Sunday, 15th December 2024

ನೆಲದ ಕಾನೂನು ಪಾಲನೆಗೆ ಆದ್ಯತೆ

ಭಾರತದ ಹತ್ತು ಭಾಷೆಗಳ ನಂತರ ನೈಜೀರಿಯಾ ಭಾಷೆಯಲ್ಲೂ ಕೂ!

ವಿಶೇಷ ವರದಿ: ವಿರಾಜ್ ಕೆ ಅಣಜಿ

ಜನರು, ಸಾಮಾಜಿಕ ಜಾಲತಾಣಗಳು, ಸರಕಾರ, ಈ ಮೂರರಲ್ಲಿ ಯಾರೂ ಕೂಡ ತಮ್ಮ ಪ್ರಭುತ್ವ ಸ್ಥಾಪಿಸಬಾರದು. ಅಂತಿಮ ವಾಗಿ ಕಾನೂನೇ ಅಂತಿಮ ಜತೆಗೆ, ಒಂದು ಸಂಸ್ಥೆಯಾಗಿ, ದೇಶದ ನಾಗರಿಕರಾಗಿ, ಭಾರತದ ನೆಲದ ಕಾನೂನುಗಳನ್ನು ಪಾಲಿಸು ವುದು ನಮ್ಮ ಆದ್ಯ ಕರ್ತವ್ಯ, ನಾವದನ್ನು ಖಂಡಿತ ಪಾಲಿಸುತ್ತೇವೆ. ಇದು ಕನ್ನಡಿಗ, ಕೂ ಸಹ-ಸಂಸ್ಥಾಪಕ ಅಪ್ರಮೇಯ ರಾಧಾ ಕೃಷ್ಣ ಅವರ ಸ್ಪಷ್ಟ ಮಾತು. ಟ್ವಿಟರ್ ಮತ್ತು ಕೇಂದ್ರದ ಹಗ್ಗ ಜಗ್ಗಾಟದ ಹೊತ್ತಲ್ಲಿ ಭವಿಷ್ಯದಲ್ಲಿ ಅತಿ ದೊಡ್ಡ ಸಾಮಾಜಿಕ ಜಾಲ ತಾಣವಾಗುವತ್ತ ಹೆಜ್ಜೆ ಇಟ್ಟಿರುವ, ಕನ್ನಡಿಗರೇ ಕಟ್ಟಿರುವ, ಬೆಂಗಳೂರಿನಲ್ಲೇ ತನ್ನ ಕೇಂದ್ರ ಸ್ಥಾನ ಹೊಂದಿರುವ ಕೂ ಆಪ್ ಜತೆ ಸದ್ಯದ ಬೆಳವಣಿಗೆಗಳ ಬಗ್ಗೆ ಅಪ್ರಮೇಯ ಅವರೊಂದಿಗೆ ಮಾತುಕತೆ ನಡೆಸಿದ್ದರ ಪೂರ್ಣ ಭಾಗವಿದು.

ಏನಿದು ಕೇಂದ್ರ-ಟ್ವಿಟರ್ ನಡುವಿನ ಹಗ್ಗ ಜಗ್ಗಾಟ?
ಇದೇ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಒಂದು ಮಾರ್ಗಸೂಚಿ ನೀಡಿತು. ಅದು ಪ್ರಜಾ ಪ್ರಭುತ್ವ ಸರಕಾರದ ಕಾನೂನು ಆಗಿದ್ದು ಅದನ್ನು ಒಬ್ಬ ನಾಗರಿಕರಾಗಿ ಒಂದು ಸಂಸ್ಥೆಯಾಗಿ ನಾವು ಪಾಲಿಸುವುದು ನಮ್ಮ ಆದ್ಯ ಕರ್ತವ್ಯ. ಆದರೆ, ಅಮೆರಿಕ ಮೂಲದ ಟ್ವಿಟರ್ ಸಂಸ್ಥೆ ಅವುಗಳನ್ನು ಪಾಲಿಸಲು ಹಿಂದೇಟು ಹಾಕಿದೆ. ನಾನಾ ನೋಟಿಸ್‌ಗಳ ನಂತರ ಕೊನೆಗೆ ಇನ್ನಷ್ಟು ಸಮಯಾವಕಾಶ ಬೇಕು ಎಂದು ಕೇಳಿದೆ.

ಏನವು ಮಾರ್ಗಸೂಚಿಗಳು? ಪಾಲಿಸದಷ್ಟು ಅವು ಕಠಿಣವೇ?
ಕೇಂದ್ರದ ಮೊದಲ ಸೂಚನೆ ಪ್ರಕಾರ, ಯಾವುದೇ ಸಾಮಾಜಿಕ ಜಾಲತಾಣ ಸಂಸ್ಥೆ ಭಾರತದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರೆ, ಮೊದಲು ಭಾರತದಲ್ಲಿ ಒಂದು ಕೇಂದ್ರ ಕಚೇರಿ ಇರಬೇಕು. ಮೂರು ಜನ ಅಧಿಕಾರಿಗಳನ್ನು ನೇಮಕ ಮಾಡಬೇಕು
ಎಂದಿದೆ. ಅದರಲ್ಲಿ ಮೊದಲನೆಯವರು, ಚೀಫ್ ಕಾಂಪ್ಲಯನ್ಸ್ ಆಫೀಸರ್ ಅಂದರೆ, ಕಾನೂನು ಪ್ರಕಾರ ಸಂಸ್ಥೆ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಹೊಣೆ ಹೊತ್ತುಕೊಳ್ಳುವ ಅಧಿಕಾರಿಯನ್ನು ನೇಮಿಸಬೇಕು. ಎರಡನೇಯದಾಗಿ, ನೋಡಲ್ ಆಫೀಸರ್ ನೇಮಿಸಿ.

