ಶಶಾಂಕಣ
shashidhara.halady@gmail.com
ನಮ್ಮ ರಾಜ್ಯದ ಅತಿ ಸುಂದರ ತಾಣಗಳಲ್ಲಿ ಒಂದಾದ ಕುಮಾರಪರ್ವತಕ್ಕೆ ೧೯೮೪ರಲ್ಲಿ ಚಾರಣ ಮಾಡಿದ ನೆನಪು ನನಗಿನ್ನೂ ಹಸಿರಾಗಿಯೇ ಇದೆ. ಸುಬ್ರಹ್ಮಣ್ಯ ಪೇಟೆಯಿಂದ ಮಧ್ಯಾಹ್ನ ಹೊರಟು, ಕಾಡುದಾರಿ ಹಿಡಿದು, ಕಲ್ಲುಗುಡ್ಡ ಎಂಬ ಕಡಿದಾದ ಏರನ್ನು ಏರಿ, ಏದುಸಿರು ಬಿಡುತ್ತಾ, ಅಲ್ಲೇ ಮುಂದೆ ಇರುವ ಗಿರಿಗದ್ದೆ ಎಂಬ
ವಸತಿಯನ್ನು ತಲುಪಿದಾಗ, ಅಲ್ಲಿನ ನಿವಾಸಿಗಳಿಂದ ಆತ್ಮೀಯ ಸ್ವಾಗತ.
ಅಂದು ಅಲ್ಲಿ ನಾಲ್ಕು ಜನ ವಾಸವಾಗಿದ್ದರೆಂದು ನೆನಪು. ಆ ದಿನ ಮಕ್ಕಳು ಸಹ ಇದ್ದರು. ಅಲ್ಲಿ ಪರಿಚಯವಾದವರೇ, ಆ ಮನೆಯ ಮಹಾಲಿಂಗ ಭಟ್ಟರು. ಸಹ್ಯಾದ್ರಿ ಶ್ರೇಣಿಯ ಬೆಟ್ಟಗಳ ನಡುವೆ ವಾಸಿಸಿರುವ ಆ ‘ಬೆಟ್ಟದ ಜೀವ’, ನಡೆದು ಬಂದ ನಮಗೆ ತಕ್ಷಣ ಮಜ್ಜಿಗೆ ನೀಡಿ (ಉಚಿತ) ಸತ್ಕರಿಸಿದ್ದು, ಆತ್ಮೀಯವಾಗಿ ಮಾತನಾ ಡಿಸಿದ್ದು ಇಂದಿಗೂ ನೆನಪಿದೆ. ಬಿಸಿಲಿನಲ್ಲಿ ನಡೆದು ಬಂದಿದ್ದ ನಮಗೆ, ಅವರು ‘ಎಷ್ಟು ಬೇಕಾದರೂ ಕುಡಿಯಿರಿ’ ಎಂದು ಹೇಳುತ್ತಾ, ನೀಡಿದ್ದ ಮಜ್ಜಿಗೆ ಅಮೃತ ದಂತಿತ್ತು!
ಅವರು ನೀಡಿದ ಮಜ್ಜಿಗೆ ನಮ್ಮ ಶಕ್ತಿಯನ್ನು ಕುದುರಿಸಿತು, ಮುಂದಿನ ಚಾರಣದ ಶ್ರಮ ಎದುರಿಸಲು ವೇಗೋತ್ಕರ್ಷದಂತೆ ಕೆಲಸ ಮಾಡಿತ್ತು. ಆದ್ದರಿಂದಲೇ, ಮಹಾಲಿಂಗ ಭಟ್ಟರು ಇನ್ನಿಲ್ಲ ಎಂದು ಮೊನ್ನೆ ಗೊತ್ತಾದಾಗ, ನಿಜಕ್ಕೂ ಬೇಸರವಾಯಿತು. ಕುಮಾರಪರ್ವತಕ್ಕೆ ಬರುವ ಚಾರಣಿಗರು ಎಂದರೆ ದಿ.ಮಹಾಲಿಂಗ ಭಟ್ಟರಿಗೆ ಮತ್ತು ಅವರ ಸಹೋದರರಿಗೆ ಎಲ್ಲಿಲ್ಲದ ಅಕ್ಕರೆ, ಆತ್ಮೀಯತೆ. ಬೆಟ್ಟರುವವರ ಕುರಿತು, ಚಾರಣದ ಕುರಿತು, ಕುಮಾರ ಪರ್ವತವನ್ನು ಏರುವವರ ಕುರಿತು ಅಪಾರ ಗೌರವ ಇದ್ದುದರಿಂದಲೇ, ಅವರು ಕಳೆದ ೫-೬ ದಶಕಗಳಿಂದ ಚಾರಣಿಗರ ಆತಿಥ್ಯ ಮಾಡಿದ್ದಾರೆ.
