Wednesday, 11th December 2024

ರಾಷ್ಟ್ರೀಯ ಪೊಲೀಸ್‌ ಸ್ಮಾರಕ ನಿರ್ಮಾಣಕ್ಕೆ ನರೇಂದ್ರ ಮೋದಿಯೇ ಬರಬೇಕಾಯಿತು

ಸ್ಮರಣೆ

ಪ್ರಕಾಶ್ ಶೇಷರಾಘವಾಚಾರ್‌

ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಕೆಲಸವು ದೂರದ ಬೆಟ್ಟ ಇದ್ದ ಹಾಗೆ. ಜನರ ಭಯ, ಅಧಿಕಾರ, ಹಣ ಮತ್ತು ಅಪಾಯ ಮತ್ತು ಸೇವೆ ಎಲ್ಲವೂ ಸೇರಿದ ಪಾಕವೇ ಪೊಲೀಸ್ ವ್ಯವಸ್ಥೆಯು. ನಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇದ್ದರೂ
ಸಹ ಸಮಾಜದಲ್ಲಿ ನೆಮ್ಮದಿಯಾಗಿ ಬದುಕಲು ಪೊಲೀಸ ವ್ಯವಸ್ಥೆ ಅನಿವಾರ್ಯ.

ಪೊಲೀಸರಿಲ್ಲದ ಸಮಾಜವು ಕಲ್ಪನಾತೀತ. ಒಳ್ಳೆಯವರು ಕೆಟ್ಟವರು ಎಂದು ಎಲ್ಲ ಕಡೆ ಇರುವಂತೆ ಪೊಲೀಸ್ ಇಲಾಖೆ ಯಲ್ಲಿಯೂ ಅದಕ್ಕೆ ಹೊರತಾಗಿಲ್ಲ. ಒರಟುತನ, ಕೆಟ್ಟ ಭಾಷಾ ಪ್ರಯೋಗ, ಸದಾ ಖಡಕ್ ಆಗಿ ಇರುವುದು-ಈ ಎಲ್ಲಾ ಗುಣಗಳು ಅವರಿಗೆ ಬೇಕೇ ಬೇಕೇನೋ. ದೂರು ಬರುವವರೆಗೂ ಅವರು ಸ್ನೇಹಿತರು. ಒಮ್ಮೆ ದೂರು ದಾಖಲಾಯಿ ತೆಂದರೆ ಅವರು ಕೂಡಲೇ ಬದಲಾಗುತ್ತಾರೆ. ಅದು ಅವರ ಸ್ವಾಭಾ ವಿಕವಾಗಿ ಇರುವ ಗುಣ ಲಕ್ಷಣವು ಕೂಡ.

ಪೊಲೀಸರ ಕೆಲಸ ಹೂವಿನ ಹಾಸಿಗೆಯಲ್ಲ. ಹೊತ್ತು ಗೊತ್ತಿಲ್ಲದೆ ಕರ್ತವ್ಯ ನಿರ್ವಹಿಸಬೇಕು. ಹಬ್ಬ ಹರಿದಿನಗಳನ್ನದೆ ಬಂದೋಬಸ್ತ್ ಮಾಡುತ್ತಿರಬೇಕು. ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೆ ಹರಸಾಹಸವೇ ಪಡುತ್ತಾರೆ. ತುರ್ತು ಪರಿಸ್ಥಿತಿ ಏನಾದರೂ ಎದುರಾದರೆ ವಾರಗಟ್ಟಲೆ ರಜೆಯೇ ಇಲ್ಲದೆ ಕೆಲಸ ಮಾಡಬೇಕಾಗುತ್ತದೆ. ಅನೇಕ ಸಂದರ್ಭದಲ್ಲಿ ಕರ್ತವ್ಯ ಪಾಲನೆಯ ವೇಳೆ ಸಂಭವಿಸುವ ಅವಘಡಗಳಿಂದ ಪೊಲೀಸರು ಪ್ರಾಣವನ್ನು ಕಳೆದು ಕೊಂಡಿದ್ದಾರೆ. ಎಲ್ಲ ಅಪಾಯಗಳ ನಡುವೆಯೇ ಅವರ ಕರ್ತವ್ಯ ನಿರ್ವಹಣೆ ನಿಲ್ಲದೆ ನಡೆಯುತ್ತದೆ.

