ಕಳಕಳಿ
ಶ್ರೀಕಾಂತ ಬಿ.ಎಸ್
ಬೆಂಗಳೂರಿನಿಂದ ಕೋಲಾರದ ಕಡೆಗೆ ಹೋಗುವಾಗ ಕೃಷ್ಣರಾಜಪುರ ದಾಟಿ ಸ್ವಲ್ಪ ದೂರ ಹೋಗುತ್ತಿದ್ದಂತೆ ವಿಶಾಲವಾದ ಕೆರೆಯಿದೆ.
ಎರಡೂ ಬದಿಯಲ್ಲೂ ಕಣ್ಣು ಹಾಯಿಸಿದಷ್ಟು ದೂರವೂ ಆಗಾಧವಾದ ನೀರು ನಮಗೆ ಕಾಣಸಿಗುತ್ತದೆ. ಈ ಕೆರೆಯ ಮಧ್ಯದಲ್ಲಿ ಅಲ್ಲಲ್ಲಿ ಪಕ್ಷಿಗಳ ದಂಡು ನಮ್ಮ ಹೃನ್ಮನಗಳನ್ನು ತಣಿಸುತ್ತವೆ. ಆದರೆ ಸುಮಾರು ನೂರಾ ಮೂವತ್ತು ವರ್ಷಗಳಲ್ಲಿ ಈ ಪ್ರದೇಶ ಹೀಗಿರಲಿಲ್ಲ. ಬರಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಪರದಾಡಬೇಕಾಗಿತ್ತು ಎಂದರೆ ಆಶ್ಚರ್ಯ ಪಡಬೇಕು. ಇಂತಹ ಅದ್ಭುತವಾದ ಕೆರೆಯ ನಿರ್ಮಾಣದ ಹಿಂದಿನ ರೋಚಕವಾದ ಕಥೆ ಮತ್ತು ಇಂತಹ ಸುಂದರ ಪರಿಸರಸ್ನೇಹಿ ಕೆರೆಯನ್ನು ನಿರ್ಮಿಸಿದ ಜನಾನುರಾಗಿ ಮತ್ತು ಪ್ರಾಥಸ್ಮರಣೀಯರೂ ಆದ ಎಲೆ ಮಲ್ಲಪ್ಪ ಶೆಟ್ಟರ ಬಗ್ಗೆ ತಿಳಿಯೋಣ.
ಅದು ಹದಿನೆಂಟನೇ ಶತಮಾನದ ಅಂತ್ಯದಲ್ಲಿದ್ದ ಕಾಲ. ಬಹಳ ಸಮಯ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶ
ದಲ್ಲಿ ಕಾಲ ಕಾಲಕ್ಕೆ ಸರಿಯಾದ ಮಳೆಯಾಗದೇ, ಕೆರೆಗಳು ಮತ್ತು ಉದ್ಯಾನ ನಗರಿ ಎಂದು ಹೆಸರಾಗಿದ್ದ ಬೆಂಗಳೂರಿನ ಬಹುತೇಕ
ಕೆರೆ ಮತ್ತು ಕೊಳಗಳು ಬತ್ತಿಹೋಗುತ್ತಿವೆ. ವ್ಯವಸಾಯ ಬಿಡಿ, ಜನರು ಮತ್ತು ದನಕರುಗಳಿಗೆ ಕುಡಿಯುವುದಕ್ಕೂ ಸರಿಯಾಗಿ
ನೀರು ಸಿಗದಂಥ ಹಾಹಾಕಾರ ತಾಂಡವವಾಡಿತ್ತು. ಅಂದಿನ ಬ್ರಿಟಿಷ್ ಸರಕಾರ ಮತ್ತು ಮೈಸೂರು ಸಾಮ್ರಾಜ್ಯವು ಸಹ
ಜನರಿಗೆ ನೀರು ಒದಗಿಸುವ ಸವಾಲನ್ನು ಎದುರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿತ್ತು.