ಹಿಂದೆ ಸುಬ್ರಹ್ಮಣ್ಯದಿಂದ ಕುಮಾರಪರ್ವತದ ತುದಿಗೆ ನಡೆದು ಬರುವ ಭಕ್ತರಿಗೆ, ಅಪರೂಪಕ್ಕೆ ನಮ್ಮಂತೆ ಬರುತ್ತಿದ್ದ ಚಾರಣಿಗರಿಗೆ ಆತಿಥ್ಯ ನೀಡುತ್ತಿದ್ದರು;
ಅಂದು ಅವರ ಸೇವೆ ಸಂಪೂರ್ಣ ಉಚಿತ -ಮಲೆನಾಡಿನಲ್ಲಿ ಇರುವ ನಂಬಿಕೆಯಂತೆ, ಬರುವವರೆಲ್ಲಾ ಅತಿಥಿಗಳು ಎಂಬ ಭಾವ. ಕುಮಾರಪರ್ವತ ಏರುವವರಿಗೆ ಅಂಥದೊಂದು ಆತಿಥ್ಯ ಅತಿ ಅಗತ್ಯ; ಸುಬ್ರಹ್ಮಣ್ಯದಿಂದ ಸುಮಾರು ೧೩ ಕಿ.ಮೀ. ದೂರದ ಆ ಕಡಿದಾದ ದಾರಿಯ ನಡುವೆ ದೊರೆಯುವ ಆಶ್ರಯ, ಆತಿಥ್ಯ, ಮಜ್ಜಿಗೆ ಎಲ್ಲವೂ ಚಾರಣಿಗರಿಗೆ ಅಮೃತಶಕ್ತಿ ನೀಡಿದಂತೆಯೇ ಸರಿ.
ಇತ್ತೀಚಿನ ವರ್ಷಗಳಲ್ಲಿ ಕೆಲವು ಸಂದರ್ಭಗಳಲ್ಲಿ ಗಿರಿಗದ್ದೆಯ ಭಟ್ಟರ ಮನೆಯ ಬಳಿ ಒಂದೊಂದು ದಿನ ೧,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಚಾರಣಿಗರು ರಾತ್ರಿ
ತಂಗಿದ್ದರಂತೆ! ಅವರೆಲ್ಲರಿಗೂ ಊಟ, ತಿಂಡಿ ನೀಡಿ, ಹೊಟ್ಟೆ ತಂಪಾಗಿಸಿದ ಸಹೃದಯರು ಅವರು; ಪ್ರತಿದಿನ ಚಾರಣ ಮಾಡಿ ದಣಿದು ಬರುವ ನೂರಾರು
ಚಾರಣಿಗರ ಹೊಟ್ಟೆ ತುಂಬಿಸಿ, ಅವರಿಂದ ಕೃತಜ್ಞತಾಪೂರ್ವಕ ಶುಭಹಾರೈಕೆ ಪಡೆದವರು! ಆದರೆ, ನಾನು ಚಾರಣ ಮಾಡಲು ಆರಂಭಿಸಿದಾಗ, ಗಿರಿಗದ್ದೆಗೆ ಬರುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಪ್ರತಿವರ್ಷ ಶಿವರಾತ್ರಿ ಕಳೆದ ನಂತರ (ಫೆಬ್ರವರಿ) ಮಾತ್ರ ಅಂದು ಕುಮಾರಪರ್ವತದ ತುದಿಗೆ ಜನರು ಹೋಗುತ್ತಿದ್ದುದು ರೂಢಿ.
