ಅಭಿವ್ಯಕ್ತಿ
ಮಾಲತಿ ಪಟ್ಟಣಶೆಟ್ಟಿ
ಬರಡಾಕಳು ಕಸಾಯಿಖಾನೆಗೆ ಎಂಬಂತೆ ಜನ್ಮ ಕೊಟ್ಟ ತಾಯಿ ಅನಾಥ ಅತಂತ್ರ, ಕ್ರೂರ ಜಗತ್ತಿಗೆ! ಇದು ಕಾಲಧರ್ಮವೋ,
ಹೊಂದಾಣಿಕೆಯ ಅಭಾವವೊ, ಸ್ವಾರ್ಥವೋ!
ಹಿರಿಯರಿಲ್ಲದ ಮನೆ, ಗುರುವಿಲ್ಲದ ಮಠ ಹಾಳು ಎಂಬ ನೀತಿ ಸಂಹಿತೆಯೀಗ ಬುಡ ಮೇಲಾಗಿದಂತಿದೆ. ಛಿದ್ರವಾದ ಕುಟುಂಬದ ಮೂಲಸ್ತಂಭವೆನ್ನಬಹುದಾದ ತಾಯಿ, ತಂದೆ ಮುಪ್ಪಿನಲ್ಲಿ ಬೇಡವಾಗಬೇಕಾದ ಕಾರಣಗಳಿರಬಹುದು; ಆದರೆ ಅವು ಮಾನವೀಯವೋ? ಹಿಂದೆ ಕೂಡು ಕುಟುಂಬದಲ್ಲಿ ಒಬ್ಬ ಅತ್ತೆ, ನಾಲ್ಕು ಜನ ಸೊಸೆಯಂದಿರು ಹೊಂದಿಕೊಂಡು ಇರುತ್ತಿದ್ದರು!
ವೃದ್ಧ ಅತ್ತೆ ಮಾವಂದಿರಿಗಾಗಿ ಸ್ವೀಕೃತ ಸಹನೆಗಳು ಇರುವುದಕ್ಕೆ ಕಾರಣ ಅವರು ನೀಡಿದಂಥ ಸೇವೆ, ತೋರಿದಂಥ ತ್ಯಾಗ! ಇಂದಿನ ಮಾತಾ – ಪಿತರು ಮಕ್ಕಳನ್ನು ಪಾಲಿಸಿ ಪೋಷಿಸಿ ಬೆಳೆಸಿದವರಲ್ಲವೇ? ಮಕ್ಕಳಿಗಾಗಿ ಅವರಲ್ಲಿ ಎಂದಿಗೂ ತೀರದ ಮಮತೆಯು ಯಾವ ಕಾಲಕ್ಕೂ ಇದ್ದೇ ಇರುತ್ತದೆ. ಇದರಲ್ಲಿ ಪರಿವರ್ತನೆ ಆಗಲಾರದು.
ಮುಪ್ಪಿನಲ್ಲಿ ಸಡಿಲಾದ ಮಾನಸಿಕತೆ ಇರಬಹುದು. ಆದರೆ ಅವರನ್ನು ಗೌರವಿಸದಿರುವುದು, ಶಿಕ್ಷಿಸುವುದು, ಮನೆಯಿಂದ ಹೊರಗೆ ಹಾಕುವುದು ತಕ್ಕುದಾದ ನಡೆಯಲ್ಲ. ಮೊಮ್ಮಕ್ಕಳಿಗೆ ಅವರು ನೀಡುವ ಕಕ್ಕುಲತೆ, ಜೀವನದ ಪಾಠಗಳನ್ನು ಯಾವುದಾದರೂ
ವಿಶ್ವವಿದ್ಯಾಲಯವು ಕೊಡಬಲ್ಲುದೆ? ನಮ್ಮ ದೇಹದಲ್ಲೇ ಅಶಕ್ತ ಅಂಗಾಂಗಗಳಿವೆ, ಕೆಲವು ಕೆಲಸ ಮಾಡವುದೇ ಇಲ್ಲ, ಅವನ್ನು ಹೊರಗೆ ಕಿತ್ತು ಹಾಕಲು ಸಾಧ್ಯವೇ? ಹಿರಿಯರ ನೀತಿಗಳನ್ನು ಅವರಿಗೇ ಬಿಟ್ಟು, ತಿಳಿಹೇಳಿ ತಮ್ಮ ನಡವಳಿಕೆ ಬದಲಾದ ಕಾಲ ಧರ್ಮದಲ್ಲಿ ಹೇಗೆ ಅನಿವಾರ್ಯ ಎಂಬುದನ್ನು ತಿಳಿಸಬಹುದಲ್ಲ?