ಈ ಸುದ್ದಿ ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀಮಂತ ವ್ಯಾಪಾರಿಗಳಾಗಿದ್ದ ಜನೋಪಕಾರಿಗಳು, ಸಹೃದಯಿಗಳಾಗಿದ್ದ,
ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಳ್ಳೇದೆಲೆಯ ವ್ಯಾಪಾರ ಮಾಡುತ್ತಾ ಎಲೆ ಮಲ್ಲಪ್ಪ ಶೆಟ್ಟರು ಎಂದೇ ಖ್ಯಾತ ರಾಗಿದ್ದ ಶ್ರೀಮರಿಮಲ್ಲಪ್ಪ ಶೆಟ್ಟರ ಗಮನಕ್ಕೆ ಬಂದಿತು. ಹೇಳಿ ಕೇಳಿ ಅವರು ಕೊಡುಗೈ ದಾನಿ ಎಂದೇ ಪ್ರಖ್ಯಾತರಾಗಿದ್ದ
ಶೆಟ್ಟರು ಕೆ.ಆರ್. ಪುರಂ ಸುತ್ತಮುತ್ತಲಿನ ಜನರಿಗೆ ಅನುಕೂಲ ವಾಗುವಂತೆ ಒಂದು ಬೃಹತ್ ಕೆರೆಯೊಂದನ್ನು ತಮ್ಮ ಸ್ವಂತ
ಖರ್ಚಿನಲ್ಲಿ ನಿರ್ಮಾಣ ಮಾಡಲು ಯೋಚಿಸಿ, ಕೆರೆ ನಿರ್ಮಾಣಕ್ಕೆ ಸೂಕ್ತವಾದ ಸ್ಥಳ, ಕೆರೆಯ ನಿರ್ಮಾಣದ ಯೋಜನೆ ಮತ್ತು
ಕಾರ್ಯತಂತ್ರವನ್ನು ನಿಯೋಜಿಸಲು ಒಂದು ತಂಡವೊಂದನ್ನು ರಚಿಸಿಕೊಳ್ಳುತ್ತಾರೆ.
ಜಲ ತಜ್ಞರ ಸಲಹೆಯಂತೆ, ಕೆ.ಆರ್.ಪುರ ದಾಟಿ, ವೈಟ್‌ಫೀಲ್ಡ ಬಳಿಯಲ್ಲಿ ಬೆಂಗಳೂರಿನ ಈಶಾನ್ಯ ದಿಕ್ಕಿನಲ್ಲಿ ಸುಮಾರು 105.218 ಹೆಕ್ಟೇರ್ ಅಂದರೆ ಸುಮಾರು 260 ಎಕರೆಯಷ್ಟು ವಿಶಾಲವಾದ ಭೂಮಿಯಲ್ಲಿ ಕೆರೆಯನ್ನು ಕಟ್ಟಿಸಲು ಯೋಜನೆ ಪ್ರಾರಂಭಿಸು ತ್ತಾರೆ. ಇಷ್ಟು ವಿಶಾಲವಾದ ಕೆರೆಯನ್ನು ಕಟ್ಟಿಸಲು ನೂರಾರು ಕೂಲಿ ರ್ಮಿಕರನ್ನು ಹೊರಗಿನಿಂದ ಕರೆತರದೇ, ಸುತ್ತಮುತ್ತಲಿನ ಗ್ರಾಮಸ್ಥರನ್ನೇ ಕೆರೆಯ ಕೆಲಸಕ್ಕೆ ನಿಯೋಜಿಸಿಕೊಳ್ಳುತ್ತಾರೆ. ಪ್ರತೀ ವಾರವೂ ಕೂಲಿಕಾರರಿಗೆ ಹಣ ಕೊಡುವಾಗ ಬೇರೆಯವರಂತೆ ಎಣಿಸಿ ದುಡ್ಡು ಕೊಡದೇ, ಶೆಟ್ಟರು ಜೋಳಿಗೆಗೆ ಕೈ ಹಾಕಿ ಹಿಡಿಯಲ್ಲಿ ಎಷ್ಟು ಬರುತ್ತದೋ ಅಷ್ಟು ಹಣವನ್ನು ತೆಗೆದು ಕೊಡುತ್ತಿದ್ದ ರಂತೆ.
