Thursday, 12th December 2024

ಪರಿಸರ ದಿನಕ್ಕೊಂದು ದಿನದ ಮುಂಚಿನ ಹಳವಂಡ

ಸುಪ್ತ ಸಾಗರ

rkbhadti@gmail.com

ಆ ಸುಂದರ ನಸುಕು. ಡಿಸೆಂಬರ್‌ನ ಚಳಿ ನಚ್ಚಗೆ ನಲುಗಿಸುತ್ತಿದ್ದರೆ ಹೊದೆದ ಹಚ್ಚಡದೊಳಗೆ ಮತ್ತೆ ಮತ್ತೆ ನುಸುಳಿಕೊಳ್ಳುವ ಹಂಬಲ. ಮನದ ಬಯಕೆ, ಕನವರಿಕೆ, ಕಲ್ಪನೆಗಳೇ ಪರಸ್ಪರ ಹೆಣೆದುಕೊಂಡು ಬೆಳಗಿನ ಜಾವದ ಸುಂದರ ಕನಸುಗಳಾಗಿ ಕಾಡುತ್ತಿದ್ದರೆ ಆಗಷ್ಟೇ ಮೂಡಲು ಹವಣಿಸುತ್ತಿರುವ ಸೂರ್ಯನ ಎಳೆಯ ಕಿರಣಗಳು ಅವಕ್ಕೆ ಬಣ್ಣ ತುಂಬುತ್ತಿರುತ್ತವೆ.

ಕಣ್ಣುಬಿಡಲೇನೋ ಆಲಸ್ಯ. ನಿಸರ್ಗ ನಲಿವಿಗೆ ಸಾಥ್ ನೀಡುವ ಗುಬ್ಬಿಗಳ ಚೀಂವ್‌ಚೀಂವ್ ಕಲರವ ಇಡೀ ದಿನದ ಹರ್ಷಕ್ಕೆ ಮುನ್ನುಡಿ ಬರೆಯುತ್ತವೆ.  ಹಾಗೆ ಕಣ್ತೆರೆದು ಉಜ್ಜಿಕೊಳ್ಳುತ್ತ ಹೊರಗೆದ್ದು ಬಂದರೆ ಮುಂದಿನ ಮಾಮರ ದಲ್ಲಿ ಕುಹೂನಾದ. ಪಕ್ಕಕ್ಕೆ ಹೊರಳಿ ಅಂಗಳಕ್ಕೆ ಬಂದು ನಿಂತರೆ ಅತಿಥಿ ಗಳನ್ನೇ ಕರೆಯುತ್ತಿವೆಯೇನೋ ಎಂಬ ಅರ್ಥ ಹೊಮ್ಮಿಸುತ್ತ ’ಕಾ’ ಗುಡುವ ಕಾಕ. ತಲೆಬಾಗಿಲಿನವರೆಗೂ ಬಂದು ಕತ್ತು ನೀಕಿದರೆ ಎಳೆಯ ಬಿಸಿಲಿನಲ್ಲಿ ಧೂಳೆಬ್ಬಿಸುತ್ತ ಹಳ್ಳಿಗೆ ಹೊಸ ಕಳೆ ತುಂಬುವ ಹುರುಪಿನಲ್ಲಿ ಹೊರಟ ಹಸುಗಳ ಮಂದೆಯನ್ನೇ ಹಿಂಬಾಲಿಸುವ, ಅವುಗಳ ಮೇಲಿನ ಗೊರವಂಕ. ಗಿಡದಿಂದ ಗಿಡಕ್ಕೆ ನೆಗೆಯುವ ಬಣ್ಣದ ಗಿಳಿಹಿಂಡು.

ಹಿತ್ತಿಲಿಗೆ ಹೊರಟರೆ ಸ್ವಾಗತಿಸುವ ಕೆಂಬೂತ, ಬೆಳವ, ಪಾರಿವಾಳ, ಗೀಜಗ, ಮಿಂಚುಳ್ಳಿ, ಹಾಲಕ್ಕಿ, ಪಾರಿವಾಳ, ಕಾಜಾಣ, ಬೆಳ್ಳಕ್ಕಿ, ಬಾವಲಿ, ಗೂಬೆ, ಗೂರ ಹಕ್ಕಿಗಳು… ಮುಂಜಾನೆಯಿಂದ ಮುಸ್ಸಂಜೆಯವರೆಗೆ, ಇಳಿಹೊತ್ತಿನಿಂದ ಇರುಳಿನವರೆಗೆ ಅನಾಯಾಸವಾಗಿ ಕಣ್ಣಿಗೆ ಬೀಳುವ, ಆಪ್ತವಾಗಿ ಆಲಾಪ ಗೈಯುವ, ಹಾರಾಡಿ ಹುಮ್ಮಸ್ಸು ತುಂಬುವ, ಶಂಕೆ-ಶಕುನಗಳಿಗೆ ಆಧಾರವಾಗುವ ಅಪರೂಪದ ಪಕ್ಷಿ ಸಂಕುಲಕ್ಕೆ ಅಲ್ಲಲ್ಲಿ ಆಹಾರವನಿತ್ತವನ ಜಾಣ್ಮೆ ಅಚ್ಚರಿ ಹುಟ್ಟಿಸುತ್ತದೆ.

