Saturday, 14th December 2024

ಚೇತರಿಕೆ, ಸೇರ್ಪಡೆಯ ನವ ಭಾರತಕ್ಕೆ ಸುಧಾರಣೆಯ ಮರುಹೊಂದಿಕೆ

ಅಭಿಪ್ರಾಯ

ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ

ಭಾರತದ ಆರ್ಥಿಕತೆಯು ತ್ವರಿತ ಬದಲಾವಣೆಗಳನ್ನು ಕಾಣುತ್ತಿದೆ, ವಿಶೇಷವಾಗಿ ಕಳೆದ ಏಳು ವರ್ಷಗಳು ಪರಿವರ್ತನೆಯ ಅವಧಿಯಾಗಿದೆ. ತೊಂದರೆಗಳು ಕಡಿಮೆ ಇರುವ ಸೌಮ್ಯ ಬದಲಾವಣೆಗಳನ್ನು ತರುವಷ್ಟು ಕಾಲಾವಕಾಶ ನಮಗಿಲ್ಲ. ಭಾರತವನ್ನು ನಿತ್ರಾಣಗೊಳಿಸುವ ಸಮಾಜವಾದದಿಂದ ಮುಕ್ತ ಮಾರುಕಟ್ಟೆಯ ಆರ್ಥಿಕತೆಯತ್ತ ಮುನ್ನಡೆಸುವುದು ಬಹುದೊಡ್ಡ ಕೆಲಸವಾಗಿದೆ.

ಪರವಾನಗಿ ಕೋಟಾ ರಾಜ್ ದ ಅತಿರೇಕಕ್ಕೆ ತಿರುಗಿದ ಸಮಾಜವಾದವು ಭಾರತದ ಉದ್ಯಮಿಗಳನ್ನು ಸಂಕೋಲೆ ಗಳಿಂದ ಬಂಧಿಸಿತು, ದೇಶದ ಆಸ್ತಿ ಮತ್ತು ಸಂಪನ್ಮೂಲಗಳು ನಷ್ವ ಅನುಭವಿಸಿದವು ಮತ್ತು ಹತಾಶೆ ಕವಿಯಿತು. 1991ರಲ್ಲಿ ನಮ್ಮ ಆರ್ಥಿಕತೆಯನ್ನು ಮುಕ್ತಗೊಳಿಸಲು ಪ್ರಾರಂಭಿಸಿದರೂ, ನಂತರ ಹಲವಾರು ಅಗತ್ಯ ಅನು ಸರಣಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಇದು ‘ಮುಕ್ತ ಆರ್ಥಿಕತೆ’ಯ ಪರಿಣಾಮ ದುರ್ಬಲವಾಗಲು ಕಾರಣ ವಾಯಿತು.

ಒಂದು ದಶಕದ ನಂತರ ಕೆಲವು ಪ್ರಯತ್ನಗಳು ಪ್ರಾರಂಭವಾದವು. ಆದರೆ, ಸರಕಾರಗಳು ಪದೇಪದೆ ಬದಲಾದವು. ದುರದೃಷ್ಟವಶಾತ್, ಇದರಲ್ಲಿಯೇ ಒಂದು ದಶಕ ಕಳೆದುಹೋಯಿತು. ಇದು ನಮ್ಮನ್ನು ಸಾಕಷ್ಟು ಹಿಂದಕ್ಕೆ ತಳ್ಳಿತು. ಇದರಿಂದ ನಾವು ಐದು ದುರ್ಬಲ ಆರ್ಥಿಕತೆಗಳಲ್ಲಿ ಒಬ್ಬರಾದೆವು. 2014ರಲ್ಲಿ ಸರಕಾರ ಬದಲಾದಾಗ, ಸತತ ಮೂರು ಅವಧಿಯ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಪ್ರಧಾನಿಯಾಗಿ ನವ ಭಾರತ ನಿರ್ಮಾಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಹಿಂದೆ ಯುವಕರು ಉದ್ಯಮಿಗಳಾಗಿ ಸೇವೆ ಸಲ್ಲಿಸಲು ಮುಂದಾ ಗುತ್ತಿದ್ದರೂ ಅಪಾರ ಜನಸಂಖ್ಯೆಯೂ ಮಾರುಕಟ್ಟೆಯನ್ನು ಒದಗಿಸಿತು. ಅವರು ದೇಶದಿಂದ ದೂರವಿದ್ದು ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದರೂ ಅವರ ಆವಿಷ್ಕಾರಗಳನ್ನು ಗುರುತಿಸಲಿಲ್ಲ.

