ನೂರೆಂಟು ವಿಶ್ವ
vbhat@me.com
ಹಿರಿಯ ಪತ್ರಕರ್ತರು, ಸಂಪಾದಕರು ಒಟ್ಟಿಗೆ ಕೂತಾಗ ಬಹುಪಾಲು ಸಮಯ ಚರ್ಚೆಯಾಗುವ ವಿಷಯವೆಂದರೆ, ‘ಇತ್ತೀಚಿಗೆ ಉತ್ತಮ ಪತ್ರಕರ್ತರೇ ಸಿಗುತ್ತಿಲ್ಲ’ ಎನ್ನುವುದಾಗಿದೆ. ಲೋಕಸಭಾ ಚುನಾವಣೆ ವರದಿ ಮಾಡಲೆಂದು ದಿಲ್ಲಿಯಿಂದ ಬಂದ ಮೂವರು ಹಿರಿಯ ಪತ್ರಕರ್ತರೊಂದಿಗೆ ಚರ್ಚಿಸುವ ವೇಳೆ ನನ್ನ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.
‘ಉತ್ತಮ ಪತ್ರಕರ್ತರೇ ಸಿಗುತ್ತಿಲ್ಲ. ಭಾಷಾ ಜ್ಞಾನ ಹೊಂದಿರುವವರು ಬಹಳ ವಿರಳ. ಸ್ನಾತಕೋತ್ತರ ವ್ಯಾಸಂಗ ಮುಗಿಸಿರುತ್ತಾರೆ. ಆದರೆ ಸರಳ ಭಾಷೆ ಯಲ್ಲಿ ತಪ್ಪಿಲ್ಲದೇ ಬರೆಯಲು ಮಾತ್ರ ಬರುವುದಿಲ್ಲ. ಈಗ ವೃತ್ತಿಗೆ ಬರುವವರಿಗೆ ಸಾಹಿತ್ಯದ ಗಂಧ-ಗಾಳಿಯೂ ಗೊತ್ತಿರುವುದಿಲ್ಲ. ಇವರನ್ನು ತಿದ್ದಿ-ತೀಡಿ ಒಳ್ಳೆಯ ಪತ್ರಕರ್ತರನ್ನು ಮಾಡುವುದೇ ದೊಡ್ಡ ಸವಾಲು’ ಎನ್ನುವ ಮಾತನ್ನು ಅನುಮೋದಿಸಿದರು. ‘ಇದು ಹಿಂದಿ ಪತ್ರಿಕೋದ್ಯಮದ ಸಮಸ್ಯೆ ಇದ್ದಿರಬಹುದು ಎಂದು ಭಾವಿಸಿದ್ದೆವು. ನಿಮ್ಮ ಭಾಷೆಯಲ್ಲೂ ಇದೇ ಸಮಸ್ಯೇನಾ?’ ಎಂದು ಅವರು ರಾಗ ಎಳೆದರು.
ಪ್ರಾಯಶಃ ಇದು ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷಾ ಪತ್ರಿಕೋದ್ಯಮದ ಸಮಸ್ಯೆಯೂ ಹೌದು. ಈ ದಿನಗಳಲ್ಲಿ ಒಳ್ಳೆಯ ತಳಿಯ ಪತ್ರಕರ್ತರನ್ನು ಪಡೆಯುವುದು ಬಹಳ ಕಷ್ಟ. ತಪ್ಪುಗಳಿಲ್ಲದೆ, ಸರಳ ಕನ್ನಡದಲ್ಲಿ ಬರೆಯುವ ಪತ್ರಕರ್ತರ ಅಭಾವವಂತೂ ಇದ್ದೇ ಇದೆ. ನರೇಂದ್ರ ಮೋದಿ ಅವರ ೧೦
ವರ್ಷಗಳ ಆಡಳಿತ ಅವಧಿಯಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಇಡೀ ಚುನಾವಣಾ ಭಾಷಣದಲ್ಲಿ ಆರೋಪ ಮಾಡುತ್ತಲೇ ಇದ್ದಾರೆ. ಆದರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾತ್ರ ಉದ್ಯೋಗ ಅವಕಾಶವಿದೆ.
ಆದರೆ ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಎಂಎ ಪತ್ರಿಕೋದ್ಯಮ ವ್ಯಾಸಂಗ ಮುಗಿಸಿ ಬರುವವರಿಗೆ ಆರಂಭದಿಂದಲೇ ಕಲಿಸಬೇಕು. ಒಂದೂ ತಪ್ಪಿಲ್ಲದೆ ಒಂದು ಪ್ಯಾರಾ ಬರೆಯಲು ಗೊತ್ತಿರುವುದಿಲ್ಲ. ಹಾಗಂತ ಅವರು ಬರೆಯುವುದು ಅವರ ಮಾತೃಭಾಷೆಯಾದ ಕನ್ನಡದಲ್ಲಿ. ಹದಿನೇಳು ವರ್ಷ ಕನ್ನಡ
ಮಾಧ್ಯಮದಲ್ಲಿ ಅಧ್ಯಯನ ಮಾಡಿ, ಸರಳ ಕನ್ನಡದಲ್ಲಿ ಬರೆಯಲು ಬರುವುದಿಲ್ಲ ಅಂದರೆ ಯಾರನ್ನು ದೂಷಿಸಬೇಕು? ಪತ್ರಿಕೋದ್ಯಮವನ್ನು ಯಾರಿಗೆ ಬೇಕಾದರೂ ಕಲಿಸಬಹುದು. ಆದರೆ ಭಾಷೆಯನ್ನು ಅವರೇ ಕಲಿಯಬೇಕು. ಅದು ನಮ್ಮ ವ್ಯಕ್ತಿತ್ವದಂತೆ. ತಪ್ಪುಗಳಿಲ್ಲದೆ ಸರಳ ಕನ್ನಡ ಬರೆಯುವವರು ಸಿಕ್ಕರೆ ಅಂಥವರನ್ನು ಒಳ್ಳೆಯ ಪತ್ರಕರ್ತರನ್ನಾಗಿ ರೂಪಿಸಬಹುದು.
