Sunday, 15th December 2024

ರಾಜಕಾರಣಿಗಳ ಮಮಕಾರ, ಹೊಸಬರ ಹುಟ್ಟಿಗೆ ಸಂಚಕಾರ

ಕುಟುಂಬ ಕಥನ

ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

ಅಧಿಕಾರ ಕೇಂದ್ರೀಕರಣ ಈಗಿನ ರಾಜಕಾರಣಿಗಳ ಸಿದ್ಧಾಂತ. ಅಧಿಕಾರವು ತಮ್ಮ ಕುಟುಂಬವನ್ನು ಬಿಟ್ಟು ಹೊರಗೆ ಹೋಗಲೇಬಾರದು, ಹೊರಗಿನವರು ಬೆಳೆಯಲೇಬಾರದು ಎಂಬುದು ಇವರ ಧೋರಣೆ. ಇಂಥವರ ಪಾಲಿಗೆ ಹೆಗಡೆಯವರು ಮರೆತುಹೋದ ಅಪ್ರಸ್ತುತ ನಾಯಕ ಮತ್ತು ಅವರ ಮೌಲ್ಯಗಳು ಇವರಿಗೆಲ್ಲಾ ಕಡಿಯಲಾಗದ ಕಡಲೇಕಾಯಿ.

ಮೌಲ್ಯಾಧಾರಿತ ರಾಜಕಾರಣಿ ಎನ್ನುವ ಹೆಸರು ಹೊತ್ತಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ, ಸದಾಶಿವನಗರದ ಅವರ ಮನೆಯಲ್ಲಿ ಕೆಲವು
ಬೆಂಬಲಿಗರು ಸೇರಿದ್ದರು. ವಿದ್ಯಾವಂತೆಯೂ, ರಾಜಕಾರಣದಲ್ಲಿ ಸ್ವಲ್ಪಮಟ್ಟಿನ ಆಸಕ್ತಿ ಹೊಂದಿದವರೂ ಆಗಿದ್ದ ಹೆಗಡೆಯವರ ಮಗಳು ಮಮತಾ ಅವರನ್ನು ಆ ಸಲ ಬೆಂಗಳೂರಿನ ಯಾವುದಾದರೂ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸುವುದಕ್ಕೆ ಈ ಬೆಂಬಲಿಗರು ತಮ್ಮ ತಮ್ಮೊಳಗೇ ಮಾತನಾಡಿಕೊಳ್ಳುತ್ತಿದ್ದರು. ಅವರೆಲ್ಲ ಹೀಗೆ ಪ್ರಸ್ತಾಪ ಮಾಡಿದ್ದರ ಹಿಂದೆ ಹೆಗಡೆಯವರನ್ನು ಮೆಚ್ಚಿಸುವ ಉದ್ದೇಶವೂ ಇದ್ದಿರಬಹುದು. ಮಾಳಿಗೆಯಿಂದ ಕೆಳಗಿಳಿದು ಬರುತ್ತಿದ್ದ ಹೆಗಡೆಯವರ ಕಿವಿಗೆ ಇವರುಗಳ ಮಾತು ಕೇಳಿಸಿತು.

‘ನಾನು ಇನ್ನೂ ಬದುಕಿದ್ದೇನೆ. ನನ್ನ ಜೀವ ಇರುವ ತನಕ ನನ್ನ ಕುಟುಂಬದ ಯಾವ ಸದಸ್ಯರೂ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುವುದು ಸಾಧ್ಯವಿಲ್ಲ. ಇದು ನಾನು ನಂಬಿದ ಮೌಲ್ಯಗಳಿಗೆ ತದ್ವಿರುದ್ಧದ ಚಿಂತನೆಯಾಗಿದೆ’ ಎಂದು ಖಡಾಖಂಡಿತ ದನಿಯಲ್ಲಿ ಫರ್ಮಾನು ಹೊರಡಿಸಿಬಿಟ್ಟರು ಹೆಗಡೆ. ಅಲ್ಲೇ ಇದ್ದ ಮಮತಾ ಅವರು ಸೇರಿದಂತೆ ಯಾರಿಗೂ ಹೆಗಡೆಯವರಿಗೆ ಎದುರಾಡುವ ಧೈರ್ಯ ಇರಲಿಲ್ಲ. ಹೀಗಾಗಿ ಮೌನವಾಗಿಯೇ ಸಮ್ಮತಿಸಬೇಕಾಯಿತು. ಅದು ಹೆಗಡೆ  ಯವರ ಹೆಸರಿನಡಿಯಲ್ಲಿ ಯಾರು ಚುನಾವಣೆಗೆ ನಿಂತರೂ ಗೆಲ್ಲುತ್ತಿದ್ದ ಕಾಲವಾದ್ದರಿಂದ, ಅವರ ಮಗಳು ಗೆಲ್ಲುವುದು ಸುಲಿದ ಬಾಳೆಯ ಹಣ್ಣನ್ನು ತಿಂದಷ್ಟೇ ಸುಲಭವಾಗಿತ್ತು. ಮಮತಾ ಅವರಿಗೂ ಒಳಮನಸ್ಸಿನಲ್ಲಿ ಸಣ್ಣದೊಂದು ಆಸೆಯಿತ್ತು.

