Saturday, 7th September 2024

ಚಾರಣದಿಂದ ಪರಿಸರಕ್ಕೆ ಹಾನಿಯಾದೀತೆ ?

ಶಶಾಂಕಣ

shashidhara.halady@gmail.com

ನಮ್ಮ ನಾಡಿನ ಬೆಟ್ಟಗುಡ್ಡಗಳಲ್ಲಿ ಈಗ ಭಾರೀ ಮಳೆಯಾಗುತ್ತಿದೆ; ಪರ್ವತ ಕಮರಿಗಳ ಮೂಲೆಯಲ್ಲಿರುವ ಜಲಪಾತಗಳು ಭೋರ್ಗರೆಯುತ್ತಿವೆ. ತುಂಬಿದ ಜಲಪಾತದ ನೋಟವನ್ನು, ನೊರೆನೊರೆಯಾಗಿ ಧುಮುಕುವ ನೀರನ ನರ್ತನವನ್ನು ನೋಡಿ, ಮನಸೋಲದ ಮನುಷ್ಯನೇ ಇಲ್ಲ ಎನ್ನಬಹುದು. ನಮ್ಮ ಬದುಕಿನ ಅತಿ ಸುಂದರ ಅನುಭವಗಳಲ್ಲಿ ಜಲಪಾತದ ವೀಕ್ಷಣೆಯೂ ಒಂದು.

ಅದೇ ರೀತಿ, ಪರ್ವತವೊಂದನ್ನು ಏರಿ, ಅದರ ತುದಿಯಲ್ಲಿ ನಿಂತು, ಸುತ್ತಲಿನ ಭೂದೃಶ್ಯವನ್ನು ಕಾಣುವಾಗ ದೊರಕುವ ಮಹದಾನಂದವನ್ನು ಅನುಭವಿ ಸಿಯೇ ತಿಳಿಯಬೇಕು, ಹೊರತು ಅಕ್ಷರಗಳಲ್ಲಿ ವರ್ಣಿಸಲು ಅಸಾಧ್ಯ. ಆದರೆ, ಮಳೆಗಾಲದಲ್ಲಿ ಜಲಪಾತ ನೋಡಲು ಹೋಗುವ ಕೆಲವರು, ತಮ್ಮ ಸುರಕ್ಷತೆ ಯನ್ನು ಮರೆತು ನೀರಿನಲ್ಲಿಳಿದು ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ. ಇದಕ್ಕೆ ಹೋಲಿಸುವಂತಹ ಇನ್ನೊಂದು ಸನ್ನಿವೇಶವೆಂದರೆ, ಎತ್ತಿನ ಭುಜ ಮತ್ತು ಕುಮಾರ ಪರ್ವತಗಳಂತಹ ಪರಿಸರ ಸೂಕ್ಷ್ಮ ತಾಣಗಳನ್ನು ನೋಡಲು ಒಂದೇ ದಿನ ಸಾವಿರಾರು ಜನರು ಬರುವುದು!

ಪರಿಸರವನ್ನು ನೋಡಿ, ಅಲ್ಲೇ ಬೆರೆತು, ಮನಸ್ಸಂತೋಷ ಹೊಂದಬೇಕಾದ ತಾಣದಲ್ಲಿ, ಪರಿಸರಹಾನಿಯಂತಹ ಚಟುವಟಿಕೆಗಳು ನಡೆಯಬಾರದು
ತಾನೆ? ಹಾಗಾಗದಂತೆ ನೋಡಿಕೊಳ್ಳಬೇಕಾದುದು ಸಂಬಂಧ ಪಟ್ಟ ಇಲಾಖೆಗಳ ಜವಾಬ್ದಾರಿ. ಆದರೆ, ಜನರು ಅಧಿಕ ಸಂಖ್ಯೆಯಲ್ಲಿ ಬಂದು ಪರಿಸರ
ವೀಕ್ಷಣೆ ಮಾಡಿದರೆ, ಅಂತಹ ಜಾಗಗಳಿಗೆ ಜಾನಿಯಾದೀತು, ಅದನ್ನು ತಡೆಯಬೇಕು ಎಂಬ ಕಾಳಜಿಯಲ್ಲಿ, ಅತಿರೇಕ ಎನ್ನಬಹುದಾದ ಒಂದು ಕ್ರಮವನ್ನು ಇಂದು ಕಾಣುತ್ತಿದ್ದೇವೆ – ಅದೇ ನೆಂದರೆ, ಕೆಲವು ಜಾಗಗಳಿಗೆ ಒಟ್ಟಾರೆ ಚಾರಣವನ್ನೇ ನಿಷೇಧಿಸುವುದು!

