Sunday, 15th December 2024

raghu nadig column: ಸುದ್ದಿಮನೆಯಲ್ಲಿ ಸದ್ದಿಲ್ಲದೆ ಸಿಗುತ್ತೆ ಸುದ್ದಿಗೆ ಗುದ್ದು !

Newsroom

ರಸದೌತಣ

ಯಗಟಿ ರಘು ನಾಡಿಗ್

ಇದು ಯಾವುದೇ ಪತ್ರಿಕಾಲಯದಲ್ಲಿ ಸಾಮಾನ್ಯವಾಗಿ ಕಾಣಬರುವ ಚಿತ್ರಣ. ‘ಡೆಡ್‌ಲೈನ್’ ಎಂಬ ಗುಮ್ಮನ ಕೈಗಳಿಗೆ ತಮ್ಮನ್ನು ಒಪ್ಪಿಸಿಕೊಳ್ಳಬೇಕಾಗಿ ಬರುವ ಸುದ್ದಿಮನೆಯ ವೃತ್ತಿಪ್ರವೀಣರು, ಕೊನೆಯ ಕ್ಷಣದಲ್ಲಿ ಎದುರಿಸಬೇಕಾಗುವ ಸವಾಲುಗಳು, ಅನುಭವಿಸುವ ಒತ್ತಡಗಳು ಮತ್ತು ಅದರ ಪರಿಣಾಮವಾಗಿ ಉದ್ಭವಿಸುವ ಎಡವಟ್ಟುಗಳ ಕುರಿತು ಹೇಳುತ್ತಾ ಹೋದರೆ ಅದೇ ಒಂದು ಮಹಾಗ್ರಂಥವಾದೀತು. ಅಂಥ ಒಂದೆರಡು
ಸಂಗತಿಗಳನ್ನು ಇಲ್ಲಿ ಮೆಲುಕುಹಾಕಿರುವೆ.

ಈ ಘಟನೆಯನ್ನು, ನಾನು ಪದವಿ ತರಗತಿಯಲ್ಲಿದ್ದಾಗ ನಮ್ಮ ಇಂಗ್ಲಿಷ್ ಉಪನ್ಯಾಸಕರು ಹೇಳಿದ್ದು. ಇದು ಘಟಿಸಿ ದಶಕಗಳೇ ಆಗಿವೆಯೆನ್ನಿ. ಅದೊಂದು ಜನಪ್ರಿಯ ಪತ್ರಿಕೆ. ಅದರಲ್ಲಿ ಪ್ರಕಟವಾಗುತ್ತಿದ್ದ ರುಚಿಕಟ್ಟಾದ ಮತ್ತು ರಂಜನಾತ್ಮಕ ಸುದ್ದಿಗಳನ್ನು ಚಪ್ಪರಿಸಲು ಓದುಗರು ಹಾತೊರೆ ಯುತ್ತಿದ್ದರು. ಪತ್ರಿಕೆಯ ಎಲ್ಲ ಪುಟಗಳ ಸಂಪಾದನೆ-ಸಂಯೋಜನೆ ಮುಗಿದು ಇನ್ನೇನು ಮುದ್ರಣಕ್ಕೆ ಕಳಿಸಬೇಕೆನ್ನುವಷ್ಟರಲ್ಲಿ ಎರಡು ಮಹತ್ವದ ಸುದ್ದಿಗಳು ಬಂದವು ಮತ್ತು ಅವನ್ನು ಪ್ರಕಟಣೆಗೆ ಪರಿಗಣಿಸಲೇಬೇಕೆಂದು ಪತ್ರಿಕೆಯ ಮ್ಯಾನೇಜ್‌ಮೆಂಟ್‌ನಿಂದ ಒತ್ತಡವೂ ಬಂತು. ಸರಿ, ಸಮರೋಪಾದಿಯಲ್ಲಿ ಕೆಲಸಕ್ಕೆ ತೊಡಗಿಸಿಕೊಂಡ ‘ಡೆಸ್ಕ್’ ಪತ್ರಕರ್ತರು, ಮುಖಪುಟದಲ್ಲಿ ಪ್ರಕಟಣೆಗೆಂದು ಮುಂಚೆ ಪರಿಗಣಿಸಲಾಗಿದ್ದ ಎರಡು ಸುದ್ದಿಗಳನ್ನು ಎತ್ತಿ ಪಕ್ಕಕ್ಕಿಟ್ಟು, ಹೊಸದಾಗಿ ಬಂದಿದ್ದ ಆ ಎರಡು ಮಹತ್ವದ ಸುದ್ದಿ ಗಳನ್ನು ಪುಟದಲ್ಲಿ ಲಭ್ಯವಿರುವ ಜಾಗಕ್ಕೆ ಅಡಕ ಗೊಳಿಸಲು ಸಜ್ಜಾದರು.