ಮುಪ್ಪಿನ ತಾಯಿ, ತಂದೆ ಕುಟುಂಬವೆಂಬ ಚೆಂದದ ದೇಹದ ಅಂಗಾಂಗಳು. ಅವು ಹೇಗಿವೆಯೋ ಯಾವ ಸ್ಥಿತಿಗಳಲ್ಲಿ ಇವೆಯೋ ನಾವು ಇರಗೊಡಬೇಕು. ಹಾಗೆಯೇ ಅವರಿದ್ದ ಕಾಲವನ್ನು, ನಡೆನುಡಿಗಳನ್ನು ಇರಿಸೋಣ, ಗೌರವಿಸೋಣ. ನಾನೊಮ್ಮೆ ಪ್ರತ್ಯಕ್ಷ ಕಂಡು ಒಬ್ಬಿಬ್ಬರನ್ನು ಕೇಳಿದೆ ಏಕೆ ವೃದ್ಧ ತಾಯಿ ತಂದೆ ಬೇಡ? ಉತ್ತರದಲ್ಲಿ ಬರುವ ಮಾತು? ನಾವು ಏನೂ ಮಾಡಿದರೂ ತಪ್ಪುಗಳನ್ನು ತೆಗೆಯುತ್ತಾರೆ.
ನಾವು ದೊಡ್ಡವರಾಗಿ ಈಗ ಬೈಸಿಕೊಳ್ಳಲಾರೆವು. ನಮ್ಮ ಮಾತಿಗೆ ಅವರಿಗೆ ಬೆಲೆ ಇಲ್ಲ. ಈ ಪಟ್ಟಿ ಹೀಗೆಯೇ ಬೆಳೆಯುತ್ತ ಹೋಯಿತು. ಬಳಿಕ ಮುಪ್ಪಿನಲ್ಲಿ ತಾಯಿ ತಂದೆಯರನ್ನೂ ಕೇಳಿದೆ. ಏನಾರೆ ಬುದ್ಧಿ ಹೇಳಿದರು ಗುದ್ದಾಡುತಾರ. ಮಾತಿನಲ್ಲಿ
ಕಿಮ್ಮತ್ತಿಲ್ಲದಂತೆ ನಮ್ಮನ್ನು ನೋಡುತಾರೆ. ಅಪಶಬ್ದ ಬಳಸುತಾರೆ. ಇಂಥ ಕಾರಣಗಳನ್ನು ಇವರು ಹೇಳುತ್ತಾರೆ. ಕುಟುಂಬದಲ್ಲಿ ಅಡ್ಡ ಹಾದಿಗೆ ಬಿದ್ದ ಮಗನಿರುವುದಿಲ್ಲವೇ? ತಪ್ಪನ್ನು ಅನುಸರಿಸುತ್ತಿದ್ದ ಮಗಳಿಲ್ಲವೇ? ಇವರನ್ನು ಅವ್ವ, ಅಪ್ಪ ‘ಹೊರಗೆ ನಡಿ’
ಅನ್ನುತ್ತಾರೆಯೇ? ಇಲ್ಲ, ಸರಿಪಡಿಸಲು ಪ್ರಯತ್ನಿಸುತ್ತಾರಲ್ಲವೇ? ಎಷ್ಟು ಸಲ ಮಕ್ಕಳು ತಪ್ಪು ಮಾಡಿದರೂ ತಡೆದುಕೊಳ್ಳುತ್ತಾರೆ.
