Friday, 20th September 2024

ನೈತಿಕ ಪ್ರಜ್ಞೆ ಮೀರಿ ಹಾರದಿರಲಿ ಕ್ರೌರ್ಯ

ಅಭಿಮತ

ಅನೀಶ್ ಬಿ.ಕೊಪ್ಪ

ಭಾರತದಲ್ಲಿ ಸೂರ್ಯೋದಯಕ್ಕೆ ಒಂದೆರಡು ತಾಸಿತ್ತು. ಬಹುಶಃ ಭಾರತೀಯರೆಲ್ಲರೂ ಶಾಂತಿಯಿಂದ ಸುಖನಿದ್ರೆಯಲ್ಲಿದ್ದ ಕ್ಷಣ. ಆದರೆ ವಿಶ್ವದ ದೊಡ್ಡಣ್ಣನಾದ ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ ಪಟ್ಟಣದಲ್ಲಿ ಅದೊಂದು ಸುಂದರ ಸಂಜೆ. ಒಂದೊಮ್ಮೆ ದೊಡ್ಡಣ್ಣನ ಚುಕ್ಕಾಣಿಯನ್ನು ಹಿಡಿದು, ಜಗತ್ತನ್ನೇ ಕಿರು ಬೆರಳಿನಲ್ಲಿ ಆಡಿಸುವಂತೆ ಅಭಿವೃದ್ಧಿಯ ಪಥದಲ್ಲಿ ಅಧಿಕಾರ ನಡೆಸಿದ್ದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭ ವೋಟ್ ಫಾರ್ ಟ್ರಂಪ್ .. ವೋಟ್ ಫಾರ್ ಟ್ರಂಪ್…’ ಎಂದು ಕೇಕೆ ಹಾಕುತ್ತಿದ್ದ ಜನಸ್ತೋಮದ ನಡುವೆಯಿಂದ
ಹಾರಿಬಂದ ಅದೊಂದು ಗುಂಡು, ಟ್ರಂಪ್ ಕಿವಿಗೆ ಸವರಿ ಹಾದು ಹೋಯಿತು. ಮುಖ ತುಂಬ ರಕ್ತ ಚಿಮ್ಮಿತು!

ಜಗತ್ತಿಗೆ ಶಾಂತಿ, ಅಹಿಂಸಾವಾದದ ಮಂತ್ರ ಪಠಿಸಿ, ನುಡಿದಂತೆ ನಡೆದ ಮಹಾತ್ಮ ಗಾಂಽಜಿಯವರನ್ನೇ ಹುತಾತ್ಮರನ್ನಾಗಿಸಿದ್ದೂ ಕೂಡ ನಾಥೂರಾಮ್ ಗೋಡ್ಸೆ ಎಂಬಾತನ ಪಿಸ್ತೂಲಿನಿಂದ ಚಿಮ್ಮಿದ ಗುಂಡೇ ಅಲ್ಲವೇ? ಅಹಿಂಸೆಯನ್ನೇ ಅಸವನ್ನಾಗಿಸಿಕೊಂಡಿದ್ದ ಗಾಂಧೀಜಿಯವರನ್ನೂ ಹಿಂಸೆಯಿಂದ ಕೊಲ್ಲಬೇಕೆಂದು ಕಣ್ಣಿಟ್ಟಂತಹ ವ್ಯಕ್ತಿಯೋರ್ವ ನಮ್ಮ ನಡುವೆಯೇ ಇzನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ.

