ಪ್ರಸ್ತುತ
ಪ್ರೊ.ಆರ್.ಜಿ.ಹೆಗಡೆ
ಕಳವಳದ ವಿಷಯವೆಂದರೆ ಧರ್ಮಗಳು ಇತಿಹಾಸದಲ್ಲಿ ಹಿಂದೆ ಹೋಗುವ ಸೂಚನೆ ನೀಡುವ ‘ಚಳವಳಿಗಳು’ ಆರಂಭ ವಾಗಿರುವುದು. ಒಂದು ಧರ್ಮಹಿಂದೆ ಚಲಿಸಿ ತನ್ನ ‘ಸನಾತನ’ ವ್ಯಕ್ತಿತ್ವವನ್ನು ಪಡೆಯಲು ನೋಡಿದರೆ ಬಹುತೇಕವಾಗಿ ಎಲ್ಲ ಧರ್ಮಗಳೂ ಹಿಮ್ಮುಖವಾಗಿಯೇ ಚಲಿಸಲು ಆರಂಭಿಸಿಬಿಡುತ್ತವೆ.
ಧಾರ್ಮಿಕ ವಿಷಯಗಳ ಕುರಿತು ದೇಶದಲ್ಲಿ ಹೆಚ್ಚೂ ಕಡಿಮೆ ಪ್ರತಿ ದಿನವೂ ಜಟಾಪಟಿ ನಡೆದಿವೆ. ಯಕ್ಕಶ್ಚಿತ ವ್ಯಕ್ತಿಗಳು ಬಾಯಿ ತುರಿಕೆಗೆ ಆಡುವ ಚಿಲ್ಲರೆ ಪಲ್ಲರೆ ಮಾತುಗಳು ಕೂಡ ‘ರಾಷ್ಟ್ರೀಯ’ ವಿಷಯಗಳಾಗುತ್ತಿವೆ. ನಮ್ಮ ಸಮಾಜ ವಿವೇಕವನ್ನು, ಹಾಸ್ಯ ಪ್ರಜ್ಞೆಯನ್ನು ಕಳೆದುಕೊಂಡಂತಿದೆ. ಇತ್ತೀಚಿನ ಎರಡು ವಿದ್ಯಮಾನಗಳನ್ನು ಗಮನಿಸಿ.
ಮೊದಲನೆಯದಾಗಿ ಪಠ್ಯಪುಸ್ತಕದ ವಿವಾದದಲ್ಲಿ ಹಾಸ್ಯಾಸ್ಪದ ಚರ್ಚೆಗಳು ನಡೆದವು. ಒಂದೆರಡು ಪಠ್ಯಗಳು ಸಮಾಜವನ್ನೇ ಬದಲಿಸಿಬಿಡುತ್ತವೆ ಎಂಬಂತೆ ಎರಡೂ ಕಡೆಯ ವರು ವಾದ ನಡೆಸಿದರು. ಕಲಿಕೆಯೇ ಅಸ್ತವ್ಯಸ್ತವಾಗಿ ಹೋಗಿರುವ ನಮ್ಮಲ್ಲಿ ಒಂದು ಪಾಠಕ್ಕೆ ಇಡೀ ಸಮಾಜವನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ತಿಳಿದೇ ಇಲ್ಲ ಅನಿಸುತ್ತದೆ. (ಬದಲಿಸು ವುದಾಗಿದ್ದರೆ ಇಷ್ಟು ವರ್ಷ ಒಂದು ರೀತಿಯ ಐಡಿಯಾಲಜಿಯ ಪಠ್ಯ ಇಟ್ಟುಕೊಂಡೇ ಬಂದರೂ ಜನ ಯಾಕೆ ‘ಸೆಕ್ಯುಲರ್’ ಆಗಿಲ್ಲ?) ಶಾಲೆಗಳಿಗೆ ಪಠ್ಯ ಬರುವಾಗಲೇ ಆರು ತಿಂಗಳು ಮುಗಿದುಹೋಗಿರುತ್ತದೆ.
