Wednesday, 18th September 2024

ವೈದ್ಯ ವಿದ್ಯಾರ್ಥಿಗಳ ನೋವಿಗೆ ನೀಟ್ ಕಾರಣವೇ ?

ಅಭಿಮತ

ಡಾ.ಕರವೀರಪ್ರಭು ಕ್ಯಾಲಕೊಂಡ

ನೀಟ್ ಫಲಿತಾಂಶ ನಿಗದಿತ ಅವಧಿಗಿಂತ ಮೊದಲೇ ಬಂತು. ಕೆಲವರಿಗೆ ಖುಷಿ ತಂತು. ಕೆಲವರ ಜೀವಕ್ಕೆ ಕುತ್ತು ತಂತು. ಫಲಿತಾಂಶದ ಪೋಸ್ಟ್ ಮಾರ್ಟಮ್ ವರದಿ ದೂರದರ್ಶನದವರಿಗೆ ಬ್ರೇಕಿಂಗ್ ನ್ಯೂಸ್ ಆಯ್ತು. ಪತ್ರಿಕೆಗಳಿಗೆ ದಪ್ಪಕ್ಷರದ ಸುದ್ದಿ ಆಯ್ತು. ದೇಶದ ತುಂಬೆ ಸದ್ದುಗದ್ದಲಕ್ಕೆ ನಾಂದಿ ಹಾಡ್ತು. ಫಲಿತಾಂಶದಲ್ಲಿನ ದೋಷಗಳ ಕುರಿತು ಆಕಾಂಕ್ಷಿಗಳ ಅಸಮಾಧಾನ ನಿಗಿ ನಿಗಿ ಕಿಚ್ಚಾಯ್ತು. ಮರುಪರೀಕ್ಷೆಗೆ ಪೋಷಕರು ದನಿಯೆತ್ತಿದರು. ಪ್ರಶ್ನೆ ಪತ್ರಿಕೆ ಸೋರಿಕೆ, ಕೃಪಾಂಕದ ಅಸಮರ್ಪಕ ಹಂಚಿಕೆ, ಪರೀಕ್ಷಾ ನಕಲು, ದೋಷಪೂರಿತ ಪ್ರಶ್ನೆಪತ್ರಿಕೆಗಳು, ಒಎಂಆರ್ ಶೀಟ್‌ಗಳಲ್ಲಿ ಲೋಪಗಳು, ಉತ್ತರಪತ್ರಿಕೆ ಮಾದರಿಗಳು ತಪ್ಪಾಗಿರುವುದು, ಮೌಲ್ಯಮಾಪನ ಸರಿಯಾಗಿ ನಡೆದಿಲ್ಲ… ಸೇರಿದಂತೆ ಆರೋಪಗಳನ್ನು ಮಾಡಿರುವ ಅಭ್ಯರ್ಥಿಗಳು ಮತ್ತು ಪೋಷಕರು ಪರೀಕ್ಷಾ ಅಕ್ರಮಗಳ ಕುರಿತು ಸಿಬಿಐ ಅಥವಾ ಉನ್ನತ ಮಟ್ಟದ ಸಮಗ್ರ ತನಿಖೆಗೆ ಪಟ್ಟು ಹಿಡಿದೀರುವುದು ಕೇಳಿ ಬಂದಿದೆ.

ಮರುಪರೀಕ್ಷೆಗೆ ಕೆಲವರು ಕೋರಿದ್ದಾರೆ. ರಾಜಕೀಯ ಪಕ್ಷಗಳು ನೀಟ್ ಪರೀಕ್ಷೆ ಕುರಿತು ಸಾಕಷ್ಟು ಮಾತನಾಡಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳು ಅಪಾರ ಸಾಧನೆಗಳನ್ನು ಮಾಡುತ್ತಾ ಬಂದಿವೆ. ಉನ್ನತ ವೈದ್ಯಕೀಯ ಶಿಕ್ಷಣಕ್ಕಾಗಿ ಅಪಾರ ಹಣವನ್ನು ತಮ್ಮ ಬಜೆಟ್‌ನಲ್ಲಿ ಮೀಸಲಿಡುತ್ತಾ ಬಂದಿವೆ. ದಕ್ಷಿಣ ಭಾರತದ ಜನತೆಯ ತೆರಿಗೆ ಹಣವನ್ನು ದೊಡ್ಡ ಪ್ರಮಾಣದಲ್ಲಿ ಉನ್ನತ ಶಿಕ್ಷಣಕ್ಕೆ ವ್ಯಯ ಮಾಡುತ್ತಿರುವುದರಿಂದ, ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೇ ಹೆಚ್ಚು ಅವಕಾಶ ಸಿಗಬೇಕು ಎನ್ನುವುದು ದಕ್ಷಿಣ ಭಾರತದ ರಾಜ್ಯಗಳ ಆಗ್ರಹವಾಗಿದೆ.

