Thursday, 19th September 2024

ಅಂದ ಹಾಗೆ, ಸಹನೆಯಿಲ್ಲದ ಅಂದಿನ ನೆಹರೂ ಅಷ್ಟೇ ವಯಸ್ಸು ಇಂದು ಸೋನಿಯಾಗೆ

ಪರೋಕ್ಷ ಅಧಿಕಾರದ ಲಾಭಾಕರ್ಷಣೆಗಳನ್ನು ಸವಿಯುವುದನ್ನು ಮೈಗೂಡಿಸಿಕೊಂಡಿರುವ ಸೋನಿಯಾಗೆ ಅರ್ನಾಬ್ ‌ರನ್ನು ಜೈಲಿಗೆ ತಳ್ಳಲು ಅಧಿಕಾರ ಬೇಡವೇ ಬೇಡ. ಬೊಂಬೆಯ ಸೂತ್ರವೇ ಕೈಯಲ್ಲಿರಲು ನಾಟ್ಯವಾಡುವ ಬೊಂಬೆ  ತಾನೇಕಾಗಬೇಕು? ಹೆಸರಾರದ್ದೋ? (ಕಳ್ಳ) ಬಸಿರಾರದ್ದೋ?

ಪಿ.ಎಂ.ವಿಜಯೇಂದ್ರ ರಾವ್

ಪತ್ರಿಕೋದ್ಯಮದ ಮೊದಲ ಒಂದೆರಡು ಪಾಠಗಳಲ್ಲೇ ಹೆಡ್‌ಲೈನ್ ಚೀರಬೇಕೆಂದು (a headline should scream)  ಹೇಳಿಕೊಡ ಲಾಗುತ್ತದೆ. ಅದನ್ನು ಅಕ್ಷರಶಃ ಆಚರಣೆಗೆ ತರುವವರು ಟಿವಿ ಪತ್ರಕರ್ತರಾಗುತ್ತಾರೆ. ಹಾಗಾಗಿ, ಚೀರುವಿಕೆ ಪತ್ರಿಕೋದ್ಯಮದ ಒಂದು ಅಂಗವೇ ಆಗಿಬಿಟ್ಟಿದೆ.

ಅರ್ನಾಬ್ ಗೋಸ್ವಾಮಿ ಅವರು ಬೊಬ್ಬಿರುವ ಟಿವಿ ಪತ್ರಿಕೋದ್ಯಮದಲ್ಲಿ ಮೊದಲಿಗರಲ್ಲ. ಅವರಿಗಿಂತ ಮುಂಚೆ ನಮ್ಮ ಕನ್ನಡ ದಲ್ಲೂ ಪತ್ರಿಕೆಗಳು ಚೀರಲು ಆರಂಭಿಸಿದ್ದವು. ಕ್ರಮೇಣ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಛಾಪು ಮುಖ್ಯವಾಹಿನಿ  ಪತ್ರಿಕೆಗಳಲ್ಲೂ ಕಾಣತೊಡಗಿತು. ಇರಲಿ. ಮಾತಿನಲ್ಲೇ ಎದುರಾಳಿಗೆ ಕುಣಿಕೆ ಹಾಕಿ ನೇಣಿಗೇರಿಸಬಹುದು. ತರ್ಕದಲ್ಲೇ ವಾದವನ್ನು ಗೆಲ್ಲಬಹುದು, ಗೆಲ್ಲಬೇಕು. ಚೀರಾಟದ ಷೋಗೆ ಆಸ್ಪದವೇ ಇಲ್ಲ. ಅದಲ್ಲದೇ, ಚರ್ಚೆಯ ಉದ್ದೇಶ ಆಂಕರ್ ಗೆಲ್ಲುವ ಉದ್ದೇಶದಿಂದ ಏರ್ಪಡಿಸುವು ದಲ್ಲ.

