದಿಗೆ ಪ್ರಚಾರ ಕಾರ್ಯ ಮುಗಿಸಿವೆ. ಇಡೀ ಚುನಾವಣಾ ಪ್ರಕ್ರಿಯೆಯನ್ನು ಈ ಹಂತದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೆಸ್‌ಗೆ ರಾಜ್ಯ ನಾಯಕರೇ ಚುನಾವಣಾ ತಂತ್ರಗಾರಿಕೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದರೆ, ಬಿಜೆಪಿಯಲ್ಲಿ ರಾಜ್ಯ ನಾಯಕತ್ವಕ್ಕಿಂತ ರಾಷ್ಟ್ರ ನಾಯಕರೇ ಎಲ್ಲವನ್ನು ‘ಹ್ಯಾಂಡಲ್’ ಮಾಡಿರುವುದು ಸ್ಪಷ್ಟ ವಾಗುತ್ತದೆ.

ಚುನಾವಣೆ ಎದುರಾದರೆ ಮೂರು ಹಂತದ ಪ್ರಕ್ರಿಯೆ ಮುಖ್ಯ ಎನಿಸುತ್ತದೆ. ಮೊದಲಿಗೆ, ಚುನಾವಣಾ ತಯಾರಿ, ಎರಡನೆಯದ್ದು ಚುನಾವಣೆ ಘೋಷಣೆಯ ಬಳಿಕ ನಡೆಸುವ ಪ್ರಚಾರ ಹಾಗೂ ಅಂತಿಮವಾಗಿ ಮತದಾನದ ಹಿಂದಿನ ಎರಡು ದಿನಗಳಲ್ಲಿ ನಡೆಯುವ ಮನೆಮನೆ ಪ್ರಚಾರ. ಈ ಮೂರರಲ್ಲಿ ಯಾವುದೇ ಒಂದರಲ್ಲಿ ಎಡವಿದರೂ, ಚುನಾವಣೆಯ ಫಲಿತಾಂಶದಲ್ಲಿ ಏರಿಳಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮಾತನಾಡುವುದಾದರೆ, ಎರಡೂ ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಚುನಾವಣೆ ಮುಖ್ಯವಾಗಿದೆ. ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಕಾಂಗ್ರೆಸ್‌ಗೆ ‘ಅಳಿವು-ಉಳಿವಿನ’ ವಿಷಯ.