ಆದರೆ, ನೀಟ್ ಪರೀಕ್ಷೆಯಿಂದಾಗಿ ಉತ್ತರ ಭಾರತದ ವಿದ್ಯಾರ್ಥಿಗಳು ಇಲ್ಲಿನ ವಿದ್ಯಾರ್ಥಿಗಳ ಅವಕಾಶವನ್ನು ಕಸಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಲೇ, ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಆಯಾ ರಾಜ್ಯಗಳಿಗೇ ಸೇರಬೇಕು ಎನ್ನುವ ಒತ್ತಾಯವನ್ನು ದಕ್ಷಿಣ ಭಾರತದ ರಾಜ್ಯಗಳು ಮಾಡುತ್ತಲೇ ಬಂದಿವೆ. ಆದರೆ, ಕೇಂದ್ರ ಸರಕಾರ ಈ ಆಗ್ರಹಕ್ಕೆ ಜಾಣಕಿವುಡು ಪ್ರದರ್ಶಿಸುತ್ತಲೇ ಬಂದಿದೆ. ಕೇಂದ್ರ ಸರಕಾರವು ಯುವ ಸಮುದಾಯವನ್ನು ವಂಚಿಸುವ ಮೂಲಕ ಅವರ ಭವಿಷ್ಯದ ಜೊತೆ ಚೆಟ ಆಡುತ್ತಲೇ ಇದೆ.

ಸರಿಸುಮಾರು ೪,೭೫೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಇದು ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆ. ಸುಮಾರು ೨೩.೩೩ ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆ ನಡೆಯುವ ಬಗೆಯ ಸುತ್ತ ಇಷ್ಟೊಂದು ದೂರುಗಳು, ಇಷ್ಟೊಂದು ಪ್ರಶ್ನೆಗಳು, ಅಪಸ್ವರಗಳು ಇರಲೇಬಾರದು. ದೊಡ್ಡ ಮಟ್ಟದಲ್ಲಿ ನಡೆಯುವ ಹಾಗೂ ಹೆಚ್ಚು ಪ್ರಾಮುಖ್ಯ ಪಡೆದ ನೀಟ್ ನಂತಹ ಪರೀಕ್ಷೆಗಳು ಅತ್ಯಂತ ಹೆಚ್ಚು ವಿಶ್ವಾಸಾರ್ಹ ಆಗಿರಬೇಕು. ಹೀಗಾಗಬೇಕು ಎಂದಾದರೆ ಪಾರದರ್ಶಕತೆ ಹಾಗೂ ದಕ್ಷತೆ ಇರಬೇಕು. ನೀಟ್ ಪರೀಕ್ಷೆ ಬರೆದವರಲ್ಲಿ ೬೭ ಅಭ್ಯರ್ಥಿಗಳು ೭೨೦ /೭೨೦ ಅಂಕ ಗಳಿಸಿ, ಪ್ರಥಮ ರ‍್ಯಾಂಕ್ ಬಂದಿರುವುದು ಆರೋಪಕ್ಕೆ ಪ್ರಮುಖ ಕಾರಣವಾಗಿದ್ದು, ಇದು ಅಸಾಧ್ಯ ಎನ್ನಲಾಗುತ್ತಿದೆ.

