Sunday, 15th December 2024

ರಾಷ್ಟ್ರೀಯ ಶಿಕ್ಷಣ ನೀತಿ: ಕನಸು ಹಾಗೂ ವಾಸ್ತವ !

ಅಭಿಮತ

ಡಾ.ಗಣೇಶ್ ಎಸ್.ಹೆಗಡೆ

ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ರಾಷ್ಟ್ರೀಯ ಶಿಕ್ಷಣ ನೀತಿ’ (ಎನ್ ಇಪಿ)ಯನ್ನು, ದೇಶದಲ್ಲೇ ಮೊದಲಿಗ
ಎನಿಸಿಕೊಳ್ಳುವ ಅತ್ಯುತ್ಸಾಹದಿಂದ ರಾಜ್ಯ ಸರಕಾರವು ಕಳೆದ ಶೈಕ್ಷಣಿಕ ವರ್ಷದಿಂದಲೇ ಪದವಿ ಕಾಲೇಜುಗಳಲ್ಲಿ ಜಾರಿಗೆ
ತಂದಿತು. ಅನೇಕ ಆಮೂಲಾಗ್ರ ಬದಲಾವಣೆ ಹಾಗೂ ವೈಶಿಷ್ಟ್ಯಗಳ ಆಗರವಾದ ಈ ಎನ್‌ಇಪಿ ಈಗ ಕರ್ನಾಟಕದ ಪದವಿ
ಕಾಲೇಜುಗಳಲ್ಲಿ ತನ್ನ ಶೈಶವಾವಸ್ಥೆಯ ಮೊದಲ ಶೈಕ್ಷಣಿಕ ವರ್ಷವನ್ನು ಪೂರೈಸುವ ಹಂತದಲ್ಲಿದೆ.

ಎನ್‌ಇಪಿ ಅಳವಡಿಕೆಯ ಈ ಒಂದು ವರ್ಷದಲ್ಲೇ ಸಾಕಷ್ಟು ಪರಿಣಾಮಗಳು ಗೋಚರಿಸು ತ್ತಿವೆ. ಇವುಗಳ ಪೂರ್ಣಪರಿಚಯ ಆಗಬೇಕಾದರೆ, ಕನಿಷ್ಠಪಕ್ಷ ಒಂದು ಬ್ಯಾಚ್ ಆದರೂ ಪದವಿ ಪೂರೈಸಿ ಹೊರಬರಬೇಕು. ಅದೇನೇ ಇರಲಿ, ಇಂದಿನ ಈ ಬದಲಾದ
ಸನ್ನಿವೇಶದಲ್ಲಿ, ಎನ್‌ಇಪಿ ಅಳವಡಿಕೆಯ ಸಾಧಕ-ಬಾಧಕಗಳ ಚರ್ಚೆ ಅವಶ್ಯವೆನಿಸುತ್ತದೆ. ಪದವಿ ವಿಭಾಗಕ್ಕೆ ಸೀಮಿತಗೊಳಿಸಿದ (ಬಿ.ಎಡ್., ಆನರ್ಸ್-ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಇವುಗಳನ್ನು ಹೊರತುಪಡಿಸಿದ) ಚರ್ಚೆಯನ್ನು ಈ ಬರಹದಲ್ಲಿ ಅನಾವರಣ ಗೊಳಿಸಲು ಯತ್ನಿಸಲಾಗಿದೆ.

‘ರಾಷ್ಟ್ರೀಯ ಶಿಕ್ಷಣ ನೀತಿ’ಯ ಕನಸು/ಆದರ್ಶ ತುಂಬಾ ಚೆನ್ನಾಗಿದೆ. ಬರಿದೇ ಆದರ್ಶದಿಂದ ನಾವು ಯಾವುದನ್ನು ಜಾರಿಗೆ ತರಲು ಹೋದರೂ ಆಗದು, ಹಾಗಂತ ಕೇವಲ ವಾಸ್ತವದ ಭೀತಿಯಲ್ಲೇ ಮುಳುಗಿದ್ದರೂ ಬದಲಾವಣೆಯ ಹೊಸಕನಸು ಕಾಣಲಾಗದು. ಆದ್ದರಿಂದ ಎರಡನ್ನೂ ಸೂಕ್ತ ಪ್ರಮಾಣದಲ್ಲಿ ಬೆರೆಸಿ ಕಾರ್ಯಪ್ರವೃತ್ತರಾದರೆ ಮಾತ್ರ ಯೋಜನೆಗಳ ಅನುಷ್ಠಾನದಲ್ಲಿ ಗೆಲುವು ಸಾಧಿಸಬಹುದು.