ಸುದ್ದಿ ಶೀರ್ಷಿಕೆಗಳೂ ಸಿದ್ಧವಾದವು. ಅವುಗಳಲ್ಲಿ ಒಂದು- ‘ನಗರಕ್ಕೆ ಭೇಟಿಯಿತ್ತ ಸೊಮಾಲಿಯಾ ಅಧ್ಯಕ್ಷರು’ ಎಂದಿದ್ದರೆ, ಮತ್ತೊಂದು- ‘ಮೃಗಾಲಯದಲ್ಲಿ ಮೂರು ಮರಿಗಳಿಗೆ ಜನ್ಮವಿತ್ತ ಚಿಂಪಾಂಜಿ’ ಎಂಬುದಾಗಿತ್ತು. ಕ್ಲುಪ್ತ ಸಮಯದ ಈ ಎರಡೂ ಸುದ್ದಿಗಳನ್ನು ಸಿದ್ಧಪಡಿಸಿ, ತಿದ್ದಿ ತೀಡಿ, ಪುಟದಲ್ಲಿ ಅಡಕಗೊಳಿಸಿ ಮುದ್ರಣಕ್ಕೆ ಕಳಿಸುವ ಹೊತ್ತಿಗೆ ಪತ್ರಿಕೆಯ ಮುಖಪುಟದ ನಿರ್ವಾಹಕರ ಬೆವರುನೀರು ತಲೆಯಿಂದ ಶುರುವಾಗಿ ದೇಹದ ಸಂದುಗೊಂದುಗಳಲ್ಲೆಲ್ಲಾ ಇಳಿದು ಪಾದಗಳವರೆಗೂ ಹರಿದುಬಂದಿತ್ತು! ಆದರೆ, ಲಭ್ಯವಿದ್ದ ಅಲ್ಪ ಸಮಯದ ಎರಡೂ ಸುದ್ದಿಗಳನ್ನು ಸಜ್ಜುಗೊಳಿ ಸಿದ್ದಕ್ಕೆ ಮ್ಯಾನೇಜ್‌ಮೆಂಟ್‌ನಿಂದ ಶಹಭಾಸ್‌ಗಿರಿ ಸಿಕ್ಕಿದ್ದರಿಂದ ಆ ಶ್ರಮವೆ ಮಾಯವಾಯಿತು. ಸರಿ, ಅವರು ಕ್ಯಾಂಟೀನ್‌ಗೆ ತೆರಳಿ ಅಂದಿನ ಕೊನೆಯ ಕಾಫಿಯನ್ನು ಸವಿದು ನಿರಾಳರಾಗಿ ಮನೆಗೆ ತೆರಳಿದರು.