೨೦೧೯ ರಿಂದೀಚಿನ ಮಾಹಿತಿ ಪ್ರಕಾರವೇ ನೀಟ್‌ನಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿಗೆ ಸಂಪೂರ್ಣ ಅಂಕ, ಅಂದರೆ ೭೨೦/೭೨೦ ಅಂಕ ದೊರಕಿದ ದಾಖಲೆ ಯಿಲ್ಲ. ೨೦೨೨ ರಲ್ಲಿ ಸಂಪೂರ್ಣ ಅಂಕ ಪಡೆದವರು ಯಾರೂ ಇರಲಿಲ್ಲ. ೨೦೨೩ ರಲ್ಲಿ ಇಬ್ಬರು ಟಾಪರ್‌ಗಳಿದ್ದರು. ಈ ವರ್ಷ ಸಂಪೂರ್ಣ ಅಂಕ ಪಡೆದವರು ೬೭ ಅಭ್ಯರ್ಥಿಗಳು. ಅದರಲ್ಲಿ ೬ ಜನರು ಒಂದೇ ಪರೀಕ್ಷಾ ಕೇಂದ್ರದಲ್ಲಿ ಬರೆದವರು. ಅವರ ರೋಲ್ ನಂಬರ ೬೨ ರಿಂದ ೬೯. ಉಳಿದ ಇಬ್ಬರಲ್ಲಿ ಒಬ್ಬರಿಗೆ ೭೧೯, ಮತ್ತೊಬ್ಬರಿಗೆ ೭೧೮. ನೀಟ್ ಪರೀಕ್ಷೆಯಲ್ಲಿ ಅಂಕ ನೀಡುವ ಸೂತ್ರದ ಪ್ರಕಾರ ಇಷ್ಟು ಅಂಕ ಪಡೆಯಲು ಸಾಧ್ಯವೇ ಇಲ್ಲ.

ಈ ಟಾಪರ್‌ಗಳು ಪರೀಕ್ಷೆ ಬರೆದ ಕೇಂದ್ರ ಫರೀದಾಬಾದ ಕೇಂದ್ರ. ಇಲ್ಲಿಯೇ ತಪ್ಪಾದ ಪ್ರಶ್ನೆ ಪತ್ರಿಕೆ ವಿತರಿಸಲಾಗಿತ್ತು ಮತ್ತು ಅವರಿಗೆ ೪೫ ನಿಮಿಷಗಳು ವ್ಯರ್ಥವಾಗಿದ್ದವು. ಪರೀಕ್ಷಾ ಸಮಯ ನಷ್ಟಕ್ಕೆ ಪರಿಹಾರಾತ್ಮಕ ಅಂಕ ಪಡೆದ ೧,೫೬೩ ಅಭ್ಯರ್ಥಿಗಳಲ್ಲಿ, ಈ ಗರಿಷ್ಠ ಅಂಕ ಪಡೆದವರೂ ಇದ್ದಾರೆ. ಇದರಿಂದಾಗಿ ಹಲವು ವಿದ್ಯಾರ್ಥಿಗಳ ಅಂಕಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿದ್ದು, ಒಬ್ಬರಿಗೆ ೭೧೮, ಮತ್ತೊಬ್ಬರಿಗೆ ೭೧೯ ಅಂಕಗಳು ಬಂದಿವೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್ ಟಿಎ) ಸ್ಪಷ್ಟೀಕರಣ ನೀಡಿದೆ. ಒಂದು ಕೀ ಉತ್ತರದ ಪರೀಷ್ಕೃತ ಅಂಶಗಳ ಲಾಭ ಪಡೆದ ೪೪ ಅಭ್ಯರ್ಥಿಗಳು
೭೨೦ ಅಂಕಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಎನ್ ಟಿಎ ನೀಡಿರುವ ಸಬೂಬುಗಳಿಂದ ನಗೆಪಾಟಲಿಗೆ ತುತ್ತಾಗಿದೆ.

ಆದರೆ, ಯಾವ ಮಾನದಂಡದಲ್ಲಿ ಈ ಅಂಕಗಳನ್ನು ನೀಡಲಾಗಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ. ಉತ್ತರ ಭಾರತ ದಲ್ಲಿ ಮರು ಪರೀಕ್ಷೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದಿzರೆ. ನೀಟ್ ಫಲಿತಾಂಶದ ವಿರುದ್ಧ ಹಲವರು ನ್ಯಾಯಾಲಯದ ಮೆಟ್ಟಿಲುಗಳನ್ನು ತುಳಿದಿದ್ದಾರೆ.
ಮೇ ೫ ರಂದು ದೇಶದಾದ್ಯಂತ ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಎನ್‌ಟಿಎ ಅಲ್ಲಗಳೆದಿದೆಯಾದರೂ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೩ ಆರೋಪಿಗಳನ್ನು ಬಂಧಿಸಿರುವುದಾಗಿ ಬಿಹಾರ ಪೋಲಿಸರು ತಿಳಿಸಿದ್ದಾರೆ.