ಅದರ ಬೆನ್ನಲ್ಲೇ ಅವಕ್ಕೆಲ್ಲ, ಅವುಗಳ ಗುಣ ಧರ್ಮಗಳಿಗನುಗುಣವಾಗಿ ಹೊಂದುವ ಹೆಸರನ್ನಿಟ್ಟು, ಬದುಕುವ ಸ್ವಾತಂತ್ರ್ಯವನ್ನು ಕೊಟ್ಟು, ಸಹಜೀವನ ನಡೆಸುವ ಗ್ರಾಮೀಣರಲ್ಲಿರುವ ಪರಿಸರ ಪ್ರಜ್ಞೆಯ ಬಗ್ಗೆಯೂ ಹೆಮ್ಮೆ ಮೂಡುತ್ತದೆ. ಜಾನಪದ ಪರಂಪರೆ ಎಂಬುದು ಸುತ್ತಮುತ್ತಲ ಪರಿಸರದ ಎಲ್ಲ ಜೀವಜಾಲದ ಜೊತೆ ಒಂದಲ್ಲಾ ಒಂದು ವಿಧದಲ್ಲಿ ತನ್ನ ಸಂಬಂಧವನ್ನು ಕಲ್ಪಿಸಿಕೊಂಡಿದೆ. ಜಾನಪದರು ಯಾವತ್ತೂ ಮಾನವ ಕೇಂದ್ರಿತವಾದ ಜಗತ್ತನ್ನು ನಿರ್ಮಿಸಿಕೊಂಡಿದ್ದಿಲ್ಲ.

ಗ್ರಾಮೀಣ ಸಂಸ್ಕೃತಿಯೆಂದರೆ ಅದು ಒಬ್ಬನ ಸುತ್ತಲೂ ಅನಾವರಣಗೊಳ್ಳುವ ಬದುಕಲ್ಲ. ನಿಸರ್ಗದ ಎಲ್ಲ ಅಂಗಗಳಿಗೂ ಅಲ್ಲಿ ಸಮಾನ ಆದ್ಯತೆ. ಎಲ್ಲದರೊಂದಿಗಿನ ನಿರಂತರ ಸಂಪರ್ಕ ಕಟ್ಟಿಕೊಳ್ಳುವ ವಿಶಾಲ ಪರಿಕಲ್ಪನೆಗೆ ಜನಪದರು ಪಾತ್ರರಾಗುತ್ತಾರೆ. ದೇಸಿ ಜೀವನದ ಕೆಲವು ನಂಬಿಕೆಗಳು, ಆಚರಣೆಗಳು ಆಧುನಿಕ ಜಗತ್ತಿಗೆ ವಿಚಿತ್ರವಾಗಿ ಕಂಡರೂ, ಎಲ್ಲ ಜೀವಿಗಳನ್ನೂ ಬದುಕಿಗೆ ಒಳಗೊಳ್ಳಿಸಿಕೊಳ್ಳುವ ಇದರ ಹಿಂದಿನ ಆಶಯವನ್ನು ನಾವು
ಅಲ್ಲಗಳೆಯಲಾಗದು. ಜೀವಿಗಳೆಲ್ಲದರ ಅಭೇದ್ಯ ಕೂಟ ಜೀವನದ ವೈಶಾಲ್ಯವನ್ನು ಗೌರವಿಸದಿರಲಾಗದು.

ತನ್ನ ಸುತ್ತಲಿನ ಜೀವ ಪ್ರಪಂಚದ ಬಗೆಗೆ ಗ್ರಾಮೀಣರು ಕಟ್ಟಿಕೊಂಡಿರುವ ಪಾಪಪುಣ್ಯಗಳ ಕಲ್ಪನೆಗಳೂ ಇದರ ಪ್ರತೀಕವೇ. ಅದು ಕಾಗೆ, ಗೂಬೆಗಳ ದರ್ಶನ, ಚಲನದ ಬಗೆಗೆ ಇರಬಹುದು, ಹಾಲಕ್ಕಿಯಂಥವುಗಳಿಂದ ಹೊಮ್ಮುವ ಕೂಗನ್ನು ಅರ್ಥೈಸಿಕೊಳ್ಳುವುದಿರಬಹುದು, ಪರಿಸರದ ಬದಲಾವಣೆಗೆ ಹೇಳುವ ಶಕುನಗಳ ವ್ಯಾಖ್ಯೆ ಇರಬಹುದು… ಇವೆಲ್ಲವೂ ಆ ಜೀವ ಪರಿಸರದ ಬಗೆಗಿನ ಕಾಳಜಿ, ಕಳಕಳಿಯ ಅಭಿವ್ಯಕ್ತಿಯೇ ಹೊರತು ಮೌಢ್ಯವೆಂದು ಸಾರಾಸಗಟು ತಳ್ಳಿಹಾಕಲಾಗದು.

