ಸಂಗತ
ಡಾ.ವಿಜಯ್ ದರಡಾ
ಅಕ್ರಮ ದಂಧೆಕೋರರು ಈಗ ನೀಟ್ ಪರೀಕ್ಷೆಗೂ ಕೈಹಾಕಿದ್ದಾರೆ. ದೇಶದಲ್ಲೀಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಹಗರಣಗಳು ನಡೆಯುತ್ತಿವೆ ಎಂದಾದರೆ ನಾವು ಭವಿಷ್ಯಕ್ಕಾಗಿ ಎಂತಹ ತಲೆಮಾರನ್ನು ಸೃಷ್ಟಿ ಮಾಡುತ್ತಿದ್ದೇವೆ ಎಂದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳ ಬೇಕು.
ಈ ಬಾರಿಯ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಬಗ್ಗೆ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಆಕ್ರೋಶ ಕೇಳಿಬರುತ್ತಿದೆ. ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡಲು ನಡೆಸುವ ಈ ಪರೀಕ್ಷೆಯಲ್ಲಿ ಯದ್ವಾತದ್ವಾ ಅಕ್ರಮಗಳು ನಡೆದಿವೆ ಎಂದು ವಿದ್ಯಾರ್ಥಿಗಳೇ ಆರೋಪಿಸಲು ಆರಂಭಿಸಿದ ಮೇಲೆ ಗ್ರೇಸ್ ಅಂಕ ಕೈಬಿಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಅಷ್ಟಕ್ಕೇ ವಿಷಯ ಮುಕ್ತಾಯವಾಯಿತೇ? ಇಲ್ಲ! ಎಲ್ಲಕ್ಕಿಂತ ದೊಡ್ಡ ಪ್ರಶ್ನೆ ಏನೆಂದರೆ, ಈ ಹಗರಣದ ರೂವಾರಿ ಯಾರು? ಅಥವಾ ನೀಟ್ ಹಗರಣದ ನಿಜವಾದ ನಟವರಲಾಲ್ ಯಾರು? ಖಂಡಿತ ಇದರ ಹಿಂದೆ ಒಬ್ಬನೇ ವ್ಯಕ್ತಿ ಇಲ್ಲ, ಹಲವಾರು ಜನರಿದ್ದಾರೆ. ಅದರಲ್ಲಿ ಯಾವ ಅನುಮಾನವೂ ಬೇಡ.
ಅವರೆಲ್ಲರೂ ಈಗ ಜೈಲಿಗೆ ಹೋಗುತ್ತಾರೆಯೇ? ಅಥವಾ ಕೆಲ ಕಾಣದ ಕೈಗಳು ಎಂದಿನಂತೆ ಈ ದುರುಳರನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತವೆಯೇ?
ನಮ್ಮ ದೇಶಗಳಲ್ಲಿ ಬೇರೆ ಬೇರೆ ರೀತಿಯ ಪರೀಕ್ಷೆಗಳಲ್ಲಿ ಅಕ್ರಮಗಳು ಅಥವಾ ಹಗರಣಗಳು ನಡೆಯುವುದು, ಅವುಗಳನ್ನು ಮುಚ್ಚಿಹಾಕುವುದು, ಕಳ್ಳಾಟ ಆಡಿದವರನ್ನು ರಕ್ಷಿಸುವುದು ಇವೆಲ್ಲ ಹೊಸತೇನಲ್ಲ. ಆದರೆ ಇಂತಹ ಎಲ್ಲ ಚಟುವಟಿಕೆಗಳೂ ಈಗ ರಾಜಾರೋಷವಾಗಿ, ಎಲ್ಲರ ಕಣ್ಣೆದುರೇ ನಡೆಯು ತ್ತವೆ ಅಂದರೆ ಜನರು ಸಹಜವಾಗಿಯೇ ರೊಚ್ಚಿಗೇಳುತ್ತಾರೆ. ಅವರಲ್ಲಿ ವ್ಯವಸ್ಥೆಯ ಮೇಲೆ ಅನುಮಾನಗಳು ಮೂಡಲಾರಂಭಿಸುತ್ತವೆ. ಅಂತಹ ಅಪಸವ್ಯಕ್ಕೆ ಆಡಳಿತ ವ್ಯವಸ್ಥೆ ಅವಕಾಶ ನೀಡಬಾರದು.
