Thursday, 12th December 2024

Like life, newspaper are also beautiful !

ನೂರೆಂಟು ಮಾತು 

ವಿಶ್ವೇಶ್ವರ ಭಟ್

ಕೆಲ ವರ್ಷಗಳ ಹಿಂದೆ ಬ್ರಿಟನ್‌ನ ಹಾಗೂ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪತ್ರಿಕೆಗಳಲ್ಲೊಂದಾದ ‘ದಿ ಗಾರ್ಡಿಯನ್’ ತನ್ನ ಪುಟ ವಿನ್ಯಾಸ ಬದಲಾಯಿಸುವುದಾಗಿ (redesign) ಘೋಷಿಸಿದಾಗ ಕುತೂಹಲದ ಮನಸ್ಸುಗಳು ಜಾಗೃತವಾದವು.

ಜಗತ್ತಿನ ಪ್ರತಿ ಕ್ಷಣದ ಬದಲಾವಣೆಗಳನ್ನು ದಾಖಲಿಸುವ, ವರದಿ ಮಾಡುವ ಪತ್ರಿಕೆಗಳು ಮಾತ್ರ ಬದಲಾಗುವುದಿಲ್ಲ. ಎಲ್ಲವೂ ಬದಲಾಗಬೇಕೆಂದು ಪತ್ರಕರ್ತರು ಬಯಸುತ್ತಾರೆ. ಬದಲಾವಣೆಗಿಂತ ದೊಡ್ಡ ಸುದ್ದಿ ಯಾವುದೂ ಇಲ್ಲ ಎಂಬುದು ಅವರಿಗೆ ಗೊತ್ತು. ಋತು, ಕಾಲ, ವ್ಯಕ್ತಿ, ಆಡಳಿತ, ಸರಕಾರ.. ಹೀಗೆ ಯಾವುದೇ ಬದಲಾದರೂ ಸುದ್ದಿ. ಆದರೆ ಪತ್ರಿಕೆ ಮಾತ್ರ ಬದಲಾಗುವುದಿಲ್ಲ. 196 ವರ್ಷಗಳ ಹಿಂದೆ (1821) ಆರಂಭವಾದ ‘ದಿ ಗಾರ್ಡಿಯನ್ ಪತ್ರಿಕೆ’ ಮೂವತ್ತೆಂಟು ವರ್ಷಗಳ ನಂತರ ಮೊದಲ ಬಾರಿಗೆ ತನ್ನ ಪುಟವಿನ್ಯಾಸವನ್ನು ಬದಲಿಸಿತು.

ಪತ್ರಿಕೆ ಆರಂಭವಾದಾಗ ‘ದಿ ಮ್ಯಾಂಚೆಸ್ಟರ್ ಗಾರ್ಡಿಯನ್’ ಅಂತ ಹೆಸರಿದ್ದ ಪತ್ರಿಕೆ 38 ವರ್ಷಗಳ ಬಳಿಕ ‘ದಿ ಗಾರ್ಡಿಯನ್’ ಆದಾಗ, ತನ್ನ ಚಹರೆ ಬದಲಿಸಿತ್ತು. ಕೆಲವು ಪತ್ರಿಕೆಗಳು ಐವತ್ತು ವರ್ಷಗಳಾದರೂ ಒಂದೇ ಸ್ವರೂಪದಲ್ಲಿ ಬರುತ್ತಿರುತ್ತವೆ. ಓದುಗರೂ ಅದಕ್ಕೇ ಒಗ್ಗಿಕೊಂಡು ಬಿಡುತ್ತಾರೆ. ಓದುಗರಿಗೆ ಪತ್ರಿಕೆ ಪುಟ ಅಂದರೆ ಗರ್ಭಗುಡಿ ಇದ್ದಂತೆ. ಏನೇ ಬದಲಾದರೂ ದೇವರ ಕೋಣೆಗೆ ಮಾತ್ರ ಯಾರೂ ಕೈ ಹಾಕುವುದಿಲ್ಲ. ನೂರು ವರ್ಷ ಪೂರೈಸಿದ ಹಲವು ಪತ್ರಿಕೆಗಳು ಆ ಅವಽಯಲ್ಲಿ ಒಂದೆರಡು ಬಾರಿ ಮಾತ್ರ ವಿನ್ಯಾಸ ಬದಲಾಯಿಸಿದ ನಿದರ್ಶನಗಳು ಸಿಗುತ್ತವೆ.

ಪತ್ರಿಕೆಯ ವಿನ್ಯಾಸ ಬದಲಾಯಿಸಲು ಸಂಪಾದಕರಿಗೆ ಒಂಥರಾ ಭಯ, ಹಿಂಜರಿಕೆ. ಪತ್ರಿಕೆಯ ವ್ಯಕ್ತಿತ್ವ, ಕ್ಯಾರೆಕ್ಟರ್ ಬದಲಾಗಿಬಿಟ್ಟರೆ, ಬದಲಾದ ವ್ಯಕ್ತಿತ್ವ ಓದುಗರಿಗೆ ಇಷ್ಟವಾಗದಿದ್ದರೆ, ಆ ಕಾರಣಕ್ಕೆ ಪತ್ರಿಕೆ ಪ್ರಸಾರ ಕುಸಿದು ಹೋದರೆ, ಅದರಿಂದ ಪತ್ರಿಕೆ ಆದಾಯಕ್ಕೆ ಹೊಡೆತ ಬಿದ್ದರೆ.. ಈ ಎಲ್ಲ ಕಾರಣಗಳಿಂದ ಯಾವ ಸಂಪಾ ದಕನೂ ಅಂಥ ಹರಸಾಹಸಕ್ಕೆ ಮುಂದಾಗುವುದಿಲ್ಲ.

