Sunday, 15th December 2024

ತಮಿಳುನಾಡಿಗರಿಗೆ ನೀಟ್ ತಲೆಬೇನೆ…!

ಪ್ರಚಲಿತ

ನಳಿನಿ ಎಸ್ ಸುವರ್ಣ

ತಮಿಳುನಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ, ತಮಿಳುನಾಡು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ) ತೆಗೆದುಹಾಕಲು ನಿರ್ಧರಿಸಿದೆ.

ರಾಜ್ಯದಲ್ಲಿ ಜನರ ತೆರಿಗೆ ಹಣದಿಂದ ಮೆಡಿಕಲ್ ಕಾಲೇಜುಗಳು ನಡೆಯುತ್ತಿದೆ, ಆದರೆ ನೀಟ್‌ನಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿನ ವಿದ್ಯಾರ್ಥಿಗಳ ಸೀಟು ಕಸಿದುಕೊಳ್ಳುತ್ತಾರೆ, ಈ ವಿದ್ಯಾರ್ಥಿಗಳು ಇಲ್ಲಿ ಎಂಬಿಬಿಎಸ್ ಕಲಿತು ವಾಪಾಸ್ ತಮ್ಮ ರಾಜ್ಯಕ್ಕೆ ತೆರಳುತ್ತಿದ್ದಾರೆ. ಇದರಿಂದ ತಮಿಳುನಾಡಿಗೆ ಯಾವುದೇ ಉಪಯೋಗವಿಲ್ಲ. ವೈದ್ಯ ರಾಗುವ ಕನಸುಹೊತ್ತ ಹಲವಾರು ವಿದ್ಯಾರ್ಥಿಗಳು ನೀಟ್ ಪಾಸಾಗದೇ ನಿರಾಸೆ ಅನುಭವಿಸು ತ್ತಿದ್ದಾರೆ. ಇದರಿಂದ ಅಕ್ರೋಶಗೊಂಡ ಡಿಎಂಕೆ ಸರಕಾರವು ಸೋಮವಾರ ವಿಧಾನಸಭೆಯಲ್ಲಿ ನೀಟ್ ಅನ್ನು ತೆಗೆದುಹಾಕಲು ಮಸೂದೆಯನ್ನು ಮಂಡಿಸಿತು.

ಏಕೆಂದರೆ, ನೀಟ್ ಆರಂಭವಾದಗಿನಿಂದ ತಮಿಳುನಾಡಿನಲ್ಲಿ ೧೫ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ, ಎರಡು ಬಾರಿ ಅನುತ್ತೀರ್ಣ ಗೊಂಡಿದ್ದರಿಂದ ಮತ್ತೇ ಮೂರನೇ ಬಾರಿ ಅನುತ್ತೀರ್ಣನಾಗುವ ಭಯದಿಂದ ನೀಟ್‌ಗೆ ಹಾಜರಾಗದೆ ಕೃಷಿ ಕಾರ್ಮಿಕನ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ೨೦೧೭ರಲ್ಲಿ ರಾಜ್ಯದಲ್ಲಿ ನಡೆದಂತಹ ಇದೇ ರೀತಿಯ ಆತ್ಮಹತ್ಯೆ ದೇಶವನ್ನು ಬೆಚ್ಚಿಬೀಳಿಸಿದೆ. ಆದರೂ ಈ ಅಸ್ವಸ್ಥತೆಯನ್ನು ಪರಿಹರಿಸಲು ಏನೂ ಮಾಡಲಾಗಿಲ್ಲ. ಇದೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಇನ್ನೋರ್ವ ಬಾಲಕಿ ಕೂಡ ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಏಕೆಂದರೆ ಅವಳು ಸಿಬಿಎಸ್‌ಇ ಆಧಾರಿತ ನೀಟ್ ನಲ್ಲಿ ೭೨೦ ಕ್ಕೆ ೮೬ ಅಂಕಗಳನ್ನು ಮಾತ್ರಗಳಿಸಲು ಸಾಧ್ಯ ವಾಯಿತು ಹಾಗೂ ರಾಜ್ಯ ಬೋರ್ಡ್ ಪರೀಕ್ಷೆ ಯಲ್ಲಿ ೧೨೦೦ ಕ್ಕೆ ೧೧೭೬ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಳು. ಆ ವರ್ಷ, ಆಕೆ ತನ್ನ ಪಿಯುಸಿ ತರಗತಿಯ ಅಂಕಗಳ ಆಧಾರದ ಮೇಲೆ ಪ್ರವೇಶವನ್ನು ಪಡೆಯುತ್ತಿದ್ದಳು. ನೀಟ್ ಕಡ್ಡಾಯವಾದುದರಿಂದ ಆಕೆಗೆ ಅದು ಕಠಿಣವಾಗಿ ಪರಿಣಮಿಸಿತು. ಎಲ್ಲಾ ರಾಜ್ಯಗಳಂತೆ, ತಮಿಳುನಾಡಿನಲ್ಲಿ ರಾಜ್ಯ ಮಂಡಳಿ ಮತ್ತು ಸಿಬಿಎಸ್‌ಇ ಪಠ್ಯಕ್ರಮಗಳನ್ನು ಜೋಡಿಸಲಾಗಿಲ್ಲ. ವಿಪರ್ಯಾಸವೆಂದರೆ, ಎಂಜಿನಿಯರಿಂಗ್ ಸೀಟುಗಳಿಗೆ ನಡೆಯುವ ಜೆಇಇ ಮೇ ಪರೀಕ್ಷೆಯೂ ಸಿಬಿಎಸ್‌ಇ ಆಧಾರಿತವೇ. ಆದರೆ, ವಿವಾದ ಅಂಟಿರುವುದು ನೀಟ್‌ಗೆ ಮಾತ್ರ. ಪರೀಕ್ಷೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳು ಸಿಬಿಎಸ್‌ಇ ಶಿಕ್ಷಣ ಪಡೆದಿರುವುದಿಲ್ಲ. ಇನ್ನು, ಖಾಸಗಿ ಶಿಕ್ಷಣವನ್ನೂ ಪಡೆಯಲು ಸಾಧ್ಯವಾಗದ ಹಲವು ಬಡ ವಿದ್ಯಾರ್ಥಿಗಳೂ ಇದ್ದಾರೆ.