ಎನ್‌ಇಪಿಯ ಕೆಲವು ಸ್ವಾಗತಾರ್ಹ ಸಂಗತಿಗಳು ಹೀಗಿವೆ: ಎನ್‌ಇಪಿಯ ಪದವಿ-ಪ್ರೋಗ್ರ್ಯಾಂಗಳಲ್ಲಿ ನಿರಂತರ ಮೌಲ್ಯಮಾಪನ ಪದ್ಧತಿಗೆ ಇನ್ನಷ್ಟು ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಕೊನೆಯ ಪರೀಕ್ಷೆಯ ಗರಿಷ್ಠ ಅಂಕಗಳನ್ನು ಕಡಿಮೆ ಮಾಡಿ, ಆಂತರಿಕ ಅಂಕಗಳಿಗಾಗಿ ಸೆಮಿನಾರ್, ಪ್ರಾಜೆಕ್ಟ್ ವರ್ಕ್, ಅಸೈನ್‌ಮೆಂಟ್, ಕ್ವಿಜ್, ಕಿರು ಪರೀಕ್ಷೆ, ಗುಂಪು-ಚರ್ಚೆ ಮುಂತಾದ ಪ್ರಕಾರಗಳನ್ನು ನಿರಂತರ ಮೌಲ್ಯಮಾಪನದ ಭಾಗವಾಗಿಸಲಾಗಿದೆ. ಇವನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಉಪನ್ಯಾಸಕರು ಆಸ್ಥೆ ವಹಿಸಬೇಕಿದೆ.

ವಿದ್ಯಾರ್ಥಿಗೆ ತನ್ನ ಕಾಂಬಿನೇಷನ್‌ನಲ್ಲಿನ ವಿಷಯ ಆಯ್ಕೆಯಲ್ಲಿ ಒಂದಿಷ್ಟು ಸ್ವಾತಂತ್ರ್ಯ ನೀಡಲಾಗಿದೆ. ಬರುವ ವರ್ಷಗಳಲ್ಲಿ (2030ರ ಹೊತ್ತಿಗೆ) ವಿಜ್ಞಾನ ವಿಷಯಗಳೊಂದಿಗೆ ಮಾನವಿಕ/ಕಲಾ ವಿಭಾಗದ ವಿಷಯಗಳನ್ನೂ ಆರಿಸಿಕೊಳ್ಳುವ ಸ್ವಾತಂತ್ರ್ಯ ನೀಡಲೂ ಉದ್ದೇಶಿಸಲಾಗಿದೆ. ವಿದೇಶಗಳಲ್ಲಷ್ಟೇ ಸಾಧ್ಯವಿದ್ದ, ಭೌತಶಾಸ ಮತ್ತು ತತ್ತ್ವಶಾಸ ವಿಷಯಗಳನ್ನು ಒಟ್ಟಿಗೆ ಕಲಿಯ ಬಹುದಾದಂಥ ಸುವರ್ಣಾವಕಾಶ ಇನ್ನು ನಮ್ಮ ವಿದ್ಯಾರ್ಥಿಗಳಿಗೂ ಸಿಗಲಿದೆ.

ಪದವಿಯ ಯಾವ ಹಂತದಲ್ಲಾದರೂ ಓದನ್ನು ಕೈಬಿಡುವ (ಸೂಕ್ತ ಪ್ರಮಾಣಪತ್ರದೊಂದಿಗೆ) ಹಾಗೂ ಮತ್ತೆ ಅನುಕೂಲ ವಾದಾಗ/ಬೇಕೆನಿಸಿದಾಗ ಮುಂಚೆ ನಿಲ್ಲಿಸಿದ ಹಂತ ದಿಂದಲೇ ಮುಂದುವರಿಸುವ ಅವಕಾಶವನ್ನೂ ನೀಡಲಾಗಿದೆ. ವಿದ್ಯಾರ್ಥಿಗಳ ಕಾಲೇಜು-ಕಲಿಕಾ ಸಮಯವನ್ನು ಕಡಿತಗೊಳಿಸಿ ಸಾಕಷ್ಟು ಬಿಡುವಿನ ಅವಧಿ ದೊರೆಯುವಂತೆ ಮಾಡಲಾಗಿದೆ. ಜತೆಗೆ, ಮೌಲ್ಯಾ ಧಾರಿತ ಶಿಕ್ಷಣ, ಕ್ರೀಡೆ, ಯೋಗ, ಡಿಜಿಟಲ್ ಫ್ಲೂಯೆನ್ಸಿ, ಆರ್ಥಿಕ ಸಾಕ್ಷರತೆಯಂಥ ಜೀವನ ಶಿಕ್ಷಣಗಳನ್ನೂ ಅಂತರ್ಗತ ಗೊಳಿಸ ಲಾಗಿದೆ.

ಆದರ್ಶದ ನೆಲೆಯಲ್ಲಿ ಇವೆಲ್ಲ ಮೆಚ್ಚತಕ್ಕ ಸಂಗತಿಗಳೇ; ಆದರೆ ಅನುಷ್ಠಾನದ ಹಂತದಲ್ಲಿ ಎಲ್ಲವನ್ನೂ ವಾಸ್ತವ ಪ್ರಜ್ಞೆಯಿಂದ ವಿಶ್ಲೇಷಿಸಬೇಕಾಗುತ್ತದೆ. ಎನ್‌ಇಪಿಯಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆಯಾದರೂ, ಅನುಷ್ಠಾನಕ್ಕೆ
ಕಷ್ಟವಾಗಬಲ್ಲ ಸಾಕಷ್ಟು ಅವಾಸ್ತವಿಕ ಅಂಶಗಳು, ನ್ಯೂನತೆಗಳು ನುಸುಳಿವೆ.

ಪರೀಕ್ಷೆಗಳಲ್ಲಿ, ‘ನೀವು ಯಾವ ಪ್ರಶ್ನೆ ಕೇಳಿದರೂ, ನಮಗೆ ಗೊತ್ತಿರುವುದನ್ನಷ್ಟೇ ಬರೆಯುತ್ತೇವೆ’ ಎಂಬ ಕೆಲ ವಿದ್ಯಾರ್ಥಿಗಳ
ಧೋರಣೆಯಂತೆ ಎನ್‌ಇಪಿ ಅಳವಡಿಕೆಯಲ್ಲೂ ಸಹಜವಾಗಿಯೇ ಇದೇ ಅನುಕೂಲಸಿಂಧು ಧೋರಣೆ ವ್ಯಕ್ತವಾಗಿದೆ. ಆಚರಿಸ ಲಾಗದ ಅನೇಕ ಆದರ್ಶಗಳು ಎನ್‌ಇಪಿಯ ಪೀಠಿಕೆಗಷ್ಟೇ ಸೀಮಿತವಾಗಿವೆ.

ಆದರೆ ಜಾರಿಗೆ ಬಂದ ನೂತನ ಕಲಿಕಾ-ವಿನ್ಯಾಸ ಈಗ ಅನೇಕ ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕಿದೆ: ಹಿಂದಿನ ಪದ್ಧತಿ ಯಲ್ಲಿದ್ದ 3 ಮುಖ್ಯ ವಿಷಯಗಳನ್ನು 2 ವಿಷಯಗಳಿಗೆ- ಡಿಎಸ್‌ಸಿಸಿ (ಡಿಸಿಪ್ಲೀನ್ ಸ್ಪೆಸಿಫಿಕ್ ಕೋರ್ ಕೋರ್ಸ್)- ಇಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕ್ರಮವು ಎನ್‌ಇಪಿಯ ಮುಖ್ಯ ಆಶಯದಂತೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇರಬೇಕಾದ ಅವಧಿ ಯನ್ನು ಕಡಿತಗೊಳಿಸಿದೆ. ಹೀಗಾಗಿ ಎಲ್ಲ ವಿಷಯಗಳಲ್ಲಿ ಕಾರ್ಯಭಾರ ಕುಸಿತವಾಯ್ತು.

ಅದೇನೇ ಇರಲಿ, ವಿದ್ಯಾರ್ಥಿಯ ದೃಷ್ಟಿಯಿಂದ ನೋಡುವುದಾದಲ್ಲಿ, ಮೂಲವಿಜ್ಞಾನಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಈ ಆರಂಭಿಕ ಹಂತದಲ್ಲಿನ ಅಡಿಪಾಯಕ್ಕೆ ಏಟುಬಿದ್ದಂತಾಗದೆ? ಏಕೆಂದರೆ, ಓಪನ್ ಇಲೆಕ್ಟೀವ್ ಕೋರ್ಸ್‌ಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಕೇವಲ ಅನ್ವಯಿಕತೆ ಆಧರಿತ ಪಠ್ಯವನ್ನು ಅವು ಒಳಗೊಂಡಿವೆ. ಅಂದರೆ, ಇಲ್ಲಿ ಆಯಾ ವಿಷಯಗಳ ಆಳ ಅಧ್ಯಯನಕ್ಕೆ ಅವಕಾಶವಿಲ್ಲ! ಉದಾಹರಣೆಗೆ, ಭೌತಶಾಸ್ತ್ರ ಮತ್ತು  ರಸಾಯನಶಾಸ್ತ್ರ ಗಳನ್ನು ಮುಖ್ಯ ವಿಷಯಗಳಾಗಿ ಆಯ್ಕೆ ಮಾಡಿಕೊಂಡಾತನಿಗೆ ಈ ಸಂಯೋಜನೆಗೆ ಪೂರಕ ಮತ್ತು ಕೊಂಚ ಅವಶ್ಯಕವೂ ಆಗಿರುವ ಗಣಿತವನ್ನು ಮುಖ್ಯ ವಿಷಯವಾಗಿ ಕಲಿಯಲು ಸಾಧ್ಯವಿಲ್ಲ.

ಓಪನ್ ಇಲೆಕ್ಟೀವ್ ಕೋರ್ಸ್ ಆಯ್ಕೆಯಿಂದ ವಿಶೇಷ ನಿರೀಕ್ಷೆ ಮಾಡುವಂತೆಯೇ ಇಲ್ಲ. ಹೆಚ್ಚಿನ ಎಲ್ಲ ಸಂಯೋಜನೆಗಳಲ್ಲೂ ಇಂಥ ಸಮಸ್ಯೆಯಿದೆ. ಪಿಯುಸಿ ಕಲಿಕೆಯವರೆಗೂ ಸಮಯಕ್ಕೆ ಬದ್ಧರಾಗಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಒಮ್ಮೆಲೆ ಸಾಕಷ್ಟು ಬಿಡುವು ಸಿಗುವಂತಾಗಿದೆ. ಹಳೆಯ ಪದವಿ ಪ್ರೋಗ್ರ್ಯಾಂಗಳಲ್ಲೂ ಪಿಯುಸಿಗೆ ಹೋಲಿಸಿದರೆ ಹೆಚ್ಚು ಬಿಡುವು ಸಿಗುತ್ತಿತ್ತು. ಆದರೆ ಎನ್ ಇಪಿಯಿಂದ ಈ ಬಿಡುವಿನ ಅವಽ ಮತ್ತಷ್ಟು ಹೆಚ್ಚಾಗಿದೆ!