ಮತ್ತು ನಮ್ಮ ವ್ಯವಸ್ಥೆಯಲ್ಲಿ ಶಾಲೆಗಳು ಹೆಚ್ಚುಕಡಿಮೆ ಸರಿಯಾಗಿ ಪಠ್ಯಗಳನ್ನು ಕಲಿಸುವುದೇ ಇಲ್ಲ. ಗಣಿತ, ವಿಜ್ಞಾನಗಳನ್ನಷ್ಟೇ ಓದುವ ವಿದ್ಯಾರ್ಥಿಗಳು ಉಳಿದ ವಿಷಯಗಳನ್ನು ಅಷ್ಟಾಗಿ ಗಮನಿಸುವುದೂ ಇಲ್ಲ. ಅದಿರಲಿ. ಟೆಕ್ಸ್ಟ್ ವಿಷಯದ ಹಿಂದೆ ಸೂಕ್ಷ್ಮ ವಾಗಿ ಅಡಗಿರುವುದು ಧಾರ್ಮಿಕ ವಿಷಯವೇ. ಗಡಿಗಳೇ ಇಲ್ಲದ ಚರ್ಚೆಗಳು ಅಲ್ಲಿ ನಡೆದುಹೋದವು.
ಇನ್ನೊಂದು ವಿಷಯ. ಯಾರೋ ಬಾಯಿಚಟದವರು ಧರ್ಮಸ್ಥಾಪಕರ ಕುರಿತು ಅವಹೇಳನಕಾರಿ ಮಾತನಾಡಿದರು ಎನ್ನುವ ವಿಷಯಕ್ಕೆ ದೇಶದಾದ್ಯಂತ ಗದ್ದಲವಾಯಿತು. ಯೋಚಿಸಬೇಕು. ಅಧಿಕ ಪ್ರಸಂಗಿಗಳು ಏನೋ ನಾಲಗೆ ಹರಿಬಿಟ್ಟರೆ ಎಲ್ಲರೂ ಏಕೆ ಜಗಳವಾಡಬೇಕು? ಹುಚ್ಚರು ಮನಬಂದಂತೆ ಮಾತಾಡಿದರೆ ನಮ್ಮ ಮರ್ಯಾದೆ ಹೋಗುತ್ತದೆಯೇ? ಅಂತಹ ಮಾತುಗಳಿಗೆಲ್ಲ
ಉತ್ತರ ತಿರಸ್ಕಾರ ಮಾತ್ರ ಎನ್ನುವುದು ನಮಗೆ ಯಾಕೆ ಹೊಳೆಯುತ್ತಿಲ್ಲ? ಬಹುಶಃ ಕಾರಣ ಧರ್ಮಗಳ ವಿಷಯಗಳಲ್ಲಿ ನಮ್ಮ ಮನಸ್ಸುಗಳು ಹೂತು ಹೋದಂತಿರುವುದು. ಧರ್ಮ, ನಮ್ಮ ಸಾರ್ವಜನಿಕ ಜೀವನದ ಕೇಂದ್ರವಾಗಿ ನಿಂತಂತಿರುವುದು. ಇನ್ನೂ ಒಂದು ಕಾರಣವಿದೆ.
ಏನೆಂದರೆ ನಮ್ಮ ಸಂಧಾನದಲ್ಲಿ ಧಾರ್ಮಿಕ ಹಕ್ಕಿನ ವ್ಯಾಖ್ಯೆ ಮತ್ತು ಆಚರಣೆಗಳಿಗೆ ಲಕ್ಷ್ಮಣ ರೇಖೆಗಳು ಅಸ್ಪಷ್ಟವಾಗಿಯೇ ಇವೆಯೇ ಎನ್ನುವ ಪ್ರಶ್ನೆ ಇರುವುದು. ಗಮನಿಸಿ, ಇತ್ತೀಚೆಗೆ ಧರ್ಮದ ಆಚರಣೆಗೆ ಸಂಬಂಧಿಸಿದ ಒಂದು ವಿಷಯ ಕೋರ್ಟಿಗೆ ಹೋಯಿತು. ತೀರ್ಪು ಹೇಳಿದ್ದು ಏನೆಂದರೆ ಆ ಆಚರಣೆ ಆ ಧರ್ಮದ ‘ತಿರುಳಿನ’ ಭಾಗವಲ್ಲ. ಹಾಗಾಗಿ ಸರಕಾರದ ಕ್ರಮ ಸರಿ ಯಾದುದು. ತೀರ್ಮಾನ ಸ್ವಾಗತಾರ್ಹವಾದುದು. ಆದರೆ ಇಲ್ಲಿ ಒಂದು ಸೂಕ್ಷ್ಮ ವಿಷಯ ಇದೆ.