ಇದರ ಬೆನ್ನ ನೀಟ್ ಪರೀಕ್ಷಾ ಆಕ್ರಮದಲ್ಲಿ ತೊಡಗಿದ್ದ ಗುಂಪನ್ನು ಬೇಧಿಸಿದ್ದ ದೆಹಲಿ ಪೋಲಿಸರು, ಎಂಬಿಬಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಆರೋಪಿ ಗಳನ್ನು ಬಂಧಿಸಿರುವರು. ನೀಟ್ ಪರೀಕ್ಷೆಗೆ ಅಭ್ಯರ್ಥಿಯ ಪರವಾಗಿ ನಕಲಿ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಲು ಇವರು ತಲಾ ೨೦ – ೨೫ ಲಕ್ಷ ಪಡೆಯುತ್ತಿದ್ದರು ಎಂಬುದು ತಿಳಿಯಿತು. ಈ ರೀತಿ ದೆಹಲಿ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಹಾಜರಿದ್ದ ಇಬ್ಬರು ನಕಲಿ ಅಭ್ಯರ್ಥಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದರು. ಸತ್ಯದ ತಲೆಯ ಮೇಲೆ ಹೊಡೆಯುವಂಥ ಸುಳ್ಳಿನ ಕಂತೆಗಳನ್ನೇ ಬತ್ತಳಿಕೆಯಲ್ಲಿ ಇಟ್ಟುಕೊಂಡಿರುವ ಎನ್‌ಟಿಎ ವಿಶ್ವಾಸ ಕಳೆದುಕೊಂಡಿದೆ.

ರಾಜಸ್ಥಾನದ ಕೇಂದ್ರವೊಂದರಲ್ಲಿ ಉತ್ತರ ಗುರುತಿಸಿರುವ ಉತ್ತರ ಪತ್ರಿಕೆಗಳನ್ನು ನೀಡಿ, ಅನಂತರ ವಾಪಸ್ ಪಡೆಯಲಾಯಿತು ಎನ್ನಲಾಗಿದೆ. ಈ ಕೇಂದ್ರಗಳಲ್ಲಿ ೧೨೦ ವಿದ್ಯಾರ್ಥಿಗಳಿಗೆ ನಡೆಸಲಾಯಿತೆಂದು ಎನ್‌ಟಿಎ ಸಮಜಾಯಿಸಿ ನೀಡಿದೆಯಾದರೂ ಅದು ಅನುಮಾನಾಸ್ಪದವೆನಿಸಿದೆ. ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳಿಗೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನೀಟ್ ತರಬೇತಿ ನೀಡುವ ಅಕಾಡೆಮಿಗಳ ಮಾಫಿಯಾ ಈ ಹಗರಣದ ಹಿಂದೆ ಕಾಣದ ಕೈಯಂತೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಶಿಕ್ಷಣ ಕ್ಷೇತ್ರವು ನೀಟ್ ಪರೀಕ್ಷೆಯನ್ನೇ ವಾಣಿಜ್ಯೋದ್ಯಮವಾಗಿ ಮಾಡಿಕೊಂಡ ಬಗೆಯೂ ಬೆರಗು ಮೂಡಿಸುವಂಥದ್ದೇ!