ಪದವಿ ಹಂತದಲ್ಲಾದರೂ ವಿದ್ಯಾರ್ಥಿಗಳು ಪಠ್ಯೇತರ/ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿ ಅವರ ಸರ್ವತೋಮುಖ
ಬೆಳವಣಿಗೆಗೆ ಸಹಾಯಕವಾದ ವಾತಾವರಣ ಸಿಗಬೇಕಾದ್ದು ಅವಶ್ಯಕ. ಆದರೀಗ ಅದು ಅಗತ್ಯಕ್ಕಿಂತ ಹೆಚ್ಚಾದಂತಿದೆ. ಹೆಚ್ಚುವರಿ ಸಮಯದ ಸದ್ಬಳಕೆಯಾಗದಿದ್ದರೆ ಎನ್‌ಇಪಿ ಉದ್ದೇಶ ವಿಫಲವಾದಂತೆಯೇ ಸರಿ. ಸಾಮಾನ್ಯವಾಗಿ ಪಿಯುಸಿ ನಂತರ ಮಕ್ಕಳ ಮೇಲಿನ ಪಾಲಕರ ಲಕ್ಷ್ಯವೂ ಕೊಂಚ ಕಡಿಮೆಯಾಗುತ್ತದೆ, ಜತೆಗೆ ಇನ್ನೂ ಪರಿಪಕ್ವ ಮನಸ್ಥಿತಿ ತಲುಪಿರದ ಹೆಚ್ಚಿನ  ವಿದ್ಯಾರ್ಥಿ ಗಳು ಬಿಡುವಿನ ಸಮಯವನ್ನು ಉತ್ಪಾದಕ ಕಾರ್ಯಗಳಿಗೇ ವಿನಿಯೋಗಿಸುವುದು ಅನುಮಾನ.

ಸಂಯೋಜನಾ ವಿಷಯದ ಆಯ್ಕೆಯ ಸ್ವಾತಂತ್ರ್ಯ ಮೇಲ್ನೋಟಕ್ಕೆ ಸ್ವಾಗತಾರ್ಹ. ಆದರೆ ವಿದ್ಯಾರ್ಥಿಗಳು, ಪಾಲಕರ/ಅವರಿವರ ಸಲಹೆಯಂತೆ ಆರಿಸಿಕೊಳ್ಳುವರೇ ವಿನಾ, ತಮ್ಮ ಅಭಿರುಚಿಯಂತೆ ಅಲ್ಲ. ಮಿಗಿಲಾಗಿ, ತಮ್ಮ ಅಭಿರುಚಿಗೂ ವಿಷಯಕ್ಕೂ ಹೊಂದಿಸಿ ನೋಡುವ ಪ್ರಬುದ್ಧತೆ ಅವರಿಗಿರುವುದಿಲ್ಲ. ಜತೆಗೆ ಸಾಮರ್ಥ್ಯ ಬೆಳೆಸದೆ, ಪರಿಶೀಲಿಸದೆ ಆಯ್ಕೆಸ್ವಾತಂತ್ರ್ಯ ನೀಡಿದರೆ ಅಪಾಯ. ಎನ್‌ಇಪಿಯಲ್ಲಿ ಸಂಯೋಜನಾ ವಿಷಯಗಳ ಆಯ್ಕೆಯ ಸ್ವಾತಂತ್ರ್ಯವಿದ್ದರೂ, ವಿದ್ಯಾರ್ಥಿಯು ಪದವಿಯ ಆರಂಭ ದಲ್ಲೇ ತನ್ನ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.

ಓಪನ್ ಇಲೆಕ್ಟೀವ್ ಕೋರ್ಸ್ ವಿಷಯದಲ್ಲಿ ಮುಂದೆ ಸ್ನಾತಕೋತ್ತರ ಕಲಿಕೆ ಸಾಧ್ಯವಿಲ್ಲ. ಜತೆಗೆ ವಿದ್ಯಾರ್ಥಿಯು ೫ನೇ ಸೆಮಿಸ್ಟರ್, ಅಂದರೆ ಪದವಿಯ ಮೂರನೇ ವರ್ಷಾರಂಭದಲ್ಲೇ ಮತ್ತೊಮ್ಮೆ ತನ್ನ ವಿಷಯದ ಆಯ್ಕೆ ಕುರಿತು ನಿರ್ಧರಿಸಬೇಕಾಗುತ್ತದೆ. ಅಲ್ಲಿಯವರೆಗಿನ 2 ಮುಖ್ಯ ವಿಷಯಗಳಲ್ಲಿ ಒಂದನ್ನಷ್ಟೇ ‘ಮೇಜರ್’ ವಿಷಯವಾಗಿ ಆರಿಸಿಕೊಳ್ಳಬೇಕು. ಆಗ ಮತ್ತೊಂದು ವಿಷಯ ‘ಮೈನರ್’ ಎನಿಸಿಕೊಳ್ಳುತ್ತದೆ ಹಾಗೂ ಈ ವಿಷಯದಲ್ಲೂ ಸ್ನಾತಕೋತ್ತರ ಕಲಿಕೆ ಸಾಧ್ಯವಿಲ್ಲ.