ನೀಟ್ ಪರೀಕ್ಷೆ ನಡೆದಿದ್ದು ೨೦೨೪ರ ಮೇ ೫ರಂದು. ಆವತ್ತೇ ಬಿಹಾರದ ಪಾಟ್ನಾದಲ್ಲಿ ಪರೀಕ್ಷಾ ಅಕ್ರಮದ ಆರೋಪದ ಮೇಲೆ ೫ ಅಭ್ಯರ್ಥಿಗಳನ್ನು ಬಂಽಸಲಾಗಿತ್ತು. ಅದೇ ದಿನ ರಾಜಸ್ಥಾನದ ಸವಾಯಿ ಮಾಧೋಪುರ ನಗರದಲ್ಲಿ ಹಿಂದಿ ಮಾಧ್ಯಮದ ಅಭ್ಯರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮದ ಪ್ರಶ್ನೆ
ಪತ್ರಿಕೆಗಳನ್ನು ನೀಡಿದ ಆರೋಪ ಕೇಳಿಬಂದಿತ್ತು. ಬರೋಬ್ಬರಿ ಒಂದು ತಾಸಿನ ನಂತರ ಅವರಿಗೆ ಸರಿಯಾದ ಪ್ರಶ್ನೆ ಪತ್ರಿಕೆ ನೀಡಲಾಯಿತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಕೂಡ ಈ ರೀತಿಯ ಸಮಸ್ಯೆ ಉಂಟಾಗಿದ್ದನ್ನು ಒಪ್ಪಿಕೊಂಡಿತು.
ಆದರೆ, ಫಲಿತಾಂಶ ಪ್ರಕಟವಾದ ಮೇಲೆ ಈ ವಿಷಯದಲ್ಲಿ ಇನ್ನೂ ದೊಡ್ಡ ಅನುಮಾನ ವ್ಯಕ್ತವಾಯಿತು. ಸವಾಯಿ ಮಾಧೋಪುರದಲ್ಲಿ ಅಚಾತುರ್ಯ ದಿಂದ ಬೇರೆ ಪ್ರಶ್ನೆಪತ್ರಿಕೆ ನೀಡಲಾಗಿತ್ತೇ ಅಥವಾ ಗ್ರೇಸ್ ಅಂಕಗಳನ್ನು ನೀಡಲು ಅವಕಾಶ ಸೃಷ್ಟಿಸಿಕೊಳ್ಳುವುದಕ್ಕಾಗಿ ಬೇಕಂತಲೇ ತಪ್ಪು ಪ್ರಶ್ನೆಪತ್ರಿಕೆ
ನೀಡಲಾಗಿತ್ತೇ ಎಂಬ ಶಂಕೆಯನ್ನು ಅನೇಕರು ವ್ಯಕ್ತಪಡಿಸಲಾರಂಭಿಸಿದರು. ಇನ್ನೊಂದು ಎಡವಟ್ಟು ಆಗಿದ್ದು ಭೌತಶಾಸ್ತ್ರದ ಪ್ರಶ್ನೆಯಲ್ಲಿ. ಆ ಪ್ರಶ್ನೆಗೆ ಎರಡು ಸರಿ ಉತ್ತರಗಳಿದ್ದವು.