ಪುರಾಣ, ಜಾನಪದದ ಕಥಾ ಹಂದರದಲ್ಲೂ ಪಕ್ಷಿ ಸಂಕುಲಕ್ಕೆ ಪ್ರಾತಿನಿಧ್ಯ ನೀಡಿ ಅವಕ್ಕೆ ಮಾನವ ಗುಣ-ರೂಪಗಳನ್ನು ಸಂಯೋಜಿಸಿದ್ದೂ ಸಹ ಇದೇ ಕಾರಣಕ್ಕೆ. ಇನ್ನೂ ಮುಂದೆ ಹೋಗಿ ಕೆಲ ಬಲಶಾಲಿ, ಸುಂದರ ಹಕ್ಕಿಗಳಿಗೆ ದೈವಿಕ ಸ್ವರೂಪವನ್ನೂ ಕೊಟ್ಟು ಪೂಜಿಸಲಾಗಿದೆ. ಇವೆಲ್ಲವೂ ಆ ಸಮೂಹದ ಸಂರಕ್ಷಣಾ ಕ್ರಮವಾಗಿಯೇ ನಿಲ್ಲುತ್ತವೆ. ಅದಿಲ್ಲದೇ ಹೋಗಿದ್ದರೆ ಇಡೀ ಜೀವ ವೈವಿಧ್ಯ ಅಪಾಯಕ್ಕೆ ಸಿಲುಕಿರುತ್ತಿತ್ತು.

ಇವತ್ತು ಗುಬ್ಬಿಗಾದದ್ದೂ ಅದೇ. ಕುಟುಂಬಕ್ಕೆ ಅನ್ವರ್ಥವಾಗಿ ಸದಾ ಮನುಷ್ಯನೊಂದಿಗೆ ಆಪ್ತವಾಗಿಯೇ ಬದುಕಿರುತ್ತಿದ್ದ ಈ ಪುಟ್ಟ ಪಕ್ಷಿ ಸಂಕುಲವೇ ಬಹುತೇಕ ಮರೆಯಾಗಿ ಹೋಗಿದೆ. ಮನೆ ಮಕ್ಕಳು, ಸಂಸಾರವನ್ನು ಅಚ್ಚೆಯಿಂದ ಕಾಪಿಡುವವನನ್ನು ‘ಮನೆಗುಬ್ಬಿ’ ಎಂದೇ ಕರೆಯುವುದು ರೂಢಿ. ಗುಬ್ಬಿಯ ಮನೆಯಂತೆ ಎಂದು ಸುಂದರ, ಪುಟ್ಟ ಸಂಸಾರವನ್ನು ಇಂದಿಗೂ ಗುರುತಿಸುತ್ತಾರೆ. ಗುಬ್ಬಿಯ ಮೇಲೆ ಜಾನಪದರು ಇಟ್ಟ ವಿಶೇಷ ಪ್ರೀತಿಯ ದ್ಯೋತಕವದು. ವೃಥಾ ದಾಳಿ, ದುರ್ಬಲರ ಮೇಲಿನ ದೌರ್ಜನ್ಯವನ್ನು ’ಗುಬ್ಬಿಯ ಮೇಲೆ ಬ್ರಹ್ಮಾಸ’ವೆಂದು ಟೀಕಿಸುವುದಿದೆ.

ಗುಬ್ಬಿಯ ಬದುಕಿಗೆ, ಅದರ ಗೂಡಿಗೆ ಧಕ್ಕೆ ತಂದರೆ ಮುಂದಿನ ಜನ್ಮದಲ್ಲಿ ಕನಿಷ್ಠ ಸೂರೂ ಸಿಗದ ಸಂಕಷ್ಟಕ್ಕೆ ಒಳಗಾಗುತ್ತೇವೆಂಬ ನಂಬಿಕೆ ಗ್ರಾಮೀಣ ರಲ್ಲಿದೆ. ಹೀಗಾಗಿ ಗುಬ್ಬಿಗಾಗಿ ಪ್ರತಿ ಮನೆಯಲ್ಲೂ, ಜಂತಿಯ ಸಂದಿನಲ್ಲೋ, ಸೂರಿನ ಕೆಳಗೋ, ಗೋಡೆಯ ಮೇಲ್ಭಾಗದಲ್ಲೋ ಜಾಗವನ್ನು ಕಲ್ಪಿಸುವ ಪದ್ಧತಿ ಇತ್ತು. ಅವುಗಳಿಗೆ ಆಹಾರಕ್ಕಾಗಿ ಅಲೆದಾಟ ತಪ್ಪಲಿ ಎಂಬ ಉದ್ದೇಶದಿಂದ ಅಂಗಳದಲ್ಲಿ ಕಾಳುಗಳನ್ನು ಚೆಲ್ಲಿಡಲಾಗುತ್ತಿತ್ತು. ಕೆಲವೊಮ್ಮೆ ಮನೆಯ ಮುಂದಿನ ಆವರಣದಲ್ಲಿ, ಬುಟ್ಟಿ, ಪೆಟ್ಟಿಗೆಗಳನ್ನಿರಿಸಿ, ಕಾಳು, ಕಡ್ಡಿಗಳನ್ನು ಒಟ್ಟುಗೂಡಿಸಿ ಅನುವು ಮಾಡಿಕೊಡುವುದರ ಹಿಂದಿನ ಮಾನವತೆಯನ್ನು ಶ್ಲಾಘಿಸಲೇಬೇಕು.