ಕೆರೆಯ ಕೆಲಸವನ್ನು ಮಾಡುತ್ತಿರುವವರು ಕಡಿಮೆ ಕೂಲಿ ಎಂದು ಮೈಗಳ್ಳತನ ಮಾಡಬಾರದು ಮತ್ತು ಬೇಸರ ಪಟ್ಟುಕೊಳ್ಳ ಬಾರದು. ಅವರು ಸಂತೋಷದಿಂದ ಮನಃಪೂರ್ವಕವಾಗಿ ಕೆಲಸಮಾಡಿದಲ್ಲಿ ಆರು ತಿಂಗಳಿಗಾಗುವ ಕೆಲಸ ನಾಲ್ಕೇ ತಿಂಗಳಲ್ಲಿ ಆಗುತ್ತದೆ ಎನ್ನುವುದು ಶೆಟ್ಟರ ಆಶಯವಾಗಿತ್ತು. ಇನ್ನು ಕೂಲಿ ಕೆಲಸ ಮಾಡುತ್ತಿರುವವರಲ್ಲಿ ಯಾರಾದರೂ ಗರ್ಭಿಣಿ ಸೀಯರಿದ್ದಲ್ಲಿ ಅವರಿಗೆ ಎರಡು ಹಿಡಿ ನಾಣ್ಯವನ್ನು ಕೊಡುತ್ತಿದ್ದರು. ಹೀಗೆ ಎರಡು ಹಿಡಿ ನಾಣ್ಯವನ್ನು ಕೊಡುತ್ತಿದ್ದದ್ದನ್ನು ನೋಡಿ ಇದೇನು ಸ್ವಾಮಿಗಳೇ, ನಾನು ಒಬ್ಬಳೇ ಕೆಲಸ ಮಾಡಿದ್ದು ನನಗೇಕೆ ಎರಡು ಕೂಲಿ ಕೊಡ್ತೀದ್ದೀರಿ ಎಂದಾಗ, ನಗುತ್ತಾ ಶೆಟ್ಟರು ‘ಅಮ್ಮಾ, ತಾಯಿ ನಿನಗೊಂದು ಕೂಲಿ, ಮತ್ತು ನಿನ್ನ ಹೊಟ್ಟೇಲಿರೋ ಮಗುವಿಗೊಂದು ಕೂಲಿ ಎಂದಿದ್ದರಂತೆ ಆ ಮಹಾನು ಭಾವರು.
ಹೀಗೆ ತಮ್ಮ ಸಂಪತ್ತಿನ ಬಹುಪಾಲು ಭಾಗವನ್ನು ಈ ಕೆರೆಯನ್ನು ಕಟ್ಟಿಸಲು ಖರ್ಚು ಮಾಡಿ, ಸುತ್ತಮುತ್ತಲಿನ ಮಳೆಯ ನೀರು ಸರಾಗವಾಗಿ ಈ ಕೆರೆಗೆ ಹರಿದುಬರುವಂತೆ ಸೂಕ್ತವಾದ ರಾಜಕಾಲುವೆಗಳನ್ನು ನಿರ್ಮಿಸಿ 1890ರ ಸಮಯದಲ್ಲಿ ಈ ಕೆರೆಯನ್ನು ಲೋಕಾರ್ಪಣೆ ಮಾಡುತ್ತಾರೆ. ಈ ಕೆರೆಯಿಂದಲೇ ಬೆಂಗಳೂರಿನ ಹಲವಾರು ಪ್ರದೇಶಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲು ಸರಕಾರ ಪ್ರಾರಂಭಿಸುತ್ತದೆ.
ಇಂದಿಗೂ ಸಹ ಈ ಕೆರೆಯನ್ನು ಸುಂದರ ಪರಿಸರ ವ್ಯವಸ್ಥೆಯಲ್ಲಿ ನಿರ್ಮಾಣಮಾಡಿದ ಕೃತಕ ನೀರಿನ ಸಂಗ್ರಹದ ಕೆರೆ ಎಂದೇ ಪರಿಗಣಿಸಲಾಗಿದ್ದು, ಬೆಂಗಳೂರಿನ ಅತಿ ದೊಡ್ಡ ಕೆರೆಗಳಲ್ಲಿ ಇದೂ ಸಹ ಒಂದಾಗಿದೆ. ಈ ಕೆರೆ ಓಲ್ಡ್ ಮದ್ರಾಸ್ ರಸ್ತೆಯನ್ನು ಹಾದುಹೋಗುತ್ತದೆ. ಬೆಂಗಳೂರಿನ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿದೆ. ಈ ನೂರಾ ಮೂವತ್ತು ವರ್ಷಗಳಲ್ಲಿ ಒಂದೆರಡು ಬಾರಿ ನೀರು ಕಡಿಮೆಯಾಗಿದ್ದು ಬಿಟ್ಟರೆ, ಬಹುತೇಕ ಜಲಾವೃತವಾಗಿಯೇ ಇದ್ದು ಸಾವಿರಾರು ಎಕರೆ ವ್ಯವಸಾಯದ ಭೂಮಿಗೆ ನೀರುಣಿಸುತ್ತಿದೆಯಲ್ಲದೇ ಲಕ್ಷಾಂತರ ಜಲಚರಗಳು ಮತ್ತು ಪಕ್ಷಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ.