ಆದರೆ ಹೆಗಡೆಯವರು ಈ ಕುರಿತು ಚರ್ಚೆಗೆ ಆಸ್ಪದವನ್ನೇ ಕೊಡಲಿಲ್ಲ. ತಾವು ನುಡಿದಂತೆ, ತಮ್ಮ ಜೀವನ ಪರ್ಯಂತ ತಮ್ಮ ಕುಟುಂಬದವರು ಯಾರೂ ರಾಜಕೀಯಕ್ಕೆ ಬರಲು ಅವರು ಬಿಡಲಿಲ್ಲ. ‘ನಿಜವಾದ ನಾಯಕ ಎನಿಸಿಕೊಂಡವನು ಮತ್ತಷ್ಟು ನಾಯಕರುಗಳನ್ನು ಹುಟ್ಟುಹಾಕುತ್ತಾನೆಯೇ ಹೊರತು,
ಅನುಯಾಯಿಗಳನ್ನಲ್ಲ’ ಎಂಬುದೊಂದು ಮಾತಿದೆ; ಹೆಗಡೆಯವರು ಈ ಮಾತಿನ ಮೂರ್ತರೂಪವಾಗಿದ್ದರು. ಸಮರ್ಥರೂ ಆಸಕ್ತರೂ ಆಗಿದ್ದ ಅನೇಕ ಯುವಕರನ್ನು ಹೆಕ್ಕಿ ತೆಗೆದು ರಾಜಕೀಯದಲ್ಲಿ ಅವಕಾಶಗಳನ್ನು ಒದಗಿಸಿದ್ದ ಹೆಗಡೆಯವರು, ಅವರುಗಳ ಕೈಹಿಡಿದು ಮಾರ್ಗದರ್ಶನ ಮಾಡಿದರು.

ಜಾತಿ-ಮತಗಳನ್ನು ಲೆಕ್ಕಿಸದೆ, ತೀವ್ರವಾದ ಬದ್ಧತೆ ಇರುವ ಕಾರ್ಯಕರ್ತರಿಗೇ ಮೊದಲು ಮಣೆಹಾಕುತ್ತಿದ್ದ ನಾಯಕತ್ವ ಹೆಗಡೆ ಅವರದ್ದು. ತಮ್ಮಿಂದ
ಸ್ವಜನ ಪಕ್ಷಪಾತ ಆಗಬಾರದು ಎಂಬ ಅನನ್ಯ ಕಾಳಜಿ ಹೆಗಡೆಯವರಲ್ಲಿ ಕೆನೆಗಟ್ಟಿತ್ತು. ಈ ಕಾರಣದಿಂದಾಗಿ, ತಮ್ಮದೇ ಜಿಲ್ಲೆಯವರಾಗಿದ್ದ, ತಮ್ಮದೇ ಜಾತಿಯವರಾಗಿದ್ದ ಹಾಗೂ ರಾಜ್ಯಮಟ್ಟದಲ್ಲಿ ಒಳ್ಳೆಯ ರಾಜಕಾರಣಿಯಾಗುವ ಎಲ್ಲ ಕ್ಷಮತೆಯಿದ್ದ ಪ್ರಮೋದ ಹೆಗಡೆಯಂಥವರನ್ನು ಬೆಳೆಸದೇ ಮಾರು ದೂರದಲ್ಲೇ ಇಟ್ಟಿದ್ದರು ರಾಮಕೃಷ್ಣ ಹೆಗಡೆಯವರು.