ಇದು ಸರಿ ಎಂದಾದರೆ ಅಪ್ಪ, ಅವ್ವನ ಮುಪ್ಪಿನಲ್ಲಿಯ ತಪ್ಪುಗಳನ್ನು ಏಕೆ ಸಹಿಸಬಾರದು? ಅವರಿಗೆ ತಿಳಿಸಿ ಹೇಳಬಾರದು?
ಪ್ರಪಂಚದ ಮೂಲಭೂತ ಘಟಕವೇ ಕುಟುಂಬ. ಪಾಶ್ಚಾತ್ಯ ದೇಶಗಳಲ್ಲಿ ಕುಟುಂಬ ವ್ಯವಸ್ಥೆಯು ಬಹಳ ಮಟ್ಟಿಗೆ ಹಾಳಾಗಿದೆ. ಸ್ಫೋಟಗೊಂಡ ಯಾವುದೇ ಕುಟುಂಬದ ಮಕ್ಕಳು ವಿಕೃತ ಮನಸ್ಸಿಗರಾಗುತ್ತಾರೆ, ಸಮಾಜ ಕಂಟಕರಾಗುತ್ತಾರೆ.
ಕಾಡಿನಲ್ಲಿ ಹುಲಿ, ಚಿರತೆ, ಹಾವು, ಮೊಸಳೆಗಳಿರುತ್ತವೆ. ಅಲ್ಲಿಯೇ ಜಿಂಕೆಗಳಿವೆ, ಮೊಲಗಳಿವೆ, ಆನೆಗಳಿವೆ, ಕಾಡು ಕೋಣಗಳಿವೆ,
ಅವರವರ ಗುಣಧರ್ಮಗಳೊಂದಿಗೆ ಅವೆಲ್ಲ ಒಂದೇ ಕಾಡಿನಲಿದ್ದು ಬಾಳುತ್ತಿಲ್ಲವೇ? ಪ್ರಾಣಿ ಜಗತ್ತಿನಲ್ಲಿ ಇರುವಂತೆ ಮನುಷ್ಯ ಜಗತ್ತಿನಲ್ಲಿ ಹೊಂದಿಕೊಂಡು ಒಂದೆಡೆ ಇರಲು ಏಕಾಗುತ್ತಿಲ್ಲ? ಅವು ತಮ್ಮ ತಮ್ಮ ದೂರನ್ನು ಕಾಯ್ದುಕೊಂಡು ತಮ್ಮ ತಮ್ಮ
ಧರ್ಮಗಳನ್ನು ಪಾಲಿಸುತ್ತವೆ. ಹೀಗೆ ಈ ಉದಾಹರಣೆಯು ಅನುಕರಣೀಯವಾದ ವ್ಯವಸ್ಥೆ.
ಹೊಂದಾಣಿಕೆ ಮಾಡಿಕೊಳ್ಳದೆ, ಸಂಬಂಧಗಳನ್ನು ಗೌರವಿಸದೆ, ಮುಪ್ಪಿನ ಅಸಹಾಯಕತೆಗಳನ್ನು ಅರ್ಥ ಮಾಡಿಕೊಳ್ಳದೆ ವೃದ್ಧ, ಅನಕ್ಷರಸ್ಥ, ಅಸಹಾಯಕ ತಾಯಂದಿರನ್ನು ಹೊರಗಟ್ಟುವ ಹಲವಾರು ಉದಾಹರಣೆಗಳು ನನ್ನ ಕಿವಿಗೆ ಬಿದ್ದಿವೆ, ಕಣ್ಣು ಕಂಡಿವೆ,
ಓದಿನಿಂದಲೂ ತಿಳಿದುಕೊಂಡಿದ್ದೇನೆ. ಒಬ್ಬ ಮಗ ತೀರ್ಥಯಾತ್ರೆಗೆ ಹೋಗೋಣ ಎಂದು ತಾಯಿಯನ್ನು ಕರೆದುಕೊಂಡು ರಾತ್ರಿ ಯಾವುದೋ ಸ್ಟೇಷನ್ನಿನಲ್ಲಿ ಹೇಳದೆ ಇಳಿದು ಹೋಗಿಬಿಡುತ್ತಾನೆ.