ಸರಳ ಕನ್ನಡ ಬರೆಯುವವರು ಅಂದರೆ ಯಾರು? ಅವರಿಗೆ ಛಂದಸ್ಸು, ಸಂಧಿ, ಸಮಾಸ, ವ್ಯಾಕರಣಗಳ ಒಳಸುಳಿಗಳೇನೂ ಗೊತ್ತಿರಬೇಕೆಂದಿಲ್ಲ, ಕನ್ನಡವನ್ನು ಒಂದು ಭಾಷೆಯನ್ನಾಗಿ ಅಭ್ಯಾಸ ಮಾಡಿರಬೇಕಿಲ್ಲ, ಕಾಗುಣಿತ ದೋಷಗಳಿಲ್ಲದೆ ಬರೆಯಲು ಬಂದರೆ ಸಾಕು. ಅಂಥವರನ್ನು ಎರಡು
ವರ್ಷಗಳಲ್ಲಿ ಒಳ್ಳೆಯ ಕಸುಬಿಯನ್ನಾಗಿ ಮಾಡಬಹುದು. ಸಮಸ್ಯೆಯೇನೆಂದರೆ, ಅಂಥವರೇ ಸಿಗುವುದಿಲ್ಲ. ಎಂ.ಎ. ಪತ್ರಿಕೋದ್ಯಮ ಮುಗಿಸಿ ಬಂದಿರು ತ್ತಾರೆ, ಅವರ ಬಯೋಡಾಟಾದಲ್ಲೇ ಹತ್ತಾರು ಕಾಗುಣಿತ ದೋಷಗಳಿರುತ್ತವೆ. ದುರ್ದೈವವೆಂದರೆ, ತಮ್ಮ ಬಯೋಡಾಟಾದಲ್ಲಿ ತಪ್ಪುಗಳಿವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ.
ಕೆಲ ತಿಂಗಳ ಹಿಂದೆ ಎಂ.ಎ. ಪತ್ರಿಕೋದ್ಯಮ ಮುಗಿಸಿದ ವಿದ್ಯಾರ್ಥಿಯೊಬ್ಬ ನೌಕರಿ ಬಯಸಿ ಬಯೋಡಾಟಾ ಕೊಟ್ಟ. ಕುತೂಹಲದಿಂದ ಅದನ್ನು ಓದಿದೆ. ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ವಿವರವಾಗಿ ತನ್ನ ಬಗ್ಗೆ ಬರೆದುಕೊಂಡಿದ್ದ. ‘ಇದನ್ನು ನೀನು ಓದಿದ್ದೀಯಾ?’ ಎಂದು ಕೇಳಿದೆ. ಹೂಂ ಎಂದು
ತಲೆಯಾಡಿಸಿದ. ‘ಒಂದು ಕೆಲಸ ಮಾಡು, ನೀನು ನಿನ್ನ ಬಗ್ಗೆ ಬರೆದುಕೊಂಡಿದ್ದೀಯಲ್ಲ, ಈ ಎರಡು ಪುಟಗಳಲ್ಲಿರುವ ಕಾಗುಣಿತ ದೋಷಗಳನ್ನು ಪತ್ತೆಹಚ್ಚು. ಅದೇ ನಾನು ನಿನಗೆ ನೀಡುವ ಟೆಸ್ಟ್’ ಎಂದು ನನ್ನ ಮುಂದೆಯೇ ತಿದ್ದಲು ಹೇಳಿದೆ.
ಆತ ತಾನು ಬರೆದಿದ್ದನ್ನು ಎರಡು ಸಲ ಓದಿದ. ‘ಸರ್, ಇದರಲ್ಲಿ ಏನೂ ತಪ್ಪುಗಳಿಲ್ಲ. ಸರಿಯಾಗಿಯೇ ಇದೆ. ಕಂಪೋಸ್ ಮಾಡಿದ ನಂತರ ನಾನು ಓದಿದ್ದೇನೆ’ ಎಂದ. ಅವನಿಂದ ಆ ಕಾಪಿ ಇಸ್ಕೊಂಡು ತಪ್ಪಾದ ಕಡೆ ಕೆಂಪು ಇಂಕಿನಲ್ಲಿ ಸುರುಳಿ ಹಾಕಿದೆ. ಹದಿಮೂರು ‘ಚಕ್ಕುಲಿ’ಗಳು ಮೂಡಿದ್ದವು!
ಆತ ವಿಧ್ಯಾರ್ಥಿ, ಪಧವೀದರ, ಸ್ನಾತಕಾತ್ತರ, ಹುನ್ನತ ವಾಸ್ಯಂಗ, ಸಮ್‌ಸ್ಕೃತ… ಎಂದೆಲ್ಲ ಬರೆದಿದ್ದ. ಆತನಿಗೆ ತಾನು ಬರೆದಿದ್ದು ತಪ್ಪು ಎಂಬುದು ಸಹ ಗೊತ್ತಿರಲಿಲ್ಲ. ಅವೇ ಸರಿ ಎಂದು ತಿಳಿದಿದ್ದ. ಈ ಪದ ಬಳಸುವಾಗ ಅವನಲ್ಲಿ ಯಾವ ಸಂದೇಹಗಳೂ ಮೂಡಿರಲಿಲ್ಲ. ‘ಪಧವೀದರ ಎಂಬುದೇ ಸರಿ
ಅಲ್ಲವಾ, ಅದರಲ್ಲಿ ತಪ್ಪೇನಿದೆ ಸಾರ್’ ಎಂದು ಬೇರೆ ವಾದಿಸಿದ.