ಗೆಲ್ಲುವುದೇ ಉದ್ದೇಶವಾಗಿದ್ದರೂ, ಗೆಲ್ಲಬೇಕಾದ್ದು ವ್ಯಕ್ತಿಯಲ್ಲ, ಚರ್ಚೆಯ ವಿಷಯ. ಅರ್ನಾಬ್ ಇದಕ್ಕೆ ಅಪವಾದ. ಹಾಗಂತ,
ಅವರ ಚರ್ಚೆಗಳಲ್ಲಿ ಹುರುಳಿಲ್ಲ ಅಂತಲ್ಲ. ಚರ್ಚೆಗೆ ಆಯ್ದುಕೊಳ್ಳುವ ವಿಷಯಗಳ ಕುರಿತು ಅಧ್ಯಯನ ನಡೆಸಿರುತ್ತಾರೆ.
ಅವರ ನೈತಿಕ ಸ್ಥೈರ್ಯ ಅವರ ವ್ಯಕ್ತಿತ್ವದ ಪ್ರಮುಖ ಅಂಶ. ದೇಶದ ಬಗ್ಗೆ ಅವರ ಕಾಳಜಿ ನಿರ್ವಿವಾದ. ಪತ್ರಕರ್ತರಲ್ಲದ, ಆದರೆ ಅರ್ನಾಬ್‌ನನ್ನು ಹೋಲುವ ಚರಿತ್ರಾರ್ಹ ವ್ಯಕ್ತಿ ಧರಂಪಾಲ್. ಅರ್ನಾಬ್ ಇಂದು ಸೋನಿಯಾರನ್ನು ಎದುರು ಹಾಕಿಕೊಂಡಂತೆ ಅಂದು ಧರಂಪಾಲ್ ಸೋನಿಯಾರ ಪತಿಯ ತಾತನಾದ ಜವಾಹಾರ್ ಲಾಲ್ ನೆಹರೂವಿಗೆ ಅಟಕಾಯಿಸಿಕೊಂಡಿದ್ದರು.

ಭಾರತವನ್ನು ಚೀನಾ ಬಗ್ಗುಬಡಿದು ಕದನ ವಿರಾಮಕ್ಕೆ ಮುಂದಾಗಿತ್ತು. ಇಂದಿಗೆ 58 ವರ್ಷಗಳಾಗಿವೆ. ಮಧ್ಯ ವಯಸ್ಕರಾದ ಅರ್ನಾಬ್‌ರಂತೆ ಧರಂಪಾಲ್‌ಗೆ ಅಂದು 40 ವಯಸ್ಸು. ಸ್ವಾತಂತ್ರ್ಯ ಹೋರಾಟದ ಅನುಭವವಿದ್ದು ಮಹಾತ್ಮಾ ಗಾಂಧಿಯಿಂದ ಪ್ರಭಾವಿತರಾಗಿದ್ದವರು. ಗೌರಿ ಶಂಕರ ಶಿಖರವನ್ನು ಕುಬ್ಜವಾಗಿಸುವಂತಹ ಸೋಲನ್ನು ನೆಹರು ಭಾರತಕ್ಕೆ ದಯಪಾಲಿಸಿದ್ದರು.
ದೇಶ ಕುಗ್ಗಿತ್ತು.

ಎಲ್ಲ ರಾಷ್ಟ್ರೀಯವಾದಿಗಳಂತೆ ಧರಂಪಾಲ್ ಕೆರಳಿದ್ದರು. ತಾವು ಸಿದ್ಧಪಡಿಸಿದ ಪತ್ರಕ್ಕೆ ಸಮಾನ ಮನಸ್ಕ ಸ್ನೇಹಿತರಾದ ರೂಪ್ ನಾರಾಯಣ್ ಮತ್ತು ನರೇಂದ್ರ ದಾಸ್ ಅವರ ಸಹಿ ಹಾಕಿಸಿ ಪತ್ರವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದರು. (ನವೆಂಬರ್ 22, 1962). ಕಾಂಗ್ರೆಸ್ ಪಕ್ಷದ ಎಲ್ಲ ಸಂಸದರಿಗೆ, ವಿಧಾನಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರಿಗೆ ಉದ್ದೇಶಿಸಿದ ಆ ಪತ್ರದಲ್ಲಿ ನೆಹರೂರಿಗೆ ಮತ್ತೆ ಮತ್ತೆ ತಪರಾಕಿ ಕೊಟ್ಟಿದ್ದರು.