ತಂತ್ರಜ್ಞಾನ ಮತ್ತು ಡಿಜಿಟಲೀಕರಣವು ದಕ್ಷತೆಯನ್ನು ತರುತ್ತವೆ. ನವ ಭಾರತದಲ್ಲಿ, ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಗಳಾದ ನೀರು, ನೈರ್ಮಲ್ಯ, ವಸತಿ ಮತ್ತು ಆರೋಗ್ಯ ಸೌಲಭ್ಯವನ್ನು ಒದಗಿಸಲಾಗುತ್ತದೆ. ನವ ಭಾರತದ ನೀತಿಗಳು ಜನರನ್ನು ಸಬಲೀಕರಣಗೊಳಿಸುತ್ತವೆ. ಹಲವು ದಶಕಗಳ ಪ್ರಯತ್ನದ
ನಂತರವೂ, ಹಕ್ಕುಗಳನ್ನಾಧರಿಸಿ ರೂಪಿಸಿದ ನೀತಿಗಳು ಬಡತನ, ನಿರುದ್ಯೋಗ ಮತ್ತು ಸೌಲಭ್ಯಗಳ ಅಭಾವದ ವಿಷವರ್ತುಲವನ್ನು ಮುರಿಯಲು ವಿಫಲವಾಗಿವೆ.
ಹಳೆಯ ಭಾರತದಲ್ಲಿ ನಮ್ಮ ಸಾಂಪ್ರದಾಯಿಕ ಕೌಶಲಗಳು ಮತ್ತು ಕುಶಲಕರ್ಮಿಗಳನ್ನು ವೈಭವೀಕರಿಸಿದ ಪಂಜರದಲ್ಲಿ ಇರಿಸಿದ್ದರಿಂದ, ಅವರು ಬೆಳೆಯುತ್ತಿದ್ದ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ರಕ್ಷಣೆಯ ನೆಪದಲ್ಲಿ ಅವರನ್ನು ‘ಸಂರಕ್ಷಣೆಯ ಪಟ್ಟಿ’ಯಲ್ಲಿ ಇರಿಸಲಾಯಿತು. ಆ ಮೂಲಕ ಅವರಿಗೆ ಮಾರುಕಟ್ಟೆ ಪ್ರವೇಶ ಮತ್ತು ಸ್ಪರ್ಧೆಯನ್ನು ನಿರ್ಬಂಧಿಸಲಾಯಿತು. ಇದು ಸಾಮ್ರಾಜ್ಯಶಾಹಿಯು ಅವರನ್ನು ಹತ್ತಿಕ್ಕುವ ಮೊದಲು ವಿಶ್ವ ಮಾರುಕಟ್ಟೆಗಳನ್ನು
ಆಳಿದವರಿಗೆ ಮಾಡಿದ ಅಪಚಾರವಾಯಿತು!

ನಮ್ಮ ರೈತರು ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳ ನಡುವೆಯೂ ಸಮೃದ್ಧ ಬೆಳೆ ಬೆಳೆಯುತ್ತಿದ್ದರು. ಅವರಿಗೆ ಸಿಗಬೇಕಾದ ನ್ಯಾಯಯುತ ಆದಾಯವನ್ನು ಅನೇಕ ನಿರ್ಬಂಧಗಳು ಕಸಿದುಕೊಂಡವು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ಬಹುತೇಕ ಜಿಗೊಂದರಂತೆ ಸ್ಥಳೀಯ ಉತ್ಪನ್ನಗಳು ಇದ್ದವು. ಅವುಗಳನ್ನು ನಿರ್ಲಕ್ಷಿಸಲಾಯಿತು. ಕೌಶಲ್ಯಗಳು, ಕುಶಲಕರ್ಮಿಗಳು, ಸ್ಥಳೀಯ ಉತ್ಪನ್ನಗಳು, ಡೈರಿ ಮತ್ತು ಜವಳಿ ಹೀಗೆ ಎಲ್ಲದಕ್ಕೂ ಪುನಶ್ಚೇತನ ಮತ್ತು ಪುನರುಜ್ಜೀವನದ
ಅಗತ್ಯವಿದೆ. ಹಳೆಯ ಭಾರತವು ತನ್ನ ಬಣ್ಣ ಮತ್ತು ಪರಿಮಳವನ್ನು ಬೇರುಗಳಿಗೆ ತುಂಬುವ ಮೂಲಕ ನವ ಭಾರತವನ್ನು ಸದೃಢಗೊಳಿಸಬೇಕಿತ್ತು.