ಎತ್ತಿನಭುಜ ಶಿಖರದಂತಹ ಸುಂದರ, ಅಗಲಕಿರಿದಾದ ಪ್ರದೇಶಗಳಲ್ಲಿ, ಒಂದೇ ದಿನ ಸಾವಿರಾರು ಜನ ಇಕ್ಕಟ್ಟಾಗಿ ಸೇರುವುದು ನಿಜಕ್ಕೂ ಸೂಕ್ಷ್ಮ ವಿಚಾರವೇ ಸರಿ, ಅದರಲ್ಲಿ ಅನುಮಾನವೇ ಇಲ್ಲ; ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಲು ಬಂದವರು, ಆ ಪ್ರದೇಶದ ಮೂಲಸೌಂದರ್ಯವನ್ನು ಹಾಳು ಮಾಡಬಾರದು ಮತ್ತು ಅಲ್ಲಿ ಪ್ಲಾಸ್ಟಿಕ್ ಎಸೆದು ಗಲೀಜು ಮಾಡಬಾರದು ಎಂಬುದು ಸಹ ಉತ್ತಮ ಕಾಳಜಿ. ಆದರೆ, ಅಲ್ಲಿಗೆ ಜನರೇ ಬರಬಾರದು ಎಂದು ನಿಷೇಧ ಹೇರುವುದು ತುಸು ಅತಿರೇಕವೇ ಎನಿಸುತ್ತದೆ, ಅಲ್ಲವೆ? ಎತ್ತಿನ ಭುಜಕ್ಕೆ ಭೇಟಿ ನೀಡುವುದನ್ನು ನಿಷೇಽಸಿರುವ ಕಳೆದ ವಾರದ ಕ್ರಮವನ್ನು ನೋಡಿ ದಾಗ ಈ ರೀತಿ ಎನಿಸಿತು.

ಹಾಗಿದ್ದರೆ, ಎತ್ತಿನ ಭುಜ, ಕುಮಾರಪರ್ವತದಂತಹ ಪರಿಸರವನ್ನು ರಕ್ಷಿಸಲು ಏನು ಮಾಡಬೇಕು ಎಂದು ನೀವು ಪ್ರಶ್ನಿಸಬಹುದು. ಉತ್ತರ ಸರಳ –
ಪರಿಸರಕ್ಕೆ ಲವಲೇಶವೂ ಹಾನಿಯಾಗದಂತೆ ಅಲ್ಲಿಗೆ ಚಾರಣಿಗರು ಬರುವಂತಹ ನಿಯಮಾವಳಿಗಳನ್ನು ರೂಪಿಸಿ, ಅಲ್ಲಿಗೆ ಪ್ರಾಮಾಣಿಕ ಪರಿಸರಪ್ರೇಮಿ ಗಳು ಬರುವಂತೆ ಮಾಡುವುದು. ಇಂತಹ ಜಾಗಗಳಿಗೆ ಮಕ್ಕಳು ಮತ್ತು ದೊಡ್ಡವರು ಬಂದು, ಅಲ್ಲಿನ ಹಸಿರಿನ ಸಿರಿಯನ್ನು, ಮೋಡಗಳ ಆಟವನ್ನು
ನೋಡುವುದರಿಂದ, ಅವರಲ್ಲೂ ಪರಿಸರಾಸಕ್ತಿ ಬೆಳೆಯುತ್ತದೆ, ಮುಂದಿನ ದಿನಗಳಲ್ಲಿ ಅವರಲ್ಲಿ ಕೆಲವರಾದರೂ ಪರಿಸರ ರಕ್ಷಿಸುವ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