ಏನೆಂದರೆ ಒಂದು ವೇಳೆ ಆಚರಣೆ ಧರ್ಮದ ‘ಭಾಗವೇ’ ಎಂದು ಕಂಡು ಬಂದಿದ್ದರೆ ಅನುಮತಿ ದೊರೆತುಹೋಗಬಹುದಿತ್ತೇ? ಸಹಬಾಳ್ವೆಗೆ ಪೂರಕವಲ್ಲದ, ಸಮಾಜವನ್ನು ಹಿಂದಕ್ಕೆ ಕರೆದೊಯ್ಯುವಂತಹ ಧಾರ್ಮಿಕ ಆಚರಣೆಗಳನ್ನು ಕೂಡ ಅವು ಧರ್ಮದ ‘ತಿರುಳಿನ ಭಾಗ’ವಾಗಿದ್ದರೆ ಎಬ್ಸಲ್ಯೂಟ್ ಆಗಿಯೇ ಆಚರಿಸುವ ಹಕ್ಕು ಸಿಕ್ಕುಬಿಡುತ್ತದೆಯೇ? ಮಿತಿಗಳೇ ಇಲ್ಲವೇ? ಧಾರ್ಮಿಕ ವಿಷಯದಲ್ಲಿ ಸಂಘರ್ಷ ತಲೆದೋರುವುದನ್ನು ತಡೆಯಲು ಈಗಿರುವ ಸಾಂಧಾನಿಕ ವ್ಯವಸ್ಥೆಗೂ ಪೂರ್ಣ ಶಕ್ತಿ ಇಲ್ಲವೇ? ಉತ್ತರ ಹುಡುಕುವ ಭಾಗವಾಗಿ ಧರ್ಮಗಳ ಸ್ವರೂಪವನ್ನು ಹಾಗೆಯೇ ಧರ್ಮ ಮತ್ತು ಮನುಷ್ಯ/ ಸಮಾಜಗಳಿಗೆ ಇರುವ ಸಂಬಂಧವನ್ನು ಅರಿತುಕೊಳ್ಳಬೇಕು.
ಧರ್ಮಗಳು ಜನಿಸಿದ್ದು ಮನುಷ್ಯನ ಮನಸ್ಸಿನೊಳಗೆ ಆಳವಾಗಿ ಹುದುಗಿರುವ ‘ಧಾರ್ಮಿಕತೆ’ಯಿಂದಾಗಿ. ಬಹುಶಃ ರಾಜಕೀಯದ ಹಾಗೆ ಧರ್ಮವೂ ಮನುಷ್ಯನ ಮೂಲ ಇನ್‌ಸ್ಟಿಂಕ್ಟ್‌ಗಳಲ್ಲಿ ಒಂದು. ಅರಿಸ್ಟಾಟಲ್ ಮನುಷ್ಯನನ್ನು ರಾಜಕೀಯ ಪ್ರಾಣಿ ಎಂದು ಕರೆದ. ಮನುಷ್ಯ ಧಾರ್ಮಿಕ ಪ್ರಾಣಿ ಕೂಡ ಹೌದು ಅನಿಸುತ್ತದೆ. ಏಕೆಂದರೆ ಅನಾದಿಕಾಲದಿಂದಲೂ ಮನುಷ್ಯ ದೇವರನ್ನು ಹುಡುಕುವ, ಕಂಡುಕೊಳ್ಳುವ ಪ್ರಯತ್ನ ಮಾಡಿದ.
ಮೂಲ ನಾಗರಿಕತೆಗಳ ಸಮಯದಲ್ಲಿಯೂ ಮನುಷ್ಯ ದೇವರು ಹಾಗೂ ಧರ್ಮಕ್ಕೆ ಸಂಬಂಧಿಸಿದ ಆಚರಣೆಗಳಲ್ಲಿ ತೊಡಗಿದ್ದ. ಈಜಿಪ್ತನ ಜನ ಸೂರ್ಯನನ್ನು ಪೂಜಿಸುತ್ತಿದ್ದರು. ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಲಿಂಗ ಮತ್ತು ಯೋನಿ ಪೂಜೆ ಇತ್ತು.
ಅಂದರೆ ಮನುಷ್ಯನೊಳಗೊಂದು ಅಧ್ಯಾತ್ಮಿಕ ತುಡಿತ ಇದೆ. ಬಹುಶಃ ಮನುಷ್ಯನೊಳಗಿನಿಂದ ಧರ್ಮವನ್ನು ತೆಗೆದುಹಾಕ ಲಾಗುವುದಿಲ್ಲ.
