Saturday, 14th December 2024

ಗ್ರಾಹಕರಿಗೆ ಅಗತ್ಯ ಕಾನೂನು ಅರಿವು

ತನ್ನಿಮಿತ್ತ

ರಾಜು ಭೂಶೆಟ್ಟಿ

ಗ್ರಾಹಕರು ಅವಧಿ ಮೀರಿದ ಉತ್ಪನ್ನಗಳು, ಕಲಬೆರಕೆ, ನಕಲಿ ಉತ್ಪನ್ನಗಳು, ಉತ್ಪ್ರೇಕ್ಷಿತ ಜಾಹೀರಾತುಗಳು, ಅಗತ್ಯಕ್ಕಿಂತ ಅಧಿಕ ರಾಸಾಯನಿಕಗಳ ಬಳಕೆ ಹೀಗೆ ನಿರಂತರವಾಗಿ ಇನ್ನೂ ಹಲವಾರು ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ.

1986ರ ಡಿಸೆಂಬರ್ 24 ರಂದು ಗ್ರಾಹಕರ ಸಂರಕ್ಷಣೆ ಕಾಯಿದೆ ಅಂಗೀಕಾರಗೊಂಡ ಕಾರಣದಿಂದಾಗಿ ಪ್ರತಿ ವರ್ಷ ದೇಶಾದ್ಯಂತ ಡಿಸೆಂಬರ್- 24ರಂದು ರಾಷ್ಟ್ರೀಯ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತದೆ. ಗ್ರಾಹಕನೊಬ್ಬನು ಮಾರುಕಟ್ಟೆಯಲ್ಲಿ ಸರಕು ಹಾಗೂ ಸೇವೆಗಳನ್ನು ಖರೀದಿಸಿದಾಗ, ಕೆಲವೊಂದು ಮೂಲ ಹಕ್ಕುಗಳನ್ನು ಆ ಸರಕಿನ ಮೇಲೆ ಹೊಂದಿರುತ್ತಾನೆ. ಇಂದು ಮಾರು ಕಟ್ಟೆಯು ಹಲವಾರು ಆಯಾಮಗಳಲ್ಲಿ ತೆರೆದುಕೊಂಡಿದೆ.

ಇಂದಿನ ಡಿಜಿಟಲ್ ಯುಗದಲ್ಲಿನ ಕ್ರಾಂತಿಕಾರಕ ಬದಲಾವಣೆಗಳಿಂದಾಗಿ ಮಾರುಕಟ್ಟೆಗೆ ಹೋಗಿಯೇ ವಸ್ತುಗಳನ್ನು ಖರೀದಿಸ ಬೇಕೆಂಬ ಅನಿವಾರ್ಯತೆಯೇನೂ ಇಲ್ಲ. ಕೇವಲ ಬೆರಳು ತುದಿಯ ಸ್ಪರ್ಶದಿಂದಲೇ ಬೇಕಾದ ವಸ್ತುಗಳನ್ನು ಕೊಳ್ಳಬಹುದಾಗಿದೆ. ಹೀಗಾಗಿ ಖರೀದಿಸಿದ ವಸ್ತು ಆನ್‌ಲೈನ್ ಇರಬಹುದು ಅಥವಾ ಮಾರುಕಟ್ಟೆಯದಾಗಿರಬಹುದು. ಆ ವಸ್ತುವಿನ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸುವುದು ಅತೀ ಅಗತ್ಯವಾಗಿದೆ. ಗ್ರಾಹಕರ ಹಕ್ಕು ಎಂದರೆ ಅದು ಕೇವಲ ಅಳತೆ, ತೂಕ, ಗುಣಮಟ್ಟಕ್ಕೆ ಮಾತ್ರ ಸೀಮಿತವಲ್ಲ.

ನಮ್ಮ ಭಾಷೆಗಳಲ್ಲಿ ಸೇವೆ ಪಡೆಯುವುದು ಕೂಡ ಗ್ರಾಹಕರ ಹಕ್ಕೇ ಆಗಿದೆ. ಇಂದು ನಮ್ಮ ರಾಜ್ಯದಲ್ಲಿ ಯಾವುದೇ ವಸ್ತುವನ್ನು ಖರೀದಿಸಿದಾಗ, ಆ ವಸ್ತುವಿಗೆ ಸಂಬಂಽಸಿದ ಎಲ್ಲ ರೀತಿಯ ದೂರುಗಳು ಇಲ್ಲಿಯೇ ಇತ್ಯರ್ಥವಾಗಬೇಕು. ಆದರೆ ಇತ್ತೀಚಿಗೆ ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ವ್ಯಾಪಾರ ಮಾಡಿ ಅವುಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಅವರ ಕಸ್ಟೋಮರ್ ಕೇರ್ ಗೆ ಫೋನ್ ಮಾಡಿದರೆ ಅವರು ಕನ್ನಡ ಮಾತನಾಡುವುದಿಲ್ಲ, ಬೇರೆ ಭಾಷೆಗಳಲ್ಲಿ ಮಾತನಾಡಿ ಎಂದು ಗ್ರಾಹಕರಿಗೇ ಹೇಳುತ್ತಾರೆ.