ನೂರಾರು ವಿದ್ಯಾರ್ಥಿಗಳಲ್ಲಿ ಖಿನ್ನತೆಯ ಕಾಟ ಶುರು ವಾಗಿದೆ. ‘ನೀಟ್ ಒತ್ತಡ’ ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ನೀಟ್ ಬರೆಯುವ ಸಲುವಾಗಿ ಸುಮಾರು ಎರಡು ವರ್ಷಗಳ ಕಾಲ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ನಿದ್ದೆಗೆಟ್ಟು ಅವಿರತವಾಗಿ ಶ್ರಮಿಸುವ ಹದಿಹರೆಯದ ಮಕ್ಕಳಲ್ಲಿ ಒತ್ತಡ ಎಂದು ಹೊರನೋಟಕ್ಕೆ ಗೊತ್ತಾಗದ, ಆದರೆ ಒತ್ತಡವೇ ಮೂಲವಾದ ಹಲವು ಕಾಯಿಲೆಗಳು ಸದ್ದಿಲ್ಲದೇ ಹೆಜ್ಜೆ ಹಾಕುವವು. ವೈದ್ಯಕೀಯ ಶಿಕ್ಷಣಕ್ಕಾಗಿ ರಾಜ್ಯದಿಂದ ನೂರಾರು ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುವುದು ಮತ್ತು ಯುದ್ಧ ಕಾರಣದಿಂದ ಅವರು ಬೀದಿಗೆ ಬಿದ್ದಿರುವುದು ಮಾಧ್ಯಮಗಳಲ್ಲಿ ಸುದ್ದಿ ಆಯಿತು. ಭಾರತದ ಸಾಕಷ್ಟು ವೈದ್ಯಕೀಯ ಕಾಲೇಜುಗಳು ಇರುವಾಗ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ನಂತಹ ಸಣ್ಣ ದೇಶಗಳಿಗೆ ಯಾಕೆ ಹೋಗುತ್ತಾರೆ ಎಂದು ಅಮಾಯಕರಂತೆ ನಮ್ಮ ದೇಶದ ಪ್ರಧಾನಿಗಳು ಕಳವಳ ವ್ಯಕ್ತಪಡಿಸಿದ್ದರು.

ಈಗಾಗಲೇ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ, ಎನ್‌ಟಿಎ ಮತ್ತು ಕೇಂದ್ರ ಸರಕಾರದ ಪ್ರತಿಕ್ರಿಯೆಗೆ ನಿರ್ದೇಶಿಸಿದೆ. ನೀಟ್ ಪರೀಕ್ಷೆಯ ವಿರುದ್ಧ ತಮಿಳುನಾಡು ಮತ್ತು ಕೇರಳ ಸ್ಪಷ್ಟ ಧ್ವನಿಯಲ್ಲಿ ತಮ್ಮ ಆಕ್ಷೇಪಗಳನ್ನು ವ್ಯಕ್ತ ಪಡಿಸುತ್ತ ಬಂದಿದ್ದವು. ಇವರ ಧ್ವನಿಗೆ ಎಲ್ಲ ರಾಜ್ಯಗಳು ಧ್ವನಿ ಗೂಡಿಸಿ ನಿಂತಾಗ ನೀಟ್‌ಗೆ ಪರ್ಯಾಯ ಪರಿಹಾರ ಸಿಕ್ಕೀತು. ಸರಕಾರ ಕಿವುಡು ಜಾಣತನ ತೋರಿಸದೇ ನೀಟ್ -ಲಿತಾಂಶ
ರದ್ದುಗೊಳಿಸಬೇಕು. ಮರುಪರೀಕ್ಷೆ ನಡೆಸಿ, ಆಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕು. ಗುಣಾತ್ಮಕ ವೈದ್ಯಕೀಯ ಶಿಕ್ಷಣ ನಿಯಂ ತ್ರಿಸುವ ಜವಾಬ್ದಾರಿ ಹೊತ್ತಿರುವ ಎನ್‌ಎಮಸಿ ಕುಂಬಕರ್ಣ ನಿದ್ದೆಯಿಂದ ಎದ್ದೇಳಬೇಕು. ಸುಳ್ಳು ಸ್ಪಷ್ಟೀಕರಣ, ಸಮಜಾಯಿಷಿ ನೀಡುವ ಸೋಗಲಾಡಿತನ ಬಿಟ್ಟು ಮೌಲಿಕ ಪರೀಕ್ಷೆ ನಡೆಸುವ ಗುರುತರ ಹೊಣೆಗಾರಿಕೆ ಹೊತ್ತಿರುವ ಎನ್‌ಟಿಎ ತನ್ನ ವೈ-ಲ್ಯಗಳನ್ನು ಪರಾಮರ್ಶೆ ಮಾಡಿಕೊಂಡು, ಅವು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆಗ ವಿದ್ಯಾರ್ಥಿಗಳ ನೇಣಿಗೆ ನೀಟ್ ಗೂಟವಾಗುವುದು ತಪ್ಪೀತು!

(ಲೇಖಕರು: ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *