ಶ್ವೇತಪತ್ರ
ಭಯ, ಕೋಪ, ಆಘಾತ, ಅಸಹ್ಯ, ದುಃಖ, ಅಪರಾಧಿ ಮನೋಭಾವ, ಪ್ರೀತಿ, ಖುಷಿ, ಕುತೂಹಲ-ಹೀಗೆ ಈ ಪಟ್ಟಿಯನ್ನು ಓದುತ್ತಾ ಹೋದ ಹಾಗೆ ನೀವು ಸುಲಭವಾಗಿ ಗುರುತಿಸಬಿಡಬಹುದು ಒಳ್ಳೆಯ ಸಕಾರಾತ್ಮಕ ಭಾವ ಗಳಾವುವು? ಋಣಾತ್ಮಕ ಭಾವಗಳಾವುವು ಅಂತ. ಮೇಲೆ ನಾನು ಉದಾಹರಿಸಿದ ಒಂಬತ್ತು ಅಂಶಗಳು ಮನುಷ್ಯನ ಮೂಲ ಭಾವನೆಗಳು, ಮಿಕ್ಕಂತೆ ನಮ್ಮಿಂದ ಹೊರಹೊಮ್ಮುವ ಭಾವ ಭಾವನೆಗಳು ಇವೇ ಮೂಲ ಭಾವನೆಗಳಿಂದ ಡಿರೈವ್ ಆಗಿರುವ ಸಂಯೋಜನೆಗಳೇ ಆಗಿರುತ್ತವೆ.
ನಮ್ಮ ಸಂವೇದನೆಗಳನ್ನು, ಭಾವನೆಗಳನ್ನು ನಾವು ಒಳ್ಳೆಯವು ಕೆಟ್ಟವು ಎಂದು ವಿಂಗಡಿ ಸುವುದು ಭಾವನೆಗಳ ಬಗ್ಗೆ ನಾವು ಕೇಳಿರುವ ಕತೆಗಳ ಮೂಲಕ.
ನಮ್ಮ ಆಲೋಚನೆ ಸದಾ ನಮಗೆ ಕತೆ ಹೇಳಲು ಬಯಸುತ್ತದೆ. ಹೀಗೆ ನಾವು ಕೇಳಿದ ಕತೆಗಳು ನಮ್ಮ ಮೇಲೆ ಪ್ರಭಾವ ಬೀರುತ್ತಾ ನಮ್ಮೊಳಗೆ ಇಳಿದುಬಿಡು ತ್ತವೆ. ಭಾವನೆಗಳ ಬಗ್ಗೆ ನಮ್ಮ ಆಲೋಚನೆಯ ಮೂಲಕ ನಾವು ಕೇಳಿಸಿಕೊಂಡ ಕೆಲವು ಕತೆಗಳನ್ನು (ವಿಚಾರಗಳನ್ನು) ನಿಮ್ಮೆದುರಿಗೆ ತೆರೆದಿಡುತ್ತೇನೆ. ಕೋಪ, ಅಪರಾಧಿಪ್ರಜ್ಞೆ, ಅವಮಾನ, ಭಯ, ದುಃಖ, ಆತಂಕ ಇವೆಲ್ಲ ಋಣಾತ್ಮಕ ಭಾವಗಳು ಹಾಗೂ ಈ ಋಣಾತ್ಮಕ ಭಾವಗಳೆಂದಿಗೂ ಕೆಟ್ಟವು, ಅಪಾಯಕಾರಿಯಾಗಿರು ವಂಥವು, ತರ್ಕವಿಲ್ಲದವು ಹಾಗೂ ದುರ್ಬಲತೆಯ ಸಂಕೇತಗಳು ಎಂಬುದೊಂದು ಕತೆ. ಭಾವನೆಗಳನ್ನು ಅನುಭವಿಸುವುದೆಂದರೆ ಮಾನಸಿಕವಾಗಿ ನಾವು ಅಸಮರ್ಪಕವಾಗಿದ್ದೇವೆ ಎಂಬುದು ಇನ್ನೊಂದು ಕತೆ.