ಈ ವಿಷಯ ಸಮಾಜಗಳಿಗೆ ತಿಳಿಯುತ್ತ ಬಂತು. ಕುತೂಹಲವೆಂದರೆ ಮನುಷ್ಯನ ಕಾಮುಕ ಪ್ರವೃತ್ತಿಯನ್ನು, ರಾಕ್ಷಸಿ ಪ್ರವ್ರತ್ತಿ ಯನ್ನು ಹತೋಟಿಯಲ್ಲಿಡುವ ಮಾರ್ಗಗಳಿಗಾಗಿ ಹುಡುಕುತ್ತಿದ್ದ ಸಮಾಜಗಳಿಗೆ, ಧರ್ಮಗಳಿಗೆ ಅಂತಹ ಶಕ್ತಿ ಕೆಲಮಟ್ಟಿಗೆ ಇದೆ ಎನ್ನುವ ಭಯ ಗೊತ್ತಾಯಿತು. ಬಹುಶಃ ಈ ಹಿನ್ನೆಲೆಯಲ್ಲಿಯೇ ಸಮಾಜಗಳು ಧರ್ಮಗಳಿಗೆ ಪ್ರೋತ್ಸಾಹ ನೀಡಿದ್ದು. ಮತ್ತು ಕ್ರಮೇಣ ಧರ್ಮಗಳ ಮೂಲಕ ‘ದೇವರು ಮೆಚ್ಚುವಂತೆ’ ಬದುಕುವುದು ಹೇಗೆ… ಇತ್ಯಾದಿ ಸೂತ್ರಗಳನ್ನು ರಚಿಸಿ ಮನುಷ್ಯನಿಗೆ ಕಡಿವಾಣ ಹಾಕಿದ್ದು.
ಪಾಪ, ಪುಣ್ಯ ಇತ್ಯಾದಿ ಪರಿಕಲ್ಪನೆಗಳನ್ನು ಹುಟ್ಟಿಹಾಕಿದ ಅವು ಮನುಷ್ಯನನ್ನು ಒಂದು ಚೌಕಟ್ಟಿನೊಳಗೆ, ಸುಲಭವಾಗಿ ತಪ್ಪಿಸಿ ಕೊಳ್ಳಲಾಗದಂತೆ ನಿಲ್ಲಿಸಿದವು. ಇದರಿಂದ ಸಮಾಜಕ್ಕೆ ಒಂದು ಹಂತದಲ್ಲಿ ಮಾನವ ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಯಿತು. ಅಲ್ಲದೆ ಖಾಸಗಿ ಹಂತದಲ್ಲಿ ಧರ್ಮ ಒಂದು ಮಟ್ಟಿಗೆ ಮನುಷ್ಯನ ಮನಸ್ಸಿಗೆ ಒಂದು ಸ್ಥಿರತೆಯನ್ನು ತಂದು ಆತನನ್ನು ‘ದೈವತ್ವ’ ಕ್ಕೇರಿಸಿದ್ದೂ ಹೌದೇ.
ಈ ದೃಷ್ಟಿಯಿಂದ ನೋಡಿದರೆ ಧರ್ಮಗಳ ಅವಶ್ಯಕತೆ ಇದೆ. ವೈಯಕ್ತಿಕ ಮಟ್ಟದಲ್ಲಿ ಧರ್ಮಗಳು ಬೇಕು. ಮಿತಿ ಹಾಕುವಂತಿಲ್ಲ.
ಆದರೆ, ನಂತರ ಏನಾಯಿತೆಂದರೆ ಕ್ರಮೇಣ ಧರ್ಮಗಳು ತಮ್ಮ ಜನಪದೀಯತೆಯನ್ನು ಕಳೆದುಕೊಂಡು ‘ಸಾಂಸ್ಥಿಕ’ ಸ್ವರೂಪ ಪಡೆದು ಬಿಟ್ಟವು. ನಿರ್ದಿಷ್ಟ ಸ್ವರೂಪ ಹಾಗೂ ಕಠಿಣ ಮಾರ್ಗದರ್ಶಿ ಸೂತ್ರಗಳನ್ನು ಬೆಳೆಸಿಕೊಂಡವು. ಈಗ ಅವುಗಳೇ ಸಮಾಜ ಗಳನ್ನು ಹತೋಟಿ ಮಾಡಲು ಆರಂಭಿಸಿದವು. ಗ್ರಂಥಗಳನ್ನು, ಸಂಕೇತಗಳನ್ನು, ಅಚರಣೆಗಳನ್ನು ತಮ್ಮ ‘ಐಡೆಟಿಟಿಯ’ ವಿಷಯ ಗಳನ್ನಾಗಿ ಮಾಡಿಬಿಟ್ಟವು.