ಭಯೋತ್ಪಾದಕರ ಗುಂಡಿನ ದಾಳಿಗೆ, ನಕ್ಸಲೀಯರ ಪೈಚಾಚಿಕ ಕೃತ್ಯಗಳಿಗೆ ಮತ್ತು ಕುಖ್ಯಾತ ಅಪರಾಧಿಗಳ ವಿರುದ್ಧ ಕಾರ್ಯಾ ಚರಣೆಗಳಲ್ಲಿ ಸಾವಿರಾರು ಪೊಲೀಸರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸ್ವಾತಂತ್ರ ಬಂದ ತರುವಾಯ ದೇಶದಲ್ಲಿ ೩೫,೩೧೮ಕ್ಕೂ ಹೆಚ್ಚು ಪೊಲೀಸರು ಕರ್ತವ್ಯ ನಿರ್ವಹಿಸುವಾಗ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದಂತಚೋರ ನರಹಂತಕ
ವೀರಪ್ಪನ್ ಕಾರ್ಯಾಚರಣೆಯಲ್ಲಿ ನೂರರಿಂದ ನೂರ ಇಪ್ಪತ್ತು ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ವೀರಪ್ಪನ್ ಕ್ರೌರ್ಯಕ್ಕೆ ಹತರಾಗಿದ್ದಾರೆ. ಬಾಂಬ್ ದಾಳಿ ಅಥವಾ ಗುಂಡಿನ ದಾಳಿಗೆ ತುತ್ತಾದ ನೂರಾರು ಪೊಲೀಸ್ ಸಿಬ್ಬಂದಿಗಳು ಗಾಯ ಗೊಂಡು ಅಂಗವಿಕಲರಾದವರು ಜೀವನಪರ್ಯಂತ ಅದರೊಂದಿಗೆ ಬದುಕುವಂತಾಗಿದೆ.

ಕರ್ನಾಟಕದ ಹಲವಾರು ಕರ್ತವ್ಯನಿಷ್ಠ ಪೊಲೀಸ್ ಅಧಿಕಾರಿಗಳು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ಹುತಾತ್ಮರಾಗಿದ್ದಾರೆ. ಎಸ್‌ಪಿ ಹರಿಕೃಷ್ಣ , ಎಸ್‌ಐ ಶಕೀಲ್ ಅಹಮದ್ ಮತ್ತು ಇತರ ನಾಲ್ಕು ಪೊಲೀಸರನ್ನು ವೀರಪ್ಪನ್ ತನ್ನ ಜಾಲದಲ್ಲಿ ಸಿಲುಕಿಸಿ ಅಮಾನುಷವಾಗಿ ಕೊಲ್ಲುತ್ತಾನೆ. ಪಾವಗಡದ ವೆಂಕಟಮ್ಮನ ಹಳ್ಳಿ ಪೊಲೀಸ್ ಠಾಣೆಯ ಮೇಲೆ ನೂರಾರು ನಕ್ಸಲೀಯರು ದಾಳಿ ಮಾಡಿ ಆರು ಜನ ಪೊಲೀಸರನ್ನು ಹತ್ಯೆ ಮಾಡುತ್ತಾರೆ.