ಫಿಡಲ್‌ ಕ್ಯಾಸ್ಟ್ರೋ, ನರೇಂದ್ರ ಮೋದಿ, ಡಾ.ಮನಮೋಹನ ಸಿಂಗ್ ಅವರಿಗೆ ಗಡ್ಡ ಬೋಳಿಸಲು ಹೇಳಿ, ಕೋಟಿ ರುಪಾಯಿ ಬೆಟ್ ಕಟ್ಟಿದರೂ ಅವರು ಒಪ್ಪಲಿಕ್ಕಿಲ್ಲ. ಅದೇನೂ ಬೇಡ, ಕರುಣಾನಿಧಿ ಫೋಟೊಗ್ರಾಫರ್‌ಗಳ ಮುಂದೆ ಕನ್ನಡಕ ತೆಗೆಯಲಿ, ಎಸ್ಸೆಂ ಕೃಷ್ಣ ತಮ್ಮ ವಿಗ್ ತೆರೆಯಲಿ, ಉಹುಂ.. ಸುತಾರಾಂ ಸಾಧ್ಯವೇ ಇಲ್ಲ. ಅವರ ಚಹರೆಯೇ ಅವರ ವ್ಯಕ್ತಿತ್ವ. ಅವಿಲ್ಲದೇ ಅವರನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ. (ನಾನು ಮೀಸೆ ತೆಗೆದಾಗ ನನ್ನ ಗುರುತು ಹಿಡಿಯಲು, ನಾನೇ ವಿಶ್ವೇಶ್ವರ ಭಟ್ ಎಂದು ನಂಬಿಕೊಳ್ಳಲು ಎಷ್ಟು ದಿನ ಹಿಡಿಯಿತು ಎಂಬುದು ನನಗೆ ಗೊತ್ತು) ಯಾರೂ ಬದಲಾವಣೆ ಯನ್ನು ಒಪ್ಪುವುದಿಲ್ಲ ಹಾಗೂ ಅದನ್ನು ಸ್ವಾಗತಿಸುವುದೂ ಇಲ್ಲ. ಮುಂಚಿನದೇ ಚೆನ್ನಾಗಿತ್ತು ಎಂದು ಹೇಳುತ್ತಾರೆ.

ಕಾರಣ ನಮ್ಮ ಕಣ್ಣು, ಮನಸ್ಸು ಬಹಳ ವರ್ಷಗಳವರೆಗೆ ಒಂದು ಶಿಸ್ತು, ಆಕಾರಕ್ಕೆ ಒಗ್ಗಿಕೊಂಡಿರುತ್ತದೆ. ಎಡಮುರಿ ಗಣಪತಿಗೆ ನಮಿಸುವವರು ಬಲಮುರಿ ಗಣಪತಿ ಯನ್ನು ಒಪ್ಪಿಕೊಳ್ಳುವುದಿಲ್ಲವಂತೆ. ಹೀಗಿರುವಾಗ ಸೊಂಡಿಲೇ ಇಲ್ಲದ ಗಣಪತಿಯನ್ನು ತಂದಿಟ್ಟರೆ ಕೈಮುಗಿಯುತ್ತಾರಾ? ಪತ್ರಿಕೆಯ ಪುಟವಿನ್ಯಾಸ ಬದಲಾಯಿ ಸುವುದೂ ಹೀಗೆ. ಕೆಲವು ವರ್ಷಗಳ ಹಿಂದೆ ‘ಪ್ರಜಾವಾಣಿ’ ಪತ್ರಿಕೆ ಪುಟವಿನ್ಯಾಸ ಬದಲಿಸಿತು. ಪತ್ರಿಕೆಯ ಶೀರ್ಷಿಕೆ (ಮಾಸ್ಟ್ ಹೆಡ್) ಸಮೇತ ಎಲ್ಲವನ್ನೂ ಬದಲಿ ಸಿತು. ಅದೊಂದು ಸ್ವಾಗತಾರ್ಹ ಬದಲಾವಣೆಯೂ ಆಗಿತ್ತು. ಪತ್ರಿಕೆಗೆ ಅದು ಬೇಕಿತ್ತು. ಹೊಸ ವಿನ್ಯಾಸದ ಪತ್ರಿಕೆಯನ್ನು ಮುಖದ ಮುಂದೆ ಹಿಡಿದುಕೊಂಡರೆ, ಒಂಥರಾ refreshing  ಆದ ಹಿತ ಅನುಭವ ಉಂಟಾಗುತ್ತಿತ್ತು. ಆದರೆ ‘ಪ್ರಜಾವಾಣಿ’ ಎಂಬ ಮಾಸ್ಟ್ ಹೆಡ್ ಬದಲಿಸಿದ್ದನ್ನು ಓದುಗರು ಸಹಿಸಿಕೊಳ್ಳಲಿಲ್ಲ, ಸ್ವೀಕರಿಸಲಿಲ್ಲ. ಹಾಗೆ ನೋಡಿದರೆ, ಅದೊಂದು ದಿಟ್ಟ ನಿಲುವಾಗಿತ್ತು. ಆದರೆ ಓದುಗರ ಒತ್ತಡಕ್ಕೆ ಮಣಿದು ಪತ್ರಿಕೆ ಹಳೆಯ ಶೀರ್ಷಿಕೆ ಶೈಲಿಗೇ ಹೊರಳಿತು. ಕಾರಣ ವಿಗ್ ಇಲ್ಲದ ‘ಎಸ್ಸೆಂಕೆ’ಯನ್ನು ನೋಡಲು ಜನ ಇಷ್ಟಪಡಲಿಲ್ಲ!