ಅಧಿಕಾರದ ವಿಕೇಂದ್ರೀಕರಣ ಹೆಗಡೆಯವರ ರಾಜಕೀಯ ಸಿದ್ಧಾಂತವಾಗಿತ್ತು. ಎಲ್ಲ ವರ್ಗ ಮತ್ತು ಸ್ತರಗಳ ಜನರಿಗೂ ರಾಜಕೀಯ ಅಧಿಕಾರದ ಅವಕಾಶ ಸಿಗಬೇಕು ಎಂಬುದು ಅವರ ವಿಕೇಂದ್ರೀಕರಣ ನೀತಿಯ ತಿರುಳಾಗಿತ್ತು. ಹಾಗಾಗಿ, ಪ್ರಸ್ತುತ ಕರ್ನಾಟಕದ ರಾಜಕೀಯದಲ್ಲಿ ಇರುವ ಹಿರಿಯ ರಾಜಕಾರಣಿಗಳ ಪೈಕಿ ಬಹುತೇಕ ಯಾರ ಹೆಸರು ಹೇಳಿದರೂ, ಅವರೆಲ್ಲಾ ಹೆಗಡೆಯವರಿಂದ ಬೆಳಕಿಗೆ ಬಂದು ಬೆಳೆದವರೇ ಆಗಿರುತ್ತಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಕಾರಣ, ಹೆಗಡೆಯವರ ನಾಯಕತ್ವದ ಜನತಾಪಕ್ಷವು ರಾಜಕಾರಣಿಗಳನ್ನು ಉತ್ಪಾದಿಸುವ ಕಾರ್ಖಾನೆ ಎನಿಸಿಕೊಂಡಿತ್ತು. ನಮ್ಮ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೂಡ ಹೆಗಡೆಯವರ ಈ ಪ್ರತಿಭಾನ್ವೇಷಣೆಯ ಫಲವೇ ಆಗಿದ್ದಾರೆ.