ತಮಿಳುನಾಡಿನ ರಾಜಕೀಯ ಪಕ್ಷಗಳು, ವೈದ್ಯಕೀಯ ಶಿಕ್ಷಣದ ಪ್ರವೇಶದ ನಿರ್ಧಾರವನ್ನು ರಾಜ್ಯ ಸರಕಾರದ ಕೈಗೆ ಕೊಡಬೇಕೆಂದು ಒತ್ತಾಯಿಸುತ್ತವೆ. ಆದರೆ, ಕೇಂದ್ರೀಕೃತ ಸಮಾನ ಪಠ್ಯರಚನೆಯ ಕಾರ್ಯ ವಿಧಾನವನ್ನು ಕೇಂದ್ರ ಸರಕಾರ ಒತ್ತಾಯಿಸುತ್ತದೆ. ಭಾರತದ ನ್ಯಾಯಾಂಗ ವ್ಯವಸ್ಥೆಯೂ ನೀಟ್ ಅನ್ನು ಬೆಂಬಲಿಸುತ್ತದೆ. ಕೇಂದ್ರ ಅಥವಾ ರಾಜ್ಯ ಶಿಕ್ಷಣ ಮಂಡಳಿಯು, ಇದಕ್ಕೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಕಾರಣ ಇದು ಈಗ ರಾಜಕೀಯ ತಿರುವು ಪಡೆಯುತ್ತಿದೆ. ಸಿಲೆಬಸ್‌ಗೆ ಸಂಬಂಽಸಿದಂತೆಯೂ ಈಗಾಗಲೇ ಒಂದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ತಮಿಳುನಾಡು ಸರಕಾರದ ನಿರ್ಧಾರದಿಂದ,
ಹೊರರಾಜ್ಯದ ವಿದ್ಯಾರ್ಥಿಗಳಿಗೆ ಕಷ್ಟ ಉಂಟು ಮಾಡುವ ಸಾಧ್ಯತೆ ಇದೆ. ಪರಿಷ್ಕೃತ ನೀಟ್ ಪರೀಕ್ಷೆಯೂ ಯಾವುದೇ ಹಿನ್ನೆಲೆಯ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಮಾಡಬಾರದು. ಸಿಬಿಎಸ್‌ಇ ಹಾಗೂ ರಾಜ್ಯ ಮಂಡಳಿಯ ಪಠ್ಯಕ್ರಮದ ನಡುವೆ ಸಮತೋಲನ ಹೊಂದಿರಬೇಕು.

ಇದರೊಂದಿಗೆ, ೧೨ನೇ ತರಗತಿಯ ಅಂಕಗಳಿಗೂ ಮಹತ್ವವನ್ನು ನೀಡಬೇಕು. ವೈದ್ಯಕೀಯ ಶಿಕ್ಷಣವು ಏಕಕಾಲಿಕ ವಿಷಯವಾಗಿರುವುದರಿಂದ, ಕೇಂದ್ರ, ರಾಜ್ಯ, ಹಾಗೆಯೇ ಭಾರತೀಯ ವೈದ್ಯಕೀಯ ಮಂಡಳಿ, ಜಂಟಿಯಾಗಿ ಪಠ್ಯಕ್ರಮವನ್ನು ಅಂತಿಮಗೊಳಿಸಬೇಕು. ಹಾಗೆಯೇ, ಪರಿಷ್ಕೃತ ಪಠ್ಯಕ್ರಮಕ್ಕೆ ಹೊಂದಿಕೊಳ್ಳಲು
ವಿದ್ಯಾರ್ಥಿಗಳಿಗೂ ಸಮಯ ನೀಡಬೇಕು. ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವುದೇ ಪರಿಹಾರವಲ್ಲ.