ಹಳೆಯ ಕ್ರಮದಲ್ಲಿ ಪದವಿ ವಿದ್ಯಾರ್ಥಿಗೆ ಆಗಾಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿರಲಿಲ್ಲ. ಪದವಿಯ
ನಂತರವೂ ಸಾಕಷ್ಟು ಸಾಧ್ಯತೆಗಳಿರುತ್ತಿದ್ದವು. ಕಲಿತ ಮೂರೂ ಮುಖ್ಯ ವಿಷಯಗಳಲ್ಲಿ ಸ್ನಾತಕ ಕಲಿಕೆಗೆ ಸಮಾನ ಸಾಧ್ಯತೆ ಗಳಿದ್ದವು. ಕೆಲವೊಮ್ಮೆ ವಿವಿಧ ಕಾರಣಕ್ಕೆ ವಿದ್ಯಾರ್ಥಿಯ ಕಲಿಕಾ ಇಚ್ಛೆಯು ಬದಲಾಗಬಹುದು. ಆಗ ಆಯ್ಕೆಯ ಸ್ವಾತಂತ್ರ್ಯ ವಿದ್ದರಷ್ಟೇ ಭವಿಷ್ಯದ ದೃಷ್ಟಿಯಿಂದ ಅನುಕೂಲ. ಆದರೆ ಎನ್‌ಇಪಿಯಲ್ಲಿ ಪ್ರತಿ ಹಂತದಲ್ಲೂ ವಿದ್ಯಾರ್ಥಿಯು ಸ್ಪಷ್ಟನಿರ್ಣಯ ತೆಗೆದುಕೊಂಡು ಮುಂದುವರಿಯಬೇಕಾದ ಅನಿವಾರ್ಯತೆಯಿದೆ.

ಆರಂಭಿಕ ಹಂತದಲ್ಲೇ ಹೀಗೆ ಮುಂದಾಲೋಚಿಸಿ ನಿರ್ಣಯಿಸುವುದು ಅವರಿಗೆ ಕಷ್ಟವಾದೀತು. ಅನೇಕ ವಿದ್ಯಾರ್ಥಿಗಳಿಗೆ ಇದರಿಂದ ಪ್ರತಿಕೂಲ ಪರಿಣಾಮವಾಗಬಹುದು. ಎನ್‌ಇಪಿ ಜಾರಿಯ ಪೂರ್ವದಲ್ಲೇ ಅದರ ಕರಡುಪ್ರತಿ ಅವಲೋಕಿಸಿದ ಶಿಕ್ಷಣ ತಜ್ಞರು, ‘ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಗಮನಿಸಿದಾಗ, ಇದರಲ್ಲಿ ವಾಸ್ತವಕ್ಕಿಂತ ಆಚರಿಸಲು ಕಷ್ಟವಾಗುವ ಆದರ್ಶದ ಅಂಶಗಳೇ ಹೆಚ್ಚಿವೆ; ಇದರ ಯಥಾವತ್ತು ಜಾರಿ ಅಪ್ರಾಯೋಗಿಕವಾಗಬಹುದು’ ಎಂದು ಪ್ರತಿಕ್ರಿಯಿಸಿದ್ದರು.

‘ಇದು ವಿದ್ಯಾರ್ಥಿಗಳನ್ನು ಮೆಚ್ಚಿಸಲೆಂದು ಶಿಕ್ಷಕರನ್ನು ಅಪಾಯಕ್ಕೆ ನೂಕುವಂತಿದೆ’ ಎಂಬ ಮತ್ತೊಂದು ಕಟುಸತ್ಯವೂ ಹೊಮ್ಮಿತ್ತು. ಆದರೆ ಈ ಅಪ್ರಿಯಸತ್ಯಕ್ಕೆ ಬೆಲೆ ಸಿಗಲಿಲ್ಲ! ಎನ್‌ಇಪಿಯನ್ನು ರೂಪಿಸಿದ ತಜ್ಞರು ಈ ನಿಟ್ಟಿನಲ್ಲಿ ಸೂಕ್ತವಾಗಿ
ಚರ್ಚಿಸಿಯೇ ನಿರ್ಣಯಿಸಿದ್ದಾರೆ ಎಂದುಕೊಳ್ಳೋಣ. ಆದರೆ ಎನ್‌ಇಪಿ ಜಾರಿಯಾದ ಮೊದಲ ಬ್ಯಾಚ್‌ನಿಂದಲೇ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇ. ೬೦-೭೦ರಷ್ಟು ಕುಸಿತವಾಯ್ತು!