ಒಂದು ದಿನಕ್ಕೆ ಗರಿಷ್ಠ ಇಂತಿಷ್ಟು ಮಂದಿ ಭೇಟಿಕೊಡುವಂತೆ ಮಾಡುವುದು ಒಂದು ಪರಿಹಾg: ಇದಕ್ಕೆ ಆನ್‌ಲೈನ್ ನೋಂದಣಿ ಸಹಕಾರಿ. ಪ್ಲಾಸ್ಟಿಕ್
ಬಾಟಲಿಗಳನ್ನು, ಕಸವನ್ನು ಎಸೆಯದಂತೆ ನಿಯಮ ರೂಪಿಸುವುದು ಅಗತ್ಯ – ಇದನ್ನು ಈಗಾಗಲೇ ಗೋಪಾಲಸ್ವಾಮಿ ಬೆಟ್ಟದಂತಹ ಪ್ರದೇಶಗಳಲ್ಲಿ
ಅರಣ್ಯ ಇಲಾಖೆ ಜಾರಿ ತಂದಿದೆ. ಸ್ಥಳೀಯ ಗೈಡ್ ಗಳನ್ನು ಜತೆಯಲ್ಲಿ ಖಡ್ಡಾಯವಾಗಿ ಕರೆದೊಯ್ಯುವಂತೆ ಮಾಡಿ, ತಮ್ಮ ಸುತ್ತಲಿನ ಪ್ರಕೃತಿಗೆ ಸ್ಥಳೀಯರು ಅದೆಷ್ಟು ಗೌರವ ಕೊಡುತ್ತಾರೆಂದು ತಿಳಿಯಪಡಿಸುವಂತೆ ಮಾಡುವುದು ಸಹ ಮುಖ್ಯವಾಗಬಲ್ಲದು. ಕೇರಳದ ಸೈಲೆಂಟ್ ವ್ಯಾಲಿಗೆ ಭೇಟಿ ನೀಡುವವರು, ಸ್ಥಳೀಯ ಗೈಡ್ ಜತೆಯಲ್ಲೇ ಓಡಾಡುವ ನಿಯಮ ಇರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಒಂದು ಸುಂದರ ತಾಣಕ್ಕೆ ಪ್ರವೇಶವನ್ನೇ ಒಟ್ಟೂ ನಿಷೇಧಿಸುವ ಬದಲಿಗೆ, ಸೂಕ್ತ ನಿಯಮಾವಳಿಗಳನ್ನು ರೂಪಿಸಿ, ಪಾಲಿಸುವಂತೆ ಮಾಡಿ ನಿಸರ್ಗ ವೀಕ್ಷಣೆಗೆ ಅವಕಾಶ ದೊರಕಿಸಿಕೊಟ್ಟಾಗ, ಒಂದು ವಿನ್-ವಿನ್ ಸನ್ನಿವೇಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಇದರಿಂದಾಗಿ, ಮಕ್ಕಳಲ್ಲಿ, ಜನರಲ್ಲಿ ಪರಿಸರ ಪ್ರೇಮ ಬೆಳೆಸಿ, ಮುಂದೆ ಅವರೇ ಪರಿಸರ ರಕ್ಷಕರಾಗುವಂತೆ ಮಾಡುವುದು ಸಹ ಸಾಧ್ಯ. ಇಂದು ನಮ್ಮ ರಾಜ್ಯದ, ದೇಶದ ಪರಿಸರ ಆತಂಕದಲ್ಲಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಹೊರತೆಗೆದು ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂಬ ಹಪಹಪಿಯಲ್ಲಿ, ಸುಂದರ ಪ್ರಕೃತಿಯನ್ನು ನಾಶಮಾಡುವಂತಹ ಯೋಜನೆಗಳಿಗೆ ಅನುಮತಿ ದೊರೆಯುತ್ತಿರುವ ಉದಾಹರಣೆಗಳು ನಮ್ಮಲ್ಲಿವೆ.