ಹಳೆಯ ಭಾರತವು ‘ಸಂರಕ್ಷಣೆ’ಯ ನೆಪ ಅಥವಾ ನಿರ್ಲಕ್ಷ್ಯದಿಂದಾಗಿ ಹಿಂದುಳಿಯಿತು. ಸಮಾಜವಾದಿ ಭಾರತದ ಉತ್ಪ್ರೇಕ್ಷಿತ ನಂಬಿಕೆ ಏನಾಗಿತ್ತೆಂದರೆ, ಸರಕಾರವು ಬಹುತೇಕ ಎಲ್ಲವನ್ನೂ ಮಾಡಬಹುದು ಮತ್ತು ತಲುಪಿಸಬಹುದು. ಸ್ಟೀಲ್, ಸಿಮೆಂಟ್, ಕೈಗಡಿಯಾರಗಳು, ದೂರವಾಣಿಗಳು, ಟೈರುಗಳು, ಬಟ್ಟೆ, ಔಷಧಗಳು, ಕಾಂಡೋಮ್‌ಗಳು, ಸ್ಕೂಟರ್‌ಗಳು, ಕಾರುಗಳು, ಹಡಗುಗಳು ಅಷ್ಟೇ ಏಕೆ ಬ್ರೆಡ್ ಕೂಡ ಸರಕಾರಿ ಘಟಕಗಳಲ್ಲಿ ತಯಾರಾಗುತ್ತಿತ್ತು. ಸರಕಾರವು
ಬ್ಯಾಂಕಿಂಗ್, ವಿಮೆ, ಸಂಸ್ಕರಣಾಗಾರಗಳು, ಗಣಿಗಾರಿಕೆ, ಹೋಟೆಲ್‌ಗಳು, ಆತಿಥ್ಯ, ಪ್ರವಾಸ ಸೇವೆ, ವಿಮಾನ ಸೇವೆ ಮತ್ತು ದೂರವಾಣಿ ಕ್ಷೇತ್ರದಲ್ಲಿಯೂ ಇತ್ತು. ಖಾಸಗಿ ವಲಯದ ದಕ್ಷತೆಯನ್ನು ಉಪಯೋಗಿಸಿಕೊಳ್ಳಲು ಇದರಿಂದ ದೂರ ಸರಿಯುವುದು ಮುಖ್ಯವಾಗಿದೆ.

ಕಾನೂನುಬದ್ಧ ಲಾಭ ಗಳಿಕೆಗೆ ಮಾನ್ಯತೆ, ಉದ್ಯಮವನ್ನು ಉದ್ಯೋಗ ಮತ್ತು ಸಂಪತ್ತಿನ ಸೃಷ್ಟಿಕರ್ತರು ಎಂದು ಗೌರವಿಸಲು ನೀತಿ ಬೆಂಬಲದ ಅಗತ್ಯವಿದೆ.
ಭಾರತವು ಪರಿವರ್ತನೆಯ ಹಂತವನ್ನು ನೋಡುತ್ತಿದೆ. ಭಾರತೀಯತೆ-ನೀತಿ-ಸೇರ್ಪಡೆ-ಮಾರುಕಟ್ಟೆ-ಆರ್ಥಿಕತೆಯ ಕಡೆಗೆ ಸ್ಪಷ್ಟವಾದ ಮುನ್ನಡೆಯನ್ನು ಬಯಸುತ್ತಿದೆ. ಕಡಿವಾಣವಿಲ್ಲದ ವ್ಯಾಪಾರೋದ್ಯಮ ಅಥವಾ ಕಟುಕತನದ ಬಂಡವಾಳಶಾಹಿಯನ್ನಲ್ಲ.