ಕಲ್ಬುರ್ಗಿಯಲ್ಲಿ ಕುಖ್ಯಾತ ಅಪರಾಧಿ ಮುನ್ನನನ್ನು ಬಂಧಿಸಲು ತೆರಳಿದ್ದ ವೇಳೆ ಎಸ್‌ಐ ಮಲ್ಲಿಕಾರ್ಜುನ ಬಂಡೆಯವರು ಅಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹತರಾಗುತ್ತಾರೆ. ಬೆಂಗಳೂರಿನ ಟ್ರಾಫಿಕ್ ಕಾನ್‌ಸ್ಟೇಬಲ್ ಮೀಸೆ ತಿಮ್ಮಯ್ಯ ಕರ್ತವ್ಯ ನಿವರ್ಹಿಸು ತ್ತಿದ್ದ ಸಂದರ್ಭ ದಲ್ಲಿ ವಾಹನವು ಅವರ ಮೇಲೆ ಹರಿದು ಅಸುನೀಗುತ್ತಾರೆ. ಕೋವಿಡ್ ಅವಧಿಯು ಪೊಲೀಸ್ ಇಲಾಖೆಗೆ ಬಹು ದೊಡ್ಡ ಸವಾಲಿನ ಸಮಯವಾಗಿತ್ತು.

ಕೋವಿಡ್ ಯೋಧರಾಗಿದ್ದ ಅವರು ತಮ್ಮ ಕರ್ತವ್ಯ ನಿರ್ವಹಣೆಯನ್ನು ರಸ್ತೆಗಿಳಿದೆ ಮಾಡಬೇಕಾಗಿತ್ತು. ಕೋವಿಡ್ ನಿಯಮಾವಳಿ ಗಳ ಪಾಲನೆ ಮತ್ತು ಪರಿಸ್ಥಿತಿಯ ದುರ್ಲಾಭ ಪಡೆಯದ ಹಾಗೆ ಎಲ್ಲೆಡೆ ನಿಗಾ ಇಡಬೇಕಿತ್ತು. ಕಾನೂನು ಸುವ್ಯವಸ್ಥೆ ಕುಸಿಯದಂತೆ ಕರ್ತವ್ಯ ಪಾಲನೆಯಲ್ಲಿ ಯಾವುದೇ ರಾಜಿ ಇರಲಿಲ್ಲ. ಪರಿಣಾಮ, ಸಾವಿರಾರು ಪೊಲೀಸರು ಕೊವಿಡ್ ಸೋಂಕಿನಿಂದ ಬಾಧಿತ ರಾದರು ಮತ್ತು ನೂರಾರು ಪೊಲೀಸರು ಬಲಿಯಾದರು.

ಎರಡನೆಯ ಅಲೆಗೆ ಕರ್ನಾಟಕದಲ್ಲಿ ದಿನಕ್ಕೊಬ್ಬ ಪೊಲೀಸರು ಬಲಿಯಾಗಿದ್ದರು ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಪೊಲೀಸರು ಹೊರಗಡೆ ಹೋಗಲೇ ಬೇಕಾದ ಸ್ಥಿತಿ ಇದ್ದ ಕಾರಣ ಅವರ ಕುಟುಂಬಸ್ಥರು ಕೂಡ ಕೋವಿಡ್ ಸೋಂಕಿಗೆ ತುತ್ತಾ
ಗಿದ್ದರು. ಪೊಲೀಸ್ ಕುಟುಂಬದ ಸದಸ್ಯರು ಬಲಿಯಾದ ಅಂಕಿ ಅಂಶ ಸೇರಿದರೆ ಈ ಸಾವಿನ ಪ್ರಮಾಣವು ಇನ್ನೂ ಹೆಚ್ಚಾಗುವು ದರಲ್ಲಿ ಸಂಶಯವಿಲ್ಲ.