ಇನ್ನು ಮಕ್ಕಳು ಆಡುವ ಗುಬ್ಬಿ ಹಿಡಿಯುವ ಆಟವಂತೂ ಬಾಲ್ಯದ ಅವಿಸ್ಮರಣೀಯ ಸಂಗತಿಗಳಲ್ಲಿ ಒಂದಾಗಿತ್ತು. ಗುಬ್ಬಿ ಗೂಡುಕಟ್ಟಿದರೆ ಅಂಥ ಮನೆ ನೆಮ್ಮದಿಯ ತಾಣವೆಂತಲೂ, ಅಭಿವೃದ್ಧಿಯ ಸಂಕೇತವೆಂತಲೂ ಇಂದಿಗೂ ನಂಬಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಮನೆಯ ವಾತಾವರಣವನ್ನೇ ಸಂಭ್ರಮಕ್ಕೆ ತಿರುಗಿಸುವ ಅಂಥ ಕಲರವ ಈಗೆಲ್ಲಿ? ಕಾಗೆಗಳ ವಿಚಾರಕ್ಕೆ ಬಂದರೆ, ಪಿತೃಗಳ ಸಮಾನವೆಂದು ಬಗೆಯುವ ಈ ಪಕ್ಷಿ ಸಮೂಹಕ್ಕೆ ವಿಶೇಷ ಗೌರವಾದರ ಇಂದಿಗೂ ಜಾನಪದರಲ್ಲಿದೆ. ಮನೆಯ ಸುತ್ತಮುತ್ತಲೇ ಸುಳಿದಾಡುತ್ತ, ಸಣ್ಣಪುಟ್ಟ ಹಾವು, ಹುಳುಗಳಿಂದ ಆವರಣವನ್ನು ರಕ್ಷಿಸುತ್ತಾ, ಒಂದು ರೀತಿಯಲ್ಲಿ ಸುತ್ತಲಿನ ಸ್ವಚ್ಛತೆಗೆ ಕಾರಣವಾಗುತ್ತಿದ್ದವುಗಳು ಕಾಗೆಗಳೇ.

ಬಿಸಿಲಲ್ಲಿ ಒಣಗಿಸಿದ ಕಾಳು, ಆಹಾರ ಪದಾರ್ಥಗಳಿಗೆ ಹೊಂಚು ಹಾಕುವ ಸಂದರ್ಭದಲ್ಲಿ ಕಾಗೆಗಳ ಬಗ್ಗೆ ವಿಪರೀತ ಮುನಿಸು ಕಂಡರೂ, ಅವುಗಳ ಕೂಗಿಲ್ಲದ ದಿನಗಳಲ್ಲಿ ತೀರಾ ಒಂಟಿತನ ಕಾಡುವುದು ಸುಳ್ಳಲ್ಲ. ಕೋಗಿಲೆಯ ಮರಿಗಳನ್ನು ಸಾಕಿ ಆದರ್ಶ ಮೆರೆಯುವ ಕಾಗೆಗಳೆಂದರೆ ಶುಭ-ಅಶುಭ ಶಕುನಗಳ ಪ್ರತೀಕ. ತೀರಾ ಕರಗುಟ್ಟ ತೊಡಗಿದಾಗಲೇ ಹಳ್ಳಿಗರು ಬಂಧುಗಳನ್ನು ಕರೆಯುತ್ತಿದೆ ಎಂದೋ, ಮನೆಗೆ ಅಪಾಯ ಎರಗುತ್ತಿದೆ ಎಂದೋ ಅರ್ಥೈಸುತ್ತಿದ್ದರು. ಕಾಗೆಯಿಲ್ಲದ ಶ್ರಾದ್ಧ ಅಪರಿಪೂರ್ಣ. ಅದು ಮನೆಯೊಳಗೆ ಹೊಕ್ಕರೆ ಅಪಶಕುನ.