ಒಂದು ಸರಿಯುತ್ತರ ಹೊಸ ಪುಸ್ತಕದಲ್ಲಿ, ಇನ್ನೊಂದು ಸರಿಯುತ್ತರ ಹಳೆಯ ಪುಸ್ತಕದಲ್ಲಿತ್ತು. ಹೀಗಾಗಿ ಪ್ರಶ್ನೆಪತ್ರಿಕೆ ಹಂಚಿಕೆಯಲ್ಲಿ ಸಮಸ್ಯೆ ಅನುಭವಿಸಿ ದವರಿಗೆ ಹಾಗೂ ಭೌತಶಾಸದ ಪ್ರಶ್ನೆಗೆ ಎರಡನೇ ಸರಿಯುತ್ತರ ಬರೆದವರಿಗೆ ಕೃಪಾಂಕ ನೀಡಲು ನಿರ್ಧರಿಸಲಾಯಿತು. ಹೀಗೆ ದೇಶದಲ್ಲಿ ಒಟ್ಟು ೧೫೬೩ ವಿದ್ಯಾರ್ಥಿಗಳು ಕೃಪಾಂಕ ಪಡೆದುಕೊಂಡರು. ಇದು ಇಷ್ಟಕ್ಕೇ ಮುಗಿಯಲಿಲ್ಲ. ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ವಿದ್ಯಾರ್ಥಿಗಳಿಗೆ ಇನ್ನೂ ದೊಡ್ಡ ಶಾಕ್ ಕಾದಿತ್ತು.
ಬರೋಬ್ಬರಿ ೬೭ ವಿದ್ಯಾರ್ಥಿಗಳು ೭೨೦ಕ್ಕೆ ೭೨೦ ಅಂಕ ಪಡೆದು ದೇಶದಲ್ಲಿ ನೀಟ್ ಪರೀಕ್ಷೆಯ ಟಾಪರ್‌ಗಳಾಗಿ ಹೊರಹೊಮ್ಮಿದ್ದರು! ಅವರ ಪೈಕಿ ಆರು ವಿದ್ಯಾರ್ಥಿಗಳು ಹರ್ಯಾಣದ ಫರೀದಾಬಾದ್‌ನ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದವರಾಗಿದ್ದರು. ಕುತೂಹಲಕರ ಸಂಗತಿ ಏನೆಂದರೆ, ನೀಟ್ ಪರೀಕ್ಷೆ ಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ತಲಾ ನಾಲ್ಕು ಅಂಕಗಳಿರುತ್ತವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸಿಗುವ ಅಂಕ ನಾಲ್ಕರ ಮಲ್ಟಿಪಲ್ ಆಗಿರಬೇಕು. ಆದರೆ ಕೆಲ ವಿದ್ಯಾರ್ಥಿಗಳಿಗೆ ೭೧೮ ಮತ್ತು ೭೧೯ ಅಂಕಗಳೂ ಬಂದಿವೆ. ಅದು ಹೇಗೆ ಸಾಧ್ಯ? ಈ ಎಡವಟ್ಟುಗಳೆಲ್ಲವೂ ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದಿರುವು ದಕ್ಕೆ ಸ್ಪಷ್ಟ ಸೂಚನೆಗಳು.
ಇದೇ ಕಾರಣಕ್ಕೆ ಸುಪ್ರೀಂಕೋರ್ಟ್ ಕೂಡ ‘ಪರೀಕ್ಷೆಯ ಪಾವಿತ್ರ್ಯವನ್ನು ಹಾಳುಗೆಡವಿದ್ದೀರಿ ಎಂದು ಎನ್‌ಟಿಎಗೆ ಛೀಮಾರಿ ಹಾಕಿತು. ಖಂಡಿತ ಇದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಚಾರ. ಈ ಪರೀಕ್ಷಾ ಅಕ್ರಮ ಇಡೀ ದೇಶದ ಮೇಲೆ ದುಷ್ಪರಿಣಾಮ ಬೀರಿದೆ. ದೇಶದ ಮೂಲೆಮೂಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಒತ್ತಡಕ್ಕೆ ಸಿಲುಕಿದ್ದಾರೆ. ತನ್ನ ಮಗನ ಫಲಿತಾಂಶದ ವಿಷಯದಲ್ಲಿ ಒತ್ತಡಕ್ಕೆ ಒಳಗಾಗಿದ್ದ ಡಾಕ್ಟರ್ ಒಬ್ಬರು ರೋಗಿಯ ಶಸಚಿಕಿತ್ಸೆಯಲ್ಲೇ ಅಪರಾತಪರಾ ಮಾಡಿದ್ದಾರೆ ಎಂದು ಸುದ್ದಿ ಬಂದಿತ್ತು. ನನಗೆ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಒಂದು ಪರೀಕ್ಷೆಯ ಅವಾಂತರದಿಂದ ದೇಶದಲ್ಲಿ ಏನೇನಾಗುತ್ತಿದೆ ಎಂಬುದನ್ನು ನೋಡಿ!