ಆದರೆ, ದಂಡಿಯಾಗಿ ಮುದ್ರಣಗೊಂಡ ಪತ್ರಿಕೆಗಳು ಮರುದಿನ ಮುಂಜಾನೆ ನಗರದ ವಿವಿಧ ಬಡಾವಣೆಗಳಲ್ಲಿನ ಮನೆಗಳಿಗೆ, ನ್ಯೂಸ್ ಪೇಪರ್ ಸ್ಟಾಲ್‌ಗಳಿಗೆ ವಿತರಣೆಯಾದ ನಂತರ ರಂಪ ರಾಮಾಯಣವಾಗಿತ್ತು, ಪತ್ರಿಕೆಯ ಮುಖಪುಟದ ಗಂಭೀರ ಓದಿನ ಒಂದಿಡೀ ವಾತಾವರಣವೇ ಬದಲಾಗಿತ್ತು. ಓದುಗರು ಮುಖಪುಟವನ್ನು ಮುಖಕ್ಕೆ ಒತ್ತಿಕೊಂಡು ಬಿದ್ದುಬಿದ್ದು ನಗುತ್ತಿದ್ದರು. ಅದಕ್ಕೆ ಕಾರಣವಾಗಿದ್ದು, ಎರಡು ಮಹತ್ವದ ಸುದ್ದಿಗಳನ್ನು ಪ್ರಸ್ತುತ ಪಡಿಸಿದ ರೀತಿ. ಅವೆರಡೂ ಕೊನೆಯ ಕ್ಷಣದಲ್ಲಿ ಬಂದ ಸುದ್ದಿಗಳು ಎಂದು ಹೇಳಿದೆನಲ್ಲವೇ? ಮುಖಪುಟದ ನಿರ್ವಾಹಕರು ಪುಟದಲ್ಲಿ ಲಭ್ಯವಿರುವ ಜಾಗಕ್ಕೆ ತಕ್ಕಂತೆ ಸರಿಯಾಗೇ ಆ ಎರಡೂ ಸುದ್ದಿಗಳನ್ನೂ ಎಡಿಟ್ ಮಾಡಿ, ಪುಟದ ಎಡಕ್ಕೊಂದು ಬಲಕ್ಕೊಂದು ಎಂಬಂತೆ ಪಕ್ಕಪಕ್ಕದಲ್ಲೇ ಪ್ರಕಟಿ ಸಿದ್ದರು; ಆದರೆ ಸಂಬಂಧಿತ ಫೋಟೋಗಳನ್ನು ಹಾಕುವಾಗ ಎಡವಟ್ಟಾಗಿತ್ತು. ಅಂದರೆ, ‘ನಗರಕ್ಕೆ ಭೇಟಿಯಿತ್ತ ಸೊಮಾಲಿಯಾ ಅಧ್ಯಕ್ಷರು’ ಎಂಬ ಸುದ್ದಿಯ ಜತೆಗೆ ಚಿಂಪಾಂಜಿಯ ಫೋಟೋ ಮತ್ತು ‘ಮೃಗಾಲಯದಲ್ಲಿ ಮೂರು ಮರಿಗಳಿಗೆ ಜನ್ಮವಿತ್ತ ಚಿಂಪಾಂಜಿ’ ಎಂಬ ಸುದ್ದಿಯ ಜತೆಗೆ ಸೊಮಾಲಿಯಾ ದೇಶದ ಅಧ್ಯಕ್ಷರ ಫೋಟೋ ರಾರಾಜಿಸುತ್ತಿದ್ದವು!