ಸಹ್ಯಾದ್ರಿಯ ಪರಿಸರಕ್ಕೆ ಶಾಶ್ವತ ಹಾನಿ ಮಾಡುತ್ತಿರುವ ‘ಎತ್ತಿನ ಹೊಳೆ ನದಿ ತಿರುವು ಯೋಜನೆ’ ಇದಕ್ಕೆ ಒಂದು ಉದಾಹರಣೆ; ಮೊನ್ನೆ ತಾನೆ ಇನ್ನೊಂದು
ಪರಿಸರವಿರೋಽ ಯೋಜನೆಗೆ ಸಹಿ ಬಿದ್ದಿದೆ – ಸಂಡೂರಿನಲ್ಲಿ ಉಳಿದುಕೊಂಡಿರುವ ಅಪರೂಪದ ಕಾಡು ಪ್ರದೇಶದಲ್ಲಿ ಗಣಿಗಾರಿಕೆ ಮಾಡುವುದಕ್ಕೆ
ಪ್ರಭುತ್ವ ಅವಕಾಶ ನೀಡಿದೆ. ಪರಿಸರ ನಾಶವಾದರೆ ಮುಂದಿನ ಪೀಳಿಗೆಗೆ ಇನ್ನಷ್ಟು ಕಷ್ಟ ಎಂಬ ಮಹತ್ವದ ವಿಚಾರವನ್ನು ನಮ್ಮ ನಾಯಕರು ಕಾಲಿನ ಕಸದಂತೆ ನೋಡುತ್ತಿದ್ದಾರೆ ಎಂಬುದಕ್ಕೆ ಇದೊಂದು ಇತ್ತೀಚಿನ ಉದಾಹರಣೆ. ಇದು ಹೀಗೆಯೇ ಮುಂದುವರಿಯುತ್ತಿರುವುದು ಇಂದಿನ ದುರಂತ. ಈಗಿನ
ಮಕ್ಕಳಲ್ಲಿ ಪರಿಸರದ ಕುರಿತು ಕಾಳಜಿ ಬೆಳೆಸಿದರೆ, ಅವರು ಮುಂದೆ ಪ್ರಾಜ್ಞರಂತೆ ವರ್ತಿಸಿಯಾರು ಎಂಬ ಆಶಯದಿಂದ ನಾವೆಲ್ಲರೂ ಕಾರ್ಯ ಪ್ರವೃತ್ತ ರಾಗಬೇಕಾದ ತುರ್ತು ಅವಶ್ಯತೆ ಇದೆ.

ಬೆಟ್ಟಗುಡ್ಡಗಳಲ್ಲಿ ಚಾರಣ ಮಾಡುತ್ತಾ, ಅಲ್ಲಿನ ಪ್ರಕೃತಿಯೊಂದಿಗೆ ಬೆರೆತು, ಆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸಿ ವಾಪಸಾಗುವ ವಿಚಾರ
ಬಂದಾಗ, ನಾನು ಬಹು ಹಿಂದೆ ಕೈಗೊಂಡ ಕೆಲವು ಚಾರಣಗಳ ನೆನಪಾಗುತ್ತದೆ. ನಮ್ಮ ಅಂದಿನ ಚಾರಣ ಹೇಗಿತ್ತೆಂದರೆ, ನಡಿಗೆಯ ಸುಖ ಮತ್ತು ಪರ್ವತ
ಶಿಖರಗಳನ್ನು ಮುಟ್ಟುವುದು ಪ್ರಮುಖ ಗುರಿ; ಜತೆಗೆ ನಮ್ಮ ನಡಿಗೆ ಮುಗಿದಾಗ, ಆ ದಾರಿಯಲ್ಲಿ ಯಾವುದೇ ಕಸ, ಪ್ಲಾಸ್ಟಿಕ್‌ನ್ನು ನಾವು ಎಸೆಯದಂತೆ
ಎಚ್ಚರವಹಿಸಿ, ಚಾರಣ ಮುಗಿಸುವುದು ಸಹ ಮತ್ತೊಂದು ಗುರಿಯಾಗಿತ್ತು. ೧೯೮೦ರ ದಶಕದಲ್ಲಿ ನಾವು ಮೂವರು ಗೆಳೆಯರು ಕುಮಾರ ಪರ್ವತವನ್ನು ಏರಿ, ಇಳಿದ ಅನುಭವವನ್ನು ಗಮನಿಸಿದರೆ, ಅಂದಿನ ನಮ್ಮ ಚಾರಣದ ಕಿರು ಪರಿಚಯವಾದೀತು.