ಈ ನಡೆಯನ್ನು ವಿವರಿಸುವುದು, ಅರ್ಥಮಾಡಿಕೊಳ್ಳುವುದು ಕಷ್ಟ. ಇದು ಪತ್ರಿಕೆಯ ಸೋಲಾ? ಓದುಗರ ಸೋಲಾ, ಬದಲಾವಣೆಗ ತೆರೆದುಕೊಳ್ಳದ ಓದುಗರ
ಖಾನೇಶು ಮಾರಿತನವಾ… ಹೇಳುವುದು ಕಷ್ಟ. ಓದುಗರು ಕೆಲವರಿಂದ ಬದಲಾವಣೆ ಬಯಸುವುದಿಲ್ಲ. ಹೇಗಿರಬೇಕೋ ಹಾಗೆಯೇ ಇರಬೇಕು. ಉಡುಪಿ ಕೃಷ್ಣ ಭವನ, ಎಂಜಿಆರ್, ಬ್ರಾಹ್ಮಣ ಕಾಫಿಬಾರ್, ಬಾಬುಸಿಂಗ್‌ಠಾಕೂರ್ ಫೇಡಾ, ಶಕ್ತಿ ಗುಲ್ಕನ್.. ಎಂದೆಂದೂ ಬದಲಾಗಬಾರದು. ಈ ಸಾಲಿಗೆ ಅನೇಕ ವರ್ಷಗಳಿಂದ ತಾವು ಓದುವ ಪತ್ರಿಕೆಯನ್ನೂ ಸೇರಿಸಿ ಬಿಡುತ್ತಾರೆ. ಇಲಿ ಪಾಷಾಣ ಮಾರಾಟ ಮಾಡುವ ಒಂದು ಕಿರುಗಾಲಿಯ ತಳ್ಳುಗಾಡಿಯನ್ನು ನಾನು ಹುಟ್ಟಿದಾಗಿನಿಂದ
ನೋಡುತ್ತಿದ್ದೇನೆ. ನಮ್ಮ ಕಣ್ಣು ಮುಂದಿನ ಜಾಲಿಮಲೋಶನ ಗಜಕರ್ಣದ ಔಷಧವೇ ಬದಲಾದರೂ ಇಲಿಪಾಷಾಣ ಮಾರಾಟ ಮಾಡುವ ಗಾಡಿ ಮಾತ್ರ ಬದಲಾಗಿಲ್ಲ. ಇನ್ನು ಅದು ಬದಲಾಗುವುದೂ ಇಲ್ಲ ಬಿಡಿ.

ಓದುಗರು ಪತ್ರಿಕೆಯೂ ಹಾಗೇ ಇರಬೇಕೆಂದು ಅಂದುಕೊಂಡು ಬಿಡುತ್ತಾರೆ. ಆದರೆ ಓದುಗರನ್ನು ಬದಲಾವಣೆಗೆ ಮುಖಮಾಡಬೇಕಾದುದು, ಅವರ ಕಣ್ಣುಗಳನ್ನು ತರಬೇತುಗೊಳಿಸಬೇಕಾದುದು ಪತ್ರಿಕೆಗಳ ಹೊಣೆಗಾರಿಕೆಯೇ. ಕಾರಣ ಪುಟವಿನ್ಯಾಸ ಬದಲಾವಣೆಯೆಂದರೆ ಚಹರೆ ಬದಲಿಸಿಕೊಂಡಂತಷ್ಟೇ ಅಲ್ಲ. ಸುದ್ದಿಯನ್ನು
ಗ್ರಹಿಸುವ, ತಿಳಿಸುವ, ಮಂಡಿಸುವ ಪ್ರಯತ್ನವೂ ಹೌದು. ವಿನ್ಯಾಸದ ಎಲ್ಲಾ ಸಾಧ್ಯತೆಗಳ ಜತೆಗೆ ಓದುಗನ ಶ್ರಮವನ್ನು ಇಳಿಸುವ, ಆತನ ಓದನ್ನು ಇನ್ನಷ್ಟು ಸುಲಭಗೊಳಿಸುವ, ಆಪ್ತವಾಗಿಸುವ, ಅಪ್ಯಾಯಮಾನವಾಗಿಸುವ, ಬೇರೆಯದೇ ಅನುಭವ ನೀಡುವ ಒಂದು ಅನೂಹ್ಯ ಕ್ರಿಯೆ, ವಿನ್ಯಾಸ ಹೀನ ಪತ್ರಿಕೆ ಹಳೆಯ ಮೋಟರೋಲಾ ಡಬ್ಬಾ ಮೊಬೈಲ್ ಫೋನಾದರೆ, ವಿನ್ಯಾಸ ಶ್ರೀಮಂತಿಕೆಯಿರುವ ಪತ್ರಿಕೆ ಸ್ಮಾರ್ಟ್ ಐಫೋನ್ ಇದ್ದಂತೆ!

