Saturday, 27th July 2024

ಮೋದಿ ನಂತರ ಇವರಾ ಪ್ರಧಾನಿ ?

ಮೂರ್ತಿಪೂಜೆ

ಕಳೆದ ವಾರ ದಿಲ್ಲಿಯ ಮೂಲಗಳನ್ನು ತಡಕಾಡಿದ ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರಿಗೆ ಅಚ್ಚರಿಯ ಸುದ್ದಿ ಕಿವಿಗೆ ಬಿದ್ದಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬಿಜೆಪಿಯ ಭವಿಷ್ಯದ ಪ್ರಧಾನಿ ಕ್ಯಾಂಡಿಡೇಟು ಎಂಬುದು ಈ ಸುದ್ದಿ. ಅಂದ ಹಾಗೆ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಯಾರ‍್ಯಾರು ಸ್ಪರ್ಧಿಸಲಿದ್ದಾರೆ ಎಂಬ ವಿಷಯ ಬಂದಾಗ ಒಂದು ಅಚ್ಚರಿಯ ಹೆಸರು ರಾಜ್ಯದ ಬಿಜೆಪಿ ನಾಯಕರಿಗೆ ತಲುಪಿತ್ತು. ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿರುವ ಎಸ್.ಜೈಶಂಕರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿಬಂದಾಗ ಸಹಜವಾಗಿಯೇ ಈ ನಾಯಕರಿಗೆ ಕುತೂಹಲ ಕೆರಳಿದೆ.

ರಾಜ್ಯಸಭೆಯ ಸದಸ್ಯರಾಗಿರುವ, ತಮಿಳುನಾಡು ಮೂಲದ ಜೈಶಂಕರ್ ಅವರು ಹಾಲಿ ವಿದೇಶಾಂಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇವತ್ತು ವಿದೇಶಾಂಗ ವ್ಯವಹಾರದ ಮಾತು ಬಂದಾಗ ಜೈಶಂಕರ್ ಅವರನ್ನು ಅಪಾರವಾಗಿ ನಂಬುವ ಪ್ರಧಾನಿ ಮೋದಿ ಯಾವ ಮಟ್ಟದಲ್ಲಿ ಅವರಿಗೆ ಮುಕ್ತಹಸ್ತ ನೀಡಿದ್ದಾರೆ ಎಂದರೆ, ಈ ವಿಷಯದಲ್ಲಿ ಜೈಶಂಕರ್ ಯಾವುದೇ ನಿರ್ಣಯ ತೆಗೆದುಕೊಂಡರೂ ‘ಎಸ್’ ಅನ್ನುತ್ತಾ ರಂತೆ. ಇಂಥ ಜೈಶಂಕರ್ ಅವರನ್ನು ರಾಜ್ಯಸಭೆಯಲ್ಲಿಯೇ ಮುಂದು ವರಿಸಲು, ಆ ಮೂಲಕ ವಿದೇಶಾಂಗ ವ್ಯವಹಾರಗಳ ಮೇಲೆ ಗಮನ ಕೇಂದ್ರೀಕರಿಸಲು ಅವಕಾಶ ಮಾಡಿಕೊಡಬೇಕಾದ ಮೋದಿ, ಇದ್ದಕ್ಕಿದ್ದಂತೆ ಅವರು ಲೋಕಸಭಾ ಚುನಾವಣೆಯ ಕಣಕ್ಕಿಳಿಯಲಿ ಅಂತ ಏಕೆ ಬಯಸುತ್ತಿದ್ದಾರೆ? ಎಂಬುದು ರಾಜ್ಯದ ಕೆಲ ಬಿಜೆಪಿ ನಾಯಕರ ಕುತೂಹಲ.