ಆಗಿನ್ನೂ ಪ್ಲಾಸ್ಟಿಕ್ ಹಾವಳಿ ಆರಂಭವಾಗಿರಲಿಲ್ಲ. ಆದ್ದರಿಂದಲೇ ಇರಬೇಕು, ರೆಡಿ ಕುಕ್ ಮಿಕ್ಸ್, ಪ್ಲಾಸ್ಟಿಕ್ ಕವರಿನಲ್ಲಿನ ವಿವಿಧ ತಿನಿಸುಗಳ ಕಾಟ ವಿರಲಿಲ್ಲ – ಒಂದು ಕಿಲೋ ಅಕ್ಕಿ, ೧೦೦ ಗ್ರಾಂ ಕೊಳಂಬೊ ಪುಡಿ (ಸಾಂಬಾರು ಪುಡಿ), ಅರ್ಧ ಕಿಲೊ ಟೊಮ್ಯಾಟೊ, ೧೦೦ ಗ್ರಾಂ ಟೀಪುಡಿ, ಒಂದಿಷ್ಟು ಬ್ರೆಡ್, ಹಣ್ಣು ಮೊದಲಾದವುಗಳನ್ನು ನಮ್ಮ ಭುಜದ ಚೀಲಕ್ಕೆ ತುಂಬಿಕೊಳ್ಳುವುದರ ಮೂಲಕ ಚಾರಣದ ತಯಾರಿ ಆರಂಭ. ಬೆಳಗ್ಗೆ ಆರು ಗಂಟೆಗೆ
ಸುಬ್ರಹ್ಮಣ್ಯದ ಪುಟ್ಟ ಹೊಟೆಲ್‌ನಲ್ಲಿ ಇಡ್ಲಿ ತಿಂದು, ಕಾಡಿನ ದಾರಿ ಹಿಡಿದೆವು.

ದಟ್ಟಕಾಡಿನ ನಡುವಿನ ಏರು ದಾರಿಯಲ್ಲಿ ನಡೆಯುವಾಗ, ಬೆವರು, ಸೆಕೆ, ಸುಸ್ತು; ಜತೆಗೇ ಕಾಡಿನ ವೀಕ್ಷಣೆ, ಅಲ್ಲಿನ ನಿಗೂಢ ಮೌನದ ಭಾಗವಾಗುವ ಅದೃಷ್ಟ. ಕಲ್ಲುಗುಡ್ಡೆ ಎಂಬ ಕಲ್ಲು ತುಂಬಿದ ಕಡಿದಾದ ಏರನ್ನು ಹತ್ತಿದ ಬಳಿಕ, ನಿಧಾನವಾಗಿ ಸಹ್ಯಾದ್ರಿಯ ಸಿರಿ ಕಾಣಿಸತೊಡಗಿತು. ಹಸಿರಿನ ಪರ್ವತಗಳ ನೋಟವನ್ನು ಕಣ್ತುಂಬಿಕೊಳ್ಳುತ್ತಾ, ‘ಗಿರಿಗದ್ದೆ’ ತಲುಪಿದಾಗ, ಬೆಳಗಿನ ಸುಮಾರು ೧೦ ಗಂಟೆ. ಅಲ್ಲಿ ವಾಸವಿದ್ದ ಮಹಾಲಿಂಗ ಭಟ್ಟರು ಮತ್ತು ಅವರ ಕುಟುಂಬ ನಮಗೆ ಉಚಿತವಾಗಿ ಮಜ್ಜಿಗೆ ನೀಡಿದರು. ‘ಇಲ್ಲೇ ಊಟ ಮಾಡಬಹುದು’ ಎಂಬ ಆಹ್ವಾನವನ್ನೂ ನೀಡಿದರು! (ಮುಂದಿನ ವರ್ಷ ಅವರ ಆತಿಥ್ಯ ಸ್ವೀಕರಿಸಿ, ಅಲ್ಲೇ ರಾತ್ರಿ ತಂಗಿದ್ದೆವು). ವಾರಕ್ಕೆ ಅಬ್ಬಬ್ಬಾ ಎಂದರೆ ಹತ್ತಿಪ್ಪತ್ತು ಚಾರಣಿಗರು ಬರುತ್ತಿದ್ದ ಆ ದಿನಗಳಲ್ಲಿ, ಗಿರಿಗದ್ದೆಯ ಭಟ್ಟರು ಎಲ್ಲರಿಗೂ ಉಚಿತ ಊಟೋಪಚಾರದ ಸತ್ಕಾರ ಮಾಡುತ್ತಾ, ಮಲೆನಾಡಿನ ಅತಿಥಿ ಸತ್ಕಾರದ ಪರಂಪರೆಯನ್ನೂ ಪರಿಚಯಿಸುತ್ತಿದ್ದರು.