ನಾನು ‘ವಿಜಯ ಕರ್ನಾಟಕ’ ಪತ್ರಿಕೆ ಸಂಪಾದಕನಾದಾಗ, ಕನ್ನಡದ ಎಲ್ಲ ಪತ್ರಿಕೆಗಳು ತಂಬಾಕಿನ ಎಸಳುಗಳಂತೆ (ಹೊಗೆಸೊಪ್ಪು) ಇದ್ದವು. ತಲೆಬಾಚದ, ಹಲ್ಲುಜ್ಜದ, ಗಡ್ಡಬಿಟ್ಟ ಪಟ್ಟೆ ಪಟ್ಟೆ ಅಂಡರ್‌ವೇರ್ ತೊಟ್ಟ ‘ತಿಥಿ’ ಸಿನಿಮಾದ ನಾಯಕನಂತಿದ್ದವು. ಯಾವ ಪತ್ರಿಕೆಗೂ ವಿನ್ಯಾಸದ ಶ್ರೇಷ್ಠತೆಯೂ ಇರಲಿಲ್ಲ, ಅದರ ಗಂಜೀ ಪರಾಕಿನ ಹೊದಿಕೆಯೂ ಇರಲಿಲ್ಲ. ಅಷ್ಟಕ್ಕೂ ಅಡುಗೆ ಭಟ್ಟನೇ ಮಾಣಿಯೂ ಆಗಿರುವ ಕಾಕಾ ಹೊಟೇಲ್‌ನಂತಿತ್ತು. ಇನ್ನೂ ಡಿಸೈನ್ ಎಡಿಟರ್ ಅಥವಾ ಇಲ್ಲಸ್ಟ್ರೇಟರ್ ಎಂಬ ಹುದ್ದೆಯೂ ಇರಲಿಲ್ಲ. ಹಾಗಂತ ಮುದ್ರಣ ತಂತ್ರಜ್ಞಾನ ಪ್ರಗತಿಯಲ್ಲಿ ಬದಲಾವಣೆ ಕಂಡಿತ್ತು. ಅದಕ್ಕೆ ಪೂರಕವಾಗಿ ಸುದ್ದಿಮನೆಯಲ್ಲಿ ಸ್ಥಾಪಿತ ಮನಸ್ಸುಗಳು ಗೂಟಕ್ಕೆ ಕಟ್ಟಿಹಾಕಿಕೊಂಡಿದ್ದವು.

ನಾನು ಪತ್ರಿಕೆಯ ಹೂರಣಕ್ಕೆ ಕೈ ಹಾಕಲೇ ಇಲ್ಲ. ಅಲ್ಲದೇ ‘ವಿಜಯ ಕರ್ನಾಟಕ’ ಹೊಸ ಪತ್ರಿಕೆಯಾಗಿತ್ತು. ಪ್ರಯೋಗ ಮಾಡಲು ಸಾಕಷ್ಟು ಅವಕಾಶಗಳಿತ್ತು. ಅದಕ್ಕಿಂತ ಮುಖ್ಯವಾಗಿ ಅದಕ್ಕೊಂದು ವ್ಯಕ್ತಿತ್ವ, ಕ್ಯಾರೆಕ್ಟರ್ ಎಂಬುದು ಮೂಡಿರಲಿಲ್ಲ. ಅದೊಂಥರಾ ಹಲ್ಲು ಮೂಡದ ಬೊಚ್ಚುಬಾಯಿ ಕಂದಮ್ಮ! ಹೀಗೆ ಮೊದಲು ಕೈ ಹಾಕಿದ್ದು ವಿನ್ಯಾಸದೆಡೆಗೆ. ಪ್ರತಿದಿನವೂ ಓದುಗರಿಗೆ ಅನಿಸದ, ಸಣ್ಣಪುಟ್ಟ ಬದಲಾವಣೆ ಮಾಡುತ್ತಾ, ಮಾಡುತ್ತಾ ಹೋದೆ. ಮೂರು ತಿಂಗಳ ಹೊತ್ತಿಗೆ, ಮನೆಯ ಮುಂದಿನ ಮಾವಿನ ಮರ ಹೂ ಬಿಟ್ಟು, ಕಾಯಿಯಾಗಿ ಹಣ್ಣಾಗಿದ್ದು ತಿಳಿಯದಂತೆ, ಪತ್ರಿಕೆ ಹೊಸರೂಪದಲ್ಲಿ ನಳನಳಿಸುತ್ತಿತ್ತು.

ಆಗ ಪತ್ರಿಕೆಯ ಗಾತ್ರ ಬದಲಿಸಲು ನಿರ್ಧರಿಸಿದೆವು. ಅದಕ್ಕಾಗಿ Slim and trim ಎಂಬ ಅಭಿಯಾನ ಆರಭಿಸಿದೆವು. ಸಾಯಿಬಾಬಾ ಥರ ಕೂದಲು ಬಿಟ್ಟ ಸ್ನೇಹಿತ ಮಹೇಶ್ ಭಟ್ ಅವರನ್ನು ರೂಪದರ್ಶಿಯಾಗಿ ಮಾಡಿ, ಅವರ ಹಿಪ್ಪಿ ಕೂದಲನ್ನು ಟ್ರಿಮ್ ಮಾಡಿದರೆ ಹೇಗೋ ಹಾಗೆ ಪತ್ರಿಕೆ ಕಾಣುತ್ತದೆಂದು ಓದುಗರ ಕಣ್ಣುಗಳನ್ನು  train ಮಾಡಿದೆವು. ಕೈಗಳು ಅಗಲಕ್ಕೆ ಹರಡಿಕೊಂಡರೆ ಓದುವುದು ಎಷ್ಟು ಕಷ್ಟ, ಆಯಾಸದಾಯಕ ಎಂಬುದನ್ನು ಪ್ರತಿದಿನ ಆಕರ್ಷಕ, ಪರಿಣಾಮಕಾರಿ ಜಾಹೀರಾತುಗಳ ಮೂಲಕ ತಿಳಿಸಿಕೊಟ್ಟೆವು.