ಇನ್ನೊಬ್ಬ ತಾಯಿಯನ್ನು ಅಪರಿಚಿತ ಊರಿನ ಬಸ್ ನಿಲ್ದಾಣದಲ್ಲಿ ಈಗ ಬರುವೆ ಎಂದು ಹೇಳಿ ಮಾಯವಾಗುತ್ತಾನೆ!
ಒಬ್ಬಳೇ ಮಗಳಿದ್ದ ತಾಯಿಯನ್ನು ಮಗಳು ನೀನು ನಿನ್ನ ಅಣ್ಣ ತಮ್ಮಂದಿರ ಹತ್ತಿರ ಇರು, ತವರಿಗೆ ಹೋಗು ಎಂದು ಅಟ್ಟುತ್ತಾಳೆ. ಇನ್ನು ಒಬ್ಬ ಸೊಸೆ ಅರ್ಧಾಂಗ ವಾಯುನಿಂದ ಬಳಲುವ ಅತ್ತೆಯನ್ನು ಗಂಡ ಕೆಲಸಕ್ಕೆ ಹೋದಮೇಲೆ ಎಳೆದಾಡಿ ಹೊಡೆಯುತ್ತಾಳೆ!
ಇವೆಲ್ಲ ಕಟ್ಟು ಕತೆಗಳಲ್ಲ, ನಡೆದ ಘಟನೆಗಳು! ಹಾಗೆ ರೈಲಿನಲ್ಲಿ ಬಿಟ್ಟು ಹೋದ ತಾಯಿ, ಬಸ್ ನಿಲ್ದಾಣದಲ್ಲಿ ಬಿಟ್ಟ
ಅವ್ವಂದಿರು ಭಿಕ್ಷೆ ಬೇಡುತ್ತಿದ್ದಾರೆ, ಬೀದಿ ನಾಯಿಯಂತೆ ಜೀವಿಸಿದ್ದಾರೆ. ದೈನ್ಯದಿಂದ ಕೈಯೊಡ್ಡುತ್ತ ಬದುಕುತ್ತಿದ್ದಾರೆ. ಹಾಗೆ ಮಕ್ಕಳ ಮೋಸಕ್ಕೆ ನೊಂದುಕೊಂಡು ಬೀದಿಯ ಶವ ಆಗಿದ್ದಾರೆ! ಇದು ಬಡ ಕುಟುಂಬಗಳಲ್ಲಿಯ ಅಶಿಕ್ಷಿತ, ಆರ್ಥಿಕ ಸ್ವಾವಲಂಬನೆ ಇಲ್ಲದ ಮುಗ್ಧ ತಾಯಂದಿರ ಸ್ಥಿತಿಯಾದರೆ ಮಧ್ಯಮ ವರ್ಗದ ಕುಟುಂಬಗಳಲ್ಲಿ ನರಕಗಳಂತಿರುವ ವೃದ್ಧಾಶ್ರಮಕ್ಕೆ ಅವ್ವನನ್ನು ಅಟ್ಟಿ ಕೈ ತೊಳೆದುಕೊಂಡು.. ತಿಂಗಳು ತಿಂಗಳು ದುಡ್ಡು ತುಂಬಿ ಸತ್ತಾಗ ಹಣ ಕಳಿಸಿ ನೀವೇ ಅಂತ್ಯಕ್ರಿಯೆ ಮಾಡಿರಿ ಎಂದು ಹೇಳಿದ ನೂರಾರು ಮಕ್ಕಳಿದ್ದಾರೆ.