ಇಂದಿಗೂ ಸಹ ಈ ಸರೋವರವು ವಲಸೆ ಹಕ್ಕಿಗಳಿಗೆ ಜೈವಿಕ ತಾಣವಾಗಿದೆ, ಸಾಮಾನ್ಯವಾಗಿ ಮಚ್ಚೆಯುಳ್ಳ ಕೆಲವು ಪಕ್ಷಿಗಳು ಗೋಲ್ಡನ್ ಓರಿಯೊಲ, ಉತ್ತರ ಷೋವೆಲರ್, ಹಸಿರು ಬೀ – ಈಟರ್, ಬಲ್ಬುಲ, ಪೈಡ್ ಕಿಂಗ್‌ಫಿಶರ್, ಎಗ್ರೆಟ್ಸ್ ಮತ್ತು ಯುರೇಷಿಯನ್ ಕೂಟ್ ಮುಂತಾದವುಗಳು ನೂರಾರು ಕಿಮೀ ಪ್ರಯಾಣ ಮಾಡಿ ಇಲ್ಲಿಗೆ ಬಂದು ತಮ್ಮ ಸಂತಾನಾಭಿವೃದ್ಧಿ ಯನ್ನು ಮಾಡಿಕೊಂಡು ಹೋಗುತ್ತದೆ ಎನ್ನುವುದು ಎಂತಹ ಅದ್ಭುತ ವಿಷಯವಲ್ಲವೇ? ಅವರ ಸಮಾಜ ಸೇವೆ ಕೇವಲ ಈ ಕೆರೆಯನ್ನು ಕಟ್ಟಿಸುವುದಕ್ಕಷ್ಟೇ ಸೀಮಿತವಾಗಿರದೇ ತಮ್ಮ ಜೀವಿತಾವಧಿಯಲ್ಲಿ ತಾವು ವ್ಯಾಪಾರದಲ್ಲಿಗಳಿಸಿದ ಸಮೃದ್ಧವಾದ ಸಂಪಾದನೆಯನ್ನು ಸದ್ವಿನಿಯೋಗ ಮಾಡುವ ದಾನಗುಣ ಅವರಿಗಿತ್ತು.
ಅನೇಕ ಗುಡಿಗಳು, ಅನ್ನ ಛತ್ರಗಳನ್ನು ಕಟ್ಟಿಸಿದ್ದಲ್ಲದೇ, ಕ್ಷಾಮ ಕಾಲದಲ್ಲಿ ನಿರಂತರ ದಾಸೋಹ ನಡೆಸಿದ್ದಲ್ಲದೇ, ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಅವರ ಬಳಿಗೆ ಬಂದವರಿಗೆ ಮನಸೋ ಇಚ್ಛೆ ಹಣದ ಸಹಾಯ ಮಾಡಿದರು. ಇವರ ಈ ರೀತಿಯ
ಜನೋಪಕಾರಿ ಗುಣವನ್ನು ಗುರುತಿಸಿದ, ಅಂದಿನ ವಿಕ್ಟೋರಿಯ ರಾಣಿಯವರ ಇಂಗ್ಲಿಷ್ ಸರಕಾರದವರು ಮಲ್ಲಪ್ಪ ಶೆಟ್ಟರಿಗೆ
ರಾಯ್ ಬಹದ್ದೂರ್ ಎಂಬ ಬಿರುದನ್ನು ಕೊಟ್ಟಿದ್ದಾರೆ. ಇದೇ ಕೆರೆಯ ನಿರ್ಮಾಣದ ಸಮಯದಲ್ಲಿ ನಡೆದ ಘಟನೆಯೊಂದು ಬೆಂಗಳೂರಿನ ಪ್ರಪ್ರಥಮ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸಲು ಪ್ರೇರಣೆಯಾಯಿತು ಎನ್ನುವುದು ಸತ್ಯ. ಅದೊಂದು ದಿನ ಮಲ್ಲಪ್ಪ ಶೆಟ್ಟರು ತಮ್ಮ ದೈನಂದಿನ ಕೆರೆಯ ಕೆಲಸದ ಉಸ್ತುವಾರಿ ಮುಗಿಸಿಕೊಂಡು ಮನೆಗೆ ಮರಳಲು ತಮ್ಮ ಗಾಡಿಯಲ್ಲಿ ಸ್ವಲ್ಪ ದೂರ ಸಾಗುತ್ತಿದ್ದಾಗ, ರಸ್ತೆಯ ಬದಿಯ ಮರದಡಿಯಲ್ಲಿ ತುಂಬು ಗರ್ಭಿಣಿಯೊಬ್ಬಳು ಪ್ರಸವವೇದನೆಯಿಂದ ಬಾಧೆಪಡುತ್ತಿರುವಂಥ ಹೃದಯವಿದ್ರಾವಕವಾದ ದೃಶ್ಯವೊಂದನ್ನು ನೋಡಿ ಕೂಡಲೇ ತಮ್ಮ ಗಾಡಿಯನ್ನು ಕೆರೆ ನಿರ್ಮಾಣ ಮಾಡುತ್ತಿದ್ದ ಜಾಗಕ್ಕೆ ಕಳುಹಿಸಿ ಅಲ್ಲಿಂದ ಕೆಲವು ಹೆಂಗಸರನ್ನು ಗರ್ಭಿಣಿಯ ಸಹಾಯಕ್ಕೆ ಕರೆತಂದರು.
operation success but patient died ಎನ್ನುವಂತೆ ಹೆರಿಗೆಯೇನೋ ಆಯಿತಾದರೂ ಸೂಕ್ತ ಆರೈಕೆಯ ಕೊರತೆಯಿಂದಾಗಿ ಬಾಣಂತಿ ಹೆಂಗಸು ತೀರಿಕೊಂಡಿದ್ದು ಶೆಟ್ಟರ ಮನಸ್ಸಿಗೆ ತುಂಬ ನೋವಾಯಿತು. ಆಗಲೇ ಬೆಂಗಳೂರಿನಲ್ಲಿ ಒಂದು ಸುಸ್ಸಜ್ಜಿತ ಸಾರ್ವಜನಿಕ ಹೆರಿಗೆ ಆಸ್ಪತ್ರೆಯೊಂದನ್ನು ಕಟ್ಟಿಸಲು ಶೆಟ್ಟರು ಸಂಕಲ್ಪಿಸುತ್ತಾರೆ. ಈ ನಿಟ್ಟಿನಲ್ಲಿ ಗಣ್ಯವ್ಯಕ್ತಿಗಳ ಸಭೆಯೊಂದನ್ನು ಕರೆದು ಆ ಸಭೆಯಲ್ಲಿದ್ದ ಮದರಾಸು ಸರಕಾರದ ಗೌವರ್ನರ್ ಆವರ ಮುಂದೆ ತಾವು ಕಂಡ ಹೃದಯವಿದ್ರಾವಕ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ, ಹೆಣ್ಣು ಮಕ್ಕಳಿಗೆ ಹೆರಿಗೆ ಆಸ್ಪತ್ರೆ ಕಟ್ಟಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸುತ್ತಾರೆ.