ಹೇಗಿದ್ದರೂ ಕಾಗೆಯಿಲ್ಲದ ಗ್ರಾಮ ಭಣಭಣ. ಪಾರಿವಾಳವಿಲ್ಲದ ಊರನ್ನು ಕಲ್ಪಿಸಿಕೊಳ್ಳಲೂ ಆಗುವು ದಿಲ್ಲ. ವಿಶಾಲ ಬಯಲು, ದಟ್ಟ ಕಾಡಿದ್ದರೂ ಪಾರಿವಾಳಗಳು ಇರುವುದು ಮನುಷ್ಯನ ಜತೆಜತೆಗೇ. ಸೂರಿಗೇ ಗೂಡುಕಟ್ಟಿ, ಅಂಗಳದ ತುಂಬೆಲ್ಲ ಇಶ್ಶಿ ಮಾಡಿ, ಗಳಿಗೆಗೊಮ್ಮೆ ಗುರುಗುಟ್ಟುವ ಇವು ಇತಿಹಾಸದುದ್ದಕ್ಕೂ ಪ್ರಮುಖ ಸಂಪರ್ಕ ಮಾಧ್ಯಮವಾಗಿಯೂ ಗುರುತಿಸಿಕೊಂಡಿವೆ. ಜೂಜು, ಕ್ರೀಡೆಗಳಿಗೆ, ಹವ್ಯಾಸಕ್ಕಾಗಿ ಸಾಕು ಪಕ್ಷಿಯಾಗಿಯೂ ಇವು
ನಮ್ಮ ಜತೆ ಬಂದಿವೆ. ಸ್ಥಳೀಯ ಔಷಽಯ ಪದ್ಧತಿಗಳಲ್ಲೂ ಪಾರಿವಾಳಗಳ ಮಾಂಸ ಬಳಕೆಯ ಉದಾಹರಣೆಗಳು ಸಿಗುತ್ತವೆ.

ಗೂಬೆ, ಬಾವಲಿಗಳನ್ನು ನಾವೆಷ್ಟೇ ದ್ವೇಷಿಸಿದರೂ ಅವುಗಳು ಮಾತ್ರ ಮನುಷ್ಯನ ಜತೆಜತೆಗೇ ವಾಸಿಸಿಕೊಂಡು ಬಂದಿವೆ. ವೈವಿಧ್ಯದ ದೃಷ್ಟಿಯಿಂದ ಮಾತ್ರವಲ್ಲ, ಕೆಲ ಅಪರೂಪದ ಉಪಕಾರಕ್ಕೂ ಇವು ಪಾತ್ರವಾಗಿವೆ. ಅವುಗಳ ಬಗೆಗಿನ ಅವ್ಯಕ್ತ ಭೀತಿಯಿಂದಾಗಿ ಪ್ರಯೋಜನಗಳು ನಮ್ಮ ಗಮನಕ್ಕೆ ಬಂದಿಲ್ಲ ಎಂಬುದನ್ನು ಬಿಟ್ಟರೆ ಪಾರಿಸಾರಿಕ ಸಮತೋಲನಕ್ಕೆ ಇವೆರಡರ ಕೊಡುಗೆ ಅಪಾರ.