ಇನ್ನು ಶ್ರೀಮಂತ ಕುಟುಂಬಗಳಲ್ಲಿ ತಾಯಿಯನ್ನು ಬೇರೆ ಮನೆಯಲ್ಲಿಟ್ಟು ಸೇವಕರನ್ನಿಟ್ಟು ತಮ್ಮ ಜವಾಬ್ದಾರಿ ತಪ್ಪಿಸಿಕೊಳ್ಳುತ್ತಾರೆ. ತಾಯಿಯನ್ನು ಕಾಣಲು ಮಗ ಅಪರೂಪಕ್ಕೆ ಬರಬಹುದು, ಆದರೆ ಸೊಸೆಯೇಕೆ ಬರುತ್ತಾಳೆ? ಅವಳಿಗಾಗಿಯೇ ಅತ್ತೆ ಬೇರೆ ಇರಬೇಕಾಗಿ ಬಂದದ್ದು! ಮೊಮ್ಮಕ್ಕಳು ಹಾತೊರೆದರೂ ಎಂದೊ ಒಮ್ಮೊಮ್ಮೆ ಅಜ್ಜಿ ಮೊಮ್ಮಕ್ಕಳ ಮಿಲನ! ಬಡವರಿರಲಿ, ಮಧ್ಯಮವರ್ಗದವರಿರಲಿ, ಯೇ! ಅವಳ ಅಂತಃಕರಣಕ್ಕೆ ವರ್ಗಭೇದಗಳಿಲ್ಲ.
ಆಕೆಗೆ ಮಕ್ಕಳ ಸಾಮಿಪ್ಯ ಬೇಕು. ಅವರ ಮುಖ ಕಾಣಬೇಕು. ಅವರು ಹೊಟ್ಟೆ ತುಂಬ ಉಣ್ಣಬೇಕು, ಅವರ ಆರೋಗ್ಯ ಯಾವ
ಕಾರಣಕ್ಕೂ ಕೆಡಬಾರದೆಂಬ ತಾಯಿಯ ಸಹಜ ಧರ್ಮವನ್ನು ಇಂದಿನ ಪೀಳಿಗೆಯ ಜನ ಏಕೆ ತಿಳಿದುಕೊಳ್ಳುವುದಿಲ್ಲ? ಅವಳು ಇದ್ದಂತಿರಲಿ ಬಿಡಿರಿ ಅಥವಾ ತಿಳಿಹೇಳಲಿ, ಆದರೆ ಅವಳ ನಿಲುವನ್ನು ಒಪ್ಪಿಕೊಳ್ಳಿರಿ ಅವಳನ್ನು ಹಳಿಯುವುದಲ್ಲ, ಅಪಮಾನಿಸುವುದಲ್ಲ, ಬೈದಾಡಿ ಹೊರಗಟ್ಟುವ, ಮೋಸದಿಂದ ದೂರೀಕರಿಸುವಂಥ ರೀತಿಗಳು ನ್ಯಾಯಸಮ್ಮತವಲ್ಲ, ಮಾನವೀಯವೂ ಅಲ್ಲ!
ವೃದ್ಧ ತಾಯಂದಿರು ಇಂದಿನ ತರುಣ ಜಗತ್ತಿಗೆ ಬೇಡವಾಗಿದೆ! ಬೇಡವಾಗಿದ್ದಾರೆ, ಇರಲಿ ಆದರೆ ಅವರಿಗೊಂದು ಗೌರವದ ಬದುಕನ್ನು ಕಟ್ಟಿ ಕೊಡಬೇಕಾದದ್ದು ಮಕ್ಕಳ ಧರ್ಮ ಅಲ್ಲವೇ? ಬಡವರಿರಲಿ, ಶ್ರೀಮಂತರಿರಲಿ, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಸಹನೀಯ ಬದುಕನ್ನು ಕೊಡಬೇಕಾದುದು ಮಾನವೀಯ ಧರ್ಮ. ಬಡಕುಟುಂಬಗಳು ತಾಯಿಯನ್ನು ಕಡಿಮೆ ಖರ್ಚಿನ
ವೃದ್ಧಾಶ್ರಮಗಳಲ್ಲಿರಿಸಲಿ.. ಆದರೆ ಅವರನ್ನು ಬೀದಿಗೆ ತಳ್ಳಬಾರದು, ಭಿಕ್ಷೆ ಬೇಡಬಾರದು.. ಅಥವಾ ಅವರು ಹುಟ್ಟಿ ಬೆಳೆದ ಹಳ್ಳಿಗಳಲ್ಲಿಟ್ಟು ಧನಸಹಾಯ ಮಾಡಬಹುದು.