ದೇಶವನ್ನು ಮುನ್ನಡೆಸುವ ನಿಮ್ಮ ಚರ್ವಿತ ಚರ್ವಣ ಭಾಷಣವೆಲ್ಲ ಕೇವಲ ಬೊಗಳೆ, ಹದಿನೈದು ವರ್ಷಗಳಿಂದ ಅದೇ ಮಾತನ್ನು ಕೇಳುತ್ತಿದ್ದೇವೆ, ಸಂದರ್ಭ ಮಾತ್ರ ಬೇರೆ ಎಂದು ಧರಂಪಾಲ್ ಗುಟುರು ಹಾಕುತ್ತಾರೆ. ಪುತ್ರಿಯನ್ನು ಮುಂದೆ ತರಲು ಉತ್ಸುಕರಾಗಿ ರುವ ನೆಹರೂ ಅವರ ಸ್ವಜನ ಪಕ್ಷಪಾತವನ್ನು ಖಂಡಿಸುತ್ತಾ ದೇವರ ದಯೆ ಇದ್ದರೆ, (ನೆಹರೂ ನೇತೃತ್ವದ) ರಾಷ್ಟ್ರೀಯ ರಕ್ಷಣಾ ಪರಿಷತ್ತು ಮತ್ತು (ಇಂದಿರಾ ಹಿಡಿತದಲ್ಲಿನ) ರಾಷ್ಟ್ರೀಯ ನಾಗರಿಕ ಸಮಿತಿಗಳೆರಡೂ ನಿಮ್ಮ ಕಚೇರಿಯಡಿಯ ಸಹಭಾಗಿತ್ವ ದೊಂದಿಗೆ ದೇಶವನ್ನು ಉಳಿಸಬಹುದು. (ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳಬಹುದು). ಆದರೆ, ಈವರೆವಿಗಿನ ನಿಮ್ಮ ಸಾಧನೆಯ ಪರಿಚಯವಿರುವವರಲ್ಲಿ ಅಂತಹ ಆಶಾ ಭಾವನೆ ಇಲ್ಲ ಎಂದು ಛೇಡಿಸುತ್ತಾರೆ ಧರಂಪಾಲ್.

ಚೀನೀಯರನ್ನು ಹಿಮ್ಮೆಟ್ಟಿಸುವ ಧೈರ್ಯ ನೆಹರೂಗಿಲ್ಲ ಎಂದು ಕೆಂಡ ಕಾರುವ ಧರಂಪಾಲ್, ಅಂತಹ ವಿಶ್ವಾಸ ಸ್ವಯಂ ನೆಹರೂರಿಗೇ ಇಲ್ಲ ಎಂದು ಸ್ಪಷ್ಟವಾಗಿ ಬರೆಯುತ್ತಾರೆ. ದಾಳಿಕೋರರನ್ನು ಮೊದಲು ಬಿಟ್ಟುಕೊಂಡು ಅವರನ್ನು ಒದ್ದೋಡಿಸಲು ವರ್ಷಾನುಗಟ್ಟಲೇ ಹೆಣಗಾಡುವುದು ಈ ಈ ದೇಶದ ಹಣೆ ಬರಹ ಎಂದು ಮಾರ್ಮಿಕವಾಗಿ ನುಡಿಯುತ್ತಾ, ಈ ಕ್ಷಣ ದೇಶದ ಜನರ ಮುಂದೆ ನಿಂತು ನೆಹರೂ ಖಾಸಮ್ ಕೇಳಲಿ, ವಯೋವೃದ್ಧ (73 ರ) ನೆಹರೂರಿಗೆ ಭಾರತೀಯರು ಕ್ಷಮಾದಾನ ನೀಡದಿರಲಾರರು ಎಂದು ಆಗ್ರಹಿಸುತ್ತಾರೆ.

ಅಂದಿನ ಅಧ್ಯಕ್ಷರಾದ ಸಂಜೀವ ರೆಡ್ಡಿ (ನಿರೀಕ್ಷೆಯಂತೆ)ಧರಂಪಾಲ್ ಮತ್ತು ಪತ್ರಕ್ಕೆ ಸಹಿ ಹಾಕಿದ ಅವರಿಬ್ಬರ ಸ್ನೇಹಿತರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ತಿಹಾರ್ ಜೈಲಿಗೆ ಕಳಿಸಿ ನೆಹರೂ ಅವರನ್ನು ಸಂಪ್ರೀತಿಗೊಳಿಸುತ್ತಾರೆ. (ನೆಹರೂ ಮನೆತನಕ್ಕೆ
ರೆಡ್ಡಿಗಾರರ ನಿಯತ್ತಿನ ಬೇರು ಆಳವಾದದ್ದೇ!) ಜಯಪ್ರಕಾಶ್ ನಾರಾಯಣ್ ಮತ್ತು ಆಚಾರ್ಯ ಕೃಪಲಾನಿ ಈ ದುಷ್ಕೃತ್ಯವನ್ನು ಉಗ್ರವಾಗಿ ವಿರೋಧಿಸುತ್ತಾರೆ. ದೇಶಕ್ಕೆ ದುಃಖ, ದುಮ್ಮಾನ, ಅವಮಾನಗಳನ್ನು ತಂದುಕೊಟ್ಟ ಅಧಿಕಾರಸ್ಥರು ದೇಶಭಕ್ತಿಯನ್ನು ಮೈಗೂಡಿಸಿಕೊಂಡು ನಂತರ ಅದರ ಪಾಠವನ್ನು ಇನ್ನಿತರರಿಗೆ ಕಲಿಸಲಿ ಎಂದು ಕೃಪಲಾನಿ ಗುಡುಗುತ್ತಾರೆ.