ಹೀಗೆ ಜೈಶಂಕರ್‌ರನ್ನು ಕಣಕ್ಕಿಳಿಸಬೇಕು ಅಂತ ಮೋದಿ ಅವರು ನಿರ್ಧರಿಸದಿದ್ದಿದ್ದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ರೇಸಿನಲ್ಲಿ ಅವರ ಹೆಸರು ಓಡುವ ಪ್ರಮೇಯವೇ ಇರಲಿಲ್ಲ. ಹೀಗೆ ಮೋದಿ ಅವರು ಬಯಸಿರುವುದಕ್ಕೇ ಜೈಶಂಕರ್ ಅವರ ಹೆಸರು ಕ್ಯಾಂಡಿಡೇಟುಗಳ ಲಿಸ್ಟಿಗೆ ಬಂದಿದೆ. ಆದರೆ ಏಕೆ? ಎಂಬುದು ಹಲವರ ಕುತೂಹಲ. ಅಂದ ಹಾಗೆ, ವಿದೇಶಾಂಗ ವ್ಯವಹಾರಗಳ ವಿಷಯದಲ್ಲಿ ಮಾಸ್ಟರ್ ಆಗಿರುವ ಜೈಶಂಕರ್ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿದ್ದು ೨೦೧೯ರಲ್ಲಿ. ಅದಕ್ಕೂ ಮುನ್ನ ಚೀನಾ, ಅಮೆರಿಕ, ಜೆಕ್ ಗಣರಾಜ್ಯದಲ್ಲಿ ಭಾರತದ ರಾಯಭಾರಿಯಾಗಿ, ಸಿಂಗಾಪುರದಲ್ಲಿ ಹೈಕಮಿಷನರ್ ಆಗಿ ಕೆಲಸ ಮಾಡಿದ್ದ ಜೈಶಂಕರ್ ೨೦೧೫ರಿಂದ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು.

ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಅವರಿಗಿರುವ ಅಪಾರ ಜ್ಞಾನದಿಂದ ತುಂಬ ಪ್ರಭಾವಿತರಾದವರು ಪ್ರಧಾನಿ ಮೋದಿ. ಹೀಗಾಗಿ ೨೦೧೯ರಲ್ಲಿ ಬಿಜೆಪಿ ೨ನೇ ಬಾರಿ ಕೇಂದ್ರದಲ್ಲಿ ಗದ್ದುಗೆಯೇರಿದಾಗ ಜೈಶಂಕರ್‌ರನ್ನು ತಮ್ಮ ಸಂಪುಟಕ್ಕೆ ತೆಗೆದುಕೊಂಡ ಮೋದಿಯವರ ನಿರ್ಧಾರ ದೊಡ್ಡ ಮಟ್ಟದಲ್ಲಿ ಫಲ ನೀಡಿದೆ. ಅರ್ಥಾತ್, ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಹಾಗೂ ಚೀನಾ ಜತೆ ಹದಗೆಡುತ್ತಿದ್ದ ಭಾರತದ ಸಂಬಂಧವನ್ನು ಸರಿಯಾದ ಟ್ರ್ಯಾಕ್ ಮೇಲೆ ತಂದು ಕೂರಿಸುವಲ್ಲಿ ಜೈಶಂಕರ್ ಅವರ ಕ್ಷಮತೆ ಫಲ ನೀಡಿದೆ.  ಲಡಾಖ್ ಮತ್ತು ಡೋಕ್ಲಾಂ ವಿಷಯದಲ್ಲಿ ಹದಗೆಟ್ಟಿದ್ದ ಭಾರತ ಮತ್ತು ಚೀನಾ ನಡುವಣ ಸಂಬಂಧವನ್ನು ಒಂದು
ಹದಕ್ಕೆ ತರಲು ಜೈಶಂಕರ್ ಯಾವ ರೀತಿ ಕೆಲಸ ಮಾಡಿದರೆಂದರೆ, ಇವತ್ತು ಚೀನಾ ಮುಂಚಿನಂತೆ ಭಾರತದ ವಿಷಯದಲ್ಲಿ ತಕರಾರು ತೆಗೆಯುತ್ತಿಲ್ಲ, ಕಾಲು ಕೆರೆದು ಜಗಳಕ್ಕೆ ಬರುತ್ತಿಲ್ಲ. ಕಾರಣ? ಉಭಯ ದೇಶಗಳ ನಡುವಣ ವಾಣಿಜ್ಯ ವ್ಯವಹಾರಗಳಿಗೆ ಧಕ್ಕೆ ಆದರೆ ಚೀನಾಕ್ಕೆ ಆಗುವ ನಷ್ಟವೇನು ಎಂಬುದನ್ನು ಜೈಶಂಕರ್ ಚೀನಿ ನಾಯಕತ್ವಕ್ಕೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಒಂದು ವೇಳೆ ಭಾರತವೇನಾದರೂ ಚೀನಾದ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದರೆ, ವ್ಯಾಪಾರ ವಹಿವಾಟಿಗೆ ಬೇರೆ ಮೂಲಗಳನ್ನು
ಹುಡುಕಿಕೊಂಡರೆ, ಪಕ್ಕದಲ್ಲೇ ಇರುವ ಭಾರತದಂಥ ಬೃಹತ್ ಮಾರುಕಟ್ಟೆಯನ್ನು ಚೀನಾ ಕಳೆದುಕೊಳ್ಳುತ್ತದೆ. ಆ ಮೂಲಕ ಅದರ ಆರ್ಥಿಕ ಶಕ್ತಿ ಕುಗ್ಗುತ್ತದೆ ಎಂಬುದನ್ನು ಈ ಮಾತುಕತೆ ಗಳ ಸಂದರ್ಭದಲ್ಲಿ ಜೈಶಂಕರ್ ಎಷ್ಟು ಚೆನ್ನಾಗಿ ಮನವರಿಕೆ ಮಾಡಿಕೊಟ್ಟರೆಂದರೆ ಈಗ ಚೀನಾ ದೊಡ್ಡ ಮಟ್ಟದ ಸೌಂಡು
ಮಾಡುತ್ತಿಲ್ಲ.