ವಿಧ್ಯಾರ್ಥಿ, ಸುದ್ಧಿ ಎಂದು ಬರೆಯುವವರಿಗೆ ಈ ಜನ್ಮದಲ್ಲಿ ಭಾಷೆಯನ್ನೂ ಕಲಿಸಲಾಗುವುದಿಲ್ಲ, ಪತ್ರಿಕೋದ್ಯಮವನ್ನೂ ಕಲಿಸಲಾಗುವುದಿಲ್ಲ. ಇಂಥವರು ಮಹಾಪಡಪೋಶಿಗಳು. ಎಲ್ಲಿ, ಯಾವಾಗ ಪರಾಮಶಿ ಮಾಡುತ್ತಾರೆಂಬುದು ಗೊತ್ತಾಗುವುದಿಲ್ಲ. ಇಂದು ಪತ್ರಿಕೋದ್ಯಮಕ್ಕೆ ಬರುತ್ತಿರುವವರ ಪೈಕಿ ಬಹುತೇಕರು ಇಂಥವರು. ಇವರು ಕತೆ, ಕಾದಂಬರಿ, ವಿಮರ್ಶೆ, ಸಾಹಿತ್ಯವನ್ನು ಬಿಡಿ, ದಿನಕ್ಕೆ ಸರಿಯಾಗಿ ಎರಡು ಪತ್ರಿಕೆಗಳನ್ನೂ ಓದಿರುವುದಿಲ್ಲ. ಒಂದು ವರ್ಷದ ಹಿಂದೆ, ‘ವರದಿಗಾರರು, ಉಪಸಂಪಾದಕರು ಬೇಕಾಗಿದ್ದಾರೆ’ ಎಂದು ಜಾಹೀರಾತು ನೀಡಿದ್ದೆ. ಸುಮಾರು ಎಂಬತ್ತು ಮಂದಿ ಅರ್ಜಿ
ಹಾಕಿದ್ದರು. ಆ ಪೈಕಿ ಹದಿನೈದು ಜನರನ್ನು ಸಂದರ್ಶನಕ್ಕೆ ಕರೆದಿದ್ದೆವು.
ಅಂತಿಮವಾಗಿ, ಒಲ್ಲದ ಮನಸ್ಸಿನಿಂದ ಇಬ್ಬರನ್ನು ಆಯ್ಕೆ ಮಾಡುವ ಹೊತ್ತಿಗೆ ಸುಸ್ತಾಗಿ ಹೋಗಿದ್ದೆವು. ‘ಕೌಂಟ್ ಡೌನ್’ ಎಂಬ ಇಂಗ್ಲಿಷ್ ಪದದ ಅರ್ಥವೇನು ಎಂದು ಕೇಳಿದ್ದಕ್ಕೆ, ‘ಇಳಿಜಾರಿನಲ್ಲಿ ನಿಂತು ಎಣಿಸೋದು’ ಎಂದು ಒಬ್ಬ ‘ಬೃಹಸ್ಪತಿ’ ಬರೆದಿದ್ದ! ನನಗೆ ಈ ವಿದ್ಯಾರ್ಥಿಯನ್ನು ನೋಡಲೇ ಬೇಕು, ಅವನ ಜತೆ ಮಾತಾಡಲೇಬೇಕು ಎಂದು ಅನಿಸಿತು. ಸಂದರ್ಶನಕ್ಕೆ ಹಾಜರಾಗುವಂತೆ ಪತ್ರ ಬರೆದು ಕರೆಯಿಸಿಕೊಂಡೆ. ‘ಬದುಕಿನಲ್ಲಿ ನೀನು ‘ಕೌಂಟ್‌ಡೌನ್’ ಎಂಬ ಪದವನ್ನು ಕೇಳಿಯೇ ಇಲ್ಲವಾ?’ ಎಂದು ಕೇಳಿದೆ. ‘ಕೇಳಿದ್ದೇನೆ ಸಾರ್, ಅದರ ಅರ್ಥವನ್ನು ಸರಿಯಾಗಿಯೇ ಬರೆದಿದ್ದೇನಲ್ಲ’
ಎಂದ. ಆತ ಬೆಂಗಳೂರಿಗೆ ಸನಿಹದ ಹಾರೋಹಳ್ಳಿಯವನು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪತ್ರಿಕೋದ್ಯಮ ಓದಿದ್ದಾನೆ.
ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದವ. ಅಪ್ಪ ವಕೀಲ. ಅವನಿಗೆ ‘ಕೌಂಟ್ ಡೌನ್’ ಎಂಬ ದಿನಬಳಕೆ ಪದದ ಅರ್ಥವೇ ಗೊತ್ತಿಲ್ಲ. ‘ನೀನು ಐಪಿಎಲ್ ಮ್ಯಾಚ್ ನೋಡುತ್ತೀಯಾ?’ ಎಂದು ಕೇಳಿದೆ. ‘ಹೂಂ ಸರ್, ನನಗೆ ಟಿ-ಟ್ವೆಂಟಿ ಪಂದ್ಯಗಳೆಂದರೆ ಪ್ರಾಣ. ಒಂದೂ ಮ್ಯಾಚ್ ತಪ್ಪಿಸೊಲ್ಲ’ ಎಂದ. ‘ಹಾಗಾದರೆ ಸಿಯೆಟ್ ಟಯರ್ ಸ್ಟ್ರೆಟೆಜಿಕ್ ಟೈಮ್ ಔಟ್ ಅಂತ ತೋರಿಸುತ್ತಾರಲ್ಲ. ಅದರ ಕೊನೆಯಲ್ಲಿ ಕೌಂಟ್‌ಡೌನ್ ಅಂತ ತೋರಿಸುತ್ತಾರಲ್ಲ, ಅದೇನು
ಇಳಿಜಾರಿನಲ್ಲಿ ನಿಂತು ಎಣಿಸೋದಾ?’ ಎಂದು ಕೇಳಿದೆ. ಆದರೂ ಅವನಿಗೆ ಅರ್ಥವಾಗಲಿಲ್ಲ. ಕಡೆಗೆ ನಾನೇ ‘ಕ್ಷಣಗಣನೆ’ ಎಂಬ ಪದ ಕೇಳಿದ್ದೀಯಾ ಎಂದೆ. ‘ಇಲ್ಲ’ ಎಂದ.