ಸುಮಾರು ಮೂರು ತಿಂಗಳ ನಂತರ, ಜೆಪಿ ಅವರ ಸತತ ಪರಿಶ್ರಮದಿಂದ ಮತ್ತು ಗೃಹ ಸಚಿವರಾದ ಲಾಲ್ ಬಹಾದ್ದೂರ್
ಶಾಸ್ತ್ರಿ ಅವರ ಮಧ್ಯಸ್ಥಿಕೆಯಿಂದ ಆ ಮೂವರು ದಿಟ್ಟದೇಶಾಭಿಮಾನಿಗಳ ಬಿಡುಗಡೆ ಆಗುತ್ತದೆ. ಸರ್ವಾಧಿಕಾರ ಪ್ರವೃತ್ತಿ ಮತ್ತು ಸ್ವಜನ ಪಕ್ಷಪಾತ ಕಾಂಗ್ರೆಸ್ ಪಕ್ಷಕ್ಕೆ, ವಿಶೇಷವಾಗಿ ನೆಹರೂ ಮನೆತನಕ್ಕೆ ಅನುವಂಶಿಕವಾಗಿದೆ. ಅಷ್ಟೇ ಏಕೆ ಆ ಮನೆಯ ಸೊಸೆಯಲ್ಲೂ ಅದು ರಕ್ತಗತವಾಗಿದೆ ಎಂಬುದಕ್ಕೆ ಸೋನಿಯಾ ಇಂದು ಮತ್ತೊಂದು ಪುರಾವೆ ಒದಗಿಸಿದ್ದಾರೆ. ಅಪಾರ
ಜ್ಞಾನವಿರುವ ಅರ್ನಾಬ್ ಇತಿಹಾಸದ ಈ ಘಟನೆಯ ಅರಿವಿಲ್ಲದೇ ಸೋನಿಯಾರನ್ನು ಎದುರು ಹಾಕಿಕೊಂಡಿರುವುದಿಲ್ಲ. ಆ ಕಾರಣಕ್ಕೇ ಆತನ ದಿಟ್ಟತೆಯನ್ನು ಮೆಚ್ಚಬೇಕು. ಸ್ವತಂತ್ರ್ಯ ಬಂದ ನಂತರವೂ ಅದರ ಸಂರಕ್ಷಣೆಯಲ್ಲಿ ನಿರತರಾಗಿ ಗದ್ದುಗೆಯಲ್ಲಿ ಕೂಳಿತ ಪ್ರಧಾನಿಯನ್ನೇ ಎದುರು ಹಾಕಿಕೊಂಡಂಥ ಪತ್ರಕರ್ತರಲ್ಲದ ಸಾಹಸಿಗಳ ಜತೆ ಅರ್ನಾಬ್ ಅವರನ್ನು ಸಮೀಕರಿಸಲು ಅವರ ತಂದೆಯ ಸೈನಿಕ ವೃತ್ತಿ ನನ್ನನ್ನು ಪ್ರೇರೇಪಿಸಿದೆ.