ಅದೃಷ್ಟವಶಾತ್ ಸೊಮಾಲಿಯಾ ಅಧ್ಯಕ್ಷರು ಅಷ್ಟು ಹೊತ್ತಿಗೆ ತಮ್ಮ ದೇಶಕ್ಕೆ ಮರಳಿದ್ದರಿಂದ ಪತ್ರಿಕೆಯವರು ಬಚಾವ್ ಆಗಿದ್ದರು! ಆದರೆ ಪತ್ರಿಕೆಯ ಮ್ಯಾನೇಜ್‌ಮೆಂಟ್‌ನವರು ಮುಖಪುಟದ ನಿರ್ವಾಹಕರಿಗೆ
ಮಾತಿನ ತಪರಾಕಿ ಕೊಟ್ಟು ಗ್ರಹಚಾರ ಬಿಡಿಸಿದರು. ಅಂದು ಮಧ್ಯಾಹ್ನವೇ ಪತ್ರಿಕಾಲಯಕ್ಕೆ ಆಗಮಿಸಿದ ಮುಖಪುಟದ ನಿರ್ವಾಹಕರು ಈ ಪ್ರಮಾದ ಆದದ್ದು ಹೇಗೆ ಎಂಬುದರ ಕುರಿತು ತನಿಖೆಗಿಳಿದಾಗ, ಇದು ಕಂಪೋಸಿಟರ್ ನಿಂದ ಆದ ಎಡವಟ್ಟು ಎಂಬುದು ಗೊತ್ತಾಯಿತು. ಅದಾಗಿದ್ದು ಹೀಗೆ- ಮುಂಚೆಯೆ ಪತ್ರಿಕೆಯ ಮುದ್ರಣಾಲಯಗಳಲ್ಲಿ ಇರುತ್ತಿದ್ದುದು ಅಚ್ಚುಮೊಳೆ ಅಕ್ಷರ ಜೋಡಣೆಯ ವ್ಯವಸ್ಥೆ; ಈಗಿನಂತೆ ಕಂಪ್ಯೂಟರ್‌ನಲ್ಲಿ ಛಾಯಾಕ್ಷರಗಳನ್ನು ಕೀಲಿಸಿ, ಫೋಟೋಗಳನ್ನೂ ಅದರ ಎಡಿಟ್ ಮಾಡಿ ಸಂಬಂಧಿತ ಪುಟಕ್ಕೆ ನಿಯೋಜಿಸುವ ವ್ಯವಸ್ಥೆ ಆಗಿನ್ನೂ ಬಂದಿರಲಿಲ್ಲ. ಸುದ್ದಿ ಸಂಬಂಧಿತ ಚಿತ್ರಗಳು ‘ಬ್ಲಾಕ್’ ರೂಪದಲ್ಲಿ
ಮುದ್ರಣಾಲಯಕ್ಕೆ ಬರುತ್ತಿದ್ದವು. ಅಂತೆಯೇ ಕೊನೆಯ ಕ್ಷಣದಲ್ಲಿ ಬಂದ ಮೇಲಿನ ಎರಡೂ ಸುದ್ದಿಗಳನ್ನು ಕಂಪೋಸಿಟರು ಲಕ್ಷಣವಾಗಿ ಅಕ್ಕಪಕ್ಕದಲ್ಲಿಯೇ ಸ್ಥಳಹೊಂದಿಸಿ ಕೂರಿಸಿದ. ಆದರೆ ಜತೆಗಿದ್ದ ಎರಡೂ ಫೋಟೋಗಳ ಬ್ಲಾಕ್ ಗಳನ್ನು ಆಯಾ ಸುದ್ದಿಯ ಜತೆಗೆ ಕೂರಿಸುವಾಗ ಎಡವಟ್ಟಾಗಿದ್ದು. ಕಾರಣ, ಹೇಳಿಕೇಳಿ ಅದು ಕಪ್ಪು-ಬಿಳುಪು ಫೋಟೋಗಳ ಜಮಾನ. ಸೊಮಾಲಿಯಾ ಅಧ್ಯಕ್ಷರ ಫೋಟೋಕ್ಕೂ, ಮೃಗಾಲಯ ದಲ್ಲಿನ ಚಿಂಪಾಂಜಿಯ -ಟೋಕ್ಕೂ ಅವನಿಗೆ ಅಂಥದ್ದೇನೂ ವ್ಯತ್ಯಾಸ ಕಂಡಿರಲಿಲ್ಲ!

ಹೀಗಾಗಿ ಕೈಗೆ ಸಿಕ್ಕಿದ್ದನ್ನು ಆಯಾ ಸುದ್ದಿಗಳ ಜತೆಗೆ ಕೂರಿಸಿ ಲಕ್ಷಣವಾಗಿ ಕೈತೊಳೆದುಕೊಂಡಿದ್ದ! ಸೊಮಾಲಿಯಾ ಅಧ್ಯಕ್ಷರು ಕಂಪೋಸಿಟರ್‌ನ ಕೈಯಲ್ಲಿ ಸಿಲುಕಿ, ನಲುಗಿ ಚಿಂಪಾಂಜಿಯಾಗಿದ್ದರು!! ಮತ್ತೊಂದು ಘಟನೆ ಅವಲೋಕಿಸೋಣ. ಈಗಂತೂ ಪತ್ರಿಕಾಲಯಗಳು ಸಾಕಷ್ಟು ಆಧುನೀಕರಣಗೊಂಡಿವೆ ಎನ್ನಿ. ಸುದ್ದಿ ಸಂಪಾದನೆ, ಅಕ್ಷರಜೋಡಣೆ, ಪುಟವಿನ್ಯಾಸ, ಭಾವಚಿತ್ರ-ರೇಖಾಚಿತ್ರ-ವ್ಯಂಗ್ಯಚಿತ್ರಗಳ ಅಳವಡಿಕೆ ಮುಂತಾದ ಚಟುವಟಿಕೆಗಳೆಲ್ಲವೂ ಪತ್ರಿಕಾಲಯಗಳಲ್ಲಿ ನೆರವೇರುವುದು ಕಂಪ್ಯೂಟರ್ ನೆರವಿನಿಂದಲೇ. ಆದರೆ, ಬಹಳ ವರ್ಷಗಳ ಹಿಂದೆ ಪರಿಸ್ಥಿತಿ ಹಾಗಿರಲಿಲ್ಲ; ಪತ್ರಿಕಾಲಯಗಳಿಗೆ ಕಂಪ್ಯೂಟರುಗಳು ದೊಡ್ಡ
ಸಂಖ್ಯೆಯಲ್ಲಿ ಇನ್ನೂ ದಾಂಗುಡಿ ಇಟ್ಟಿರಲಿಲ್ಲ.