ನಮ್ಮ ನಾಳೆಗಳು ಸುಂದರವಾಗಿಸಲು ಅವರು ತಮ್ಮ ಇಂದಿನ ಬಾಳನ್ನು ತ್ಯಾಗ ಮಾಡಿ ಸಮಾಜಕ್ಕೆ ನೆಮ್ಮದಿ ನೀಡುತ್ತಾರೆ. ನಮಗಾಗಿ ಹುತಾತ್ಮರಾದ ಮತ್ತು ಸಂಕಷ್ಟ ಅನುಭವಿಸುತ್ತಿರುವ ಈ ಮಹನೀಯರನ್ನು ಸದಾ ಕಾಲ ನೆನೆದು ಗೌರವ ತೋರು ವುದು ನಾಗರಿಕರ ಕನಿಷ್ಠ ಕರ್ತವ್ಯವಾಗಿದೆ. ಅಕ್ಟೋಬರ್ ೨೧, ೧೯೫೯ ರಂದು ಲಡಾಕ್‌ನ ಹಾಟ್ ಸ್ರಿಂಗ್ಸ್ ಬಳಿ ನಮ್ಮ ಗಡಿಯನ್ನು ಕಾಪಾಡುತ್ತಿದ್ದ ಸಿಆರ್‌ಪಿಎಫ್ ನ ಯೋಧರ ಮೇಲೆ ಚೀನಾ ಸೈನಿಕರು ಗ್ರೆನೇಡ್ ದಾಳಿ ಮಾಡುತ್ತಾರೆ. ಹತ್ತು ಜನ ಪೊಲೀಸರು ಈ ಅನಿರೀಕ್ಷಿತ ದಾಳಿಗೆ ವೀರ ಮರಣ ವನ್ನಪ್ಪುತ್ತಾರೆ. ೧೯೬೦ ರಲ್ಲಿ ಈ ಹತ್ತು ಪೊಲೀಸರು ಹುತಾತ್ಮರಾದ ದಿನವನ್ನು ‘ಪೊಲೀಸರ ಸ್ಮರಣಾರ್ಥ ದಿನ’ಎಂದು ದೇಶಾದ್ಯಂತ ಆಚರಿಸಲು ತೀರ್ಮಾನಿಸಲಾಗುತ್ತದೆ.

೧೯೯೪ರಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕವನ್ನು ದೆಹಲಿಯಲ್ಲಿ ನಿರ್ಮಿಸಲು ಸರ್ಕಾರ ತೀರ್ಮಾನಿಸುತ್ತದೆ. ಆದರೆ ಪ್ರಸ್ತಾವನೆ ಯು ಶೀಥಲ ಪೆಟ್ಟಿಗೆ ಸೇರುತ್ತದೆ. ೧೯೯೯ ರಲ್ಲಿ ವಾಜಪೇಯಿಯವರು ಈ ಯೋಜನೆಗೆ ಜೀವ ಕೊಡುತ್ತಾರೆ. ೨೦೦೨ ರಲ್ಲಿ ಅಂದು ಗೃಹ ಸಚಿವರಾಗಿದ್ದ ಎಲ್.ಕೆ. ಆಡ್ವಾಣಿ ಯವರು ದೆಹಲಿಯ ಚಾಣಕ್ಯಪುರಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ೬.೨ ಎಕರೆ ಜಮೀನು ಮಂಜೂರು ಮಾಡುತ್ತಾರೆ. ದುರ್ದೈವ ಈ ಸ್ಮಾರಕದ ನಿರ್ಮಾಣವು ಅನೇಕ ಅಡ್ಡಿ ಆತಂಕಗಳನ್ನು ಎದುರಿಸ ಬೇಕಾಗುತ್ತದೆ. ಅಧಿಕಾರಶಾಹಿಗಳು ನಿಯಮಾಳಿಗಳ ತಕರಾರು ತೆಗೆಯುತ್ತಾರೆ. ಲುಟೈನ್ ಪ್ರದೇಶದಲ್ಲಿ ಇದರ ನಿರ್ಮಾಣದಿಂದ ರಾಷ್ಟ್ರಪತಿ ಭವನದ ಗುಮ್ಮಟ್ಟದ ನೋಟಕ್ಕೆ ಧಕ್ಕೆ ಬರುತ್ತದೆ ಎಂದು ಪರಿಸರ ಇಲಾಖೆಯು ಯೋಜನೆಗೆ ತನ್ನ ಅಡ್ಡಗಾಲು ಹಾಕುತ್ತದೆ. ಯಥಾಪ್ರಕಾರ ನಿರ್ಮಾಣದ ಯೋಜನೆಯು ನ್ಯಾಯಾಂಗದ ಆವರಣ ತಲುಪಿ ೨೦೦೪ರಲ್ಲಿ ದೆಹಲಿಯ ಹೈಕೋರ್ಟ್ ಸ್ಮಾರಕ
ನಿರ್ಮಾಣದ ಕಾಮಗಾರಿಗೆ ತಡೆ ನೀಡುತ್ತದೆ.