ಆದರೆ ಈಗಿನ ಕೆಲ ರಾಜಕಾರಣಿಗಳು? ‘ನಾವು ಬದುಕಿರುವವರೆಗೂ ನಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರನ್ನೂ ರಾಜಕೀಯಕ್ಕೆ ಬರಲು ಬಿಡಲು ಸಾಧ್ಯವೇ ಇಲ್ಲ’ ಎನ್ನುತ್ತಿದ್ದಾರೆ ಇವರೆಲ್ಲ. ಅಧಿಕಾರ ಕೇಂದ್ರೀಕರಣ ಇವರುಗಳ ಸಿದ್ಧಾಂತ. ಅಧಿಕಾರವು ತಮ್ಮ ಕುಟುಂಬವನ್ನು ಬಿಟ್ಟು ಹೊರಗೆ ಹೋಗಲೇ ಬಾರದು ಎಂಬುದು ಇವರುಗಳ ಧೋರಣೆ. ಇವರುಗಳ ಪಾಲಿಗೆ ಹೆಗಡೆಯವರು ಮರೆತುಹೋದ ಅಪ್ರಸ್ತುತ ನಾಯಕ ಮತ್ತು ಅವರ ಮೌಲ್ಯಗಳು ಇವರಿಗೆಲ್ಲಾ ಕಡಿಯಲಾಗದ ಕಡಲೇಕಾಯಿ. ಈ ಕುಟುಂಬ ರಾಜಕಾರಣವನ್ನು ಕರ್ನಾಟಕದಲ್ಲಿ ಅಲ್ಲಿ-ಇಲ್ಲಿ ಎಂಬಂತೆ ನಾವು ನೋಡುತ್ತಿದ್ದೆವು; ದೇವೇಗೌಡರ ಮತ್ತು ಯಡಿಯೂರಪ್ಪನವರ ಕುಟುಂಬಗಳನ್ನು ಬಿಟ್ಟರೆ ಈ ಪರಿಪಾಠವು ಬೇರೆಲ್ಲೂ ಅಷ್ಟಾಗಿ ಕಾಣುತ್ತಿರಲಿಲ್ಲ. ಆದರೆ ಈ ಬಾರಿಯ ಎಲ್ಲಾ ಪಕ್ಷಗಳ, ಅದರಲ್ಲೂ ಕಾಂಗ್ರೆಸ್‌ನ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದಾಗ, ಈ ಪಟ್ಟಭದ್ರ ರಾಜಕಾರಣಿಗಳು ಯಾವ ಮುಜುಗರವೂ ಇಲ್ಲದೆ ಹೋರಾಟ ಮಾಡಿ ತಂತಮ್ಮ ಮನೆಯವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿ ಯಾಗಿರುವುದು ಅರಿವಾಗುತ್ತದೆ, ಸಖೇದಾಶ್ಚರ್ಯವೂ ಆಗುತ್ತದೆ. ‘ಶಿವಮೊಗ್ಗದಲ್ಲಿ ನಮ್ಮನ್ನು ಬಿಟ್ಟರೆ ಇನ್ನಾರೂ ಇಲ್ಲ, ದಾವಣಗೆರೆ ಒಂದು ಕುಟುಂಬದ ಸ್ವತ್ತು, ಬೆಳಗಾವಿ ಇನ್ನೊಂದು ಕುಟುಂಬದ್ದು, ಕೋಲಾರ ಮತ್ತೊಬ್ಬರದ್ದು, ಚಾಮರಾಜನಗರ ನನ್ನದೇ ಮತ್ತು ಕನಕಪುರ ಒಂದು ಕುಟುಂಬಕ್ಕೆ ಮಾತ್ರ’ ಎಂಬಂತಾಗಿಬಿಟ್ಟರೆ, ಅದು ಪಾಳೆಗಾರಿಕೆ ಆಗುತ್ತದೆಯೇ ವಿನಾ, ಪ್ರಜಾಪ್ರಭುತ್ವ ಆಗುವುದಿಲ್ಲ ಅಲ್ಲವೇ? ಇವರೆಲ್ಲ ತಮ್ಮ ತಮ್ಮ ಕುಟುಂಬದವರನ್ನು ಹೀಗೆ ಚುನಾವಣೆಗೆ ನಿಲ್ಲಿಸಲು ಸಂವಿಧಾನದ ಅಡಿಯಲ್ಲಿ ಅವಕಾಶ ಇರಬಹುದು; ಆದರೆ ನೈತಿಕ ಜವಾಬ್ದಾರಿ ಎನ್ನುವುದೊಂದು ಇರಬೇಕು ತಾನೆ? ಹೀಗೆ ತಮ್ಮ ಕುಟುಂಬಕ್ಕೆ ಟಿಕೆಟ್ ಗಿಟ್ಟಿಸಿಕೊಂಡ ರಾಜಕಾರಣಿಗಳು ತಮ್ಮ ಈ ನಡೆಯನ್ನು ಸಮರ್ಥಿಸಿಕೊಳ್ಳಲು
‘ನಾ ಮುಂದು, ತಾ ಮುಂದು’ ಎನ್ನುವಂತೆ ಮಾಧ್ಯಮಗಳಲ್ಲಿ ಹೇಳುವ ಕಥೆಗಳನ್ನು ಕೇಳುವಾಗಲಂತೂ, ಕ್ಷೇತ್ರಕ್ಕೆ ಇವರು ಅತ್ಯಂತ ಅನಿವಾರ್ಯವೇನೋ ಎನಿಸುತ್ತದೆ ಹಾಗೂ ಕ್ಷೇತ್ರದ ಮತದಾರರು, ಕಾರ್ಯಕರ್ತರು ಪೂರ್ತಿಯಾಗಿ ಇವರ ಬುಟ್ಟಿಯಲ್ಲೇ ಇದ್ದಾರೇನೋ ಎಂದು ಭಾಸವಾಗುತ್ತದೆ.

‘ನನ್ನ ಮಗ ಓದಿ ವಿದೇಶದಲ್ಲಿ ಇರಬಹುದಾಗಿತ್ತು; ಆದರೂ ಅವನು ನಿಮ್ಮ ಸೇವೆ ಮಾಡಲು ಇಚ್ಛಿಸುತ್ತಿದ್ದಾನೆ’ ಎನ್ನುವ ಮೂಲಕ ಮಹಿಳಾ ರಾಜಕಾರಣಿಯೊಬ್ಬರು ಕ್ಷೇತ್ರಕ್ಕೆ ಏನೋ ಉಪಕಾರ ಮಾಡುತ್ತಿರುವವರಂತೆ ವರ್ತಿಸುತ್ತಾರೆ. ಇನ್ನೊಬ್ಬರು, ‘ನನಗೆ ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಲು ಆಸಕ್ತಿ ಇರಲಿಲ್ಲ; ಆದರೆ ಕ್ಷೇತ್ರದ ಕಾರ್ಯಕರ್ತರ ಒತ್ತಾಯದಿಂದಾಗಿ ಮತ್ತು ಒತ್ತಡಕ್ಕೆ ಸಿಲುಕಿ ನಿಲ್ಲಿಸುತ್ತಿದ್ದೇನೆ’ ಎಂದು ಹೇಳುತ್ತಿದ್ದಾರೆ. ‘ನಿಮ್ಮ ಅಳಿಯನಿಗೆ ಟಿಕೆಟ್ ಕೊಡಬಹುದಾದರೆ ನನ್ನ ಅಳಿಯ ಏನು ಮಾಡಿದ್ದಾನೆ?’ ಎಂದು ಮತ್ತೊಬ್ಬರು ಪ್ರಶ್ನೆ ಮಾಡುತ್ತಾರೆ.