ಎರಡನೇ ಬ್ಯಾಚ್ ಪ್ರವೇಶದ ಸಂದರ್ಭದಲ್ಲಿ ಮತ್ತಷ್ಟು ಕುಸಿತ ಕಂಡುಬರುತ್ತಿದೆ. ಅನೇಕ ಕಾಲೇಜುಗಳಲ್ಲಿ ಕೆಲವು ವಿಷಯಗಳಲ್ಲಿ ೧೫೦ರವರೆಗೆ ಇರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೀಗ 15-20ನ್ನೂ ದಾಟುತ್ತಿಲ್ಲ. ಶಿಕ್ಷಣತಜ್ಞರ ಊಹೆ, ನಿರೀಕ್ಷೆ, ಅಭಿಪ್ರಾಯ ಗಳೇನೇ ಇದ್ದರೂ, ಅದನ್ನು ಬಹುತೇಕ ಪಾಲಕರು-ವಿದ್ಯಾರ್ಥಿಗಳು ಒಪ್ಪುತ್ತಿಲ್ಲ. ಎನ್‌ಇಪಿ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಕಲಿಕಾ ವಿಷಯಗಳು ಕಡಿಮೆ, ಜತೆಗೆ ವಿದ್ಯಾರ್ಥಿಗಳೇ ಕಡಿಮೆ.

ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಸುಮಾರು ಶೇ. 50-60ರಷ್ಟು ಕಾರ್ಯಭಾರದ ಕುಸಿತವಾಗಲಿದ್ದು ಗಣನೀಯ ಸಂಖ್ಯೆಯಲ್ಲಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವುದು ಅನಿವಾರ್ಯವಾಗಲಿದೆ. ಇದು ಅಪ್ರಿಯಸತ್ಯ. ರಾಜ್ಯದ ಉಳಿದ
ವಿ.ವಿ.ಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ? ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳು, ತರುವಾಯದಲ್ಲಿ ನಿಧಾನವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಇದರ ಮೊದಲ ಬಲಿಪಶುಗಳಾಗಲಿವೆ.

ಕೆಲ ವರ್ಷಗಳಲ್ಲಿ ವಿ.ವಿ.ಗಳೂ, ಪಿ.ಜಿ. ಸೆಂಟರ್‌ಗಳೂ ಮುಚ್ಚುವ ಹಂತಕ್ಕೆ ಬಂದರೂ ಅಚ್ಚರಿಯಿಲ್ಲ. ಕಾಯಂ  ನೇಮಕಾತಿ ಗಳಿಲ್ಲದೆ ವಿ.ವಿ.ಗಳ ಗುಣಮಟ್ಟದಲ್ಲೂ ವ್ಯತ್ಯಯವಾಗುತ್ತಿರುವುದನ್ನು ಜನರಿಂದ ಮರೆಮಾಚಲಾಗದು. ಆರ್ಥಿಕವಾಗಿ ಬಲಿಷ್ಠ ವಾಗಿರುವ ಕೆಲವು ಖಾಸಗಿ ವಿ.ವಿ.ಗಳು ರಾಜ್ಯದ ವಿ.ವಿ.ಗಳಿಗೆ ತೀವ್ರ ಪೈಪೋಟಿ ನೀಡಲಿವೆ. ವಿ.ವಿ.ಗಳ ಬೇರುಗಳಾದ ಕಾಲೇಜುಗಳೇ ಸೊರಗಿದ ಮೇಲೆ, ಆಯಾ ವಿ.ವಿ.ಗಳ ಪರಿಸ್ಥಿತಿಯನ್ನು ಊಹಿಸಲಾಗದೇ?! ಇನ್ನೂ ಕಾಲ ಮಿಂಚಿಲ್ಲ.