ಮಳೆಗಾಲದಲ್ಲಂತೂ ಆಗೆಲ್ಲಾ ಸಹ್ಯಾದ್ರಿಯಲ್ಲಿ ಚಾರಣ ಮಾಡುವವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ನಮ್ಮ ರಾಜ್ಯದ ಅತಿ ಕಠಿಣ ಚಾರಣ ಎಂದೇ
ಹೆಸರಾಗಿರುವ ಕುಮಾರಪರ್ವತಕ್ಕೆ ೪ ಬಾರಿ ಚಾರಣ ಮಾಡಿದ ಅದೃಷ್ಟ ನನ್ನದು. ನಾನು ಮೊದಲ ಬಾರಿ ಕುಮಾರಪರ್ವತ ಏರಿದ್ದು ೧೯೭೯ರಲ್ಲಿ. ನಮ್ಮ
ಉಪನ್ಯಾಸಕರಾಗಿದ್ದ ಜಯರಾಂ ಅವರ ನೇತೃತ್ವ; ಮಂಗಳೂರಿನ ಚಾರಣಿಗ, ಸಾಹಸಿ, ಜಿ.ಎನ್. ಅಶೋಕವರ್ಧನ ಅವರ ಸಲಹೆ, ಸೂಚನೆ,
ಮಾರ್ಗದರ್ಶನ (ಪತ್ರದ ಮೂಲಕ). ಅವರು ಸೂಚಿಸಿದ ‘ಕುಂಡ’ ಎಂಬ ಸ್ಥಳೀಯ ಹಿರಿಯರು (ಅವರಿಗೆ ಕನ್ನಡ ಬರುವುದಿಲ್ಲ, ತುಳು ಮಾತ್ರ!) ನಮಗೆ ದಾರಿ ತೋರಿಸಿದ ಗೈಡ್. ನಮ್ಮ ತಂಡದವರು ಚಪ್ಪಲಿ, ಶೂ ಧರಿಸಿದ್ದರೆ, ಮಾರ್ಗದರ್ಶಿ ‘ಕುಂಡ’, ಬರಿಗಾಲಲ್ಲಿ ಬೆಟ್ಟವೇರಲು ಬಂದಿದ್ದರು. ಅವರ ಜತೆ ಒಂದು ನಾಯಿ ಸಹ ಚಾರಣಕ್ಕೆ ಬಂದಿತ್ತು! ಆ ನಂತರ, ನಾನು ಮೂರು ಬಾರಿ ಕುಮಾರಪರ್ವತಕ್ಕೆ ಚಾರಣ ಮಾಡಿದ್ದೆ; ಒಮ್ಮೆ ಸುಬ್ರಹ್ಮಣ್ಯದಿಂದ ಚಾರಣ ಆರಂಭಿಸಿ, ಕುಮಾರಪರ್ವತದ ತುದಿಯನ್ನು ಮುಟ್ಟಿ, ಇನ್ನೊಂದು ದಿಕ್ಕಿಗೆ ನಡೆದು, ಕೊಡಗು ಜಿಲ್ಲೆಯ ಕುಂದಳ್ಳಿಯ ಹತ್ತಿರ ಕೆಳಗಿಳಿದು, ಸೋಮವಾರಪೇಟೆ ತಲುಪಿದ್ದೆವು.
ಆಗಿನ್ನೂ, (ಅಂದರೆ ಸುಮಾರು ೧೯೮೪-೮೫ರ ತನಕ) ‘ಟ್ರೆಕಿಂಗ್’ ಎಂಬ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತಪದ ಬಳಕೆಗೆ ಬಂದಿರಲಿಲ್ಲ; ‘ಕಾಲ್ನಡಿಗೆ ಸಾಹಸ’
ಎಂದು ಬರೆಯುವ ರೂಢಿ. ಬೆಟ್ಟಗುಡ್ಡಗಳಲ್ಲಿ ನಡೆಯುತ್ತಾ ಸಾಗುವ ಹವ್ಯಾಸಕ್ಕೆ ‘ಚಾರಣ’ ಎಂಬ ಪದವನ್ನು ಬರವಣಿಗೆಯಲ್ಲಿ ಬಳಸಿದ ಮೊದಮೊದಲಿಗರಲ್ಲಿ ನಾನೂ ಒಬ್ಬ! ಇರಲಿ.