ಇದರ ಶ್ರೇಷ್ಠ ತತ್ವವೆಂದರೆ: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್’. ಮೋದಿ 1.0 ಅವಧಿಯಲ್ಲಿ ಸುಧಾರಣೆಗಳು, ಪುನಶ್ಚೇತನ ಮತ್ತು ಪುನರುಜ್ಜೀವನ ಕೆಲಸಗಳು ಪ್ರವಾಹದೋಪಾದಿಯಲ್ಲಿ ಆರಂಭವಾದವು. ಜನ್ ಧನ್ ಯೋಜನೆ, ಆಧಾರ್ ಬಲವರ್ಧನೆ ಮತ್ತು ಮೊಬೈಲ್ ಬಳಕೆ (ಜೆಎಎಂ ಟ್ರಿನಿಟಿ) ಬಡವರಿಗೆ ಮೊದಲ ಲಾಭವನ್ನು ನೀಡಿತು. ಅರ್ಹರಿಗೆ ಪಿಂಚಣಿ, ಪಡಿತರ, ಇಂಧನ, ಸಮ್ಮಾನ ನಿಧಿ ತಲುಪಿಸಲು ನೇರ ಲಾಭ ವರ್ಗಾವಣೆ (ಡಿಬಿಟಿ) ಯನ್ನು ಅನುಸರಿಸಲಾಯಿತು. ಈ ಕ್ರಮದಿಂದಾದ ಬಹು ದೊಡ್ಡ ಪ್ರಯೋಜನವೆಂದರೆ ತೆರಿಗೆದಾರರ ಹಣದ ಉಳಿತಾಯ.

ಎಲ್ಲಾ ನಕಲಿ ಖಾತೆಗಳನ್ನು ತೆಗೆದು ಹಾಕಲಾಯಿತು ಮತ್ತು ಅಪಾರ ಪ್ರಮಾಣದ ಹಣ ಲಪಟಾಯಿಸುವುದನ್ನು ನಿಲ್ಲಿಸಲಾಯಿತು. ಸಬ್ಸಿಡಿಯಿಂದ ಅನರ್ಹ ಬಳಕೆ ದಾರರನ್ನು ತೆಗೆದುಹಾಕುವ ಮೂಲಕ ಉಜ್ವಲಾ ಯೋಜನೆಯು ಹಲವು ಗುರಿಗಳನ್ನು ಸಾಧಿಸಲು ಸಹಾಯ ಮಾಡಿತು. ಬಡವರಿಗೆ ಸುರಕ್ಷಿತ ಮತ್ತು ಆರೋಗ್ಯಕರ ಇಂಧನವನ್ನು ನಿರಾಕರಿಸುವಂತಿಲ್ಲ. ದೇಶದಾದ್ಯಂತ ಇದ್ದ ಹಲವಾರು ಪರೋಕ್ಷ ತೆರಿಗೆಗಳನ್ನು ಸರಕು ಮತ್ತು ಸೇವಾ ತೆರಿಗೆಯ ಮೂಲಕ ಒಂದು ತೆರಿಗೆಯಲ್ಲಿ ತರಲಾಯಿತು. ದಿವಾಳಿತನವನ್ನು ನಿರ್ಣಯಿಸಲು ಪ್ರಮುಖ ಕ್ರಮವಾಗಿ ಋಣಭಾರ ಮತ್ತು ದಿವಾಳಿತನ ಸಂಹಿತೆಯನ್ನು ತರಲಾಗಿದೆ.

ಹಣಕಾಸು ವಲಯದ ಸುಧಾರಣೆಯು ನಾಲ್ಕು ಆರ್ ತತ್ತ್ವದಿಂದ ಆರಂಭವಾಯಿತು: ಅವುಗಳೆಂದರೆ, ಮಾನ್ಯತೆ (ರೆಕಗ್ನಿಷನ್), ನಿರ್ಣಯ (ರೆಸುಲ್ಯೂಷನ್), ಮರು ಬಂಡವಾಳೀಕರಣ (ರಿಕ್ಯಾಪಿಟಲೈಸೇಷನ್) ಮತ್ತು ಸುಧಾರಣೆ (ರಿಫಾರ್ಮ್). ಅನುತ್ಪಾದಕ ಆಸ್ತಿಗಳ (ಎನ್ ಪಿಎ) ಪರಂಪರಾಗತ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಇಂದು ಬಹುತೇಕ ಎಲ್ಲಾ ಬ್ಯಾಂಕುಗಳು ತ್ವರಿತ ಸುಧಾರಣಾ ಕ್ರಮಗಳಿಂದ ಹೊರಗುಳಿದಿವೆ. ಅವುಗಳಿಗೆ ಕಾಲಕಾಲಕ್ಕೆ ಮರು ಬಂಡವಾಳೀ ಕರಣ ಮಾಡಲಾಗಿದೆ. ಈಗ ಅವುಗಳು ಸಹ ಮಾರುಕಟ್ಟೆಯಲ್ಲಿ ನಿಧಿ ಸಂಗ್ರಹಿಸುತ್ತಿವೆ.