ಬಿರು ಬಿಸಿಲಿನಲ್ಲಿ ನಡೆಯುತ್ತಾ ಬೆಟ್ಟವೇರಿದ ನಮಗೆ, ಮುಂದಿನ ಒಂದೆರಡು ಗಂಟೆಗಳಲ್ಲಿ ಎದುರಾಗಿದ್ದೇ ಕಲ್ಲುಮಂಟಪ. ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಆ ಪುಟ್ಟ ಮಂಟಪದ ಸನಿಹದ ಶೋಲಾ ಕಾಡಿನಲ್ಲಿ ಒಂದು ತಿಳಿನೀರ ತೊರೆಯಿದೆ. ಅದರ ಬಳಿ ವಿಶ್ರಾಂತಿ. ಮೂರು ಕಲ್ಲುಗಳೇ ಒಲೆ; ಸುತ್ತ ಮುತ್ತ ದೊರಕಿದ ತರಗಲೆ, ಒಣ ಕಡ್ಡಿಗಳೇ ಉರುವಲು; ಹೊತ್ತು ತಂದಿದ್ದ ಪುಟ್ಟ ಅಲ್ಯುಮಿನಿಯಂ ಪಾತ್ರೆಯಲ್ಲಿ ನೀರು ತುಂಬಿ, ಅಕ್ಕಿ ಬೇಯಿಸಿ, ಗಂಜಿ ಮಾಡಿದೆವು. ಉಪ್ಪು, ಉಪ್ಪಿನ ಕಾಯಿಯ ಜತೆ ಅದನ್ನು ಸೇವಿಸಿದಾಗ ಊಟದ ಕೆಲಸ ಮುಗಿದಂತೆ. ಅಲ್ಲಿ ಎದುರಾಗುವ ಕಡಿದಾದ ಬತ್ತದ ರಾಶಿ
ಎಂಬ ಹೆಸರಿನ ಬೆಟ್ಟವನ್ನು ಏರಿ, ಒಂದೆರಡು ಗಂಟೆ ನಡೆದಾಗ, ಶೇಷ ಪರ್ವತ, ಸಿದ್ಧ ಪರ್ವತ, ಕುಮಾರ ಪರ್ವತಗಳ ದರ್ಶನವಾಯಿತು.

ಅಲ್ಲಿಂದ ಕಾಣಿಸುವ ಒಂದು ಬೃಹತ್ ಶಿಲಾಭಿತ್ತಿಯು, ನಮ್ಮ ನಾಡಿನ ಅತಿ ಎತ್ತರದ ಶಿಲಾಭಿತ್ತಿಗಳಲ್ಲೊಂದು. ಆ ಸುತ್ತಲೂ ಪರ್ವತಗಳು ಹೇಗೆ ಹರಡಿವೆ ಎಂದರೆ, ಆ ಶಿಲಾಭಿತ್ತಿಯಿಂದ ಏಳು ಬಾರಿ ಪ್ರತಿಧ್ವನಿ ಕೇಳಿಸುತ್ತದೆ. ಕಡಿದಾಗಿ ಇಳಿದು ಹೋಗಿರುವ ಆ ಸುಂದರ ಬೃಹತ್ ಶಿಲೆಯನ್ನು ಯಾರೂ ಇದುವರೆಗೆ ಆರೋಹಣ ಮಾಡಿದಂತಿಲ್ಲ. ಆ ಎತ್ತರದಿಂದ ಕಾಣಿಸುವ ಕಾಡು, ಬೆಟ್ಟ, ಶಿಲೆ, ದೂರದ ಪರ್ವತ ಶ್ರೇಣಿ ಎಲ್ಲವೂ ಬಹು ಸುಂದರ, ನೋಡುತ್ತಲೇ ನಿಲ್ಲಬೇಕೆನಿಸುವ ದೃಶ್ಯ ಅದು. ಪ್ರಪಾತದಂಚಿನಲ್ಲೇ ಸಾಗುವ ದಾರಿಯನ್ನು ಅನುಸರಿಸಿ, ನಂತರ ಹದವಾದ ಕಾಡಿನಲ್ಲಿ ನಡೆದು,  ತೊರೆಯೊಂದರ ಬಳಿ ಬಂದೆವು.