ದೇವರುಗಳನ್ನು, ಭಕ್ತರನ್ನು, ಭಕ್ತರು ದೇವರಿಗೆ ನಡೆದುಕೊಳ್ಳಬೇಕಾದ ದಾನಗಳನ್ನು ‘ಹೀಗೆಯೇ’ ಎಂದು ನಿರ್ಧರಿಸಿದವು. ಬೇರೆ ಬೇರೆ ಧರ್ಮಗಳ ಆಚರಣೆಗಳನ್ನೂ ಗುರುತಿಸಿದವು. ತಮ್ಮದಲ್ಲದ್ದು ಕೀಳು ಮತ್ತು ಅಪಾಯಕಾರಿ ಎನ್ನುವ ಭಾವನೆಯೂ
ಹುಟ್ಟಿಕೊಳ್ಳಲಾರಂಭಿಸಿತು. ಬೇರೆ ಧರ್ಮದವರು ದೇವರ ವಿರೋಧಿಗಳು. ಅವರನ್ನು ಕೊಂದು ಹಾಕಿ ಎನ್ನುವಂತಹ ಮಾತುಗಳೂ ಬಂದವು. ಧರ್ಮದ ‘ಸಾರವನ್ನು’ ಅರಿತ ಗುರುಗಳು ಹುಟ್ಟಿಕೊಂಡರು.
ಸ್ಪಷ್ಟ ಐಡೆಂಟಿಟಿಯೇ, ಸಾಸ್ಥಿಕತೆಯೇ ಅವುಗಳನ್ನು ಖಡಕ್ಕಾಗಿಸಿಬಿಟ್ಟಿದ್ದು. ಧರ್ಮಗುರುಗಳ ಸ್ಥಾನಗಳು ವ್ಯಕ್ತಿಗಳಿಗೆ ಅಪರಿಮಿತ ಅಧಿಕಾರಗಳನ್ನು ತಂದಿಟ್ಟವು. ‘ಧಾರ್ಮಿಕ ನಾಯಕರು’ ಅವನ್ನು ಮುಂದಿಟ್ಟುಕೊಂಡು ಜನರ ಶೋಷಣೆ ಆರಂಭಿಸಿದರು. ಮುಖ್ಯವಾಗಿ ಶೋಷಣೆಗೆ ತುತ್ತಾಗಿದ್ದು ಮಳೆಯರು. ಮನುಷ್ಯನ ಮೃಗೀಯತೆಗೆ ಕಾರಣ ಕಾಮ. ಕಾಮವನ್ನು ಕೆರಳಿಸುವ ಕಾರಣ ಹೆಣ್ಣು. ಮತ್ತು ಹೆಣ್ಣು ಬೇರೆ ಧರ್ಮದವರೊಂದಿಗೆ ಹೋದರೆ ‘ಧರ್ಮಬಾಹಿರ’ ಮಕ್ಕಳನ್ನು ಹುಟ್ಟಿಸಿಬಿಡಬಹುದು ಇತ್ಯಾದಿ
ಯೋಚಿಸಿದ ‘ಧಾರ್ಮಿಕ ನಾಯಕರು’ ಮಹಿಳೆಯ ಶರೀರ ಮತ್ತು ಮನಸ್ಸನ್ನು ಬಂಧಿಸಿಡಲು ತಂತ್ರಗಳನ್ನು ಹುಡುಕಿದವು.