ನವಿಲು, ಗಿಳಿಗಳಂತೂ ನಮ್ಮ ಪಾಲಿಗೆ ಆಪ್ಯಾಯಮಾನ. ಪಾರಿವಾಳದಂತೆ ಆಹಾರವಾಗಿಯೂ ಈ ಎರಡು ಹಕ್ಕಿಗಳನ್ನು ಬಳಸುತ್ತಾರಾದರೂ ಇವಿಲ್ಲದ ಗ್ರಾಮೀಣ ಪರಿಸರ ಬಣ್ಣಗೆಟ್ಟಂತೆಯೇ ಸರಿ. ಕೃಷಿಯಲ್ಲಿ ಈ ಎರಡೂ ಸಂಕುಲದ ಪಾತ್ರ ಅಮೂಲ್ಯವಾದದ್ದು. ಇನ್ನು ಗ್ರಾಮೀಣ ಕಾನನಕ್ಕೆ ತೀರಾ ಚಿರಪರಿಚಿರತವೆನಿಸುವ ಕೋಳಿ ಜಾತಿಗೆ ಸೇರಿದ ಗೌಜಲ, ಗೀಜಗ ನಾಡಿನುದ್ದಕ್ಕೂ ಸಂತತಿಯನ್ನು ವಿಸ್ತರಿಸಿಕೊಂಡಿರುವ ಮಕ್ಕಳ ಇಷ್ಟದ ಬೆಳವ, ಸಿಹಿಯನ್ನದ ಪ್ರತೀತಿಗೆ ಪಾತ್ರವಾಗಿರುವ ಕೆಂಬೂತ, ಕಾಡಿನ ನೀರವ ಸೀಳುವ ಕಾಡುಕೋಳಿ, ನೀರ್ಕೋಳಿಗಳು, ಕೆರೆ, ಹೊಲದ ಪರಿಸರವನ್ನೂ ಚೇತೋಹಾರಿಯಾಗಿಸಿದ ಬಾತು, ಬೆಳ್ಳಕ್ಕಿ, ಬುಂಡುಬುಳುಕ, ಮಿಂಚುಳ್ಳಿ, ಕೊಕ್ಕರೆಗಳು, ದಟ್ಟ ಕಾಡನ್ನು ಸೀಳಿಕೊಂಡುಹೋಗುವ ಗ್ರಾಮೀಣ ರಸ್ತೆಗಳ
ಅಕ್ಕಪಕ್ಕದಲ್ಲಿ ಗಮನ ಸೆಳೆಯುವ ಜುಟ್ಟಕ್ಕಿ, ಕುಂಡೆಕುಣಿತದ ಹಕ್ಕಿ, ತಿತ್ತಿ ಹಕ್ಕಿ, ಮರಕುಟಿಗ, ಗೊರಗೊಯಕ, ಕಾಜಾಣ, ಪುರ್ಲ ಹಕ್ಕಿ, ಶಿಳ್ಳೆಹಕ್ಕಿಗಳು ಊರಿನ ಗಡಿಯಲ್ಲೇ ತಮ್ಮ ಗಡುವನ್ನೂ ಗುರುತಿಸಿಕೊಂಡಿರುವ ಹದ್ದು, ಗಿಡುಗಗಳು…ಹೀಗೆ ಈ ಪಕ್ಷಿ ಸಂಕುಲಗಳೇ ಇಲ್ಲವಾಗಿದ್ದರೆ ಒಬ್ಬೊಂಟಿಯಾಗಿ ಮನುಷ್ಯ ಈ ಜಗತ್ತಿನಲ್ಲಿ ಬದುಕಲು ಸಾಧ್ಯವಿರುತ್ತಿತ್ತೇ?

ಕಾಡು ಎನ್ನುವುದಕ್ಕೆ ನಮ್ಮಲ್ಲಿ ಅತ್ಯಪೂರ್ವ ವ್ಯಾಖ್ಯಾನವಿದ್ದಿತ್ತು. ಅದೊಂದು ಕೇವಲ ಮರಗಳ ಸಮೂಹವಾಗಿರಲಿಲ್ಲ ನಮ್ಮ ಗ್ರಾಮೀಣರ ಪಾಲಿಗೆ. ಯಾವುದು ಕಾಪಿಟ್ಟುಕೊಂಡು ಬೀಡು ಎನಿಸಿಕೊಂಡಿತ್ತೋ ಅದೇ ಕಾಡು. ಅಲ್ಲಿನ ಉಪ ಉತ್ಪನ್ನಗಳ ಬಳಕೆ ನಮಗೆ ಎಂದುಗೂ ನಿಷಿದ್ಧವೆಂದಿರಲಿಲ್ಲ. ಕಾಡಿನಲ್ಲಿ ಬಿದ್ದಿದ್ದ ಒಣ ಮರಗಳು, ಬಿದಿರು, ಅಳಲೆ, ಅಂಟುವಾಳದಂಥವು, ಒಣಗಿದ ದರಗು ಎಲೆಗಳು, ಸಣ್ಣಪುಟ್ಟ ಆಹಾರಕ್ಕಾಗಿ ಬಳಸುವ ಗಡ್ಡೆ ಗೆಣಸುಗಳು, ಮಾವು, ಹಲಸಿನಂಥ ಹಣ್ಣುಗಳು ಯಥೇಚ್ಛವಾಗಿ ನಮ್ಮ ಕಾಡಲ್ಲಿ ಲಭ್ಯವಿದ್ದವು. ಇಂಥವುಗಳು ಆ ಕಾಡಿನ ಸುತ್ತಲಿನ ಹಳ್ಳಿಗಳವರು ಜತನದಿಂದ ಆಯ್ದು ತಂದು ಬಳಸುತ್ತಿದ್ದರು. ಕಾಡುನಾಡು ಎಂಬ ಪ್ರತ್ಯೇಕತೆ ಇದ್ದೇ ಇರಲಿಲ್ಲ. ಕಾಡಿನ ಜೀವಿಗಳು ಎಂದಿಗೂ ಉಪಟಳವಾಗಿ ಕಂಡಿರಲಿಲ್ಲ.