ಇವೆಲ್ಲವೂ ಈ ಸಮಸ್ಯೆಯ ಆಳ ಹಾಗೂ ಅಗಲವನ್ನು ಹೇಳುತ್ತಿವೆ. ದೇಶದಲ್ಲಿ ಮಾಫಿಯಾದ ಡಾನ್‌ಗಳು ಶಿಕ್ಷಣ ವ್ಯವಸ್ಥೆಯನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ಜನರು ಈಗ ಅನುಮಾನವಿಲ್ಲದೆ ಹೇಳುತ್ತಿದ್ದಾರೆ. ಪ್ರತಿ ವರ್ಷ ಒಂದಲ್ಲಾ ಒಂದು ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತವೆ. ಆದರೆ ಅದರ ಮಾಸ್ಟರ್ ಮೈಂಡ್‌ಗಳು ತಪ್ಪಿಸಿಕೊಳ್ಳುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳು ಕೂಡ ಇಂತಹವರ ಕೈಗೆ ಸಿಲುಕಿ ನಲುಗುತ್ತಿವೆ ಎಂದಾದರೆ ನಾವು ಭವಿಷ್ಯಕ್ಕೆ ಎಂತಹ ತಲೆಮಾರಿನ ಯುವಶಕ್ತಿಯನ್ನು ಸೃಷ್ಟಿ ಮಾಡುತ್ತಿದ್ದೇವೆ? ದೇಶದ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಪ್ರಮುಖ ಹುದ್ದೆಗಳಿಗೆ ನೇಮಕ ಅಥವಾ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಈ ಸ್ಪರ್ಧಾತ್ಮಕ ಪರೀಕ್ಷೆಗಳು ನಿರ್ಧರಿಸುತ್ತವೆ. ಇಂತಹ ಪ್ರಮುಖ ಪರೀಕ್ಷೆ ಯಲ್ಲೇ ಅವ್ಯವಹಾರ ನಡೆಯುತ್ತಿದೆ ಎಂದಾದರೆ ದೇಶದ ಕತೆಯೇನು? ಈ ರೀತಿಯ ಮೋಸಗಳನ್ನು ಎಸಗಿ ವೈದ್ಯಕೀಯ ಕ್ಷೇತ್ರಕ್ಕೆ ಬರುವ ಡಾಕ್ಟರ್‌ಗಳು ಅಥವಾ ಶಿಕ್ಷಣ ಕ್ಷೇತ್ರಕ್ಕೆ ಬರುವ ಶಿಕ್ಷಕರು ಹೇಗೆ ಸಮರ್ಥರಾಗಿರಲು ಸಾಧ್ಯ? ಅವರು ರೋಗಿಗಳಿಗೆ ಎಂತಹ ಚಿಕಿತ್ಸೆ ನೀಡಬಲ್ಲರು? ಅವರು ತಮ್ಮ ವಿದ್ಯಾರ್ಥಿಗಳಿಗೆ ಏನು ಪಾಠ ಮಾಡಬಲ್ಲರು? ಅವರಿಂದ ಪಾಠ ಮಾಡಿಸಿಕೊಳ್ಳುವ ವಿದ್ಯಾರ್ಥಿಗಳ ಗತಿಯೇನಾಗಬೇಕು? ನಾನಿಲ್ಲಿ ಬರೀ ವೈದ್ಯಕೀಯ ಕ್ಷೇತ್ರದ ಬಗ್ಗೆ ಹೇಳುತ್ತಿದ್ದೇನೆ.