‘ನನ್ನ ಮಗನಿಗೆ ಇತ್ತೀಚೆಗೆ ಗಂಭೀರವಾದ ಶಸ್ತ್ರಚಿಕಿತ್ಸೆ ಆಗಿದೆ. ಆತ ತನ್ನ ಆರೋಗ್ಯವನ್ನೂ ಉಪೇಕ್ಷಿಸಿ ಜನಸೇವೆಗೆ ತೊಡಗಿಸಿಕೊಳ್ಳುತ್ತಿದ್ದಾನೆ. ಹಾಗಾಗಿ ಅವನನ್ನು ಗೆಲ್ಲಿಸಿ’ ಎಂದು ಮಗದೊಬ್ಬರು ಹೇಳುತ್ತಾರೆ. ಆದರೆ, ‘ಕ್ಷೇತ್ರದಲ್ಲಿ ಸಮರ್ಥ ಕಾರ್ಯಕರ್ತನೊಬ್ಬನಿದ್ದಾನೆ, ಬಹಳ ಕಾಲದಿಂದ ಪಕ್ಷಕ್ಕಾಗಿ ದುಡಿದಿದ್ದಾನೆ. ಹಾಗಾಗಿ ಅವನಿಗೆ ಈ ಬಾರಿ ಟಿಕೆಟ್ ಸಿಗಲೇಬೇಕು’ ಎಂದು ವರಾತ ಮಾಡುವ ಯಾವ ನಾಯಕನೂ ಕಾಣಸಿಗುವುದಿಲ್ಲ. ‘ತಾವಾಯಿತು, ತಮ್ಮ ಕುಟುಂಬದ ಹಿತರಕ್ಷಣೆಯಾಯಿತು’ ಎಂಬಂತೆ ಇರುತ್ತದೆ ಇವರ ಧೋರಣೆ. ‘ಬಿಜೆಪಿಯು ಒಂದು ಕುಟುಂಬದ ಹಿಡಿತದಲ್ಲಿ ಸಿಲುಕಿ ನಲುಗುತ್ತಿದೆ.

ಹಾಗಾಗಿ ಪಕ್ಷವನ್ನು ಕುಟುಂಬ ರಾಜಕಾರಣದಿಂದ ಮುಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ’ ಎಂದು ಈಶ್ವರಪ್ಪನವರು ಇತ್ತೀಚೆಗೆ ಗುಡುಗಿದರು. ತಮ್ಮ ಮಗನಿಗೆ ಹಾವೇರಿಯ ಟಿಕೆಟ್ ತಪ್ಪಿದಾಗ ಈಶ್ವರಪ್ಪನವರಿಗೆ ಇದ್ದಕ್ಕಿದ್ದ ಹಾಗೆ ಯಡಿಯೂರಪ್ಪನವರ ಕುಟುಂಬ ರಾಜಕಾರಣದ ಅರಿವಾಗಿರುವುದು ಅಚ್ಚರಿಯ ಸಂಗತಿಯೇ!
ಕಂಡಕಂಡವರಿಗೆ ‘ಅಣ್ಣಾ’ ‘ಅಪ್ಪಾಜಿ’ ಎನ್ನುತ್ತಾ, ಬಿಸಿಲು ಮಳೆಯನ್ನೂ ನೋಡದೆ ಈ ತಥಾಕಥಿತ ನಾಯಕರುಗಳ ಹಿಂದೆ ಹಿಂದೆ ಓಡಾಡಿ ಅವರ ಕಾಲಿಗೆ ಬೀಳುವ ಪ್ರಾಮಾಣಿಕ ಕಾರ್ಯಕರ್ತನ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಇಂಥ ನಾಯಕರುಗಳಿಗೆ, ಕಾರ್ಯಕರ್ತನ ವಿಷಯ ಎಂದಾದರೆ ಅದಕ್ಕೆ ಕೊನೆಯ ಆದ್ಯತೆ, ಆದರೆ ತಮ್ಮ ಕುಟುಂಬದ ವಿಷಯವಾದರೆ ಪ್ರಥಮ ಆದ್ಯತೆ! ರಾಜ್ಯ ಸರಕಾರವು ಇತ್ತೀಚೆಗೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರುಗಳ ಘೋಷಣೆ ಮಾಡಿರುವುದನ್ನು ನೋಡಿದರೆ ಇದು ತಿಳಿಯುತ್ತದೆ- ಶಾಸಕರ ಪಟ್ಟಿ ತರಾತುರಿಯಲ್ಲಿ ಈಚೆ ಬಂತು, ಆದರೆ ಕಾರ್ಯಕರ್ತರ ಪಟ್ಟಿ ಮಾತ್ರ ಇನ್ನೂ ಪೂರ್ಣಪ್ರಮಾಣದಲ್ಲಿ ಬಿಡುಗಡೆಯ
ಭಾಗ್ಯವನ್ನೇ ಕಾಣಲಿಲ್ಲ.