ಆ ರಾತ್ರಿ ಅಲ್ಲೇ ತಂಗುವುದು ಎಂದು ನಿರ್ಧರಿಸಿದೆವು. ಅಲ್ಲೇ ಮುಂದಿರುವ ಒಂದು ಬಂಡೆಯನ್ನು ಏರಿದಾಗ, ಶಿಖರದ ದರ್ಶನ. ಆ ಎತ್ತರದಿಂದ ಮಡಿಕೇರಿ ಜಿಲ್ಲೆಯ ನೋಟ ಕಾಣಿಸುತ್ತದೆ. ಕುಮಾರ ಪರ್ವತದ ತುದಿಯಲ್ಲಿ ಒಂದು ಪುಟ್ಟ ದೇಗುಲವಿದೆ; ಸ್ಥಳೀಯವಾಗಿ ದೊರಕುವ ಕಲ್ಲುಗಳಿಂದ ಮಾಡಿದ ಪುಟ್ಟ ಪಾಗಾರ, ಗೋಡೆಯಂತಹ ರಚನೆ. ಇಲ್ಲಿನ ಪರಿಸರದಲ್ಲಿ ಒಂದು ಅಪರೂಪದ ಶಿಲಾ ವಿಸ್ಮಯವಿದೆ. ಪ್ರತಿ ತಿಂಗಳೂ ಸಾವಿರಾರು ಚಾರಣಿಗರ ಭೇಟಿಗೆ
ಅವಕಾಶ ದೊರಕಬಲ್ಲ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಅಂತಹ ವಿಸ್ಮಯಗಳಿಗೆ ಹೆಚ್ಚು ಪ್ರಚಾರ ನೀಡಬಾರದೆಂದೇ ನನ್ನ ಅಭಿಮತ.

ಅಷ್ಟರಲ್ಲಿ ಸಂಜೆಯಾಯಿತು. ಸಮುದ್ರಮಟ್ಟದಿಂದ ೫,೬೨೬ ಅಡಿ ಎತ್ತರವಿರುವ ಆ ಜಾಗದಿಂದ ಸೂರ್ಯಾಸ್ತವನ್ನು ನೋಡುವ ಅನುಭವವು ವಿಭಿನ್ನ, ಅನನ್ಯ. ಕತ್ತಲಾವರಿಸುತ್ತಿದ್ದಂತೆ, ವಾಪಸು ಹೊರಟು, ಶಿಖರದ ಕೆಳಗಿರುವ ತೊರೆಯ ಬಳಿ ಠಿಕಾಣಿ ಹೂಡಿದೆವು. ಮತ್ತೆ ಮೂರು ಕಲ್ಲು ಹೂಡಿ, ಅನ್ನ ಬೇಯಿಸಿದೆವು; ಊರಿನಿಂದ ತಂದಿದ್ದ ಟೊಮ್ಯಾಟೋ, ಸಂಬಾರು ಪುಡಿ ಬಳಸಿ ತಿಳಿಸಾರು ತಯಾರಿ. ಚಳಿಯ ರಕ್ಷಣೆಗೆ ಒಂದು ಬೆಡ್ ಶೀಟ್. ಈ ರೀತಿ ಕಾಡಿನಲ್ಲಿ ತಂಗಲು, ಆಗಿನ ದಿನಗಳಲ್ಲಿ ನಿರ್ಬಂಧವಿರಲಿಲ್ಲ. ಆದರೆ, ಈಗ ಕುಮಾರ ಪರ್ವತದ ಕಾಡಿನಲ್ಲಿ ತಂಗುವುದನ್ನು ಅರಣ್ಯ ಇಲಾಖೆ ನಿಷೇಧಿಸಿದೆ.