ಶೆಟ್ಟರ ಈ ಸಲಹೆಯನ್ನು ಎಲ್ಲರೂ ಒಪ್ಪಿಕೊಂಡು, ಆಸ್ಪತ್ರೆಯ ನಿರ್ಮಾಣದ ಖರ್ಚಿಗೆ ಚಂದಾ ಎತ್ತಲು ನಿಶ್ಚಯಿಸಿ, ಶೆಟ್ಟರೇ, ಈ ಯೋಜನೆ ನಿಮ್ಮದು, ನೀವೇ ಮೊದಲು ಚಂದಾ ಹಾಕಿ ಎಂದು ಚಂದಾ ಪಟ್ಟಿಯನ್ನು ಶೆಟ್ಟರ ಮುಂದಿಟ್ಟಾಗ, ಮೊದಲು ನೀವೆ ಹಾಕಿ, ಆಮೇಲೆ ನನ್ನದಿರಲಿ ಎಂದು ತಿಳಿಸಿ ಮೂಲೆಯೊಂದರಲ್ಲಿ ಆಸೀನರಾಗುತ್ತಾರೆ. ಸಭೆಯಲ್ಲಿದ್ದ ಗಣ್ಯ ವರ್ತಕರೆಲ್ಲ ತಮ್ಮ
ಹೆಸರು, ಹಣದ ಮೊತ್ತ ಬರೆಯುತ್ತಾ ಹೋಗಿ ಕಡೆಯದಾಗಿ ಚಂದಾ ಪುಸ್ತಕ ಶೆಟ್ಟರ ಬಳಿ ಬರುತ್ತದೆ. ಈ ಶೆಟ್ಟರು ಎಷ್ಟು
ಕೊಡಬಹುದೆಂಬ ಕುತೂಹಲ ಮದರಾಸಿನ ಗೌವರ್ನರ್ ಅವರದ್ದಾಗಿರುತ್ತದೆ.
ಚೆಂದಾ ಪುಸ್ತಕವನ್ನು ಕೈಗೆತ್ತಿಕೊಂಡ ಶೆಟ್ಟರು ಪುಸ್ತಕದ ತಮ್ಮ ಹೆಸರಿನ ಮುಂದೆ ಉದ್ದಕ್ಕೆ ಸೊನ್ನೆಗಳನ್ನು ಸುತ್ತುತ್ತಾ ಹೋದರು. ಅವರು ಸುತ್ತುತ್ತಿದ್ದ ಸೊನ್ನೆಗಳ ಸಂಖ್ಯೆ 25 ಬಂದ ಕೂಡಲೇ ಅವರ ಗುಮಾಸ್ತರು ಶೆಟ್ಟರ ಕೈ ಹಿಡಿದು ನಿಲ್ಲಿಸುತ್ತಾರೆ. ಇದನ್ನು ಗಮನಿಸಿದ ಸಭೆಯಲ್ಲಿದ್ದ ಗಣ್ಯರೆಲ್ಲರೂ ಇದೇನು ಶೆಟ್ರೇ ಬರೀ ಸೊನ್ನೆ ಸುತ್ತಿದ್ದೀರ? ಹಾಗದ್ರೇ ಏನು ಕೊಡುವುದಿಲ್ಲವೇ ಎಂದು ಗೊಳ್ ಎಂದು ಸಭಾಂಗಣವೇ ಕಿತ್ತು ಹೋಗುವಂತೆ ನಕ್ಕು ಅಪಹಾಸ್ಯ ಮಾಡಿದರಂತೆ.
ಎಲ್ಲರ ಕುಹಕವನ್ನು ಸಹಿಸಿಕೊಂಡ ಶೆಟ್ಟರು, ಗಣ್ಯರೆಲ್ಲರೂ ಸಾವಧಾನದಿಂದ ಒಂದು ಗಂಟೆಯ ಕಾಲ ತಮ್ಮ ಜಾಗದಲ್ಲಿಯೇ
ಆಸೀರರಾಗಿರಿ ದಯವಿಟ್ಟು ಎಲ್ಲೂ ಹೋಗದಿರಿ ಎಂದು ವಿನಂತಿಸಿಕೊಂಡು, ಕೂಡಲೇ ತಮ್ಮ ಗುಮಾಸ್ತರನ್ನು ತಮ್ಮ ಮನೆಗೆ ಕಳಿಸಿ ಒಂದುಸಾವಿರ ಬೆಳ್ಳೀ ರೂಪಾಯಿಗಳಿದ್ದ ಪೀಪಾಯಿಗಳಲ್ಲಿ ಹಣವನ್ನು ತರಿಸಿ ಎಲ್ಲರ ಸಮ್ಮುಖದಲ್ಲಿ ಒಂದೊಂದು ಸೊನ್ನೆಗೆ ಒಂದು ಸಾವಿರ ಬೆಳ್ಳೀ ನಾಣ್ಯಗಳಂತೆ ಅಂದಿನ ಕಾಲಕ್ಕೇ 25 ಸಾವಿರ ಬೆಳ್ಳಿ ವರಾಹಗಳನ್ನು ದಾನ ಮಾಡುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರೆಳಿಡುವಂತೆ ಮಾಡಿದ್ದರು ಕೊಡುಗೈ ದಾನಿಗಳಾದ ಮಲ್ಲಪ್ಪಶೆಟ್ಟರು.