ವರದಿಗಾರರು, ಉಪಸಂಪಾದಕರು, ಬರಹಗಾರರು ಮತ್ತು ವಿವಿಧ ಓದುಗರಿಂದ ಬರುವ ಬರಹದ ಹಸ್ತಪ್ರತಿಗಳನ್ನು ಡಿಟಿಪಿ ಸೆಕ್ಷನ್‌ನ ಕಂಪ್ಯೂಟರ್ ಆಪರೇಟರ್ ಒಬ್ಬನಿಗೆ ಕೊಟ್ಟು ಅವನ್ನು ಕೀಲಿಸಿ ಕೊಡುವಂತೆ
ಹೇಳಬೇಕಿತ್ತು. ತರುವಾಯ ಅವುಗಳ ಪ್ರಿಂಟ್ ಔಟ್ ತೆಗೆದುಕೊಂಡು ಕರಡಚ್ಚು ತಿದ್ದಿದ ನಂತರ ಬರಹಗಳು ಪುಟಕ್ಕೆ ವರ್ಗಾವಣೆಯಾಗುತ್ತಿದ್ದವು. ಇಂಥ ವೇಳೆ, ಹಸ್ತಪ್ರತಿಯಲ್ಲಿನ ಅಕ್ಷರಗಳು ಸ್ಪಷ್ಟವಾಗಿಲ್ಲದೆ ಕಲಸಿಕೊಂಡಿರುವ ಕಾರಣಕ್ಕೋ ಅಥವಾ ಡಿಟಿಪಿ ಆಪರೇಟರ್‌ನ ದಿವ್ಯ ನಿರ್ಲಕ್ಷ್ಯದಿಂದಲೋ ಕಂಪೋಸ್ ಮಾಡಲಾದ ಬರಹದ ಕಾಗುಣಿತದಲ್ಲಿ ಸಾಕಷ್ಟು ಏರುಪೇರುಗಳಾಗಿರುತ್ತಿದ್ದವು. ಅವನ್ನು ನಿರಾಳವಾಗಿ ಪರಿಶೀಲಿಸಿ ಒಪ್ಪ ಮಾಡಿ ಪ್ರಕಟಣೆಗೆ ಕಳಿಸುವುದಕ್ಕೂ ಸಂಬಂಧಿತ ಡೆಸ್ಕ್ ಪತ್ರಕರ್ತರಿಗೆ ಕೆಲವೊಮ್ಮೆ‌ ಆಗುತ್ತಿರಲಿಲ್ಲ. ಕಾರಣ, ಮೊದಲೇ ಹೇಳಿದಂತೆ ಮತ್ತದೇ ‘ಡೆಡ್‌ಲೈನ್ ಗುಮ್ಮ’. ಇಂಥ ವೇಳೆ, ಸುದ್ದಿಸಾಲುಗಳು
ವಿಪರೀತ ಅರ್ಥವನ್ನು ಹೊಮ್ಮಿಸಿಬಿಡುತ್ತಿದ್ದವು.