ಕೊನೆಗೊಂದು ದಿನ…
ಪತ್ರಿಕೆಯ ಗಾತ್ರ, ಆಕಾರವನ್ನು ಬದಲಿಸಿದೆವು. ಹಿಪ್ಪಿ ಸೆಲೂನ್ ಶಾಪ್‌ಗೆ ಹೋಗಿ ಮಿಲಿಟರಿ ಕಟ್ ಮಾಡಿಕೊಂಡು ಬಂದು ಹಗುರಾದಂತಿತ್ತು. ಅದನ್ನು ಎಲ್ಲ ಓದುಗರೂ ತಾಪ್ಡೇತೋಪು ಸ್ವೀಕರಿಸಿದರು. ಆದರೆ ನಮ್ಮ ಸರ್ಕ್ಯುಲೇಶನ್ ವಿಭಾಗದವರು ಕ್ಯಾತೆ ತೆಗೆದರು. ‘ಸಾರ್, ಪತ್ರಿಕೆಯ ಗಾತ್ರ ಕಡಿಮೆ ಮಾಡಿದ್ದರಿಂದ ಗ್ರಾಹಕರು ಬೇಸರಗೊಂಡಿದ್ದಾರೆ. ಆರು ದಿನದ ಪತ್ರಿಕೆ ಸೇರಿಸಿದರೆ ಒಂದು ಕೆಜಿ ರದ್ದಿಯಾಗುತ್ತಿತ್ತು, ಈಗ ಎಂಟು ದಿನ ಪತ್ರಿಕೆ ಹಾಕಬೇಕು’ ಎಂಬ ಪುಕಾರು ಕೇಳಿಬಂತು.

ಇದಕ್ಕಿಂತ ವಿಚಿತ್ರ ತಕರಾರು ಬಂತು. ಅದೇನೆಂದರೆ, ಮೊದಲಿನ ಗಾತ್ರದ ಪತ್ರಿಕೆಯಿಂದ ಬಿಯರ್ ಬಾಟಲಿ ಕಟ್ಟಲು ಸುಲಭವಾಗುತ್ತಿತ್ತು. ಈ ಹೊಸ ಸೈಜಿನ ಪತ್ರಿಕೆಯಿಂದ ಸುರುಳಿ ಸುತ್ತಿ ಬಾಟಲಿ ಕಟ್ಟಲು ಆಗುವುದಿಲ್ಲ ಎಂಬುದು. ಇಂಥ ಪ್ರತಿಕ್ರಿಯೆಗಳನ್ನು ಲೇವಡಿ ಮಾಡುವ ಹತ್ತಾರು ಜಾಹೀರಾತುಗಳನ್ನು ಮಾಡಿ, ಪತ್ರಿಕೆ ಮುಖಪುಟದಲ್ಲಿ ಪ್ರಕಟಿಸಿ, ಓದುಗರನ್ನು ಹೊಸ ಬದಲಾವಣೆಗೆ ಹದಗೊಳಿಸಿದೆವು. ಆನಂತರ ಬಾಟಲಿಪುತ್ರರಾರೂ ತಕರಾರೆತ್ತಲಿಲ್ಲ.

ಅದಾದ ಬಳಿಕ ‘ವಿಜಯ ಕರ್ನಾಟಕ’ದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ವಿನ್ಯಾಸ ಬದಲಿಸುವುದನ್ನೇ ದತ್ತಗುಣವನ್ನಾಗಿಸಿದೆವು. ಆಗಾಗ ಬದಲಾವಣೆಗೆ ತೆರೆದುಕೊಳ್ಳುವ ಪತ್ರಿಕೆ ಎಂಬುದನ್ನು ಓದುಗರೇ ಹೇಳಲಾರಂಭಿಸಿದರು. ಯಾವುದೇ ಬದಲಾವಣೆ ಮಾಡಿದರೂ ಅದನ್ನು ಅವರು ತೆರೆದ ಮನಸ್ಸಿನಿಂದ ಸ್ವೀಕರಿಸಲಾರಂಭಿಸಿದರು. ಸಿನಿಮಾ ಸ್ಟಾರ್ ಒಂದೊಂದು ಫ್ಯಾಶನ್ ಸ್ಟೇಟ್‌ಮೆಂಟಿನಲ್ಲಿ ಕಂಗೊಳಿಸುವಂತೆ, ಪತ್ರಿಕೆಯೂ ಅಂಥದೇ ರೂಪಾಂತರಕ್ಕೊಳಗಾ
ಯಿತು. ಈ ಎಲ್ಲ ಹಂತಗಳ ಮಾರ್ಪಾಟಿನ ಜತೆಯಲ್ಲಿ ಹೂರಣವನ್ನೂ ಬದಲಿಸಲು ಸಹಾಯಕವಾಯಿತು.