ಈ ರೀತಿಯಾಗಿ ಚೆಂದಾ ಎತ್ತಿ ಇಂದಿನ ನೃಪತುಂಗ ರಸ್ತೆಯ ಐಜಿಪಿ ಕಛೇರಿ ಇರುವ ಸ್ಥಳದಲ್ಲಿಯೇ ಮೊತ್ತ ಮೊದಲ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಿ ನಂತರ ಅದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಆರಂಭವಾದ ವಾಣಿವಿಲಾಸ ಆಸ್ಪತ್ರೆಯೊಂದಿಗೆ
ವಿಲೀನವಾಗಿರುವುದು ಈಗ ಇತಿಹಾಸವಾಗಿದ್ದರೂ ಆಸ್ಪತ್ರೆಯ ಧರ್ಮಕಾರ್ಯ ಮಾಡಿದ ದಾನಿಗಳ ಪಟ್ಟಿಯಲ್ಲಿ ಎಲೆ ಮಲ್ಲಪ್ಪ
ಶೆಟ್ಟರ ಹೆಸರು ಅಗ್ರಸ್ಥಾನದಲ್ಲಿದೆಯಲ್ಲದೇ ಆಸ್ಪತ್ರೆಯಲ್ಲಿ ಅವರ ಭಾವಚಿತ್ರ ಇಂದಿಗೂ ಹಾಕಿರುವುದು ಶ್ಲಾಘನೀಯ.
ಬೆಂಗಳೂರು ನಗರ ಪ್ರದೇಶದ ತ್ವರಿತ ಬೆಳವಣಿಗೆ ಮತ್ತು ವೈಟ್ ಫೀಲ್ಡ ಸುತ್ತ ಮುತ್ತಲೂ ತಲೆ ಎತ್ತಿದ ಕೈಗಾರಿಕೆಗಳಿಂದಾಗಿ ಎಲೆ ಮಲ್ಲಪ್ಪ ಶೆಟ್ಟಿ ಸರೋವರವು ಕಾಲಾನಂತರದಲ್ಲಿ ಕಲುಷಿತಗೊಳ್ಳುತ್ತಾ ಹೋಗುತ್ತಿದೆಯಲ್ಲದೇ ಈ ಕೆರೆಯ ಜಲಾನಯನ ಪ್ರದೇಶದಲ್ಲಿನ ಸುತ್ತಮುತ್ತಲೂ ಅನಧಿಕೃತವಾಗಿ ಅತಿಕ್ರಮಣಗೊಂಡಿರುವ ಬಹುಮಹಡಿ ಕಟ್ಟಡಗಳಿಂದ ನಿರಂತರವಾಗಿ ಹರಿದುಬರುತ್ತಿರುವ ಸಂಸ್ಕರಿಸದ ಒಳಚರಂಡಿ ಯನ್ನು ನೀರು ಕೆರೆಯ ಪರಿಸರವನ್ನು ಹಾಳು ಮಾಡುತ್ತಿದೆ.
2017ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸೀಗೆಹಳ್ಳಿಯಲ್ಲಿ ಎಲೆ ಮಲ್ಲಪ್ಪ ಶೆಟ್ಟಿ ಸಂಸ್ಕರಣಾ ಘಟಕವನ್ನು ಆರಂಭಿಸಿ, ಕೆ.ಆರ್.ಪುರಂ, ಹೂಡಿ, ಮಹಾದೇವಪುರ, ಭಟ್ಟರ ಹಳ್ಳಿಯಿಂದ ಪ್ರತಿದಿನವೂ ಉತ್ಪತ್ತಿಯಾಗುವ ಸುಮಾರು 15 ಮಿಲಿಯನ್ ಲೀಟರ್ ಒಳಚರಂಡಿ ನೀರನ್ನು (ಎಂಎಲ್ಡಿ) ಸಂಸ್ಕರಿಸಿ ಕೆರೆಗೆ ಬಿಡುತ್ತಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಈ ಸಂಸ್ಕರಿತ ನೀರನ್ನು ಅಕ್ಕ ಪಕ್ಕದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಅನೆಕಲ್ ಪ್ರದೇಶಗಳಿಗೆ ಕೃಷಿಗಾಗಿ ಸರಬರಾಜು ಮಾಡುತ್ತಿದೆ.