ತದನಂತರ ರಾಷ್ಟ್ರೀಯ ಪೊಲೀಸ್ ಸ್ಮಾರಕ ಯೋಜನೆಯು ನೆನೆಗುದಿಗೆ ಬೀಳುತ್ತದೆ. ನಮಗಾಗಿ ಪ್ರಾಣ ಕೊಟ್ಟ ಜೀವಗಳಿಗೆ ತಕ್ಕ ಗೌರವ ಕೂಡುವ ಸೂಕ್ತವಾದ ಭವ್ಯ ಸ್ಮಾರಕ ನಿರ್ಮಿಸಲೂ ಕೂಡ ಕಾನೂನು ತೊಡಕುಗಳನ್ನು ಸೃಷ್ಟಿಸುವ ನಕಾರಾತ್ಮ ಮನ ಸ್ಥಿತಿಯು ನಮ್ಮಲ್ಲಿ ದಟ್ಟವಾಗಿದೆ. ವಿವಾದ ವಸ್ತುವಾದ ಸ್ಮಾರಕ ನಿರ್ಮಾಣದ ಸಮಸ್ಯೆಯನ್ನು ಬಗೆಹರಿಸಲು ದಶಕ ಕಳೆದರು
ಯಾವ ಪ್ರಯತ್ನವು ನಡೆಯುವುದಿಲ್ಲ.

೨೦೧೪ರಲ್ಲಿ ಮೋದಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತರುವಾಯ ತನ್ನ ಮೊದಲ ಮುಂಗಡ ಪತ್ರದಲ್ಲಿಯೇ ಸ್ಮಾರಕ ನಿರ್ಮಿಸಲು ರು. ೫೦ ಕೋಟಿ ಒದಗಿಸುತ್ತಾರೆ. ಸ್ಮಾರಕ ನಿರ್ಮಾಣವು ಮೂರು ವಿಭಾಗದಲ್ಲಿ ಅರ್ಥಪೂರ್ಣವಾಗಿ ನಿರ್ಮಿಸಲು ಯೋಜನೆಯು ಸಿದ್ಧವಾಗುತ್ತದೆ. ಮೊದಲನೆಯ ಭಾಗದಲ್ಲಿ ಪೊಲೀಸರ ತ್ಯಾಗ ಮತ್ತು ಬಲಿದಾನವನ್ನು ಪ್ರತಿನಿಧಿಸುವ ೨೩೮ ಟನ್
ತೂಕದ ಏಕಶಿಲಾ ಗ್ರಾನೈಟ್ ಸ್ಥಾಪಿಸಲಾಗಿದೆ.