ಅದೇ ರೀತಿ ಕುಸಿಯುತ್ತಾ ಸಾಗಿದ್ದ ಅಮೆರಿಕದ ಜತೆಗಿನ ವಾಣಿಜ್ಯ ವಹಿವಾಟು ಪುನಃ ಸರಿದಾರಿಗೆ ಬರಲು, ಆ ಮೂಲಕ ಉಭಯ ದೇಶಗಳ ನಡುವಣ ಸಂಬಂಧವು
ವಿಶ್ವಾಸದ ಹಳಿಗೆ ಮರಳಲು, ಜೈಶಂಕರ್ ಅವರ ರಾಜತಾಂತ್ರಿಕ ಕೌಶಲ ದೊಡ್ಡ ಮಟ್ಟದ ಕೆಲಸ ಮಾಡಿದೆ. ಹೀಗೆ ಕಳೆದ ೫ ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಗೆ ಒಂದು ಸ್ಪಷ್ಟತೆ ಮತ್ತು ಬಿಗಿ ಬರಲು ಕಾರಣರಾದ ಜೈಶಂಕರ್ ಬೇರೆ ದೇಶಗಳ ಜತೆಗಿನ ವ್ಯವಹಾರವನ್ನು ಎಷ್ಟು ಟಫ್ ಆಗಿ ಮ್ಯಾನೇಜ್ ಮಾಡುತ್ತಾರೆ ಎಂದರೆ ಅದರ ಸ್ಪಷ್ಟತೆಗೆ ಸ್ವತಃ ಪ್ರಧಾನಿ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಾಳುಗಳೂ ಫಿದಾ ಆಗಿದ್ದಾರೆ.

ಹೀಗಾಗಿ ಇತ್ತೀಚಿನ ತನಕ ಚಾಲ್ತಿಯಲ್ಲಿದ್ದ ತಮ್ಮ ಲೆಕ್ಕಾಚಾರವೊಂದಕ್ಕೆ ಬಣ್ಣ ಹಚ್ಚಿ ಮಾರ್ಪಡಿಸಲು ಅವರು ಬಯಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ. ಅಂದ ಹಾಗೆ, ಮೋದಿ ನಂತರ ಯಾರು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದ ಸಂಘಪರಿವಾರದ ನಾಯಕರು, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ
ಆದಿತ್ಯನಾಥ್ ಅವರು ಭವಿಷ್ಯದ ಪ್ರಧಾನಿ ಕ್ಯಾಂಡಿಡೇಟ್ ಆಗಲಿ ಎಂದು ಬಯಸಿದ್ದರು. ೨೦೨೪ರಲ್ಲಿ ಮರಳಿ ದಿಲ್ಲಿ ಗದ್ದುಗೆಯ ಮೇಲೆ ಬಿಜೆಪಿ ಬಂದು ಕುಳಿತರೆ ೩ ವರ್ಷಗಳ ಮಟ್ಟಿಗೆ ಮೋದಿ ಪ್ರಧಾನಿಯಾಗಿರಲಿ, ನಂತರ ಆ ಜಾಗಕ್ಕೆ ಆದಿತ್ಯನಾಥ್ ಬರಲಿ ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಅದನ್ನೀಗ ಬದಲಿಸಿರುವ ಸಂಘಪರಿವಾರದ ನಾಯಕರು, ಈ ಬಾರಿ ಬಿಜೆಪಿ ಅಽಕಾರಕ್ಕೆ ಬರುವುದು ನಿಶ್ಚಿತ.