ಈ ರೀತಿ ಕುಮಾರಪರ್ವತಕ್ಕೆ ಹೋಗಿದ್ದಾಗ, ಪ್ರತಿಬಾರಿ ಮಹಾಲಿಂಗಭಟ್ಟರ ಮಜ್ಜಿಗೆ ಆತಿಥ್ಯ ಇದ್ದದ್ದೇ; ಒಂದು ಬಾರಿ ಅವರ ಮನೆಯಲ್ಲಿ ರಾತ್ರಿ ಕಳೆಯುವ ಅವಕಾಶ ದೊರಕಿತ್ತು. ಆ ದಿನ ನಾವು ಸುಬ್ರಹ್ಮಣ್ಯದಿಂದ ಚಾರಣ ಮಾಡಲು ಆರಂಭಿಸಿದ್ದೇ ಮಧ್ಯಾಹ್ನದ ನಂತರ; ಅಲ್ಲಿಂದ ೫ ಕಿ.ಮೀ. ದೂರವಿರುವ ಭಟ್ಟರ ಮನೆಗೆ ಕಡಿದಾದ ಕಾಡುದಾರಿ. ಸುತ್ತಲೂ ಕಾಡು. ಕಲ್ಲುಗುಡ್ಡ ಎಂಬ ಕಡಿದಾದ ಏರನ್ನು ಹತ್ತಿ, ಮೇಲೇರಿದಂತೆಲ್ಲಾ ದಟ್ಟ ಕಾಡು ಕಡಿಮೆಯಾಗುತ್ತಾ, ಶೋಲಾ ಕಾಡು, ಹುಲ್ಲುಗಾವಲು ತುಂಬಿದ ಬೆಟ್ಟದ ಇಳಿಜಾರುಗಳು ಆರಂಭ.
ದೂರದಲ್ಲಿ ಕುಮಾರಪರ್ವತ, ಶೇಷಪರ್ವತ, ಭತ್ತದರಾಶಿ ಶಿಖರ, ಸಿದ್ಧಪರ್ವತಗಳ ನೋಟವೂ ಕಾಣುತ್ತದೆ; ಅಂಥ ಸುಂದರ ಜಾಗದಲ್ಲಿ ಮಹಾಲಿಂಗ ಭಟ್ಟರ ಮನೆ. ನಾವು ಭಟ್ಟರ ಮನೆ ತಲುಪುವಾಗ ಸಂಜೆಯಾಗಿತ್ತು. ಅವತ್ತು ಅಲ್ಲೇ ತಂಗುವುದು ಎಂದು ನಿರ್ಧರಿಸಿದೆವು. ೧೯೮೦ರ ದಶಕದಲ್ಲಿ ಕುಮಾರಪರ್ವತಕ್ಕೆ ಚಾರಣ ಮಾಡುವವರ ಸಂಖ್ಯೆ ಸರಾಸರಿ ವಾರ್ಷಿಕ ೫೦ರಿಂದ ೧೦೦ ಇರಬಹುದೇನೊ! ಅದೊಂದು ನಿರ್ಜನ ದಾರಿ. ಭಟ್ಟರ ಮನೆ ಇರುವ ‘ಗಿರಿಗದ್ದೆ’ಯು ನಮ್ಮ ರಾಜ್ಯದ ಅತಿ ಏಕಾಂತ ಜಾಗಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ.
ಸುತ್ತಲೂ ಪರ್ವತದ ಭಿತ್ತಿಗಳು, ಕಾಡು. ಹಲವು ಕಿ.ಮೀ. ತನಕ ಜನವಸತಿ ಇಲ್ಲ. ಆ ಕಾಡಿನಲ್ಲಿ ಹುಲಿ, ಚಿರತೆ, ಆನೆ, ಕಾಡುಕೋಣ ಮೊದಲಾದ ಪ್ರಾಣಿಗಳು ಸಹಜವಾಗಿ ವಾಸಿಸಿದ್ದವು. ಗಿರಿಗದ್ದೆಯಲ್ಲಿ ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಸಹೋದರರು ಚಾರಣಿಗರ ಆತಿಥ್ಯವನ್ನು ಸಂತಸದಿಂದ ಮಾಡುತ್ತಿದ್ದರು (ಅವರು ಮೂಲತಃ ಮಹಾಲಿಂಗ ಜೋಯಿಸ್ ಮತ್ತು ನಾರಾಯಣ ಜೋಯಿಸ್). ಆ ರಾತ್ರಿ ಊಟವಾದ ನಂತರ, ಬಹಳ ಹೊತ್ತಿನ ತನಕ ಮಹಾಲಿಂಗ ಭಟ್ಟರೊಂದಿಗೆ ಮಾತನಾಡುತ್ತಾ ಕುಳಿತಿದ್ದೆವು. ಆ ರಾತ್ರಿ ನಾವು ನಾಲ್ವರು ಅಲ್ಲಿ ತಂಗಿದ್ದು ಅವರಿಗೆ ತಮ್ಮ ಸಮೀಪದ ಬಂಧುಗಳು ಬಂದಂತೆ ಆಗಿತ್ತು.