ನನ್ನ ಚೇಂಬರ್‌ನ ಬಾಗಿಲನ್ನು ತೆರೆದು ಅವನನ್ನು ಪ್ರೀತಿಯಿಂದ ಬೀಳ್ಕೊಟ್ಟು, ನನ್ನ ಕುರ್ಚಿಗೆ ಮರಳಿ ಹಣೆಹಣೆ ಚಚ್ಚಿಕೊಂಡೆ. ಇಂಥವರನ್ನೆಲ್ಲ ಸುದ್ದಿಮನೆಯೊಳಗೆ ಬಿಟ್ಟುಕೊಂಡರೆ ಮಾನವ ಬಾಂಬ್ (ಏಞZ ಆಟಞಚಿ) ಗಳನ್ನು ಬಿಟ್ಟುಕೊಂಡಂತೆ. ಯಾವಾಗ ಸ್ಪೋಟ ಸಂಭವಿಸುತ್ತದೆ ಎಂದು
ಹೇಳಲಾಗುವುದಿಲ್ಲ. ಆದರೆ ಒಂದಲ್ಲ ಒಂದು ದಿನ ಅನಾಹುತ ಮಾತ್ರ ತಪ್ಪಿದ್ದಲ್ಲ. ಆಯ್ಕೆ ಪ್ರಕ್ರಿಯೆ ದೋಷದಿಂದಲೋ, ಪರವಾಗಿಲ್ಲ, ತಿದ್ದಿ ತರಬೇತಿ ನೀಡಿ ಸರಿಮಾಡೋಣ ಎಂಬ ಅತಿಯಾದ ಆತ್ಮವಿಶ್ವಾಸದಿಂದಲೋ, ಯಾರೂ ಸಿಗಲಿಲ್ಲವಲ್ಲ ಇಷ್ಟಾದರೂ ಬರುತ್ತದಲ್ಲ ಎಂಬ ಸಮಾಧಾನ ಭಾವ ದಿಂದಲೋ ಆಯ್ಕೆ ಮಾಡಿರುತ್ತೇವೆ. ಆದರೆ ಇಂಥವರೇ ಮಾನವ ಬಾಂಬ್ ಗಳಂತೆ ಎರಗುತ್ತಾರೆ. ಯಾವಾಗ, ಎಲ್ಲಿ ಎಂಬುದು ಗೊತ್ತಾಗುವುದಿಲ್ಲ. ಆದರೆ ಇವರು ಜೀವಂತ ಬಾಂಬ್‌ಗಳು.
ಯಾವಾಗ ಬೇಕಾದರೂ ಸೋಟವಾಗಬಹುದು! ರಾತ್ರಿ ಪಾಳಿಯಲ್ಲಿ ಇವರು ಬರೆದಿದ್ದನ್ನು ಸೀನಿಯರ್‌ಗಳ್ಯಾರೂ ನೋಡದಿದ್ದರೆ, ಸ್ಪೋಟ ಗ್ಯಾರಂಟಿ. ಈ(ಮಾನವ)ಬಾಂಬ್ ಗಳು ಎಲ್ಲಾ ಸುದ್ದಿಮನೆಗಳಲ್ಲೂ ಇರುತ್ತಾರೆ. ಇವರ ಕೃತ್ಯಗಳನ್ನು ಸೀನಿಯರ್‌ಗಳು ನಿಷ್ಕ್ರಿಯಗೊಳಿಸುತ್ತಲೇ ಇರುತ್ತಾರೆ. ಆದರೆ ಎಲ್ಲರ ಕಣ್ತಪ್ಪಿಸಿ ಭಾನಗಡಿ ಮಾಡಿಬಿಡುತ್ತಾರೆ!
ಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ. ಭೈರಪ್ಪ ಅವರೊಂದಿಗೆ ಕೆಲ ವರ್ಷದ ಹಿಂದೆ ಮಾತನಾಡುವಾಗ, ಹಿಂದಿನ ದಿನ ಅವರು ದಿವಂಗತ ಸುಮತೀಂದ್ರ ನಾಡಿಗ ಅವರ ‘ಶ್ರೀವತ್ಸ ಸ್ಮೃತಿ’ ಎಂಬ ಗ್ರಂಥವನ್ನು ಬಿಡುಗಡೆ ಮಾಡಿ ಮಾತಾಡಿದ್ದರು. ಅವರ ಮಾತು ಪತ್ರಿಕೆಗಳಲ್ಲಿ ತಪ್ಪಾಗಿ ವರದಿ ಯಾಗಿದ್ದವು. ‘ನಾನು ಹೇಳಿದ್ದೇ ಒಂದು, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದೇ ಒಂದು, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ನೋಡಿದರೆ, ನನ್ನ ಬಗ್ಗೆ ತಪ್ಪು ಭಾವಿಸುವ ಸಾಧ್ಯತೆ ಇದೆ, ಆದರೆ ನಾನು ಹಾಗೆ ಹೇಳಿಯೇ ಇಲ್ಲ. ಸಾಧ್ಯವಾದರೆ ನೀವು ನನ್ನ ಭಾಷಣದ ಧ್ವನಿ ಮುದ್ರಿಕೆ ಕೇಳಿ’ ಎಂದು ಹೇಳಿದರು. ನಾನು
ಅವರ ಭಾಷಣವನ್ನು ಪೂರ್ತಿಯಾಗಿ ಕೇಳಿದೆ. ಅವರು ತಮ್ಮ ಮಾತಿನಲ್ಲೂ, ‘ಧರ್ಮಶಾಸವೇ ನಮ್ಮ ಸಂವಿಧಾನ, ಸದ್ಯದ ಸಂವಿಧಾನದಲ್ಲಿ ನಮ್ಮ ಧರ್ಮದ ಪರಂಪರೆ ಒಳಗೊಂಡಿಲ್ಲ’ ಎಂದು ಹೇಳಿಯೇ ಇಲ್ಲ.