ಕೇವಲ ಕೆರೆ ಕಟ್ಟೆಗಳು ಮತ್ತು ಆಸ್ಪತ್ರೆಗಳಲ್ಲದೇ, ಬೆಂಗಳೂರಿನ ಇತಿಹಾಸ ಪ್ರಸಿದ್ಧವಾದ ಮಶ್ವರದ ಕಾಡು ಮಶ್ವರ ದೇವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲೂ ಮರಿ ಮಲ್ಲಪ್ಪನವರ ಅಪಾರವಾದ ಕೊಡುಗೆ ಇರುವುದುದನ್ನು ಯಾರೂ ಉಲ್ಲೇಖಿಸದೇ ಇರುವುದು ನಿಜಕ್ಕೂ ಬೇಸರವಾದ ಸಂಗತಿ, ಹೀಗೆ ತಮ್ಮ ಜೀವಮಾನದ ಸಂಪಾದನೆಯೆಲ್ಲವನ್ನೂ ಸಮಾಜಮುಖಿ ಕೆಲಸಗಳಿಗೆ ಮೀಸಲಿಟ್ಟ ಮಲ್ಲಪ್ಪ ಶೆಟ್ಟರು ಅಂತಿಮ ದಿನಗಳಲ್ಲಿ ಬರಿಗೈ ದಾಸರಾಗಿ ಮರಣಹೊಂದಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ. ಹೀಗೆ ಹೇಳುತ್ತಾ ಹೋದರೆ ರಾಜ್ಯದ ಒಂದೊಂದು ಕೆರೆಗೂ ಒಂದೊಂದು ರೀತಿಯ ಐತಿಹಾಸಿಕ ಕಥೆಗಳಿವೆ. ಆ ಕೆರೆಯ ಕಟ್ಟಿಸಿದ ಹಿಂದೆ ಅನೇಕ ರೋಚಕ ಸಂಗತಿಗಳು ಸಾವಿರಾರು ಜನರ ನಿಸ್ವಾರ್ಥ ಪರಿಶ್ರಮ, ತ್ಯಾಗ ಮತ್ತು ಬಲಿದಾನಗಳು ಅಡಗಿವೆ.
ಅಂತಹ ಐತಿಹ್ಯವನ್ನು ಅರಿಯದೇ ದುರಾಸೆಯಿಂದಾಗಿ ಕೆರೆಯ ಜಲಾನಯನ ಪ್ರದೇಶಗಳ ಭೂ ಒತ್ತುವರಿ ಮಾಡಿಕೊಂಡಿರುವು ದಲ್ಲದೇ, ರಾಜಕಾಲುವೆಗಳನ್ನು ಮುಚ್ಚಿಹಾಕಿ ಅಭಿವೃದ್ಧಿಯ ಹೆಸರಿನಲ್ಲಿ ಅದರ ಮೇಲೇಯೇ ಬಹು ಮಹಡಿಗಳ ಟೆಕ್ ಪಾರ್ಕ್ ಗಳನ್ನು ಕೋಟ್ಯಂತರ ರುಪಾಯಿಗಳ ಹಣವನ್ನು ಜೇಬಿಗೆ ಇಳಿಸುವ ಮಂದಿಯೇ, ಬೆಂಗಳೂರಿನಲ್ಲಿ ಒಂದು ಸಣ್ಣ ಮಳೆ ಬಂದರೂ ಜಲಾವೃತ ವಾಗುವಂಥ ದುಸ್ಥಿತಿಯನ್ನು ತಂದಿಟ್ಟಿರುವುದು ತೆರೆದಿಟ್ಟ ಸತ್ಯವೇ ಸರಿ. ಏನಂತೀರೀ?