ಆ ಕಾರಣಕ್ಕಾಗಿಯೇ ಎರಡೂ ರಾಷ್ಟ್ರೀಯ ಪಕ್ಷಗಳು ಹತ್ತು ಹಲವು ತಂತ್ರ-ಪ್ರತಿತಂತ್ರಗಳನ್ನು ಮಾಡಿದ್ದವು. ಕಳೆದೊಂದು ವರ್ಷದಿಂದ ಬಿಜೆಪಿ-ಕಾಂಗ್ರೆಸ್‌ನ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚುನಾವಣೆಯ ಮೊದಲ ಹಂತವಾಗಿರುವ ತಯಾರಿಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಬಹು ಮುಂದಿತ್ತು. ಪ್ರತಿಯೊಂದು ವಿಷಯವನ್ನೂ ವ್ಯವಸ್ಥಿತವಾಗಿ ‘ಎತ್ತಿ ತೋರಿಸುವ’ ಮೂಲಕ ಬಿಜೆಪಿಯನ್ನು ಕಟ್ಟಿಹಾಕುವ ಪ್ರಯತ್ನ ಮಾಡಿತ್ತು. ೪೦ ಪರ್ಸೆಂಟ್ ಸರಕಾರವಿರಲಿ, ಪೇ ಸಿಎಂ ಅಭಿಯಾನವಿರಲಿ, ೨೦೧೮ರ ಬಿಜೆಪಿ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಕೈಗೊಂಡಿರುವ ಯೋಜನೆಗಳ ಬಗ್ಗೆಯಿರಲಿ ಅಥವಾ ಧರ್ಮ
ಸಂಘರ್ಷವಿರಲಿ. ಪ್ರತಿ ಹಂತದಲ್ಲಿಯೂ ಕಾಂಗ್ರೆಸ್, ಬಿಜೆಪಿ ವಿರುದ್ಧ ನಡೆಸಿದ ಅಭಿಯಾನಗಳಿಂದ ಜನರಲ್ಲಿ ‘ಆಡಳಿತ
ವಿರೋಧಿ’ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಇದರೊಂದಿಗೆ ಕಾಂಗ್ರೆಸ್ ಸರ್ವೇ ಸಾಮಾನ್ಯವಾಗಿರುವ ‘ಮುಖ್ಯಮಂತ್ರಿ ಹುದ್ದೆಯ ರೇಸ್’ ಗೊಂದಲಗಳನ್ನು ಕೊನೆಯ
ಹಂತದಲ್ಲಿ ಹೆಚ್ಚಾಗಿ ಬಹಿರಂಗವಾಗಿ ತೋರಿಸಿಕೊಳ್ಳಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಇದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿವೆ ಎನ್ನುವ ವರದಿಗಳು ಬರುತ್ತಿದ್ದಂತೆ, ಇಬ್ಬರೂ ಈ ಮಾತಿಗೆ ಬ್ರೇಕ್ ಹಾಕಿ ಒಂದಾಗಿ ಹೆಜ್ಜೆ ಹಾಕಿದರು. ಮೇಕೆದಾಟು ಪಾದಯಾತ್ರೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ, ಜಲಸಂಕಲ್ಪ ಬಸ್ ಯಾತ್ರೆ… ಹೀಗೆ ಒಂದಲ್ಲ ಒಂದು ರೀತಿಯಲ್ಲಿ ರಾಜ್ಯದ ಜನರಿಗೆ ತಾವು ‘ಕನೆಕ್ಟ್’ ಆಗುವಂತೆ ಕಾಂಗ್ರೆಸ್ ನಾಯಕರು ನೋಡಿಕೊಂಡರು.

ಹಾಗೇ ನೋಡಿದರೆ, ಬಿಜೆಪಿ ನಾಯಕರು ಚುನಾವಣೆಗೆ ಸಿದ್ಧತೆ ಆರಂಭಿಸುವ ವೇಳೆಗೆ ಕಾಂಗ್ರೆಸ್ ರಾಜ್ಯ ನಾಯಕರು
ಬಹುದೂರ ಸಾಗಿದ್ದರು. ಇದಿಷ್ಟೇ ಅಲ್ಲದೇ, ಬಿಜೆಪಿ ಸರಕಾರದ ವಿರುದ್ಧ ಕೇಳಿಬಂದ ಪ್ರತಿಯೊಂದು ಆರೋಪವನ್ನೂ ಸಮರ್ಥ ವಾಗಿ ತಮ್ಮ ಅಸವನ್ನಾಗಿ ಬಳಸಿಕೊಂಡಿದ್ದ ಕಾಂಗ್ರೆಸ್ ಚುನಾವಣೆ ಘೋಷಣೆ ವೇಳೆಗಾಗಲೇ, ಬಹುಮತ ಪಡೆಯೋದು ನಿಶ್ಚಿತ ಎನ್ನುವ ವಾತಾವರಣ ಸೃಷ್ಟಿಸಿಕೊಂಡಿತ್ತು. ಇದಕ್ಕೆ ತತ್ವಿರುದ್ಧ ಎನ್ನುವಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಸಾಲು ಸಾಲು ಆರೋಪ ಮಾಡುತ್ತಿದ್ದರೂ, ಅವರಿಗೆ ‘ಕೌಂಟರ್’ ಕೊಡಲು ಬಿಜೆಪಿಗೆ ಸರಿಯಾದ ಅಸ ಮತದಾನಕ್ಕೆ ಎರಡು ವಾರದವರೆಗೂ ಸಿಕ್ಕಿರಲಿಲ್ಲ.