ಜಾಗತಿಕ ಸಾಂಕ್ರಾಮಿಕದ ನಡುವೆಯೂ, ಮೋದಿ 2.0 ಅವಧಿಯಲ್ಲಿ ಆರ್ಥಿಕ ಪರಿವರ್ತನೆಯು ಮುಂದುವರಿಯುತ್ತಿದೆ. ನವೆಂಬರ್ 2020 ರಲ್ಲಿ, ಬ್ಲೂಮ್ಬರ್ಗ್ ಹೊಸ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಕೋವಿಡ್ –19 ಸಾಂಕ್ರಾಮಿಕ ರೋಗವು ದೊಡ್ಡ ಸವಾಲುಗಳನ್ನು ಒಡ್ಡಿದೆ.
ಇಡೀ ಪ್ರಪಂಚದ ಮುಂದಿರುವ ದೊಡ್ಡ ಪ್ರಶ್ನೆ ಎಂದರೆ ಮತ್ತೆ ಆರಂಭಿಸುವುದು ಹೇಗೆ? ಮರುಹೊಂದಿಸದೆ ಮರು ಆರಂಭ ಸಾಧ್ಯವಿಲ್ಲ. ಮನಸ್ಥಿತಿಯ ಮರು ಹೊಂದಿಸುವಿಕೆ.

ಪ್ರಕ್ರಿಯೆಗಳ ಮರುಹೊಂದಿಸುವಿಕೆ. ಮತ್ತು ಅಭ್ಯಾಸಗಳ ಮರುಹೊಂದಿಸುವಿಕೆ ಅಗತ್ಯವಾಗಿದೆ ಎಂದು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಯಾರೂ ಹಸಿವಿ ನಿಂದ ಬಳಲದಂತೆ ನೋಡಿಕೊಳ್ಳುವುದು ಆದ್ಯತೆಯಾಗಿತ್ತು. ಇದರ ಪರಿಣಾಮವಾಗಿ ಎಂಟು ತಿಂಗಳುಗಳವರೆಗೆ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ, ಜತೆಗೆ 3 ಸಿಲಿಂಡರ್‌ಗಳವರೆಗೆ ಅಡುಗೆ ಅನಿಲ ಮತ್ತು ತುರ್ತು ಖರ್ಚುಗಳಿಗೆ ಸ್ವಲ್ಪ ಹಣ ನೀಡಲಾಯಿತು. ದಿವ್ಯಾಂಗರು, ಕಟ್ಟಡ ಕಾರ್ಮಿಕರು ಮತ್ತು ಬಡ ಹಿರಿಯ ನಾಗರಿಕರಿಗೆ ಪರಿಹಾರ ನೀಡಲಾಗಿದೆ. ನಾಲ್ಕು ಆತ್ಮನಿರ್ಭರ ಭಾರತ್ ಘೋಷಣೆಗಳ ಮೂಲಕ ಸಣ್ಣ ಮತ್ತು ಮಧ್ಯಮ
ಉದ್ಯಮಗಳು, ವ್ಯಾಪಾರಿಗಳು ಮತ್ತು ಸಣ್ಣ ಉದ್ಯೋಗಿಗಳಿಗೆ ಸಕಾಲದಲ್ಲಿ ಬೆಂಬಲ ಒದಗಿಸಲಾಯಿತು.