ಅದರ ತೂಕ ಮತ್ತು ಬಣ್ಣವು ಪೊಲೀಸರು ಮಾಡಿದ ಅತ್ಯುನ್ನತ ತ್ಯಾಗ ಮತ್ತು ಗಾಂಭೀರ್ಯವನ್ನು ಪ್ರತಿನಿಧಿಸುತ್ತದೆ. ಈ ಶಿಲೆಯ ಬುಡದಲ್ಲಿ ೬೦ ಅಡಿ ಉದ್ದದ ನದಿಯು ನಿರಂತರವಾಗಿ ಹರಿಯುತ್ತಿದೆ. ಇದು ಸಮಾಜವನ್ನು ಕಟ್ಟಲು ಪೊಲೀಸರು ಸಲ್ಲಿಸಿದ
ನಿರಂತರ ನಿಸ್ವಾರ್ಥ ಸೇವೆಯನ್ನು ಪ್ರತಿಬಿಂಬಿಸುತ್ತದೆ. ಎರಡನೆಯ ಭಾಗದಲ್ಲಿ ಶೌರ್ಯದ ಗೋಡೆ ನಿರ್ಮಿಸಲಾಗಿದೆ. ೧೯೪೭ರ ತರುವಾಯ ಹುತಾತ್ಮರಾದ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಹೆಸರನ್ನು ಇದರಲ್ಲಿ ಕೆತ್ತಲಾಗಿದೆ. ಅವರ ಶೌರ್ಯ ಮತ್ತು ತ್ಯಾಗವನ್ನು ಗೋಡೆಯ ಮೇಲೆ ದಾಖಲಿಸುವ ಮೂಲಕ ಗೌರವಿಸಲಾಗಿದೆ.

ಮೂರನೆಯ ಭಾಗದಲ್ಲಿ ಸವಿಸ್ತಾರವಾಗಿ ಪೊಲೀಸ್ ವ್ಯವಸ್ಥೆ ಅವರ ಸವಾಲುಗಳ ಕುರಿತು ಮಾಹಿತಿ ನೀಡುವ ವಸ್ತು ಪ್ರದರ್ಶನ ವನ್ನು ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ನೆನಪಿಗೆ ಸಮರ್ಪಿಸಲಾಗಿದೆ. ವಸ್ತು ಸಂಗ್ರಹಾಲಯದಲ್ಲಿ ಪೊಲೀಸರ ಇತಿಹಾಸ ವನ್ನು ತಿಳಿಯಬಹುದು. ಲಾಠಿ, ಬಂದೂಕುಗಳು, ಬುಲೆಟ್ ಪ್ರೂಫ್ ವೆಸ್ಟ್‌ಗಳು ಮತ್ತು ಇತರ ಹಲವು ಆಯುಧಗಳನ್ನು ಪೊಲೀಸರು ಕಾರ್ಯಾಚರಣೆಯಲ್ಲಿ ಬಳಸುವುದನ್ನು ನಿಖರವಾಗಿ ತೋರಿಸಲಾಗಿದೆ. ರಾಷ್ಟ್ರೀಯ ಪೊಲೀಸ್ ಸ್ಮಾರಕ ಹುತಾತ್ಮರಾದ ಪೊಲೀಸ ರಿಗೆ ಗೌರವಾರ್ಪಣೆ ಮತ್ತು ನಾಗರಿಕರಿಗೆ ಅವರ ತ್ಯಾಗ ಬಲಿದಾನಗಳನ್ನು ಪರಿಚಯಿಸಿ ಆ ಎಲ್ಲಾ ಹುತಾತ್ಮರು ಸದಾ ಜನರ ಮನದಲ್ಲಿ ಉಳಿಸುವ ಮಹತ್ಕಾರ್ಯ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಪೊಲೀಸ್ ಸ್ಮಾರಕ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಸ್ಮಾರಕವು ಇಂದು ಯಾತ್ರಾ ಸ್ಥಳವಾಗಿದೆ. ಈ ಸ್ಥಳವು ಪೊಲೀಸರ ಮತ್ತು ಸಮುದಾಯದ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಇವರ ತ್ಯಾಗ ಬಲಿದಾನವು ನಮ್ಮ ವೈಯಕ್ತಿಕ ಜೀವನದಲ್ಲಿ ಉನ್ನತ ಗುಣಮಟ್ಟವನ್ನು ಅನುಸರಿಸಲು ಪ್ರೇರಣಾದಾಯಕವಾಗಿದೆ.