‘ಹೆದ್ದಾರಿಯ ಉದ್ಘಾಟನೆಗೆ ಬಂದ ಸಚಿವರು, ತಮ್ಮ ಬಹುದಿನದ ಕನಸನ್ನು ನನಸಾಗಿಸಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸಿ, ಉದ್ಘಾಟನೆಯ ನಂತರ ರಾತ್ರಿ ಅದೇ ರಸ್ತೆಯಲ್ಲಿ ತಮ್ಮ ಪತ್ನಿಯೊಂದಿಗೆ ತೆವಳಿದರು’ ಎಂಬುದು ಡಿಟಿಪಿ ಮಹಾಶಯ ಟೈಪ್ ಮಾಡಿದ ಇಂಥದೊಂದು ಸುದ್ದಿಸಾಲು. ಕರಡು ತಿದ್ದಲೆಂದು ಇದರ ಪ್ರಿಂಟ್ ಔಟ್ ತೆಗೆದುಕೊಂಡು ಓದಿದ ಟ್ರೇನೀ ಪತ್ರಕರ್ತರೊಬ್ಬರು, ‘ಅ, ಹೆದ್ದಾರಿಯನ್ನು ಉದ್ಘಾಟಿಸಿದ ಸಚಿವರು ಅದೇ ರಸ್ತೆಯಲ್ಲಿ ರಾತ್ರಿ ತಮ್ಮ ಪತ್ನಿಯೊಂದಿಗೆ ತೆವಳುವ ಅಗತ್ಯವೇನಿತ್ತು? ಅವರು ದೇವರಲ್ಲಿ ಹಾಗೇನಾದರೂ ಹರಕೆ ಹೊತ್ತಿದ್ದರೇ?!’ ಎಂದು ಗೊಂದಲಗೊಂಡರು. ಅಷ್ಟಕ್ಕೇ ಸುಮ್ಮನಾಗದೆ ಆ ಸುದ್ದಿಯನ್ನು ಕಳಿಸಿದ್ದ ವರದಿಗಾರನಿಗೆ ಫೋನ್ ಹಚ್ಚಿ, ‘ಹೆದ್ದಾರಿ ಉದ್ಘಾಟನೆಯ ನಂತರ ಸಚಿವರು ಅದರಲ್ಲಿ ಉರುಳುಸೇವೆ ಏನಾದ್ರೂ ಮಾಡಿದ್ರಾ?’ ಎಂದೇ ನೇರವಾಗಿ ಕೇಳಿದರು. ಆ ವರದಿಗಾರನೂ ಎಳಸೇ, ಹೀಗಾಗಿ ಆತನೂ ಗಲಿಬಿಲಿಗೊಂಡು, ‘ಹಾಗೇನೂ ಇಲ್ವ…. ’ ಎನ್ನುತ್ತಾ ಇನ್ನೇನು ಮಾತು ಮುಂದುವರಿಸಬೇಕು ಎನ್ನುವಷ್ಟರಲ್ಲಿ ಫೋನ್ ಸಂಪರ್ಕ ಕಡಿತಗೊಂಡಿತು.