ಇದೇ ಋಣಾತ್ಮಕ ಭಾವನೆಗಳು ನಮ್ಮ ಆರೋಗ್ಯವನ್ನು ಕಂಗೆಡಿಸುತ್ತವೆ. ನಮ್ಮ ಭಾವನೆಗಳನ್ನು ನಾವು ಯಾರಿಗೂ ತೋರ್ಪಡಿಸಬಾರದು. ಅವುಗಳನ್ನು ವ್ಯಕ್ತಪಡಿಸುವುದು ದೌರ್ಬಲ್ಯದ ಸಂಕೇತ. ಹೆಣ್ಣು ಮಕ್ಕಳೆಂದಿಗೂ ಕೋಪ ಮಾಡಿಕೊಳ್ಳಬಾರದು. ಗಂಡಸರು ಹೆದರಬಾರದು. ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು. ಋಣಾತ್ಮಕ ಭಾವನೆಗಳು ನಮ್ಮನ್ನು ಕಾಡಿವೆ ಎಂದರೆ ನಮ್ಮಲ್ಲೇನೋ ದೋಷವಿದೆ ಎಂದು ಅರ್ಥ. ಹೀಗೆ ನಮ್ಮ ಆಲೋಚನೆ ನಮಗೆ ಹೇಳಿಕೊಟ್ಟಿರುವ ಮೇಲಿನ ಕೆಲವಾರು ಅಥವಾ ಎಲ್ಲಾ ಸಂಗತಿಗಳನ್ನು ಹೆಚ್ಚು ಕಡಿಮೆ ನಾವು ನಂಬುತ್ತೇವೆ. ಹೀಗೆ ನಂಬುವುದಿದೆಯಲ್ಲ ಅದು ನಾವು ಬೆಳೆದು ಬಂದ ಪರಿಸರದ ಪ್ರಭಾವ ದಿಂದಲೂ ಉಂಟಾಗಿರಬಹುದು.
ಬಾಲ್ಯ ಹಾಗೂ ಭಾವನೆಗಳ ಪ್ರಭಾವ
ಈಗ ನಾನು ನಿಮ್ಮ ಎದುರಿಗೆ ಕೆಲವು ಪ್ರಶ್ನೆಗಳನ್ನು ತೆರೆದಿಡುತ್ತೇನೆ, ಬಾಲ್ಯದ ನಿಮ್ಮ ಭಾವನೆಗಳ ಕುರಿತಾಗಿ. ಈ ಪ್ರಶ್ನೆಗಳೆಡೆಗೆ ನೀವೇ ಹುಡುಕುವ ಉತ್ತರಗಳು ಕೆಲವೊಂದು ಭಾವನೆಗಳ, ಸಂವೇದನೆಗಳ ಜತೆ ನೀವೇಕೆ ಹೆಣಗುತ್ತಿದ್ದೀರಿ ಎಂಬುದರ ನಿಮ್ಮದೇ ಒಳನೋಟ ವನ್ನು ತೆರೆದಿಡುತ್ತವೆ. ಸಾಧ್ಯವಾದರೆ ಈ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಲು ಪ್ರಯತ್ನಿಸಿ ಇಲ್ಲವೇ ಅಟ್‌ಲೀಸ್ಟ್ ಅವುಗಳ ಬಗ್ಗೆ ಆಲೋಚಿಸಿ.
೧. ನೀವು ಬೆಳೆಯುವ ವಯಸ್ಸಿನಲ್ಲಿ ಭಾವನೆಗಳ ಬಗ್ಗೆ ನಿಮಗೆ ಸಿಗುತ್ತಿದ್ದ ಸಂದೇಶಗಳೇನು?
೨. ಯಾವ ಭಾವನೆಗಳು ಹಿತಕರ ಹಾಗೂ ಅಹಿತಕರ ಎಂದು ನಿಮಗೆ ಹೇಳಿಕೊಡಲಾಗಿತ್ತು?
೩. ಭಾವನೆಗಳನ್ನ ನಿಭಾಯಿಸುವ ಉತ್ತಮವಾದ ಮಾರ್ಗ ಯಾವುದೆಂದು ನಿಮಗೆ ಹೇಳಲಾಗಿತ್ತು?
೪. ನಿಮ್ಮ ಕುಟುಂಬದವರು ಸುಲಭವಾಗಿ ವ್ಯಕ್ತಪಡಿ ಸುತ್ತಿದ್ದ ಭಾವನೆಗಳಾವುವು?
೫. ಯಾವ ಭಾವನೆಗಳನ್ನು ನಿಮ್ಮ ಕುಟುಂಬದವರು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರು?
೬. ಯಾವ ಯಾವ ಭಾವನೆಗಳ ಜತೆ ನಿಮ್ಮ ಕುಟುಂಬದವರು ಆರಾಮದಾಯಕವಾಗಿರು ತ್ತಿದ್ದರು?