ಆದರೆ, ಎಂಜಿನಿಯರಿಂಗ್ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಇದೇ ರೀತಿಯ ಗುಣಮಟ್ಟದ ಸಮಸ್ಯೆಯಿದೆ. ಪ್ರಾಥಮಿಕ ಶಿಕ್ಷಣದಲ್ಲಿ ನಕಲಿ ವಿದ್ಯಾರ್ಥಿಗಳು, ನಕಲಿ ಶಿಕ್ಷಕರು ಹಾಗೂ ನಕಲಿ ಶಾಲಾ ಕಟ್ಟಡಗಳ ಮೂಲಕ ಸರ್ಕಾರದ ನೂರಾರು ಕೋಟಿ ರೂಪಾಯಿ ಅನುದಾನ ಕಳ್ಳರ ಪಾಲಾಗು ತ್ತಿರುವ ಅನೇಕ ಉದಾಹರಣೆಗಳು ಬೆಳಕಿಗೆ ಬರುತ್ತಿವೆ. ಉನ್ನತ ಶಿಕ್ಷಣ ವ್ಯವಸ್ಥೆಯಂತೂ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿದೆ. ನೆನಪಿಡಿ, ಶಿಕ್ಷಣದ ಗುಣಮಟ್ಟ ಕುಸಿದರೆ ದೇಶದ ಅಧಃಪತನ ಆರಂಭವಾಗುತ್ತದೆ. ನಿಜ ಹೇಳಬೇಕೆಂದರೆ, ದೇಶದಲ್ಲಿ ಇಂದು ನುರಿತ ನೌಕರರ ಕೊರತೆ ತುಂಬಾ ಇದೆ.
ಒಬ್ಬ ಉದ್ಯೋಗದಾತನಾಗಿ ನಾನಿದನ್ನು ಅಧಿಕಾರಯುತವಾಗಿ ಹೇಳಬಲ್ಲೆ. ಯಾವುದೇ ಕೌಶಲ್ಯಯುತ ಕೆಲಸಕ್ಕೆ ನುರಿತ ನೌಕರರನ್ನು ಹುಡುಕುವುದು ಇಂದು ತುಂಬಾ ಕಷ್ಟವಾಗುತ್ತಿದೆ. ನೌಕರಿ ಕೇಳಿಕೊಂಡು ಬರುವವರಲ್ಲಿ ಕೌಶಲ್ಯವೇ ಇರುವುದಿಲ್ಲ. ನುರಿತ ನೌಕರರು ಸಿಗದೆಯೇ ಟಿಸಿಎಸ್ ಕಂಪನಿ ಯೊಂದರಲ್ಲೇ ೮೦,೦೦೦ ಹುದ್ದೆಗಳು ಖಾಲಿ ಬಿದ್ದಿವೆ ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಬೇರೆ ಬೇರೆ ಕಂಪನಿಗಳಲ್ಲೂ ಇದೇ ಪರಿಸ್ಥಿತಿಯಿದೆ.