ಮಹಾಲಿಂಗ ಭಟ್ ಅವರು ನಮ್ಮೊಡನೆ ಲೋಕಾಭಿರಾಮ ಮಾತನಾಡುತ್ತಾ, ನಮ್ಮ ಜತೆ ಬರೆತು, ಒಂದೆರಡು ಗಂಟೆ ಕುಳಿತು ಇಸ್ಪೀಟು ಆಡುತ್ತಾ ಕಾಲಕಳೆದರು. ಆ ವರ್ಷ ನಾವೇ ಮೊದಲ ಚಾರಣಿಗರು. ಆದ್ದರಿಂದಲೂ ಇರಬಹುದು, ಹೊರ ಜಗತ್ತಿನ ವಿಚಾರ ತಿಳಿಯಲು, ಮಾತುಕತೆಯಾಡಲು ಅವರಿಗೆ ಅಪಾರ ಉತ್ಸಾಹ. ನಮಗೆ ಅವರ ಆ ‘ಬೆಟ್ಟದ ಜೀವನ’ದ ಕುರಿತು ಅಪಾರ ಕುತೂಹಲ. ಮಕ್ಕಳು ಸಹ ಇದ್ದ ಆ ಮನೆಯಲ್ಲಿ ಅವರ ಕಷ್ಟದ ಜೀವನ ಕಂಡು ಅಚ್ಚರಿ. ಹಲವು ಹಸುಗಳನ್ನು ಸಾಕುವ ಅವರಿಗೆ ಕಾಡು ಪ್ರಾಣಿಗಳ ತೊಂದರೆ ಇಲ್ಲವೆ? ಎಂದು ಕೇಳಿದಾಗ, ಸಹಜದನಿಯಲ್ಲಿ, ಹುಲಿಗಳು, ಚಿರತೆಗಳು ಪ್ರತಿವರ್ಷ ನಾಲ್ಕಾರು ಹಸು-ಕರುಗಳನ್ನು ಹಿಡಿದುಕೊಂಡು ಹೋಗುವುದು ತೀರಾ ಸಾಮಾನ್ಯ ಎಂದು, ‘ಏನು ಮಾಡೋಕಾಗುತ್ತೆ, ಬೆಟ್ಟದ ನಡುವಿನ ಮನೆಯಲ್ಲಿ ಇವೆಲ್ಲಾ ಮಾಮೂಲು’ ಎಂದು ಹೇಳಿದಾಗ, ಅವರ ಸ್ಥಿತಪ್ರಜ್ಞತೆ ಕಂಡು ನಮಗೆ ಬೆರಗು.
ಮಕ್ಕಳನ್ನು ಓದಿಸಲು ಸುಬ್ರಹ್ಮಣ್ಯದಲ್ಲಿ ಬಿಡಬೇಕಿತ್ತು. ಆ ಪರ್ವತ ಶ್ರೇಣಿಯ ನಡುವೆ ಸಣ್ಣ ಮನೆ ಕಟ್ಟಿಕೊಂಡು, ಪುಟ್ಟ ಅಡಿಕೆ ತೋಟದ ಕೃಷಿ ಮಾಡುತ್ತಾ, ಹತ್ತಾರು
ಹಸುಗಳನ್ನು ಸಾಕಿ, ಹಾಲನ್ನು ಪ್ರತಿದಿನ ೫ ಕಿ.ಮೀ. ದೂರದ ಸುಬ್ರಹ್ಮಣ್ಯಕ್ಕೆ ಕಾಲ್ನಡಿಗೆಯಲ್ಲೇ ಕೊಂಡೊಯ್ದು ಮಾರಿ, ಜೀವನ ನಡೆಸುತ್ತಿದ್ದ ಮಹಾಲಿಂಗ ಭಟ್ಟರು ಮತ್ತು ಅವರ ಕುಟುಂಬ, ನಿಜಾರ್ಥದಲ್ಲಿ ಬೆಟ್ಟದ ಜೀವಗಳು. ಅಂಥದೊಂದು ಅಸಾಧಾರಣ ಜೀವನಕ್ರಮವನ್ನು ಅನುಸರಿಸುತ್ತಾ, ಕೃಷಿಪ್ರಧಾನವಾದ ದಿನಚರಿಯನ್ನು ಪರ್ವತಗಳ ನಡುವೆ ಕಟ್ಟಿಕೊಂಡ ಮಹಾಲಿಂಗ ಭಟ್ಟರಿಗೆ, ಅವರ ಸಹೋದರ ನಾರಾಯಣ ಭಟ್ಟರ ಸಹಕಾರ. ಆ ದಿನಗಳಲ್ಲಿ ಅವರ ಮನೆ, ಕೃಷಿ ಪದ್ಧತಿ, ಹಸು-ಕರುಗಳನ್ನು ಸಾಕುವ ಅಕ್ಕರೆ, ಚಾರಣಿಗರು ಬಂದಾಗ ತೋರಿದ ಆತಿಥ್ಯ, ಬದುಕನ್ನು ಸ್ವೀಕರಿಸಿದ ಸ್ಥಿತಪ್ರಜ್ಞ ಮನೋಭಾವ ಎಲ್ಲವನ್ನೂ ಕಂಡು,