ಅವರು ‘ನಮ್ಮ ಹಾಲಿ ಸಂವಿಧಾನ ಅಸ್ತಿತ್ವಕ್ಕೆ ಬರುವ ಮೊದಲು, ಆಯಾ ದಿನಮಾನಗಳಲ್ಲಿ, ಕಾಲಘಟ್ಟಗಳಲ್ಲಿ ಪ್ರಮುಖವೆನಿಸಿದ ಧರ್ಮಶಾಸಗಳೇ ನಮಗೆ ಸಂವಿಧಾನವಾಗಿದ್ದವು. ಅದರಿಂದಲೇ ನಾವು ಪ್ರೇರಣೆ ಪಡೆಯುತ್ತಿzವು’ ಎಂದು ಹೇಳಿದ್ದರು. ಆದರೆ ಅವರು ಎಲ್ಲೂ ಈಗಿನ ಸಂವಿಧಾನಕ್ಕಿಂತ ಧರ್ಮಶಾಸಗಳೇ ಪ್ರಸ್ತುತ ಎಂದು ಹೇಳಿರಲಿಲ್ಲ. ಇದನ್ನೇ ಕೆಲವರು ವಿವಾದ ಸೃಷ್ಟಿಸಿದರು. ಡಾ.ಭೈರಪ್ಪನವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ, ಅವರು
ಸಂವಿಧಾನ ವಿರೋಧಿ, ಕೋಮುವಾದಿ ಎಂದೆಲ್ಲ ಹುಯಿಲೆಬ್ಬಿಸಿದರು. ತಮ್ಮದಲ್ಲದ ತಪ್ಪಿಗೆ ಅವರು ಯಾರ‍್ಯಾರಿಂದಲೋ ನಿಂದನೆಗೊಳಗಾಗ ಬೇಕಾ ಯಿತು. ‘ನನಗೆ ಪತ್ರಕರ್ತರ ಮುಂದೆ ಮಾತಾಡುವಾಗ ಭಯವಾಗುತ್ತದೆ, ಕಾರಣ ನನ್ನ ಅಭಿಪ್ರಾಯಗಳನ್ನು ವರದಿ ಮಾಡಿದರೆ ಪರವಾಗಿಲ್ಲ, ನನ್ನದಲ್ಲದ ಅಭಿಪ್ರಾಯಗಳನ್ನು ನನ್ನದೇ ಎಂದು ವರದಿ ಮಾಡುತ್ತಾರೆ. ಇದು ಅಪಾಯಕಾರಿ’ ಎಂದು ಹೇಳಿದರು.
ಸುದ್ದಿಮನೆಯಲ್ಲಿರುವ ‘ಉಗ್ರಗಾಮಿ’ಗಳು ಇಂಥ ಅವಾಂತರ ಸೃಷ್ಟಿಸಿಬಿಡುತ್ತಾರೆ. ಕೆಲವು ಸಲ ವರದಿಗಾರರು ಕಾರ್ಯಕ್ರಮಕ್ಕೇ ಹೋಗುವುದಿಲ್ಲ. ಬೇರೆ ಪತ್ರಿಕೆಯಿಂದ ಹೋದ ತಮ್ಮ ಸ್ನೇಹಿತನಿಂದ ಮಾಹಿತಿ ಪಡೆದು ಕಾಪಿ ಬರೆಯುತ್ತಾರೆ. ಒಂದು ವೇಳೆ ಕಾರ್ಯಕ್ರಮಕ್ಕೆ ಹೋದರೂ, ಸರಿಯಾಗಿ ಆಲಿಸಿದೇ ಬೇಜವಾಬ್ದಾರಿಯಿಂದ ಬರೆದು ಅನಗತ್ಯ ವಿವಾದ ಸೃಷ್ಟಿಸಿಬಿಡುತ್ತಾರೆ. ಇದೆಲ್ಲೂ ಪತ್ರಕರ್ತರು ಮಾಡಿದ ಪ್ರಮಾದ ಅಥವಾ ಎಡವಟ್ಟು ಎಂದು ಸಾಮಾನ್ಯ ಓದುಗರಿಗೆ ಗೊತ್ತೇ ಆಗುವುದಿಲ್ಲ. ಎಲ್ಲಾ ಸುದ್ದಿಮನೆಗಳಲ್ಲೂ ಇಂಥ ‘ಉಗ್ರಗಾಮಿ’ಗಳ ಮೇಲೆ ನಿಗಾ ಇಡಲಾಗುತ್ತದೆ. ಅಲ್ಲದೆ ಈ ಉಗ್ರಗಾಮಿ ಗಳನ್ನೂ ಪಳಗಿಸುವ, ಅವರನ್ನು ಉತ್ತಮ ಮನುಷ್ಯರನ್ನಾಗಿಸುವ ಕೆಲಸ ಸತತವಾಗಿ ನಡೆಯುತ್ತಲೇ ಇರುತ್ತದೆ.
ಸೀನಿಯರುಗಳಾದವರು ಇವರ ಬರಹಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಆದರೂ ಒಮ್ಮೊಮ್ಮೆ ಇವರ ಕಣ್ತಪ್ಪಿಸಿ ‘ವಿಧ್ವಂಸಕ ಕೃತ್ಯ’ಗಳಾಗಿಬಿಡುತ್ತವೆ.
ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು ಬರುವ ಯುವ ಪತ್ರಕರ್ತರನ್ನು ಮುಖ್ಯವಾಹಿನಿಯೊಳಗೆ ಸೇರಿಸುವುದು ಮತ್ತು ಅವರು ಕಟ್ಟಿಕೊಂಡು ಬರುವ ‘ಬಾಂಬು’ಗಳನ್ನು ನಿಷ್ಕ್ರಿಯಗೊಳಿಸಿ ಅವರನ್ನು ಸಾಚಾ ಪತ್ರಕರ್ತರನ್ನಾಗಿ ಮಾಡುವುದು ದೊಡ್ಡ ಸವಾಲಿನ ಕೆಲಸವೇ. ಇದು ಸುದ್ದಿಮನೆಯಲ್ಲಿ ನಡೆಯುತ್ತಲೇ ಇರಬೇಕಾದ ನಿರಂತರ ಕೆಲಸವೇ. ಈ ಕೆಲಸ ಮೊದಲೂ ನಡೆಯುತ್ತಿತ್ತು.
ಯಾರೂ ಸಹ ಪಂಡಿತರಾಗಿಯೇ ಸುದ್ದಿಮನೆಯೊಳಗೆ ಕಾಲಿಡುವುದಿಲ್ಲ. ಆದರೆ ಈಗ ಸುದ್ದಿಮನೆಗೆ ಬರುವ ಬಹುತೇಕ ಯುವ ಪತ್ರಕರ್ತರಲ್ಲಿ ಪೂರ್ವ ಸಿದ್ಧತೆಯೇ ಇರುವುದಿಲ್ಲ. ಅವರೇನು ಪಂಪ, ರನ್ನ, ರಾಘವಾಂಕ ಅವರನ್ನು ಓದಿಕೊಂಡಿರಬೇಕು ಎಂದು ಯಾರೂ ಅಪೇಕ್ಷಿಸುವುದಿಲ್ಲ. ಆದರೆ ಕನಿಷ್ಠ ಕುವೆಂಪು, ಕಾರಂತ, ಬೇಂದ್ರೆ, ಲಂಕೇಶ ಅವರ ಕೆಲವು ಕೃತಿಗಳನ್ನಾದರೂ ಓದಿಕೊಂಡಿರಬೇಕು ಎಂದು ನಿರೀಕ್ಷಿಸುತ್ತೇವೆ. ಕರ್ನಾಟಕದ ರಾಜಕೀಯ, ಸ್ವಲ್ಪ ಇತಿಹಾಸ, ರಾಜಕೀಯ, ಶಾಸನ ಸಭೆಗಳ ಕಾರ್ಯ ನಿರ್ವಹಣೆ, ರಾಜ್ಯದ ಭೂಗೋಳ ಮುಂತಾದವುಗಳ ವಿಚಾರ ಗೊತ್ತಿರಬೇಕೆಂದು ಬಯಸುತ್ತೇವೆ. ಆದರೆ ಅವುಗಳ ಬಗ್ಗೆ ಸಹ ಸಾಮಾನ್ಯ ತಿಳಿವಳಿಕೆ ಇರುವುದಿಲ್ಲ. ತಿಳಿದುಕೊಳ್ಳುವ ಉತ್ಸಾಹವೂ ಇರುವುದಿಲ್ಲ.
ವರದಿಗಾರನಾಗಬೇಕೆಂದು ಸಂದರ್ಶನಕ್ಕೆ ಬಂದ ವಿದ್ಯಾರ್ಥಿಗೆ, ‘ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹೆಸರನ್ನು ಕೇಳಿದ್ದೀಯಲ್ಲ? ಇಲ್ಲಿ ಎ.ಪಿ.ಜೆ ಅಂದರೆ ಏನು?’ ಎಂದು ಕೇಳಿದೆ. ತನಗೆ ಗೊತ್ತಿಲ್ಲ ಎಂದು ‘ಆತ್ಮವಿಶ್ವಾಸ’ದಿಂದ ಹೇಳಿದ. ‘ಸಿ.ಎನ್.ಆರ್. ರಾವ್ ಹೆಸರನ್ನು ಕೇಳಿರಬಹುದು, ಅವರ ಹೆಸರಿನಲ್ಲಿರುವ ಸಿ.ಎನ್.ಆರ್. ಫುಲ್ ಫಾರ್ಮ್ ಏನು?’ ಎಂದು ಕೇಳಿದೆ. ಅದಕ್ಕೂ ಅದೇ ‘ಆತ್ಮವಿಶ್ವಾಸ’ದ ‘ಗೊತ್ತಿಲ್ಲ’ ಎಂಬ ಉತ್ತರ ಬಂತು. ‘ಖ್ಯಾತ ಗಾಯಕ ಎಸ್
.ಪಿ.ಬಾಲಸುಬ್ರಮಣ್ಯಂ ಅವರ ಹೆಸರನ್ನು ಕೇಳಿದ್ದೀಯಾ?’ ಅಂತ ಕೇಳಿದೆ. ‘ಕೇಳಿದ್ದೇನೆ ಸರ್. ನಾನು ಅವರ ಅಭಿಮಾನಿ’ ಎಂದ.