೭. ನಿಮ್ಮ ಮನೆಯ ಹಿರಿಯರು ಅವರ ಋಣಾತ್ಮಕ ಭಾವನೆಗಳನ್ನು ಹೇಗೆ ನಿಭಾಯಿಸುತ್ತಿದ್ದರು?
೮. ಭಾವನೆಗಳನ್ನು ನಿಯಂತ್ರಿಸಲು ನಿಮ್ಮ ಹಿರಿಯರು ಬಳಸುತ್ತಿದ್ದ ತಂತ್ರಗಾರಿಕೆ ಯಾವುದು?
೯. ನಿಮ್ಮ ಮನೆಯ ಹಿರಿಯರು ಋಣಾತ್ಮಕ ಭಾವನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು?
೧೦. ಇವೆಲ್ಲವನ್ನೂ ನೋಡುತ್ತಾ ಬೆಳೆದ ನೀವು ಭಾವನೆಗಳ ಬಗ್ಗೆ ಕಲಿತಿದ್ದಾದರೂ ಏನು?
೧೧. ಇವತ್ತಿಗೂ ಬಾಲ್ಯದಲ್ಲಿ ನಿಮ್ಮ ಹಿರಿಯರಿಂದ ಭಾವನೆಗಳ ಬಗ್ಗೆ ನೀವು ಕಲಿತ ಯಾವುದಾದರೂ ವಿಷಯಗಳನ್ನು ಹೊತ್ತು ತಿರುಗುತ್ತಿರುವಿರಾ?
ಮನಸ್ಸು ನಮ್ಮ ಭಾವನೆಗಳನ್ನು ಹೇಗೆ ಅಸ್ವಸ್ಥಗೊಳಿಸುತ್ತದೆ?
ಇದು ಸರಿಯೇ? ತಪ್ಪೇ? ಹೀಗೆ ನಮ್ಮ ಮನಸ್ಸು ಪ್ರತಿ ಯೊಂದು ವಿಷಯವನ್ನು ಜಡ್ಜ್ ಮಾಡುತ್ತಾ ನಿರ್ಣಯಿ ಸುತ್ತ ಕೂತಾಗ ಇದು ಭಾವನೆಗಳ ಅಸ್ವಸ್ಥತೆಗೆ ಕಾರಣವಾಗಿ ಬಿಡುತ್ತದೆ. ಆಗ ಮನಸ್ಸಿನಲ್ಲಿ ಅಹಿತಕರ ಸಂವೇದನೆಗಳು ಮೂಡಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಪ್ರಶ್ನೆ ಗಳು ನಮ್ಮನ್ನು ನಾವೇ ಅನುಮಾನಿಸುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ.
೧. ನನಗೇಕೆ ಹೀಗೆನಿಸುತ್ತಿದೆ?
ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿದ್ದಲ್ಲಿ ಆ ಕ್ಷಣವೇ ನಿಮ್ಮೆಲ್ಲಾ ಸಮಸ್ಯೆಗಳು ನಿಮ್ಮ ಕಣ್ಣೆದುರಿಗೆ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಸಹಜವಾಗಿ ನಿಮ್ಮ ಮನಸ್ಸು ಅಹಿತಕರ ಸಂವೇದನೆಗಳತ್ತ ಚುಚ್ಚುತ್ತ ನಿಮ್ಮನ್ನು ಇನ್ನಷ್ಟು ನೋಯಿಸುತ್ತದೆ. ಈ ನೋವು ನಿಮ್ಮೊಳಗೆ ‘ನನ್ನ ಬದುಕಲ್ಲಿ ಬರೀ ಸಮಸ್ಯೆಗಳೇ…’ ಎಂಬ ಭ್ರಮೆಯನ್ನು ಹುಟ್ಟುಹಾಕುತ್ತದೆ. ಹೀಗೆ ನಮಗೆ ನಾವೇ ಗೊತ್ತಿಲ್ಲದೆ ವಾಸ್ತವವಾಗಿ ನೆಗೆಟಿವ್ ಆಲೋಚನೆಯಲ್ಲಿ ಕಳೆದು ಹೋಗುತ್ತೇವೆ.
೨. ನಾನೇನು ಮಾಡಿದ್ದೇನೆ ಎಂಬ ಕಾರಣಕ್ಕಾಗಿ ಇದಕ್ಕೆ ನಾನು ಅರ್ಹ?