ಹಾಗೆಯೇ ನರಬಲಿ, ಪ್ರಾಣಿಬಲಿಯಂತಹ ಕ್ರೌರ್ಯಗಳನ್ನೂ ಹುಟ್ಟಿಸಿದವು. ಜಾತಿ ಪಂಥಗಳನ್ನು ಹುಟ್ಟಿಸಿದವು. ಅಷ್ಟೇ ಅಲ್ಲ, ಕ್ರಮೇಣ ಧರ್ಮಗಳು ರಾಜಕೀಯದ, ಪ್ರಭುತ್ವಗಳ ಭಾಗಗಳಾಗಿ ಹೋದವು. ದೇಶಗಳು, ಅಂತಹ ತಳಹದಿಯ ಮೇಲೆ ಹುಟ್ಟಿ ಕೊಂಡವು. ಧಾರ್ಮಿಕ ನಾಯಕರೇ ಆಳುವವರಾಗಿಯೂ ಹೋದರು. ಧರ್ಮ ಮತ್ತು ರಾಜಕೀಯ ಒಂದೇ ಆಗಿಯೂ ಹೋದವು. ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗಳನ್ನು ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಂಡರು ಅಥವಾ ಅಡಗಿಸಿಕೊಂಡರು.
ಹೀಗೆ ಸಾಂಸ್ಥಿಕವಾದ, ರಾಜಕೀಕರಣಗೊಂಡ ಮತ್ತು ಜನಪದೀಯತೆಯನ್ನು ಕಳೆದುಕೊಂಡ ಧರ್ಮಗಳು ಇತಿಹಾಸದುದ್ದಕ್ಕೂ ಸಮಾಜ ಘಾತಕ ಶಕ್ತಿಗಳಾಗಿ ಕೆಲಸ ಮಾಡಿವೆ. ಎಷ್ಟರ ಮಟ್ಟಿಗೆ ಎಂದರೆ ಜನ ತಮ್ಮ ಧರ್ಮಗಳ ವಿರುದ್ಧವೇ ಹೋರಾಡ ಬೇಕಾದ ಪರಿಸ್ಥಿತಿ ಬಂತು. ಧರ್ಮ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು. ಸಮಾಜಗಳು ಸಮಾನತೆಯ ಆಧಾರದ ಮೇಲೆ ಸೃಷ್ಟಿ ಗೊಳ್ಳಲು ಆರಂಭವಾದವು. ಮಹಿಳೆಯರಿಗೆ ಹಕ್ಕುಗಳು ದೊರೆಯಲು ಆರಂಭವಾದವು.
ದೇಶಗಳು ಸಾಮಾಜಿಕ ಬದುಕಿನ ಸೂತ್ರಗಳನ್ನು ‘ಸಂವಿಧಾನ’ ಎನ್ನುವ ಹೆಸರಿನ ಗ್ರಂಥದ ಮೂಲಕ ಒದಗಿಸಿದವು. ಇದರಿಂದಾಗಿ ಜನ ಬೇಡವಾಗಿದ್ದ ಧಾರ್ಮಿಕ ಕಟ್ಟಳೆಗಳಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಬದುಕುವ ಹಕ್ಕು ಪಡೆದರು. ಧರ್ಮ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಇವೆರಡರ ನಡುವೆ ಸಂತುಲನ ಸಾಧಿಸಲು ಸಮಾಜಗಳಿಗೆ ಸಾಧ್ಯವಾಗಿದ್ದು ಸಂಧಾನದ ಶಕ್ತಿಯಿಂದ. ಕಾಲಕಾಲದ ಅವಶ್ಯಕತೆಗಳನ್ನು ಆಧರಿಸಿ ತಿದ್ದಲ್ಪಟ್ಟ ಸಂವಿಧಾನಗಳು ಧರ್ಮಗಳಿಗೆ ಕನಿಷ್ಠ ಸಾರ್ವಜನಿಕವಾಗಿ ಮೂಗುದಾರ
ಹಾಕಲು ಯಶಸ್ವಿಯಾದವು.