‘ಗಿರಿಗದ್ದೆಯ ತಪಸ್ವಿ ಕುಟುಂಬ’ ಎಂದೇ ನಾವು ಮಾತನಾಡಿಕೊಂಡಿದ್ದುಂಟು.
೧೯೮೦ರ ದಶಕದ ಗಿರಿಗದ್ದೆ ಮತ್ತು ಕುಮಾರಪರ್ವತಕ್ಕೂ, ಇಂದಿನ ಅಲ್ಲಿನ ವಾತಾವರಣಕ್ಕೂ ಬಹಳ ವ್ಯತ್ಯಾಸವಿದೆ. ಅಂದಿನ ನಮ್ಮ ಚಾರಣಗಳಲ್ಲಿ, ನಾವು ಕುಮಾರಪರ್ವತದ ತುದಿಯಲ್ಲಿದ್ದ ತೊರೆಯ ಬಳಿ ರಾತ್ರಿ ತಂಗಿದ್ದೆವು (ಎರಡು ಬಾರಿ). ಅಲ್ಲೇ ಅನ್ನ, ಸಾರು ತಯಾರಿಸಿ ಊಟ; ತೊರೆಯ ಪಕ್ಕದ ಕಲ್ಲುಬಂಡೆಗಳ ಮೇಲೆ ಮಲಗಿ ನಿದ್ರೆ. ಈಗ ಅರಣ್ಯ ಇಲಾಖೆಯು ಆ ಜಾಗದ ಮೇಲೆ ಹೆಚ್ಚು ನಿಯಂತ್ರಣ ಹೊಂದಿದ್ದು, ಚಾರಣಿಗರ ಪಥವನ್ನು ನಿರ್ಧರಿಸಿದೆ. ಯಾರಿಗೂ ಪರ್ವತಗಳ
ಮಧ್ಯೆ ರಾತ್ರಿ ತಂಗಲು ಅವಕಾಶ ನೀಡುತ್ತಿಲ್ಲ. ಇಂದು ಅಲ್ಲಿ ಚಾರಣ ಮಾಡಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ. ಅದಕ್ಕಾಗಿ ಶುಲ್ಕವನ್ನೂ ಕೊಡಬೇಕು.
ಪರಿಸರ ಪ್ರೀತಿಯನ್ನು ಬೆಳೆಸುವ ಚಾರಣ ಎಂಬ ಹವ್ಯಾಸವನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ನೋಡಿದರೆ, ಪ್ರತಿ ಚಾರಣಿಗನಿಂದ ಈಗ ಅರಣ್ಯ ಇಲಾಖೆ ಪಡೆಯುತ್ತಿರುವ ರು.೩೫೦/- ಶುಲ್ಕ ತುಸು ದುಬಾರಿಯೇ ಸರಿ (ಜತೆಗೆ ರಾತ್ರಿ ತಂಗಲು ರು.೭೫/-, ಟೆಂಟ್ ಬಾಡಿಗೆ ರು.೨೦೦/-). ಸರಾಸರಿ ರು.೧೦೦/- ಶುಲ್ಕವಿದ್ದರೆ ಸೂಕ್ತ ಎಂದು ನನ್ನ ಅನಿಸಿಕೆ. ಕುಮಾರಪರ್ವತ ಮತ್ತು ಕುದುರೆಮುಖದಂಥ ಜಾಗಗಳಿಗೆ ಚಾರಣವನ್ನು ಮಾಡಲು ಅರಣ್ಯ ಇಲಾಖೆ ವಿಧಿಸುತ್ತಿರುವ ದುಬಾರಿ ಶುಲ್ಕವನ್ನು ಕಡಿಮೆ ಮಾಡುವಂತೆ ಮನವಿ ಮಾಡಲು ಇದು ಸಕಾಲ ಎನಿಸುತ್ತದೆ.