ಈ ಪ್ರಶ್ನೆ ನಮ್ಮನ್ನು ನಾವು ಹಳಿದುಕೊಳ್ಳುವುದಕ್ಕೆ ಸಂಬಂಧ ಪಟ್ಟಿದೆ. ಈ ಪ್ರಶ್ನೆಯನ್ನು ಎದುರಿಗಿಟ್ಟು ಕೊಂಡು ಹಿಂದೆ ನಮ್ಮ ಜೀವನದಲ್ಲಿ ನಾವು ಮಾಡಿದ ತಪ್ಪುಗಳನ್ನು ಕಣ್ಣೆದು ರಿಗೆ ತರಿಸಿಕೊಳ್ಳುತ್ತಾ ಇದಕ್ಕಾ ಗಿಯೇ ನಮಗೆ ಈ ಗತಿ ಬಂದಿದೆ ಎಂದು ಹಳಿದು ಕೊಳ್ಳುತ್ತಿರುತ್ತೇವೆ. ಇದರ ಫಲಿತವಾಗಿ ‘ನಾನು ಅಪ್ರಯೋಜಕ, ಯಾವುದಕ್ಕೂ ಉಪಯೋ ಗವಿಲ್ಲ’ ಎಂದು ಕೊರಗುತ್ತಾ ಕೂರುತ್ತೇವೆ. ಈ ಕೊರಗುವಿಕೆ ವಾಸ್ತವ ದಲ್ಲಿ ನಮಗೆ ಯಾವುದೇ ಸಹಾಯ ಮಾಡುವುದಿಲ್ಲ.
೩. ನಾನೇಕೆ ಹೀಗಿದ್ದೇನೆ?
ಈ ಪ್ರಶ್ನೆ ಇಡೀ ನಮ್ಮ ಬದುಕಿನ ಇತಿಹಾಸವನ್ನೇ ಕೆದಕು ತ್ತದೆ. ನಾವು ಹೀಗಿರುವುದಕ್ಕೆ ಕಾರಣವೇನು ಎಂಬುದಕ್ಕೆ ಕಾರಣಗಳನ್ನು ನಾವು ಹುಡುಕುತ್ತಾ ಹೊರಡು ತ್ತೇವೆ. ಹಾಗಾಗಿ ಈ ಭಾವವು ನಮ್ಮಲ್ಲಿ ಕೋಪವನ್ನು ಅಸಮಾಧಾನ ವನ್ನು ಹತಾಶೆಯನ್ನು ಹುಟ್ಟು ಹಾಕುತ್ತಾ ಕೊನೆಗೆ ನಮ್ಮ ತಂದೆ ತಾಯಂದಿರನ್ನು ಬೈದು ಕೊಳ್ಳುವ ಮೂಲಕ ನಮ್ಮ ಭಾವನೆ ಗಳು ಮುಗಿಯುತ್ತವೆ.
೪. ನನಗೇನಾಗಿದೆ?
ಈ ಮತ್ತೊಂದು ದೊಡ್ಡ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಹೀಗೆ ಕಾಡಿದ ಪ್ರಶ್ನೆಗೆ ನಾವು ಉತ್ತರವಾಗಿ ಗಂಟೆ ಗಟ್ಟಲೆ ದಿನಗಟ್ಟಲೆ ನಮ್ಮ ತಪ್ಪುಗಳನ್ನು ದೋಷಗಳನ್ನು ಹುಳುಕುಗಳನ್ನು ಕೆದುಕುತ್ತಾ ಹೋಗುತ್ತೇವೆ.
೫. ಇದನ್ನು ನಾನು ನಿಭಾಯಿಸಲಾರೆನೇ?
ನಾನಿದನ್ನು ಸಹಿಸಲಾರೆ, ನಾನಿದನ್ನು ಎದುರಿಸಲಾರೆ, ಇನ್ನು ಇದನ್ನು ನಾನು ತಾಳಲಾರೆ, ಯಾಕೋ ನನ್ನ ನರಗಳೆಲ್ಲ ಸೋತು ಹೋಗುತ್ತಿವೆ ಎನಿಸುತ್ತಿದೆ ಎಂಬ ಭಾವ ನಿಮನ್ನು ಕಾಡಬಹುದು. ಇಲ್ಲಿ ಮೂಲಭೂತವಾಗಿ ನಮ್ಮ ಮನಸ್ಸು ನಮ್ಮ ಆಲೋಚನೆಯೊಳಗೆ ಕತೆಯೊಂದನ್ನು ತುಂಬುತ್ತದೆ. ಆ ಕತೆ ಏನು ಗೊತ್ತೇ, ನೀನು ಈ ಸಂದರ್ಭ ದಲ್ಲಿ ತುಂಬಾ ದುರ್ಬಲವಾಗಿದ್ದೀಯ ಎಂಬುದು.