ಈಗ ಕಳವಳದ ವಿಷಯವೆಂದರೆ ಧರ್ಮಗಳು ಇತಿಹಾಸದಲ್ಲಿ ಹಿಂದೆ ಹೋಗುವ ಸೂಚನೆ ನೀಡುವ ‘ಚಳವಳಿಗಳು’ ಆರಂಭ ವಾಗಿರುವುದು. ಕಳವಳ ಏಕೆಂದರೆ ಧರ್ಮಗಳು ಮುಂದೆ ಅಥವಾ ಹಿಂದೆ ಹೋಗುವುದು ಗುಂಪುಗಳಲ್ಲಿಯೇ. ಒಂದು ಧರ್ಮ ಹಿಂದೆ ಚಲಿಸಿ ತನ್ನ ‘ಸನಾತನ’ ವ್ಕಕ್ತಿತ್ವವನ್ನು ಪಡೆಯಲು ನೋಡಿದರೆ ಬಹುತೇಕವಾಗಿ ಎಲ್ಲ ಧರ್ಮಗಳೂ ಹಿಮ್ಮುಖವಾಗಿಯೇ ಚಲಿಸಲು ಆರಂಭಿಸಿಬಿಡುತ್ತವೆ. ಈಗ ಆಗಿರುವುದು ಅದು. ಇದು ಅತಿರೇಕಕ್ಕೆ ಹೋದಾಗ ಸಂವಿಧಾನವೇ ಅಪ್ರಸ್ತುತವಾಗಿ ಹೋಗಿ ಇಂದು ಅಫ್ಘಾನಿಸ್ತಾನ ಅನುಭವಿಸುತ್ತಿರುವಂತ ದುರಂತಗಳು ಸಂಭವಿಸುತ್ತವೆ.
ಭಾರತೀಯ ಸಮಾಜದ ಸ್ಥಿತಿ ಇನ್ನೂ ವಿಶಿಷ್ಟವಾದದ್ದು. ಜಗತ್ತಿನ ಎಲ್ಲ ದೊಡ್ಡ ಧರ್ಮಗಳಿಗೆ ಸೇರಿದ ಜನ ದೊಡ್ಡ ಸಂಖ್ಯೆಯಲ್ಲಿ ಇಲ್ಲಿದ್ದಾರೆ. ಬಿಡಿಸಲಾರದಂತೆ ಕೂಡಿಕೊಂಡು ಹಳ್ಳಿಗಳಲ್ಲಿ, ಶಹರಗಳಲ್ಲಿ ಇದ್ದಾರೆ. ಒಬ್ಬರ ಮುಖ ಇನ್ನೊಬ್ಬರು ನೋಡದಂತೆ ಬದುಕಲು ಇಲ್ಲಿ ಸಾಧ್ಯವೇ ಇಲ್ಲ. ಒಬ್ಬರನ್ನೊಬ್ಬರು ಓಡಿಸಲೂ ಸಾಧ್ಯವಿಲ್ಲ. ಏಕೆಂದರೆ ಜನ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲದೆ ನಮ್ಮಲ್ಲಿ ಧರ್ಮಗಳ ನಡುವೆ ತಿಕ್ಕಾಟ ವಿಪರೀತಕ್ಕೆ ಹೋಗುತ್ತ ದಳ್ಳುರಿ ಭುಗಿಲೆದ್ದರೆ ದುರ್ಘಟನೆಯ ಪರಿಣಾಮಗಳನ್ನು ಊಹಿಸಲು ಕೂಡ ಸಾಧ್ಯವಿಲ್ಲ.
ವಿಷಯ ಸ್ಪಷ್ಟವಿದೆ. ಧರ್ಮಗಳು ಸಂಘಟಿತವಾದಷ್ಟೂ, ರಾಜಕೀಕರಣಗೊಂಡಷ್ಟೂ ಕೆಟ್ಟದು. ವೈಯಕ್ತಿಕವಾಗಿದ್ದಷ್ಟೂ, ಜನಪದೀಯವಾಗಿರುವಷ್ಟೂ ಒಳ್ಳೆಯದು. ಇಲ್ಲವಾದರೆ ಅಪಾಯಕಾರಿ. ಹೆಚ್ಚು ಅಪಾಯಕಾರಿ ಆ ಧರ್ಮದ ಆಚರಣೆಯಲ್ಲಿ ತೊಡಗಿರುವವರಿಗೇ. ಅವು ಮೊದಲು ಹರಣ ಮಾಡುವುದು ಆ ಜನರ ಸ್ವಾತಂತ್ರ್ಯವನ್ನೇ. ತಾಲಿಬಾನ್ ಬೆಂಬಲಿಸಿದ್ದರಿಂದ
ಹೆಚ್ಚು ಹಾನಿಯಾಗಿರುವುದು ಆಫ್ಗಾನಿಸ್ಥಾನ ದವರಿಗೇ. ಸಾಂಸ್ಥಿಕವಾಗಿ ಹೋಗಿರುವ ಧರ್ಮಗಳನ್ನು ರಿಪೇರಿ ಮಾಡಲುನಮಗೆ ಸಾಧ್ಯವಾಗುವುದಿಲ್ಲ.