ಸಂಬಂಧಿತ ಇಲಾಖೆ, ಶಿಕ್ಷಣ ಸಚಿವಾಲಯ ಅಥವಾ ಉನ್ನತ ಸಂಸ್ಥೆಗಳು ಆದಷ್ಟು ಬೇಗ ಈ ಕುರಿತು ಚರ್ಚಿಸಿ, ಎನ್‌ಇಪಿ ಜಾರಿ ಯಿಂದಾದ ಎಲ್ಲ ಪರಿಣಾಮಗಳ ಕುರಿತು ಪೂರ್ವಗ್ರಹಪೀಡಿತವಾಗದೆ ವಸ್ತುಸ್ಥಿತಿಯ ವೈಜ್ಞಾನಿಕ ಅಧ್ಯಯನ ಕೈಗೊಳ್ಳಬೇಕು. ಜನರಿಗೆ ಮಾಹಿತಿ ಕೊರತೆಯಾಗಿರುವುದು, ತಪ್ಪುಮಾಹಿತಿ ಸಿಕ್ಕಿರುವುದು ಅಥವಾ ಎನ್‌ಇಪಿ ವಿನ್ಯಾಸದಲ್ಲೇ ಆಗಿರುವ ನ್ಯೂನತೆ ಇವುಗಳ ಕುರಿತು ಸಮೀಕ್ಷೆ ಆಗಬೇಕು.

ನಂತರ ಮತ್ತೊಮ್ಮೆ ಶಿಕ್ಷಣತಜ್ಞರೊಂದಿಗೆ ವಿಶ್ಲೇಷಣೆ ನಡೆಸಿ, ಅಗತ್ಯ ತಿದ್ದುಪಡಿಗಳನ್ನು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದರೆ ಮಾತ್ರವೇ ‘ರಾಷ್ಟ್ರೀಯ ಶಿಕ್ಷಣ ನೀತಿ’ ಎಲ್ಲರಿಗೂ ಒಪ್ಪಿಗೆಯಾದೀತು. ಇಲ್ಲವಾದಲ್ಲಿ, ಅಮೆರಿಕದ ‘ಚೋಲುಟೇಕಾ’ ಸೇತುವೆಗೆ ಒದಗಿದ ಸ್ಥಿತಿ ನಮ್ಮ ಎನ್‌ಇಪಿಗೂ ಒದಗೀತು! ಚೋಲುಟೇಕಾ ನದಿಗಡ್ಡಲಾಗಿ ಬಲಿಷ್ಠ ಸೇತುವೆಯನ್ನೇನೋ  ನಿರ್ಮಿಸ ಲಾಗಿತ್ತು. ಆದರೆ ಸದಾ ಬಿರುಗಾಳಿ-ಮಳೆಯ ಹವಾಮಾನ ವೈಪರೀತ್ಯದಿಂದ ಕೂಡಿರುವ ಈ ಪ್ರದೇಶದಲ್ಲಿ ನದಿ ತನ್ನ ಪಾತ್ರವನ್ನೇ ಬದಲಿಸಿಕೊಂಡಿದೆ!

ಆದರೆ ಬಲಿಷ್ಠ ಸೇತುವೆ ಮಾತ್ರ ನದಿಯಿಲ್ಲದ ನೆಲದಲ್ಲಿ ಮೈಚೆಲ್ಲಿಕೊಂಡು ತನ್ನನ್ನು ಕಟ್ಟಲು ಶ್ರಮಿಸಿದವರನ್ನು ಅಣಕಿಸುವ
ಸ್ಮಾರಕವಾಗಿದೆ! ನಮ್ಮ ‘ರಾಷ್ಟ್ರೀಯ ಶಿಕ್ಷಣ ನೀತಿ’ಯು ಹೀಗೆ ‘ಚೋಲುಟೇಕಾ’ ಸೇತುವೆಯಂತಾಗದೆ, ನಮ್ಯತೆಯ ‘ಜ್ಞಾನ ಸೇತು’ ವಾಗಲಿ ಎಂಬುದು ಬಹುತೇಕರ ಆಶಯ ಮತ್ತು ನಿರೀಕ್ಷೆ.