ಆದರೆ ಆ ಬೇರೆ ಭಾಷೆಗಳ ಜ್ಞಾನವಿದ್ದರೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಆದರೆ ಗ್ರಾಹಕನಿಗೆ ಕನ್ನಡ ಬಿಟ್ಟು ಬೇರೆ ಅನ್ಯ ಭಾಷೆಯ ಬಗ್ಗೆ ಜ್ಞಾನವಿಲ್ಲದ ಸಂದರ್ಭದಲ್ಲಿ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭಸುತ್ತದೆ. ಆದ್ದರಿಂದ ಯಾವುದೇ ವಸ್ತುವನ್ನು ಗ್ರಾಹಕ ಖರೀದಿಸಿದಾಗ ಆ ವಸ್ತುವಿಗೆ ಸಂಬಂಧಿಸಿದ ಮಾಹಿತಿಗಳು ಪ್ರಾದೇಶಿಕ ಭಾಷೆಯಲ್ಲಿ ದ್ದರೆ ಗ್ರಾಹಕನಿಗೆ ಸಮಗ್ರ ಮಾಹಿತಿಯನ್ನು ಒದಗಿಸಿದಂತಾಗುತ್ತದೆ.

ಇದರಿಂದಾಗಿ ವ್ಯಾಪಾರ ವಹಿವಾಟುಗಳನ್ನು ಯಾವುದೇ ತೊಂದರೆ ಇಲ್ಲದೇ ಗ್ರಾಹಕ ಸ್ನೇಹಿಯಾಗಿ ಮಾಡಬಹುದಾಗಿದೆ. 1986ರಲ್ಲಿ ಜಾರಿಗೆ ತರಲಾದ ಗ್ರಾಹಕರ ಸಂರಕ್ಷಣಾ ಕಾಯಿದೆಯು ಗ್ರಾಹಕರಿಗೆ ಆರು ಹಕ್ಕುಗಳನ್ನು ನೀಡಿದೆ. ಅವುಗಳೆಂದರೆ –

ಗ್ರಾಹಕ ಶಿಕ್ಷಣದ ಹಕ್ಕು: ಗ್ರಾಹಕರು ತಮ್ಮ ಹಕ್ಕು ಮತ್ತು ಕಾನೂನುಗಳ ಬಗೆಗೆ ಹಾಗೂ ಖರೀದಿಯ ಸಂದರ್ಭದಲ್ಲಿ ವಸ್ತುಗಳ ಬಗೆಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಸುರಕ್ಷತೆಯ ಹಕ್ಕು: ಗ್ರಾಹಕರು ತಮ್ಮ ಜೀವಕ್ಕೆ ಹಾನಿಯುಂಟು ಮಾಡುವ ಉತ್ಪನ್ನ ಅಥವಾ ನ್ಯೂನತೆಗಳನ್ನು ಒಳಗೊಂಡ
ಉತ್ಪನ್ನಗಳಿಂದ ರಕ್ಷಣೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ.

ದೂರು ಸಲ್ಲಿಕೆಯ ಹಕ್ಕು: ಗ್ರಾಹಕರು ತಮಗಾದ ಅನ್ಯಾಯ ಅಥವಾ ಶೋಷಣೆಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ.

ಕುಂದು ಕೊರತೆ ನಿವಾರಣೆಯ ಹಕ್ಕು : ತಾವು ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿ ನ್ಯೂನತೆಗಳಿದ್ದಲ್ಲಿ ಅದಕ್ಕೆ ತಕ್ಕ ಪರಿಹಾರ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಮಾಹಿತಿ ಪಡೆಯುವ ಹಕ್ಕು: ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಯಾವುದೇ ವಸ್ತುವಿನ ಬಗೆಗೆ ಸಂಪೂರ್ಣ ವಿವರವಾದ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ.

ಆಯ್ಕೆಯ ಹಕ್ಕು: ವಸ್ತುವಿನ ಆಯ್ಕೆ ಗ್ರಾಹಕರದ್ದು. ಅಂದರೆ ಗ್ರಾಹಕರು ತಮಗೆ ಇಷ್ಟವಾದ ವಸ್ತುಗಳನ್ನು ಮಾತ್ರ ಖರೀದಿಸ ಬಹುದು. ಕೇವಲ ಹಕ್ಕುಗಳಷ್ಟೇ ಅಲ್ಲದೇ ಗ್ರಾಹಕರಿಗೆ ತಮ್ಮದೇ ಆದ ಜವಾಬ್ದಾರಿಗಳೂ ಸಹ ಇವೆ. ಅವರು ಕೊಳ್ಳುವ ವಸ್ತುಗಳ ಗುಣಮಟ್ಟದ ಬಗ್ಗೆಯೂ ಅರಿವಿರಬೇಕು.

ಅಗ್ ಮಾರ್ಕ್, ಐಎಸ್‌ಐ, ಹಾಲ್‌ಮಾರ್ಕ್ ಇವುಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ವಸ್ತುಗಳನ್ನು ಕೊಂಡಾಗ ಕಡ್ಡಾಯವಾಗಿ ರಸೀದಿ ಪಡೆಯುವುದು, ಕಾಳಸಂತೆ ಅಥವಾ ನಕಲಿ ವಸ್ತುಗಳನ್ನು ಕೊಳ್ಳಬಾರದು.