ಅವರು ಸರಕಾರದ ಕಡೆಯಿಂದ ಸಂಸ್ಥೆಗಳಿಗೆ ಏನಾದರೂ ಸೂಚನೆ ಕೊಡುವುದಿದ್ದರೆ ಸಂಪರ್ಕಿಸಬೇಕಾದ ಅಧಿಕಾರಿ ಅವರಾಗಿರಲಿ. ಕೊನೆಯದಾಗಿ, ಗ್ರೀವಿಯನ್ಸ್ ಆಫೀಸರ್ ಇರಬೇಕು. ಅವರು ಬಳಕೆದಾರರಿಗೆ ಯಾವುದೇ ರೀತಿಯ ದೂರುಗಳಿದ್ದರೆ
ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸುವ ಅಧಿಕಾರಿ ಆಗಿರಬೇಕು ಎಂಬುದು ಸೂಚನೆಯಾಗಿತ್ತು. ಇನ್ನುಳಿದಂತೆ ಮಕ್ಕಳ ಅಶ್ಲೀಲತೆ, ಭಯೋತ್ಪಾದನೆ ಉತ್ತೇಜನ ಈ ರೀತಿಯ ಕಂಟೆಂಟ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ತಿಳಿಸಿತ್ತು. ಇದನ್ನು ಪಾಲಿಸಲು ಟ್ವಿಟರ್ ಹಿಂದೇಟು ಹಾಕಿತ್ತು.

ಸಾಮಾಜಿಕ ಜಾಲತಾಣಗಳ ಜವಾಬ್ದಾರಿಗಳೇನು?
ಸರಳವಾಗಿ ಹೇಳಬೇಕು ಎಂದರೆ ನಾವು(ಜಾಲತಾಣ) ಅಭಿಪ್ರಾಯ ಹಂಚಿಕೊಳ್ಳುವವರಿಗೆ ಒಂದು ಸಭಾಂಗಣ ಮತ್ತು ಮೈಕ್ ಕೊಡುವವರು ಅಷ್ಟೇ. ನಾವಿಲ್ಲಿ ಯಾವ ಸುದ್ದಿಯನ್ನೂ ಹುಟ್ಟುಹಾಕಬಾರದು. ಆಳುವ ಸರಕಾರ ಮತ್ತು ಜನಸಾಮಾನ್ಯರ ನಡುವಿನ ಸೇತುವೆಯಾಗಿ ನಾವಿಲ್ಲಿ ಇರುತ್ತೇವೆ. ಜನರು, ಜಾಲತಾಣಗಳು ಮತ್ತು ಸರಕಾರ ಈ ಮೂರೂ ಕೂಡ ವ್ಯವಸ್ಥೆಯ ಭಾಗಗಳು. ಮೂವರೂ ಕೂಡ ಸರಿ ಸಮಾನವಾಗೇ ಇರಬೇಕು. ಇದರಲ್ಲಿ ಯಾರದ್ದೇ ಮೇಲುಗೈ ಆದರೂ ಸಮಾಜ ಸ್ವಾಸ್ಥ್ಯ ಕೆಡುವುದು ಖಂಡಿತ.

ಕೇಂದ್ರದ ಕಾನೂನುಗಳ ಬಗ್ಗೆ ಕೂ ನಿಲುವು?
ಸರಕಾರ ಎಂಬುದು ನಾವೇ ಆರಿಸಿದ ವ್ಯವಸ್ಥೆ. ಸರಕಾರ ಒಂದು ಕಾನೂನು ಮಾಡಿದಾಗ ಅದಕ್ಕೆ ನೂರಾರು ಆಯಾಮಗಳು ಇರುತ್ತವೆ. ನಾವದನ್ನು ಪಾಲಿಸಲೇಬೇಕು. ಕೇಂದ್ರ ಸರಕಾರ ಫೆಬ್ರವರಿಯಲ್ಲಿ ಕೊಟ್ಟ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದ
ಮೊದಲ ಸಂಸ್ಥೆ ಕೂ ಎನ್ನುವುದು ನಮಗೆ ಹೆಮ್ಮೆ. ದೇಶದ ಕಾನೂನನ್ನು ಮೀರಿ ಯಾರೂ ಬೆಳೆಯಬಾರದು. ಬೆಳೆಯುವುದು ಒಳ್ಳೆಯದೂ ಅಲ್ಲ ಎಂಬುದು ನಮ್ಮ ಅನಿಸಿಕೆ.

ಕೂ ನೈಜೀರಿಯಾ ತಲುಪಿದ ಬಗ್ಗೆ ತಿಳಿಸಿ?
ಕಳೆದ ಶನಿವಾರ ನೈಜೀರಿಯಾ ತನ್ನ ನೆಲದಿಂದ ಟ್ವಿಟರ್ ಅನ್ನು ನಿಷೇಧಿಸಿತು. ಕಾಕತೀಳ ಎಂಬಂತೆ ಕೂ ಈಗ ನೈಜೀರಿಯಾದ ಭಾಷೆಗಳಲ್ಲಿ ಕಾರ್ಯ ನಿರ್ವಹಣೆ ಆರಂಭಿಸಿದೆ. ಭಾರತ ಹೊರತು ಪಡಿಸಿ ಬೇರೊಂದು ದೇಶದಲ್ಲಿ ಇದು ನಮ್ಮ ಮೊದಲ
ಯಾನ. ಆಯಾ ದೇಶಗಳ ಕಾನೂನನ್ನು ಪಾಲಿಸಿಕೊಂಡೇ ನಾವು ನಮ್ಮ ಜಾಲ ವಿಸ್ತರಣೆ ಮಾಡಿಕೊಳ್ಳಲಿದ್ದೇವೆ.