ಹಳ್ಳಿಯಲ್ಲಿದ್ದ ತಾಯಂದಿರು ಅನಾಥ ರಾಗಬಹುದು, ಬೀದಿ ನಾಯಿಯಾಗಿ ಸಾಯುವುದಿಲ್ಲ. ಮಧ್ಯಮವರ್ಗದವರು ಹೊಂದಾಣಿಕೆ ಇಲ್ಲದ ಮನೆಯಲ್ಲಿ ತಾಯಿಗೆ ತಿಳಿಹೇಳಿ ವೃದ್ಧಾಶ್ರಮಗಳಲ್ಲಿಟ್ಟು ಖರ್ಚನ್ನು ನೋಡಿಕೊಂಡು ಸಾಧ್ಯವಾದಾಗ ತಾಯಿಯನ್ನು ಮುಖತಃ ಭೇಟಿ ಆಗುತ್ತಿರಬಹುದು. ಇನ್ನು ಶ್ರೀಮಂತರು ಒಂದು ಸ್ವತಂತ್ರ ಮನೆಯನ್ನು ಮಾಡಿ ಆಳುಕಾಳು ಇಟ್ಟು ನೋಡಿಕೊಳ್ಳಬಹುದು. ನಮ್ಮ ತಾಯಂದಿರು ಯಾವುದಾದರೊಂದು ಛತ್ತಿನ ಕೆಳಗಿರಲಿ, ಅವರಿಗೆ ಎರಡು ಹೊತ್ತಿನ ಊಟ ಸಿಗಲಿ..
ನಿಮ್ಮ ಪ್ರೀತಿ ಕಾಳಜಿ ಸಿಗದಿದ್ದರೂ ಈ ತಾಯಂದಿರು ಸಹಿಸುತ್ತಾರೆ.
ಬತ್ತಿದ ಕೆರೆಯ ದಂಡಿಗೆ ಹೃದಯದ ಬಿಂದಿಗೆ ಇಟ್ಟುಕೊಂಡು ಕೂತು ಪರಿತಪಿಸುವುದು ಇರಲಿ! ಆದರೆ ಯಾವುದೇ ಕಾರಣಕ್ಕೆ ಎಲ್ಲೊ ಬಿಟ್ಟು, ಹೇಗೊ ಅಟ್ಟಿ ಕೈತೊಳೆದುಕೊಳ್ಳುವಂಥ ನಡವಳಿಕೆಗಳು ಮಾತ್ರ ಯಾವ ಕಾಲಕ್ಕೂ ಖಂಡನೀಯ!! ಮುಪ್ಪಿನ ತಾಯಂದಿರನ್ನು ದೂರೀಕರಿಸುವುದು ಬಹುಶಃ ಇಂದಿನ ಯುಗಧರ್ಮವೆನ್ನೋಣ. ಆದರೂ ಗೌರವದ ಬಾಳನ್ನು ತಮ್ಮ ತಾಯಂದಿರಿಗೆ ಮಕ್ಕಳು ಕೊಟ್ಟರೆ ತಮ್ಮ ತಮ್ಮ ಕುಟುಂಬಕ್ಕೆ ಕುಟುಂಬದ ಗೌರವಕ್ಕೆ ಕುಂದು ಬರಲಾರದು.
ಸಮಾಜವೂ, ಆಳುವ ಸರಕಾರಗಳೂ ಮಕ್ಕಳಿಗೆ ಬೇಡವಾದ ತಾಯಂದಿರ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾದುದು ಅವುಗಳ ಕರ್ತವ್ಯ. ವೃದ್ಧ ಮಾತೆಯರ ಸಮಸ್ಯೆಯನ್ನು ಈ ಕಾಲದ ಅತ್ಯಂತ ಗಂಭೀರ ಸಮಸ್ಯೆ ಎಂದೇ ಪರಿಗಣಿಸಬೇಕು. ಯಾವ ಸಮಾಜದ ಜನರಿಂದ ದುಡ್ಡನ್ನು ಪಡೆದು ಕೆಲವರು ಶ್ರೀಮಂತರಾಗುತ್ತಾರೊ ಅವರು ತಮ್ಮ ಗಳಿಕೆಯ ಒಂದು ಭಾಗವನ್ನಾದರೂ ಇಂಥ ಅಸಹಾಯಕ ತಾಯಂದಿರಿಗಾಗಿ ಮಾತಾ ಮಂದಿರದಂಥ ವಾಸಸ್ಥಾನಗಳನ್ನು ಕಟ್ಟಿ, ಅವರ ಊಟ, ಉಪಚಾರ ನೋಡಿಕೊಂಡರೆ ಬಹಳ ಒಳ್ಳೆಯದಾದೀತು ಮತ್ತು ತಮ್ಮ ಪಾಲಿನ ಕರ್ತವ್ಯ ನಿಭಾಯಿಸಿದಂತೆ ಆದೀತು.