ಅರ್ಥಾತ್, ದೇಶದಲ್ಲಿ ಬಿಜೆಪಿಯ ಆಡಳಿತಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಮುಂದಿನ ೩ ವರ್ಷಗಳ ಕಾಲ ಮೋದಿ ಪ್ರಧಾನಿಯಾಗಿರಲಿ. ನಂತರ ಆದಿತ್ಯನಾಥ್‌ರನ್ನು ತರುವ ಬದಲಿಗೆ, ೨ ವರ್ಷಗಳ ಮಟ್ಟಿಗೆ ವಿದೇಶಾಂಗ ಸಚಿವ ಜೈಶಂಕರ್‌ರನ್ನು ತಂದು ಕೂರಿಸೋಣ. ಈ ಅವಧಿಯಲ್ಲಿ ಜಾಗತಿಕ ವಾಗಿ ಭಾರತದ ಶಕ್ತಿಯನ್ನು ಹಿಗ್ಗಿಸಲು ಜೈಶಂಕರ್ ಅವರಿಗೆ ಸಾಧ್ಯವಾಗುವುದರಿಂದ ಒಟ್ಟಾರೆಯಾಗಿ ವಿಶ್ವ ಭೂಪಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಿರುತ್ತದೆ. ಅಷ್ಟೇ ಅಲ್ಲ, ಪ್ರತಿಪಕ್ಷ ಕಾಂಗ್ರೆಸ್ ಕೂಡಾ ನೆಲ ಕಚ್ಚಿ ಹೋಗಿರುತ್ತದೆ. ಹೀಗೆ ಅದು ನೆಲಕಚ್ಚುವವರೆಗೆ ಕಾದು, ನಂತರ ೨೦೨೯ರ ಪಾರ್ಲಿಮೆಂಟ್ ಚುನಾವಣೆಯ ವೇಳೆಗೆ ಆದಿತ್ಯನಾಥ್‌ರನ್ನು ಪ್ರಧಾನಿ ಕ್ಯಾಂಡಿಡೇಟ್ ಅಂತ ಬಿಂಬಿಸೋಣ. ಒಂದು ವೇಳೆ ಮೋದಿ ನಂತರ ಆದಿತ್ಯನಾಥ್‌ರನ್ನು ಪ್ರಧಾನಿ ಹುದ್ದೆಗೆ ತಂದರೆ ಸೆಕ್ಯುಲರಿಸಂ ಹೆಸರಿನಲ್ಲಿ ಬಿಜೆಪಿ ವಿರೋಽ ಮತಗಳು ಕನ್‌ಸಾಲಿಡೇಟ್ ಆಗಲು ಅವಕಾಶ ನೀಡಿದಂತಾಗುತ್ತದೆ.