‘ಹಾಗಾದರೆ ಅವರ ಹೆಸರಿನಲ್ಲಿರುವ ಎಸ್.ಪಿ.ಫುಲ್ ಫಾರ್ಮ್ ಏನು?’ ಎಂದು ಕೇಳಿದೆ. ‘ಗೊತ್ತಿಲ್ಲ ಸರ್. ನಾನು ಆ ಬಗ್ಗೆ ಎಂದೂ ಯೋಚಿಸಿಯೇ ಇಲ್ಲ’ ಎಂದ. ‘ತಿಳಿದುಕೊಳ್ಳಬೇಕು ಎಂದು ನಿನಗೆ ಅನಿಸಲಿಲ್ಲವಾ?’ ಎಂದು ಕೇಳಿದೆ. ಅದಕ್ಕೆ ಆತ ಅದೇ ‘ಆತ್ಮವಿಶ್ವಾಸ’ದಿಂದ ‘ಇಲ್ಲ’ ಎಂದ. ನಾನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ನಿನಗೆ ಕನ್ನಡ ಸಿನಿಮಾ ಸಂಗೀತದ ಬಗ್ಗೆ ಆಸಕ್ತಿ ಇದೆ ಎಂದು ಹೇಳಿದೆಯಲ್ಲ, ಪಿ.ಬಿ.ಶ್ರೀನಿವಾಸ ಹೆಸರಿನಲ್ಲಿರುವ ಪಿ.ಬಿ., ಎಸ್. ಜಾನಕಿ
ಹೆಸರಿನಲ್ಲಿರುವ ಎಸ್, ಪಿ.ಸುಶೀಲಾ ಹೆಸರಿನಲ್ಲಿರುವ ಪಿ, ಎಲ್. ಆರ್. ಈಶ್ವರಿ ಹೆಸರಿನಲ್ಲಿರುವ ಎಲ.ಆರ್. ಇವುಗಳ ಫುಲ್ ಫಾರ್ಮ್ ಗೊತ್ತಾ?’ ಎಂದು ಕೇಳಿದೆ. ‘ಇಲ್ಲ ಸರ್, ನಾನು ಅವುಗಳ ಬಗ್ಗೆ ತಿಳಿದುಕೊಂಡಿಲ್ಲ. ತಿಳಿದುಕೊಳ್ಳಬೇಕೆಂದು ನನಗೆ ಅನಿಸಿಯೂ ಇಲ್ಲ’ ಎಂದ.
ಅದಕ್ಕೆ ನಾನು, ‘ಈ ಹೆಸರುಗಳ ತಿಳಿದುಕೊಳ್ಳದಿರುವುದು ಅಪರಾಧವೇನಲ್ಲ. ತಿಳಿದುಕೊಂಡರೆ ಈ ಗಾಯಕರ ಬಗ್ಗೆ ನಿನಗೆ ಮತ್ತಷ್ಟು ವಿವರಗಳು ಗೊತ್ತಾಗುತ್ತಿದ್ದವು. ಅದಕ್ಕಿಂತ ಮುಖ್ಯವಾಗಿ ಒಬ್ಬ ಪತ್ರಕರ್ತನಿಗೆ ಈ ಎ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿರಬೇಕು. ಕನ್ನಡದ ಪ್ರಸಿದ್ಧ
ನಾಟಕಕಾರ ಟಿ.ಪಿ.ಕೈಲಾಸಂ ಅವರ ಹೆಸರಿನಲ್ಲಿರುವ ಟಿ.ಪಿ. ಅಂದರೆ ತಂಜಾವೂರು ಪರಮಶಿವ ಎಂಬುದು ಗೊತ್ತಿದ್ದರೆ ಕೈಲಾಸಂ ಅವರ ಬಗ್ಗೆ ಮತ್ತಷ್ಟು ವಿವರಗಳು ತಿಳಿಯುತ್ತವೆ. ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯುವಾಗ ಅವರ ಪೂರ್ಣನಾಮ ವಿವರಗಳನ್ನು ಪತ್ರಕರ್ತನಾದವನು ತಿಳಿದಿರಬೇಕು. ಈ ವಿವರಗಳು ಒಬ್ಬ ಬ್ಯಾಂಕ್ ಮ್ಯಾನೇಜರ್‌ಗೆ, ಕಂಪ್ಯೂಟರ್ ಎಂಜಿನಿಯರ್‌ಗೆ ಅಷ್ಟು ಪ್ರಯೋಜನಕ್ಕೆ ಬಾರದಿರಬಹುದು.
ಆದರೆ ನಿಶ್ಚಿತವಾಗಿಯೂ ಪತ್ರಕರ್ತನಿಗೆ ಗೊತ್ತಿರಬೇಕು. ಮತ್ತೇನಲ್ಲದಿದ್ದರೂ ಅದು ನಿನ್ನ ಆಸಕ್ತಿಯನ್ನು ತೋರಿಸುತ್ತದೆ’ ಎಂದೆ. ‘ಅಂದ ಹಾಗೆ ನಿನ್ನ ಊರು ಯಾವುದು?’ ಎಂದು ಕೇಳಿದೆ. ಅದಕ್ಕೆ ಆತ, ‘ಯಳಂದೂರು ಸರ್’ ಎಂದು ಹೇಳಿದ. ‘ಓಹ್ ನೀನು ಯಳಂದೂರಿನವನಾ? ನೀನು ವೈಎನ್‌ಕೆ ಅವರ
ಹೆಸರನ್ನು ಕೇಳಿದ್ದೀಯಾ?’ ಎಂದು ಕೇಳಿದೆ. ಆತ ‘ಹೌದು ಸರ್ ಕೇಳಿದ್ದೇನೆ.. ಕನ್ನಡಪ್ರಭ ಪತ್ರಿಕೆ ಸಂಪಾದಕರಾಗಿದ್ದರು’ ಎಂದ. ‘ವೆರಿ ಗುಡ್. ಅವರ ಹೆಸರಿನ ಫುಲ್ ಫಾರ್ಮ್ ಗೊತ್ತಾ?’ ಎಂದು ಕೇಳಿದೆ. ಅದಕ್ಕೆ ಆತ ‘ಇಲ್ಲ ಸರ್, ಗೊತ್ತಿಲ್ಲ. ಅವರು ವೈಎನ್‌ಕೆ ಎಂದೇ ಪ್ರಸಿದ್ಧರು..’ ಎಂದು ತಲೆ ಕೆರೆದು ಕೊಂಡ.