ಮುಪ್ಪಿನ ತಾಯಂದಿರ ಸುರಕ್ಷತತೆಗಾಗಿ ಸರಕಾರವು ಒಂದು ಕಾಯಿದೆಯನ್ನು ಮಾಡಬೇಕದ ಅಗತ್ಯತೆ ಇದೆ. ಮಕ್ಕಳು ಮಾಡುತ್ತಿರುವ ನೌಕರಿಯ ಸಂಸ್ಥೆಗಳಲ್ಲಿ ಮೇಲಾಧಿಕಾರಿಗಳು ಕಡ್ಡಾಯವಾಗಿ ಅವರ ಸಂಬಳದ ಒಂದು ಭಾಗವನ್ನು ಠೇವಣಿ
ಯಾಗಿ ಕಾಯ್ದಿರಿಸಬೇಕು. ಈ ಕಾಯಿದೆಯನ್ನು ಭಾರತಾದ್ಯಂತ ಎಲ್ಲ ನೌಕರರಿಗೆ ಕಡ್ಡಾಯಗೊಳಿಸಬೇಕು.
ಈ ಉಪಕ್ರಮದಿಂದ ಯಾವುದೇ ಪರಿಸ್ಥಿತಿಯಲ್ಲಿ ವೃದ್ಧ ತಾಯಂದಿರಿಗೆ ಈ ಹಣವು ಆಧಾರ ನೀಡಿತು. ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ತಾಲೂಕಿಗೊಂದರಂತೆ ಮಾತಾ ಮಂದಿರದ ಯೋಜನೆಯನ್ನು ಅನುಷ್ಠಾನದಲ್ಲಿ
ತಂದು, ಆಸಕ್ತ ಸೇವಕರಿಗೆ ಸಂಬಳ ನೀಡಿ ಯಶಸ್ವಿಗೊಳಿಸುವುದು ಅತ್ಯಂತ ಅನಿವಾರ್ಯದ ಹಾಗೂ ಅಗತ್ಯದ ಕೆಲಸವಾದೀತು. ಸಮಾಜದಲ್ಲಿ ಅನೇಕ ನಿವೃತ್ತರೂ ಸಂಭಾವನೆ ಕೇಳದೆ ಕೆಲಸಕ್ಕೆ ಮುಂದಾಗಬಹುದು.
ಓಣಿಗೊಂದರಂತಿದ್ದ ನಮ್ಮ ಮಹಿಳಾ ಮಂಡಳಗಳು ಇಂಥ ವೃದ್ಧಾಶ್ರಮಗಳನ್ನು ಸ್ವಇಚ್ಛೆಯಿಂದ ನೋಡಿಕೊಂಡರೆ ಇದಕ್ಕಿಂತ ಉತ್ತಮ ಸೇವೆಯು ಇನ್ನೊಂದಿಲ್ಲ. ಪರದೇಶಗಳಲ್ಲಿ ಅದರಲ್ಲೂ ಅಮೆರಿಕೆಯಲ್ಲಿ ವಾಸವಾಗಿದ್ದ 60 ವರ್ಷ ಮೇಲ್ಪಟ್ಟವರಿಗೆ ಉತ್ತಮ ಮಾಶಾಸನ ನೀಡಿ ಉತ್ತಮ ಸ್ಥಿತಿಯಲ್ಲಿರುವ ವೃದ್ಧಾಶ್ರಮಗಳನ್ನು ನಿರ್ಮಿಸಿದ್ದನ್ನು ನಾವು ಶ್ಲಾಘಿಸಬೇಕು ಮತ್ತು ನಮ್ಮ ಸರಕಾರಗಳು ಈ ನೀತಿಯನ್ನು ಅನುಸರಿಸಬೇಕು.