ಅಂತೆಯೇ ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕದ ಅಧ್ಯಕ್ಷನಿಂದ ೪ ವರ್ಷಗಳ ಕಾಲ ಆಡಳಿತಕ್ಕೊಳಪಟ್ಟು, ಅದರ ಸಾಧಕ ಬಾಧಕಗಳನ್ನು
ಅವಲೋಕಿಸುತ್ತಾ, ಮುಂದೆ ನಡೆಯುವ ಚುನಾವಣೆಯಲ್ಲಿ ಆತ ನಮಗೆ ನಾಯಕನಾಗಬೇಕೋ ಅಥವಾ ಬೇಡವೋ ಎಂದು ನಿರ್ಧರಿಸುವ ಮೊದಲೇ ಟ್ರಂಪ್‌ನ್ನು ಕೊನೆಗಾಣಿಸುವ ಅವಕಾಶಕ್ಕಾಗಿ ಕಾಯ್ದು ಕುಳಿತ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತ ನಮ್ಮ ನಡುವೆಯೇ ಇದ್ದಾನೆ ಎಂಬುದು ತಂತ್ರಜ್ಞಾನದ ನಾಗಾಲೋಟದಲ್ಲಿ ಓಡುತ್ತಿರುವ ಈ ಯುಗದಲ್ಲಿಯೂ ಯಾರಿಗೂ ಗೊತ್ತಾಗಲೇ ಇಲ್ಲ!

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಯಕನೊಬ್ಬನ ಆಡಳಿತ ಸಮಂಜಸವೆನಿಸಿದಲ್ಲಿ ಆತನನ್ನು ಮತದಾನವೆಂಬ ಶಕ್ತಿಶಾಲಿ ಅಸ್ತ್ರದಿಂದ ದೂರವಿಡುವ ಹಕ್ಕು ಸಂವಿಧಾನಬದ್ಧ ಅಧಿಕಾರ ನಡೆಸುತ್ತಿರುವ ಎಲ್ಲಾ ರಾಷ್ಟ್ರದ ಸರ್ವ ಪ್ರಜೆಗಳಿಗೂ ಇರುತ್ತದೆ. ಹಾಗಾಗಿ ತಮಗೆ ಸೂಕ್ತ ನಾಯಕನಲ್ಲವೆನಿಸಿದಲ್ಲಿ ಆತನನ್ನು ಮತದಾರ ತನ್ನ ನೈತಿಕ ಪ್ರಜ್ಞೆಯಿಂದ ದೂರವಿಡಬೇಕೆ ಹೊರತು, ಸಮಾಜಘಾತುಕ ವ್ಯಕ್ತಿಗಳಂತೆ ಆತನನ್ನು ಗುಂಡಿಟ್ಟು ಕೊಲ್ಲುವುದು ಅತ್ಯಂತ ಅಮಾನವೀಯ ಎಂದೆನಿಸಿಕೊಳ್ಳುತ್ತದೆ.

ಶಿಕ್ಷಣ, ತಾಂತ್ರಿಕ ಹಾಗೂ ಇನ್ನಿತರ ರಂಗದಲ್ಲಿ ಮುಂದಿರುವ ರಾಷ್ಟ್ರಗಳಲ್ಲಿ ವಿದ್ಯಾವಂತರೇ ಇಂತಹ ಹೇಯಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಶೊಚನೀಯ ವಿಚಾರ. ಶಾಲಾ ಕಾಲೇಜುಗಳಲ್ಲಿ ಲಕ್ಷಗಟ್ಟಲೆ ಶುಲ್ಕವನ್ನು ತುಂಬಿ, ಶೈಕ್ಷಣಿಕವಾಗಿ ವಿದ್ಯಾವಂತರಾಗಿ, ಮುಂದೊಂದು ದಿನ ತನ್ನ ಮಗು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯಬೇಕೆಂಬುಂದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಆದರೆ ನೈತಿಕ ಪ್ರಜ್ಞೆಯನ್ನು ಎಚ್ಚರಿಸುವ
ಶಿಕ್ಷಣದ ಬೀಜ ಬಿತ್ತುವ ಕಾರ್ಯ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು.