ಇದೊಂದು ಪರಿಸರ ಪ್ರೀತಿ ಬೆಳೆಸುವ ಹವ್ಯಾಸವಾದ್ದರಿಂದ, ಕಡಿಮೆ ಶುಲ್ಕ ತೆಗೆದುಕೊಳ್ಳಿ ಎಂದು ಆ ಇಲಾಖೆಯನ್ನು ಒತ್ತಾಯಿಸಲು ಎಲ್ಲಾ ಪರಿಸರ ಪ್ರೇಮಿಗಳಿಗೆ, ಚಾರಣಿಗರಿಗೆ ಹಕ್ಕಿದೆ. ಈಚಿನ ವರ್ಷಗಳಲ್ಲಿ ಪ್ರತಿದಿನ ಹತ್ತಾರು ಚಾರಣಿಗರು ಕುಮಾರಪರ್ವತ ಏರುತ್ತಿದ್ದಾರೆ! ಸಾಮಾಜಿಕ ಜಾಲತಾಣಗಳಲ್ಲಿ ಈ ಚಾರಣದ ಕುರಿತು ಸಾಕಷ್ಟು ಪ್ರಚಾರವೂ ನಡೆದಿದ್ದು, ರಜಾದಿನಗಳಲ್ಲಿ ಇನ್ನೂ ಹೆಚ್ಚು ಜನ ದಂಡುಕಟ್ಟಿಕೊಂಡು ಈ ಕಠಿಣ ಚಾರಣ ನಡೆಸುತ್ತಿದ್ದಾರೆ. ಕುಮಾರಪರ್ವತದಂಥ ಅತಿ ಸುಂದರ ತಾಣಕ್ಕೆ ಚಾರಣ ಏರ್ಪಡಿಸುವುದು ಇಂದು ಕೆಲವರಿಗೆ ಸಣ್ಣ ಮಟ್ಟದ ಬಿಸಿನೆಸ್ ಸಹ ಆಗಿದೆ.
ಶನಿವಾರದಂದು ಬೆಂಗಳೂರು ಮತ್ತು ಇತರ ಪ್ರದೇಶಗಳಿಂದ ಬರುವ ಸರಾಸರಿ ಚಾರಣಿಗರ ಸಂಖ್ಯೆ ೩೦೦-೪೦೦ ಮೀರಬಹುದು! ಮಳೆಗಾಲದಲ್ಲೂ
ಕುಮಾರ ಪರ್ವತವನ್ನು ಏರುವವರು ಇಂದು ಗುಂಪು ಗುಂಪಾಗಿ ಬಂದು, ಜಿಗಣೆಗಳಿಂದ ಕಚ್ಚಿಸಿಕೊಂಡು, ಗಿರಿಗದ್ದೆಯಲ್ಲಿ ಟೆಂಟ್‌ನಲ್ಲಿ ಮಲಗಿ, ವಿಭಿನ್ನ ಅನುಭವ ಪಡೆಯುತ್ತಿದ್ದಾರೆ. ಅದು ಬೇರೆಯ ವಿಚಾರ, ಇರಲಿ. ಕುಮಾರಪರ್ವತವನ್ನು ಏರುವ ಎಲ್ಲಾ ಚಾರಣಿಗರಿಗೆ ಊಟ, ತಿಂಡಿ ನೀಡುತ್ತಿದ್ದ ದಿ.ಮಹಾಲಿಂಗ ಭಟ್ ಅವರ
ಕೈಂಕರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ಐದಾರು ಕಿ.ಮೀ. ದೂರದ ಆ ಜಾಗಕ್ಕೆ ಅಕ್ಕಿ, ಬೇಳೆ, ತರಕಾರಿಯನ್ನು ತಲೆಯ ಮೇಲೆ ಹೊತ್ತು ತರಬೇಕು!