ಕಾರ್ಯಕರ್ತರು ಎಂದರೆ ಅಷ್ಟು ಉಪೇಕ್ಷೆ ಇವರುಗಳಿಗೆ. ಏನೇನೂ ಅನುಭವವಿಲ್ಲದ, ಇನ್ನೂ ಸರಿಯಾಗಿ ಮೀಸೆಯೇ ಚಿಗುರದ ಶಾಸಕರ ಮತ್ತು ಮಂತ್ರಿಗಳ ಮಕ್ಕಳು-ಮೊಮ್ಮಕ್ಕಳು ರಾಜಕೀಯಕ್ಕೆ ಬರಬಹುದಾದರೆ, ಪಕ್ಷಕ್ಕಾಗಿ ಹಗಲಿರುಳೂ ಶ್ರಮಿಸಿದ ಕಾರ್ಯಕರ್ತನೊಬ್ಬ ಯಾಕೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ
ಚುನಾವಣಾ ಅಖಾಡಕ್ಕಿಳಿಯಬಾರದು? ಕಾರ್ಯಕರ್ತರು ಕೆಲಸದ ಆಳುಗಳಲ್ಲ, ಅವಕಾಶ ಕೊಟ್ಟರೆ ಅವರೂ ಅರಸರಾಗಬಲ್ಲರು. ‘ನೀವು ಕುಟುಂಬದವರನ್ನು ಮಾತ್ರ ಬೆಳೆಸುವುದಾದರೆ ನಾವು ಕೆಲಸ ಮಾಡುವುದಿಲ್ಲ, ಬದಲಾಗಿ ಕಾರ್ಯಕರ್ತನೊಬ್ಬ ಬೆಳೆಯುವುದಾದರೆ ಮಾತ್ರ ನಾವು ದುಡಿಯುತ್ತೇವೆ’ ಎಂದು ಕಾರ್ಯಕರ್ತರು ದನಿಯೆತ್ತಿ ಒಗ್ಗಟ್ಟಿನಿಂದ ಪ್ರತಿರೋಧಿಸುವವರೆಗೆ, ನಮ್ಮ ನಾಯಕರ ಮಮಕಾರದ ರಾಜಕಾರಣ ನಿಲ್ಲುವುದಿಲ್ಲ. ಹಾಗೆಯೇ, ಮತದಾರರು ಕುಟುಂಬ ರಾಜಕಾರಣದ ವಿರುದ್ಧವಾಗಿ ಸತತವಾಗಿ ಮತ ನೀಡುತ್ತಾ, ‘ನಮಗೆ ನಿಮ್ಮ ಕುಟುಂಬದವರು ಅನಿವಾರ್ಯವಲ್ಲ’ ಎನ್ನುವ ಗಟ್ಟಿಸಂದೇಶ ಕೊಟ್ಟರೆ ಮಾತ್ರ ಈ ‘ಕುಟುಂಬಪ್ರಿಯ’ ರಾಜಕಾರಣಿಗಳಿಗೆ ಪಾಠ ಕಲಿಸಲು ಸಾಧ್ಯ ಮತ್ತು ರಾಜ್ಯವು ಹೊಸ ನಾಯಕರುಗಳನ್ನು ನೋಡಲು ಸಾಧ್ಯ.

ಅದಿಲ್ಲದಿದ್ದರೆ, ಈ ಚಾಳಿ ಎಗ್ಗಿಲ್ಲದೇ ಮುಂದುವರಿಯುತ್ತಲೇ ಸಾಗುತ್ತದೆ ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ.

(ಲೇಖಕರು ಪ್ರಸಕ್ತ ವಿದ್ಯಮಾನಗಳ ವಿಶ್ಲೇಷಕರು)