ಆದರೆ ೨ ವರ್ಷಗಳ ಮಟ್ಟಿಗೆ ಜೈಶಂಕರ್ ಪ್ರಧಾನಿಯಾದರೆ ಕಾಂಗ್ರೆಸ್‌ಗೆ ಸಿಗಬಹುದಾದ ಸೆಕ್ಯುಲರಿಸಂ ಅಸ್ತ್ರ ದುರ್ಬಲ ವಾಗಿರುತ್ತದೆ. ಹೀಗಾಗಿ ೨೦೨೯ರ ಪಾರ್ಲಿಮೆಂಟ್ ಚುನಾ ವಣೆಯ ತನಕ ಕಾದು, ನಂತರ ಆದಿತ್ಯನಾಥ್‌ರನ್ನು ಪ್ರಧಾನಿ ಕ್ಯಾಂಡಿಡೇಟ್ ಅಂತ ಬಿಂಬಿಸಿದರೆ ದೊಡ್ಡ ಮಟ್ಟದ ವಿರೋಧವೇ ಇಲ್ಲದೆ ಹಿಂದೂ ಹೃದಯ ಸಾಮ್ರಾಟನನ್ನು ಪ್ರತಿಷ್ಠಾಪಿಸಿದಂತಾಗುತ್ತದೆ ಎಂಬುದು ಸಂಘಪರಿವಾರದ ನಾಯಕರ ಲೆಕ್ಕಾಚಾರ. ಇಂಥ ಲೆಕ್ಕಾಚಾರಗಳ ಕಾರಣಕ್ಕಾಗಿಯೇ ಜೈಶಂಕರ್‌ರನ್ನು ಜನರಿಂದ ಆಯ್ಕೆಯಾದ ನಾಯಕ ಎಂದು ಬಿಂಬಿಸುವ ಯೋಚನೆ ಪ್ರಧಾನಿ ಮೋದಿ ಅವರಲ್ಲಿದೆ. ಈ ಕಾರಣಕ್ಕಾಗಿಯೇ ದೇಶದಲ್ಲಿ ಬಿಜೆಪಿಗೆ ಸೇಫ್ಸ್ಟ್ ಪ್ಲೇಸ್ ಅನ್ನಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅವರನ್ನು ಕಣಕ್ಕಿಳಿಸುವುದು ಅವರ ಥಿಂಕಿಂಗು. ಯಾವಾಗ ಮೋದಿ ಮತ್ತು ಸಂಘ ಪರಿವಾರದ ನಾಯಕರ ಈ ಲೆಕ್ಕಾಚಾರ ಕಿವಿಗೆ ಬಿತ್ತೋ, ಸಹಜವಾಗಿಯೇ ರಾಜ್ಯ ಬಿಜೆಪಿಯ ಆ ಹಿರಿಯ ನಾಯಕರು ಥ್ರಿಲ್ ಆಗಿದ್ದಾರೆ. ಅಂದ ಹಾಗೆ, ದಿಲ್ಲಿ
ಮಟ್ಟದಲ್ಲಿ ಚಾಲ್ತಿಯಲ್ಲಿರುವ ಈ ಲೆಕ್ಕಾಚಾರ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ಅದು ಬೇರೆ ವಿಷಯ. ಆದರೆ ಸದ್ಯದ ಮಟ್ಟಿಗಂತೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಫೀಲ್ಡಿನಲ್ಲಿರುವ ಜೈಶಂಕರ್ ಹೆಸರು ದೊಡ್ಡ ಸೌಂಡು ಮಾಡುತ್ತಿರುವುದು ಮಾತ್ರ ನಿಜ.

ದಿಲ್ಲಿ ದಂಗಲ್ ನಿಲ್ಲುವುದಿಲ್ಲ
ಈ ಮಧ್ಯೆ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಹೋರಾಟ ನಡೆಸಲು ಎನ್‌ಡಿಎಯೇತರ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಕಳೆದ ವಾರ ಕೇಂದ್ರದ ಮಲತಾಯಿ ಧೋರಣೆಯ ವಿರುದ್ಧ ತಮ್ಮ ಸಂಪುಟದ ಸಚಿವರು ಮತ್ತು ಶಾಸಕರೊಂದಿಗೆ ದಿಲ್ಲಿಗೇ ನುಗ್ಗಿ ಪ್ರತಿಭಟನೆ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ ಈ ಹೋರಾಟವನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮುಂದುವರಿಸುವ ಯೋಚನೆ ಇದೆ. ಈ ಹೋರಾಟಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ ರೀತಿ ಇದಕ್ಕೆ ಕಾರಣ. ಹೀಗಾಗಿ ಕೇಂದ್ರದ ವಿರುದ್ಧ ಶುರು
ಮಾಡಿರುವ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವುದು, ಎನ್‌ಡಿಎಯೇತರ ಶಕ್ತಿಗಳ ಒಟ್ಟು ಬಲದೊಂದಿಗೆ ಮುನ್ನಡೆಸುವುದು ಸಿದ್ದರಾಮಯ್ಯ ಅವರ ಯೋಚನೆ.