೬. ನನಗೆ ಹೀಗೆ ಅನಿಸಬಾರದಿತ್ತು?
ಇದು ಕ್ಲಾಸಿಕ್. ಇಲ್ಲಿ ನಿಮ್ಮ ಮನಸ್ಸು ವಾಸ್ತವದ ಜತೆ ವಾದ ಮಾಡುವುದಕ್ಕೆ ಹತ್ತಿಬಿಡುತ್ತದೆ. ಮನಸ್ಸು ವಾಸ್ತವವನ್ನು ಸುಳ್ಳೆಂದು ದಬಾಯಿಸುತ್ತದೆ. ನಮಗೆ ಬೇಕಾದ ವಾಸ್ತವ ವನ್ನು ಕೊಡು ಎಂದು ಮನಸ್ಸಿನ ಜತೆ ಸಂವಾದಕ್ಕೆ ಇಳಿದು ಬಿಡುತ್ತದೆ. ಹೀಗೆ ನಮ್ಮೊಳಗೆ ಯೋಚನೆಯನ್ನು ಸೃಷ್ಟಿಸಿ ಕಥೆಯೊಳಗೆ = ನಮ್ಮ ಆಲೋಚನೆಗಳು ಕಳೆದುಹೋಗಿ ಎಲ್ಲಾ ಭಾವನೆಗಳು ಕೆಟ್ಟವು, ಅಪಾಯವೆಂದು ನಮ್ಮನ್ನು ನಂಬಿ ಸುತ್ತಾ ನಮ್ಮ ಬದುಕನ್ನೇ ಹಾಳುಗೆಡವಿಬಿಡುತ್ತವೆ. ಇದನ್ನು ನಮ್ಮ ಮಿದುಳು ಒಂದು ಅಪಾಯವೆಂದು ಭಾವಿ ಸುತ್ತಾ ಇಡೀ ಮನಸ್ಸಿಗೆ ಅಹಿತಕರ ಭಾವನೆಯನ್ನೇ ತುಂಬಿಬಿಡುತ್ತದೆ ಸದ್ದಿಲ್ಲದೆ.
ಭಾವನೆಗಳು ನಮ್ಮನ್ನು ನೋಯಿಸಲು ಸಾಧ್ಯವಿಲ್ಲ. ಆದರೆ ಸಂಶೋಧನೆಗಳ ಪ್ರಕಾರ ದೀರ್ಘಕಾಲದ ಕೋಪ ಹಾಗೂ ಖಿನ್ನತೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಇಲ್ಲಿ ನಾವೆಲ್ಲ ಗಮನಿಸ ಬೇಕಾದ ಮುಖ್ಯ ಸಂಗತಿ ಎಂದರೆ ನೋವಿನ ಭಾವನೆ ಗಳ ಜತೆ ನಾವು ಹೆಚ್ಚು ಹೆಣಗಾಡಿದಷ್ಟೂ ಅವು ದೀರ್ಘಕಾಲಿಕವಾಗಿ ನಮ್ಮೊಳಗೆ ಉಳಿದುಬಿಡುತ್ತವೆ. ಹಾಗಾಗಿ ನಮ್ಮ ಭಾವನೆಗಳನ್ನು ಅವು ಇರುವಂತೆ ಒಪ್ಪಿಕೊಂಡು ಪ್ರತಿಕ್ರಿ
ಯಿಸಿದರೆ ಅವು ಯಾವುದೇ ಕಾರಣಕ್ಕೂ ದೀರ್ಘವಾಗು ವುದಿಲ್ಲ ಮತ್ತು ನಮ್ಮನ್ನು ನೋಯಿಸುವುದಿಲ್ಲ. ಒಪ್ಪಿಕೊಳ್ಳುವಿಕೆ ನಮ್ಮನ್ನು ಕೆಟ್ಟ ಆಲೋಚನೆಗಳಿಂದ ಮುಕ್ತಿ ಗೊಳಿಸುತ್ತದೆ. ಹಾಗಾಗಿ ಜಸ್ಟ್ ಒಪ್ಪಿಕೊಳ್ಳಿ-ಅಪ್ಪಿಕೊಳ್ಳಿ.