ಹಾಗಿದ್ದರೆ, ದೇಶದ ಶಿಕ್ಷಣ ಸಚಿವಾಲಯ ಏನು ಮಾಡುತ್ತಿದೆ? ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಾವೀಗ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದರ ಹೊಸ್ತಿಲಿನಲ್ಲಿದ್ದೇವೆ. ಅಂತಹದ್ದೊಂದು ಜಾಗದಲ್ಲಿ ನಿಲ್ಲಬೇಕು ಎಂದಾದರೆ ನಮ್ಮ ದೇಶಕ್ಕೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅತ್ಯುನ್ನತ ನೈಪುಣ್ಯವನ್ನು ಸಾಧಿಸಿದ ನುರಿತ ಹಾಗೂ ಪ್ರತಿಭಾವಂತ ನೌಕರರು ಬೇಕು! ಅಂತಹವ ರನ್ನು ಎಲ್ಲಿಂದ ತರೋಣ? ಭಾರತದಲ್ಲಿ ಜಗತ್ತಿನ ಶೇ.೧೭ರಷ್ಟು ಜನಸಂಖ್ಯೆಯಿದೆ. ಆದರೆ, ನಮ್ಮ ದೇಶದ ಎಷ್ಟು ಶಿಕ್ಷಣ ಸಂಸ್ಥೆಗಳು ಜಗತ್ತಿನ ಟಾಪ್ ೧೦೦ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿವೆ? ಬಹುಶಃ ಯಾವುದೂ ಇಲ್ಲ! ಈ ಕಾರಣಕ್ಕಾಗಿಯೇ ಉನ್ನತ ಶಿಕ್ಷಣಕ್ಕಾಗಿ ನಮ್ಮ ದೇಶದ ವಿದ್ಯಾರ್ಥಿಗಳು ಅಮೆರಿಕ, ಕೆನಡಾ, ಬ್ರಿಟನ್ ಮುಂತಾದ ಪಾಶ್ಚಾತ್ಯ ದೇಶಗಳಿಗೆ ಹೋಗುತ್ತಾರೆ.
ಭಾರತದಲ್ಲಿ ತಾಂತ್ರಿಕ ಶಿಕ್ಷಣ ತುಂಬಾ ದುಬಾರಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ರಷ್ಯಾ ಮತ್ತು ಇನ್ನಿತರ ಕೆಲ ಸಣ್ಣಪುಟ್ಟ ಸೋವಿಯತ್ ದೇಶಗಳಿಗೆ ಸೋವಿ ಶಿಕ್ಷಣವನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಚೀನಾಕ್ಕೂ ಹೋಗುತ್ತಿದ್ದಾರೆ! ವಿದ್ಯಾರ್ಥಿಗಳ ರೂಪದಲ್ಲಿ ನೂರಾರು ಕೋಟಿ ರುಪಾಯಿ ಭಾರತದಿಂದ ಹೊರಕ್ಕೆ ಹರಿದುಹೋಗುತ್ತಿದೆ. ಅದನ್ನು ತಡೆಯಲು ನಾವು ಏನಾದರೂ ಮಾಡುತ್ತಿದ್ದೇವಾ? ಬಹುಶಃ ಇಲ್ಲ. ನಾವು ನಮ್ಮ ದೇಶದ ಯುವಕರ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಮಾಫಿಯಾದವರನ್ನೂ, ದಂಧೆಕೋರರನ್ನೂ, ಹಗರಣ ಮಾಡುವವರನ್ನೂ ಬೆಳೆಸು ತ್ತಿದ್ದೇವೆ.