ವಿದ್ಯಾರ್ಥಿ ಜೀವನದ ಪ್ರತಿಯೊಂದು ಹಂತಗಳಲ್ಲಿ ನೀರೆರೆದು ಪೋಷಿಸುವರು ಸಿಕ್ಕಾಗ ಮುಂದೊಂದು ದಿನ ನೈತಿಕ ಪ್ರಜ್ಞೆಯು ಹೆಮ್ಮರವಾಗಿ ತಲೆ ಎತ್ತಿ ನಿಲ್ಲುವುದರಲ್ಲಿ ಸಂಶಯವಿಲ್ಲ. ಇತ್ತೀಚಿನ ಭಯೋತ್ಪಾದನೆ, ಉಗ್ರ ಸಂಘಟನೆಯಂತಹ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಬಹುತೇಕರು ವಿದ್ಯಾವಂತರೇ ಆಗಿರುವುದು ಖೇದಕರ ಸಂಗತಿ. ಹಾಗಾಗಿ ದೇಶದಲ್ಲಿ ನಾಗರಿಕ ಪ್ರಜ್ಞೆ ಹಾಗೂ ಸಮಷ್ಟಿಯ ಪ್ರeಯನ್ನು ಬೆಳೆಸುವಂತಹ ಉದಾರ ಮನೋಭಾವ ವನ್ನು ಬೆಳೆಸುವ ಶಿಕ್ಷಣವನ್ನು ಮಕ್ಕಳಿಗೆ ಕೊಟ್ಟಲ್ಲಿ ಇಂತಹ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕಬಹುದು.

ಪ್ರಥಮ ಮಹಿಳಾ ಪ್ರಧಾನಿ ಎಂದು ಗುರುತಿಸಿ ಕೊಂಡು, ದೇಶದ ನಾರಿಶಕ್ತಿಯನ್ನು ಎತ್ತಿ ಹಿಡಿಯುವ ಮೂಲಕ ದೇಶದಲ್ಲಿ ಅನೇಕ ಬದಲಾವಣೆಗಳನ್ನು ತಂದಂತಹ ದಿಟ್ಟ ಮಹಿಳೆ ಇಂದಿರಾ ಗಾಂಧಿಗೂ ಈ ತರಹದ ಆಕಸ್ಮಿಕ ಸಾವು ತಪ್ಪಿರಲಿಲ್ಲ. ದೇಶದ ಅಭಿ ವೃದ್ಧಿಯ ಬಗ್ಗೆ ಹತ್ತಾರು ಕನಸು ಕಟ್ಟಿಕೊಂಡು ಚುನಾವಣಾ ಪ್ರಚಾರ ದಲ್ಲಿದ್ದ ರಾಜೀವ್ ಗಾಂಧಿಯವರೂ ಕೂಡ ಇದೇ ರೀತಿ ತಮ್ಮ ಪ್ರಾಣವನ್ನು ಅರ್ಪಿಸುವಂತಾಯಿತು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ನಾಯಕತ್ವವನ್ನು ವಿರೋಧಿಸಲು ಗುಂಡೇಟಿನಂತಹ ನೀಚ ಮಾಧ್ಯಮಗಳನ್ನು ಬಳಸಿಕೊಳ್ಳುವ ಯುವ ಸಮೂಹವು ರೂಪು ಗೊಳ್ಳುತ್ತಿರುವುದು ಭವಿಷ್ಯಕ್ಕೆ ಅತ್ಯಂತ ಮಾರಕ ಸಂಗತಿಯಾಗು ವುದಂತೂ ನಿಜ.

ಒಬ್ಬ ನಾಯಕನ ಗುಂಡೇಟಿನ ಸಾವು ಆ ವ್ಯಕ್ತಿಯ ಸಾವು ಮಾತ್ರ ಎಂದೆನಿಸಿಕೊಳ್ಳದೆ, ಇಡೀ ವ್ಯವಸ್ಥೆಯ ಲೋಪ ದೋಷ, ಜನರ ಮಾನಸಿಕ ಸ್ಥಿತಿಗತಿ ಎಲ್ಲವನ್ನೂ ಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ನೈತಿಕ ಪ್ರಜ್ಞೆಯನ್ನೂ ಮೀರಿ ಕ್ರೌರ್ಯದ ಗುಂಡೇಟುಗಳು ಹಾರದಿರಲಿ ಎಂಬುದು ಆರೋಗ್ಯಕರ ಸಮಾಜದ ಆಶಯವಾಗಿರಬೇಕಿದೆ.