ಯಾರೋ ಒಂದಷ್ಟು ಜನ ಸಮುದ್ರದ ಮಧ್ಯಭಾಗಕ್ಕೆ ಹೋಗಿ ಜೋರಾಗಿ ನೀರನ್ನು ಒದ್ದರೆ, ಅಲೆಗಳು ಎದ್ದೆದ್ದು ಬರುವುದಿಲ್ಲ. ಅಲೆಗಳನ್ನು ಎಬ್ಬಿಸಲು ಸಮುದ್ರವೂ
ಹದವಾಗಬೇಕು. ಹತ್ತಾರು ಪೂರಕ ಸಂಗತಿಗಳನ್ನು ಅಣಿಗೊಳಿಸಬೇಕು. ಆಗಲೇ ಹೊಸ ಅಲೆ ಏಳಲು ಸಾಧ್ಯ. ಏಕಾಏಕಿ ಬಗ್ಗೋಣ ಪಂಚಾಂಗವನ್ನೋ, ಒಂಟಿಕೊಪ್ಪಲು ಪಂಚಾಂಗವನ್ನೋ ಬದಲಿಸಲು ಆಗುವುದಿಲ್ಲ. ಅಷ್ಟಕ್ಕೂ ಸೂರ್ಯ, ಚಂದ್ರ, ನಕ್ಷತ್ರಗಳ ನಡೆಗಳನ್ನು ಒಳಗೊಂಡಿದ್ದರೂ ಪಂಚಾಂಗವನ್ನು ನೋಡುವ, ಓದುವ, ತಿಳಿಯುವ ಒಂದು ಕ್ರಮವಿದೆ.

ಅದರ ವಿನ್ಯಾಸ ಬದಲಿಸಬೇಕೆಂದರೆ ವಿನ್ಯಾಸಕಾರನಿಗೆ ಈ ಗ್ರಹಗತಿಗಳ ನಡೆ ಗೊತ್ತಿರಬೇಕು. ಅವುಗಳ ಚಲನೆಯ ಬಗ್ಗೆ ಒಂದಷ್ಟು ಪ್ರಾಥಮಿಕ ಸಂಗತಿ ಗಳಾದರೂ ತಿಳಿದಿರಬೇಕು. ಆಗ ಮಾತ್ರ ಆತ ಪಂಚಾಂಗದ ಪುಟ ವಿನ್ಯಾಸ ಬದಲಿಸಬಲ್ಲ. ಅಲ್ಲದೇ ಆ ಪುಟವಿನ್ಯಾಸ ಪಂಚಾಂಗದ ಓದುಗರಿಗೆ ಆಪ್ತವಾದೀತು!
ಪತ್ರಿಕೆಯ ವಿನ್ಯಾಸ ಬದಲಾವಣೆಯೂ ಹಾಗೇ, ಸಂಪಾದಕ ಹಾಗೂ ಡಿಸೈನರ್ ತಿಂಗಳುಗಟ್ಟಲೆ ಚರ್ಚಿಸಬೇಕು. ಪತ್ರಿಕೆಯ ಇತಿಹಾಸ ಗೊತ್ತಿರಬೇಕು. ಓದುಗರ ಮೀನ ಹೆಜ್ಜೆ ತಿಳಿದಿರಬೇಕು. ಪತ್ರಿಕೆಯ ಮೂಲ ಧರ್ಮ, ಅಸಲಿಗುಣ ಅಂತ ಒಂದಿರುತ್ತದೆ, ಅದನ್ನು ಡಿಸೈನರ್ ಅರಿತಿರಬೇಕು. ಸಂಪಾದಕೀಯ ವಿಭಾಗದ ಪ್ರತಿಯೊಬ್ಬರಿಗೂ ಹೊಸ ಬದಲಾವಣೆ ಏಕೆ, ಹೇಗೆ, ಎಂತು ಎಂಬುದನ್ನು ಗಟ್ಟ ಹಾಕಿ ಸುರಿಯಬೇಕು. ಹೊಸ ವಿನ್ಯಾಸ ಹಾಲಿ ವಿನ್ಯಾಸದ ಮುಂದುವರಿದ ಭಾಗವಾಗಿರಬೇಕು. ಅಮೆರಿಕನ್ ಪ್ರಜೆಯನ್ನು ಕಸಿ ಮಾಡಿ ಆಫ್ರಿಕನ್ ಪ್ರಜೆ ಮಾಡಬಾರದು.

ಓದು ಸುಲಲಿತವಾಗಿರಬೇಕು. ಓದುಗನಿಗೆ ಎಲ್ಲವನ್ನೂ ಓದಬೇಕು ಎಂಬ ಕರೆಯಿಸಿಕೊಳ್ಳುವ ಅಂಶ ಇರಬೇಕು. ಇವೆಲ್ಲವನ್ನು ಓದಬೇಕಲ್ಲಪ್ಪ ಎಂಬ ಹೇರಿಕೆ ಭಾವ
ಇರಕೂಡದು. ವಿನ್ಯಾಸದ ಲವಲವಿಕೆಯೇ ಪುಟಗಳೊಳಗೆ ಕರೆದುಕೊಂಡು ಹೋಗಬೇಕು. ಅದು ವಿನ್ಯಾಸದೊಳಗಿನ ನಡಿಗೆಯಂತಾಗಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಅಕ್ಷರ Fontಗಳ ಆಯ್ಕೆ. ಅದೇ ವಿನ್ಯಾಸದ ರೂಪುರೇಷೆ ನಿರ್ಧರಿಸುವುದು. ಅದು ಒಂಥರಾ ಅನ್ನ ಮಾಡುವ ಮುನ್ನ ಅಕ್ಕಿಯನ್ನು ನಿರ್ಧರಿಸಿದಂತೆ. ಅಕ್ಷರಗಳೇ ವಿನ್ಯಾಸದ ದಾರಿದೀಪಗಳು.