ಕೈಗೊಂಡ ವ್ಯವಸ್ಥಿತ ಸುಧಾರಣೆಗಳ ರಭಸ ಕೂಡ ಅಷ್ಟೇ ಗಮನಾರ್ಹವಾಗಿದೆ. ಮೋದಿ 2.0ರ ಮೊದಲ ಬಜೆಟ್ ನಂತರ ಕಾರ್ಪೊರೇಟ್ ತೆರಿಗೆ ದರ ಇಳಿಸುವ ಬಗ್ಗೆ ನಿರ್ಧಾರವಾಗಿತ್ತು. ಹೊಸ ಕಂಪನಿಗಳಿಗೆ ದರವನ್ನು ಶೇ.15 ಮತ್ತು ಪ್ರಸ್ತುತ ಇರುವ ಕಂಪನಿಗಳಿಗೆ ಶೇ.22ಕ್ಕೆ ತರಲಾಗಿದೆ. ಕಂಪನಿಗಳಿಗೆ ಕನಿಷ್ಠ ಪರ್ಯಾಯ ತೆರಿಗೆ (ಎಂಎಟಿ)ಯಿಂದ ವಿನಾಯಿತಿ ನೀಡಲಾಗಿದೆ. ರೈತರ ಸಬಲೀಕರಣಕ್ಕಾಗಿ ಮೂರು ಕೃಷಿ ಸುಧಾರಣಾ ಕಾಯಿದೆಗಳನ್ನು ಅಂಗೀಕರಿಸಲಾಗಿದೆ.
ಈಗ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವ ಖರೀದಿದಾರ ಮತ್ತು ಬೆಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಾಂಕ್ರಾಮಿಕ ಸಮಯದಲ್ಲಿ ಬ್ಯಾಂಕುಗಳ ವಿಲೀನ ನಡೆಯಿತು. 2017ರಲ್ಲಿದ್ದ 27 ಸಾರ್ವಜನಿಕ ವಲಯದ ಬ್ಯಾಂಕುಗಳು ಈಗ 12 ಮಾತ್ರ ಇವೆ ರಾಷ್ಟ್ರೀಯ ಆಸ್ತಿ ಪುನರ್ ನಿರ್ಮಾಣ ಕಂಪನಿ ಮತ್ತು ಭಾರತದ ಸಾಲ ಪುನರ್‌ನಿರ್ಮಾಣ ಕಂಪನಿಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಗಳು ವಾಣಿಜ್ಯ ಬ್ಯಾಂಕುಗಳ ಅನುತ್ಪಾದಕ ಆಸ್ತಿಯನ್ನು ನಿವಾರಿಸುತ್ತವೆ ಮತ್ತು ಬ್ಯಾಂಕುಗಳಿಗೆ ಗರಿಷ್ಠ ಮೌಲ್ಯಗಳನ್ನು ಒದಗಿಸುತ್ತವೆ.

ಬ್ಯಾಂಕುಗಳ ಮೌಲ್ಯವನ್ನು ಖಚಿತಪಡಿಸಿಕೊಳ್ಳಲು, ಸರಕಾರವು ಬ್ಯಾಕ್ ಸ್ಟಾಪ್ ವ್ಯವಸ್ಥೆಯನ್ನು ಒದಗಿಸುತ್ತದೆ. ಅಪಾಯದ ಸೂಕ್ತ ಮೌಲ್ಯಮಾಪನ ಮತ್ತು ದೀರ್ಘಾವಧಿಯ ಬಂಡವಾಳದೊಂದಿಗೆ ದೀರ್ಘಕಾಲೀನ ಮೂಲಸೌಕರ್ಯ ನಿಧಿಯು ಈಗ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ ಮೂಲಕ ಲಭ್ಯವಿದೆ. ಕಾನೂನಿನ ಮೂಲಕ ಖಾಸಗಿ ವಲಯದ ಅಭಿವೃದ್ಧಿ ಹೂಡಿಕೆ ಸಂಸ್ಥೆಗಳಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ. ಒಟ್ಟು 112 ಲಕ್ಷ ಕೋಟಿ ರು.ಗಳಷ್ಟು ಬಂಡವಾಳ ವೆಚ್ಚದ ಯೋಜನೆಗಳನ್ನು ಘೋಷಿಸಲಾಗಿದೆ ಮತ್ತು ಇವುಗಳ ಪ್ರಗತಿಯ ಸ್ಥಿತಿಗತಿಯ ವಿವರ ನೀಡಲು ಒಂದು ಪೋರ್ಟಲ್ ಆರಂಭಿಸಲಾಗಿದೆ.

ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು 13 ಚಾಂಪಿಯನ್ ಕ್ಷೇತ್ರಗಳಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ(ಪಿಎಲ್‌ಐ) ಯನ್ನು ಪರಿಚಯಿಸಲಾಗಿದೆ. ಜಾಗತಿಕ ಪೂರೈಕೆ ಸರಪಳಿ ಮರುಹೊಂದಿಕೆಯ ಹಿನ್ನೆಲೆಯಲ್ಲಿ, ಈ ಯೋಜನೆಯೂ ಮೊಬೈಲ, ವೈದ್ಯಕೀಯ ಸಾಧನಗಳು, ಎಪಿಐ/ಕೆಎಸ್‌ಎಂ ತಯಾರಿಕೆಯಲ್ಲಿ ಔಷಧ, ಆಹಾರ ಸಂಸ್ಕರಣೆ, ಜವಳಿ ಇತ್ಯಾದಿ ವಲಯಗಳಲ್ಲಿ ಹೂಡಿಕೆಗಳನ್ನು
ಆಕರ್ಷಿಸಿದೆ.

ಆರ್ಥಿಕತೆಗೆ ಮಹತ್ವದ್ದಾಗಿರುವ. ದೂರಸಂಪರ್ಕ ಮತ್ತು ಇಂಧನ ವಲಯಗಳಿಗೆ ಬಹುನಿರೀಕ್ಷಿತ ಸುಧಾರಣೆಗಳನ್ನು ತರಲಾಗಿದೆ. 202Oರ ಬಜೆಟ್‌ನಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಮೇಲೆ ಒಂದು ನೀತಿಯನ್ನು ಘೋಷಿಸಲಾಯಿತು. ಇದು ಸಾರ್ವಜನಿಕ ಉದ್ಯಮಗಳ ಕನಿಷ್ಠ ಉಪಸ್ಥಿತಿಯನ್ನು ಮಾತ್ರ ಅನುಮತಿಸುವ ಆಯಕಟ್ಟಿನ ವಲಯಗಳನ್ನು ಗುರುತಿಸಿದೆ. ಸಮಾನವಾಗಿ, ಎಲ್ಲಾ ಕ್ಷೇತ್ರಗಳು ಈಗ ಖಾಸಗಿಯವರಿಗೆ ಮುಕ್ತವಾಗಿವೆ. ಸಾಮಾನ್ಯ ವಿಮಾ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ವಿಮಾ ವಲಯದಲ್ಲಿ ಶೇ.74 ಎಫ್ಡಿಐಗೆ ಸ್ವಯಂಚಾಲಿತ ಮಾರ್ಗದ ಮೂಲಕ ಅನುಮತಿ ನೀಡಲಾಗಿದೆ. ಜೀವ ವಿಮಾ ನಿಗಮವು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬಿಡುಗಡೆ ಮಾಡಲಿದೆ.

ಖಾತೆ ಸಂಗ್ರಹಣೆ (ದತ್ತಾಂಶ ಸಂಗ್ರಹಣೆ)ಗಾಗಿ ಒಪ್ಪಿಗೆ ಆಧಾರಿತ ಚೌಕಟ್ಟೊಂದನ್ನು ಪರಿಚಯಿಸಲಾಗಿದೆ. ಬ್ಯಾಂಕ್ ಗ್ರಾಹಕರು ಲಭ್ಯವಿರುವ ಪೋರ್ಟಲ್‌ನಿಂದ ಹಲವಾರು ಸೇವಾ ಪೂರೈಕೆದಾರರಿಂದ ವಿವಿಧ ಹಣಕಾಸು ಸೇವೆಗಳನ್ನು ಪಡೆಯಬಹುದು. ಗ್ರಾಹಕರು ತಮ್ಮ ಡೇಟಾವನ್ನು ಅವರು ಆಯ್ಕೆ ಮಾಡಿದ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಬಹುದು. ಹಣಕಾಸಿನ ಸೇರ್ಪಡೆ ಮತ್ತು ಸಾಲ ಲಭ್ಯತೆಗೆ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಠೇವಣಿ ವಿಮಾ ಸಾಲ ಖಾತರಿ ಕಾಯಿದೆಗೆ ತಂದಿರುವ ತಿದ್ದುಪಡಿಗಳು ಸಣ್ಣ ಠೇವಣಿದಾರರಿಗೆ ೫ ಲಕ್ಷ ರು. ವಿಮಾ ರಕ್ಷಣೆಯನ್ನು ಒದಗಿಸುತ್ತವೆ.