ನಮ್ಮ ವೃದ್ಧ ತಾಯಂದಿರು ಗೌರವದಿಂದ ಬದುಕಿ ಬಾಳಲಿ, ಗೌರವದಿಂದ ಬಾಳ ಯಾತ್ರೆ ಮುಗಿಸಲಿ ಎಂದು ಕಾಲದ ಈ ಘಟ್ಟದಲ್ಲಿ ನಾವೆಲ್ಲ ಯೋಚಿಸುವುದು, ಸ್ಪಂದಿಸುವುದು ಅನಿವಾರ್ಯ ವೆಂದು ನಾನು ತಿಳಿಯುತ್ತೇನೆ. ಗಂಡು ಮಕ್ಕಳಿರಲಿ, ಹೆಣ್ಣು ಮಕ್ಕಳಿರಲಿ, ಸೊಸೆಯಂದಿರಿರಲಿ, ಸಂಬಂಧಿ ಗಳಿರಲಿ, ಸಮಾಜರಲಿ ಮತ್ತು ಸರಕಾರವೇ ಇರಲಿ, ತಮ್ಮ ತಮ್ಮ ಶಕ್ತ್ಯಾನುಸಾರವಾಗಿ ವೃದ್ಧರಿಗಾಗಿ ಸೇವೆ ಸಲ್ಲಿಸಲು ಸಿದ್ಧರಾಗಬೇಕು.
ಸುವ್ಯವಸ್ಥಿತ ಮಾತಾ ಮಂದಿರಗಳನ್ನು ನಿರ್ಮಿಸಿ ಉತ್ತಮ ಸೇವೆ ಸಲ್ಲಿಸುವ ಯೋಜನೆ ಮಾಡಬೇಕು, ಅನಷ್ಠಾನದಲ್ಲಿ ತರಬೇಕು. ಈಗಾಗಲೇ ಅಸ್ತಿತ್ವದಲ್ಲಿ ಇರುವ ವೃದ್ಧಾಶ್ರಮಗಳಲ್ಲೂ ಅನೇಕವು ನರಕದಂತಿವೆ. ಇವುಗಳ ಮೇಲ್ವಿಚಾರಣೆಯ ಅಗತ್ಯ ಕ್ರಮ ತೆಗೆದುಕೊಂಡು ವೃದ್ಧರಿಗೆ ಸಮಂಜಸ ವಾದ ವಾತಾವರಣ ಇರುವಂತೆ ನೋಡಿಕೊಂಡಂತಾದೀತು. ವೃದ್ಧಾಪ್ಯವು ಬದುಕಿನ ಅವಿಭಾಜ್ಯ ಅಂಗ. ಎಲ್ಲರಿಗೂ ವೃದ್ಧಾಪ್ಯವೆಂಬುವದಿದ್ದೇ ಇದೆ ಎಂದು ಅರಿತು ಜನ್ಮದಿನಗಳನ್ನು ಎಷ್ಟು ಸ್ವಾಗತಿಸುತ್ತಾರೋ, ಎಷ್ಟು ಗೌರವಿಸುತ್ತಾರೋ ಅಷ್ಟೇ ಕಳಕಳಿಯಿಂದ ವೃದ್ಧರ ಬಾಳಲ್ಲಿ ಶಾಂತಿ, ಸಮಾಧಾನ, ಸಂತೃಪ್ತಿ ತರುವಂತೆ ನೋಡಿಕೊಳ್ಳುವ ಮೂಲಕ ಗೌರವಿಸ ಬೇಕಾಗಿದೆ.
ವೃದ್ಧ ತಾಯಂದಿರಿಗಾಗಿ ನೊಂದ ನನ್ನ ಮನಸ್ಸಿಗೆ ಸಮಾಧಾನ ತಂದುಕೊಳ್ಳಲು ಕೆಲವು ಆಲೋಚನೆಗಳನ್ನು ಅಭಿವ್ಯಕ್ತಿಸಲು ಒಂದು ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.