ಧರ್ಮದೊಳಗೆ ಮುಂದಿನ ಹಂತದ ಸುಧಾರಣಾ ಚಳವಳಿಗಳು ಹುಟ್ಟಿಕೊಳ್ಳುವಂತೆಯೂ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಧರ್ಮಗಳ ಮೇಲೆ ಹತೋಟಿ ಸಾಧ್ಯವಾಗುವುದು, ವಾತಾವರಣವನ್ನು ತಿಳಿಗೊಳಿಸಲು ಸಾಧ್ಯವಾಗುವುದು ಸಂವಿಧಾನವನ್ನು, ಕಾಯಿದೆ ಕಾನೂನುಗಳನ್ನು ಗಟ್ಟಿಗೊಳಿಸುವುದರ ಮೂಲಕ ಮಾತ್ರ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಇತ್ತೀಚೆಗೆ ಹಿಜಾಬ್ ವಿಷಯದಲ್ಲಿ ತೆಗೆದುಕೊಂಡ ನಿರ್ಣಯ ಹೊಗಳುವಂತಹುದು.
ಈ ವಿಷಯದಲ್ಲಿ ಧರ್ಮವನ್ನು ಸಾಮಾಜಿಕವಾಗಿ ಬಳಸುವ ಹಕ್ಕು ಯಾರಿಗೂ ಇಲ್ಲ ಎಂದಿತು ಸಂವಿಧಾನ. ಇಂತಹುದೇ ತೀರ್ಮಾನಗಳನ್ನು ನಾವು ಸಂವಿಧಾನಾತ್ಮಕವಾಗಿ ಜಾರಿಗೊಳಿಸುವ ಅವಶ್ಯಕತೆ ಇದೆ. ಏನೆಂದರೆ ಖಾಸಗಿಯಾಗಿ ಧರ್ಮವನ್ನು
ಆಚರಿಸುವ ಹಕ್ಕು ಇದೆ. ಆದರೆ ಸಾಮಾಜಿಕವಾಗಿಸುವ ಹಕ್ಕು ಇಲ್ಲ. ಧರ್ಮ ವೈಯಕ್ತಿಕ ವಿಷಯ. ಧರ್ಮಗಳ ಆಚರಣೆಗಳ ಹಕ್ಕುಗಳು ಎಬ್ಸಲ್ಯೂಟ್ ಅಲ್ಲವೇ ಅಲ್ಲ. ಧರ್ಮಗಳಿಗಿಂತಲೂ ಸಂವಿಧಾನ ದೊಡ್ಡದು. ಧರ್ಮವನ್ನು ಬೀದಿಗೆ ತರುವಂತಿಲ್ಲ. ಇಂತಹ ತತ್ವಗಳನ್ನಾಧರಿಸಿದ ಒಂದು ‘ಸಿವಿಲ್ ಕೋಡ್ ಆಫ್ ಕಂಡಕ್ಟ’ ಇಂದಿನ ನಮ್ಮ ಅವಶ್ಯಕತೆ. ಸರಕಾರಗಳು ಮನಸು ಮಾಡಬೇಕು.
ರಾಬರ್ಟ್ ಫ್ರಾಸ್ಟ್ ತನ್ನ ‘ಮೆಂಡಿಗ್ ವಾಲ್’ ಕತೆಯಲ್ಲಿ ಹೇಳುತ್ತಾನೆ. ಏನೆಂದರೆ ಒಳ್ಳೆಯ ಗೋಡೆಗಳು ಒಳ್ಳೆಯ ನೆರೆಹೊರೆ ಯವರನ್ನು ಸೃಷ್ಟಿಸುತ್ತವೆ. ಮಿತಿಗಳು ಸ್ಪಷ್ಟವಾಗಿದ್ದಷ್ಟೂ ಸಂಬಂಧ ಚೆನ್ನಾಗಿರುತ್ತದೆ. ಈಗ ನಾವು ಮಾಡಬೇಕಿರುವುದು ಗಟ್ಟಿಯಾದ ಕಂಪೌಂಡ್ ವಾಲ್‌ಗಳನ್ನು ಕಟ್ಟುವುದು. ಅದನ್ನು ಹಾಳುಮಾಡಲು ನೋಡುವವರಿಗೆ ಕಠಿಣ ಶಿಕ್ಷೆ ನೀಡುವುದು.