ಅದಕ್ಕಾಗಿ ಜನ ಮಾಡಬೇಕು.
ಪ್ರತಿ ಶನಿವಾರ ಚಾರಣಕ್ಕೆ ಬರುವ ನೂರಾರು ಜನರಿಗಾಗಿ, ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅನ್ನ, ಸಾಂಬಾರು ಮಾಡಲು ಸ್ವತಃ ಮಹಾಲಿಂಗ ಭಟ್ ಅವರೇ ಒಲೆಯ
ಮುಂದೆ ನಿಲ್ಲುತ್ತಿದ್ದರು! ಜತೆಗೆ ಸಹಾಯಕ್ಕೆ ಅವರ ಸಹೋದರ ನಾರಾಯಣ ಭಟ್ ಮತ್ತು ಇತರರು. ದೂರದಿಂದ ನಡೆದು ಬಂದ, ದಣಿದ ಚಾರಣಿಗರಿಗೆ ಅವರು ತಯಾರಿಸಿ ಕೊಡುತ್ತಿದ್ದ ಊಟ, ತಿಂಡಿಯ ಜತೆ ಪ್ರೀತಿ, ವಿಶ್ವಾಸ, ಬಂದವರಿಗೆ ಆತಿಥ್ಯ ಮಾಡಬೇಕೆಂಬ ಮನೋಭಾವ ಇದ್ದುದಂತೂ ಖಚಿತ. ಇದಕ್ಕಾಗಿ ಅವರು ಪಡೆಯುತ್ತಿದ್ದ ಸಣ್ಣಮೊತ್ತ ತೀರಾ ಸಮಂಜಸ ಮೊತ್ತ. ಆ ಪರ್ವತಗಳ ನಡುವೆ, ನೂರಾರು ಜನರಿಗೆ ಅಡುಗೆ ಮಾಡಿ ಬಡಿಸುವ ಕೆಲಸವನ್ನು ದಣಿವರಿಯದಂತೆ ಮಾಡಲು, ಚಾರಣಿಗರ ಮೇಲೆ ಗೌರವ, ಪರಿಸರದ ಮೇಲೆ ಪ್ರೀತಿ ಇದ್ದರೆ ಮಾತ್ರ ಸಾಧ್ಯ.
ತಮ್ಮ ಮನೆಯೊಳಗೇ ನುಗ್ಗಿ, ತಿಂಡಿಗೆ ಸಾಲಾಗಿ ನಿಲ್ಲುವ ನೂರಾರು ಚಾರಣಿಗರನ್ನು ಸಂಭಾಳಿಸುತ್ತಿದ್ದ ದಿ.ಮಹಾಲಿಂಗ ಭಟ್ ಅವರ ಪ್ರೀತಿ ವಿಶ್ವಾಸವನ್ನು ಕಂಡು, ನಗರದಿಂದ ಬಂದ ಚಾರಣಿಗರು ಅಕ್ಷರಶಃ ಬೆರಗಾಗಿದ್ದಾರೆ, ಅವರ ಪ್ರೀತಿಗೆ ಸೋತಿದ್ದಾರೆ. ಆದ್ದರಿಂದಲೇ, ಮೊನ್ನೆ ಮಹಾಲಿಂಗ ಭಟ್ ಅವರು ಹೃದಯಾಘಾತಕ್ಕೆ
ಬಲಿಯಾದಾಗ, ಸಾವಿರಾರು ಚಾರಣಿಗರು, ಪರಿಚಿತರು ಜಾಲತಾಣದಲ್ಲಿ ಅವರಿಗೆ ನಮನ ಸಲ್ಲಿಸಿದರು!
ಪ್ರತಿದಿನ ಚಾರಣಕ್ಕೆ ಬರುತ್ತಿದ್ದ ನೂರಾರು ಚಾರಣಿಗರಿಗೆ ಊಟ, ತಿಂಡಿ ನೀಡಿ, ಆತ್ಮೀಯತೆಯಿಂದ ಸತ್ಕರಿಸಿ, ಜನರಲ್ಲಿ ಪರಿಸರ ಪ್ರೀತಿಯನ್ನು ಹೆಚ್ಚಿಸಲು ಶ್ರಮಿಸಿದ ದಿ.ಮಹಾಲಿಂಗ ಭಟ್ಟರಿಗೆ ಅಂತಿಮ ನಮನಗಳು.