ನಾವು ನಮ್ಮ ಕೈಯಾರೆ ಶಿಕ್ಷಣ ಕ್ಷೇತ್ರವನ್ನು ಹಾಳುಗೆಡವುತ್ತಿದ್ದೇವೆ. ಹಿಂದೆ ಕಪಿಲ್ ಸಿಬಲ್ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ನಡೆದ ಒಂದು
ಘಟನೆ ನನಗೆ ನೆನಪಾಗುತ್ತಿದೆ. ಎಂಜಿನಿಯರಿಂಗ್ ಕಾಲೇಜಿನ ಸೀಟುಗಳನ್ನು ಹಣಕ್ಕಾಗಿ ಮಾರಿಕೊಳ್ಳುವ ದೊಡ್ಡ ದಂಧೆ ಬೆಳಕಿಗೆ ಬಂದಿತ್ತು. ಅವರು ಅದರ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಿ, ದಂಧೆಕೋರರನ್ನು ಪತ್ತೆಹಚ್ಚಿ ಮಟ್ಟಹಾಕಿದ್ದರು. ಈಗಲೂ ಅಂತಹ ಕಠಿಣ ಕ್ರಮಗಳ ಅಗತ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ರುವ ನಟವರಲಾಲ್‌ಗಳನ್ನು ಹುಡುಕಿ ತೆಗೆದು ಜೈಲಿಗೆ ಅಟ್ಟಬೇಕಿದೆ. ಇಲ್ಲದಿದ್ದರೆ ನಾವು ಕವಿ ನೀರಜ್‌ರ ಈ ಸಾಲುಗಳನ್ನು ಗುನುಗುತ್ತಾ ಇರಬೇಕಾಗುತ್ತದೆ: ‘ಲುಟ್ ಗಯೇ ಸಿಂಗಾರ್ ಸಭಿ ಬಾಗ್ ಕೆ ಬಬೂಲ್ ಸೆ, ಔರ್ ಹಮ್ ಖಡೇ ಖಡೇ ಬಹಾರ್ ದೇಖತೇ ರಹೇ, ಕರವಾ ಗುಜರ್ ಗಯಾ ಗುಬರ್ ದೇಖತೇ ರಹೇ!’
(ತೋಟದ ಮರದಿಂದ ಎಲ್ಲಾ ಸಿಂಗಾರಗಳನ್ನೂ ಕದ್ದೊಯ್ದರು, ನಾವು ವಸಂತನ ಸೌಂದರ್ಯ ನೋಡುತ್ತಾ ನಿಂತಿದ್ದೆವು, ಮೆರವಣಿಗೆ ಹೋಯಿತು, ನಾವು ಧೂಳು ನೋಡತೊಡಗಿದೆವು!)
ನಾನಿಲ್ಲಿ ಇನ್ನೂ ಒಂದು ಸಂಗತಿಯನ್ನು ಹೇಳಬೇಕು. ಜಗತ್ತಿನ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ನಾನು ಭೇಟಿ ನೀಡಿದ್ದೇನೆ. ಹಾಗೆ ಹೋದಲ್ಲೆಲ್ಲ ದಾನಿಗಳ ಪಟ್ಟಿಯಲ್ಲಿ ಭಾರತದ ಸಾಕಷ್ಟು ದೊಡ್ಡ ದೊಡ್ಡ ಉದ್ಯಮಿಗಳ ಹೆಸರು ಇರುವುದನ್ನು ನೋಡಿ ಅಚ್ಚರಿಪಟ್ಟಿದ್ದೇನೆ. ಏಕೆ ಈ ಉದ್ಯಮಿಗಳು ಭಾರತದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬಾರದು? ಏಕೆ ಇವರೆಲ್ಲ ವಿದೇಶಿ ಯುನಿವರ್ಸಿಟಿಗಳಿಗೆ ನೂರಾರು ಕೋಟಿ ರುಪಾಯಿ ದೇಣಿಗೆ ನೀಡುತ್ತಿದ್ದಾರೆ? ನಮ್ಮ ದೇಶದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಯುನಿವರ್ಸಿಟಿಗಳು ಇವರಿಗೆ ಕಾಣಿಸುವುದಿಲ್ಲವೇ? ದೇಶದ ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ತುಂಬಾ ಅಗತ್ಯವಿದೆ. ಅದನ್ನು ಇವರಿಗೆ ಅರ್ಥ ಮಾಡಿಸುವವರು ಬೇಕಾಗಿದ್ದಾರೆ.
(ಲೇಖಕರು : ರಾಜ್ಯಸಭಾ ಮಾಜಿ ಸದಸ್ಯರು, ಹಿರಿಯ
ಪತ್ರಿಕೋದ್ಯಮಿ)