ಹೆಸರಿನಲ್ಲಿರುವ ಇನಿಶಿಯಲ್‌ಗಳ ಫುಲ್ ಫಾರ್ಮ್ ಗೊತ್ತಿರಬೇಕೆಂದು ಹೇಳೋದು ಇದಕ್ಕೇ. ಮೂಲತಃ ಅವರೂ ನಿಮ್ಮೂರಿನವರೇ. ಅವರ ಹೆಸರಿನಲ್ಲಿ ರುವ ವೈ ಅಂದರೆ ಯಳಂದೂರು’ ಎಂದೆ. ಅವನಿಗೆ ಬಹಳ ಆಶ್ಚರ್ಯವಾಯಿತು. ‘ಹೌದಾ ಸರ್ ಅವರು ಯಳಂದೂರಿನವರಾ? ನನಗೆ ಗೊತ್ತೇ
ಇರಲಿಲ್ಲ. ಈ ವಿಷಯವನ್ನು ನನಗೆ ಯಾರೂ ಹೇಳಿರಲಿಲ್ಲ. ನಮ್ಮೂರಿನವರೊಬ್ಬರು ಕನ್ನಡದ ಪ್ರಮುಖ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು ಎಂಬುದೇ ನನಗೆ ಹೆಮ್ಮೆಯ ಸಂಗತಿ. ಅವರ ಊರಿನವನು ಎಂದು ಹೇಳಿಕೊಳ್ಳಲು ನನಗೆ ಅಭಿಮಾನವಾಗುತ್ತಿದೆ. ಇನ್ನು ಮುಂದೆ ನಾನು ವೈಎನ್‌ಕೆ ಅವರ ಊರಿನವನು ಎಂದು ಪರಿಚಯಿಸಿಕೊಳ್ಳುತ್ತೇನೆ’ ಎಂದ.
ಹೆಸರಿನಲ್ಲಿರುವ ಇನಿಶಿಯಲ್ಲುಗಳನ್ನು ಯಾಕೆ ತಿಳಿದಿರಬೇಕು ಎಂಬುದು ಈಗಾದರೂ ಗೊತ್ತಾಯಿತಲ್ಲ ಎಂದೆ. ಆತನಿಗೆ ಸಂತೋಷವಾಯಿತು. ಈ ಹಿಂದೆ ನಮ್ಮ ಪತ್ರಿಕೆಯಲ್ಲಿ, ‘ಹಂಪನಾ’ ಎಂದೇ ಜನಪ್ರಿಯರಾಗಿರುವ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಅವರ ಹೆಸರು ‘ಹಂಪಾ ನಾಗರಾಜ’ ಎಂದು ಪ್ರಕಟವಾಗಿತ್ತು. ಬೆಳಗ್ಗೆ ಪತ್ರಿಕೆ ಓದುತ್ತಿರುವಾಗ ಈ ದೋಷ ಕಣ್ಣಿಗೆ ಬಿದ್ದಾಗ ವಿಪರೀತ ಕೋಪ ಬಂತು. ಆ ಕ್ಷಣದಲ್ಲಿ ಹಾಗೆ ಬರೆದವರು ಎದುರಿಗೆ ಸಿಕ್ಕಿದ್ದರೆ, ಕಲ್ಲಂಗಡಿ ಹಣ್ಣಿಗೆ ಚುಚ್ಚುವಂತೆ ಚುಚ್ಚಿಬಿಡಬೇಕೆನ್ನುವಷ್ಟು ಕೋಪ ಬಂತು. ಹಂಪನಾ ಅವರ ಹೆಸರನ್ನೂ ಹೀಗೆ ತಪ್ಪು ಬರೆದಿದ್ದಾರಲ್ಲ, ವ್ಯಕ್ತಿಗಳ ಹೆಸರಿನ ಬಗ್ಗೆ ಮೋಹವೇ ಇಲ್ಲವಲ್ಲ, ಇದನ್ನು ಓದಿದ ಓದುಗರು ಏನೆಂದು ಭಾವಿಸಬಹುದು… ಎಂದೆಲ್ಲ ಅನಿಸಿತು.
ಒಂದು ವೇಳೆ ಹಂಪನಾ ಪೂರ್ಣರೂಪ ಗೊತ್ತಿದ್ದಿದ್ದರೆ, ಸರಿಯಾಗಿಯೇ ಬರೆದಿರುತ್ತಿದ್ದರು. ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರಮಾದಗಳ ಬಗ್ಗೆ ಸಂಪಾದ ಕೀಯ ಸಿಬ್ಬಂದಿಯ ಗಮನ ಸೆಳೆಯಲೆಂದೇ ರಚಿಸಿದ ‘ನೋಟಿಸ್ ಬೋರ್ಡ್’ ಎಂಬ ವಾಟ್ಸ್ಯಾಪ್ ಗ್ರೂಪಿನಲ್ಲಿ ಬರೆದೆ- ‘ಅವರ ಹೆಸರು ಹಂಪಾ ನಾಗರಾಜ ಅಲ್ಲ. ಮೂಲತಃ ಅವರು ಗೌರಿಬಿದನೂರು ಸಮೀಪದ ಹಂಪಸಂದ್ರದವರು. ಅವರ ಸರಿಯಾದ ಹೆಸರು ಹಂಪ ನಾಗರಾಜಯ್ಯ. ಯಾರಾದರೂ ನಿಮ್ಮ ಹೆಸರನ್ನು ತಪ್ಪಾಗಿ ಬರೆದರೆ ಬೇಸರವಾಗುವುದಿಲ್ಲವೇ?’ ಪತ್ರಿಕೋದ್ಯಮ ಎನ್ನುವುದು ನಿರಂತರ ಕಲಿಕೆ, ನಿತ್ಯ ಪಾಠಶಾಲೆ.
ಓದುಗರಿಗೆ ಹೊಸ ಹೊಸ ಮಾಹಿತಿ ಕೊಡುವುದೇ ನಮ್ಮ ಕಸುಬಿನ ಛಬುಕು. ಹೊಸತನಕ್ಕೆ ಹಪಹಪಿಸದಿದ್ದರೆ ಪತ್ರಿಕೋದ್ಯಮದಲ್ಲಿರಬಾರದು. ಅಂಥವರು ಈ ವೃತ್ತಿಯನ್ನು ತೊರೆದು ಓದುಗರಿಗೆ ಉಪಕಾರ ಮಾಡಬೇಕು.