ಅಂದ ಹಾಗೆ, ‘ಇಂಡಿಯ’ ಒಕ್ಕೂಟದ ರಾಜಕಾರಣ ಯಾವ ಸ್ವರೂಪ ಪಡೆಯುತ್ತದೋ ಅದು ಬೇರೆ ವಿಷಯ. ಆದರೆ ಕೇಂದ್ರದ ವಿರುದ್ದ ದಿಲ್ಲಿಗೇ ನುಗ್ಗಿ ಹೋರಾಟ
ನಡೆಸಲು ಎನ್‌ಡಿಎಯೇತರ ಮುಖ್ಯಮಂತ್ರಿಗಳು ಒಗ್ಗೂಡ ಬೇಕು ಎಂಬುದು ಸಿದ್ದರಾಮಯ್ಯ ಚಿಂತನೆ. ಹೀಗಾಗಿ ಸದ್ಯದಲ್ಲೇ ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ಕರೆಯಲು ಅವರು ಯೋಚಿಸಿದ್ದಾರೆ.

ಸುರ್ಜೇವಾಲ ಎತ್ತಂಗಡಿಗೆ ಪಟ್ಟು
ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್‌ಸಿಂಗ್ ಸುರ್ಜೇವಾಲ ವಿರುದ್ಧ ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ತಿರುಗಿ ಬಿದ್ದಿದ್ದಾರೆ. ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ತಮಗಿಷ್ಟ ಬಂದ ನಿರ್ಧಾರ ತೆಗೆದುಕೊಳ್ಳುತ್ತಿರುವ ಸುರ್ಜೇವಾಲ ಹಲವು ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಅವರ ಸಿಟ್ಟು. ಇದೇ ಕಾರಣಕ್ಕಾಗಿ ಕಳೆದ ವಾರ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ ಡಾ.ಪರಮೇಶ್ವರ್, ಡಾ.ಎಚ್.ಸಿ. ಮಹಾದೇಪ್ಪ, ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪೂರ್ ಸೇರಿದಂತೆ ಹಲವು ಸಚಿವರು ಸುರ್ಜೇವಾಲ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಿಂದ ಎತ್ತಂಗಡಿ ಮಾಡಬೇಕು ಅಂತ ವರಿಷ್ಠರನ್ನು ಒತ್ತಾಯಿಸಲು ನಿರ್ಧರಿಸಿದ್ದಾರೆ. ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಕಾರ್ಯಕರ್ತರ ಪಟ್ಟಿ ತಯಾರಿಸಲಾಗಿದೆಯಲ್ಲ? ಈ ಪಟ್ಟಿಯಲ್ಲಿ ತಮಗೆ ಬೇಕಾದವರ ಹೆಸರುಗಳನ್ನು ಸುರ್ಜೇವಾಲ ತೂರಿಸಿದ್ದಾರೆ. ಚಿತ್ರದುರ್ಗ, ಶಿವಮೊಗ್ಗ, ಬಿಜಾಪುರ ಸೇರಿದಂತೆ ಕೆಲ ಜಿಲ್ಲೆಗಳಿಂದ ತೂರಿಕೊಂಡಿರುವ ಹಲವರು ಸುರ್ಜೇವಾಲ ಅವರ ಪರ್ಸನಲ್ ಕ್ಯಾಂಡಿಡೇಟುಗಳು. ಇವರಿಗೆಲ್ಲ ಅಧ್ಯಕ್ಷಗಿರಿ
ಕೊಟ್ಟರೆ ಪಕ್ಷವನ್ನು ನಾವು ಇಲ್ಲಿ ಕಟ್ಟಬೇಕೋ? ದಿಲ್ಲಿಯಲ್ಲಿ ಕಟ್ಟಬೇಕೋ?ಎಂಬುದು ಈ ಸಚಿವರ ಸಿಟ್ಟು.

ಪರಿಣಾಮ? ಸುರ್ಜೇವಾಲ ಎತ್ತಂಗಡಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ವಿಧ್ಯುಕ್ತ ಪ್ರಯತ್ನ ಆರಂಭವಾಗಿದೆ.

Leave a Reply

Your email address will not be published. Required fields are marked *

error: Content is protected !!