ಮತ್ತೆ ಲೈನ್ ಸಿಗಲಿಲ್ಲ (ಆಗೆ ಮೊಬೈಲ್ ಇರಲಿಲ್ಲ, ಸ್ಥಿರ ದೂರವಾಣಿಯ ಸಂಪರ್ಕಜಾಲವೂ ಇಷ್ಟೊಂದು ಆಧುನೀಕರಣಗೊಂಡಿರಲಿಲ್ಲ. ಹೀಗಾಗಿ ಲೈನ್ ಸಿಗುವುದು ಕಷ್ಟವಿತ್ತು, ಮಳೆ ಬಂದರಂತೂ ಇನ್ನೂ
ಅಧ್ವಾನ!). ಏನೂ ತೋಚದೆ ಆ ಟ್ರೇನೀ ಪತ್ರಕರ್ತರು ಮತ್ತಷ್ಟು ಗೊಂದಲ=ಗೊಂಡಿದ್ದಾಗ ಅಲ್ಲಿಗೆ ಬಂದ ಹಿರಿಯ ಸಹೋದ್ಯೋಗಿಯೊಬ್ಬರು ಕಂಪೋಸ್ ಮಾಡಲಾಗಿದ್ದ ಸುದ್ದಿಯನ್ನು ಓದಿ ಬಿದ್ದುಬಿದ್ದು ನಗಲಾ ರಂಭಿಸಿದರು. ಎಡವಟ್ಟು ಆಗಿರೋದು ಹೇಗೆ ಎಂಬುದು ಆ ಅನುಭವಿಗೆ ಗೊತ್ತಾಗಿತ್ತು. ವಾಸ್ತವವಾಗಿ ವರದಿಗಾರ ಕಳಿಸಿದ್ದ ಹಸ್ತಪ್ರತಿಯಲ್ಲಿ ‘… ಅದೇ ರಾತ್ರಿ ರಸ್ತೆಯಲ್ಲಿ ತಮ್ಮ ಪತ್ನಿಯೊಂದಿಗೆ ತೆರಳಿದರು’ ಎಂದಿತ್ತು. ಆದರೆ ಆ ಸಾಲು ಕಲಸಿಕೊಂಡು ಹೋಗಿದ್ದರಿಂದ ‘ಪತ್ನಿಯೊಂದಿಗೆ ತೆರಳಿದರು’ ಎಂಬುದನ್ನು ಡಿಟಿಪಿ ಮಹಾಶಯ ‘ಪತ್ನಿಯೊಂದಿಗೆ ತೆವಳಿದರು’ ಎಂದು ಕಂಪೋಸ್ ಮಾಡಿದ್ದ! ಒಂದೊಮ್ಮೆ ಈ ಸುದ್ದಿ ಹಾಗೆಯೇ ಅಚ್ಚಾಗಿಬಿಟ್ಟಿದ್ದರೆ ಅದಿನ್ನೇನು ರಾದ್ಧಾಂತವಾಗುತ್ತಿತ್ತು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ!

ಇದೇ ರೀತಿಯಲ್ಲಿ, ‘ಕಾಮಪೀಡಿತ ಪ್ರದೇಶಗಳನ್ನು ತುಂಬಾ ಮುತುವರ್ಜಿಯಿಟ್ಟು ಖುದ್ದಾಗಿ ವೀಕ್ಷಿಸಿದ ಸಚಿವರು’ ಎಂಬ ಸಾಲನ್ನೂ ಕೀಲಿಸಿದ ಮಹಾನುಭಾವರಿದ್ದಾರೆ. ವಾಸ್ತವವಾಗಿ ವರದಿಗಾರರ ಹಸ್ತಪ್ರತಿಯಲ್ಲಿ ದ್ದುದು ‘ಕ್ಷಾಮಪೀಡಿತ ಪ್ರದೇಶಗಳನ್ನು…’ ಅಂತ. ಕಂಪ್ಯೂಟರ್ ಬೆರಳಚ್ಚುಗಾರನ ಕಣ್ಣಿಗೆ ವರದಿಗಾರನ ಹಸ್ತಪ್ರತಿಯಲ್ಲಿ ‘ಕಾ’ಕ್ಕೆ ಒತ್ತುಕೊಟ್ಟಿದ್ದ ‘ಷ’ಕಾರ ಕಣ್ಣಿಗೆ ಬಿದ್ದಿರಲಿಲ್ಲವೋ ಅಥವಾ ಕೆಲ ಪದಗಳನ್ನು ಹೊರಡಿ ಸಲಾಗದೆ ನಾಲಿಗೆ ತೊದಲುವಂತೆ ಅವನ ಕೈಗಳೂ ತೊದಲಿದ್ದವೋ ಗೊತ್ತಿಲ್ಲ, ಒಟ್ಟಿನಲ್ಲಿ ಎಡವಟ್ಟಾಗಿತ್ತು! ಹಿರಿಯ ಪತ್ರಕರ್ತರೊಬ್ಬರು ಸಕಾಲಕ್ಕೆ ಈ ಪ್ರಮಾದವನ್ನು ಗುರುತಿಸಿ, ಸರಿಪಡಿಸಿ, ಆ ಸಿಬ್ಬಂದಿಯ ಮೇಲೆ ಶಿಕ್ಷೆಯ ತೂಗುಕತ್ತಿ ತೂಗುವುದನ್ನು ತಪ್ಪಿಸಿದರು ಎನ್ನಿ!!

(ಲೇಖಕರು ಪತ್ರಕರ್ತರು)