ನಾಡಿನಿಂದ ಜನ ಕಾಡಿಗೆ ಹೋಗುವುದು, ಕಾಡಿನಿಂದ ಪ್ರಾಣಿಗಳು ನಾಡಿಗೆ ಬರುವುದು ಸಹಜವಾಗಿತ್ತು. ನಾಡಿನಲ್ಲಿ ಪ್ರಾಣಿಗಳಿಗೆ, ಕಾಡಿನಲ್ಲಿ ಮನುಷ್ಯರಿಗೆ ನಿರ್ಭೀತಿ ಇತ್ತು. ಎಲ್ಲೋ ಅಪರೂಪಕ್ಕೆಂಬಂತೆ ಕೆಲವು ಅಹಿತಕಾರಿ ಘಟನೆಗಳು ನಡೆಯುತ್ತಿದ್ದವಾದರೂ ಅವು ಸಹ ಪ್ರಮಾದವಶಾತ್ ಆಗುವುದೇ ಹೆಚ್ಚು. ಸಹಬಾಳ್ವೆ ಎಂಬುದು ಸಿದ್ಧಾಂತವಾಗಿತ್ತು. ಮಾತ್ರವಲ್ಲ ಕಾಡಿನ ರಕ್ಷಣೆ ನಾಡಿನವರ ಹೊಣೆಯಾಗಿತ್ತು. ಜಾನುವಾರುಗಳ ಮೇವಿಗೆ ಪೂರಕವಾದ ಹುಲ್ಲುಗಾವಲು, ಕೆರೆಯ ಸುತ್ತಮುತ್ತಲಿನ ಅಚ್ಚುಕಟ್ಟು, ಬಯಲು ಬೇಣ, ಸೊಪ್ಪಿನ ಬೆಟ್ಟಗಳು ಕಾಡಿನ ವ್ಯಾಖ್ಯಾನಕ್ಕೊಳಪಟ್ಟಿರಲಿಲ್ಲ. ಆದರೂ ಅವೆಲ್ಲದರ ನಿರ್ವಹಣೆ ಗ್ರಾಮಸ್ಥರದ್ದೇ ಆಗಿತ್ತು. ಹೀಗಾಗಿ ಗಾಳಿ, ನೀರು, ಅಗತ್ಯಕ್ಕೆ ಬೇಕಾದ ಸೊಪ್ಪು ಸದೆಗಳು, ಮರಮಟ್ಟುಗಳು, ನೆಲದಡಿಯ ಖನಿಜ  ಸಂಪತ್ತುಗಳು ಯಾವೊಂದೂ ಖಾಸಗಿ ಆಸ್ತಿಗಳಾಗಿರಲಿಲ್ಲ. ಹಾಗೆಂದು ಸರ ಕಾರಕ್ಕೆ ಸೇರಿಯೂ ಇರಲಿಲ್ಲ.

ಅದು ಸಮುದಾಯದ ಆಸ್ತಿ. ಲಭ್ಯ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ವಿಜಯನಗರ ಅರಸರ ಕಾಲ ದಿಂದಲೂ ಈ ಸಂಪ್ರದಾಯ ಪಾಲನೆಯಾಗುತ್ತ ಬಂದಿದೆ. ಯಾವಾಗ ಭಾರತಕ್ಕೆ ಬ್ರಿಟಿಷರು ಕಾಲಿಟ್ಟರೋ, ಅಲ್ಲಿಂದ ಒಂದೊಂದೋ ನಮ್ಮ ಸಂಪನ್ಮೂಲಗಳ ಕೊಳ್ಳೆ ಆರಂಭವಾಯಿತು. ಮೊದಲಿಗೆ
ನೆಲದಡಿಯ ಎಲ್ಲ ಸಂಪತ್ತೂ ಸರಕಾರಕ್ಕೆ ಸೇರಿದ್ದೆಂದು ಘೋಷಿಸಲಾಯಿತು. ಅದರ ಮೇಲಿನ ಜನರ ಹಕ್ಕನ್ನು ಕಸಿದುಕೊಳ್ಳಲಾಯಿತು.

ಖಾಸಗಿ ಜಾಗದಲ್ಲಿ ಇದ್ದಿರಬಹುದಾದ ಖನಿಜಕ್ಕೂ ಸರಕಾರ ತನ್ನ ಹಕ್ಕಿನ ಮುದ್ರೆಯೊತ್ತಿತು. ಆಗ ಬ್ರಿಟಿಷರಿಗೆ ಉಕ್ಕು ಸೇರಿದಂತೆ ಹಲವು ಖನಿಜಗಳ
ಅಗತ್ಯವಿತ್ತು. ಭಾರತದ ನೆಲದವನ್ನು ಬಗೆದು ಅದನ್ನು ಸಾಗಿಸಲಾಯಿತು. ನಂತರ ಅವರ ಕಣ್ಣು ಬಿದ್ದದ್ದು, ಅರಣ್ಯದ ಮೇಲೆ. ಇಂಗ್ಲೆಂಡ್‌ನಲ್ಲಿ ಹಡಗು ಕೈಗಾರಿಕೆ, ರೈಲ್ವೆ ವಿಸ್ತರಣೆ ಭರದಿಂದ ಸಾಗಿದ್ದ ಕಾಲವದು. ಭಾರಿ ದಿಮ್ಮಿಗಳ ಅಗತ್ಯ ಅವರಿಗೆ ದೊಡ್ಡ ಪ್ರಮಾಣದಲ್ಲಿ ಇತ್ತು. ಆಗ ಕಂಡದ್ದೇ ನಮ್ಮ ಕಾಡುಗಳು. ನಮ್ಮ ಕಾಡುಗಳಲ್ಲಿದ್ದ ದೇವದಾರು ಸೇರಿದಂತೆ ವೃಕ್ಷ ಸಂಪತ್ತನ್ನು ಕೊಳ್ಳೆ ಹೊಡೆಯಲು ನಿರ್ಧರಿಸಿದರು.