ವಿಧಾನಸಭಾ ಚುನಾವಣೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ತನಕ ಎಲ್ಲವೂ ಕಾಂಗ್ರೆಸ್‌ಗೆ ಪೂರಕವಾಗಿತ್ತು. ಆದರೆ ಕಳೆದ ೧೦ ದಿನಗಳಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರ ಎರಡೂ ಹೇಳಿಕೆಗಳೇ, ಬಿಜೆಪಿಗೆ  ಪ್ರಬಲ ಶಕ್ತಿಯನ್ನು ಕೊಟ್ಟಿದ್ದು. ಮೊದಲಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷಸರ್ಪ’ ಎಂದಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ‘ರಾಜ್ಯದ ಜನರು ಈಶ್ವರ ಸ್ವರೂಪಿಗಳಿದ್ದಂತೆ.

ಅವರ ಕೊರಳಲ್ಲಿ ಸರ್ಪವಾಗುವುದಕ್ಕೆ ಯಾವುದೇ ಬೇಸರವಿಲ್ಲ’ ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಕಟ್ಟಿಹಾಕಿದರು. ಖರ್ಗೆ ಅವರ ಈ ಹೇಳಿಕೆ ಒಂದು ಹಂತದಲ್ಲಿ ಕಾಂಗ್ರೆಸ್‌ಗೆ ಡ್ಯಾಮೇಜ್ ಆದರೂ ಅದನ್ನು ನಿಭಾಯಿಸುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾದರು. ಆದರೆ ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತ ಕೊಟ್ಟ ಮತ್ತೊಂದು
ಎಡವಟ್ಟು ಎಂದರೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, ‘ಬಜರಂಗ ದಳವನ್ನು ನಿಷೇಧಿಸುವುದಾಗಿ’ ಘೋಷಣೆ ಮಾಡಿದ್ದು. ಇದರಿಂದ ಬಜರಂಗಿ(ಹನುಮ)ಭಕ್ತರನ್ನೇ ಕಟ್ಟಿಹಾಕುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ ಎನ್ನುವ ರೀತಿಯಲ್ಲಿ ಬಿಜೆಪಿ ಪ್ರಚಾರ ನೀಡಿ,
ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತವನ್ನು ನೀಡಿದೆ.

ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಕಾರ, ಈ ರೀತಿಯ ಘೋಷಣೆ ಪ್ರಣಾಳಿಕೆಯಲ್ಲಿ ಅಗತ್ಯವಿರಲಿಲ್ಲ. ಇದರಿಂದ
ಸುಲಭದ ಗೆಲುವು ಎಂದುಕೊಂಡ ಕಡೆಯಲ್ಲ, ಕಠಿಣ ಸ್ಪರ್ಧೆ ಎದುರಿಸುವಂತಾಗಿದೆ. ಅಷ್ಟಕ್ಕೂ ಇಂತ ‘ಡ್ಯಾಮೇಜಿಂಗ್
ಘೋಷಣೆ’ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಸಹ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ. ಕರ್ನಾಟಕ ರಾಜ್ಯ ಉಸ್ತುವಾರಿ ಹೊತ್ತಿರುವ ಸುರ್ಜೇವಾಲ ಅವರ ಒತ್ತಡ ಹೇರಿ ಈ ಅಂಶವನ್ನು ಸೇರಿಸಿದರಂತೆ. ಬಜರಂಗ ದಳದ ಬ್ಯಾನ್‌ಗೆ ಸಂಬಂಧಿಸಿದಂತೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಣಾಳಿಕಾ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೇರಿದಂತೆ ಎಲ್ಲ ರಾಜ್ಯ ನಾಯಕರೂ ವಿರೋಽಸಿದರೂ ಸುರ್ಜೇವಾಲ ಪಟ್ಟು ಹಿಡಿದು ಈ
ಅಂಶವನ್ನು ಸೇರಿಸಿದ್ದಾರಂತೆ. ಈ ಮೂಲಕ ರಾಜ್ಯ ನಾಯಕರು ಕಳೆದೊಂದು ವರ್ಷದಿಂದ ಕಟ್ಟಿಕೊಂಡು ಬಂದಿದ್ದ ಗೋಪುರವನ್ನು ರಾಷ್ಟ್ರೀಯ ನಾಯಕರಾದ ಖರ್ಗೆ, ಸುರ್ಜೇವಾಲ ಅವರಿಂದ ಒಂದು ಹಂತಕ್ಕೆ ಡ್ಯಾಮೇಜ್ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಆದರೆ ಇದಕ್ಕೆ ತತ್ವಿರುದ್ಧ ಎನ್ನುವಂತೆ ಬಿಜೆಪಿ ಈ ಚುನಾವಣೆಯಲ್ಲಿ ನಡೆದುಕೊಂಡಿದೆ. ಕಾಂಗ್ರೆಸ್ ಒಂದು ವರ್ಷ ಮೊದಲೇ ಚುನಾವಣಾ ತಯಾರಿಯನ್ನು ನಡೆಸಿದ್ದರೂ, ಕರ್ನಾಟಕದಲ್ಲಿರುವ ಬಿಜೆಪಿ ನಾಯಕತ್ವ ಚುನಾವಣಾ  ತಂತ್ರಗಾರಿಕೆ ಯತ್ತ ಯೋಚಿಸಲೂ ಇಲ್ಲ. ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್‌ನಲ್ಲಿಯೂ, ‘ವಾವ್’ ಎನಿಸುವ ಯಾವ ಅಂಶವನ್ನೂ ಘೋಷಿಸಲಿಲ್ಲ. ಬದಲಿಗೆ ರಾಷ್ಟ್ರ ನಾಯಕರಿಗಾಗಿ ಕಾದು ಕುಳಿತರು (ಇಲ್ಲಿರುವವರಿಗೆ ಜವಾಬ್ದಾರಿ ನೀಡಿದರೆ ವರ್ಕ್ ಔಟ್ ಆಗುವುದಿಲ್ಲ ಎಂದು ತಿಳಿದು ಕೇಂದ್ರ ನಾಯಕರು ಯಾವುದೇ ತಯಾರಿಯಲ್ಲಿ  ರಾಜ್ಯ ನಾಯಕರನ್ನು ಸೇರಿಸಿಕೊಳ್ಳಲಿಲ್ಲ ಎನ್ನುವುದು ಬೇರೆ ಮಾತು). ಚುನಾವಣೆ ಘೋಷಣೆಯಾಗುವ ತನಕ ಏನು ಬೇಕಾದರೂ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದ ಬಿಜೆಪಿ ವರಿಷ್ಠರು, ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ತಮ್ಮ ತಂತ್ರಗಾರಿಕಾ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಗ್ರೌಂಡ್ ಲೆವೆಲ್ ಕೆಲಸವನ್ನು ಆರಂಭಿಸಿದರು.

ಬಳಿಕ ಮೋದಿ, ಶಾ ಆಪ್ತವಲಯದಲ್ಲಿರುವ ಧರ್ಮೇಂದ್ರ ಪ್ರಧಾನ್ ಹಾಗೂ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಚುನಾವಣಾ ತಯಾರಿಯನ್ನು ಆರಂಭಿಸಿದರು. ಚುನಾವಣೆ ೨೦ ದಿನಗಳಿವೆ ಎನ್ನುವ ತನಕ ಕಾಂಗ್ರೆಸ್ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎನ್ನುವ ವಾತಾವರಣವನ್ನು ಕೇವಲ ೨೦ ದಿನದಲ್ಲಿ ‘ಅತಂತ್ರವೇ ನಿಶ್ಚಿತ’ ಎನ್ನುವ ಹಾಗೆ ಬದಲಾಯಿ ಸಿದ್ದು, ಮೋದಿ, ಶಾ ಆಂಡ್ ಟೀಂ. ಇಡೀ ಪ್ರಕ್ರಿಯೆಯಲ್ಲಿ ರಾಜ್ಯ ನಾಯಕರು ನೆಪ ಮಾತ್ರಕ್ಕೆ ಜತೆಯಲ್ಲಿದ್ದರು ಎನ್ನುವುದನ್ನು ಬಿಟ್ಟರೆ ಯಾವ ತೀರ್ಮಾನವೂ ರಾಜ್ಯ ನಾಯಕರಿಂದ ಆಗಿಲ್ಲ.