ಬ್ಯಾಂಕುಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿದ ಸಂದರ್ಭದಲ್ಲಿ ಶೇ.೯೮.೩ ರಷ್ಟು ಠೇವಣಿಗಳು ಇದರ ವ್ಯಾಪ್ತಿಗೆ ಬರುತ್ತವೆ. ನಿರಂಜನ್ ರಾಜಾಧ್ಯಕ್ಷ ಅವರು ಇತ್ತೀಚೆಗೆ ಡಿ ಸೋಟೊ ಎಫೆಕ್ಸ್ (ಮೇಲಾಧಾರ ಹೆಚ್ಚಳವು ಬೃಹತ್ ಸಾಲಗಳು ಅಥವಾ ಕಡಿಮೆ ಬಡ್ಡಿದರಗಳಿಗೆ ಕಾರಣವಾಗುವ) ಕುರಿತು ಬರೆಯುತ್ತಾ, ಸಣ್ಣ ಅನೌಪಚಾರಿಕ ಉದ್ಯಮಗಳಲ್ಲಿ ಕೆಲಸ ಮಾಡುವ ಬಡವರು ಔಪಚಾರಿಕ ಸಾಲ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ ಮತ್ತು ಆದ್ದರಿಂದ ಅವರು ಬಡತನ ದಲ್ಲಿಯೇ ಬದುಕುವಂತಾಗಿದೆ, ಏಕೆಂದರೆ, ಅವರ ಆಸ್ತಿಗಳ ಬಗೆಗಿನ ಅಸ್ಪಷ್ಟ ದಾಖಲೆಗಳಿಂದಾಗಿ ಅವುಗಳನ್ನು ಬ್ಯಾಂಕುಗಳಿಗೆ ಮೇಲಾಧಾರವಾಗಿ ನೀಡಲು
ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.

ಸ್ವಾಮಿತ್ವ ಯೋಜನೆಯು ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಆಸ್ತಿಯ ತುಣುಕುಗಳನ್ನು ಮ್ಯಾಪಿಂಗ್ ಮಾಡುತ್ತದೆ ಮತ್ತು ಹಳ್ಳಿಯ ಭೂಮಿ/ಮನೆ ಮಾಲೀಕ ರಿಗೆ ಹಕ್ಕುಗಳ ದಾಖಲೆಯನ್ನು ಒದಗಿಸುತ್ತದೆ. ಸಾಲದ ಅಲಭ್ಯತೆಯಿಂದಾಗಿ ಬಡತನದ ಚಕ್ರದಲ್ಲಿಯೇ ಸುತ್ತಬೇಕಿದ್ದ ಪರಿಸ್ಥಿತಿಯನ್ನು ಈ ಯೋಜನೆಯ ಮೂಲಕ ನಿವಾರಿಸಲಾಗಿದೆ. ಸ್ವನಿಧಿ, ಮುದ್ರಾ ಮತ್ತು ಸ್ಟ್ಯಾಂಡ್ ಅಪ್ ಎಂಬ ಇತರ ಮೂರು ಯೋಜನೆಗಳೂ ಸಹ ಸಣ್ಣ ಉದ್ಯಮಗಳಿಗೆ ಮೇಲಾಧಾರ ಮುಕ್ತ ಸಾಲ ನೀಡುವುದನ್ನು ಉತ್ತೇಜಿಸುವ ಮೂಲಕ ಬಡವರ ಜೀವನಕ್ಕೆ ಘನತೆ ತಂದುಕೊಟ್ಟಿವೆ. ನಾಯಕತ್ವವು ಜನರೊಂದಿಗೆ ಮತ್ತು ತನ್ನ ಸಬ್ ಕಾ ಸಾಥ್ ತತ್ವದೊಂದಿಗೆ ಸಂಪರ್ಕ ಹೊಂದಿರುವುದರಿಂದ ಮಾತ್ರ ಇದು ಸಾಧ್ಯವಾಗಿದೆ ಮತ್ತು ಇನ್ನೂ ಹೆಚ್ಚಿನದು ಸಾಧ್ಯವಾಗಲಿದೆ.