ಕಾಡು ಸರಕಾರದ ಆಸ್ತಿಯಾಗಿ ಘೋಷಣೆಯಾಯಿತು. ಮಾತ್ರವಲ್ಲ ಕಾಡಿನ ವ್ಯಾಖ್ಯಾನ ಬದಲಾಯಿತು. ಕೆರೆ, ಕಟ್ಟೆ, ಹುಲ್ಲು ಗಾವಲುಗಳೂ ಸರಕಾರದ ಅಧೀನಕ್ಕೆ ಒಳಪಟ್ಟಿತು. ವೈವಿಧ್ಯಮಯ ವೃಕ್ಷಗಳ ಸ್ಥಾನದಲ್ಲಿ ಏಕಜಾತಿಯ ನಿರುಪಯುಕ್ತ ನೆಡುತೋಪು ತಲೆ ಎತ್ತಿತು. ಭೂಮಿ ಬರಡಾಯಿತು.
ನೀರಾರಿತು. ಅಂದು ಆರಂಭವಾದ ದುರಂತ ಸರಣಿ ಸ್ವಾತಂತ್ರಾ ನಂತರದ ಪ್ರಜಾಪ್ರಭುತ್ವದಲ್ಲೂ ನಿಲ್ಲಲಿಲ್ಲ! ತೀರಾ ಸ್ವಾರ್ಥಕ್ಕೆ ಬಿದ್ದು ‘ನನ್ನದಷ್ಟೇ ಬದುಕು, ಈ ಪರಿಸರ ಪ್ರತಿಯೊಂದು ಸಂಪನ್ಮೂಲಗಳೂ ಇರುವುದು ‘ನನಗಾಗಿಯೇ’ ಎಂಬ ಅಹಮಿಕೆಯೊಂದಿಗೆ ದಿಕ್ಕು ದೆಸೆಯಿಲ್ಲದೇ, ಬಿಡುಬೀಸಾಗಿ ಬದುಕುವ ನಮಗೆ ಜಾನಪದರ ಸಾಮರಸ್ಯ ಅರ್ಥವಾದೀತೇ? ಜೀವಜಾಲದ ಆಂತರಿಕ ಮತ್ತು ಬಾಹ್ಯ ಸಂಬಂಧಗಳ ಮೌಲ್ಯವನ್ನು ದಕ್ಕಿಸಿಕೊಳ್ಳುವ
ವ್ಯವಧಾನ ನಮಲ್ಲಿ ಉಳಿದಿದೆಯೇ? ಪಕ್ಷಿಗಳ ಚಲನವಲನಗಳಿಂದಲೇ ಸುತ್ತಲಿನ ಬೆಳವಣಿಗೆ, ಅಪಾಯ, ನಿಸರ್ಗದ ವ್ಯತ್ಯಾಸ, ವಾತಾವರಣದ ಮುನ್ಸೂಚನೆ, ಮಳೆ-ಬೆಳೆಯ ಅಂದಾಜು ಎಲ್ಲವನ್ನೂ ಪಡೆಯುತ್ತಿದ್ದ ಸೂಕ್ಷ್ಮತೆ ನಮ್ಮ ಆಧುನಿಕ ವಿಜ್ಞಾನದಲ್ಲಿ ಬೆಳೆದಿದೆಯೇ? ಎಲ್ಲ ತರ್ಕದ
ಆಚೆಗೂ ಬೆಳೆದು ನಿಲ್ಲುವ ಈ ತಿಳಿವಳಿಕೆ, ಅರಿವನ್ನು ಉಳಿಸಿಕೊಳ್ಳುವ ಅಗತ್ಯ ಹೊಣೆಗಾರಿಕೆ ನಮಗಿಲ್ಲವೇ? ಹಾಗೊಮ್ಮೆ ಇದ್ದರೆ ಮೊದಲು ಉಳಿಯಬೇಕಾದದ್ದು ಇಂಥ ಅಪರೂಪದ ಪಕ್ಷಿ ಸಂಕುಲ.