ಇಲ್ಲಿ ತಾಳೆಯಾಗುವುದು ಧರಂಪಾಲ್ ಮತ್ತು ಅರ್ನಾಬ್ ಅವರ ವ್ಯಕ್ತಿತ್ವಕ್ಕಿಂತ ನೆಹರೂ ಮತ್ತವರ ಮಗಳ ಸೊಸೆಯಾದ  ಸೋನಿಯಾ ಮೈನೋ ಅವರ ಧೋರಣೆಗಳು. ಅಂದ ಹಾಗೆ ಅಂದು ನೆಹರೂವಿನ ವಯಸ್ಸಿಗೂ, ಇಂದಿನ ಆಕೆಯ ವಯಸ್ಸೂ ಒಂದೇ. ಪರೋಕ್ಷ ಅಧಿಕಾರದ ಲಾಭಾಕರ್ಷಣೆಗಳನ್ನು ಸವಿಯುವುದನ್ನು ಮೈಗೂಡಿಸಿಕೊಂಡಿರುವ ಸೋನಿಯಾಗೆ ಅರ್ನಾಬ್‌ರನ್ನು ಜೈಲಿಗೆ ತಳ್ಳಲು ಅಧಿಕಾರ ಬೇಡವೇ ಬೇಡ. ಬೊಂಬೆಯ ಸೂತ್ರವೇ ಕೈಯಲ್ಲಿರಲು ನಾಟ್ಯವಾಡುವ ಬೊಂಬೆ ತಾನೇಕಾಗಬೇಕು? ಹೆಸರಾರದ್ದೋ? (ಕಳ್ಳ) ಬಸಿರಾರದ್ದೋ? ಅಂದ ಹಾಗೆ, ಅಂದಿಗೂ, ಇಂದಿಗೂ ಒಂದು ಮುಖ್ಯ ವ್ಯತ್ಯಾಸವಿದೆ.

ಪ್ರಧಾನಿ ನೆಹರೂ ವಿರುದ್ಧ ಸೆಡ್ಡು ಹೊಡೆದವರನ್ನು ಸೆರೆಮನೆಗೆ ದೂಡಿದ್ದಲ್ಲದೇ, ಮಾವೋ ಚೀನಾದ ಜತೆ ಮೈತ್ರಿ ಇರಿಸಿ ಕೊಂ
ಡಿದ್ದ ಮುಂಚೂಣಿ ಕಮ್ಯುನಿಷ್ಟರನ್ನೂ ಜೈಲಿಗೆ ಹಾಕಲಾಗಿತ್ತು. ಕೆಂಪು ಬಾವುಟದ ಇಂದಿನ ಸೋನಿಯಾ ಸ್ನೇಹಿತರು ಬಚಾವ್. ಬಹುಶಃ ಚೀನಾ ದೇಶದ ಅವರ ಕುಟುಂಬದ ಪ್ರಣಯ ಅದಕ್ಕೆ ಕಾರಣವೋ? ಕೊನೆಯದಾಗಿ, ಅರ್ನಾಬ್ ಜೈಲುವಾಸ ಕೊನೆಗೊಳ್ಳಲಿ. ಅವರು ಮತ್ತೆ ಎದುರಿಸಬೇಕಾಗಿ ಬಂದಿರುವ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಲಿ. ಪೊಲೀಸರು ಶಿವಸೈನಿಕ ರಂತೆ ವರ್ತಿಸುವುದು ನಿಲ್ಲಲಿ. ಟಿಆರ್‌ಪಿ ಕೇಸ್‌ಗಳ ಮುಕ್ತ ತನಿಖೆಯಾಗಲಿ. ಪೊಲೀಸರು ನಡೆಸಿದ ದುರಾಕ್ರಮಣದ ನಂತರ ಅರ್ನಾಬ್ ಅವರ ಫ್ಲ್ಯಾಟ್ ಸ್ಯಾನಿಟೈಸ್ ಆಗುವುದರ ಜತೆಗೆ ನಮ್ಮ ಒಟ್ಟಾರೆ ವ್ಯವಸ್ಥೆಯೂ ಸಂಪೂರ್ಣವಾಗಿ ಸ್ಯಾನಿಟೈಸ್ ಆಗಲಿ. ಸಾವನ್ನೂ, ಸೆರೆಯನ್ನೂ ಸಂಭ್ರಮಿಸದ ಪ್ರವೃತ್ತಿ ಎಲ್ಲರಲ್ಲೂ ಮೂಡಲಿ. ಕೂಗಾಟದ ಚರ್ಚೆ(!)ಗಳು ಇಲ್ಲವಾಗಲಿ.

ಜೈಲಿನ ಹೊರಗಿರುವ ಪತ್ರಕರ್ತರೂ, ಅಲ್ಲಿಗೆ ಹೋಗದಂತಹ ಕೃತ್ಯಗಳಲ್ಲಿ ತೊಡಗಲೆಂದು ಆಶಿಸುತ್ತಾ ನನ್ನ ಈ ಮಾತುಗಳನ್ನು
ಮುಗಿಸುತ್ತೇನೆ.