ಮರುದಿನ ಬೇಗನೆದ್ದು, ಚಹಾ ತಯಾರಿಸಿ, ಬ್ರೆಡ್ ಜತೆ ಸೇವಿಸಿ, ಅಲ್ಲೇ ಒಂದಿಷ್ಟು ಪರಿಶೋಧನೆ ನಡೆಸಿದೆವು. ತೊರೆಯಿಂದ ಇನ್ನೊಂದು ದಿಕ್ಕಿಗೆ ಒಂದು ಕಿ.ಮೀ. ನಡೆದರೆ, ಸಿದ್ಧಪರ್ವತದ ತುದಿ ತಲುಪಬಹುದು. ಅಲ್ಲಿನ ಪ್ರಪಾತದ ಅಂಚಿನಲ್ಲಿ ನಿಂತರೆ, ಶಿಲಾ ಭಿತ್ತಿಗಳ ಮತ್ತು ಪರ್ವತ ಕಮರಿಗಳ ವಿಭಿನ್ನ ನೋಟ ಲಭ್ಯ. ಆ ತುದಿಯಲ್ಲಿ, ಒಂದು ಕಲ್ಲಿನ ಮೇಲೆ ಎರಡು ಪಾದಗಳ ಗುರುತನ್ನು ಬಹು ಹಿಂದೆ ಯಾರೋ ಕೆತ್ತಿದ್ದರು. ಅದು ಅಂದಿನ ಸಾಧಕರ ಸಾಹಸ ವಿರಬಹುದು. ಅಂತಹ ಪಾದದ ಕೆತ್ತನೆಗಳು ನಮ್ಮ ನಾಡಿನ ಹಲವು ಎತ್ತರದ ಪ್ರದೇಶಗಳಲ್ಲಿ ಇವೆ. ಅರ್ಧಗಂಟೆ ಅಲ್ಲಿ ಅಡ್ಡಾಡಿ, ಪುನಃ ರಾತ್ರಿ ತಂಗಿದ್ದ ಜಾಗಕ್ಕೆ ಬಂದು, ಅಲ್ಲಿದ್ದ ಕಸ, ಪೇಪರು ಎಲ್ಲವನ್ನೂ ಆರಿಸಿ, ಒಲೆಗೆ ಹಾಕಿ ನಾಶ ಮಾಡಿದೆವು; ಇದು ನಮ್ಮ ಪದ್ಧತಿ. ಇದನ್ನು ಏಕೆ ಒತ್ತಿ ಹೇಳಿದೆ ನೆಂದರೆ, ಆಗಿನ ದಿನಗಳಲ್ಲಿ ನಾವು ಕೈಗೊಳ್ಳುತ್ತಿದ್ದ ಇಂತಹ ಚಾರಣಗಳಿಂದ ಪರಿಸರ ನಾಶವಾಗುತ್ತಿರಲಿಲ್ಲ; ಪ್ರಕೃತಿಯ ಶಿಶುಗಳಂತೆ ವರ್ತಿಸುತ್ತಾ, ಅಲ್ಲಿನ ನೋಟವನ್ನು ಕಣ್ತುಂಬಿಕೊಂಡು, ಮರಗಳ ಆಶ್ರಯದಲ್ಲಿ ರಾತ್ರಿ ಕಳೆಯುವ ಅನುಭವವನ್ನು ಪಡೆದು ವಾಪಸಾಗುತ್ತಿದ್ದ ನಮ್ಮಲ್ಲಿ, ಆ ನಂತರ
ಪ್ರಕೃತಿಯ ಕುರಿತು ಗೌರವ ಹೆಚ್ಚಾಗುತ್ತಿತ್ತು.

ಇಂತಹ ಪರಿಸರವನ್ನು, ಪ್ರಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡಬೇಕೆಂಬ ಹಂಬಲವೂ ಮೂಡುತ್ತಿತ್ತು. ಆರೋಗ್ಯಕರ ಚಾರಣವನ್ನು ಕೈಗೊಂಡ ಎಲ್ಲರಲ್ಲೂ, ಪ್ರಕೃತಿಯ ಮೇಲಿನ ಪ್ರೀತಿ, ಗೌರವ ಹೆಚ್ಚಳಗೊಳ್ಳುತ್ತದೆ ಎಂಬುದನ್ನು ಸೂಚಿಸಲು ಇಷ್ಟು ಹೇಳಬೇಕಾಯಿತು.

Leave a Reply

Your email address will not be published. Required fields are marked *

error: Content is protected !!