ರಾಜ್ಯದಲ್ಲಿ ಬಿಜೆಪಿಗಿರುವ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸಬೇಕು ಎನ್ನುವುದು ಖಾತ್ರಿಯಾಗುತ್ತಿದ್ದಂತೆ, ಪ್ರಧಾನಿ
ನರೇಂದ್ರ ಮೋದಿ ಅವರನ್ನು ಪ್ರಚಾರಕ್ಕೆ ಇಳಿಸಿದ ಅಮಿತ್ ಶಾ, ಆಯಕಟ್ಟಿನ ೧೯ ಜಿಲ್ಲೆಗಳಲ್ಲಿ ೧೯ ಸಮಾವೇಶ, ಆರು
ರೋಡ್ ಶೋಗಳನ್ನು ಹಮ್ಮಿಕೊಳ್ಳಲಾಯಿತು. ಇದೇ ರೀತಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ೧೬ ಸಮಾವೇಶ,
೧೫ ರೋಡ್ ಶೋ, ಯೋಗಿ ಆದಿತ್ಯನಾಥ್ ಅವರಿಂದ ಮೂರು ರೋಡ್ ಶೋ ಹಾಗೂ ಒಂಬತ್ತು ಸಮಾವೇಶಗಳನ್ನು
ಹಮ್ಮಿಕೊಳ್ಳುವ ಮೂಲಕ, ಮತದಾರರ ಮನಸ್ಸಿನಲ್ಲಿ ಬಿಜೆಪಿಯ ವಿರುದ್ಧವಿರುವ ಅಲೆಯನ್ನು ತಗ್ಗಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಈ ಎರಡೂ ರಾಷ್ಟ್ರೀಯ ಪಕ್ಷಗಳ ತಂತ್ರಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೆಸ್‌ಗೆ ಪಕ್ಷದ ವರಿಷ್ಠರು ಬಾರದೇ ಹೋಗಿದ್ದರೆ, ರಾಜ್ಯ ನಾಯಕರೇ ಇಡೀ ಚುನಾವಣೆಯನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದರು ಎನ್ನುವುದು ಸ್ಪಷ್ಟ. ಆದರೆ ಬಿಜೆಪಿ ತಮ್ಮ ರಾಜ್ಯ ನಾಯತ್ವಕ್ಕಿಂತ ಹೆಚ್ಚಾಗಿ ದೆಹಲಿ ನಾಯಕರ ಸೂಚನೆಗಳನ್ನು ನಂಬಿಕೊಂಡೇ ಸಾಗಿದ್ದಾರೆ. ಆ ಮೂಲಕ ಕಾಂಗ್ರೆಸ್‌ಗೆ ರಾಜ್ಯ ನಾಯಕರೇ ರಾಷ್ಟ್ರ ನಾಯಕರಿಗಿಂತ ಉತ್ತಮ ರೀತಿಯಲ್ಲಿ ಚುನಾವಣೆ ನಿರ್ವಹಿಸಿದ್ದರೆ, ಬಿಜೆಪಿಯಲ್ಲಿ ಮೋದಿ, ಶಾ ಇಲ್ಲದಿದ್ದರೆ ಚುನಾವಣೆ ನಡೆಯೋಲ್ಲ ಎನ್ನುವ ರೀತಿಯಲ್ಲಿದೆ.

ಮೋದಿ, ಶಾ ಮುಖ ನೋಡಿ ಬಿಜೆಪಿಗೆ ಮತ ನೀಡುವರೋ ಅಥವಾ ಕಾಂಗ್ರೆಸ್‌ನ ರಾಜ್ಯ ನಾಯಕತ್ವವನ್ನು ಮತದಾರ
ಒಪ್ಪಿಕೊಳ್ಳುವನೋ ಎನ್ನುವುದು ಮೇ.೧೩ಕ್ಕೆ ಸ್ಪಷ್ಟವಾಗಲಿದೆ.