ಹುತಾತ್ಮರಾದ ಪ್ರತಿಯೊಬ್ಬ ಪೊಲೀಸರ ಹೆಸರು ದಾಖಲಾಗಿರುವುದರಿಂದ ಅವರ ಕುಟುಂಬದವರು ಅವರ ಸಂಗಾತಿಗಳು ತಮ್ಮನ್ನು ಅಗಲಿದ ದೂರವಾದ ಜೀವಕ್ಕೆ ಗೌರವ ಅರ್ಪಿಸಲು ಅವಕಾಶ ದೊರೆತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಹತ್ತು ವರ್ಷ ಅಧಿಕಾರ ನಡೆಸಿದವರಿಗೆ ಹುತಾತ್ಮ ರನ್ನು ಗೌರವಿಸಬೇಕು ಎಂದು ಮನಸ್ಸಾಗಲಿಲ್ಲ ಮತ್ತು ಅಂತಹ ದೂರದೃಷ್ಟಿಯು ಅವರಿಗೆ ಇರಲಿಲ್ಲ. ಅಂದಿನ ಅಧಿಕಾರಸ್ಥರ ಧೋರಣೆ ಹೇಗಿತೆಂದರೆ, ಬಾಟ್ಲಾ ಪೊಲೀಸ್ ಎನ್ ಕೌಂಟರ್‌ನಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಗೆ ಅಗೌರವ ತೋರಿ, ಅಂದು ಪೊಲೀಸ್ ಗುಂಡಿಗೆ ಬಲಿಯಾದ ಭಯೋತ್ಪಾದಕರ
ಮೃತದೇಹದ ಚಿತ್ರ ನೋಡಿ ಕಣ್ಣೀರು ಸುರಿಸಿದ ಕೃತಘ್ನರ ಅಟ್ಟಹಾಸವು ಮಾತ್ರ ವಿಜೃಂಭಿಸುತ್ತದೆ.

ರಾಷ್ಟ್ರೀಯ ಪೊಲೀಸ್ ಸ್ಮಾರಕದ ಬಗ್ಗೆ ಮೋದಿಯವರು ಹೇಳುತ್ತಾರೆ-‘ನಮಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದವ ರನ್ನು ದೇಶ ನೆನೆಯುತ್ತಿದೆ. ಅವರನ್ನು ದೇಶವು ಮರೆತಿಲ್ಲ ಎಂದು ಹುತಾತ್ಮರಾದ ಕುಟುಂಬವು ಹೆಮ್ಮೆ ಪಡುವಂತಾಗಿದೆ.’ ಹುತಾತ್ಮರಾದ ಕುಟುಂಬದ ಮುಂದಿನ ಪೀಳಿಗೆಗಳು ಕೂಡ ತಮ್ಮ ಪೂರ್ವಜರು ಮಾಡಿದ ತ್ಯಾಗ ಬಲಿದಾನವನ್ನು ಹೆಮ್ಮೆಯಿಂದ  ನೋಡಬಹು ದಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕವಾಗಲಿ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕವಾಗಲಿ ನಿರ್ಮಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು.

ಮೋದಿ ಸರ್ಕಾರವು ರಾಷ್ಟ್ರೀಯ ವಿಚಾರಗಳಲ್ಲಿ ರಾಜಿ ಇಲ್ಲದ ನೀತಿ ಅನುಸರಿಸುತ್ತಿದೆ. ನಮ್ಮ ಪರಂಪರೆಯ ಪುನರುತ್ಥಾನವನ್ನು ಕೈಗೊಂಡು ಇತಿಹಾಸ ಕಾಲಗರ್ಭ ಸೇರಿದ್ದ ಬಲಿದಾನಿಗಳನ್ನು ಸದಾ ನೆನಪಲ್ಲಿ ಉಳಿಯುವ ಮಹೋನ್ನತ ಕಾರ್ಯ ಕೈಗೊಂಡು ದೇಶವು ಅವರನ್ನು ಅತ್ಯಂತ ಗೌರವದಿಂದ ಕಾಣುವಂತೆ ಮಾಡುತ್ತಿದೆ.