ಒಳ್ಳೆಯ, ಅಂದದ ಅಕ್ಷರಗಳನ್ನು ಆಯ್ಕೆ ಮಾಡಿದರೆ ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ಸೂಕ್ತ ಅಕ್ಷರಗಳ ಆಯ್ಕೆಯೇ ವಿನ್ಯಾಸದ ಯಶಸ್ಸನ್ನು ನಿರ್ಧರಿಸುತ್ತದೆ. ಪುಟಗಳಲ್ಲ ಅಕ್ಷರಗಳೇ ಹರಡಿಕೊಳ್ಳುವುದರಿಂದ, ಅಕ್ಷರಗಳೇ ವಿನ್ಯಾಸದಂತೆ ತೋರುತ್ತದೆ. ಇಂಗ್ಲಿಷ್‌ನಲ್ಲಂತೂ ಸಾವಿರಾರು ಬಗೆಯ, ಜಾತಿಯ, ಅಕ್ಷರಗಳಿವೆ. ಒಂದೊಂದು ಭಾವ, ಮನಸ್ಸಿನ ಏರಿಳಿತಗಳನ್ನು ಹೇಳಲು ಬಗೆ ಬಗೆಯ ಅಕ್ಷರಗಳಿವೆ. ಇದು ವಿನ್ಯಾಸಕಾರನಿಗೆ ಸವಾಲಿನ ಕೆಲಸವೂ ಹೌದು. ಮುದ್ರಣ ತಂತ್ರಜ್ಞಾನ ಅಗಾಧವಾಗಿ ಬೆಳೆದ ನಂತರ ಭಾರತೀಯ ಪತ್ರಿಕೋದ್ಯಮದಲ್ಲಿ ವಿನ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವ ಹೊಸ ಜಾಯಮಾನ ಆರಂಭವಾಯಿತು. ವಿನ್ಯಾಸವಿಲ್ಲದ ಪತ್ರಿಕೆಗಳೆಂದರೆ ಮೇಕ್ ಅಪ್ ಇಲ್ಲದ ನಟಿಯನ್ನು ನೋಡಿದಂತೆ ಎಂಬುದು ವಕ್ರತುಂಡೋಕ್ತಿ ಅಲ್ಲ.

ಆದರೆ ವಾಸ್ತವ. ಪತ್ರಿಕೆಗೆ ಡಿಸೈನ್ ಬಹು ದೊಡ್ಡ ಆಕರ್ಷಣೆ. ಇಂದು ಡಿಸೈನ್ ಉಪಸರಕಲ್ಲ. ಅದೇ ಹೂರಣವಾಗಿದೆ. ವಿನ್ಯಾಸವನ್ನೇ content ಎಂದು
ಪರಿಗಣಿಸಲಾಗುತ್ತಿದೆ. ಹೀಗಾಗಿ ಬರೆಯುವ ಪತ್ರಕರ್ತರಂತೆ, ಪತ್ರಿಕೆಯ ಅಂದಗೊಳಿಸುವ ವಿನ್ಯಾಸಕಾರರೂ ಸುದ್ದಿಮನೆಯ ಒಳಮನೆಯನ್ನು ಆಕ್ರಮಿಸಿ ಕೊಳ್ಳುತ್ತಿದ್ದಾರೆ. ಓದುಗರೂ ಪತ್ರಿಕೆಯ ಮೇಕ್ ಅಪ್‌ಗೆ ಮಾರು ಹೋಗುತ್ತಿದ್ದಾರೆ. ಅದಕ್ಕಾಗಿ ಪತ್ರಿಕೆಯ ಮಾಲೀಕರು ಲಕ್ಷಾಂತರ ಹಣ ಕೊಟ್ಟು ವಿದೇಶಿ ವಿನ್ಯಾಸಕಾರರನ್ನು ಕರೆತಂದು ತಮ್ಮ ಪತ್ರಿಕೆಗೆ ಹೊಸ ಮೆರಗು ನೀಡುತ್ತಿದ್ದಾರೆ.

ಕನ್ನಡದ ಪತ್ರಿಕೆಗಳು ವಿನ್ಯಾಸದ ಹೊಸ ಹೊಸ ವರಸೆಗಳನ್ನು ಅಳವಡಿಸಿಕೊಳ್ಳಲು ಹಿಂದೆ ಬಿದ್ದಿಲ್ಲ. ಆದರೆ ಪತ್ರಿಕೆಯಲ್ಲಿ ಬಿಳಿ ಜಾಗ (white space) ವನ್ನು ಹೆಚ್ಚು ಬಿಟ್ಟರೆ ಪುಟ ನಿರರ್ಥಕಗೊಳಿಸಿದಂತೆ ಎಂಬ ಅಭಿಪ್ರಾಯ ಇನ್ನೂ ಇದೆ. ಕನ್ನಡ ಪತ್ರಿಕೆಗಳು ಮೇಕಪ್ ಮಾಡಿಕೊಳ್ಳಲು ಇನ್ನೂ ಅನುಮಾನ ಮಾಡುತ್ತಿವೆ. ಹೊಸ ಹೊಸ ಸಲಕರಣೆ, ವಿನ್ಯಾಸ ಪರಿಕರ, ತಂತ್ರಗಾರಿಕೆಗಳನ್ನು ಅಳವಡಿಸಿಕೊಳ್ಳಲು ಇನ್ನೂ ಸಂಕೋಚ ಅಥವಾ ಮಡಿವಂತಿಕೆ. ಹಾಗಂತ ಓದುಗ
ಇವನ್ನೆಲ್ಲ ಇಂಗ್ಲಿಷ್ ಪತ್ರಿಕೆಗಳಿಂದ ಪಡೆಯುತ್ತಿದ್ದಾನೆ. ಅಂದ ಹಾಗೆ ನನಗೆ ‘ದಿ ಗಾರ್ಡಿಯನ್’ ಪತ್ರಿಕೆಯ ಬಗ್ಗೆ ಅಚ್ಚರಿ ಮತ್ತು ಅಭಿಮಾನವೆನಿಸಲು ಮುಖ್ಯ ಕಾರಣ ಅದು ಕೇವಲ ತನ್ನ ವಿನ್ಯಾಸವನ್ನು ಬದಲಿಸಲಿಲ್ಲ, ತನ್ನ ಆಕಾರವನ್ನೂ ಬದಲಿಸಿತು. ಬ್ರಾಡ್ ಶೀಟ್ ನಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆ ಬರ್ಲಿ (ವಿಶ್ವವಾಣಿ ಹಾಗೂ ಲಂಕೇಶ್ ಪತ್ರಿಕೆ ನಡುವಿನ ಆಕಾರ) ಸೈಜ್ ನಲ್ಲಿ ಪ್ರಕಟವಾಗಲು ಆರಂಭಿಸಿದಾಗ ಓದುಗರು ಮುಖ ಕಿವುಚಿಕೊಂಡರು. ಆದರೆ ಲಂಡನ್ನಿನ ಎಲ್ಲ ಪತ್ರಿಕೆಗಳೂ ಆ ಆಕಾರಕ್ಕೆ ಹೊರಳಿದ್ದರಿಂದ ಓದುಗರಿಗೆ ಆಯ್ಕೆಗಳಿರಲಿಲ್ಲ.

ಆದರೆ ಮೊನ್ನೆ ‘ದಿ ಗಾರ್ಡಿಯನ್’ ಪತ್ರಿಕೆ ಏಕಾಏಕಿ ಬರ್ಲಿನರ ಆಕಾರದಿಂದ ಟ್ಯಾಬ್ಲಾಯಿಡ್ (ಲಂಕೇಶ್ ಪತ್ರಿಕೆ ಆಕಾರ) ಸೈಜ್‌ಗೆ ಮಾರ್ಪಾಡಾದಾಗ ಮತ್ತದೇ ಮುಖಗಳು ಕಿವುಚಿಕೊಂಡವು. ಗಾರ್ಡಿಯನ್ ನಂಥ ಪತ್ರಿಕೆ ಟ್ಯಾಬ್ಲಾಯಿಡ್ ಆಕಾರ, ಸ್ವರೂಪದಲ್ಲಿ ನೋಡಲು ಓದುಗರು ಸಿದ್ಧರಿರಲಿಲ್ಲ. ಆದರೆ ಮುದ್ರಣ
ಕಾಗದದ ಬೆಲೆ ಹೆಚ್ಚಳದಿಂದ, ಜೀವನ ಸಾಗಿಸುವುದೇ ದುರ್ಬರವಾದಾಗ ಬೇರೆ ದಾರಿಯೇ ಇರಲಿಲ್ಲ. ಪ್ರಾಯಶಃ ಆ ಪತ್ರಿಕೆ ಇನ್ನೆಂದೂ ಇನ್ನೂ ಚಿಕ್ಕದಾಗಲಿಕ್ಕಿಲ್ಲ ಎಂಬುದಷ್ಟೇ ಸಮಾಧಾನ.

ಪಶ್ಚಿಮದಲ್ಲಿ ಬೀಸಿದ ಗಾಳಿ ಪೂರ್ವಕ್ಕೆ ಬರಲೇಬೇಕು ಮತ್ತು ಅದು ಕರ್ನಾಟಕಕ್ಕೂ ತಟ್ಟಲೇಬೇಕು. ಎರಡು ಜಡೆಗಳು ಹೋಗಿ, ಒಂದು ಜಡೆಯಾಗಿ, ಆ ಒಂದು ಜಡೆ
ಬಾಬ್ ಕಟ್ ಆಗಿ, ನಂತರ ಅದು ಬಾಯ್ ಕಟ್ ಆಗಿ, ಆ ಬಾಯ್ ಕಟ್ ಮೂನ್ ಕಟ್ ಆಗಿದ್ದನ್ನು ನೋಡಿದ್ದೇವೆ. ಕೂದಲೇ ಬೇಕಿಲ್ಲ, ತಲೆ ಇದ್ದರೆ ಸಾಕು ಎಂಬಂತಾಗಿದೆ. ಬದಲಾಗುತ್ತಿರುವ ಜಗತ್ತನ್ನು ವರದಿ ಮಾಡುವ ಪತ್ರಿಕೆಗಳೇ ಆ ಬದಲಾವಣೆಯನ್ನು ಮೀರಿಸುವ ರೀತಿಯಲ್ಲಿ ಬದಲಾಗುತ್ತಿವೆ.

Like life, newspapers are also beautiful!